Tag: Kerala Neighborhood

  • ಕೇರಳದಲ್ಲಿ ಜೋರಾಯ್ತು ಫಂಡ್ ಪಾಲಿಟಿಕ್ಸ್!

    ಕೇರಳದಲ್ಲಿ ಜೋರಾಯ್ತು ಫಂಡ್ ಪಾಲಿಟಿಕ್ಸ್!

    ತಿರುವಂತಪುರಂ/ನವದೆಹಲಿ: ಶತಮಾನದ ಮಳೆಗೆ ಕೇರಳ ತತ್ತರಿಸಿ ಹೋಗಿದ್ದು, 13 ಜಿಲ್ಲೆಗಳಲ್ಲಿ ಜನ ಮೊದಲಿನ ಸ್ಥಿತಿಗೆ ಬರಬೇಕಾದರೆ ವರ್ಷಗಳೇ ಬೇಕಾಗಲಿದೆ. ಇದರ ನಡುವೆ ಕೇರಳಕ್ಕೆ ವಿದೇಶಿ ನೆರವು ವಿಷಯವಾಗಿ ದೊಡ್ಡ ರಾಜಕೀಯ ಗುದ್ದಾಟ ನಡೆಯುತ್ತಿದೆ.

    ರಾಜ್ಯಕ್ಕೆ 19,512 ಕೋಟಿ ರೂ. ನಷ್ಟವಾಗಿದ್ದು, ಈಗ ತುರ್ತಾಗಿ 2 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು. ಆಗಸ್ಟ್ 17ರಂದು ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ 500 ಕೋಟಿ ರೂ. ಪ್ರಕಟಿಸಿದ್ದರು. ಬಳಿಕ ರಾಜನಾಥ್ ಸಿಂಗ್ 100 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಕೇರಳಕ್ಕೆ ಆರ್ಥಿಕವಾಗಿ ಯುಎಇ 700 ಕೋಟಿ ನೆರವು ಘೋಷಿಸಿದೆ ಅಂತ ಸಿಎಂ ಪಿಣರಾಯಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ದೇಶದಲ್ಲಿರುವ ನಿಯಮಾನುಸಾರ ವಿದೇಶಿ ನೆರವು ಪಡೆಯಲು ಸಾಧ್ಯವಿಲ್ಲ ಅನ್ನೋ ಚರ್ಚೆ ಆರಂಭವಾಯಿತು.

    ನಾವು ನೆರವಿಗೆ ಮುಂದಾಗಿದ್ದು ನಿಜ. ಆದರೆ, 700 ಕೋಟಿ ಅಂತ ಅಧಿಕೃತವಾಗಿ ಪ್ರಕಟಿಸಿಲ್ಲ ಅಂತ ಯುಎಇ ರಾಯಭಾರಿ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ, ನೆರವಿನ ಮೊತ್ತ 700 ಕೋಟಿ ಅಂತ ಸಿಎಂ ಹೇಳಿರೋದ್ಯಾಕೆ? ಈ ವದಂತಿಯ ಮೂಲ ಏನು ಅಂತ ಬಿಜೆಪಿ ಪ್ರಶ್ನಿಸಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿ ವಿದೇಶಿ ನೆರವು ಪಡೆಯುವ ಬಗ್ಗೆ ಕೇಂದ್ರ ಸರ್ಕಾರ, ಸರ್ವಪಕ್ಷ ಸಭೆ ಕರೆದು ಸ್ಪಷ್ಟ ನೀತಿ ರೂಪಿಸಲಿ ಅಂತ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

    ಈ ಮಧ್ಯೆ, ಕೇರಳದ ಪರಿಸ್ಥಿತಿಗೆ ತಮಿಳುನಾಡಿನ ಮುಲ್ಲಾಪೆರಿಯಾರ್ ಡ್ಯಾಮ್ ಕಾರಣ ಅಂತ ಸುಪ್ರೀಂನಲ್ಲಿ ಕೇರಳ ತಿಳಿಸಿದೆ. ಮುಲ್ಲಾಪೆರಿಯಾರ್ ಜಲಾಶಯದ ಗೇಟುಗಳನ್ನು ಒಮ್ಮಿದೊಮ್ಮೆಗೆ ತೆರೆದ ಕಾರಣ ದುರಂತ ನಡೆದಿದೆ ಎಂದು ಹೇಳಿದೆ. ಆದರೆ ಕೇರಳ ವಾದವನ್ನು ತಿರಸ್ಕರಿಸಿದ ತಮಿಳುನಾಡು ಸಿಎಂ ಈ ಒಂದು ಡ್ಯಾಂ ನೀರು ಕೇರಳದ ಅಷ್ಟೊಂದು ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ. ಕೇರಳ ಡ್ಯಾಂನಿಂದ ನೀರು ಬಿಟ್ಟದ್ದು ಅಲ್ಲಿಯ ದುರಂತಕ್ಕೆ ಕಾರಣ ಎಂದು ತಿರುಗೇಟು ನೀಡಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv