Tag: kerala

  • ಮತದಾರರು ಸರತಿ ಸಾಲಲ್ಲಿ ನಿಲ್ಲಂಗಿಲ್ಲ-ಮತದಾರನಿಗೆ ಸಿಗ್ತಿದೆ ಪರಿಪೂರ್ಣ ಗೌರವ!

    ಮತದಾರರು ಸರತಿ ಸಾಲಲ್ಲಿ ನಿಲ್ಲಂಗಿಲ್ಲ-ಮತದಾರನಿಗೆ ಸಿಗ್ತಿದೆ ಪರಿಪೂರ್ಣ ಗೌರವ!

    ವಯನಾಡು: ಮತದಾನಕ್ಕೆ ಬಂದ ಮತದಾರರು ಸಾಲಲ್ಲಿ ನಿಲ್ಲಬಾರದು, ಬಿಸಿಲಿನ ತಾಪ ಅವರಿಗೆ ತಟ್ಟಬಾರದು. ಮತದಾರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎನ್ನುವ ಉದ್ದೇಶದಲ್ಲಿ ಮಾದರಿ ಮತಗಟ್ಟೆಯನ್ನು ಕೇರಳದ ವಯನಾಡ್ ನಲ್ಲಿ ಸ್ಥಾಪಿಸಲಾಗಿದೆ.

    ವಯನಾಡ್ ಕಲ್ಪೇಟಾ ನಗರದಲ್ಲಿ ಇಂತಹದೊಂದು ಮಾದರಿ ಮತಗಟ್ಟೆ ಸ್ಥಾಪಿಸಲಾಗಿದೆ. ಕಲ್ಪೇಟಾದಲ್ಲಿ ಮತದಾನ ಮಾಡಲು ಬರುವ ಮತದಾರರಿಗೆ ಮೊದಲ ಒಂದು ಟೋಕನ್ ನೀಡಲಾಗುತ್ತದೆ. ಟೋಕನ್ ಪಡೆದವರು ಮತಗಟ್ಟೆಯ ಮುಂಭಾಗದಲ್ಲಿ ಹಾಕಲಾಗಿರುವ ಕುರ್ಚಿಗಳಲ್ಲಿ ಕುಳಿತುಕೊಳ್ಳಬೇಕು. ಮತದಾರರು ಕುಳಿತು ಕೊಳ್ಳುವ ಸ್ಥಳದಲ್ಲಿ ಫ್ಯಾನ್ ವ್ಯವಸ್ಥೆ ಇದೆ. ಅಲ್ಲದೆ ಅವರು ಕಾಫಿ ಕೇಳಿದರೆ ಕಾಫಿ, ಟೀ ಕೇಳಿದರೆ ಟೀ ಕೂಡ ಕೊಡಲಾಗುತ್ತದೆ. ಅವರ ಟೋಕನ್ ನಂಬರ್ ಕೂಗಿದಾಗ  ಅವರು ಹೋಗಿ ಮತ ಹಾಕಬಹುದು.

    ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

  • ಬಿಜೆಪಿ ಅಭ್ಯರ್ಥಿ ವಿರುದ್ಧ 204 ಕ್ರಿಮಿನಲ್ ಪ್ರಕರಣ ದಾಖಲು

    ಬಿಜೆಪಿ ಅಭ್ಯರ್ಥಿ ವಿರುದ್ಧ 204 ಕ್ರಿಮಿನಲ್ ಪ್ರಕರಣ ದಾಖಲು

    – ಪತ್ರಿಕೆಯಲ್ಲಿ ಮಾಹಿತಿ ಪಬ್ಲಿಷ್ ಮಾಡಲು 60 ಲಕ್ಷ ರೂ. ವೆಚ್ಚ

    ತಿರುವನಂತಪುರಂ: ಬಿಜೆಪಿ ಅಭ್ಯರ್ಥಿಯೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಣೆಯನ್ನು ಪತ್ರಿಕೆಯೊಂದರ ನಾಲ್ಕು ಪುಟಗಳಲ್ಲಿ ಮುದ್ರಿಸಲಾಗಿದೆ. ಇದು ಪತ್ರಿಕೆ ತೆರೆದು ನೋಡಿದ ಓದುಗರಲ್ಲಿ ಅಚ್ಚರಿ ಮೂಡಿಸಿದೆ.

    ಕೇರಳದ ಪಥನಂತಿಟ್ಟಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ವಿರುದ್ಧ 204 ಕ್ರಿಮಿನಲ್ ಕೇಸ್ ದಾಖಲಾಗಿವೆ. ಈ ಕುರಿತು ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

    ಮತದಾರರ ಜಾಗೃತಿ ಉದ್ದೇಶದಿಂದ ಚುನಾವಣಾ ಆಯೋಗವು ಮೂರು ಮುದ್ರಣ ಮಾಧ್ಯಮಗಳಲ್ಲಿ ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಕುರಿತು ಜಾಹೀರಾತು ನೀಡಬೇಕು. ಹೀಗಾಗಿ ಪ್ರತಿಕೆಯೊಂದರ ಪಥನಂತಿಟ್ಟಿಯ ಆವೃತ್ತಿಯಲ್ಲಿ ಕೆ.ಸುರೇಂದ್ರನ್ ಅವರು ಎದುರಿಸುತ್ತಿರುವ ಕ್ರಿಮಿನಲ್ ಕೇಸ್‍ಗಳ ಕುರಿತು ಜಾಹೀರಾತು ನೀಡಲಾಗಿತ್ತು. ಇದನ್ನು ಮುದ್ರಿಸಲು ಬರೋಬ್ಬರಿ ನಾಲ್ಕು ಪುಟಗಳೇ ಬೇಕಾಯಿತು. ಗುರುವಾರ ಪತ್ರಿಕೆ ತೆರೆದು ನೋಡಿದ ಓದುಗರು ಯಾವುದೋ ಟೆಂಡರ್, ಕಾಮಗಾರಿ ಮಾಹಿತಿ ಎಂದು ತಿಳಿದಿದ್ದರು. ಬಳಿಕ ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಮಾಹಿತಿ ಎಂದು ತಿಳಿದಾಗ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ವಿರುದ್ಧ ಇರುವ ಪ್ರಕರಣಗಳಲ್ಲಿ ಶೇ.90 ರಷ್ಟು ಶಬರಿಮಲೆ ಹೋರಾಟಕ್ಕೆ ಸಂಬಂಧಿಸಿವೆ. ಪ್ರತಿಕೆಯಲ್ಲಿ ಪಬ್ಲಿಷ್ ಆಗಿರುವ ನಾಲ್ಕು ಪುಟಗಳ ಜಾಹೀರಾತಿಗೆ 20 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಕನಿಷ್ಠ ಮೂರು ಪತ್ರಿಕೆಗಳಲ್ಲಿ ಅಭ್ಯರ್ಥಿಗಳ ವಿರುದ್ಧ ಇರುವ ಪ್ರಕರಣಗಳ ಕುರಿತು ಪಬ್ಲಿಷ್ ಮಾಡಬೇಕು. ಈ ಮೂಲಕ ಮೂರು ಪತ್ರಿಕೆಗಳಿಗೆ ಜಾಹೀರಾತು ನೀಡಿದ ವೆಚ್ಚ 60 ಲಕ್ಷ ರೂ. ಆಗಿದೆ.

  • 3 ವರ್ಷದ ಕಂದಮ್ಮನನ್ನ ಹೊಡೆದು ಸಾಯಿಸಿದ ತಾಯಿ!

    3 ವರ್ಷದ ಕಂದಮ್ಮನನ್ನ ಹೊಡೆದು ಸಾಯಿಸಿದ ತಾಯಿ!

    ಕೊಚ್ಚಿ: ಮಾತು ಕೇಳಿಲ್ಲ ಎಂಬ ಕಾರಣಕ್ಕೆ ತಾಯಿ ನೀಡಿದ್ದ ಚಿತ್ರಹಿಂಸೆಗೆ ಕೋಮಾ ಸ್ಥಿತಿಗೆ ಹೋಗಿದ್ದ 3 ವರ್ಷದ ಪುಟ್ಟ ಕಂದಮ್ಮ, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ.

    ಮೆದುಳಿಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆ 3 ವರ್ಷದ ಮಗು ಸಾವನ್ನಪ್ಪಿದೆ. ಜಾರ್ಖಂಡ್ ಮೂಲದ ಈ ಮಗುವಿನ ತಾಯಿ ಮಗ ತನ್ನ ಮಾತು ಕೇಳುತ್ತಿರಲಿಲ್ಲ ಎಂದು ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಗಂಭೀರವಾಗಿ ಪೆಟ್ಟಾಗಿದ್ದ ಮಗುವನ್ನು ತಂದೆ ಬುಧವಾರ ರಾತ್ರಿ ಕೊಚ್ಚಿ ಬಳಿಯ ಅಳುವಾದ ಖಾಸಗಿ ಆಸ್ಪತ್ರೆಗೆ ಸೇರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಡೆಸ್ಕ್ ನಿಂದ ಕೆಳಗೆ ಬಿದ್ದು ಮಗು ತಲೆಗೆ ಪೆಟ್ಟು ಮಾಡಿಕೊಂಡಿದೆ ಎಂದು ಹೇಳಿ ತಂದೆ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ತಂದೆ ಮಾತಿನ ಮೇಲೆ ಆಸ್ಪತ್ರೆ ಸಿಬ್ಬಂದಿಗೆ ಅನುಮಾನ ಬಂದ ಕಾರಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಬಾಲಕನಿಗೆ ಮರದ ವಸ್ತುವಿನಿಂದ ಹೊಡೆದಿದ್ದಾರೆ ಹಾಗೂ ದೇಹದ ಮೇಲೆ ಸುಟ್ಟ ಗಾಯಗಳು ಕೂಡ ಕಂಡು ಬಂದಿದೆ. ಬಾಲಕನ ತಲೆಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆ ಬಲಭಾಗದ ಮೆದುಳು ಸಂಪೂರ್ಣ ನಿಷ್ಕ್ರೀಯಗೊಂಡಿತ್ತು. ಈ ಬಗ್ಗೆ ತಿಳಿದ ತಕ್ಷಣವೇ ಸರ್ಜರಿ ಮಾಡಲಾಗಿತ್ತು. ಬಳಿಕ ಬಾಲಕ ಕೋಮಾ ಸ್ಥಿತಿಯಲ್ಲಿದ್ದನು ಎಂದು ವೈದ್ಯರು ಹೇಳಿದ್ದಾರೆ.

    ಬಾಲಕನ ಎಲ್ಲ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಕೇರಳ ಆರೋಗ್ಯ ಸಚಿವೆ ಶೈಲಜಾ ಭರವಸೆ ನೀಡಿದ್ದರು. ಅಲ್ಲದೆ ಕೊಟ್ಟಾಯಂ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವನ್ನು ಸಹ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆಸುವುದಾಗಿ ತಿಳಿಸಿದ್ದರು. ಆದ್ರೆ ದುರದೃಷ್ಟವಶಾತ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

    ಈ ಸಂಬಂಧ ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೋಲೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೊತೆಗೆ ಜಾರ್ಖಂಡ್‍ನಲ್ಲಿರುವ ಆ ಮಗುವಿನ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಆತನ ತಂದೆ, ತಾಯಿ ನಿಜವಾಗಲೂ ಹೆತ್ತ ತಾಯಿ-ತಂದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ತಿರುವನಂತನಪುರಂ: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನ ಜೋಡಿಗಳು ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿದೆ. ಅದೇ ರೀತಿ ಕೇರಳದ ಜೋಡಿ ಫೋಟೋಶೂಟ್ ಮಾಡಿಸುವಾಗ ದೋಣಿ ಮಗುಚಿದ್ದು, ಜೋಡಿ ನದಿಗೆ ಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತಿಜಿನ್ ಥಂಕಚೆನ್ ಮತ್ತು ಶಿಲ್ಪ ನವ ಜೋಡಿಯ ವಿಡಿಯೋ ವೈರಲ್ ಆಗುತ್ತಿದೆ. ಕೇರಳದ ತಿರವಲ್ಲಾ ನಿವಾಸಿ ತಿಜಿನ್ ಥಂಕಚೆನ್ ಮತ್ತು ಚಂಗನಾಚೆರ್ರಿಯ ಶಿಲ್ಪಾ ಇವರಿಬ್ಬರ ಮದುವೆ ಮುಂದಿನ ತಿಂಗಳು ಮೇ 6 ರಂದು ನಡೆಯಲಿದೆ. ಇದನ್ನೂ ಓದಿ: ವೆಡ್ಡಿಂಗ್ ಫೋಟೋಶೂಟ್ ವೇಳೆ ಬೋಟ್ ಪಲ್ಟಿ – ವೀಡಿಯೋ ವೈರಲಾಯ್ತು!

    ಫೋಟೋಶೂಟ್:
    ತಿಜಿನ್ ಮತ್ತು ಶಿಲ್ಪಾ ಅವರು ಮದುವೆಗೂ ಮುನ್ನ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಲೆಂದು ಪಟ್ಟಣಂತಿಟ್ಟ ಜಿಲ್ಲೆಯ ಕಡಮ್ಮನಿಟ್ಟಾದಲ್ಲಿ ಪಂಬಾ ನದಿಯ ದಂಡೆಯ ಬಳಿಗೆ ಹೋಗಿದ್ದರು. ಅಲ್ಲಿ ನದಿಯ ಮಧ್ಯೆದಲ್ಲಿ ಒಂದು ದೋಣಿಯಲ್ಲಿ ಇಬ್ಬರು ಪಕ್ಕಪಕ್ಕದಲ್ಲಿ ಕುಳಿತಿದ್ದರು. ಆ ದೋಣಿ ಸುತ್ತಲೂ ಮೂವರು ನಿಂತಿದ್ದರು. ತಿಜಿನ್ ಒಂದು ಬಾಳೆ ಎಲೆಯನ್ನು ತನಗೆ ಮತ್ತು ಹುಡುಗಿ ಶಿಲ್ಪಾಗೆ ಸೇರಿದಂತೆ ತಲೆ ಮೇಲೆ ಹಿಡಿದಿದ್ದರು.

    ಆಗ ಫೋಟೋಗ್ರಾಫರ್ ಪೋಸ್ ಕೊಡುವಂತೆ ಹೇಳಿದ್ದಾರೆ. ತಿಜಿನ್ ಬಾಳೆ ಎಲೆ ಹಿಡಿದು ಇಬ್ಬರು ಒಬ್ಬೊಬ್ಬರನ್ನು ನೋಡುತ್ತಿರುತ್ತಾರೆ. ದೋಣಿ ಬಳಿ ನಿಂತಿದ್ದ ಮೂವರು ಮಳೆ ಬಂದಂತೆ ನದಿಯಿಂದ ನೀರನ್ನು ಎರಚಿದ್ದಾರೆ. ಆದರೆ ಇದೇ ವೇಳೆ ತಿಜಿನ್ ಮುತ್ತು ಕೊಡಲು ಶಿಲ್ಪಾ ಕಡೆಗೆ ಹೋಗಿದ್ದಾರೆ. ಆಗ ಬೋಟ್ ಸಮತೋಲನ ಕಳೆದುಕೊಂಡು ನದಿಗೆ ಇಬ್ಬರು ಬಿದ್ದಿದ್ದಾರೆ.

    ನದಿಗೆ ಬಿದ್ದ ದಂಪತಿ ಇದನ್ನು ತಮಾಷೆಯಾಗಿ ತೆಗೆದುಕೊಂಡು ನಕ್ಕಿದ್ದಾರೆ. ಈ ಘಟನೆಯಿಂದ ಯಾವುದೇ ಅಪಾಯವಾಗಿಲ್ಲ ಎಂದು ಫೋಟೋಗ್ರಾಫರ್ ತಿಳಿಸಿದ್ದಾರೆ. ದಂಪತಿಯ ವಿಡಿಯೋವನ್ನು ‘Weddplanner Wedding Studio’ ಎಂಬ ಫೇಸ್‍ಬುಕ್‍ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಇದುವರೆಗೂ 2.41ಲಕ್ಷ ವೀವ್ಸ್ ಆಗಿದೆ.

    https://www.facebook.com/WeddplannerWeddingStudio/videos/1596808883782488/

  • ತುಲಾಭಾರ ಸೇವೆ ವೇಳೆ ಅವಘಡ – ಶಶಿ ತರೂರ್‌ಗೆ ಗಂಭೀರ ಗಾಯ

    ತುಲಾಭಾರ ಸೇವೆ ವೇಳೆ ಅವಘಡ – ಶಶಿ ತರೂರ್‌ಗೆ ಗಂಭೀರ ಗಾಯ

    ತಿರುವನಂತಪುರಂ: ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವಘಡ ಸಂಭವಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದಲ್ಲಿ ಇಂದು ನಡೆದಿದೆ.

    ತಿರುವನಂತಪುರಂನ ತಂಪನೂರ್ ನಲ್ಲಿರುವ ಗಾಂಧಾರಿ ಅಮ್ಮಾ ಕೊವಿಲ್ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ. ದೇವಸ್ಥಾನದಲ್ಲಿ ಶಶಿ ತರೂರ್ ಅವರು ತುಲಾಭಾರ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ತಕ್ಕಡಿಯು ಕುಸಿದಿದ್ದು, ಕೆಳಗೆ ಕುಳಿತಿದ್ದ ಶಶಿ ತರೂರ್ ಅವರ ತಲೆಯ ಮೇಲೆ ಬಿದ್ದಿದೆ.

    ತಕ್ಕಡಿಯು ತಲೆಯ ಮೇಲೆ ಬಿದ್ದ ಪರಿಣಾಮ ಬಲವಾದ ಪೆಟ್ಟು ಬಿದ್ದಿದ್ದು, ರಕ್ತಸ್ರಾವ ಉಂಟಾಗಿತ್ತು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ.

    ಶಶಿ ತರೂರ್ ಅವರ ತಲೆಗೆ ಆರು ಸ್ಟಿಚ್ (ಹೊಲಿಗೆ) ಹಾಕಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿ ರಿಯಲ್ ಹೀರೋ ಆದ ನೌಕಾಪಡೆ ಅಧಿಕಾರಿ

    ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿ ರಿಯಲ್ ಹೀರೋ ಆದ ನೌಕಾಪಡೆ ಅಧಿಕಾರಿ

    ತಿರುವನಂತಪುರಂ: ಕೇರಳದ ಬೀಚ್‍ನಲ್ಲಿ ಆಡಲು ಹೋಗಿ, ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯೋರ್ವನನ್ನು ನೌಕಾಪಡೆ ಅಧಿಕಾರಿಯೊಬ್ಬರು ಕಾಪಾಡಿದ್ದು, ಅಧಿಕಾರಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಹೌದು, ಏಪ್ರಿಲ್ 5ರ ಸಂಜೆ ಔರಂಗಬಾದ್ ಮೂಲದ ದಿಲೀಪ್ ಕುಮಾರ್ ಸಮುದ್ರದಲ್ಲಿ ಆಡುತ್ತಿರುವಾಗ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದನು. ಆಗ ದಿಲೀಪ್ ಜತೆಯಲ್ಲಿದ್ದವರು, ಆತ ಸಮುದ್ರದಲ್ಲಿ ಕೊಚ್ಚಿಕೊಂಡು ಹೋದ ಬಗ್ಗೆ ಅಳಲು ತೋಡಿಕೊಂಡು ಕಾಪಾಡುವಂತೆ ಸ್ಥಳದಲ್ಲಿದ್ದವರ ಬಳಿ ಮನವಿ ಮಾಡಿದ್ದಾರೆ. ಇದೇ ವೇಳೆಯಲ್ಲಿ ಪತ್ನಿ ಹಾಗೂ ಪುತ್ರಿಯೊಂದಿಗೆ ಲೆಫ್ಟಿನೆಂಟ್ ರಾಹುಲ್ ದಲಾಲ್ ಬೀಚ್‍ಗೆ ಆಗಮಿಸಿದ್ದು, ಗೆಳೆಯರ ಗೋಳು ಗಮನಿಸಿ ಸಮುದ್ರಕ್ಕೆ ಹಾರಿ ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ನೌಕಾಪಡೆಯು ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಅಧಿಕಾರಿಯ ಶೌರ್ಯದ ಬಗ್ಗೆ ಪೋಸ್ಟ್ ಮಾಡಿತ್ತು. ನಮ್ಮ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ರಾಹುಲ್ ದಲಾಲ್ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು, ತಮ್ಮ ಜೀವವನ್ನು ಪಣಕ್ಕಿಟ್ಟು ಸಮುದ್ರಕ್ಕೆ ಹಾರಿ, ವ್ಯಕ್ತಿಯನ್ನು ಕಾಪಾಡಿದ್ದಾರೆ. ಆತನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಆದರೆ ಸುಮಾರು 20 ನಿಮಿಷಗಳ ಕಾಲ ದಿಲೀಪ್ ಉಸಿರಾಡದೇ, ಪ್ರಜ್ಞೆ ತಪ್ಪಿದ್ದರು. ಆಗ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿದ್ದಾರೆ ಎಂದು ಬರೆದು ಫೋಟೋ ಹಾಕಿ ಪೋಸ್ಟ್ ಮಾಡಿದೆ.

    https://www.facebook.com/IndianNavy/posts/872951193059742

    ನೌಕಾ ಸಿಬ್ಬಂದಿಯ ಈ ಶೌರ್ಯ, ಮಾನವೀಯತೆ ಗುಣ ಹಾಗೂ ಜನಪರ ಕಾಳಜಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಲೆಫ್ಟಿನೆಂಟ್ ರಾಹುಲ್ ದಲಾಲ್‍ಗೆ ನೆಟ್ಟಿಗರು ಸಲಾಂ ಹೊಡೆದು ಪೋಸ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.

  • ಕಾಂಗ್ರೆಸ್ ಚಿಹ್ನೆಯಲ್ಲಿ 6 ಬೆರಳು!- ಕೈ ಪಕ್ಷದ ಕಾಲೆಳೆದ ನೆಟ್ಟಿಗರು

    ಕಾಂಗ್ರೆಸ್ ಚಿಹ್ನೆಯಲ್ಲಿ 6 ಬೆರಳು!- ಕೈ ಪಕ್ಷದ ಕಾಲೆಳೆದ ನೆಟ್ಟಿಗರು

    ತಿರುವನಂತಪುರಂ: ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರ ಎಲ್ಲೆಡೆ ಜೋರಾಗಿದೆ. ಈ ಮದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಲೋಕಸಮರದಲ್ಲಿ ಜಯಗಳಿಸಲು ಕಸರತ್ತು ಮಾಡುತ್ತಿದೆ. ಆದ್ರೆ ಪ್ರಚಾರದ ಭರದಲ್ಲಿ ಕಾರ್ಯಕರ್ತರು ಮಾಡಿರುವ ಎಡವಟ್ಟಿಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಟ್ರೋಲ್ ಆಗುತ್ತಿದೆ.

    ಹೌದು, ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಎನ್. ಪ್ರತಾಪನ್ ಅವರ ಪ್ರಚಾರದ ವೇಳೆ ಕಾರ್ಯಕರ್ತರು ಮಾಡಿದ ಎಡವಟ್ಟಿಗೆ ಇಡೀ ಕೈ ಪಾಳೆಯವನ್ನೇ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಪ್ರತಾಪನ್ ಅವರಿಗೆ ಮತ ನೀಡುವಂತೆ ಕೋರಿದ ಕಾರ್ಯಕರ್ತರು, ಗೋಡೆ ಬರಹದಲ್ಲಿ `ಹಸ್ತ’ದ ಚಿಹ್ನೆಗೆ ಆರು ಬೆರಳುಗಳನ್ನು ಬಿಡಿಸಿದ್ದಾರೆ. ಇದಕ್ಕೆ ಗೇಲಿ ಮಾಡುತ್ತಿರುವ ನೆಟ್ಟಿಗರು ಟ್ರೋಲ್‍ಗಳ ಮೇಲೆ ಟ್ರೋಲ್ ಮಾಡಿ ಕಾಂಗ್ರೆಸ್ ಅಭ್ಯರ್ಥಿಯ ಕಾಲೆಳೆಯುತ್ತಿದ್ದಾರೆ.

    ಕೈ ಕಾರ್ಯಕರ್ತರ ಎಡವಟ್ಟಿಗೆ ವಯಾನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಳಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾಯಕರ್ತರು ಪ್ರಯತ್ನ ಮೀರಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದರು. ಅದಕ್ಕೆ ಪಾಪ ಐದಕ್ಕೆ ಇನ್ನೊಂದು ಬೆರಳು ಜೋಡಿಸಿ ತಮ್ಮ ಪ್ರಯತ್ನ ಮೆರೆದಿದ್ದಾರೆ ಅಂತ ಬರೆದು ಕಾಲೆಳೆಯುತ್ತಿದ್ದಾರೆ.

  • ಪರೀಕ್ಷೆಗೆ ಲೇಟ್-ಕುದುರೆ ಏರಿ ಬಂದ ವಿದ್ಯಾರ್ಥಿನಿ

    ಪರೀಕ್ಷೆಗೆ ಲೇಟ್-ಕುದುರೆ ಏರಿ ಬಂದ ವಿದ್ಯಾರ್ಥಿನಿ

    ತಿರುವನಂತಪುರ: ಪರೀಕ್ಷೆಗೆ ತಡವಾಗಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಕುದುರೆ ಏರಿ ಬಂದಿದ್ದಾಳೆ. ವಿದ್ಯಾರ್ಥಿನಿಯ ಕುದುರೆ ಸವಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

    ಕೇರಳದ ತ್ರಿಶೂರ್ ರಸ್ತೆಯಲ್ಲಿ ವಿದ್ಯಾರ್ಥಿನಿ ಕುದುರೆ ಸವಾರಿ ಮೂಲಕ ಪರೀಕ್ಷಾ ಕೇಂದ್ರ ತಲುಪಿದ್ದಾಳೆ. ಕೇವಲ 17 ಸೆಕೆಂಡ್ ವಿಡಿಯೋವನ್ನು ನೆಟ್ಟಿಗರು ಶೇರ್ ಮಾಡಿಕೊಂಡು ವಿದ್ಯಾರ್ಥಿನಿಯ ಧೈರ್ಯವನ್ನು ಕೊಂಡಾಡಿದ್ದಾರೆ.

    ಕುದುರೆ ಸವಾರಿ ನಡೆಸಿದ ವಿದ್ಯಾರ್ಥಿನಿಯ ಹೆಸರು ತಿಳಿದು ಬಂದಿಲ್ಲ. ವಿಡಿಯೋ ನೋಡಿದ ಮಹಿಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ, ತ್ರಿಶೂರ್ ನಲ್ಲಿ ಈ ವಿದ್ಯಾರ್ಥಿನಿಯನ್ನು ನೋಡಿದ್ದೀರಾ? ನನಗೆ ಬಾಲಕಿಯ ಕುದುರೆ ಸವಾರಿ ನಡೆಸುವ ವಿದ್ಯಾರ್ಥಿನಿಯ ಫೋಟೋವನ್ನು ನಾನು ಸೇವ್ ಮಾಡಿಕೊಳ್ಳುತ್ತೇನೆ. ಆಕೆ ನನ್ನ ಹೀರೋ. ಆಶಾವಾದದೊಂದಿಗೆ ಶಾಲೆಗೆ ಹೋಗುತ್ತಿರುವ ಆಕೆ ಬಹು ಜನರಿಗೆ ಸ್ಪೂರ್ತಿಯಾಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

  • ವಯನಾಡುನಲ್ಲಿ ರಾಹುಲ್ ಗಾಂಧಿಗೆ ಮುಳುವಾಗುತ್ತಾ ಮಂಡ್ಯ ತಂತ್ರ?

    ವಯನಾಡುನಲ್ಲಿ ರಾಹುಲ್ ಗಾಂಧಿಗೆ ಮುಳುವಾಗುತ್ತಾ ಮಂಡ್ಯ ತಂತ್ರ?

    – ಕೈ ನಾಯಕನ ವಿರುದ್ಧ ರಾಹುಲ್ ಗಾಂಧಿಗಳಿಬ್ಬರು ಕಣಕ್ಕೆ

    ತಿರುವನಂತಪುರಂ: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸುಮಲತಾ ಹೆಸರಿನ ಮೂವರನ್ನು ಕಣಕ್ಕೆ ಇಳಿಸಲಾಗಿದೆ. ಇದೇ ತಂತ್ರಕ್ಕೆ ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸಿಲುಕಿದ್ದಾರೆ.

    ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ಹೆಸರಿನ ಮತ್ತಿಬ್ಬರು ವಯನಾಡು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್‍ಗೆ ಬಿಗ್ ಶಾಕ್ ನೀಡಿದ್ದಾರೆ.

    ಕೇರಳ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿರುವ ಎರುಮೆಲೆ ನಿವಾಸಿ ರಾಹುಲ್ ಗಾಂಧಿ ಕೆ.ಇ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೆ ಅಖಿಲ ಭಾರತ ಮಕ್ಕಳ್ ಘಟಕದಿಂದ ರಾಹುಲ್ ಗಾಂಧಿ ಕೆ. ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕನ ವಿರುದ್ಧ ಇಬ್ಬರು ರಾಹುಲ್ ಗಾಂಧಿಗಳು ಸ್ಪರ್ಧೆ ಮಾಡುತ್ತಿದ್ದಾರೆ.

    ವಯನಾಡು ಲೋಕಸಭಾ ಕ್ಷೇತ್ರದಿಂದ ಒಟ್ಟು ಮೂವರು ರಾಹುಲ್ ಗಾಂಧಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಅಲ್ಲದೆ ಕೆ.ಎಂ.ಶಿವಪ್ರಸಾದ್ ಗಾಂಧಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

    ವಯನಾಡುನಲ್ಲಿ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ಎಸ್ ನಾಯರ್ ಕೂಡ ಸ್ಪರ್ಧೆ ಮಾಡುತ್ತಿದ್ದು, ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್ ನೀಡಿದೆ.

    ಇತ್ತ ರಾಜ್ಯದ ಕಲಬುರಗಿಯಲ್ಲೂ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಮತ ವಿಭಜಿಸಲು, ಜಾಧವ್ ಹೆಸರಿನ ಮೂವರು ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

  • ಪತಿ-ಅತ್ತೆ ಚಿತ್ರಹಿಂಸೆ ನೀಡಿ ಹತ್ಯೆ – ಎರಡು ಮಕ್ಕಳ ತಾಯಿ ಮೃತಪಟ್ಟಾಗ ಇದ್ದಿದ್ದು 20ಕೆಜಿ ಮಾತ್ರ!

    ಪತಿ-ಅತ್ತೆ ಚಿತ್ರಹಿಂಸೆ ನೀಡಿ ಹತ್ಯೆ – ಎರಡು ಮಕ್ಕಳ ತಾಯಿ ಮೃತಪಟ್ಟಾಗ ಇದ್ದಿದ್ದು 20ಕೆಜಿ ಮಾತ್ರ!

    ತಿರುವನಂತಪುರಂ: ವರದಕ್ಷಿಣೆಗಾಗಿ ಮಹಿಳೆಗೆ ಚಿತ್ರ ಹಿಂಸೆ ನೀಡಿದ್ದ ಪತಿ, ಆತನ ಕುಟುಂಬಸ್ಥರು ಊಟ ನೀಡದೆಯೇ ಸಾವನ್ನಪ್ಪುವಂತೆ ಮಾಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

    ಮಾರ್ಚ್ 21 ರಂದು ತುಷಾರಾ (27) ಎಂಬ ಮಹಿಳೆಯನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ನೀಡಲು ಮುಂದಾದ ವೈದ್ಯರು ಮಹಿಳೆ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದರು. ಬಳಿಕ ತುಷಾರಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಮೃತ ದೇಹವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು.

    ಊಟ ನೀಡದೇ ಚಿತ್ರಹಿಂಸೆ:
    ಈ ಘಟನೆ ನಡೆದ 1 ವಾರದ ಬಳಿಕ ತುಷಾರಾ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಅನ್ವಯ ತುಷಾರಾ ಸಾವನ್ನಪ್ಪಿದ ವೇಳೆ ಆಕೆಯ ದೇಹದ ತೂಕ ಕೇವಲ 20 ಕೆಜಿ ಮಾತ್ರ ಇತ್ತು. ಅಲ್ಲದೇ ಆಕೆಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಪತ್ತೆಯಾಗಿತ್ತು. ಪರಿಣಾಮ ತುಷಾರಾ ಅವರಿಗೆ ಹಲವು ದಿನಗಳಿಂದ ಊಟ ನೀಡದೇ ಉಪವಾಸ ಇಡಲಾಗಿತ್ತು ಎಂದು ತಿಳಿಸಿದ್ದಾರೆ.

    ಘಟನೆಯ ಸಂಬಂಧ ಪೊಲೀಸರು ಶುಕ್ರವಾರ ತುಷಾರಾ ಪತಿ ಚಂತೂ ಲಾಲ್ (30), ಅತ್ತೆ ಗೀತಾ (55) ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯ ಇಬ್ಬರು ಮಕ್ಕಳನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ. ಐಪಿಸಿ ಸೆಕ್ಷನ್ 304 (ಬಿ) ಅಡಿ ಪೊಲೀಸರು ದೂರು ದಾಖಲಿಸಿದ್ದಾರೆ.

    ತುಷಾರಾ ಅವರಿಗೆ ವರದಕ್ಷಿಣೆ ಕಿರುಕಳ ನೀಡುತ್ತಿದ್ದ ಪತಿ ಮತ್ತು ಆತನ ಕುಟುಂಬಸ್ಥರು ಆಕೆಯನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಕುಡಿಯಲು ಸಕ್ಕರೆ ನೀರು, ಮತ್ತು ಗಂಜಿ ಮಾತ್ರ ನೀಡುತ್ತಿದ್ದರು. ಅಲ್ಲದೇ ಆಕೆಯ ಪೋಷಕರು ಮನೆಗೆ ಬಾರದಂತೆ ನಿರ್ಬಂಧ ವಿಧಿಸಿದ್ದರು. ಪರಿಣಾಮ ಕಳೆದ ಒಂದೂವರೆ ವರ್ಷದಿಂದ ಆಕೆಯನ್ನು ಯಾರು ಭೇಟಿಯೇ ಮಾಡಿರಲಿಲ್ಲ. ಅಲ್ಲದೇ ಫೋನ್ ಕೂಡ ನೀಡುತ್ತಿರಲಿಲ್ಲ ಎಂದು ತುಷಾರಾ ಕುಟುಂಬಸ್ಥರು ತಿಳಿಸಿದ್ದಾರೆ.

    6 ವರ್ಷಗಳ ಹಿಂದೆ ತುಷಾರ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಆ ಬಳಿಕ 3 ಬಾರಿ ಮಾತ್ರ ಅವರು ತಮ್ಮ ತವರು ಮನೆಗೆ ತೆರಳಿದ್ದರು. ಅಲ್ಲದೇ ತುಷಾರಾ ಗರ್ಭಿಣಿ ಆಗಿದ್ದ ಸಮಯದಲ್ಲೂ ತವರಿಗೆ ಕಳುಹಿಸಿರಲಿಲ್ಲ. ಮದುವೆ ಸಮಯದಲ್ಲಿ ಚಿನ್ನಾಭರಣ ಸಮೇತ 2 ಲಕ್ಷ ರೂ. ವರದಕ್ಷಿಣೆಯನ್ನು ನೀಡಲಾಗಿತ್ತು.

    27 ದೂರು: ತುಷಾರಾ ಪತಿಯ ಮನೆ ದೇವಾಲಯದ ಸಮೀಪವೇ ಇತ್ತು. ಪರಿಣಾಮ ಹೆಚ್ಚು ಮಂದಿ ಮನೆಯ ಬಳಿ ಓಡಾಡುತ್ತಿದ್ದರು. ಈ ವೇಳೆ ಅವರಿಗೆ ಮನೆಯಿಂದ ಮಹಿಳೆಯೊಬ್ಬರು ಚೀರಾಟ ನಡೆಸುತ್ತಿದ್ದ ಶಬ್ದ ಕೂಡ ಕೇಳಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ 27 ದೂರು ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಮನೆಯಲ್ಲಿ ಕೆಲ ನಿಗೂಢ ಚಟುವಟಿಕೆಗಳನ್ನು ಕೂಡ ಕುಟುಂಬಸ್ಥರು ನಡೆಸುತ್ತಿದ್ದರು ಎಂದು ದೂರಿನಲ್ಲೇ ಸ್ಥಳೀಯರು ಉಲ್ಲೇಖಿಸಿದ್ದಾರೆ.