Tag: kerala

  • ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಳಿ – ಓರ್ವನ ಬರ್ಬರ ಹತ್ಯೆ

    ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಳಿ – ಓರ್ವನ ಬರ್ಬರ ಹತ್ಯೆ

    ತಿರುವನಂತಪುರಂ: ಕೇರಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ತಡ ರಾತ್ರಿ ದಾಳಿ ನಡೆದಿದ್ದು, ಓರ್ವ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಈ ಘಟನೆ ತ್ರಿಶ್ಯೂರಿನ ಚವಕ್ಕಾಡ್ ಎಂಬ ಪಟ್ಟಣದಲ್ಲಿ ನಡೆದಿದ್ದು, ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತನನ್ನು 43 ವರ್ಷದ ನೌಶಾದ್ ಎಂದು ಗುರುತಿಸಲಾಗಿದೆ. ನೌಶಾದ್ ಮತ್ತು ಇನ್ನಿಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ.

    ತಡರಾತ್ರಿ ಬೈಕಿನಲ್ಲಿ ಬಂದ 8 ಜನ ದುಷ್ಕರ್ಮಿಗಳು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಹಲವಾರು ಬಾರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ, ನೌಶಾದ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ದಾಳಿಯ ಹಿಂದೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

  • ವಧುವಿನ ವೇಷದಲ್ಲಿ ನೋಡಿ 15 ಲಕ್ಷ ಕಳ್ಳೊಂಡ

    ವಧುವಿನ ವೇಷದಲ್ಲಿ ನೋಡಿ 15 ಲಕ್ಷ ಕಳ್ಳೊಂಡ

    ತಿರುವಂತನಪುರಂ: ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ವಧುವಿನ ವೇಷದಲ್ಲಿ ಪೋಸ್ ಕೊಟ್ಟು ನರ್ಸ್ ಒಬ್ಬಳು ವ್ಯಕ್ತಿಗೆ ಬರೋಬ್ಬರಿ 15 ಲಕ್ಷ ಮೋಸ ಮಾಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

    ಇದೀಗ ಕೊಚ್ಚಿ ಪೊಲೀಸರು ಸೇನೆಯಲ್ಲಿ ಉದ್ಯೋಗದಲ್ಲಿದ್ದ ನರ್ಸ್ ಸ್ಮಿತಾ(43)ಳನ್ನು ಬಂಧಿಸಿದ್ದಾರೆ. ಈಕೆ ತಿರುವನಂತಪುರಂನ ವೆಟ್ಟಮುಕ್ಕುವಿನ ಸೌಂದರ್ಯ ಹೌಸ್‍ನಲ್ಲಿ ವಾಸಿಸುತ್ತಿದ್ದಳು. ಆರೋಪಿ ಸ್ಮಿತಾ ಪ್ಯಾಂಗೋಡ್ ಸೇನಾ ಕ್ಯಾಂಪ್‍ನ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆಯ ವಿರುದ್ಧ ವ್ಯಕ್ತಿಯೊಬ್ಬ 15 ಲಕ್ಷ ರೂ. ವಂಚನೆ ಮಾಡಿದ್ದಾಳೆ ಎಂದು ದೂರ ದಾಖಲಿಸಿದ್ದ. ಆ ವ್ಯಕ್ತಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಸ್ಮಿತಾಳನ್ನು ಬಂಧಿಸಿದ್ದಾರೆ.

    ವಂಚಿಸಿದ್ದು ಹೇಗೆ?
    ಆರೋಪಿ ಸ್ಮಿತಾ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ ನಕಲಿ ಖಾತೆ ತೆರೆದು ನಾನು ಸೂಕ್ತ ವರನನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡು ವಧುವಿನ ವೇಷ ಹಾಕಿಕೊಂಡು ಪ್ರೊಫೈಲ್ ಕ್ರಿಯೇಟ್ ಮಾಡಿದ್ದಳು. ಇದನ್ನು ನೋಡಿದ ವ್ಯಕ್ತಿ ಆಕೆಯ ಜೊತೆ ಚಾಟಿಂಗ್ ಆರಂಭಿಸಿದ್ದಾನೆ. ಈ ವೇಳೆ ಸ್ಮಿತಾ ನಾನು ಮಲೆಯಾಳಿ ಕುಟುಂಬದ ಹುಡುಗಿ, ನಾವು ಮುಂಬೈನಲ್ಲಿ ನೆಲೆಸಿದ್ದೇವೆ. ನಾನು ಎಂಬಿಬಿಎಸ್ ಮುಗಿಸಿ ನಂತರ ಕೋಲ್ಕತ್ತಾದಲ್ಲಿ  ವೈದ್ಯಕೀಯ ಶಿಕ್ಷಣ (ಎಂಡಿ) ವ್ಯಾಸಂಗ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

    ದಿನ ಕಳೆದಂತೆ ಇಬ್ಬರು ಫೋನ್ ನಂಬರ್ ತೆಗೆದುಕೊಂಡು ಮಾತನಾಡಲು ಪ್ರಾರಂಭಿಸಿದ್ದರು. ಸ್ವಲ್ಪ ದಿನದ ನಂತರ ಆಕೆ ತನ್ನ ಪೋಷಕರ ಫೋಟೋಗಳನ್ನು ಕಳುಹಿಸಿ ನಮ್ಮಿಬ್ಬರ ಮದುವೆಯ ಬಗ್ಗೆ ಮಾತನಾಡಿ ಒಪ್ಪಿಸಿ ಎಂದು ಹೇಳಿಕೊಂಡಿದ್ದಾಳೆ. ಇದರಿಂದ ವ್ಯಕ್ತಿ ಆಕೆಯನ್ನು ನಂಬಿದ್ದಾನೆ. ವ್ಯಕ್ತಿಯ ನಂಬಿಕೆ ಗಳಿಸಿದ ನಂತರ ತನಗೆ ತುರ್ತು ಅಗತ್ಯವಿರುವುದರಿಂದ 15 ಲಕ್ಷ ಹಣ ಕೊಡುವಂತೆ ಕೇಳಿದ್ದಾಳೆ.

    ವ್ಯಕ್ತಿ ಹಣ ಕೊಟ್ಟ ಬಳಿಕ ನಿಧಾನವಾಗಿ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ. ಕೆಲವು ದಿನಗಳ ನಂತರ ನನಗೆ ಕ್ಯಾನ್ಸರ್ ಇದೆ. ಹೀಗಾಗಿ ನಾವಿಬ್ಬರು ಮದುವೆಯಾಗಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ವ್ಯಕ್ತಿ ತಾನು ಹುಡುಗಿಗೆ ಹಣ ನೀಡಿ ಮೋಸ ಹೋಗಿರುವುದನ್ನು ಮನೆಯಲ್ಲಿ ಹೇಳದೆ ಮುಚ್ಚಿಟ್ಟಿದ್ದ.

    ಕೆಲವು ದಿನಗಳ ನಂತರ ಮ್ಯಾಟ್ರಿಮೋನಿ ಸೈಟ್‍ನಲ್ಲಿ ಅಂಥಹದ್ದೇ ಮತ್ತೊಂದು ಪ್ರೊಫೈಲ್ ನೋಡಿದಾಗ ಅನುಮಾನಗೊಂಡು ಮತ್ತೆ ಆಕೆಯ ಜೊತೆ ಚಾಟಿಂಗ್ ಮಾಡಿದ್ದಾನೆ. ಆಗ ಮೋಸ ಮಾಡಿದ್ದ ಮಹಿಳೆಯ ರೀತಿಯಲ್ಲಿ ಆಕೆಯೂ ಮಾತನಾಡುತ್ತಿದ್ದಳು. ಆಗ ಅನುಮಾನಗೊಂಡು ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ.

    ದೂರು ದಾಖಲಿಸಿಕೊಂಡ ಪೊಲೀಸರು ಆಕೆಯ ವಿವರನ್ನು ತೆಗೆದುಕೊಂಡು ಪರಿಶೀಲನೆ ಮಾಡಿದ್ದಾರೆ. ಆಗ ನರ್ಸ್ ಸಿಕ್ಕಿಹಾಕಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ಅನೇಕರು ಭಾಗಿಯಾಗಿರುವುದಾಗಿ ಪೊಲೀಸರು ಶಂಕಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ದಲಿತ ಶಾಸಕಿಯಿಂದ ಪ್ರತಿಭಟನೆ- ಸೆಗಣಿ ಸಾರಿ ಸ್ಥಳ ಶುದ್ಧಿಗೊಳಿಸಿದ ಕಾಂಗ್ರೆಸ್

    ದಲಿತ ಶಾಸಕಿಯಿಂದ ಪ್ರತಿಭಟನೆ- ಸೆಗಣಿ ಸಾರಿ ಸ್ಥಳ ಶುದ್ಧಿಗೊಳಿಸಿದ ಕಾಂಗ್ರೆಸ್

    ತಿರುವನಂತಪುರಂ: ದಲಿತ ಶಾಸಕಿರೊಬ್ಬರು ಪಿಡಬ್ಲ್ಯುಡಿ ಕಚೇರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂದು ಅಲ್ಲಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯನ್ನು ಸೆಗಣಿ ಸಾರುವ ಮೂಲಕ ಶುದ್ಧೀಕರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಈ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ. ನಾಟಿಕಾ ಕ್ಷೇತ್ರದ ಸಿಪಿಐ ಪಕ್ಷದ ದಲಿತ ಶಾಸಕಿ ಗೀತಾ ಗೋಪಿ ಅವರು ಪ್ರತಿಭಟನೆ ಮಾಡಿದ್ದಾರೆ. ಈ ಸ್ಥಳವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ದನದ ಸೆಗಣಿಯ ಮೂಲಕ ಶುದ್ಧೀಕರಣ ಮಾಡಿದ್ದಾರೆ. ಈ ಮೂಲಕ ಜಾತಿ ತಾರತಮ್ಯ ಮೆರೆದಿದ್ದಾರೆ ಎಂದು ದೂರು ನೀಡಲಾಗಿದೆ.

    ಗೀತಾ ಗೋಪಿ ಅವರು ತಮ್ಮ ಕ್ಷೇತ್ರದಲ್ಲಿ ರಸ್ತೆಗಳು ಸರಿ ಇಲ್ಲ ತುಂಬ ಕಳಪೆ ಕಾಮಗಾರಿ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ನಂತರ ಗೀತಾ ಅವರು ಪ್ರತಿಭಟನೆ ನಿಲ್ಲಿಸಿದರು. ಈ ವೇಳೆ ಅವರು ದಲಿತ ಮಹಿಳೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಅವರು ಕುಳಿತ ಜಾಗಕ್ಕೆ ಸೆಗಣಿ ಸಾರಿ ಸ್ವಚ್ಛ ಮಾಡುವ ಮೂಲಕ ಜಾತಿ ನಿಂದನೆ ಮಾಡಿದ್ದಾರೆ.

    ಗೀತಾ ಗೋಪಿ ಅವರ ವಿರುದ್ಧ ಪ್ರತಿಭಟನೆ ಮಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಗೀತಾ ಗೋಪಿ ಅವರು ಜನರಿಗೆ ಮೋಸ ಮಾಡಲು ಈ ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ ಎಂದು ಆರೋಪ ಮಾಡಿದರು. ನಂತರ ಅವರು ಕುಳಿತು ಪ್ರತಿಭಟನೆ ಮಾಡಿದ ಸ್ಥಳವನ್ನು ನೀರು ಮತ್ತು ದನದ ಸಗಣಿ ಚುಮುಕಿಸಿ ಶುದ್ಧೀಕರಣ ಮಾಡಿದ್ದಾರೆ.

    ಈ ವಿಚಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗಮನಕ್ಕೆ ಗೀತಾ ಗೋಪಿ ಅವರು ತಂದಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರ ಈ ಕೃತ್ಯವನ್ನು ನಾವು ಒಪ್ಪುವುದಿಲ್ಲ ಎಂದು ಖಂಡಿಸಿದ್ದಾರೆ.

    ಶಾಸಕಿ ಗೀತಾ ಗೋಪಿ ಅವರು ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಸ್‍ಸಿ/ಎಸ್‍ಟಿ ಜಾತಿ ನಿಂದನೆ ಕಾಯ್ದೆಯ ಆಡಿಯಲ್ಲಿ ಚೆರ್ಪುರ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

  • ನಾಪತ್ತೆ ದೂರು ದಾಖಲಾಗಿ 1 ತಿಂಗಳ ನಂತ್ರ ಮಹಿಳೆಯ ಶವ ಪತ್ತೆ

    ನಾಪತ್ತೆ ದೂರು ದಾಖಲಾಗಿ 1 ತಿಂಗಳ ನಂತ್ರ ಮಹಿಳೆಯ ಶವ ಪತ್ತೆ

    ತಿರುವಂತನಪುರಂ: ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ 30 ವರ್ಷದ ಮಹಿಳೆಯ ಮೃತದೇಹ ತಿರುವನಂತಪುರದ ಅಂಬೂರಿಯಲ್ಲಿ ಖಾಲಿ ಜಾಗದಲ್ಲಿ ಕೊಲೆ ಮಾಡಿ ಹೂತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ರಾಖಿ ಮೃತ ಮಹಿಳೆ. ಪೊಲೀಸರು ನಿರಂತರವಾಗಿ ಒಂದು ತಿಂಗಳ ಕಾಲ ಕಾರ್ಯಾಚರಣೆ ಮಾಡಿ ಮೃತ ಮಹಿಳೆಯ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿಯ ಮಾಜಿ ಸಹೋದ್ಯೋಗಿ, ಸೇನಾ ವ್ಯಕ್ತಿ ಅಖಿಲ್ ಸೇರಿದಂತೆ ಮೂವರು ಸೇರಿ ಕೊಲೆ ಮಾಡಿದ್ದಾರೆ. ಸದ್ಯಕ್ಕೆ ಪೊಲೀಸರು ಓರ್ವವನ್ನು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.

    ಏನಿದು ಪ್ರಕರಣ?
    ಮೃತ ರಾಖಿ ಕೊಚ್ಚಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಜೂನ್ 21 ರಂದು ತನ್ನ ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು. ನಂತರ ಆಕೆಯಿಂದ ಯಾವುದೇ ಫೋನ್ ಬಂದಿಲ್ಲ, ಮನೆಗೂ ವಾಪಸ್ ಬಂದಿಲ್ಲ. ಕೊನೆಗೆ ರಾಖಿಯ ಪೋಷಕರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಆದರೆ ಒಂದು ತಿಂಗಳ ನಂತರ ಅಂಬೂರಿಯಲ್ಲಿರುವ ಅಖಿಲ್ ಮನೆಯ ಪಕ್ಕದಲ್ಲಿ ಖಾಲಿ ಇರುವ ಜಾಗದಿಂದ ಪೊಲೀಸರು ಮೃತ ದೇಹವನ್ನು ವಶಪಡಿಸಿಕೊಂಡಿದ್ದಾರೆ.

    ಮೃತ ರಾಖಿ ಮತ್ತು ಅಖಿಲ್ ಕೆಲವು ವರ್ಷಗಳ ಹಿಂದೆ ರಿಲೇಷನ್‍ಶಿಪ್‍ನಲ್ಲಿದ್ದರು. ಅಖಿಲ್ ಇಬ್ಬರ ಸಂಬಂಧವನ್ನು ಮುಂದವರಿಸುವುದು ಬೇಡ ಎಂದು ಹೇಳಿದ್ದಾನೆ. ಇದಕ್ಕೆ ರಾಖಿ ಒಪ್ಪಲಿಲ್ಲ. ಅಷ್ಟೇ ಅಲ್ಲದೇ ಆತ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಈ ಕಾರಣದಿಂದಲೇ ರಾಖಿಯನ್ನು ಕೊಲೆ ಮಾಡಲು ಅಖಿಲ್ ಪ್ಲ್ಯಾನ್ ಮಾಡಿಕೊಂಡಿದ್ದನು. ಅಖಿಲ್ ಹೊಸ ಮನೆ ನಿರ್ಮಿಸುತ್ತಿದ್ದು, ರಾಖಿಯನ್ನು ಮನೆ ನೋಡಲು ಕರೆದಿದ್ದನು. ಆಕೆ ಮನೆಗೆ ಬರುವುದಕ್ಕೂ ಮೊದಲೇ ಅಖಿಲ್, ಸ್ನೇಹಿತ ಆದರ್ಶ್ ಮತ್ತು ಸಹೋದರ ರಾಹುಲ್ ಮೂವರು ರಾಖಿಯನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು.

    ಕೊಲೆ:
    ಅದರಂತೆಯೇ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಖಿಲ್‍ನನ್ನು ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೆ ಮೃತ ರಾಖಿ ಇದಕ್ಕೆ ಒಪ್ಪಿಕೊಂಡಿಲ್ಲ. ಕೊನೆಗೆ ರಾಖಿ ಕೂಗಾಟ ಯಾರಿಗೂ ಕೇಳಿಸಬಾರದೆಂದು ವಾಹನದ ಎಕ್ಸಿಲೇಟರ್ ಅಧಿಕ ಮಾಡಿದ್ದಾರೆ. ನಂತರ ಓರ್ವ ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದು, ಅಖಿಲ್ ಮನೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಹೂತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೋಷಕರು ನೀಡಿದ ದೂರಿನ ಅನ್ವಯ ನಾವು ತನಿಖೆ ಶುರು ಮಾಡಿದ್ದೇವು. ಆಗ ಮೃತ ರಾಖಿ ಫೋನ್ ಟ್ರೇಸ್ ಮಾಡಿದೆವು. ಜೊತೆಗೆ ಆರೋಪಿ ಆದರ್ಶ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೃತದೇಹವಿದ್ದ ಸ್ಥಳ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದೇವೆ. ಕೆಲವು ದಿನಗಳ ಹಿಂದೆಯೇ ರಾಖಿಯನ್ನು ಕೊಲೆ ಮಾಡಿರಬಹುದು. ಈ ಸಂಬಂಧ ಅಖಿಲ್‍ನ ಸ್ನೇಹಿತ ಆದರ್ಶ್ ನನ್ನು ಬಂಧಿಸಿದ್ದು, ಇತರ ಇಬ್ಬರು ಆರೋಪಿಗಾಗಿ ಹುಡುಕಾಡುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ಹೇಳಿದರು.

  • ಶಬರಿಮಲೆ ಪ್ರವೇಶಿಸಿದ ಮಹಿಳೆಯರಿಗೆ ಮ್ಯಾಗಜಿನಲ್ಲಿ ವಿಶೇಷ ಗೌರವ- ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    ಶಬರಿಮಲೆ ಪ್ರವೇಶಿಸಿದ ಮಹಿಳೆಯರಿಗೆ ಮ್ಯಾಗಜಿನಲ್ಲಿ ವಿಶೇಷ ಗೌರವ- ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    ತಿರುವನಂತಪುರಂ: ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಶಬರಿಮಲೆ ಪ್ರವೇಶ ಮಾಡಿದ್ದ ಇಬ್ಬರು ಮಹಿಳೆಯರಿಗೆ ಕೇರಳದ ಕಾಲೇಜ್ ಮ್ಯಾಗಜಿನ್‍ವೊಂದು ವಿಶೇಷ ಗೌರವ ಸಲ್ಲಿಸಿ, ಭಾರೀ ಟೀಕೆಗೆ ಗುರಿಯಾಗಿದೆ.

    ಕೋತಮಂಗಲಂನ ಮಾರ್ ಅಥಾನಸಿಸ್ ಎಂಜಿನಿಯರಿಂಗ್ ಕಾಲೇಜು ‘ನವೋದಯದ ನಾಯಕಿಯರು’ ಎಂಬ ಮ್ಯಾಗಜಿನ್ ಪ್ರಕಟ ಮಾಡಿದೆ. ಈ ಮ್ಯಾಗಜಿನ್‍ನಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಗಿದೆ. ಆದರೆ ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಕಾಲೇಜಿನ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.

    ಮಾರ್ ಅಥಾನಸಿಸ್ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಅನೇಕ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಶಬರಿಮಲೆ ದೇವಾಲಯ ಪ್ರವೇಶಿಸಿದ ಮಹಿಳೆಯರಿಗೆ ವಿಶೇಷ ಗೌರವ ನೀಡಿರುವುದು ಖಂಡನೀಯ. ಮ್ಯಾಗಜಿನ್ ಸಂಪಾದಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಹಿಂದೂ ಐಕ್ಯ ವೇದಿಕೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

    ಹಿಂದೂ ಸಂಘಟನೆಗಳು ಪೊಲೀಸ್ ದೂರು ನೀಡಿದ ಬಳಿಕ ಹಾಗೂ ಪ್ರತಿಭಟನೆ ಚುರುಕುಗೊಳಿಸಿದ್ದರಿಂದ ಕಾಲೇಜು ಮಂಡಳಿ ಎಚ್ಚೆತ್ತುಕೊಂಡಿದೆ. ಈ ಮೂಲಕ ‘ನವೋದಯದ ನಾಯಕಿಯರು’ ಮ್ಯಾಗಜಿನ್‍ನ್ನು ಹಿಂಪಡೆಯಲು ನಿರ್ಧರಿಸಿದೆ.

    ಶಬರಿಮಲೆಗೆ ಮಹಿಳೆಯರ ಪ್ರವೇಶ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತ್ತು. ಇದಾದ ಕೆಲವೇ ದಿನಗಳ ನಂತರ ಬಿಂದು ಮತ್ತು ಕನಕದುರ್ಗ ಮೊಟ್ಟ ಮೊದಲ ಬಾರಿಗೆ ದೇವಾಲಯ ಪ್ರವೇಶ ಮಾಡಿದ್ದರು. ಇದಕ್ಕೆ ಶಬರಿಮಲೆ ಭಕ್ತರು, ಅನೇಕ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲದೆ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಲಾಠಿ ಚಾರ್ಜ್ ಕೂಡ ನಡೆದಿತ್ತು.

  • ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ

    ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ

    ಮಂಗಳೂರು: ತೀವ್ರ ಜ್ವರ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೇರಳ ಮೂಲದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಸಿಧ್ರಾತುಲ್ ಮುನ್ತಾಹ (8) ಮತ್ತು ಸೋದರಿ 6 ತಿಂಗಳ ಮಗು ಶಿನಾಜ್ ಮೃತ ಕಂದಮ್ಮಗಳು. ಇವರು ಸಿದ್ದಿಕ್ ಮತ್ತು ನಿಶಾ ದಂಪತಿಯ ಮಕ್ಕಳಾಗಿದ್ದು, ಕಾಸರಗೋಡು ಜಿಲ್ಲೆಯ ಬದಿಯಡ್ಕ ಕನ್ಯಾಪಡಿಯ ನಿವಾಸಿಗಳಾಗಿದ್ದಾರೆ.

    ಇಬ್ಬರು ಮಕ್ಕಳು ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ ಮುನ್ತಾಹ ಮಂಗಳವಾರ ಮೃತಪಟ್ಟಿದ್ದಾನೆ. ಶಿನಾಜ್ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ.

    ಮಕ್ಕಳ ತಾಯಿ ನಿಶಾ ಕೂಡ ಈಗ ಅದೇ ಆಸ್ಪತ್ರೆಯಲ್ಲಿ ಜ್ವರದಿಂದ ದಾಖಲಾಗಿದ್ದಾರೆ ಎಂದು ಕುಟುಂಬ ತಿಳಿಸಿದೆ. ಈ ಪ್ರಕರಣಗಳ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ರಸ್ತೆಯಲ್ಲಿರುವ ತಮ್ಮ ತಾಯಿಯ ಮನೆಯಲ್ಲಿದ್ದಾಗ ಮಕ್ಕಳು ಸೋಂಕಿಗೆ ಒಳಗಾಗಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಜ್ವರಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಜಿಲ್ಲಾ ವೈದ್ಯಕೀಯ ಅಧಿಕಾರಿ ನೇತೃತ್ವದ ವೈದ್ಯರ ತಂಡ ಈ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಹೇಳಿದರು.

  • ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ

    ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ

    ತಿರುವನಂತಪುರಂ: ನೆರೆ ಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪಮೋರಿಯನ್ ನಾಯಿಯೊಂದನ್ನು ಮಾಲೀಕ ಮನೆಯಿಂದ ಹೊರಹಾಕಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

    ಹೌದು, ವಿಚಿತ್ರ ಎನಿಸಿದರು ಇದು ಸತ್ಯ. ಮನುಷ್ಯರು ಅನೈತಿಕ ಸಂಬಂಧ ಹೊಂದಿರುವುದು ಬಯಲಾದರೆ. ಅವರನ್ನು ಕುಟುಂಬಸ್ಥರು ಮನೆಯಿಂದ ಹೊರಹಾಕುವುದು, ಹಲ್ಲೆ ಮಾಡುವ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಆದ್ರೆ ಅನೈತಿಕ ಸಂಬಂಧ ಹೊಂದಿದೆ ಎಂದು ನಾಯಿಯನ್ನು ಮನೆಯಿಂದ ಹೊರಹಾಕಿರುವುದು ಇದೇ ಮೊದಲ ಪ್ರಕರಣ ಎಂದು ವರದಿಯಾಗಿದೆ.

    ಈ ನಾಯಿಗೆ ಸುಮಾರು ಮೂರು ವರ್ಷ ವಯಸ್ಸಾಗಿದ್ದು, ತಿರುವನಂತಪುರದ ಚೆಕಾಯ್ ಮಾರುಕಟ್ಟೆಯಲ್ಲಿ ಅನಾಥವಾಗಿ ಈ ನಾಯಿ ನಿಂತಿತ್ತು. ಈ ವೇಳೆ ಪೀಪಲ್ ಫಾರ್ ಎನಿಮಲ್ಸ್(ಪಿಎಫ್‍ಎ) ಸ್ವಯಂ ಸೇವಕ ಶಮೀಮ್ ಅವರು ನಾಯಿಯನ್ನು ಕಂಡು ಅದರ ಬಳಿ ಹೋಗಿ ನೋಡಿದಾಗ, ಅದರ ಕೊರಳಿಗೆ ಒಂದು ಚೀಟಿಯನ್ನು ಕಟ್ಟಲಾಗಿತ್ತು. ಅದನ್ನು ತೆರೆದು ನೋಡಿದಾಗ ನಾಯಿ ಬಗ್ಗೆ ಶಮೀಮ್ ಅವರಿಗೆ ತಿಳಿದಿದೆ.

    ಚೀಟಿಯಲ್ಲಿ ಏನಿದೆ?
    ಇದು ಆತ್ಯುತ್ತಮ ತಳಿಯ ನಾಯಿ, ಒಳ್ಳೆ ನಡವಳಿಕೆ ಹೊಂದಿದೆ. ಇದಕ್ಕೆ ಯಾವುದೇ ಕಾಯಿಲೆಗಳಿಲ್ಲ. ಇದಕ್ಕೆ ಸಾಮಾನ್ಯವಾಗಿ ಐದು ದಿನಗಳಿಗೆ ಒಮ್ಮೆ ಸ್ನಾನ ಮಾಡಿಸಲಾಗುತಿತ್ತು. ಇದು ಕೇವಲ ಬೊಗಳುತ್ತದೆ, ಕಚ್ಚುವುದಿಲ್ಲ. ಮೂರು ವರ್ಷದಲ್ಲಿ ಯಾರನ್ನೂ ಕಡಿದಿಲ್ಲ. ಹಾಲು, ಬಿಸ್ಕೆಟ್ ಮತ್ತು ಮೊಟ್ಟೆಯನ್ನು ಹೆಚ್ಚು ತಿನ್ನಲು ಇಷ್ಟ ಪಡುತ್ತದೆ. ನೆರೆಮನೆಯ ನಾಯಿ ಜೊತೆಗೆ ಇದು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದ್ದಕ್ಕೆ ಇದನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ಬರೆಯಲಾಗಿದೆ.

    https://www.facebook.com/sreedevi.s.kartha/posts/10156939196634300

    ಅಲ್ಲದೆ ಈ ಬಗ್ಗೆ ತಿಳಿದ ಬಳಿಕ, ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಅವರು ಪೊಮೇರಿಯನ್ ನಾಯಿಯ ಫೋಟೋ ಹಾಗೂ ಅದರ ಕೊರಳಿನಲ್ಲಿದ್ದ ಚೀಟಿಯ ಫೋಟೋವನ್ನು ತಮ್ಮ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೇರಳದಲ್ಲೂ ಕಾಂಗ್ರೆಸ್ಸಿಗೆ ಶಾಕ್ – ಶೀಘ್ರವೇ ಶಾಸಕರು, ಸಂಸದರು ಬಿಜೆಪಿಗೆ ಜಂಪ್?

    ಕೇರಳದಲ್ಲೂ ಕಾಂಗ್ರೆಸ್ಸಿಗೆ ಶಾಕ್ – ಶೀಘ್ರವೇ ಶಾಸಕರು, ಸಂಸದರು ಬಿಜೆಪಿಗೆ ಜಂಪ್?

    ಕೊಚ್ಚಿ: ಕರ್ನಾಟಕ, ಗುಜರಾತ್, ಗೋವಾದಲ್ಲಿ ಶಾಸಕರ ಪಕ್ಷಾಂತರದಿಂದ ಆಘಾತಗೊಂಡಿರುವ ಕಾಂಗ್ರೆಸ್ಸಿಗೆ ಈಗ ಕೇರಳದಲ್ಲೂ ಬಿಗ್ ಶಾಕ್ ಸಿಗುವ ಸಾಧ್ಯತೆಯಿದೆ.

    ಕೇರಳದ 6 ಕಾಂಗ್ರೆಸ್ ಸಂಸದರು ಮತ್ತು 3 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಎನ್‍ಡಿಎ ಮಿತ್ರಪಕ್ಷ ಕೆಜೆಎಸ್‍ಪಿ ನಾಯಕ ಪಿ.ಸಿ.ಜಾರ್ಜ್ ಹೇಳಿಕೆ ನೀಡಿ ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇರಳದ 6 ಕಾಂಗ್ರೆಸ್ ಸಂಸದರು ಮತ್ತು 3 ಶಾಸಕರು ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ. ಈಗಾಗಲೇ ನಾಯಕರ ಜೊತೆ ಮಾತುಕತೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದ್ದು, ಶೀಘ್ರವೇ ಈ ನಾಯಕರು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿದ್ದಾರೆ.

    ಮಾಧ್ಯಮಗಳು ಈ ವಿಚಾರದ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದಾಗ, ಶೀಘ್ರವೇ ಕೇರಳ ಕಾಂಗ್ರೆಸ್‍ನಿಂದ ಬಿಜೆಪಿ ಕಡೆಗೆ ಭಾರೀ ಹರಿವು ಸಂಭವಿಸಲಿದೆ ಎಂದಷ್ಟೇ ಹೇಳಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

    ಜಾರ್ಜ್ ಹೇಳಿಕೆಗೆ ಕೇರಳ ಕಾಂಗ್ರೆಸ್ ಉಪಾಧ್ಯಕ್ಷ ವಿಡಿ ಸತೀಶನ್ ಪ್ರತಿಕ್ರಿಯಿಸಿ, ಕೇರಳದ ಯಾವೊಬ್ಬ ಸಂಸದ, ಶಾಸಕ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ. ಮಾಧ್ಯಮಗಳ ಮುಂದೆ ಪ್ರಚಾರಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

  • ಕೇರಳ, ಕೊಡಗು ಭಾಗದಲ್ಲಿ ಮಳೆ- ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಜೀವಕಳೆ

    ಕೇರಳ, ಕೊಡಗು ಭಾಗದಲ್ಲಿ ಮಳೆ- ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಜೀವಕಳೆ

    ಕೊಡಗು/ಬೆಂಗಳೂರು: ಕೇರಳ, ಕೊಡಗಿನ ಭಾಗದಲ್ಲಿ ಭಾರೀ ಮಳೆಯಾಗ್ತಿರೋ ಕಾರಣ ಕಾವೇರಿ ಕೊಳ್ಳದ ಡ್ಯಾಮ್‍ಗಳಲ್ಲಿ ಜೀವಕಳೆ ತುಂಬಿದ್ದು, ಪಾತಾಳ ಸೇರಿದ್ದ ನೀರಿನ ಮಟ್ಟ ನಿಧಾನವಾಗಿ ಮೇಲೇರುತ್ತಿದೆ.

    ಕೆಆರ್‍ಎಸ್‍ನಲ್ಲಿ ನೀರಿನ ಮಟ್ಟ 90 ಅಡಿ ದಾಟಿದ್ದು, ಈ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ನೀರು ಹರಿಸಲಾಗಿದೆ. ಅಣೆಕಟ್ಟೆಯಿಂದ 7 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದ್ದು, 5 ಸಾವಿರ ಕ್ಯೂಸೆಕ್ ಮೆಟ್ಟೂರು ಡ್ಯಾಮ್‍ಗೂ, 2 ಸಾವಿರ ಕ್ಯೂಸೆಕ್ ನೀರು ರೈತರ ನಾಲೆಗಳಿಗೂ ಹರಿಸಲಾಗುತ್ತಿದೆ.

    ಒಂದೆಡೆ ಹರಿವು ಹೆಚ್ಚಾಗಿದೆ ಎಂದು ರೈತರು ಸಂತಸ ಪಡುತ್ತಿದ್ದರೆ, ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ತಮಿಳುನಾಡಿಗೆ ನೀರು ಬಿಡಲಾಗಿದೆ. ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಇಂಡುವಾಳು ಗ್ರಾಮಸ್ಥರು ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ರೆಸಾರ್ಟ್‍ನಲ್ಲಿರುವ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಕಾವೇರಿ ನೀರಿನಲ್ಲಿ ವ್ಯತ್ಯಯ:
    ಕಾವೇರಿಕೊಳ್ಳಕ್ಕೆ ಹೆಚ್ಚು ನೀರು ಹರಿಯುತ್ತಿದ್ದರೂ ಸಹ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ 2 ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

  • ಇಂದಿನಿಂದ ಜು.23ರ ವರೆಗೆ ಭಾರೀ ಮಳೆ – ಹವಾಮಾನ ಇಲಾಖೆ

    ಇಂದಿನಿಂದ ಜು.23ರ ವರೆಗೆ ಭಾರೀ ಮಳೆ – ಹವಾಮಾನ ಇಲಾಖೆ

    ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಜುಲೈ 23ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೇರಳದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕರಾವಳಿ ಮತ್ತು ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದಲೂ ಮಳೆಯಾಗುತ್ತಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೂರು ದಿನಗಳಲ್ಲಿ 20 ಸೆಂ.ಮೀಟರ್ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ನಿರೀಕ್ಷೆ ಮಾಡಿದೆ.

    ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಮಳೆ ಜೋರಾಗಿದ್ದು, ಬೆಳಗಾವಿ, ವಿಜಯಪುರ, ಗದಗ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಇಂದು ನಾಳೆ ಭಾರೀ ಮಳೆಯಾಗೋ ಸಾಧ್ಯತೆ ಇದೆ.