Tag: kerala

  • ಕಾರು ಅಪಘಾತದಿಂದ ಬಚಾವ್ – ಅಂಬುಲೆನ್ಸ್ ಆಕ್ಸಿಡೆಂಟ್‍ನಲ್ಲಿ 8 ಮಂದಿ ದುರ್ಮರಣ

    ಕಾರು ಅಪಘಾತದಿಂದ ಬಚಾವ್ – ಅಂಬುಲೆನ್ಸ್ ಆಕ್ಸಿಡೆಂಟ್‍ನಲ್ಲಿ 8 ಮಂದಿ ದುರ್ಮರಣ

    ತಿರುವನಂತಪುರಂ: ಅಂಬುಲೆನ್ಸ್ ಹಾಗೂ ಲಾರಿಯ ಮಧ್ಯೆ ನಡೆದ ಅಪಘಾತದಿಂದ ಆಸ್ಪತ್ರೆಗೆ ಹೋಗುತ್ತಿದ್ದ ಎಂಟು ಜನರು ಮೃತಪಟ್ಟಿರುವ ಘಟನೆ ಕೇರಳದ ಪಾಲಕ್ಕಾಡ್ ನಗರದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ನಡೆದಿದ್ದು, ಕಾರು ಅಪಘಾತದಲ್ಲಿ ಗಾಯಗೊಂಡವರನ್ನು ಅಂಬುಲೆನ್ಸ್ ಮೂಲಕ ಪಾಲಕ್ಕಾಡ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲೆಂದು ಕರೆದುಕೊಂಡು ಹೋಗಲಾಗುತ್ತಿತ್ತು.

    ಹೀಗೆ ಆಸ್ಪತ್ರೆ ಕಡೆ ಹೋಗುತ್ತಿದ್ದ ಅಂಬುಲೆನ್ಸ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಎಂಟು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಜನರ ಗುಂಪೊಂದು ಕಾರಿನಲ್ಲಿ ನೆಲ್ಲಿಯಂಪತಿಗೆ ಪ್ರವಾಸಕ್ಕೆ ಹೋಗಿತ್ತು. ದಾರಿ ಮಧ್ಯೆ ಕಾರು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಸಣ್ಣ-ಪುಟ್ಟ ಗಾಯಗೊಂಡಿದ್ದ ಗಾಯಾಳುಗಳನ್ನು ನೆನ್ಮರಾದ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಾಲಕ್ಕಾಡ್‍ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು.

    ಈ ವೇಳೆ ಆಂಬುಲೆನ್ಸ್ ಮತ್ತು ಲಾರಿ ಮಧ್ಯೆ ಮತ್ತೆ ಅಪಘಾತ ಸಂಭವಿಸಿದೆ. ಪರಿಣಾಮ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸದ್ಯಕ್ಕೆ ಅಂಬುಲೆನ್ಸ್ ನಲ್ಲಿದ್ದ ಓರ್ವ ಮತ್ತು ಲಾರಿ ಚಾಲಕ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಕೇರಳಕ್ಕೆ ಕಾಲಿಟ್ಟ ಮುಂಗಾರು ಮಳೆ- ರಾಜ್ಯದಲ್ಲಿ ವರುಣನ ಅಬ್ಬರಕ್ಕೆ ಬೆಳೆ ನಾಶ

    ಕೇರಳಕ್ಕೆ ಕಾಲಿಟ್ಟ ಮುಂಗಾರು ಮಳೆ- ರಾಜ್ಯದಲ್ಲಿ ವರುಣನ ಅಬ್ಬರಕ್ಕೆ ಬೆಳೆ ನಾಶ

    ಬೆಂಗಳೂರು: ನಿರೀಕ್ಷೆಯಂತೆಯೇ ಕೇರಳಕ್ಕೆ ಮುಂಗಾರು ಮಳೆ ಶನಿವಾರ ಕಾಲಿಟ್ಟಿದೆ. ಈಗಾಗಲೇ ಕೇರಳದ ಹಲವೆಡೆ ವರುಣನ ಆರ್ಭಟ ಶುರುವಾಗಿದೆ. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯೆ ಇದೆ ಎಂದು ಖಾಸಗಿ ಸಂಸ್ಥೆಯೊಂದು ತಿಳಿಸಿದೆ.

    ಈ ಹಿನ್ನಲೆಯಲ್ಲಿ ಕೇರಳದ 9 ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ತ್ರಿಶ್ಯೂರು, ಮಲಪ್ಪುರಂ, ಕೋಝಿಕೋಡ್‍ನಲ್ಲಿ ಅತಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಸದ್ಯ ಕೇರಳದಲ್ಲಿ ನೈರುತ್ಯ ಮುಂಗಾರು ಮಾರುತಗಳು ಪ್ರತಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಚಲಿಸ್ತಿವೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಆದರೆ ಈ ಬಾರಿ ಮಾನ್ಸೂನ್ ಮಾರುತಗಳು ಕೊಂಚ ದುರ್ಬಲವಾಗಿದ್ದು, ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ. ರಾಜ್ಯಕ್ಕೆ ಜೂನ್ 11ರನಂತರ ಬರುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ತಿಳಿಸಿದೆ.

    ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ. ಬೀದರ್ ನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಬ್ರೀಮ್ಸ್ ಮುಂಭಾಗದ ಚಾವಣಿ ಕುಸಿದಿದೆ. ತಡ ರಾತ್ರಿ ಘಟನೆ ನಡೆದಿರುವುದರಿಂದ ಸಾವು ನೋವು ತಪ್ಪಿದೆ.

    ಬಾಗಲಕೋಟೆಯ ಕಲಾದಗಿಯಲ್ಲಿ ಮರವೊಂದು ಮನೆಯ ಮೇಲೆ ಬಿದ್ದಿದೆ. ಕೋಲಾರದಲ್ಲಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಆಗಿದೆ. ಪಪ್ಪಾಯ, ಟೊಮ್ಯಾಟೋ, ಮಾವು ನಾಶವಾಗಿದೆ. ರಾಯಚೂರು ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಹಾಗೂ ಭಾರೀ ಬಿರುಗಾಳಿಗೆ ಬಾಳೆ ಪೈರು ನೆಲಕಚ್ಚಿದೆ. ಮೈಸೂರಿನ ನಂಜನಗೂಡಿನ ಶಿರಮಳ್ಳಿಯಲ್ಲಿ 40 ಎಕರೆ ಬಾಳೆ ತೋಟ ಸಂಪೂರ್ಣವಾಗಿ ನಾಶವಾಗಿದೆ. ಮಳೆ ಹೊಡೆತಕ್ಕೆ ರೈತರು ಕಂಗಾಲಾಗಿದ್ದಾರೆ.

    ದಾವಣಗೆರೆಯಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ವರುಣನ ಓಲೈಸಿಕೊಳ್ಳಲು ಮಕ್ಕಳು ಅರೆ ಬೆತ್ತಲಾಗಿ ವಿಶೇಷ ಪೂಜೆ ನಡೆಸಿದ್ದಾರೆ. ಉಡುಪಿಯ ಕಿದಿಯೂರು ಹೋಟೆಲ್‍ನಲ್ಲಿ ವರುಣನ ಕೃಪೆಗಾಗಿ ಕಪ್ಪೆ ಮದುವೆ ನಡೆಸಲಾಗಿದೆ. ವರ್ಷಾ ಹೆಸರಿನ ವಧು ಕಪ್ಪೆ, ಹಾಗೂ ವರುಣ ಹೆಸರಿನ ವರ ಕಪ್ಪೆಯ ವಿವಾಹ ಅದ್ಧೂರಿಯಾಗಿ ನಡೆದಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಕಪ್ಪೆಗಳ ದಿಬ್ಬಣ ಹೋಯಿತು. ಬಳಿಕ ಮಣಿಪಾಲದ ಮಣ್ಣಪಳ್ಳ ಹಳ್ಳಕ್ಕೆ ಎರಡೂ ಕಪ್ಪೆಗಳನ್ನು ಮಧುಚಂದ್ರಕ್ಕೆ ಬಿಡಲಾಗಿದೆ.

  • ಗುರುವಾಯೂರ್ ದೇವಾಲಯದಲ್ಲಿ ಕಮಲದ ಹೂಗಳಿಂದ ಮೋದಿ ತುಲಾಭಾರ

    ಗುರುವಾಯೂರ್ ದೇವಾಲಯದಲ್ಲಿ ಕಮಲದ ಹೂಗಳಿಂದ ಮೋದಿ ತುಲಾಭಾರ

    ತಿರುವನಂತಪುರಂ: ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್‍ಗೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದು, ಆದಕ್ಕೂ ಮುನ್ನ ಬೆಳಗ್ಗೆ ಕೇರಳದ ಗುರುವಾಯೂರ್  ಸನ್ನಿಧಿಯಲ್ಲಿಯಲ್ಲಿ ತುಲಾಭಾರ ಮಾಡಿಸಿದ್ದಾರೆ.

    ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿನ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿ 5 ಸಾವಿರ ವರ್ಷಗಳ ಇತಿಹಾಸ ಇರುವ ಗುರುವಾಯೂರ್ ಶ್ರೀ ಕೃಷ್ಣನ ದರ್ಶನ ಪಡೆದರು.

    ಬಿಳಿ ಬಣ್ಣದ ಧೋತಿ ಮತ್ತು ಶಲ್ಯ ಧರಿಸಿದ್ದ ಮೋದಿ ಅವರು ಬಿಜೆಪಿಯ ಚಿಹ್ನೆಯಾದ ಕಮಲದ ಹೂಗಳಿಂದ ತುಲಾಭಾರ ಮಾಡಿಸಿಕೊಂಡರು. ಒಂದು ಗಂಟೆಯ ದರ್ಶನದ ನಂತರ ಮೋದಿ ಅವರು, ಕೇರಳದ ಬಿಜೆಪಿ ಸಮಿತಿ ಗುರುವಾಯೂರ್ ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿದರು.

    ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕೇರಳದ ಜನತೆ ಬಿಜೆಪಿಗೆ ಮತಹಾಕದಿದ್ದರೂ ಮೋದಿ ಯಾಕೆ ಕೇರಳಕ್ಕೆ ಬಂದಿದ್ದಾರೆ ಎಂದು ಆಶ್ಚರ್ಯವಾಗಬಹುದು. ಆದರೆ ಕೇರಳ ಬಿಜೆಪಿಗೆ ವೋಟ್ ಮಾಡದೇ ಇದ್ದರೂ ನನ್ನ ಕ್ಷೇತ್ರ ವಾರಣಾಸಿಯಂತೆ ಈ ರಾಜ್ಯವೂ ನನಗೆ ಇಷ್ಟ. ಚುನಾವಣೆ ಮತ್ತು ಪ್ರಜಾಪ್ರಭುತ್ವದ ಆಚರಣೆಗಳು ಬೇರೆ ಬೇರೆ. ಇದನ್ನು ನಾವು ಗೌರವಿಸಬೇಕು ಎಂದು ಹೇಳಿದರು.

    ಕೇರಳದಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿಲ್ಲ. ಆದರೆ ಮೋದಿ ಅಲ್ಲಿನ ಜನರಿಗೆ ಧನ್ಯವಾದ ತಿಳಿಸಲು ಹೋಗಿದ್ದು ಯಾಕೆ. ಮೋದಿ ತಲೆಯಲ್ಲಿ ಏನಿದೆ ಎಂದು ಕೆಲ ರಾಜಕೀಯ ಚಿಂತಕರು ಪ್ರಶ್ನೆ ಮಾಡುತ್ತಿರಬಹುದು. ಆದರೆ ಇದು ನಮ್ಮ ಸಂಸ್ಕೃತಿ ಇದು ನಮ್ಮ ಚಿಂತನೆ. ಈ ಕಾರಣಕ್ಕೆ ನಾನು ಕೇರಳಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

    ಶುಕ್ರವಾರ ರಾತ್ರಿ ಕೇರಳಕ್ಕೆ ಬಂದಿದ್ದ ಮೋದಿ ಅವರು ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇರಳದಲ್ಲಿ ಖಾತೆ ತೆರೆಯಲು ವಿಫಲವಾಗಿತ್ತು. ಕೇರಳದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ 16 ಕ್ಷೇತ್ರಗಳ ಪೈಕಿ 15ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 20 ಕ್ಷೇತ್ರಗಳ ಪೈಕಿ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಕಾರಿನ ಮೇಲೆ ಬಿದ್ದ ಮೆಟ್ರೋ ಕಾಮಗಾರಿಯ ಕಾಂಕ್ರಿಟ್- ಅಪಾಯದಿಂದ ನಟಿ ಪಾರು

    ಕಾರಿನ ಮೇಲೆ ಬಿದ್ದ ಮೆಟ್ರೋ ಕಾಮಗಾರಿಯ ಕಾಂಕ್ರಿಟ್- ಅಪಾಯದಿಂದ ನಟಿ ಪಾರು

    ತಿರುವನಂತಪುರ: ಮಲಯಾಳಂ ನಟಿ ಪ್ರಯಾಣ ಮಾಡುತ್ತಿದ್ದ ಕಾರಿನ ಮೇಲೆ ಕಾಮಗಾರಿಯ ಕಾಂಕ್ರಿಟ್ ಬಿದ್ದು ಅವಘಡ ಸಂಭವಿಸಿದೆ. ಆದರೆ ಅದೃಷ್ಟವಶಾತ್ ನಟಿ ಅಪಾಯದಿಂದ ಪಾರಾಗಿದ್ದಾರೆ.

    ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಮಲಯಾಳಂ ನಟಿ ಅರ್ಚನಾ ಕವಿ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ನಟಿ ತಮ್ಮ ಟ್ವಿಟ್ಟರ್ ನಲ್ಲಿ ಕಾರಿನ ಫೋಟೋಗಳನ್ನ ಪೋಸ್ಟ್ ಮಾಡಿ ಮೆಟ್ರೋ ಅಧಿಕಾರಿಗಳಿಗೆ ಮತ್ತು ಕೊಚ್ಚಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

    “ನಾವು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದೇವೆ. ಕಾರಿನಲ್ಲಿ ಏರ್ ಪೋರ್ಟ್ ಗೆ ಹೋಗುತ್ತಿದ್ದ ವೇಳೆ ಕಾರಿನ ಮೇಲೆ ಮೆಟ್ರೋ ಕಾಮಗಾರಿಯ ಕಾಂಕ್ರಿಟ್ ಬಿದ್ದವು. ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮೆಟ್ರೋ ಅಧಿಕಾರಿಗಳು ಮತ್ತು ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು. ಕಾರಿಗೆ ಡ್ಯಾಮೇಜ್ ಆಗಿದೆ. ಹೀಗಾಗಿ ಕಾರಿನ ಮಾಲೀಕರಿಗೆ ಪರಿಹಾರ ನೀಡಬೇಕು. ಮುಂದಿನ ದಿನದಲ್ಲಿ ಈ ರೀತಿ ಅವಘಡ ಸಂಭವಿಸಿದಂತೆ ಜಾಗೃತಿವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

    ನಟಿ ಅರ್ಚನಾ ಕವಿ ಟ್ವೀಟ್‍ಗೆ ಮೆಟ್ರೋ ಅಧಿಕಾರಿಗಳು ‘ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಕಾರು ಚಾಲಕನ ಜೊತೆ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡ ಸಂಭವಿಸದಂತೆ ಸುರಕ್ಷಿತವಾಗಿ ಕ್ರಮ ಕೈಗೊಳ್ಳುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಟಿ ಅರ್ಚನಾ ಕವಿ ‘ಹನಿ ಬಿ’, ‘ಪಟ್ಟಂ ಪೋಲೆ, ‘ನಾಡೋಡಿಮನಂ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ತಮಿಳಿನ ‘ಅರವಾನ್’, ‘ಜ್ಞಾನ ಕಿರುಕ್ಕುನ್’ ಅಂತಹ ಚಿತ್ರದಲ್ಲೂ ಅಭಿನಯಿಸಿದ್ದಾರೆ.

  • ಕೇರಳಕ್ಕೆ ಇಂದು ಮುಂಗಾರು ಪ್ರವೇಶ, 4 ಜಿಲ್ಲೆಗಳಲ್ಲಿ ಕಟ್ಟೆಚ್ಚರ – ರಾಜ್ಯದಲ್ಲೂ ಬಿರುಗಾಳಿ ಮಳೆ

    ಕೇರಳಕ್ಕೆ ಇಂದು ಮುಂಗಾರು ಪ್ರವೇಶ, 4 ಜಿಲ್ಲೆಗಳಲ್ಲಿ ಕಟ್ಟೆಚ್ಚರ – ರಾಜ್ಯದಲ್ಲೂ ಬಿರುಗಾಳಿ ಮಳೆ

    ಬೆಂಗಳೂರು: ಮುಂಗಾರು ಮಳೆ ಇಂದು ಕೇರಳಕ್ಕೆ ಎಂಟ್ರಿ ಕೊಡುತ್ತಿದೆ. ಈ ಹೊತ್ತಲ್ಲೇ ಬೆಂಗಳೂರು ಸೇರಿ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.

    ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ ಕೇರಳದಲ್ಲಿ ಜೂನ್ 10ರವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ ಕೊಲ್ಲಂ, ಅಲಪ್ಪುಜಾ, ಎರ್ನಾಕುಳಂ, ತಿರುವನಂತಪುರಂನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

    ಕೇರಳಕ್ಕೆ ಮುಂಗಾರು ಪ್ರವೇಶದಿಂದ ರಾಜ್ಯದಲ್ಲೂ ಭಾರೀ ಮಳೆಯಾಗಲಿದೆ. ಈಗಾಗಲೇ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರಿನಲ್ಲಿ ಮಳೆ ಆಗುತ್ತಿದೆ. ನಾಳೆ ಹಾಗೂ ನಾಡಿದ್ದು ಕೂಡ ಭಾರೀ ವರ್ಷಧಾರೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

    ಇತ್ತ ಕರ್ನಾಟಕದಲ್ಲಿ ಮುಂಗಾರು ಮಳೆ ಎಂಟ್ರಿಗೆ ಕೆಲ ದಿನಗಳಷ್ಟೇ ಬಾಕಿ ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರ ಪ್ರವಾಸ ಅಧ್ಯಯನಕ್ಕೆ ಇಂದು ಎರಡನೇ ದಿನ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಲಿಂಗಸುಗೂರಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

  • ಕೇರಳ ಬಳಿಕ ರಾಜ್ಯದಲ್ಲೂ ಬಾವಲಿ ಜ್ವರದ ಭೀತಿ- 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ಕೇರಳ ಬಳಿಕ ರಾಜ್ಯದಲ್ಲೂ ಬಾವಲಿ ಜ್ವರದ ಭೀತಿ- 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ಬೆಂಗಳೂರು: ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ (ಬಾವಲಿ ಜ್ವರ)ದ ಸೋಂಕು ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ. ಕೇರಳಕ್ಕೆ ಹೊಂದಿಕೊಂಡಿರುವ 8 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

    ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲಾಗಿದೆ. ಅಲ್ಲದೆ ಪ್ರತಿದಿನ ವೈದ್ಯಕೀಯ ವರದಿ ನೀಡಲು ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಫಾ ಸೋಂಕು ಪತ್ತೆಯಾದಲ್ಲಿ ಅವರನ್ನು ಜನರಿಂದ ಪ್ರತ್ಯೇಕಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ನಿಪಾ ವೈರಸ್ ಎಂದರೇನು?- ಲಕ್ಷಣಗಳೇನು?- ವೈರಸ್ ಹೇಗೆ ಹರಡುತ್ತದೆ?

    ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಬೇಕು. ಜೊತೆಗೆ ತಮಿಳುನಾಡಿನ ಊಟಿ, ನೀಲಗಿರಿ, ಕನ್ಯಾಕುಮಾರಿ, ಕೊಯಮುತ್ತೂರು, ದಿಂಡಿಗಲ್, ತಿರುವನ್ವೇಲಿ, ತೇಣಿಯಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಕೇರಳಕ್ಕೆ ತೆರಳುವವರಿಗೆ ಮಾಸ್ಕ್ ಧರಿಸಿ ತೆರಳಲು ಸೂಚಿಸಲಾಗಿದೆ.

    ಒಟ್ಟಿನಲ್ಲಿ ಮತ್ತೆ ನಿಫಾ ವೈರಸ್ ಭೀತಿ ಸೃಷ್ಟಿಸಿದ್ದು, ಎರ್ನಾಕುಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಲೇಜು ವಿದ್ಯಾರ್ಥಿಯಲ್ಲಿ ಈ ವೈರಸ್ ಪತ್ತೆಯಾಗಿದೆ. ಹಾಗಾಗಿ ರಾಜ್ಯದ ಗಡಿಭಾಗದಲ್ಲಿ ಭಾರೀ ನಿಗಾ ವಹಿಸಲಾಗಿದೆ.

  • ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ ವೈರಸ್

    ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ ವೈರಸ್

    ತಿರುವನಂತಪುರಂ: ಮಲೇಷ್ಯಾ, ಸಿಂಗಾಪುರಗಳಲ್ಲಿ ಆತಂಕ ಮೂಡಿಸಿದ್ದ ನಿಫಾ ವೈರಸ್ ಈಗ ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಭೀತಿ ಹುಟ್ಟಿಸಿದೆ.

    ಎರ್ನಾಕುಲಂನ 23 ವರ್ಷದ ಯುವಕನ ರಕ್ತದಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 10 ದಿನದಿಂದ ಜ್ವರದಿಂದ ಬಳಲುತ್ತಿದ್ದ ಯುವಕನ್ನು ಮೇ 30ರಂದು ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುಣೆಯ ರಾಷ್ಟ್ರೀಯ ವೈರಾಣು ಪ್ರಯೋಗಾಲಯದಿಂದ ಯುವಕನ ರಕ್ತದ ಮಾದರಿಯ ಅಂತಿಮ ವರದಿ ಲಭ್ಯವಾಗಿದ್ದು, ನಿಫಾ ಸೋಂಕು ತಗುಲಿರುವುದನ್ನು ಖಚಿತಪಡಿಸಿದೆ. ಮೂಲಗಳ ಪ್ರಕಾರ 86 ಮಂದಿಯ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಫಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ಬಾವಲಿಗಳಿಂದ ಈ ಸೋಂಕು ಹರಡುತ್ತಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ನಿಫಾ ವೈರಾಣು, ತೀವ್ರ ಉಸಿರಾಟ ತೊಂದರೆ ಸೇರಿದಂತೆ ಮೆದುಳಿನ ಉರಿಯೂತದಂಥ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ.

    ನಿಫಾ ಸೋಂಕು ತಡೆಯಲು ಕೇರಳ ರಾಜ್ಯಕ್ಕೆ ಬೇಕಾಗುವ ಎಲ್ಲ ರೀತಿಯ ನೆರವನ್ನು ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

    ಕೇರಳದಲ್ಲಿ ಕಳೆದ ವರ್ಷವೂ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಕೋಜಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಯಲ್ಲಿ ಒಟ್ಟು 17 ಜನರು ಜೊತೆ ಚಿಕಿತ್ಸೆ ನೀಡಿದ್ದ ನರ್ಸ್ ಪ್ರಾಣ ಕಳೆದುಕೊಂಡಿದ್ದಳು.

    ನಿಫಾ ವೈರಸ್ ಎಂದರೇನು?
    1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಫಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಫಾ ವೈರಸ್ ಎಂದು ಕರೆಯುತ್ತಾರೆ. ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಫಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

  • 2 ವರ್ಷಗಳಿಂದ 19 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಮೌಲ್ವಿ ಅರೆಸ್ಟ್

    2 ವರ್ಷಗಳಿಂದ 19 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಮೌಲ್ವಿ ಅರೆಸ್ಟ್

    ತಿರುವನಂತಪುರಂ: ಮೌಲ್ವಿಯೊಬ್ಬ 19 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಅಲುವಾ ಜಿಲ್ಲೆಯ ಯುಸುಫ್ (63) ಬಂಧಿತ ಮೌಲ್ವಿ. ಯುಸುಫ್ ಕೊಟ್ಟಾಯಂ ಜಿಲ್ಲೆಯ ಮಸೀದಿಯೊಂದರಲ್ಲಿ ಶಿಕ್ಷಕನಾಗಿದ್ದ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಲೇ ಬಂದಿದ್ದ.

    ಇಂತಹ ಪ್ರಕರಣಗಳಲ್ಲಿ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕು ಎಂದು ಇಸ್ಲಾಮಿಕ್ ನಿಯಮ ತಿಳಿಸುತ್ತದೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕನೆ ಇಂತಹ ಹೀನ ಕೃತ್ಯ ಎಸಗಿದ್ದು ಅಮಾನವೀಯ. ಆರೋಪಿಕ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅನಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷೆ ಶೈಸ್ತಾ ಅಂಬರ್ ಹೇಳಿದ್ದಾರೆ.

    ಯುಸುಫ್ ನಿರಂತರ ಪ್ರಾರ್ಥನೆ ಹಾಗೂ ಭಾಷಣದ ಮೂಲಕ ಸ್ಥಳೀಯ ಜನತೆಯ ವಿಶ್ವಾಸ ಗಳಿಸಿದ್ದ. ಅಷ್ಟೇ ಅಲ್ಲದೆ ಮಸೀದಿಯ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿ, ಪ್ರತ್ಯೇಕ ರೂಂ ಪಡೆದಿದ್ದ. ಅಲ್ಲಿಯೇ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ. ಆರೋಪಿ ಯುಸುಫ್‍ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  • ಬಿಜೆಪಿ ತನ್ನ ‘ಉತ್ಪನ್ನ’ವನ್ನು ಚೆನ್ನಾಗಿ ಮಾರ್ಕೆಟ್ ಮಾಡಿದ್ದರಿಂದ ನಮಗೆ ಸೋಲು- ತರೂರ್

    ಬಿಜೆಪಿ ತನ್ನ ‘ಉತ್ಪನ್ನ’ವನ್ನು ಚೆನ್ನಾಗಿ ಮಾರ್ಕೆಟ್ ಮಾಡಿದ್ದರಿಂದ ನಮಗೆ ಸೋಲು- ತರೂರ್

    ತಿರುವನಂತಪುರಂ: ಬಿಜೆಪಿ ತನ್ನ ಪ್ರೊಡಕ್ಟ್ ನರೇಂದ್ರ ಮೋದಿಯನ್ನು ಚೆನ್ನಾಗಿ ಮಾರ್ಕೆಟ್ ಮಾಡಿದ್ದರಿಂದ ಕಾಂಗ್ರೆಸ್ಸಿಗೆ ಸೋಲಾಗಿದೆ ಎಂದು ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

    ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ಸಾವಿರಾರು ಸಾಮಾಜಿಕ ಜಾಲತಾಣ ಸೈನಿಕರು, ಮಾಧ್ಯಮಗಳು ಕ್ಯಾಮೆರಾಮನ್‍ಗಳ ಪ್ರಚಾರದಿಂದ ಮೋದಿಗೆ ಈ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ ಎಂದು ತಿಳಿಸಿದರು.

    ಸರ್ಕಾರದ ಯಾವುದೇ ಯೋಜನೆಯನ್ನು ಚೆನ್ನಾಗಿ ಮಾರ್ಕೆಟ್ ಮಾಡುವ ಕಲೆ ಬಿಜೆಪಿಯಲ್ಲಿದೆ. ಅದನ್ನು ಅವರು ಈ ಚುನಾವಣೆಯಲ್ಲೂ ಬಳಸಿಕೊಂಡರು. ನಾವು ವಾಸ್ತವಕ್ಕೆ ಹತ್ತಿರುವ ಇರುವ ಯೋಜನೆಯನ್ನು ತಂದಿದ್ದರೂ ನಮ್ಮ ಪ್ರಚಾರ ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲದೇ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಜನರ ಮನಸ್ಥಿತಿ ಏನು ಎನ್ನುವುದನ್ನು ಅರಿತುಕೊಳ್ಳಲು ವಿಫಲರಾದೆವು ಎಂದು ಕಾರಣ ನೀಡಿದರು.

    ಕಾಂಗ್ರೆಸ್ ಪಕ್ಷದ ಹಿನ್ನಡೆ ಕುರಿತು ಕೇಳಲಾದ ಪ್ರಶ್ನೆಗೆ, 45 ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ, ನೋಟು ನಿಷೇಧದಂತಹ ಗಂಭೀರ ವಿಚಾರಗಳಿದ್ದರೂ ನಾವು ಸೋತಿದ್ದು ಯಾಕೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದರ ಜೊತೆಯಲ್ಲಿ ನಮ್ಮ ಪಕ್ಷದ ಒಳಗಡೆಯೇ ಹಲವು ಸಮಸ್ಯೆಗಳಿದ್ದು ಅವುಗಳನ್ನು ನಾವು ಪರಿಹರಿಸಿಕೊಳ್ಳಬೇಕು. ನಮ್ಮ ಪ್ರಣಾಳಿಕೆಯಲ್ಲಿ ನ್ಯಾಯ ಯೋಜನೆಯನ್ನು ಪ್ರಕಟಿಸಿದ್ದೆವು. ಇದೊಂದು ಕ್ರಾಂತಿಕಾರಕ ಯೋಜನೆಯಾಗಿದ್ದು ಇದನ್ನು ಜನರಿಗೆ ತಲುಪಿಸಲು ನಾವು ವಿಫಲರಾದೆವು ಎಂದು ತಿಳಿಸಿದರು.

    ಈ ಚುನಾವಣೆಯ ಹಿನ್ನಡೆ ಕೇವಲ ತಾತ್ಕಾಲಿಕ. ಪಂಜಾಬ್ ಮತ್ತು ಕೇರಳದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ನೀಡಬಹುದಾದ ಏಕೈಕ ರಾಷ್ಟ್ರೀಯ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಚುನಾವಣೆಯ ಸೋಲಿನ ಹೊಣೆಯನ್ನು ರಾಹುಲ್ ಗಾಂಧಿ ಹೊತ್ತಿದ್ದರೂ ನಾವು ಸಹ ಹೊಣೆಗಾರರು ಎಂದು ತಿಳಿಸಿದರು.

    ಬಂಗಾಳ ಮತ್ತು ಒಡಿಶಾದಲ್ಲಿ ಜಯಗಳಿಸಿದ ಬಳಿಕ ಮುಂದಿನ ನಮ್ಮ ಗುರಿ ಕೇರಳ ಎಂದು ಬಿಜೆಪಿ ಹೇಳಿದೆ. ಬಿಜೆಪಿ ಈ ಗುರಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ, ಕೇರಳದಲ್ಲಿ ಬಿಜೆಪಿಯ ಈ ಕೋಮುವಾದದ ತಂತ್ರ ನಡೆಯುವುದಿಲ್ಲ ಎನ್ನುವ ವಿಶ್ವಾಸ ನನಗಿದೆ. ಆರ್ಥಿಕ ಶಕ್ತಿ, ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರೂ ನಾನು ಪ್ರತಿನಿಧಿಸುವ ತಿರುವನಂತಪುರಂದಲ್ಲಿ ಸ್ವಲ್ಪ ಮತವನ್ನು ಬಿಜೆಪಿ ಏರಿಸಿಕೊಂಡಿದೆ. ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಮೂರನೇ ಸ್ಥಾನ ಪಡೆದಿದ್ದಾರೆ. ಕಾಸ್ಮೋಪಾಲಿಟನ್ ರಾಜ್ಯ ಮತ್ತು ಸಾಕ್ಷರರ ಸಂಖ್ಯೆ ಜಾಸ್ತಿ ಇರುವ ಕಾರಣ ಕೇರಳದಲ್ಲಿ ಬಿಜೆಪಿಯ ತಂತ್ರಗಳು ಕೆಲಸ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

  • ಮಗಳ ಮದುವೆಯಲ್ಲಿ ಹಾಡುತ್ತಲೇ ಕುಸಿದು ಬಿದ್ದು ಜೀವಬಿಟ್ಟ ತಂದೆ – ವಿಡಿಯೋ

    ಮಗಳ ಮದುವೆಯಲ್ಲಿ ಹಾಡುತ್ತಲೇ ಕುಸಿದು ಬಿದ್ದು ಜೀವಬಿಟ್ಟ ತಂದೆ – ವಿಡಿಯೋ

    ತಿರುವನಂತಪುರ: ಸಂಭ್ರಮದಿಂದ ಕೂಡಿದ್ದ ಮದುವೆ ಮನೆಯಲ್ಲಿ ಮಧುವಿನ ತಂದೆ ಹಾಡುತ್ತಲೇ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

    ಪಿ ವಿಷ್ಣು ಪ್ರಸಾದ್ (55) ಸಾವನ್ನಪ್ಪಿದ್ದು, ಅವರು ತಿರುವನಂತಪುರಂನಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

    ವಿಷ್ಣು ಪ್ರಸಾದ್ ಅವರ ಕಿರಿಯ ಮಗಳ ವಿವಾಹ ಕಾರ್ಯಕ್ರಮ ಶನಿವಾರ ನಡೆಯುತಿತ್ತು. ಈ ವೇಳೆ ಸಂಭ್ರಮದಿಂದಲೇ ವೇದಿಕೆ ಮೇಲೆ ತೆರಳಿದ್ದ ಪ್ರಸಾದ್ ಅವರು ಹಾಡು ಹಾಡುತ್ತಿದ್ದರು. ಆದರೆ ಕ್ಷಣಮಾತ್ರದಲ್ಲಿ ಇದಕ್ಕಿದ್ದಂತೆ ವೇದಿಕೆ ಮೇಲೆ ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ವಿಫಲವಾಗಿತ್ತು.

    ಕೊಲ್ಲಂನಲ್ಲಿ ಶನಿವಾರ ಮದುವೆ ಕಾರ್ಯಕ್ರಮದ ವೇಳೆ ಘಟನೆ ನಡೆದಿದ್ದು, ಮದುವೆಯಲ್ಲಿ ಮಗಳಿಗಾಗಿಯೇ ಮಲೆಯಾಳಂ ಹಾಡೊಂದನ್ನು ಆರ್ಪಿಸಿ ಹಾಡುತ್ತಿದ್ದರು. ಪೊಲೀಸರು ನೀಡಿರುವ ಮಾಹಿತಿ ಅನ್ವಯ ಪ್ರಸಾದ್ ಅವರು ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದರು.

    ತಂದೆಯ ಸಾವಿನ ಸುದ್ದಿಯನ್ನ ಮಗಳಿಗೆ ತಿಳಿಸಿದರೆ ಮದುವೆ ಕಾರ್ಯಕ್ರಮ ಎಲ್ಲಿ ನಿಂತು ಹೋಗುತ್ತದೆ ಎಂದು ಭಯಪಟ್ಟ ಕುಟುಂಬಸ್ಥರು ಮಗಳಿಗೆ ತಿಳಿಸದೆಯೇ ಮದುವೆ ಕಾರ್ಯಕ್ರಮ ನಡೆಸಿದ್ದಾರೆ. ಮಗಳು ತಂದೆಯ ಆರೋಗ್ಯ ಬಗ್ಗೆ ವಿಚಾರಿಸಿದ್ದು, ಈ ವೇಳೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರವೇ ಮದುವೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿ ಹೇಳಿದ್ದಾರೆ. ಆ ಮೂಲಕ ವಿಷ್ಣುಪ್ರಸಾದ್ ಅವರ ಆಸೆಯನ್ನ ಪೂರ್ತಿಗೊಳಿಸಿದ್ದಾರೆ.

    ತಂದೆಯ ಹೆಸರು ಹೊಂದಿರುವ ವರನನ್ನೇ ವಿಷ್ಣು ಪ್ರಸಾದ್ ಅವರ ಪುತ್ರಿ ವಿವಾಹವಾಗಿದ್ದು, ಭಾನುವಾರ ಮದುವೆ ಕಾರ್ಯಕ್ರಮ ನಡೆದ ಬಳಿಕ ಸೋಮವಾರ ವಿಷ್ಣುಪ್ರಸಾದ್ ಅವರ ಅಂತಿಮ ಸಂಸ್ಕಾರ ನಡೆಸಲಾಗಿದೆ. ವಿಷ್ಣು ಪ್ರಸಾದ್ ಅವರು ತಿರುವನಂತಪುರಂನ ಕರಮನ ಪೊಲೀಸ್ ಠಾಣೆಯಲ್ಲಿ ಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ನಿವೃತ್ತಿಗೆ ಒಂದು ವರ್ಷ ಮಾತ್ರ ಬಾಕಿ ಇತ್ತು ಎಂಬ ಮಾಹಿತಿ ಲಭಿಸಿದೆ. ಪೊಲೀಸ್ ಅಧಿಕಾರಿಯ ಸಾವಿಗೆ ಕೇರಳ ಸಿಎಂ ಪಿಣಾರಾಯಿ ವಿಜಯನ್ ಅವರು ಕೂಡ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.