Tag: Kerala Polls

  • ಕೇರಳದಲ್ಲಿ ಕಾಂಗ್ರೆಸ್‌ ಪಕ್ಷ  ಅಸ್ತಿತ್ವದಲ್ಲಿ ಇಲ್ಲ – ಹಿರಿಯ ನಾಯಕ ಚಾಕೋ ರಾಜೀನಾಮೆ

    ಕೇರಳದಲ್ಲಿ ಕಾಂಗ್ರೆಸ್‌ ಪಕ್ಷ ಅಸ್ತಿತ್ವದಲ್ಲಿ ಇಲ್ಲ – ಹಿರಿಯ ನಾಯಕ ಚಾಕೋ ರಾಜೀನಾಮೆ

    ತಿರುವನಂತಪುರಂ: ಮಹತ್ವದ ಬೆಳವಣಿಗೆಯಲ್ಲಿ ಕೇರಳ ಕಾಂಗ್ರೆಸ್‌ ಹಿರಿಯ ನಾಯಕ ಪಿಸಿ ಚಾಕೋ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

    ಏಪ್ರಿಲ್‌ನಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡಯಲಿದ್ದು ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು ಗುಂಪುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 74 ವರ್ಷದ ಪಿ.ಸಿ. ಚಾಕೋ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಳುಹಿಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕಳೆದ ಕೆಲ ದಿನಗಳಿಂದ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದೆ. ನಿಜವಾಗಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿಲ್ಲ. ಇಲ್ಲಿ ಕಾಂಗ್ರೆಸ್‌(ಐ) ಮತ್ತು ಕಾಂಗ್ರೆಸ್‌(ಎ) ಪಕ್ಷವಿದ್ದು ಎರಡು ಪಕ್ಷಗಳಿಗೆ ಕೆಪಿಸಿಸಿ ಸಮನ್ವಯ ಸಮಿತಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ನೇತೃತ್ವದಲ್ಲಿ ಕಾಂಗ್ರೆಸ್‌ ಎ ಗುಂಪು ಇದ್ದರೆ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಚೆನ್ನಿತ್ತಾಲಾ ನೇತೃತ್ವದಲ್ಲಿ ಕಾಂಗ್ರೆಸ್‌ ಐ ಗುಂಪು ಇದೆ. ಕಾಂಗ್ರೆಸ್‌ನಲ್ಲಿ ಯಾವುದೇ ಪ್ರಜಾಪ್ರಭುತ್ವ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕೇರಳದಲ್ಲಿ ಮಹತ್ವದ ಚುನಾವಣೆ ನಡೆಯುತ್ತಿದೆ. ಜನ ಕಾಂಗ್ರೆಸ್‌ ಪಕ್ಷವನ್ನು ಮರಳಿ ತರಲು ಬಯಸುತ್ತಿದ್ದಾರೆ. ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯ ಬಗ್ಗೆ ನಾನು ಹೈಕಮಾಂಡ್‌ಗೆ ದೂರು ನೀಡಿದ್ದೆ. ಆದರೆ ಹೈಕಮಾಂಡ್‌ ಎರಡು ಗುಂಪುಗಳ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುತ್ತಿದೆ ಎಂದು ದೂರಿದರು.

    ಕೇರಳದಲ್ಲಿ ನೀವು ಕಾಂಗ್ರೆಸ್‌ನ ನಿರ್ದಿಷ್ಟ ಬಣಕ್ಕೆ ಸೇರಿದ್ದರೆ ಮಾತ್ರ ಉಳಿಗಾಲವಿದೆ. ಪಕ್ಷ ನಿಷ್ಠೆ ಹೊಂದಿದವರಿಗೆ ಉಳಿಗಾಲವಿಲ್ಲ. ಕಾಂಗ್ರೆಸ್‌ ಹೈಕಮಾಂಡ್ ಮೂಕಸಾಕ್ಷಿಯಾಗಿದೆ. ಎರಡು ಬಣಗಳ ಗುಂಪುಗಾರಿಕೆಯನ್ನು ಕೊನೆ ಮಾಡಬೇಕೆಂದು ನಾನು ಹೈಕಮಾಂಡ್‌ ಜೊತೆ ಮಾದ ಮಾಡಿದ್ದೆ. ಆದರೆ ನನ್ನ ಮಾತಿಗೆ ಯಾವುದೇ ಬೆಲೆ ಸಿಗಲಿಲ್ಲ ಎಂದು ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ಚರ್ಚೆ ಮಾಡದೇ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಮಾಡಲಾಗಿದೆ. ಗೆಲುವಿನ ಸಾಧ್ಯತೆಯಿರುವ ಅಭ್ಯರ್ಥಿಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ದೂರಿದರು.

    ಏಪ್ರಿಲ್ 6 ರಂದು ಒಟ್ಟು 140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ತ್ರಿಶೂರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ಚಾಕೋ ಈ ಹಿಂದೆ ದೆಹಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದರು.