Tag: kerala

  • ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿ

    ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿ

    -ಒಟ್ಟಿಗೆ ಸಮಾಧಿ ಮಾಡಿ ಕಣ್ಣೀರಿಟ್ಟ ಪೋಷಕರು

    ತಿರುವನಂತಪುರಂ: ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿಯಾದ ಮನಕಲಕುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

    ಮಲಪ್ಪುರಂ ಜಿಲ್ಲೆಯ ನಿಲಾಂಬೂರು ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಪುಟ್ಟ ಕವಲಪ್ಪರ ಗ್ರಾಮದ ಅನಘಾ (4) ಮತ್ತು ಅಲೀನಾ(8) ಮೃತ ಸಹೋದರಿಯರು. ಮುತಪ್ಪನ್ ಕುನ್ನು ಬೆಟ್ಟದಲ್ಲಿ ಗುರುವಾರ ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟಿದ್ದ ಸಹೋದರಿಯರ ಮೃತದೇಹವು ಸೋಮವಾರ ಸಿಕ್ಕಿದ್ದು, ಅಂದೇ ಇಬ್ಬರನ್ನು ಒಂದೇ ಜಾಗದಲ್ಲಿ ಸಮಾಧಿ ಮಾಡಿ ಪೋಷಕರು ಕಣ್ಣೀರಿಟ್ಟಿದ್ದಾರೆ.

    ಪುಟ್ಟ ಕವಲಪ್ಪರ ಗ್ರಾಮದ ವಿಕ್ಟರ್ ಹಾಗೂ ಥಾಮಸ್ ಸಹೋದರರ ಮನೆಯು ಕವಲಪ್ಪರ ಗ್ರಾಮದ ಮುತಪ್ಪಂಕ್ ಬೆಟ್ಟದ ಅತ್ಯಂತ ಮೇಲ್ಭಾಗದಲ್ಲಿತ್ತು. ಈ ಇಬ್ಬರಲ್ಲಿ ಒಬ್ಬರು ಬಡಗಿ ಮತ್ತು ಮತ್ತೊಬ್ಬರು ಪೇಂಟಿಂಗ್ ಕೆಲಸ ಮಾಡಿ, ಜೀವನ ನಡೆಸುತ್ತಿದ್ದರು. ವಿಕ್ಟರ್ ಹಾಗೂ ಥಾಮಸ್ ಅವರಿಗೆ ಐವರು ಮಕ್ಕಳಿದ್ದು, ಪತ್ನಿಯರ ಜೊತೆಗೆ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡ ಮಳೆ ಅವರ ಬದುಕನ್ನೇ ಕಿತ್ತುಕೊಂಡಿದೆ.

    ವಿಕ್ಟರ್ ಹಾಗೂ ಥಾಮಸ್ ಅವರ ಮಕ್ಕಳಾದ ಅನಘಾ ಮತ್ತು ಅಲೀನಾ ಒಟ್ಟಾಗಿ ಇರುತ್ತಿದ್ದರು. ಮಲಗುವಾಗಲೂ ಅಷ್ಟೇ ಒಂದೇ ಚಾಪೆಯ ಮೇಲೆ ಪರಸ್ಪರ ತಬ್ಬಿಕೊಂಡು ಮಲಗುತ್ತಿದ್ದರು. ಆದರೆ ಗುರುವಾರ ರಾತ್ರಿ ಕವಲಪ್ಪರಾದ ಮುತಪ್ಪಂಕ್ ಬೆಟ್ಟದಲ್ಲಿ ಭೂಕುಸಿತ ಉಂಟಾಗಿ ಸುಮಾರು 40 ಮನೆಗಳು ನಾಶವಾದವು. ಈ ವೇಳೆ ವಿಕ್ಟೋರ್ ಹಾಗೂ ಥಾಮಸ್ ಅವರ ಮನೆ ಭೂಕುಸಿತಕ್ಕೆ ಒಳಗಾಗಿ ಮಣ್ಣಿನ ಅಡಿ ಸಿಲುಕ್ಕಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಅವರು ಪತ್ನಿಯರು ಹಾಗೂ ಮೂವರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ಆಚೆಗೆ ಬಂದಿದ್ದರು. ಆದರೆ ಅನಘಾ ಮತ್ತು ಅಲೀನಾ ಮನೆಯಲ್ಲಿಯೇ ಉಳಿದಿದ್ದರಿಂದ ಮಣ್ಣಿನ ಅಡಿ ಸಿಕ್ಕು ಮೃತಪಟ್ಟಿದ್ದರು.

    ಮನೆಯಿಂದ ಹೊರಗೆ ಬಂದಿದ್ದ ವಿಕ್ಟರ್ ಇಬ್ಬರು ಹುಡುಗಿಯರನ್ನು ಹುಡುಕಲು ಇತರರೊಂದಿಗೆ ಮರಳಿದ್ದರು. ಮನೆ ಸಂಪೂರ್ಣವಾಗಿ ನೆಲ ಸಮವಾಗಿತ್ತು. ಇದನ್ನು ನೋಡಿದ ಅವರು ಸುಮಾರು ಗಂಟೆಗಳ ಕಾಲ ಮಣ್ಣು ಅಗೆದರು. ಆದರೆ ಮಕ್ಕಳು ಸಿಗಲಿಲ್ಲ ಎಂದು ಕವಲಪ್ಪರ ನಿವಾಸಿ ಅಯ್ಯಪ್ಪನ್ ಹೇಳಿದ್ದಾರೆ.

    ಮಲಪ್ಪುರಂ ಜಿಲ್ಲೆಯ ಭೂತಾನಂನ ಸೇಂಟ್ ಮೇರಿಸ್ ಚರ್ಚ್ ನಲ್ಲಿ ಸೋಮವಾರ ಜನಸಮೂಹ ಜಮಾಯಿಸಿತ್ತು. ಪೋಷಕರು ಕಣ್ಣೀರಿಡುತ್ತಾ ಅನಘಾ ಹಾಗೂ ಅಲೀನಾ ಮೃತ ದೇಹವನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿ ಇಟ್ಟು ಸಮಾಧಿ ಮಾಡಿದರು. ಈ ವೇಳೆ ಅಲ್ಲಿ ನೆರೆದಿದ್ದ ಜನರು ಪುಟ್ಟ ಮಕ್ಕಳನ್ನು ನೆನೆದು ಕಣ್ಣೀರಿಟ್ಟರು.

    ಗುರುವಾರ ಸಂಭವಿಸಿದ ಗುಟ್ಟ ಕುಸಿತದಲ್ಲಿ ಸಾವನ್ನಪ್ಪಿದವರ ಪೈಕಿ ಇಬ್ಬರು ಬಾಲಕಿಯರು ಸೇರಿದಂತೆ 14 ಜನರ ಮೃತ ದೇಹಗಳು 55ಕ್ಕೂ ಹೆಚ್ಚು ಜನರ ಮೃತ ದೇಹಗಳು ಅವಶೇಷಗಳ ಅಡಿಯಲ್ಲಿವೆ ಎಂದು ಹೇಳಲಾಗುತ್ತಿದೆ.

  • ಕರಾವಳಿ, ಮಲೆನಾಡು ಭಾಗಗಳಲ್ಲಿ ಇಂದು ರಾತ್ರಿ ಭಾರೀ ಮಳೆ ಸಾಧ್ಯತೆ- ಶ್ರೀನಿವಾಸ್ ರೆಡ್ಡಿ

    ಕರಾವಳಿ, ಮಲೆನಾಡು ಭಾಗಗಳಲ್ಲಿ ಇಂದು ರಾತ್ರಿ ಭಾರೀ ಮಳೆ ಸಾಧ್ಯತೆ- ಶ್ರೀನಿವಾಸ್ ರೆಡ್ಡಿ

    ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಇಂದು ರಾತ್ರಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‍ಎನ್‍ಡಿಎಂಸಿ)ದ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ರಾತ್ರಿ ಭಾರೀ ಮಳೆಯಾಗುವ ಮನ್ಸೂಚನೆ ಇದೆ. ಕಳೆದ 60 ವರ್ಷಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಪ್ರಸ್ತುತ ಬರುತ್ತಿರುವುದು ಅತ್ಯಧಿಕ ಮಳೆಯಾಗಿದೆ. ಬೆಳಗಾವಿಯಲ್ಲಿ ವಾಡಿಕೆಗಿಂತ ಶೇ.65ರಷ್ಟು ಹೆಚ್ಚು ಮಳೆಯಾಗಿದೆ. ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾವೇರಿ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ತಿಳಿಸಿದರು.

    ಮಲೆನಾಡು ಭಾಗದ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗಿದೆ. ಆದರೆ, ನಾಳೆಯಿಂದ ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಕಡೆ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ಆದರೆ, ರಾಜ್ಯದಲ್ಲಾಗುತ್ತಿರುವ ಮಳೆ ಕೇರಳದ ಕಡೆ ತಿರುಗಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕೇರಳ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದಾಗಿ ಮಾಹಿತಿ ನೀಡಿದರು.

    ಜೂನ್, ಜುಲೈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಶೇ.18 ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ, ಕಳೆದ 10 ದಿನಗಳಲ್ಲಿ ಸುರಿದ ಮಳೆಯಿಂದಾಗಿ ವಾಡಿಕೆಗಿಂತ ಶೇ.13 ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಮಳೆಯ ಪ್ರಮಾಣ ನೋಡಿದಲ್ಲಿ ರಾಜ್ಯದ 24 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಆದರೆ, ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದರೂ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಾಡಿಕೆಯ ಮಳೆಯೂ ಆಗಿಲ್ಲ ಎಂದು ತಿಳಿಸಿದರು.

    ಕೇರಳಕ್ಕೆ ಮಳೆ ತಿರುಗುವುದರಿಂದ ಬೆಂಗಳೂರಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಬಂದರೂ ಚದುರಿದ ಮಳೆಯಾಗಲಿದೆ ಎಂದು ಅವರು ವಿವರಿಸಿದರು.

  • ಮಗನ ಕಣ್ಣೆದುರೇ ಮಣ್ಣಿನಡಿ ಸಿಲುಕಿದ ತಾಯಿ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಮಗನ ಕಣ್ಣೆದುರೇ ಮಣ್ಣಿನಡಿ ಸಿಲುಕಿದ ತಾಯಿ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ತಿರುವನಂತಪುರಂ: ಕೇರಳದ ಮಲಪ್ಪುರಂ ಪ್ರದೇಶದಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ವ್ಯಕ್ತಿಯೊಬ್ಬರು ಕೆಲವೇ ಇಂಚುಗಳ ಅಂತರದಿಂದ ಸಾವಿನಿಂದ ಪಾರಾಗಿದ್ದು, ಇದೇ ಸಂದರ್ಭದಲ್ಲಿ ಆತನ ತಾಯಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

    ಸ್ಥಳಿ ಮಾಧ್ಯಮದ ವರದಿಯ ಅನ್ವಯ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಗುಡ್ಡ ಕುಸಿತ ಭಯಾನಕ ದೃಶ್ಯಗಳನ್ನು ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿ ತನ್ನ ಅಮ್ಮನಿಗೆ ಮಣ್ಣು ಕುಸಿತ ಬಗ್ಗೆ ಅನುಮಾನಗೊಂಡು ಎಚ್ಚರಿಕೆ ನೀಡಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಣ್ಣು ಏಕಾಏಕಿ ಮನೆಯತ್ತ ಹರಿದು ಬಂದಿದೆ.

    ಮಣ್ಣು ಕುಸಿಯುತ್ತಿರುವುದು ಅವರ ಅರಿವಿಗೆ ಬರುವುದೊಳಗೆ ಇಡೀ ಗುಡ್ಡ ಮನೆಯ ಮೇಲೆ ಕುಸಿದಿದೆ. ಕಳೆದ 3 ದಿನಗಳ ಅವಧಿಯಲ್ಲಿ 40 ಮಂದಿ ಮಹಾಮಳೆಗೆ ಕೇರಳದಲ್ಲಿ ಬಲಿಯಾಗಿದ್ದು, 1 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

    ವಯನಾಡು ಮತ್ತು ಮಲಪ್ಪುರಂ ಬಳಿ ಕಳೆದ 2 ದಿನದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಪ್ರಕರಣಗಳು ನಡೆದಿದೆ. ಸಿಎಂ ಪಿಣರಾಯಿ ವಿಜಯನ್ ಅವರು ಅಧಿಕೃತವಾಗಿ ನೀಡಿರುವ ಮಾಹಿತಿಯ ಅನ್ವಯ 40ಕ್ಕೂ ಹೆಚ್ಚು ಮಂದಿ ಮಣ್ಣಿನ ಅಡಿ ಸಿಲುಕಿಕೊಂಡಿದ್ದು, 3 ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಡೆದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಕೇರಳದಲ್ಲಿ ನೀಡಲಾಗಿದ್ದ ರೆಡ್ ಅಲರ್ಟನ್ನು ಮುಂದುವರಿಸಲಾಗಿದ್ದು, ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಪ್ರವಾಹಕ್ಕೆ ಸಿಲುಕಿರುವ, ಗುಡ್ಡ ಕುಸಿತ ಸಂಭವಿಸಬಹುದಾದ ಪ್ರದೇಶ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿರುವುದರಿಂದ ಹಲವು ಮಂದಿ ಸ್ವಯಂ ಪ್ರೇರಿತವಾಗಿ ನಿವಾಸಿಗಳು ಭಾರೀ ಮಳೆಯಿಂದ ಕೇರಳದಲ್ಲಿ ರೈಲ್ವೇ ಸೇವೆ ಕೂಡ ಬಂದ್ ಆಗಿದೆ.

  • ಡಬಲ್ ಸಂಭ್ರಮದಲ್ಲಿ ಶ್ರುತಿ ಹರಿಹರನ್

    ಡಬಲ್ ಸಂಭ್ರಮದಲ್ಲಿ ಶ್ರುತಿ ಹರಿಹರನ್

    ಬೆಂಗಳೂರು: ಶ್ರುತಿ ಹರಿಹರನ್ ಅವರಿಗೆ ಇಂದು ಡಬಲ್ ಸಂಭ್ರಮ. ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪಡೆದ ಸಂಭ್ರಮದಲ್ಲೇ ಇಂದು ಅವರು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.

    ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಶ್ರುತಿ ಹರಿಹರನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿಂದೆ ಶ್ರುತಿ ಹರಿಹರನ್ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಶ್ರುತಿ ಅವರು ತಾವೂ ಗರ್ಭಿಣಿ ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

    https://www.instagram.com/p/Bz-rVWjJHRH/

    ಇನ್ನೊಂದೆಡೆ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ನಟಿ ಶ್ರುತಿ ಹರಿಹರನ್ ಅಭಿನಯದ ‘ನಾತಿಚರಾಮಿ’ ಸಿನಿಮಾ ಬರೋಬ್ಬರಿ 5 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಎಡಿಟಿಂಗ್ ಹಾಗೂ ಸಿನಿಮಾ ನಟಿ ಶೃತಿ ಹರಿಹರನ್ ಅವರಿಗೆ ವಿಶೇಷ ಅಭಿನಯದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

    ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಶ್ರುತಿ ಡ್ಯಾನ್ಸ್ ಮಾಸ್ಟರ್ ಮತ್ತು ಪ್ರಸಿದ್ಧ ಕಲರಿ ಪಟ್ಟು ಕಲಾವಿದರಾಗಿರುವ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.

    ಶ್ರುತಿ ದೂರಿನಲ್ಲಿ ಮದುವೆಯಾಗಿದೆ ಎಂದು ನಮೂದಿಸುವ ಮೊದಲು ರಾಮ್ ಕುಮಾರ್ ಜೊತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಹೇಳಿಕೊಂಡಿರಲಿಲ್ಲ. ಶ್ರುತಿ ಹರಿಹರನ್ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ `ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಒಟ್ಟಾಗಿ ಅಭಿನಯಿಸಿದ್ದರು.

  • ಕೇರಳದಲ್ಲಿ ಮತ್ತೆ ಭೂ ಕುಸಿತ – 80 ಮಂದಿ ಕಣ್ಮರೆ

    ಕೇರಳದಲ್ಲಿ ಮತ್ತೆ ಭೂ ಕುಸಿತ – 80 ಮಂದಿ ಕಣ್ಮರೆ

    ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಮಲಪ್ಪುರಂ ಜಿಲ್ಲೆಯ ಕವಳಪ್ಪಾರಂ ಬಳಿ ಮೋಘಸ್ಫೋಟ ಸಂಭವಿಸಿದೆ. ಪರಿಣಾಮ ಭೂ ಕುಸಿತ ಉಂಟಾಗಿ ಸುಮಾರು 35 ಮನೆಗಳು ನಾಮಾವಶೇಷವಾಗಿದೆ ಎಂಬ ಮಾಹಿತಿ ಲಭಿಸಿದೆ.

    ಜಿಲ್ಲೆಯ ನಿಲಂಬೂರ್ ಬಳಿಯ ಭೂಧನಂ ಬಳಿ ಭೂಕುಸಿತ ಸಂಭವಿಸಿದ್ದು, ಸುಮಾರು 35 ಮನೆಗಳು ನೆಲಸಮವಾಗಿದೆ. ಈಗ ಈ ಪ್ರದೇಶ ಸಂಪೂರ್ಣ ಬಯಲು ಪ್ರದೇಶವಾಗಿ ಕಾಣುತ್ತಿದೆ. ಮನೆಗಳಲ್ಲಿ ವಾಸವಿದ್ದ ನಿವಾಸಿಗಳ ಫೋನ್‍ಗೆ ಕರೆ ಮಾಡಿದರೆ ಸ್ವಿಚ್ ಆಫ್, ನಾಟ್ ರೀಚಬಲ್ ಎಂದ ಸಂದೇಶ ಬರುತ್ತಿದ್ದು, ಸುಮಾರು 80ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಗುಡ್ಡ ಪ್ರದೇಶದ ಸುಮಾರು 100 ಎಕರೆ ಭೂಮಿ ಕುಸಿತವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಪ್ರವಾಹ ಮತ್ತು ಭೂಕುಸಿತದಿಂದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ.

    ದುರ್ಘಟನಾ ಸ್ಥಳದಲ್ಲಿ ಸದ್ಯ 3 ರಿಂದ 4 ಮನೆ ಇರುವ ಕುರುಹುಗಳು ಮಾತ್ರ ಕಾಣುತ್ತಿದೆ. ಕವಳಪ್ಪಾರಂ ಮಾತ್ರವಲ್ಲದೇ ನೀಲಂಬೂರ್, ಭುತಾನಂ ಎಂಬಲ್ಲೂ ಭೂಕುಸಿತ ಸಂಭವಿಸಿರುವ ಕುರಿತು ಮಾಹಿತಿ ಲಭಿಸಿದೆ. ದುರ್ಘಟನೆ ಕುರಿತು ಮಾಹಿತಿ ಪಡೆದಿರುವ ಎನ್‍ಡಿಆರ್ ಎಫ್ ತಂಡ ಪ್ರದೇಶವನ್ನು ತಲುಪಲು ಹರಸಾಹಸ ಪಡುತ್ತಿದೆ.

    ಮುನ್ಸೂಚನೆಯಂತೆಯೇ ಕೇರಳದಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯ ಅನ್ವಯ 22 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 315 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 22 ಸಾವಿರ ಜನ ಈ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆಗಸ್ಟ್ 15ರ ವರೆಗೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

  • ಮಳೆ ಅಬ್ಬರಕ್ಕೆ ದೇವರ ನಾಡು ತತ್ತರ – ಆ.11 ವರೆಗೂ ಕೊಚ್ಚಿ ಏರ್‌ಪೋರ್ಟ್‌ ಬಂದ್

    ಮಳೆ ಅಬ್ಬರಕ್ಕೆ ದೇವರ ನಾಡು ತತ್ತರ – ಆ.11 ವರೆಗೂ ಕೊಚ್ಚಿ ಏರ್‌ಪೋರ್ಟ್‌ ಬಂದ್

    ತಿರುವನಂತಪುರಂ: ಭಾರೀ ಮಳೆಗೆ ಕೇರಳದಲ್ಲಿ ಮತ್ತೆ ಸಂಕಷ್ಟ ಎದುರಾಗಿದ್ದು, ಶಾಲಾ ಕಾಲೇಜುಗಳಿಗೆ ಘೋಷಣೆ ಮಾಡಲಾಗಿದೆ. ಅಲ್ಲದೇ ಭಾನುವಾರ ಮಧ್ಯಾಹ್ನ 3 ಗಂಟೆವರೆಗೂ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಬಂದ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಕೇರಳದ ವರಿಯಾರ್ ನದಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿರುವ ಕಾರಣ ಕೊಚ್ಚಿ ವಿಮಾನ ನಿಲ್ದಾಣದ ರನ್‍ವೇ ನೀರು ನಿಂತಿದೆ. ಮೊದಲು ಶುಕ್ರವಾರ ವರೆಗೂ ಮಾತ್ರ ವಿಮಾನ ನಿಲ್ದಾಣ ಬಂದ್ ಮಾಡಲಾಗಿತ್ತು. ಆದರೆ ನೀರಿನ ಪ್ರವಾಹದ ಪ್ರಮಾಣ ಕಡಿಮೆಯಾಗದ ಪರಿಣಾಮ ಭಾನುವಾರದವರೆಗೂ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ ಎಂದು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.

    ಕೇರಳ ಸರ್ಕಾರ ತ್ರಿಶೂರು, ಮಲಪ್ಪುರಂ, ಕೊಯಿಕ್ಕೋಡ್, ವಯನಾಡು, ಕಾಸರಗೋಡು, ಎರ್ನಾಕುಲಂ, ಇಡುಕ್ಕಿ, ಕಣ್ಣೂರು, ಪಾಲಕ್ಕಾಡ್‍ನಲ್ಲಿ ಜಿಲ್ಲೆಗಳಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಣೆ ಮಾಡಲು ಎನ್‍ಡಿಆರ್ ಎಫ್ ತಂಡಗಳು ಕಾರ್ಯಾಚರಣೆ ನಡೆಸಿದೆ.

    ಕರ್ನಾಟಕದೊಂದಿಗೆ ಗಡಿ ಹಂಚಿಕೊಳ್ಳುವ ವಯನಾಡು ಜಿಲ್ಲೆಯ ಮೆಪ್ಪಾಡಿಯ ಪುಥುಮಲದಲ್ಲಿ ನಿನ್ನೆ ಗುಡ್ಡ ಕುಸಿತದಿಂದಾದ ಪ್ರವಾಹಕ್ಕೆ ಊರಿಗೆ ಊರೇ ಕಣ್ಮರೆ ಆಗಿದೆ. ದೇವಸ್ಥಾನ ಮತ್ತು ಮಸೀದಿಯೊಂದು ಸಾಕ್ಷ್ಯವೇ ಇಲ್ಲದಂತೆ ನೆಲಸಮವಾಗಿದೆ. ಪುಥಮಲದಲ್ಲಿದ್ದ ಮನೆ ಮತ್ತು ಎರಡು ಕಾಟೇಜ್‍ಗಳು ಕೂಡಾ ಕೊಚ್ಚಿಕೊಂಂಡು ಹೋಗಿವೆ. ಈ ಕಾಟೇಜ್‍ಗಳಲ್ಲಿರುವ ಟೀ ಎಸ್ಟೇಟ್ ಕಾರ್ಮಿಕರೂ ಕಣ್ಮರೆ ಆಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಎದುರಾಗಿದೆ.

  • ಗುಡ್ಡ ಕುಸಿತ- ಕಾಣೆಯಾಯ್ತು ಊರು

    ಗುಡ್ಡ ಕುಸಿತ- ಕಾಣೆಯಾಯ್ತು ಊರು

    ಬೆಂಗಳೂರು: ವರ್ಷದ ಹಿಂದೆಯಷ್ಟೇ ಕಂಡುಕೇಳರಿಯದ ಪ್ರವಾಹಕ್ಕೆ ಬೆಚ್ಚಿಬಿದ್ದು ಚೇತರಿಸಿಕೊಳ್ಳುತ್ತಿರುವ ಕೇರಳ ಮತ್ತೆ ಪ್ರಳಯಕ್ಕೆ ಬೆಚ್ಚಿಬಿದ್ದಿದೆ. ಕರ್ನಾಟಕದೊಂದಿಗೆ ಗಡಿ ಹಂಚಿಕೊಳ್ಳುವ ವಯನಾಡು ಜಿಲ್ಲೆಯ ಮೆಪ್ಪಾಡಿಯ ಪುಥುಮಲದಲ್ಲಿ ಗುಡ್ಡ ಕುಸಿತದಿಂದಾದ ಪ್ರವಾಹಕ್ಕೆ ಊರಿಗೆ ಊರೇ ಕಣ್ಮರೆ ಆಗಿದ್ದು, ದೇವಸ್ಥಾನ ಮತ್ತು ಮಸೀದಿಯೊಂದು ಸಾಕ್ಷ್ಯವೇ ಇಲ್ಲದಂತೆ ನೆಲಸಮವಾಗಿದೆ.

    ಪುಥಮಲದಲ್ಲಿದ್ದ ಮನೆ ಮತ್ತು ಎರಡು ಕಾಟೇಜ್‍ಗಳು ಕೂಡಾ ಕೊಚ್ಚಿಕೊಂಂಡು ಹೋಗಿವೆ. ಈ ಕಾಟೇಜ್‍ಗಳಲ್ಲಿರುವ ಟೀ ಎಸ್ಟೇಟ್ ಕಾರ್ಮಿಕರೂ ಕಣ್ಮರೆ ಆಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಎದುರಾಗಿದೆ. ಇತ್ತ ವಯನಾಡಿಯಲ್ಲಿ ನೋಡನೋಡ್ತಿದ್ದಂತೆ ಮನೆಯೊಂದು ಬಿದ್ದಿದೆ.

    ಇತ್ತ ಉತ್ತರ ಕೇರಳದ ಜಿಲ್ಲೆಗಳಲ್ಲಿ ಮಳೆ ಕಟ್ಟೆಚ್ಚರ ಘೋಷಿಸಲಾಗಿದೆ. ತ್ರಿಶೂರು, ಮಲಪ್ಪುರಂ, ಕೊಯಿಕ್ಕೋಡ್, ವಯನಾಡು, ಕಾಸರಗೋಡು, ಎರ್ನಾಕುಲಂ, ಇಡುಕ್ಕಿ, ಕಣ್ಣೂರು, ಪಾಲಕ್ಕಾಡ್‍ನಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ. ಈ ಭಾಗದ ಡ್ಯಾಂಗಳು ಮತ್ತು ಚೆಕ್ ಡ್ಯಾಂಗಳಿಂದ ಅಪಾರ ಪ್ರಮಾಣದಲ್ಲಿ ನೀರನ್ನ ಹೊರಬಿಡಲಾಗ್ತಿದ್ದು ಮನೆ, ತೋಟ, ಹೊಲ ಗದ್ದೆ, ರಸ್ತೆಗಳೆಲ್ಲ ಜಲಾವೃತಗೊಂಡಿವೆ.

  • ಕೇರಳದಲ್ಲಿ ಭೂಕುಸಿತಕ್ಕೆ 38 ಮಂದಿ ಭೂಸಮಾಧಿ

    ಕೇರಳದಲ್ಲಿ ಭೂಕುಸಿತಕ್ಕೆ 38 ಮಂದಿ ಭೂಸಮಾಧಿ

    ತಿರುವನಂತಪುರಂ: ಮಹಾ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ 38 ಮಂದಿ ಭೂಸಮಾಧಿಯಾದ ಘಟನೆ ಕೇರಳದಲ್ಲಿ ಮೇಪ್ಪಾಡಿಯಲ್ಲಿ ನಡೆದಿದೆ.

    ಕೇರಳದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ರಣ ಭೀಕರ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ದೇವರನಾಡಿದಲ್ಲಿ ವರುಣ ಅಬ್ಬರಿಸಿದ್ದಾನೆ. ಪರಿಣಾಮ ಗುರುವಾರ ಸಂಜೆ 4 ಗಂಟೆಗೆ ಮಸೀದಿ, ದೇವಸ್ಥಾನ ಹಾಗೂ ಒಂದು ಎಸ್ಟೇಟ್ ಸಂಪೂರ್ಣ ನೆಲಸಮವಾಗಿದೆ. ದೇವಸ್ಥಾನ ಹಾಗೂ ಮಸೀದಿಯಲ್ಲಿ 70ಕ್ಕೂ ಹೆಚ್ಚು ಜನರಿದ್ದರು. ಅವರ ಪೈಕಿ 38 ಮಂದಿ ಭೂಸಮಾಧಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಭಾರೀ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ಘಟನೆ ನಡೆದು ಮೂರ್ನಾಲ್ಕು ಗಂಟೆ ಕಳೆದರೂ ಸ್ಥಳಕ್ಕೆ ತಲುಪಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಸೇನಾ ಹೆಲಿಕಾಪ್ಟರ್ ನೀಡುವಂತೆ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಉತ್ತರ ಕೇರಳದ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ಅಣೆಕಟ್ಟುಗಳ ಗೇಟ್‍ಗಳನ್ನು ತೆರೆಯಲು ಅಧಿಕಾರಿಗಳು ಆದೇಶಿಸಿದ್ದಾರೆ. ಮಲ್ಲಪುರಂನ ನಿಲಂಬುರ್ ಮತ್ತು ಎತ್ತರದ ಪ್ರದೇಶಗಳಾದ ಕೋಝಿಕ್ಕೋಡು, ಕಣ್ಣೂರು, ಇಡುಕ್ಕಿ ಮತ್ತು ಪಾಲಕ್ಕಾಡ್‍ಗಳು ಮಳೆಗೆ ತತ್ತರಿಸಿ ಹೋಗಿವೆ. ಬುಧವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಹಲವು ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿತ್ತು. ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮನೆಗೆ ಮರ ಬಿದ್ದು ಮೃತಪಟ್ಟಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ವಯನಾಡ್‍ನಲ್ಲಿ ಮಹಿಳೆಯೊಬ್ಬರು ಪ್ರಾಣ ಬಿಟ್ಟಿದ್ದರು.

    ಮಲಪ್ಪುರಂ, ಕೋಝಿಕ್ಕೋಡು, ವಯನಾಡು ಮತ್ತು ಇಡುಕ್ಕಿ ನಾಲ್ಕು ಜಿಲ್ಲೆಗಳಲ್ಲಿ ರೆಟ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇರಳದ ಉತ್ತರ ಭಾಗ ಮತ್ತು ಇಡುಕ್ಕಿಯಲ್ಲಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

  • ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಸುಷ್ಮಾ ಸ್ವರಾಜ್

    ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಸುಷ್ಮಾ ಸ್ವರಾಜ್

    ನವದೆಹಲಿ: ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 2003ರಲ್ಲಿ ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    2003ರಲ್ಲಿ ಕೇಂದ್ರ ಆರೋಗ್ಯ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಹೆಚ್‍ಐವಿ ರೋಗದ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು, ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದರು. ಈ ಮೂಲಕ ಮುಟ್ಟುವುದು ಮತ್ತು ತಬ್ಬಿಕೊಳ್ಳುವುದರಿಂದ ಹೆಚ್‍ಐವಿ ಹರಡುವುದಿಲ್ಲ ಎಂದು ಜನರಿಗೆ ಸಂದೇಶ ನೀಡಿದ್ದರು.

    ಈಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಪಿಯೂ ನಾಯರ್ ಎಂಬುವರು ಈ ಫೋಟೋವನ್ನು ಟ್ವಿಟ್ಟರ್‍ ನಲ್ಲಿ ಹಾಕಿ “ಹಳೇಯ ಫೋಟೋ, ಸುಷ್ಮಾ ಜೀ ಹೆಚ್‍ಐವಿ ಪೀಡಿತ ಇಬ್ಬರು ಕೇರಳದ ಮಕ್ಕಳನ್ನು ಅಪ್ಪಿಕೊಂಡಿದ್ದಾರೆ. ಅ ಮಕ್ಕಳಿಗೆ ತಮ್ಮ ತಾಯಿಯಿಂದ ಕಾಯಿಲೆ ಬಂದಿದೆ (ಮಕ್ಕಳ ಪೋಷಕರು ಹೆಚ್‍ಐವಿ ಕಾರಣದಿಂದ ಮೃತ ಪಟ್ಟಿದ್ದರು) ಈ ಮಕ್ಕಳಿಂದ ಹೆಚ್‍ಐವಿ ಹರಡುತ್ತದೆ ಎಂಬ ಕಾರಣಕ್ಕೆ ಶಾಲೆಯಿಂದ ಹೊರಹಾಕಲಾಗಿತ್ತು” ಎಂದು ಬರೆದುಕೊಂಡಿದ್ದಾರೆ.

    ಈ ಮಕ್ಕಳನ್ನು ಭೇಟಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಯೋಚನೆಗಳನ್ನು ಪ್ರಸ್ತಾಪ ಮಾಡಿದ್ದರು. ನಂತರ ಅ ಮಕ್ಕಳನ್ನು ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಭೇಟಿಯಾಗಿ ಅ ಇಬ್ಬರು ಹೆಚ್‍ಐವಿ ಪೀಡಿತ ಮಕ್ಕಳನ್ನು ಶಾಲೆ ಸೇರಿಸುವ ವ್ಯವಸ್ಥೆ ಮಾಡಿದ್ದರು.

    ಇದಾದ ನಂತರ ಸುಷ್ಮಾ ಸ್ವರಾಜ್ ಅವರು ಅ ಇಬ್ಬರು ಮಕ್ಕಳ ಶಿಕ್ಷಣದ ಬಗ್ಗೆ ಖಚಿತಪಡಿಸಿಕೊಂಡು. ಈ ರೀತಿಯ ಮಕ್ಕಳಿಗಾಗಿ ವಿಶೇಷ ಬೋಧಕರನ್ನು ನೇಮಿಸಬೇಕು. ದೇಶದ ವಿವಿಧ ಭಾಗಗಳಲ್ಲಿ ಈ ರೀತಿ ಹೆಚ್‍ಐವಿ ಪೀಡಿತ ಮಕ್ಕಳು ಇದ್ದಾರೆ. ಅವರಿಗೂ ಶಿಕ್ಷಣ ಕೊಡಿಸಬೇಕು ಎಂದು ಹೇಳಿದ್ದರು.

    ಇಂದು ಈ ವಿಚಾರದ ಬಗ್ಗೆ ಮಾತನಾಡಿರುವ ಹೆಚ್‍ಐವಿ ಪೀಡಿತ ಮಕ್ಕಳ ಅಜ್ಜಿ ಸಲ್ಲಮ್ಮ “ಸುಷ್ಮಾ ಸ್ವರಾಜ್ ಅವರ ಅಪ್ಪುಗೆಯಿಂದ ನನ್ನ ಮೊಮ್ಮಕ್ಕಳ ಜೀವನ ಸಂಪೂರ್ಣ ಬದಲಾಗಿದೆ. ಅವರ ವಿದ್ಯಾಭ್ಯಾಸಕ್ಕೆಂದು ನಮಗೆ ತಿಂಗಳಿಗೊಮ್ಮೆ ಬೆಂಬಲ ರೂಪದಲ್ಲಿ ಹಣ ಬರುತ್ತಿದೆ. ನಾವು ಅವಳನ್ನು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದ್ದಾರೆ.

    ಇಂದು ಅವರ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದ ಸಲ್ಲಮ್ಮ, ನನ್ನ ಇಬ್ಬರು ಹೆಚ್‍ಐವಿ ಪೀಡಿತ ಮೊಮ್ಮಕ್ಕಳ ಮೇಲೆ ಅವರು ದಯೆ ತೋರಿಸದೆ ಇದ್ದರೆ 2003ರಲ್ಲೆ ನನ್ನ ಮತ್ತು ನನ್ನ ಮೊಮ್ಮಕ್ಕಳ ಜೀವನ ಮುಗಿದು ಹೋಗುತಿತ್ತು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಹೆಚ್‍ಐವಿ ಪೀಡಿತ ಈ ಇಬ್ಬರು ಮಕ್ಕಳಲ್ಲಿ ಹೆಣ್ಣು ಮಗು 2010ರಲ್ಲಿ ಸಾವನ್ನಪ್ಪಿದ್ದು. ಯುವಕನಿಗೆ 23 ವರ್ಷವಾಗಿದೆ.

  • ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಐಎಎಸ್ ಅಧಿಕಾರಿ – ಅಪಘಾತದಲ್ಲಿ ಪತ್ರಕರ್ತ ಸಾವು

    ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಐಎಎಸ್ ಅಧಿಕಾರಿ – ಅಪಘಾತದಲ್ಲಿ ಪತ್ರಕರ್ತ ಸಾವು

    ತಿರುವನಂತಪುರ: ಕುಡಿದು ಕಾರು ಚಲಾಯಿಸಿದ ಐಎಎಸ್ ಅಧಿಕಾರಿ ಪತ್ರಕರ್ತನ ಸಾವಿಗೆ ಕಾರಣರಾಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಮೃತ ಪತ್ರಕರ್ತನನ್ನು ಕೆಎಂ ಬಷೀರ್ (35) ಎಂದು ಗುರುತಿಸಲಾಗಿದೆ. ಮಲಯಾಳಂ ಪತ್ರಿಕೆಯ ವರದಿಗಾರನಾಗಿ ಬಷೀರ್ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರು ನೀಡಿರುವ ಮಾಹಿತಿಯ ಅನ್ವಯ 2012ರ ಬ್ಯಾಚ್ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಾಮನ್ ಹಾಗೂ ಮಹಿಳೆಯೊಬ್ಬರು ಕಾರಿನಲ್ಲಿ ಇದ್ದರು ಎಂದು ತಿಳಿಸಿದ್ದಾರೆ. ರಾತ್ರಿ ಸುಮಾರು 1.35ರ ಸಮಯದಲ್ಲಿ ಅಪಘಾತ ನಡೆದಿದ್ದು, ವೇಗ, ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಅಪಘಾತ ನಡೆದ ಕೂಡಲೇ ಸ್ಥಳೀಯರು ಪತ್ರಕರ್ತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಆ ವೇಳೆಗೆ ಆತ ಮೃತ ಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಐಎಎಸ್ ಅಧಿಕಾರಿ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿದು ಚಾಲನೆ ಮಾಡಿರುವ ಆರೋಪದ ಕಾರಣ ಅವರ ರಕ್ತದ ಮಾದರಿಗಳನ್ನು ಪರೀಕ್ಷೆ ಕಳುಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆಟೋ ಚಾಲಕ ಮಣಿಕಂಠನ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಅಪಘಾತ ವೇಳೆ ಐಎಎಸ್ ಅಧಿಕಾರಿ ಕುಡಿದ್ದರು ಎಂದು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಐಎಎಸ್ ಅಧಿಕಾರಿ ಅಮೆರಿಕದಿಂದ ವಾಪಸ್ ಆಗಿದ್ದರು. ಅವರನ್ನು ಆಗಸ್ಟ್ 1 ರಂದು ಸರ್ವೆ ಮತ್ತು ಭೂ ದಾಖಲೆ ನಿರ್ದೇಶಕರಾಗಿ ಸೇವೆ ಸೇರ್ಪಡೆಯಾಗಿದ್ದರು ಎಂಬ ಮಾಹಿತಿ ಲಭಿಸಿದೆ. 2012ರ ಐಎಎಸ್ ಬ್ಯಾಚ್‍ನಲ್ಲಿ ಇವರು 2ನೇ ರ್‍ಯಾಂಕ್ ಪಡೆದಿದ್ದರು.

    ಪತ್ರಕರ್ತನ ಸಾವಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಪ್ರತಿಪಕ್ಷ ನಾಯಕರು ಸಂತಾಪ ಸೂಚಿಸಿದ್ದಾರೆ. ಕೇರಳ ಪತ್ರಕರ್ತರ ಸಂಘಟನೆ ಘಟನೆ ಕುರಿತು ಸಂಪೂರ್ಣ ತನಿಖೆಗೆ ಆಗ್ರಹಿಸಿದೆ.