Tag: kerala

  • ಗೋವಾ ಟ್ರಿಪ್‍ನಲ್ಲಿ ಬಸ್ ಚಾಲಕನಿಂದ ವಿದ್ಯಾರ್ಥಿನಿಯರಿಗೆ ಗೇರ್ ಚೇಂಜ್ ಪಾಠ – ವಿಡಿಯೋ ವೈರಲ್

    ಗೋವಾ ಟ್ರಿಪ್‍ನಲ್ಲಿ ಬಸ್ ಚಾಲಕನಿಂದ ವಿದ್ಯಾರ್ಥಿನಿಯರಿಗೆ ಗೇರ್ ಚೇಂಜ್ ಪಾಠ – ವಿಡಿಯೋ ವೈರಲ್

    – ಚಲಿಸ್ತಿರುವಾಗ್ಲೇ ಯುವತಿಯರಿಗೆ ಗೇರ್ ಚೇಂಜ್ ಹೇಳಿಕೊಟ್ಟ
    – 6 ತಿಂಗಳು ಚಾಲಕನ ಡ್ರೈವಿಂಗ್ ಲೈಸೆನ್ಸ್ ಅಮಾನತು

    ತಿರುವನಂತಪುರಂ: ಚಾಲಕನೊಬ್ಬ ಕಾಲೇಜು ಯುವತಿಯರಿಗೆ ಚಲಿಸುತ್ತಿರುವಾಗಲೇ ಬಸ್ ಗೇರ್ ಚೇಂಜ್ ಮಾಡಲು ಹೇಳಿಕೊಟ್ಟು ಫಜೀತಿಗೆ ಸಿಲುಕಿದ ಘಟನೆ ಕೇರಳದಲ್ಲಿ ನಡೆದಿದೆ.

    ಚಾಲಕ ಯುವತಿಯರಿಗೆ ಗೇರ್ ಚೇಂಜ್ ಮಾಡುವುದನ್ನು ಹೇಳಿಕೊಡುತ್ತಿರುವಾಗ ಬಸ್ಸಿನಲ್ಲಿದ್ದ ಇತರರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋ ವೈರಲಾದ ಬೆನ್ನಲ್ಲೇ ಬಸ್ ಚಾಲಕನ ಲೈಸನ್ಸ್ ನ್ನು 6 ತಿಂಗಳುಗಳ ಕಾಲ ಅಮಾನತು ಮಾಡಲಾಗಿದೆ.

    ಕಾಲೇಜು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಸ್ ಕೇರಳ, ಗೋವಾ ಟ್ರಿಪ್ ಹೊರಟಿತ್ತು. ಈ ವೇಳೆ ಚಾಲಕ ವಿದ್ಯಾರ್ಥಿನಿಯರಿಗೆ ಖುಷಿಯಿಂದಲೇ ಗೇರ್ ಬದಲಾವಣೆ ಮಾಡುವುದನ್ನು ಹೇಳಿಕೊಟ್ಟು ಇದೀಗ ಕೆಲಸ ಕಳೆದುಕೊಂಡಿದ್ದಾನೆ.

    28 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಚಾಲಕನ ಪಕ್ಕದಲ್ಲೇ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಸಂಚಾರ ಪರಿಸ್ಥಿತಿ ಗಮನಿಸಿ ಚಾಲಕ ಗೇರ್ ಬದಲಿಸುವಂತೆ ಹೇಳಿಕೊಡುತ್ತಾನೆ. ಯುವತಿಯರು ಕೂಡ ಚಾಲಕನ ನಿರ್ದೇಶನದಂತೆ ಪದೇ ಪದೇ ಗೇರ್ ಬದಲಾಯಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರ್ ಟಿಓ ಅಧಿಕಾರಗಳ ಗಮನಕ್ಕೆ ಬಂದಿದ್ದು, ಕೂಡಲೇ ಅವರು 6 ತಿಂಗಳುಗಳ ಕಾಲ ಚಾಲಕನ ಚಾಲನಾ ಪರವಾನಗಿಯನ್ನು ಅಮಾನತು ಮಾಡಿದ್ದಾರೆ.

    ಚಾಲಕನನ್ನು ವಯನಾಡಿನ ಎಂ ಶಾಜಿ ಎಂದು ಗುರುತಿಸಲಾಗಿದೆ. ಕಲ್ಪೆಟ್ಟ ಆರ್ ಟಿಓ ಅಧಿಕಾರಿ ಬಿಜು ಜೇಮ್ಸ್ ಶಾಜಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಯ ಬಳಿಕ ಅಜಾಗರೂಕತೆ ವಾಹನ ಚಾಲನೆ ಮಾಡಿದ್ದಕ್ಕಾಗಿ 6 ತಿಂಗಳು ಲೈಸೆನ್ಸ್ ಅಮಾನತು ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ- ತೃಪ್ತಿ ದೇಸಾಯಿ

    ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ- ತೃಪ್ತಿ ದೇಸಾಯಿ

    ಮುಂಬೈ: ಕೇರಳ ಸರ್ಕಾರದಿಂದ ರಕ್ಷಣೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನವೆಂಬರ್ 20ರ ನಂತರ ಶಬರಿಮಲೆ ದೇವಸ್ಥಾನಕ್ಕೆ ತೆರಳುವುದಾಗಿ ಬಲಪಂಥೀಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.

    ನವೆಂಬರ್ 20ರ ನಂತರ ನಾನು ಶಬರಿಮಲೆಗೆ ಹೋಗುತ್ತೇನೆ. ನಾವು ಕೇರಳ ಸರ್ಕಾರದಿಂದ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದೇವೆ. ನಮಗೆ ರಕ್ಷಣೆ ನೀಡುವುದು ಬಿಡುವುದು ಅವರಿಗೆ ಬಿಟ್ಟದ್ದು. ರಕ್ಷಣೆ ಒದಗಿಸದಿದ್ದರೂ ನಾನು ದರ್ಶನಕ್ಕಾಗಿ ಶಬರಿಮಲೆಗೆ ಭೇಟಿಯೇ ನೀಡುತ್ತೇನೆ ಎಂದು ತೃಪ್ತಿ ಹೇಳಿದ್ದಾರೆ.

    ಶಬರಿಮಲೆ ದೇವಸ್ಥಾನವನ್ನು ತೆರೆಯುವ ಮುನ್ನ ಕೇರಳ ದೇವಸ್ವಂ ಮಂಡಳಿ ಸಚಿವ ಕೆ.ಸುರೇಂದ್ರನ್ ಈ ಕುರಿತು ಪ್ರತಿಕ್ರಿಯಿಸಿ, ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಾಜ್ಯ ಸರ್ಕಾರ ರಕ್ಷಣೆ ನೀಡುವುದಿಲ್ಲ. ರಕ್ಷಣೆ ಅಗತ್ಯವಿರುವವರು ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು ಎಂದು ತಿಳಿಸಿದರು.

    ತೃಪ್ತಿ ದೇಸಾಯಿ ಅವರಂಥ ಕಾರ್ಯಕರ್ತರು ತಮ್ಮ ಬಲ ತೋರಿಸುವ ಸ್ಥಳವನ್ನಾಗಿ ದೇವಸ್ಥಾನವನ್ನು ನೋಡಬಾರದು. ರಾಜ್ಯ ಸರ್ಕಾರವು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಕ್ಷಣೆ ನೀಡುವುದಿಲ್ಲ. ಅವರಿಗೆ ಪೊಲೀಸ್ ರಕ್ಷಣೆ ಬೇಕಾದರೆ ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.

    ತನ್ನ ಆದೇಶವನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠವು ನ.14ರಂದು ತೀರ್ಪು ನೀಡಿದೆ. ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬೇಕೇ ಬೇಡವೇ ಎಂಬುದರ ಕುರಿತು 3:2 ಅನುಪಾತದಲ್ಲಿ ತೀರ್ಪು ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಏಳು ಸದಸ್ಯರಿರುವ ಪೀಠಕ್ಕೆ ವರ್ಗಾಯಿಸಲಾಗಿದೆ. ಈ ಎಲ್ಲದರ ಮಧ್ಯೆ ಸಚಿವರು ಈ ಹೇಳಿಕೆ ನೀಡಿದ್ದಾರೆ.

    ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠವು ಸೆಪ್ಟೆಂಬರ್ 2018ರಂದು ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ನಂತರ ತೀರ್ಪನ್ನು ಮರು ಪರಿಶೀಲಿಸುವಂತೆ ಹಲವು ಅರ್ಜಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ 7 ಸದಸ್ಯರ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.

    ಮರು ಪರಿಶೀಲನಾ ಅರ್ಜಿಯಲ್ಲಿ ಜನರ ನಂಬಿಕೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿರುವ ಅಧಿಕಾರದ ಕುರಿತು ಪ್ರಶ್ನಿಸಲಾಗಿದೆ. ಅಲ್ಲದೆ ದೇವಾಲಯದ ದೇವತೆ ಬ್ರಹ್ಮಚಾರಿ ಹಾಗೂ ಮುಟ್ಟಾದ ಮಹಿಳಾ ಆರಾಧಕರ ಪ್ರವೇಶದಿಂದ ಶತಮಾನಗಳಷ್ಟು ಹಳೆಯ ನಂಬಿಕೆಗೆ ಧಕ್ಕೆಯಾಗಲಿದೆ ಎಂದು ವಾದಿಸಲಾಗಿದೆ.

  • ಬಂಡೀಪುರ ರಾತ್ರಿ ಸಂಚಾರ ನಿಷೇಧ- ಸುಪ್ರೀಂಗೆ ಕೇಂದ್ರದ ಅಫಿಡೆವಿಟ್

    ಬಂಡೀಪುರ ರಾತ್ರಿ ಸಂಚಾರ ನಿಷೇಧ- ಸುಪ್ರೀಂಗೆ ಕೇಂದ್ರದ ಅಫಿಡೆವಿಟ್

    ನವದೆಹಲಿ: ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಕೆ ಮಾಡಿದೆ.

    ಕೇರಳ ಮತ್ತು ಕರ್ನಾಟಕ ನಡುವಿನ ಸಂಚಾರಕ್ಕೆ ಕೇಂದ್ರ ಸರ್ಕಾರ ಅಫಿಡೆಟಿವ್‍ನಲ್ಲಿ ಪರ್ಯಾಯ ರಸ್ತೆ ಮಾರ್ಗ ರಚನೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಕರ್ನಾಟಕ ರಾಜ್ಯ ಹೆದ್ದಾರಿ 89 ಮತ್ತು 90ರ ಮೂಲಕ ಕೇರಳ ತಲುಪಬಹುದಾಗಿದ್ದು, ಎಸ್‍ಎಚ್ 89 ಮಡಿಕೇರಿ, ಗೋಣಿಕೊಪ್ಪ, ಕುಟ್ಟಾ ಮೂಲಕ ಕೇರಳ ತಲುಪಬಹುದಾಗಿದೆ. ಅಲ್ಲದೇ ಎಸ್‍ಎಚ್ 90 ಹುಣಸೂರು ನಿಂದ ತಲಕಾವೇರಿ ಮಾರ್ಗ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 211 ಕಿಲೋ ಮೀಟರ್ ಪರ್ಯಾಯ ಮಾರ್ಗ ಸೂಚಿಸಿದೆ. ಇತ್ತ ಕೇರಳ ಭಾಗ ಪ್ರವೇಶಕ್ಕೆ ಜಿಲ್ಲಾ ಹೆದ್ದಾರಿ ಬಳಸಿ ವೈಯನಾಡು ತಲುಪಬಹುದಾಗಿದೆ.

    ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಲಾಗಿದ್ದು, ಈ ಕ್ರಮವನ್ನು ರದ್ದುಪಡಿಸಬೇಕು ಎಂದು ತಮಿಳುನಾಡು ಸರ್ಕಾರ ಒತ್ತಾಯ ಮಾಡಿತ್ತು. ಅಲ್ಲದೇ ವಯನಾಡು ಸಂಸದ ರಾಹುಲ್ ಗಾಂಧಿ ಅವರು ಕೂಡ ವಯನಾಡಿನಲ್ಲಿ ನಡೆದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

    ದೇಶದ 50ಕ್ಕೂ ಹೆಚ್ಚು ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶವಿದೆ. ಆದರೆ ಬಂಡೀಪುರದಲ್ಲಿ ಮಾತ್ರ ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ ಎಂದು ಕೇರಳ ಸರ್ಕಾರ ವಾದ ಮುಂದಿಟ್ಟಿತ್ತು. 2009ರಲ್ಲಿ ರಾಜ್ಯ ಸರ್ಕಾರ ಬಂಡೀಪುರ ಅಭಯಾರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರ ವರೆಗೂ ಸಂಚಾರ ನಿಷೇಧ ಮಾಡಿ ಆದೇಶ ನೀಡಿತ್ತು. ಹುಲಿ, ಕಾಡೆಮ್ಮೆ, ಆನೆ ಸೇರಿದಂತೆ ಆನೇಕ ಕಾಡು ಪ್ರಾಣಿಗಳು ರಾತ್ರಿ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿದ್ದರಿಂದ ಸರ್ಕಾರ ನಿಷೇಧವನ್ನು ಜಾರಿ ಮಾಡಿತ್ತು. ಬಂಡೀಪುರವನ್ನು ಹಾದುಹೋಗುವ ಹೆದ್ದಾರಿಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 275 ಮತ್ತು ರಾಜ್ಯ ಹೆದ್ದಾರಿ 90 ಅನ್ನು ಸೂಚಿಸಲಾಗಿತ್ತು.

  • ನಿಮ್ಮನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ – ಕೇರಳ ಸಿಎಂಗೆ ಮಾವೋವಾದಿಗಳಿಂದ ಪತ್ರ

    ನಿಮ್ಮನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ – ಕೇರಳ ಸಿಎಂಗೆ ಮಾವೋವಾದಿಗಳಿಂದ ಪತ್ರ

    ತಿರುವನಂತಪುರಂ: ತಮ್ಮ ಗುಂಪಿನ ಕೆಲ ನಕ್ಸಲರನ್ನು ಕೊಂದಿದ್ದಕ್ಕೆ ಕೇರಳದ ಸಿಎಂ ಪಿಣರಾಯಿ ವಿಜಯನ್‍ಗೆ ಮಾವೋವಾದಿಗಳು ಜೀವ ಬೆದರಿಕೆ ಪತ್ರ ರವಾನಿಸಿದ್ದಾರೆ.

    ಕೆಳೆದ ಅಕ್ಟೋಬರ್ ತಿಂಗಳಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಗಾಲಿ ಕಾಡುಗಳಲ್ಲಿ ಮಾವೋವಾದಿಗಳು ಮತ್ತು ಕೇರಳ ವಿಶೇಷ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಮೃತಪಟ್ಟಿದ್ದರು. ಈ ಸಾವಿನ ಪ್ರತೀಕಾರವನ್ನು ತೀರಿಸಿಕೊಳ್ಳಲು ಮುಖ್ಯಮಂತ್ರಿ ಅವರನ್ನು ಕೊಲ್ಲುತ್ತೇವೆ ಎಂದು ಪತ್ರ ಬರೆಯಲಾಗಿದೆ.

    ಈ ಪತ್ರವನ್ನು ಕೇರಳದ ವಡಕಾರ ಪೊಲೀಸ್ ಠಾಣೆಗೆ ಕಳುಹಿಸಿದ್ದು, ಹತ್ಯೆಗೀಡಾದ ಮಾವೋವಾದಿಗಳಿಗೆ ಬಂದ ಪರಿಸ್ಥಿತಿಯನ್ನೇ ಸಿಎಂ ವಿಜಯನ್ ಮುಂದೆ ಎದುರಿಸಬೇಕಾಗುತ್ತದೆ ಎಂದು ನಕ್ಸಲರ ತಂಡದ ಕಬಿನಿಡಾಲ್ ಕ್ರಿಯಾ ಸಮಿತಿಯ ಉಪಾಧ್ಯಕ್ಷ ಬೇಡರ್ ಮೂಸಾ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ. ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಒಳಗೊಂಡಂತೆ ಕಳೆದ ತಿಂಗಳು ದಟ್ಟ ಕಾಡುಗಳಲ್ಲಿ ತಮ್ಮ ನಾಲ್ವರು ಸ್ನೇಹಿತರು ಸಾವನ್ನಪ್ಪಿದ ನಂತರ ಮಾವೋವಾದಿಗಳು ವಿಜಯನ್ ಸರ್ಕಾರದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

    2016 ರಲ್ಲಿ ಪಿಣರಾಯಿ ವಿಜಯನ್ ಕೇರಳ ಸಿಎಂ ಆದ ನಂತರ ಕೇರಳ ರಾಜ್ಯದಲ್ಲಿ ಏಳು ಮಾವೋವಾದಿಗಳನ್ನು ತಟಸ್ಥಗೊಳಿಸಲಾಗಿದೆ. ಆದ್ದರಿಂದ ಮಲಯಾಳಂ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ ಕೇರಳ ಸಿಎಂ ತಮ್ಮ ಏಳು ಮಂದಿ ಸ್ನೇಹಿತರ ಹತ್ಯೆಗೆ ಸೂಕ್ತ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇವರ ಜೊತೆಗೆ ಜನರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೆರಂಬರ ಸಬ್ ಇನ್ಸ್‍ಪೆಕ್ಟರ್ ಹರೀಶ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

    ಅಕ್ಟೋಬರ್ 28 ರಂದು ಬೆಳಗ್ಗೆ ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ನಾಲ್ವರು ಮಾವೋವಾದಿಗಳು ಹತರಾಗಿದ್ದರು. ಕೇರಳದ ಥಂಡರ್ ಬೋಲ್ಟ್ ಕಮಾಂಡೋ ತಂಡವು ಈ ಕಾರ್ಯಚರಣೆ ನಡೆಸಿದ್ದು, ಯಶಸ್ವಿಯಾಗಿ ನಾಲ್ವರನ್ನು ಹತ್ಯೆ ಮಾಡಿತ್ತು.

    ಇತ್ತೀಚಿಗೆ ಮಾವೋವಾದಿಗಳ ಉಪಟಳ ಕೇರಳದಲ್ಲಿ ಜಾಸ್ತಿಯಾಗಿದ್ದು, ಇವರನ್ನು ಸದೆಬಡಿಯಲು ಕೇರಳ ಪೊಲೀಸರು ಕಾದು ಕುಳಿತಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಮಾವೋವಾದಿಗಳು ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದರು. ಈ ವೇಳೆ ಪಾಲಕ್ಕಾಡ್ ಅರಣ್ಯದ ಮಂಚಕತ್ತಿ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿಯಾಗಿ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಕರ್ನಾಟಕ ತಮಿಳುನಾಡು ಮತ್ತು ಕೇರಳದಲ್ಲಿ ಮಾವೋವಾದಿಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದ್ದರಿಂದ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೆ ಕೇರಳದಲ್ಲಿ ಬಿಟ್ಟರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾವೋವಾದಿಗಳು ಕಾಣಿಸಿಕೊಂಡಿರಲಿಲ್ಲ. 2014 ರಿಂದ 2017ರವರೆಗೆ ಕೇರಳದಲ್ಲಿ ಮಾವೋವಾದಿಗಳ ವಿರುದ್ಧ 23 ವಿವಿಧ ಕೇಸ್‍ಗಳು ದಾಖಲಾಗಿತ್ತು.

  • ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ಕೇರಳ ನೆರೆಪೀಡಿತರಿಗೆ ನೀಡಿದ ವಿಶೇಷ ಚೇತನ

    ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ಕೇರಳ ನೆರೆಪೀಡಿತರಿಗೆ ನೀಡಿದ ವಿಶೇಷ ಚೇತನ

    – ಕಾಲಿನಿಂದಲೇ ಸಿಎಂ ಜೊತೆ ಕ್ಲಿಕ್ಕಿಸಿಕೊಂಡ ಸೆಲ್ಫಿ ವೈರಲ್

    ತಿರುವನಂತಪುರಂ: ಭೀಕರ ನೆರೆಯಿಂದ ಕೇರಳ ಅಕ್ಷರಶಃ ನಲುಗಿಹೋಗಿದೆ. ನೆರೆ ಪೀಡಿತ ಪ್ರದೇಶಗಳ ಜನರ ಪಾಡು ಮೂರಾಬಟ್ಟೆಯಾಗಿದೆ. ಹೀಗಾಗಿ ಕೇರಳ ನೆರ ಸಂತ್ರಸ್ತರ ನೆರವಿಗೆ ವಿಶೇಷ ಚೇತನ ಚಿತ್ರ ಕಲಾವಿದರೊಬ್ಬರು ಸ್ವಯಃ ಪೇರಿತರಾಗಿ ಮುಂದೆ ಬಂದಿದ್ದು, ರಿಯಾಲಿಟಿ ಶೋ ಒಂದರಲ್ಲಿ ಗೆದ್ದ ಸಂಪೂರ್ಣ ಹಣವನ್ನು ಕೇರಳ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ.

    ಕೇರಳದ ಅಲತ್ತೂರಿನ ವಿಶೇಷ ಚೇತನ ಪ್ರಣವ್ ಬಾಲಸುಬ್ರಹ್ಮಣ್ಯನ್ ಅವರು ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿರುವ ಪ್ರಣವ್ ಅವರು ಕಾಲಿನಿಂದಲೇ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು ಸಾಕಷ್ಟು ಹೆಸರುಗಳಿಸಿದ್ದಾರೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯ್‍ನ್ ಅವರನ್ನು ಪ್ರಣವ್ ಭೇಟಿಯಾಗಿ ಕೇರಳ ನೆರೆಸಂತ್ರಸ್ತರ ನೆರವಿಗಾಗಿ ದೇಣಿಗೆ ಚೆಕ್ ನೀಡಿದ್ದಾರೆ.

    https://twitter.com/vijayanpinarayi/status/1194138212169445376

    ಅಲ್ಲದೆ ಇದೇ ವೇಳೆ ಪ್ರಣವ್ ಕಾಲಿನ ಬೆರಳಿಂದಲೇ ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ವಿಶೇಷ ಚೇತನರಾಗಿದ್ದರೂ ಪ್ರಣವ್ ಬೇರೆಯವರಿಗೆ ಸಹಾಯ ಮಾಡುತ್ತಿರುವ ಗುಣ ಪಿಣರಾಯಿ ಅವರ ಮನಗೆದ್ದಿದೆ. ಹೀಗಾಗಿ ಪ್ರಣವ್ ಜೊತೆಗೆ ತಾವಿರುವ ಫೋಟೋಗಳನ್ನು ಪಿಣರಾಯಿ ಅವರು ಟ್ವೀಟ್ ಮಾಡಿ ಪ್ರಣವ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಅವರೊಂದಿಗೆ ಕಳೆದ ಕ್ಷಣದ ಬಗ್ಗೆ ಹಂಚಿಕೊಂಡಿದ್ದಾರೆ.

    ಇಂದು(ಮಂಗಳವಾರ) ಬೆಳಗ್ಗೆ ನನಗೆ ಹೃದಯಸ್ಪರ್ಶಿ ಅನುಭವವಾಯಿತು. ಅಲತ್ತೂರಿನ ಚಿತ್ರ ಕಲಾವಿದ ಪ್ರಣವ್ ಕಚೇರಿಗೆ ಆಗಮಿಸಿ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಹಾಗೆಯೇ ವಿಶೇಷ ಚೇತನರಿಗೆ ಕೇರಳ ಸರ್ಕಾರ ನೀಡುತ್ತಿರುವ ಸಹಕಾರಕ್ಕೆ ಪ್ರಣವ್ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡು ಪ್ರಣವ್ ಜೊತೆಗಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

    https://twitter.com/vinesh2112/status/1194290285917851649

    ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪ್ರಣವ್ ಸಹಾಯ ಗುಣಕ್ಕೆ ನೆಟ್ಟಿಗರು ಮನಸೋತ್ತಿದ್ದಾರೆ. ಎಲ್ಲವೂ ಸರಿಯಾಗಿದ್ದರು ಜನರು ಇನ್ನೊಬ್ಬರ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಅಂತಹದರಲ್ಲಿ ವಿಶೇಷ ಚೇತನರಾಗಿದ್ದರೂ ಬೇರೊಬ್ಬರ ನೆರವಿಗೆ ಬಂದ ಪ್ರಣವ್ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇಬೇಕು. ನೆರೆ ಪೀಡಿತರಿಗೆ ನೆರವಾದ ಪ್ರಣವ್ ಅವರಿಗೆ ಸಲಾಂ ಎಂದು ಗೌರವ ಸಲ್ಲಿಸಿದ್ದಾರೆ.

  • ಮನೆಯವರ ಮುಂದೆಯೇ ಅವಮಾನ – ಪ್ರೀತಿಸಿದ ಯುವಕ ಆತ್ಮಹತ್ಯೆ, ಯುವತಿ ಗಂಭೀರ

    ಮನೆಯವರ ಮುಂದೆಯೇ ಅವಮಾನ – ಪ್ರೀತಿಸಿದ ಯುವಕ ಆತ್ಮಹತ್ಯೆ, ಯುವತಿ ಗಂಭೀರ

    ತಿರುವನಂತಪುರಂ: ಪ್ರೀತಿ ವಿಚಾರವಾಗಿ ಕುಟುಂಬದ ಮುಂದೆಯೇ ಅವಮಾನ ಮಾಡಿದ್ದಕ್ಕೆ ಕೇರಳದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಂತ್ರಸ್ತನನ್ನು ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಮೂಲದ ಶಾಹೀರ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಮುಂದೆ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಅವಮಾನ ಮಾಡಿದ್ದಾರೆ ಎಂದು ನೊಂದುಕೊಂಡು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಶಾಹೀರ್ ಸ್ಥಳೀಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದು ಹುಡುಗಿಯರ ಸಂಬಂಧಿಕರಿಗೆ ತಿಳಿದಿದೆ. ಆಗ ಹುಡುಗಿಯ ಕಡೆಯವರು ಆತನನ್ನು ಸುತ್ತುವರಿದು ಯುವಕನ ಕುಟುಂಬದವರ ಮುಂದೆಯೇ ಆತನನ್ನು ಥಳಿಸಿದ್ದಾರೆ. ಅಲ್ಲದೆ ನಮ್ಮ ಕುಟುಂಬದ ಹುಡುಗಿಯನ್ನೇ ಪ್ರೀತಿಸಲು ಧೈರ್ಯ ಮಾಡಿದ್ದೀಯಾ ಎಂದು ಆತನ ಹೆತ್ತವರ ಮುಂದೆಯೇ ಹೊಡೆದಿದ್ದಾರೆ.

    ಈ ವೇಳೆ ಶಾಹೀರ್ ಸಹೋದರ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದಾಗ, ಹುಡುಗಿಯ ಸಂಬಂಧಿಕರು ಅವನನ್ನೂ ಹೊಡೆದಿದ್ದಾರೆ. ಶಾಹೀರ್ ಸಹೋದರನಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅವರ ಸಂಬಂಧದ ಕುರಿತು ಬಹಿರಂಗವಾಗಿದ್ದಕ್ಕೆ ಹಾಗೂ ಹಿಂಸಾಚಾರ ನಡೆದಿದ್ದನ್ನು ಸಹಿಸಲಾಗದೆ ಹುಡುಗಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾಳೆ. ಅವಳ ಸ್ಥಿತಿ ಸಹ ಗಂಭೀರವಾಗಿದೆ. ಅತ್ತ ಶಾಹೀರ್ ಸಹ ತನ್ನ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಕ್ಕಾಗಿ ನೋಂದುಕೊಂಡು ಪ್ರಾಣ ಬಿಡುವುದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ ಎಂದು ನಿರ್ಧರಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಅವನ ಸಾವಿನ ನಂತರ ಮಲಪ್ಪುರಂ ಪೊಲೀಸರು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಎಲ್ಲದರ ಮಧ್ಯೆ 22 ವರ್ಷದ ಯುವಕ ಮಾತ್ರ ಮಾಣ ಕಳೆದುಕೊಂಡಿದ್ದಾನೆ. ಐಪಿಸಿ ಸೆಕ್ಷನ್‍ನ ವಿವಿಧ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಪ್ರಸ್ತುತ ಮಾಹಿತಿ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಇವರೇನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

  • ಒಟ್ಟಿಗೆ ಜನಿಸಿದ ಐವರಲ್ಲಿ ನಾಲ್ವರಿಗೆ ಒಂದೇ ದಿನ ಮದ್ವೆ!

    ಒಟ್ಟಿಗೆ ಜನಿಸಿದ ಐವರಲ್ಲಿ ನಾಲ್ವರಿಗೆ ಒಂದೇ ದಿನ ಮದ್ವೆ!

    – ದೇಶಾದ್ಯಂತ ಸುದ್ದಿಯಾಗಿತ್ತು 5 ಮಕ್ಕಳ ಜನನ
    – ಪತಿ ಆತ್ಮಹತ್ಯೆ ಮಾಡಿದ್ರೂ ಕಷ್ಟದಿಂದ ಮಕ್ಕಳನ್ನು ಬೆಳೆಸಿದ ತಾಯಿ

    ತಿರುವನಂತಪುರ: ದೇವರ ನಾಡಿನಲ್ಲಿ 1995ನೇ ಇಸವಿಯಲ್ಲಿ ಅವರ ಹುಟ್ಟು ಭಾರೀ ಸದ್ದು ಮಾಡಿತ್ತು. ಹೌದು. ಒಂದೇ ಬಾರಿಗೆ ಐವರು ಮಕ್ಕಳ ಜನನವಾಗಿತ್ತು. ಆ ಬಳಿಕ ಅವರು ಶಾಲೆ, ಕಾಲೇಜು, ಮತದಾನ ಹೀಗೆ ತಮ್ಮ ಎಲ್ಲ ಮೊದಲುಗಳನ್ನು ಒಟ್ಟಿಗೆ ಮಾಡುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು.

    ಹೀಗೆ ತಮ್ಮೆಲ್ಲ ಮೊದಲುಗಳನ್ನು ಒಟ್ಟಿಗೆ ಮುಗಿಸಿ ಈ ಐವರಲ್ಲಿ ನಾಲ್ವರು ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮುಂದಿನ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇತ್ತ ತಮ್ಮೊಟ್ಟಿಗೆ ಜನಿಸಿದ್ದ ಸಹೋದರ ಮಾತ್ರ ಸಹೋದರಿಯರ ಮದ್ವೆ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ.

    1995ರ ನವೆಂಬರ್ 18ರಂದು ನಾಲ್ವರು ಹೆಣ್ಣು ಹಾಗೂ ಓರ್ವ ಮಗನ ಜನನವಾದ ಸಮಯದಲ್ಲಿ ತಂದೆ ಒಂದು ಸಣ್ಣ ವ್ಯಾಪಾರಿಯಾಗಿದ್ದರು. ಆದರೆ ಈ ಐವರು ಒಂದೇ ಬಾರಿ ಜನಿಸಿದ್ದರಿಂದ ಸಹಜವಾಗಿಯೇ ತಂದೆ ಅಚ್ಚರಿಗೊಳಗಾಗಿದ್ದರು. ಅಲ್ಲದೆ ಐವರಿಗೂ ಒಂದೇ ರೀತಿ ಹೆಸರು ಬರುವಂತೆ ಇಡಲಾಯಿತು. ಉತ್ರಜ, ಉತ್ತರ, ಉತ್ತಮ, ಉತ್ರ ಹಾಗೂ ಉತ್ರಜನ್ ಎಂಬುದಾಗಿ ಇವರುಗಳಿಗೆ ನಾಮಕರಣ ಮಾಡಲಾಯಿತು. ಯಾಕಂದ್ರೆ ಇವರೆಲ್ಲರೂ ಮಲಯಾಳಂ ಕ್ಯಾಲೆಂಡರ್ ಪ್ರಕಾರ ಉತ್ರಮ್(ಉತ್ತರ) ನಕ್ಷತ್ರದಲ್ಲಿ ಹುಟ್ಟಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ‘ಉ’ನಿಂದ ಪ್ರಾರಂಭವಾಗುವ ಅಕ್ಷರದಿಂದ ಹೆಸರಿಡಲಾಯಿತು.

    ಐವರು ಮಕ್ಕಳ ಆಗಮನವಾಗುತ್ತಿದ್ದಂತೆಯೇ ತಮ್ಮ ಮನೆಯ ಹೆಸರು ಬದಲಾಯಿಸಿ `ಪಂಚರತ್ನಮ್'(ಐದು ರತ್ನ) ಎಂದು ಮರು ಹೆಸರಿಡಲಾಯಿತು. ಬೆಳೆಯುತ್ತಾ ಮಕ್ಕಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದರು. ಆದರೆ ಇದು ಅವರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಈ ಐವರಿಗೂ ಒಂದೇ ತರನಾದ ಬಟ್ಟೆ, ಬ್ಯಾಗ್, ಕೊಡೆಗಳನ್ನು ನೀಡಲು ತಂದೆ ತುಂಬಾನೇ ಕಷ್ಟ ಪಡುತ್ತಿದ್ದರು. ಮಕ್ಕಳು ಕೂಡ ತಮಗೆ ಒಂದೇ ರೀತಿಯ ವಸ್ತುಗಳ ಆಗಬೇಕು ಎಂದು ತಂದೆಯನ್ನು ಒತ್ತಾಯಿಸುತ್ತಿದ್ದರು. ಹೀಗಾಗಿ ಬಡ ವ್ಯಾಪಾರಿಯಾಗಿದ್ದ ತಂದೆಗೆ ಮತ್ತಷ್ಟು ಕಷ್ಟವಾಗುತ್ತಿತ್ತು. ಆದರೂ ಧೃತಿಗೆಡದ ತಂದೆ ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸಿ ಅವರನ್ನು ಸಂತೈಸುತ್ತಿದ್ದರು.

    ಇತ್ತ ತಾಯಿಗೆ ಹೃದಯ ಸಮಸ್ಯೆ ಉಂಟಾಯಿತು. ಇದರ ಜೊತೆ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಕೂಡ ಎದುರಾಯಿತು. ಹೀಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾದವು. ದುರಂತವೆಂದರೆ ಐವರು ಹುಟ್ಟಿದ 9 ವರ್ಷಗಳ ಬಳಿಕ ಅಂದರೆ 2004 ನೇ ಇಸ್ವಿಯಲ್ಲಿ ತಂದೆ ಆತ್ಮಹತ್ಯೆಗೆ ಶರಣಾದರು. ಈ ಮೂಲಕ ಪತ್ನಿ ಹಾಗೂ ತನ್ನ ಐವರು ಮಕ್ಕಳನ್ನು ಅಗಲಿದರು.

    ತಂದೆಯ ಮರಣದ ಸುದ್ದಿ ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿತ್ತು. ಅಲ್ಲದೆ ಕುಟುಂಬದ ಸಹಾಯಕ್ಕೆ ಎಲ್ಲರೂ ಕೈಜೋಡಿಸಿದರು. ಪರಿಣಾಮ ತಾಯಿಗೆ ಸರ್ಕಾರಿ ಉದ್ಯೋಗ ಸಿಕ್ಕಿತು. ಇತ್ತ ಮಾಧ್ಯಮ ಮಂದಿಯೂ ಕುಟುಂಬದ ಜೀವನ ನಿರ್ವಹಣೆಗೆ ಸಹಾಯ ಮಾಡಿತು. ಅಂತೆಯೇ ತಾಯಿ ತನ್ನ ಮಕ್ಕಳನ್ನು ಚೆನ್ನಾಗಿ ಬೆಳೆಸಿ ಒಳ್ಳೆಯ ಶಿಕ್ಷಣವನ್ನೂ ನೀಡಿದ್ದು, ಇದೇ ತಿಂಗಳು ಈ ಐವರೂ 24ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

    ಈ ಐವರಲ್ಲಿ ಒಬ್ಬಳು ಫ್ಯಾಶನ್ ಡಿಸೈನರ್, ಇನ್ನಿಬ್ಬರು ಅರಿವಳಿಕೆ ತಂತ್ರಜ್ಞರು(ಅನಸ್ತೇಶಿಯಾ ಟೆಕ್ನಿಶಿಯನ್ಸ್), ಮತ್ತೊಬ್ಬಳು ಆನ್ ಲೈನ್ ಬರಹಗಾರ್ತಿಯಾಗಿದ್ದಾರೆ. ಸಹೋದರ ಉತ್ರಜನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

    ಪತಿಯ ಹಠಾತ್ ಮರಣದ ಬಳಿಕ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ದಿನಕಳೆದಂತೆ ನಾನು ನನ್ನ ಮಕ್ಕಳನ್ನು ಸಾಕಬೇಕು. ಅದಕ್ಕೋಸ್ಕರ ಎಷ್ಟು ಕಷ್ಟವಾದರೂ ಪರವಾಗಿಲ್ಲ ಎದುರಿಸುತ್ತೇನೆ ಎಂದ ಛಲ ಬಂತು. ಮನಸ್ಸಿದ್ದರೆ ಮಾರ್ಗ ಎಂಬಂತೆ ನಾನು ಐವರು ಮಕ್ಕಳೊಂದಿಗೆ ಬದುಕಿ ತೋರಿಸಿದೆ ಎಂದು ಗಂಡನ ಮರಣದ ಬಳಿಕ ಎದುರಿಸಿದ ಕಷ್ಟಗಳನ್ನು ನೆನಪಿಸಿಕೊಂಡು ಪತ್ನಿ ಕಣ್ಣೀರು ಹಾಕಿದ್ದಾರೆ.

    ಪತಿ ಜೀವಂತವಾಗಿದ್ದಾಗ ತನ್ನ ಐವರೂ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು ಎಂದು ಬಯಸಿದ್ದರು. ಅವರ ಕನಸನ್ನು ನನಸು ಮಾಡುವ ಸಲುವಾಗಿ ಒಂದೇ ದಿನ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ. ಆದರೆ ನನ್ನ ಮಗ ಇನ್ನಷ್ಟೂ ಎತ್ತರಕ್ಕೆ ಬೆಳೆಯಬೇಕೆಂಬ ಛಲ ಹೊಂದಿದ್ದು, ಹೀಗಾಗಿ ಆತನ ಮದುವೆ ಸ್ವಲ್ಪ ತಡವಾಗಬಹುದು ಎಂದು ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿಯಾಗಿರುವ ತಾಯಿ ತಿಳಿಸಿದ್ದಾರೆ.

  • ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಚಿಕ್ಕಮಗಳೂರು: ಕೇರಳದಲ್ಲಿ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮಹಿಳೆ ಸೇರಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ.

    ಮೃತಪಟ್ಟವನ್ನು ಶ್ರೀಮತಿ ಮತ್ತು ಸುರೇಶ್ ಅಲಿಯಾಸ್ ಮಹೇಶ್ ಎಂದು ಗುರುತಿಸಲಾಗಿದೆ. ಸೋಮವಾರ ಕೇರಳದ ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದರು. ಈ ಮೂವರಲ್ಲಿ ಶ್ರೀಮತಿ ಮತ್ತು ಸುರೇಶ್ ಕೂಡ ಇದ್ದರು ಎಂಬ ಮಾಹಿತಿ ಸಿಕ್ಕಿದೆ.

    ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದವಳಾದ ಶ್ರೀಮತಿ 2008ರಲ್ಲಿ ನಕ್ಸಲ್ ಚಟುವಟಿಕೆಗೆ ಸೇರಿದಳು. ಈಕೆಯ ವಿರುದ್ಧ ಸುಮಾರು 10 ರಿಂದ 12 ಪ್ರಕರಣಗಳಿವೆ. ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾದ ಸುರೇಶ್ ಕೂಡ 2004ರಲ್ಲೇ ನಕ್ಸಲ್ ಗುಂಪಿಗೆ ಸೇರಿಕೊಂಡಿದ್ದು, ಇತನ ವಿರುದ್ಧ 40 ಪ್ರಕರಣಗಳಿವೆ. ಈಗ ಇಬ್ಬರೂ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ.

    ಸೋಮವಾರ ಬೆಳಗ್ಗೆ ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದರು. ಕೇರಳದ ಥಂಡರ್ ಬೋಲ್ಟ್ ಕಮಾಂಡೋ ತಂಡವು ಈ ಕಾರ್ಯಚರಣೆ ನಡೆಸಿದ್ದು, ಯಶಸ್ವಿಯಾಗಿ ಮೂವರನ್ನು ಹತ್ಯೆ ಮಾಡಿತ್ತು.

    ಇತ್ತೀಚಿಗೆ ಮಾವೋವಾದಿಗಳ ಉಪಟಳ ಕೇರಳದಲ್ಲಿ ಜಾಸ್ತಿಯಾಗಿದ್ದು, ಇವರನ್ನು ಸದೆಬಡಿಯಲು ಕೇರಳ ಪೊಲೀಸರು ಕಾದು ಕುಳಿತಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಮಾವೋವಾದಿಗಳು ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದರು. ಈ ವೇಳೆ ಪಾಲಕ್ಕಾಡ್ ಅರಣ್ಯದ ಮಂಚಕತ್ತಿ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿಯಾಗಿ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಕರ್ನಾಟಕ ತಮಿಳುನಾಡು ಮತ್ತು ಕೇರಳದಲ್ಲಿ ಮಾವೋವಾದಿಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದ್ದರಿಂದ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೆ ಕೇರಳದಲ್ಲಿ ಬಿಟ್ಟರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾವೋವಾದಿಗಳು ಕಾಣಿಸಿಕೊಂಡಿರಲಿಲ್ಲ. 2014 ರಿಂದ 2017ರವರೆಗೆ ಕೇರಳದಲ್ಲಿ ಮಾವೋವಾದಿಗಳ ವಿರುದ್ಧ 23 ವಿವಿಧ ಕೇಸ್‍ಗಳು ದಾಖಲಾಗಿದ್ದವು.

  • ಪೊಲೀಸರಿಂದ ಗುಂಡಿನ ದಾಳಿ – ಮೂವರು ಮಾವೋವಾದಿಗಳು ಹತ್ಯೆ

    ಪೊಲೀಸರಿಂದ ಗುಂಡಿನ ದಾಳಿ – ಮೂವರು ಮಾವೋವಾದಿಗಳು ಹತ್ಯೆ

    ಕೊಚ್ಚಿ: ಕೇರಳದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

    ಇಂದು ಬೆಳಗ್ಗೆ ಪಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ. ಕೇರಳದ ಥಂಡರ್ಬೋಲ್ಟ್ ಕಮಾಂಡೋ ತಂಡವು ಈ ಕಾರ್ಯಚರಣೆ ನಡೆಸಿದ್ದು, ಯಶಸ್ವಿಯಾಗಿ ಮೂವರನ್ನು ಹತ್ಯೆ ಮಾಡಿದೆ.

    ಇತ್ತೀಚಿಗೆ ಮಾವೋವಾದಿಗಳ ಉಪಟಳ ಕೇರಳದಲ್ಲಿ ಜಾಸ್ತಿಯಾಗಿದ್ದು, ಇವರನ್ನು ಸದೆಬಡಿಯಲು ಕೇರಳ ಪೊಲೀಸರು ಕಾದು ಕುಳಿತಿದ್ದರು. ಅದರಂತೆ ಇಂದು ಬೆಳಗ್ಗೆ ಮಾವೋವಾದಿಗಳು ಪಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಪಲಕ್ಕಾಡ್ ಅರಣ್ಯದ ಮಂಚಕತ್ತಿ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ.

    ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲ ಸ್ಥಳಕ್ಕೆ ಬಂದಿದ್ದು, ಪರೀಶಿಲನೆ ಮಾಡುತ್ತಿದ್ದಾರೆ. ಸದ್ಯ ಸಾವನ್ನಪ್ಪಿದ ಮಾವೋವಾದಿಗಳ ಗುರುತು ಪತ್ತೆಯಾಗಿಲ್ಲ. ಇನ್ನೂ ಅಪಾರ ಪ್ರಮಾಣದಲ್ಲಿ ಮಾವೋವಾದಿಗಳು ಈ ಪ್ರದೇಶದಲ್ಲಿ ಅಡಗಿರಬಹುದು ಎಂದು ಕೊಂಬಿಂಗ್ ಕಾರ್ಯ ಮುಂದುವರೆದಿದೆ. ಉಳಿದ ಮಾವೋವಾದಿಗಳಿಗಾಗಿ ಕೇರಳ ಪೊಲೀಸರು ಶೋಧ ಕಾರ್ಯ ಮಾಡುತ್ತಿದ್ದಾರೆ.

    ಕೆಳೆದ ಕೆಲ ವರ್ಷಗಳಿಂದ ಕರ್ನಾಟಕ ತಮಿಳುನಾಡು ಮತ್ತು ಕೇರಳದಲ್ಲಿ ಮಾವೋವಾದಿಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದ್ದರಿಂದ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೆ ಕೇರಳದಲ್ಲಿ ಬಿಟ್ಟರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾವೋವಾದಿಗಳು ಕಾಣಿಸಿಕೊಂಡಿರಲಿಲ್ಲ. 2014 ರಿಂದ 2017 ರ ವರೆಗೆ ಕೇರಳದಲ್ಲಿ ಮಾವೋವಾದಿಗಳಿಂದ 23 ವಿವಿಧ ಕೇಸ್‍ಗಳು ದಾಖಲಾಗಿದ್ದವು.

  • ಯಶ್ ಮನೆ ಮುಂದೆ ಜಮಾಯಿಸಿದ ಕೇರಳ ಅಭಿಮಾನಿಗಳು

    ಯಶ್ ಮನೆ ಮುಂದೆ ಜಮಾಯಿಸಿದ ಕೇರಳ ಅಭಿಮಾನಿಗಳು

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಮನೆ ಮುಂದೆ ಕೇರಳ ಅಭಿಮಾನಿಗಳು ಜಮಾಯಿಸಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಿ ಖುಷಿಯಾಗಿದ್ದಾರೆ.

    ಕೇರಳ ಅಭಿಮಾನಿಗಳು ತಮ್ಮ ಮನೆಗೆ ಬಂದಿರುವುದನ್ನು ತಿಳಿದ ಯಶ್ ಖುಷಿಪಟ್ಟಿದ್ದಾರೆ. ಅಲ್ಲದೆ ಮನೆಯಿಂದ ಹೊರಬಂದು ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಅವರ ಜೊತೆ ಕೆಲ ಹೊತ್ತು ಸಮಯ ಕಳೆದಿದ್ದಾರೆ.

    ಯಶ್ ಮನೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಯಶ್ ಎಂಬ ಹೆಸರು ಇರುವ ಟಿ-ಶರ್ಟ್ ಅನ್ನು ಅವರಿಗೆ ನೀಡಿ ಖುಷಿ ವ್ಯಕ್ತಪಡಿಸಿದರು. ಅಭಿಮಾನಿಗಳ ಪ್ರೀತಿ ಕಂಡು ಯಶ್ ಸಂತಸಪಟ್ಟರು.

    ಅಭಿಮಾನಿಗಳು ಒಬ್ಬೊಬ್ಬರಾಗಿ ಯಶ್ ಅವರನ್ನು ಭೇಟಿ ಮಾಡಿ ಉಡುಗೊರೆಗಳನ್ನು ನೀಡಿದ್ದಾರೆ. ಈ ವೇಳೆ ಯಶ್ ‘ಕೆಜಿಎಫ್’ ಚಿತ್ರದ ‘ಪವರ್ ಫುಲ್ ಪೀಪಲ್ ಕಮ್ ಫ್ರಂ ಪವರ್ ಫುಲ್ ಪ್ಲೇಸಸ್’ ಎಂಬ ಡೈಲಾಗ್ ಹೊಡೆದಿದ್ದಾರೆ. ಸದ್ಯ ಯಶ್ ಅಭಿಮಾನಿಗಳನ್ನು ಭೇಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕೆಲವು ದಿನಗಳ ಹಿಂದೆ ಯಶ್ ಅವರ ಮನೆ ಮುಂದೆ ತೆಲುಗು ಹಾಗೂ ತಮಿಳು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿದ್ದರು. ಈಗ ಕೇರಳ ಅಭಿಮಾನಿಗಳು ಭೇಟಿ ಮಾಡಿರುವುದರಿಂದ ಯಶ್ ಮತ್ತಷ್ಟು ಖುಷಿಯಾಗಿದ್ದಾರೆ.