Tag: kerala

  • ಲಕ್ಷದ್ವೀಪಕ್ಕೆ ಬರುತ್ತಿದ್ದಾರೆ 15 ಐಸಿಸ್ ಉಗ್ರರು – ಕೇರಳ ಕರಾವಳಿಯಲ್ಲಿ ಹೈ ಅಲರ್ಟ್

    ಲಕ್ಷದ್ವೀಪಕ್ಕೆ ಬರುತ್ತಿದ್ದಾರೆ 15 ಐಸಿಸ್ ಉಗ್ರರು – ಕೇರಳ ಕರಾವಳಿಯಲ್ಲಿ ಹೈ ಅಲರ್ಟ್

    ತಿರುವನಂತಪುರಂ: ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದ ನಂತರ ಲಕ್ಷದ್ವೀಪಕ್ಕೆ 15 ಐಸಿಸ್ ಉಗ್ರರು ಬರುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಕೇರಳದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    15 ಜನ ಇಸ್ಲಾಮಿಕ್ ಸ್ಟೇಟ್ ಉಗ್ರರು ಶ್ರೀಲಂಕಾದಿಂದ ಬಿಳಿ ಬಣ್ಣದ ದೋಣಿಯಲ್ಲಿ ಲಕ್ಷದ್ವೀಪದ ಕಡೆ ತೆರಳುತ್ತಿದ್ದಾರೆ. ಅವರು ಲಕ್ಷದ್ವೀಪದಲ್ಲಿ ಇದ್ದುಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಬಹುದು ಎಂಬ ಭಾರತೀಯ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ಮಾರ್ಚ್ 23 ರಂದು ಶ್ರೀಲಂಕಾ ಈ ಸೂಚನೆ ನೀಡಿದ ಬೆನ್ನಲ್ಲೇ ಕೇರಳದ ಕೋಸ್ಟಲ್ ಪೊಲೀಸ್ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ.

    ಶ್ರೀಲಂಕಾದಲ್ಲಿ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ನಾವು ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನುಮಾನಾಸ್ಪದ ಚಟುವಟಿಕೆಗಳು ಕರಾವಳಿ ಪ್ರದೇಶದಲ್ಲಿ ಕಂಡು ಬಂದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

    ಸಮುದ್ರದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಹಡಗುಗಳು ಕಂಡಬಂದರೆ ಆದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರಾವಳಿ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ.

    ಶ್ರೀಲಂಕಾದಲ್ಲಿ ಚರ್ಚ್ ಮತ್ತು ಹೋಟೆಲ್‍ಗಳು ಸೇರಿ ಎಂಟು ಕಡೆಯಲ್ಲಿ ಸರಣಿ ಅತ್ಮಾಹುತಿ ಬಾಂಬ್ ಸ್ಫೋಟಿಸಲಾಗಿತ್ತು. ಈ ಬಾಂಬ್ ದಾಳಿಯಲ್ಲಿ ಕನ್ನಡಿಗರೂ ಸೇರಿ 250 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಇದೇ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

  • ಪ್ರೀತಿಸಿ ಮೋಸ ಮಾಡಿದ ಮಗ -ಮಗಳಂತೆ ಸಾಕಿ ಬೇರೆ ಹುಡ್ಗನಿಗೆ ಕನ್ಯಾದಾನ ಮಾಡಿದ ತಂದೆ

    ಪ್ರೀತಿಸಿ ಮೋಸ ಮಾಡಿದ ಮಗ -ಮಗಳಂತೆ ಸಾಕಿ ಬೇರೆ ಹುಡ್ಗನಿಗೆ ಕನ್ಯಾದಾನ ಮಾಡಿದ ತಂದೆ

    ತಿರವನಂತಪುರಂ: ಸಾಮಾನ್ಯವಾಗಿ ಮಗ ಪ್ರೀತಿಸಿ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದರೆ ಪೋಷಕರು ವಿರೋಧಿಸುತ್ತಾರೆ. ಆದರೆ ಕೇರಳದ ಕೊಟ್ಟಯಂನಲ್ಲಿ ತಂದೆಯೊಬ್ಬರು ತಮ್ಮ ಮಗ ಪ್ರೀತಿಸಿ ಮೋಸ ಮಾಡಿದ್ದ ಯುವತಿಯನ್ನು ಮಗಳಂತೆ ಸಾಕಿದ್ದು, ಬೇರೆ ಹುಡುಗನೊಂದಿಗೆ ಮದುವೆ ಮಾಡಿಸಿರುವ ಅಪರೂಪದ ಘಟನೆ ನಡೆದಿದೆ.

    ಇಂತಹ ಅಪರೂಪದ ಘಟನೆಯ ಬಗ್ಗೆ ಸಂಧ್ಯಾ ಪಲ್ಲವಿ ಅವರು ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಇದೀಗ ಆ ಫೋಸ್ಟ್ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆದ ನಂತರ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿತ್ತು?
    ಇಂದು ನಾನು ಸ್ನೇಹಿತರೊಬ್ಬರ ಒಂದು ವಿಶೇಷ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಈ ಮದುವೆ ಕೊಟ್ಟಯಂ ಜಿಲ್ಲೆಯ ತಿರುನಕ್ಕರ ಗ್ರಾಮದಲ್ಲಿ ನಡೆದಿದೆ. ಆದರೆ ಮಾಂಗಲ್ಯಧಾರಣೆ ವೇಳೆ ಕಣ್ಣೀರು ಬಂದಿತ್ತು ಎಂದು ಮೊದಲಿಗೆ ಹೇಳಿಕೊಂಡಿದ್ದಾರೆ.

    ತಿರುನಕ್ಕರ ನಿವಾಸಿ ಶಾಜಿ ಮತ್ತು ಅವರ ಪತ್ನಿ ಅತಿಥಿಗಳನ್ನು ಬರಮಾಡಿಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಆರು ವರ್ಷಗಳ ಹಿಂದೆ ಶಾಜಿ ಅವರ ಮಗ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಈ ವೇಳೆ ತನ್ನ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ನಂತರ ಇಬ್ಬರು ಮನೆಬಿಟ್ಟು ಓಡಿಹೋಗಿದ್ದರು. ಇತ್ತ ಮಗಳ ಕಾಣೆಯಾಗಿದ್ದಳು ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಅವರಿಬ್ಬರನ್ನು ಪತ್ತೆಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

    ಈ ವೇಳೆ ಹುಡುಗನ ಜೊತೆ ಓಡಿ ಹೋದ ಮಗಳು ನಮಗೆ ಬೇಡ ಎಂದು ಹುಡುಗಿಯನ್ನು ಆಕೆಯ ಪೋಷಕರು ಬಿಟ್ಟು ಹೋದರು. ಕೊನೆಗೆ ಮಕ್ಕಳಿಗೆ 18 ವರ್ಷ ತುಂಬಿದ ಮೇಲೆ ಮದುವೆ ಮಾಡುತ್ತೇವೆ ಎಂದು ಹುಡುಗನ ಪೋಷಕರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

    ತಂದೆ ಶಾಜಿ ಮಗನನ್ನು ಹಾಸ್ಟೆಲಿಗೆ ಸೇರಿಸಿ ವಿದ್ಯಾಭ್ಯಾಸವನ್ನು ಮುಂದುರಿಸಿದ್ದರು. ಇತ್ತ ಮಗ ಕರೆದುಕೊಂಡು ಬಂದ ಹುಡುಗಿಯನ್ನು ಮನೆಯಲ್ಲಿರಿಸಿ ಓದು ಮುಂದುವರಿಯುವಂತೆ ನೋಡಿಕೊಂಡಿದ್ದರು. ಈ ಮಧ್ಯೆ ಮಗ ಬೇರೊಂದು ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ. ಅಷ್ಟೇ ಅಲ್ಲದೇ ಕಳೆದ ವರ್ಷ ಮಗ ಊರಿಗೆ ಮರಳಿ ಬರುವಾಗ ಬೇರೊಂದು ಹುಡುಗಿಯನ್ನು ಮದುವೆಯಾಗಿ ಬಂದಿದ್ದಾನೆ.

    ಪ್ರೀತಿಸಿದ್ದ ಹುಡುಗಿಗೆ ಮೋಸ ಮಾಡಿದ್ದಕ್ಕಾಗಿ ಮಗನನ್ನು ತಮ್ಮ ಕುಟುಂಬದಿಂದ ಹೊರಹೋಗುವಂತೆ ಹೇಳಿದ್ದಾರೆ. ಇತ್ತ ಆತನಿಗಾಗಿ ಕಾಯುತ್ತಿದ್ದ ಯುವತಿಗೆ ತನ್ನ ಮಗನಿಗೆ ಸೇರಬೇಕಿದ್ದ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದಿದ್ದಾರೆ. ಅಷ್ಟೇ ಅಲ್ಲದೇ ಕರುನಾಗಪಳ್ಳಿ ನಿವಾಸಿ ಅಜಿತ್ ಜೊತೆ ಆ ಹುಡುಗಿಯ ಮದುವೆ ಮಾಡಿಸಿದ್ದಾರೆ. ತಂದೆ-ತಾಯಿ ಸ್ಥಾನದಲ್ಲಿ ನಿಂತು ಮಗಳಂತೆ ಸಾಕಿದ್ದ ಯುವತಿಯನ್ನು ತಿರುನಕ್ಕರ ದೇವಾಲಯದಲ್ಲಿ ಕನ್ಯಾದಾನ ಮಾಡಿಕೊಟ್ಟಿದ್ದಾರೆ.

    ಈ ದಂಪತಿಗೆ ಇನ್ನೊಬ್ಬ 8 ವರ್ಷದ ಮಗನಿದ್ದಾನೆ ಎಂದು ವಿಶೇಷ ಮದುವೆಯ ಸಂಪೂರ್ಣ ವಿವರವನ್ನು ಬರೆದಿದ್ದಾರೆ.

  • ಪ್ರತಿನಿತ್ಯ 800 ಮಂದಿಗೆ ಇಫ್ತಾರ್ ಭೋಜನ ವ್ಯವಸ್ಥೆ ಮಾಡುತ್ತಿರುವ ಕ್ರಿಶ್ಚಿಯನ್ ಉದ್ಯಮಿ!

    ಪ್ರತಿನಿತ್ಯ 800 ಮಂದಿಗೆ ಇಫ್ತಾರ್ ಭೋಜನ ವ್ಯವಸ್ಥೆ ಮಾಡುತ್ತಿರುವ ಕ್ರಿಶ್ಚಿಯನ್ ಉದ್ಯಮಿ!

    ದುಬೈ: ಕೇರಳ ಮೂಲದ ಕ್ರಿಶ್ಚಿಯನ್ ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆಂದು ಪ್ರತ್ಯೇಕ ಮಸೀದಿ ನಿರ್ಮಿಸುವುದರೊಂದಿಗೆ ರಂಜಾನ್ ತಿಂಗಳಲ್ಲಿ ಇಫ್ತಾರ್ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು, ಕೇರಳದ ಕಯಾಕುಲಂ ಮೂಲದವರಾಗಿರುವ ಉದ್ಯಮಿ ಸಾಜಿ ಚೆರಿಯನ್(49) 2003ರಿಂದ ಯುಎಇನಲ್ಲಿ ವಾಸವಾಗಿದ್ದಾರೆ. ತಾವು ಕ್ರಿಶ್ಚಿಯನ್ ಆಗಿದ್ದರು ಧರ್ಮಬೇಧ ಮರೆತು ಯುಎಇನಲ್ಲಿ ಮಸೀದಿ ಕಟ್ಟಿಸಿದ್ದಾರೆ. ಜೊತೆಗೆ ರಂಜಾನ್ ತಿಂಗಳ ಪೂರ್ತಿ 800 ಮಂದಿ ಜನರಿಗೆ ಇಫ್ತಾರ್ ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದಾರೆ.

    ಪ್ರತಿನಿತ್ಯ ನಮಾಜ್‍ಗೆ ತಮ್ಮ ಸಂಸ್ಥೆಯ ಸಿಬ್ಬಂದಿ ಸಂಬಳದ ಹಣ ಖರ್ಚು ಮಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ಈ ಹಣವನ್ನು ಉಳಿಸಲು ಉದ್ಯಮಿ ಸಾಜಿ ಈ ಉಪಾಯ ಮಾಡಿದ್ದಾರೆ. ಸಿಬ್ಬಂದಿಗಾಗಿ ಮಸೀದಿಯನ್ನೂ ನಿರ್ಮಿಸಿದ್ದಾರೆ. ಮಸೀದಿಗೆ `ಮೇರಿ ದಿ ಮದರ್ ಆಫ್ ಜೀಸಸ್’ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರತಿನಿತ್ಯ ಇಫ್ತಾರ್ ಊಟದಲ್ಲಿ ಬಿರಿಯಾನಿ, ಹಣ್ಣು, ಖರ್ಜೂರ ಸೇರಿದಂತೆ ಹಲವು ಖಾದ್ಯಗಳನ್ನು ಸಿಬ್ಬಂದಿಗೆ ನೀಡುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಚೆರಿಯನ್, ಸಿಬ್ಬಂದಿ ನಮಾಜ್ ಮಾಡಲು ದೂರದ ಪ್ರದೇಶಕ್ಕೆ ತೆರಳಬೇಕಾಗಿತ್ತು. ಹಾಗೆಯೇ ಇದಕ್ಕಾಗಿ ಸಂಬಳದ ಹಣವನ್ನು ಖರ್ಚು ಮಾಡುತ್ತಿದ್ದರು. ಜೊತೆಗೆ ಇಫ್ತಾರ್ ಊಟಕ್ಕೂ ಹಣ ಖರ್ಚಾಗುತ್ತಿತ್ತು. ಆದ್ದರಿಂದ ಸಿಬ್ಬಂದಿಯ ಹಣ ಉಳಿಸಲು ಈ ರೀತಿ ಮಾಡಿದ್ದೇನೆ. ರಂಜಾನ್ ಮುಗಿಯುವ ತನಕ ಒಂದೇ ರೀತಿಯ ಆಹಾರ ನೀಡಿದರೆ ಅವರಿಗೆ ಬೇಸರವಾಗುತ್ತದೆ. ಹೀಗಾಗಿ ವಿವಿಧ ರೀತಿಯ ಬಿರಿಯಾನಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಪತ್ರಿಕೆಯೊಂದರ ವರದಿ ಪ್ರಕಾರ ರಂಜಾನ್ ಆಚರಣೆಯ 17 ನೇ ರಾತ್ರಿಯಂದು ಈ ಮಸೀದಿಯನ್ನು ಉದ್ಘಾಟಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ದುಬೈನಲ್ಲಿ ಅಲ್ ಹೈಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈಸ್ಟ್ ವಿಲ್ಲೆ ರಿಯಲ್ ಎಸ್ಟೇಟ್ ಸಂಕೀರ್ಣದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ. ಇದು ಒಂದೇ ಸಮಯದಲ್ಲಿ 250 ಮಂದಿ ಪ್ರಾರ್ಥನೆಯನ್ನು ಸಲ್ಲಿಸುವಷ್ಟು ದೊಡ್ಡ ಸಭಾಂಗಣವನ್ನು ಹೊಂದಿದೆ. ಅಷ್ಟೇ ಅಲ್ಲದೆ ಮಸೀದಿಯ ಹೊರಗಡೆ ತೆರೆದ ಆವರಣದಲ್ಲಿ 700 ಮಂದಿ ಆರಾಧಕರು ಪ್ರಾರ್ಥನೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.

  • ಶ್ರೀಲಂಕಾ ಬಾಂಬ್ ದಾಳಿ: ಬೆಂಗ್ಳೂರಿಗೂ ಆಗಮಿಸಿದ್ದ ಉಗ್ರರು

    ಶ್ರೀಲಂಕಾ ಬಾಂಬ್ ದಾಳಿ: ಬೆಂಗ್ಳೂರಿಗೂ ಆಗಮಿಸಿದ್ದ ಉಗ್ರರು

    ಕೋಲಂಬೊ: ಶ್ರೀಲಂಕಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ರಕ್ತದೊಕುಳಿಯನ್ನ ಹರಿಸಿದ್ದ ಉಗ್ರರರು ತರಬೇತಿಗಾಗಿ ಭಾರತದ ಕೇರಳ, ಬೆಂಗಳೂರು ಹಾಗು ಕಾಶ್ಮೀರಕ್ಕೆ ಭೇಟಿ ನೀಡಿದ್ದರು ಎಂದು ಶ್ರೀಲಂಕಾ ಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

    ಈಸ್ಟರ್ ದಾಳಿಯ ಕುರಿತು ತನಿಖೆ ನಡೆಸುತ್ತಿರುವ ಶ್ರೀಲಂಕಾ ತನಿಖಾ ತಂಡ ಈ ಕುರಿತು ಮಾಹಿತಿ ಪಡೆದಿದ್ದರು. ದಾಳಿ ಮುಖ್ಯ ಸಂಚುಕೋರ ಅಬ್ದುಲ್ ಜಮೀಲ್ ಲತೀಫ್ ಸೇರಿದಂತೆ ದಾಳಿಕೋರರು ಕೇರಳದ ಕೆಲ ಪ್ರದೇಶಗಳು, ಕರ್ನಾಟಕದ ಬೆಂಗಳೂರು, ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ 2015ರಲ್ಲಿ ಸಿರಿಯಾಗೆ ತೆರಳಿ ಐಸಿಸ್ ಉಗ್ರ ಸಂಘಟನೆ ಸೇರ್ಪಡೆ ಆಗಿದ್ದರು. ಆ ಬಳಿಕ ಇತರೇ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದರು ಎಂದು ಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

    ಶ್ರೀಲಂಕಾ ಸೇನಾ ಮುಖ್ಯಸ್ಥರಾಗಿರುವ ಮಹೇಶ್ ಸೇನಾ ನಾಯಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬೇರೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿವುದು ಹಾಗೂ ದಾಳಿ ನಡೆಸಲು ಹೆಚ್ಚಿನ ತರಬೇತಿ ಪಡೆಯುವುದು ಅವರ ಉದ್ದೇಶವಾಗಿತ್ತು ಎಂಬುದು ಸದ್ಯಕ್ಕೆ ತಿಳಿದು ಬಂದಿದೆ ಎಂದಿದ್ದಾರೆ. ಅಲ್ಲದೇ ಸಂವಹನ ಕೊರತೆಯಿಂದಲೇ ದಾಳಿಗಳನ್ನು ತಡೆಯಲು ವಿಫಲರಾಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

    ಈಸ್ಟರ್ ಭಾನುವಾರದ ದಿನ ಸಂಭವಿಸಿದ್ದ ಆತ್ಮಾಹುತಿ ದಾಳಿಯಲ್ಲಿ ಒಟ್ಟು 250 ಮಂದಿ ಬಲಿಯಾಗಿದ್ದರು. ಇದರಲ್ಲಿ ಕರ್ನಾಟಕದ 7 ಮಂದಿ ಕೂಡ ಪ್ರಾಣ ತೆತ್ತಿದ್ದರು. ಈ ದಾಳಿ ಬಗ್ಗೆ ಭಾರತ ರಾಷ್ಟ್ರೀಯ ತನಿಖಾ ಸಂಸ್ಥೆ ಮೂರು ಬಾರಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿತ್ತು. ಅಲ್ಲದೇ ಮೌಲ್ವಿ ಜಹ್ರಾನ್ ಬಿನ್ ಹಶೀಮ್ ವಿಡಿಯೋ ಮಾಹಿತಿ ಅನ್ವಯ ಸೂಕ್ಷ್ಮ ರೀತಿಯಲ್ಲಿ ಮಾಹಿತಿ ರವಾನೆ ಮಾಡಿತ್ತು. ಆದರೆ ಎಚ್ಚರಿಕೆಯ ಬಳಿಕವೂ ಶ್ರೀಲಂಕಾ ಪೊಲೀಸರು ದಾಳಿಯನ್ನ ತಡೆಯಲು ವಿಫಲರಾಗಿದ್ದರು. ಭದ್ರತೆ ವಿಫಲವಾದ ಕಾರಣ ಶ್ರೀಲಂಕಾ ಆಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಸಮಧಾನ ವ್ಯಕ್ತಪಡಿಸಿದ್ದರು.

  • ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‍ನಲ್ಲಿ ಬುರ್ಕಾ ಬ್ಯಾನ್

    ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‍ನಲ್ಲಿ ಬುರ್ಕಾ ಬ್ಯಾನ್

    ತಿರುವನಂತಪುರಂ: ಕೇರಳದ ಅತಿದೊಡ್ಡ ಶಿಕ್ಷಣ ಸಂಸ್ಥೆಯಾದ ಕ್ಯಾಲಿಕಟ್‍ನ ಹೆಸರಾಂತ ಮುಸ್ಲಿಂ ಶಿಕ್ಷಣ ಸಂಸ್ಥೆ (ಎಂಇಎಸ್) ತನ್ನ ಕಾಲೇಜ್ ಕ್ಯಾಂಪಸ್‍ನಲ್ಲಿ ಬುರ್ಕಾ ವನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಪಿ.ಎ.ಫಜಲ್ ಗಫೂರ್ ಅವರು, ಕೇರಳದಲ್ಲಿ ಇಸ್ಲಾಮ್ ಧರ್ಮವನ್ನು ಪಾಲಿಸೋಣ. ಆದರೆ ಮಧ್ಯಪ್ರಾಚ್ಯದ ಇಸ್ಲಾಂನಲ್ಲ ಎಂದು ತಿಳಿಸಿದ್ದಾರೆ.

    ಸಂಪ್ರದಾಯವಾದಿ ಮುಸ್ಲಿಂ ಗುಂಪುಗಳು ಕಳೆದ ಐದು ವರ್ಷಗಳಿಂದ ಕೇರಳ ಸಂಸ್ಥೆಗಳಲ್ಲಿ ಇದೇ ರೀತಿಯ ಉಡುಪನ್ನು ಧರಿಸಬೇಕು ಎಂದು ಒತ್ತಾಯಿಸುತ್ತಿವೆ. ಇವರ ಒತ್ತಾಯಕ್ಕೆ ಮಣಿಯದೇ ನಾವು ನಮ್ಮ ಸಂಸ್ಥೆಯಲ್ಲಿ ಸಲ್ವಾರ್ ಕಮೀಝ್ ಡ್ರೆಸ್ ಕೋಡ್ ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಗಫೂರ್ ಅವರು ಮಹಿಳೆಯರು ಬುರ್ಕಾ ಧರಿಸುತ್ತಿರುವುದಕ್ಕೆ ಹಿಂದಿನಿಂದಲೇ ವಿರೋಧ ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. 2014 ರಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬುರ್ಕಾ ಧರಿಸುವುದು ಇಸ್ಲಾಮಿನ ಭಾಗವಲ್ಲ. ಮುಖದ ಮೇಲೆ ಸೂರ್ಯನ ಕಿರಣಗಳು ಬೀಳುವುದನ್ನು ತಡೆಯುದರಿಂದ ಮುಸ್ಲಿಂ ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದರು.

    ನಾವು ತಾಲಿಬಾನ್ ಆಡಳಿತದಲ್ಲಿ ಇಲ್ಲ. ಭಾರತದಲ್ಲಿ ಮಾತನಾಡಲು ಸ್ವಾತಂತ್ರ್ಯವಿದೆ. ಹೀಗಾಗಿ ನಾವು ಧರ್ಮದ ಪದ್ದತಿ ವಿರುದ್ಧ ಮಾತನಾಡುತ್ತೇವೆ. ಮುಖ ಮುಚ್ಚಿಕೊಳ್ಳುವುದೇ ಇಸ್ಲಾಮಿನ ಭಾಗವಲ್ಲ ಎಂದು ಗಫೂರ್ ಹೇಳಿದ್ದಾರೆ.

    ಎಂಇಎಸ್ ಎಪ್ರಿಲ್ 17 ರಂದು ಸುತ್ತೋಲೆಯನ್ನು ಹೊರಡಿಸಿದ್ದು, ಇದಕ್ಕೆ ಕೆಲ ಮುಸ್ಲಿಂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಇದು ಸಮುದಾಯದ ಧಾರ್ಮಿಕ ತತ್ವಗಳು ಮತ್ತು ಭಾವನೆಗಳನ್ನು ವಿರೋಧಿಸುತ್ತಿದೆ. ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಶೈಕ್ಷಣಿಕ ಸಂಸ್ಥೆಯು ವಿವಿಧ ಸಂಘಟನೆಗಳ ಜೊತೆಗೆ ಚರ್ಚೆ ಮಾಡಬೇಕಿತ್ತು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    10 ವೃತ್ತಿಪರ ಕಾಲೇಜು ಸೇರಿದಂತೆ 150 ಶಿಕ್ಷಣ ಕೇಂದ್ರಗಳನ್ನು ಎಂಇಎಸ್ ಹೊಂದಿದೆ. ಅಷ್ಟೇ ಅಲ್ಲದೇ ಇಲ್ಲಿ ವ್ಯಾಸಂಗ ಮಾಡುವವರಲ್ಲಿ ಶೇ.80 ರಷ್ಟು ಮುಸ್ಲಿಮ್ ವಿದ್ಯಾರ್ಥಿನಿಯರಿದ್ದಾರೆ.

    ಶ್ರೀಲಂಕಾದಲ್ಲಿ ನಿಷೇಧಗೊಂಡಂತೆ ಭಾರತದಲ್ಲೂ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ಬುರ್ಕಾವನ್ನು ನಿಷೇಧಿಸಬೇಕೆಂದು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆ ಆಗ್ರಹಿಸಿತ್ತು.

    ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ತಮ್ಮ ದೇಶದಲ್ಲಿ ಬುರ್ಕಾವನ್ನು ನಿಷೇಧ ಮಾಡಿದ್ದಾರೆ. ಅದೇ ರೀತಿಯಲ್ಲಿ ಭಾರತದಲ್ಲೂ ಬುರ್ಕಾವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದೆ.

    ಬುರ್ಕಾ ಧರಿಸುವುದರಿಂದ ಉಗ್ರರು ತಮ್ಮ ಮುಖ ಮುಚ್ಚಿಕೊಂಡು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಈ ರೀತಿಯ ಸಂಪೂರ್ಣ ಮುಖ ಮುಚ್ಚಿಕೊಳ್ಳುವ ಉಡುಪುಗಳನ್ನು ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಹಿನ್ನಡೆಯಾಗುತ್ತಿದೆ. ಭಾರತದ ಮೇಲೂ ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಭದ್ರತೆಯ ದೃಷ್ಟಿಯಿಂದ ನಮ್ಮ ದೇಶದಲ್ಲೂ ಬುರ್ಕಾವನ್ನು ನಿಷೇಧಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಹೇಳಿತ್ತು.

  • ಲೈಂಗಿಕತೆಗಾಗಿ ಪತ್ನಿಯರ ಅದಲು, ಬದಲು – ನಾಲ್ವರು ಅರೆಸ್ಟ್

    ಲೈಂಗಿಕತೆಗಾಗಿ ಪತ್ನಿಯರ ಅದಲು, ಬದಲು – ನಾಲ್ವರು ಅರೆಸ್ಟ್

    ತಿರುವನಂತಪುರಂ: ಲೈಂಗಿಕ ಸುಖಕ್ಕಾಗಿ ಪತ್ನಿಯನ್ನು ವಿನಿಮಯ ಮಾಡಿಕೊಳ್ಳಲು ಯತ್ನಿಸಿದ್ದ ನಾಲ್ವರು ಪುರುಷರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರು ನೀಡಿದ ದೂರಿನ ಆಧಾರ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಯಂಕುಳಂ ಟೌನ್ ವ್ಯಾಪ್ತಿಯನ್ನು ನಾಲ್ವರನ್ನು ಬಂಧಿಸಿದ್ದಾರೆ.

    ಹೊಸಬರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶದಿಂದ ಪತಿ ತನ್ನ ಪತ್ನಿಯನ್ನು ಇದಕ್ಕೆ ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ ಹಿನ್ನೆಲೆಯಲ್ಲಿ ಆಕೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಈ ದಂಧೆ ನಡೆಯುತ್ತಿರುವ ಮಾಹಿತಿ ತನಿಖೆ ಬೆಳಕಿಗೆ ಬಂದಿದೆ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ‘ವೈಫ್ ಸ್ವಾಪಿಂಗ್’ ಕೇರಳದಲ್ಲಿ ಆರಂಭವಾಗಿದ್ದು, ಆ್ಯಪ್ ನೆರವಿನಿಂದ ಸಂದೇಶ ರವಾನಿಸಿ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

    ಬ್ಲೆಸರಿನ್, ಕಿರಣ್, ಸೀಡಿ, ಉಮೇಶ್ ಎಂಬವರು ಬಂಧಿತ ಆರೋಪಿಗಳಾಗಿದ್ದು, ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 366 ಅಡಿ ಪ್ರಕರಣ ದಾಖಲಾಗಿದೆ.

  • ವಿವಾಹಿತೆ ಪ್ರೇಯಸಿ ಮನೆಗೆ ಹೋಗಿ ಅಪ್ಪಿಕೊಂಡು ಬಾಂಬ್ ಸ್ಫೋಟಿಸಿದ!

    ವಿವಾಹಿತೆ ಪ್ರೇಯಸಿ ಮನೆಗೆ ಹೋಗಿ ಅಪ್ಪಿಕೊಂಡು ಬಾಂಬ್ ಸ್ಫೋಟಿಸಿದ!

    ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ವಿವಾಹಿತೆ ಪ್ರೇಯಸಿಯ ಮನೆಗೆ ಹೋಗಿ ಆಕೆಯನ್ನು ಅಪ್ಪಿಕೊಂಡು ಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಪರಿಣಾಮ ಆಕೆಯನ್ನು ಹತ್ಯೆ ಮಾಡಿ ತಾನೂ ಮೃತಪಟ್ಟಿರುವ ಘಟನೆ ಕೇರಳದ ಕೋಝಿಕೊಡ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ವಯನಾಡ್‍ನ ನ್ಯಾಕಟ್ಟಿಯಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಅಮಲಾ(38) ಮತ್ತು ಮೂಲಂಕವು ನಿವಾಸಿ 45 ವರ್ಷದ ಬೆನ್ನಿ ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ?
    ಮೃತ ಅಮಲಾ ನ್ಯಾಕಟ್ಟಿಯ ನಾಸಾರ್ ಪತ್ನಿಯಾಗಿದ್ದು, ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಬೆನ್ನಿ ಮತ್ತು ಅಮಲಾ ಇಬ್ಬರು ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಈ ಬಗ್ಗೆ ಮನೆಯಲ್ಲಿ ತಿಳಿದು ಎಚ್ಚರಿಕೆ ಕೂಡ ನೀಡಿದ್ದರು. ಇದರಿಂದ ಕೋಪಗೊಂಡ ಬೆನ್ನಿ ಶುಕ್ರವಾರ ದೇಶಿ ನಿರ್ಮಿತ ಬಾಂಬ್ ಅನ್ನು ತನ್ನ ದೇಹಕ್ಕೆ ಕಟ್ಟಿಕೊಂಡು ಅಮಲಾ ಮನೆಗೆ ಹೋಗಿ ಆಕೆಯನ್ನು ಅಪ್ಪಿಕೊಂಡಿದ್ದಾನೆ. ಬಳಿಕ ನನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

    ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಅಮಲಾಳ ಮೂರು ವರ್ಷದ ಮಗಳು ಮನೆಯಲ್ಲಿದ್ದಳು. ಆದರೆ ಅದೃಷ್ಟವಶಾತ್ ಮಗು ಅಪಾಯದಿಂದ ಪಾರಾಗಿದೆ. 17 ಮತ್ತು 16 ವರ್ಷದ ಇಬ್ಬರು ಹೆಣ್ಣು ಮಕ್ಕಳು ಈ ಘಟನೆಯ ಸಂದರ್ಭದಲ್ಲಿ ವಯನಾಡಿನ ಮುಟ್ಟಿಲ್‍ನಲ್ಲಿದ್ದರು. ಮೃತ ಬೆನ್ನಿಗೂ ಸಹ ಬೇರೆ ಮಹಿಳೆಯೊಂದಿಗೆ ಮದುವೆಯಾಗಿತ್ತು. ಕಳೆದ ಎಂಟು ವರ್ಷಗಳಿಂದ ಈ ಎರಡೂ ಕುಟುಂಬ ಪರಸ್ಪರ ಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ನಾಸಾರ್ ಮತ್ತು ಅಮಲಾ ಅಕ್ಷಯ್ ಸೆಂಟರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತ ಬೆನ್ನಿ ಪೀಠೋಪಕರಣ ಅಂಗಡಿಯನ್ನು ನ್ಯಾಕಟ್ಟಿಯಲ್ಲಿ ಇಟ್ಟುಕೊಂಡಿದ್ದನು. ಘಟನೆಯ ಬಳಿಕ ಮನೆ ಸಂಪೂರ್ಣವಾಗಿ ಪೊಲೀಸ್ ರಕ್ಷಣೆಯಲ್ಲಿದೆ. ಫೋರೆನ್ಸಿಕ್ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

    ಪ್ರಕರಣ ಸಂಬಂಧ ಸುಲ್ತಾನ್ ಬಥೆರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

  • ‘ಫಾನಿ’ ಸೈಕ್ಲೋನ್ ಎಫೆಕ್ಟ್ – ಕೇರಳದಲ್ಲಿ ಹೈ ಅಲರ್ಟ್

    ‘ಫಾನಿ’ ಸೈಕ್ಲೋನ್ ಎಫೆಕ್ಟ್ – ಕೇರಳದಲ್ಲಿ ಹೈ ಅಲರ್ಟ್

    ಬೆಂಗಳೂರು: ಹಿಂದೂ ಮಹಾಸಾಗರದ ಭಾಗ ಸೇರಿ ಬಂಗಾಳ ಕೊಲ್ಲಿಯಲ್ಲಿ (ಶ್ರೀಲಂಕಾ ಹಾಗೂ ತಮಿಳುನಾಡಿನ ಆಗ್ನೇಯ ಭಾಗದಲ್ಲಿ) ನಿರ್ಮಾಣವಾಗಿರುವ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ.

    ಹವಾಮಾನ ಇಲಾಖೆ ನೀಡಿರುವ ಬುಲೆಟಿನ್ ಅನ್ವಯ ಏಪ್ರಿಲ್ 29ಕ್ಕೆ ಕೇರಳದ 4 ಜಿಲ್ಲೆಗಳಾದ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಸೈಕ್ಲೋನ್ ಪ್ರಭಾವ ಬೀರಲಿದೆ. ಏಪ್ರಿಲ್ 30ಕ್ಕೆ ಕೇರಳದ 8 ಜಿಲ್ಲೆಗಳಲ್ಲಿ ಅಂದರೆ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೊಟ್ಟಾಯಂ, ವಯನಾಡು, ಕೋಝಿಕ್ಕೋಡ್, ಪಾಲಕ್ಕಾಡ್ ಜಿಲ್ಲೆಗಳಿಗೆ ಪ್ರವೇಶ ಮಾಡುವ ಮುನ್ಸೂಚನೆ ಇರುವುದರಿಂದ ಙeಟಟoತಿ ಅಲರ್ಟ್ ಘೋಷಿಸಲಾಗಿದೆ.

    ಫಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕೇರಳದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದೆ. ಮಾತ್ರವಲ್ಲದೇ ತಮಿಳುನಾಡು, ಕೇರಳ ಕರಾವಳಿಯಲ್ಲಿ ಭಾರೀ ಹಾನಿ ಸಾಧ್ಯತೆ ಇರುವುದಾಗಿ ತಿಳಿಸಿದೆ.

    ಫಾನಿ ಚಂಡಮಾರುತ ಶುರುವಾದಾಗ ಗಂಟೆಗೆ 90-115 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಕೇರಳದಲ್ಲಿ ಗಂಟೆಗೆ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಲಾಗಿದೆ. ಪರಿಣಾಮ ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಗಾಳಿ ಮಳೆಯ ಆಗುವ ಕುರಿತು ಅಂದಾಜಿಸಲಾಗಿದೆ.

    ಫಾನಿ ಚಂಡಮಾರುತದ ಬಿಸಿ ರಾಜ್ಯಕ್ಕೂ ತಟ್ಟಲಿದ್ದು, ಏ.28ರ ನಂತರ ಮೇ 2ರ ವರೆಗೂ ಹಳೆ ಮೈಸೂರು ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನದಲ್ಲಿ ಚಂಡಮಾರುತ ಪರಿಣಾಮ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಇತ್ತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸರೆಡ್ಡಿ ಅವರು ತಿಳಿಸಿದ್ದರು.

    ಫಾನಿ ಚಂಡಮಾರುತ ಮೊದಲು ತಮಿಳುನಾಡಿನ ದಕ್ಷಿಣ ಭಾಗಕ್ಕೆ ಬಂದು ತಲುಪುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ದಿಕ್ಕು ಬದಲಾಯಿಸಿ, ಪೂರ್ವದ ಕಡೆಗೆ ದಿಕ್ಕು ಬದಲಿಸುವ ಅವಕಾಶ ಹೆಚ್ಚಿದೆ ಎಂದು ಹವಮಾನ ಇಲಾಖೆ ಸ್ಪಷ್ಟಪಡಿಸಿದೆ. ಚೆನ್ನೈನಿಂದ 1,340 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತದ ಕೇಂದ್ರ ಸ್ಥಾನ ರಚನೆ ಆಗಿರುವ ಕುರಿತು ಮಾಹಿತಿ ಲಭಿಸಿದೆ.

  • ಪಕ್ಷಭೇದ ಮರೆತು ಕ್ಷೇತ್ರದ ಸ್ವಚ್ಛತೆಗಿಳಿದ ಕೇರಳ ಅಭ್ಯರ್ಥಿಗಳು

    ಪಕ್ಷಭೇದ ಮರೆತು ಕ್ಷೇತ್ರದ ಸ್ವಚ್ಛತೆಗಿಳಿದ ಕೇರಳ ಅಭ್ಯರ್ಥಿಗಳು

    ತಿರುವನಂತಪುರಂ: ಲೋಕಸಭಾ ಚುನಾವಣೆ ಹಿನ್ನೆಲೆ ಬ್ಯಾನರ್ ಗಳು, ಕಟೌಟ್‍ಗಳು, ವಿಭಿನ್ನ ಪಕ್ಷಗಳ ರಾಶಿ ರಾಶಿ ಬಾವುಟಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿರುತ್ತದೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮಿಂದಾದ ಕಸವನ್ನು ತಾವೇ ಸ್ವಚ್ಛ ಮಾಡುವ ಮೂಲಕ ಕೇರಳ ಅಭ್ಯರ್ಥಿಗಳು ಈಗ ಮಾದರಿಯಾಗಿದ್ದಾರೆ.

    ಬೃಹತ್ ರೋಡ್ ಶೋ, ಖ್ಯಾತ ರಾಜಕಾರಣಿಗಳ ಭೇಟಿ, ಪಕ್ಷದ ಪ್ರಚಾರಕ್ಕಾಗಿ ಬ್ಯಾನರ್, ಕಟೌಟ್ ಅಂತ ಕ್ಷೇತ್ರದ ಮೂಲೆ ಮೂಲೆಗೂ ಕಸದ ರಾಶಿಯೇ ತುಂಬಿ ಹೋಗಿರುತ್ತದೆ. ಅಲ್ಲದೆ ಚುನಾವಣೆ ಬಳಿಕ ಮತದಾನ ಮುಗಿಯುತ್ತಿದ್ದಂತೆ ಕಸದ ರಾಶಿಯ ಗತಿ ಕೇಳುವವರೇ ಇರುವುದಿಲ್ಲ. ಎಲ್ಲೆಂದರಲ್ಲಿ ಭಾರಿ ಪ್ರಮಾಣದಲ್ಲಿ ಕಸ ತುಂಬಿಕೊಂಡಿರುತ್ತದೆ. ಆದರೆ ಕೇರಳದಲ್ಲಿ ಮತದಾನ ನಡೆದ ನಂತರ ಸ್ಪರ್ಧೆಗೆ ನಿಂತಿದ್ದ ಅಭ್ಯರ್ಥಿಗಳೇ ನಗರವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

    https://www.facebook.com/kummanam.rajasekharan/posts/1962362957206815

    ಚುನಾವಣೆಗೆ ಬಳಸಿದ ವಸ್ತುಗಳನ್ನು ಪುನಃ ಬಳಕೆ ಮಾಡಲು, ಸಾರ್ವಜನಿಕರ ಬಳಕೆಗೆ ಉಪಯೋಗವಾಗುವಂತೆ ಅದನ್ನು ಪರಿಷ್ಕರಿಸಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಗೊಳಿಸಲು ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಜೊತೆಗೆ ಸ್ವತಃ ತಾವೇ ಮುಂದೆ ಬಂದು ರಸ್ತೆಗಳಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ತೆರವು ಗೊಳಿಸಲು ಪುರಸಭೆ ಕಾರ್ಮಿಕರ ಜೊತೆ ಕೈಜೋಡಿಸಿದ್ದಾರೆ.

    ಈ ಬಗ್ಗೆ ಮಾಜಿ ಮಿಜೋರಾಮ್ ಗವರ್ನರ್ ಮತ್ತು ಬಿಜೆಪಿ ಅಭ್ಯರ್ಥಿ ಕುಮ್ಮನಮ್ ರಾಜಶೇಖರನ್ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಸ್ವಚ್ಛತಾ ಅಭಿಯಾನದಡಿ ಚುನಾವಣೆಗೆ ಬಳಸಿದ್ದ ಸುಮಾರು 1 ಲಕ್ಷ ಶಾಲುಗಳು ವಾಪಸ್ ಬಂದಿದೆ. ಈ ಶಾಲುಗಳನ್ನು ಎಸೆಯುವ ಬದಲು ಅವುಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ಸಾರ್ವಜನಿಕರಿಗೆ ಸಹಾಯವಾಗುವಂತೆ ಪುನರ್ ಬಳಕೆಗೆ ಉಪಯೋಗಿಸುತ್ತೇವೆ. ಈ ಶಾಲುಗಳನ್ನು ಬ್ಯಾಗ್, ದಿಂಬು ಹೀಗೆ ಇತ್ಯಾದಿ ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತನೆ ಮಾಡಬಹುದು. ಪ್ರಕೃತಿ ಸ್ನೇಹಿ ವಸ್ತುಗಳ ಬಳಕೆಗೆ ಉತ್ತೇಜನ ನೀಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದಾಗಿದೆ ನಮ್ಮ ಗುರಿ ಎಂದು ತಿಳಿಸಿದ್ದಾರೆ.

    https://www.facebook.com/HibiEden/posts/10155940051967260

    ಎರ್ನಾಕುಲಮ್‍ನ ಕಾಂಗ್ರೆಸ್ ಅಭ್ಯರ್ಥಿ ಹಿಬಿ ಈಡನ್ ಕೂಡ ಈ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಜತೆ ಕ್ಷೇತ್ರದಲ್ಲಿ ಪ್ರಚಾರದ ಸಂದರ್ಭ ಬಿದ್ದಿದ್ದ ಕಸಗಳನ್ನು ತೆರವುಗೊಳಿಸಿ, ಬೀದಿಗಳನ್ನು ಸ್ವಚ್ಛ ಮಾಡಿದ್ದಾರೆ. ಚುನಾವಣೆ ಸಂದರ್ಭ ಉಪಯೋಗಿಸಿದ್ದ ಎಲ್ಲಾ ರೀತಿಯ ಪಕ್ಷದ ವಸ್ತುಗಳನ್ನು ತೆರವುಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಫೇಸ್‍ಬುಕ್ ಮೂಲಕ ಹಿಬಿ ಸೂಚಿಸಿದ್ದಾರೆ. ಹಾಗೆಯೇ ಸಿಪಿಎಂ ಅಭ್ಯರ್ಥಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಪಿ ರಾಜೀವ್ ಅವರು ಮುಂದಿನ ಎರಡು ದಿನಗಳಲ್ಲಿ ಚುನಾವಣೆ ಪ್ರಚಾರಕ್ಕೆ ಬಳಸಿದ ಎಲ್ಲ ವಸ್ತುಗಳನ್ನು ಕ್ಷೇತ್ರದಿಂದ ತೆರವುಗೊಳಿಸಿ ಸ್ವಚ್ಛಗೊಳಿಸುವುದಾಗಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    https://www.facebook.com/prajeev.cpm/posts/2437006436311441

    ಕೇಂದ್ರ ಸಚಿವ ಮತ್ತು ಬಿಜೆಪಿಯ ಎರ್ನಾಕುಲಂ ಅಭ್ಯರ್ಥಿ ಆಲ್ಫಾನ್ಸ್ ಕಣ್ಣಂತಾನಂ ಕ್ಷೇತ್ರದ ಸಾರ್ವಜನಿಕ ಜಾಗಗಳನ್ನು ಸಂರಕ್ಷಿಸಲು ಒತ್ತಾಯಿಸಿದ್ದು, ಪಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ಪೋಸ್ಟರ್ ಮತ್ತು ಚಿಹ್ನೆಗಳನ್ನು ತಮ್ಮ ಪಕ್ಷದ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಅಲ್ಲದೆ ಪಕ್ಷದ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಬರೆದಿದ್ದ ಗೋಡೆಬರಹ ಹಾಗೂ ರೇಖಾಚಿತ್ರಗಳನ್ನು ಅಳಿಸಲು ಅವುಗಳ ಮೇಲೆ ಪೇಂಟ್ ಮಾಡಲಾಗಿದೆ. “ನಮ್ಮ ಸಂದೇಶವನ್ನು ನಿಮಗೆ ಮತ್ತು ನಿಮ್ಮ ನೆರೆಹೊರೆಯವರ ಜೊತೆ ಹಂಚಿಕೊಳ್ಳಲು ಅವಕಾಶ ನೀಡಿದಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.

  • ವಿವಿ ಪ್ಯಾಟ್‍ನಲ್ಲಿ ಸೇರಿಕೊಂಡ ನಾಗ!

    ವಿವಿ ಪ್ಯಾಟ್‍ನಲ್ಲಿ ಸೇರಿಕೊಂಡ ನಾಗ!

    ತಿರುವನಂತಪುರಂ: ಹಾವುಗಳು ಚಿಕ್ಕ ಸ್ಥಳ ಸಿಕ್ಕರೂ ಸಾಕು ಸೇರಿಕೊಳ್ಳುತ್ತವೆ. ಬೈಕ್, ಕಾರ್ ಡಿಕ್ಕಿ, ಗ್ಯಾಸ್ ಸಿಲಿಂಡರ್ ಕೆಳಗೆ, ಶೂಗಳಲ್ಲಿ ಹೀಗೆ ಹಾವುಗಳು ಎಲ್ಲೆಂದರಲ್ಲಿ ಸೇರಿಕೊಳ್ಳುತ್ತವೆ. ಇದೀಗ ಕೇರಳದ ಕಣ್ಣೂರಿನ ಮತಗಟ್ಟೆಯ ವಿವಿ ಪ್ಯಾಟ್‍ನಲ್ಲಿ ಹಾವು ಸೇರಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು.

    ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕಯಿ ನಿರ್ವಾಚನದ ಬೂತ್ ನಲ್ಲಿ ಇಂದು ಬೆಳಗ್ಗೆ ವಿವಿ ಪ್ಯಾಟ್ ತೆರೆಯುತ್ತಿದ್ದಂತೆ ಚಿಕ್ಕ ಹಾವು ಕಾಣಿಸಿಕೊಂಡಿತ್ತು. ಕೂಡಲೇ ಚುನಾವಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಾವನ್ನು ಓಡಿಸಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಕನ್ನೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಪಿ.ಕೆ.ಶ್ರೀಮತಿ (ಸಿಪಿಐ+ಎಲ್‍ಡಿಎಫ್) ಮತ್ತು ಕೆ.ಸುರೇಂದ್ರನ್ (ಕಾಂಗ್ರೆಸ್+ಯುಡಿಎಫ್) ಸ್ಪರ್ಧೆ ಮಾಡಿದ್ದಾರೆ. ಕೇರಳದ ಎಲ್ಲ 20 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.