Tag: Kerala High Court

  • ಜ.27ರವರೆಗೆ ನಟ ದಿಲೀಪ್‌ರನ್ನು ಬಂಧಿಸಬೇಡಿ: ಪೊಲೀಸರಿಗೆ ಕೇರಳ ಹೈಕೋರ್ಟ್‌ ಸೂಚನೆ

    ಜ.27ರವರೆಗೆ ನಟ ದಿಲೀಪ್‌ರನ್ನು ಬಂಧಿಸಬೇಡಿ: ಪೊಲೀಸರಿಗೆ ಕೇರಳ ಹೈಕೋರ್ಟ್‌ ಸೂಚನೆ

    ತಿರುವನಂತಪುರಂ: 2017ರಲ್ಲಿ ನಟಿ ಮೇಲಿನ ಲೈಂಗಿಕ ಕಿರುಕುಳ ಸಂಬಂಧಿಸಿದ ಕೇಸ್ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ದಾಳಿಗೆ ಸಂಚು ಆರೋಪ ಎದುರಿಸುತ್ತಿರುವ ಖ್ಯಾತ ಮಲೆಯಾಳಂ ನಟ ದಿಲೀಪ್‌ರನ್ನು ಜನವರಿ 27ರ ವರೆಗೆ ಬಂಧಿಸದಂತೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.

    ದಿಲೀಪ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕ್ಲಿಪ್‍ವೊಂದನ್ನು ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿತ್ತು. ಹೀಗಾಗಿ ಕೆಲದಿನಗಳ ಹಿಂದೆ ದಿಲೀಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಆಡಿಯೋ ವೈರಲ್ ಆಗುತ್ತಿದ್ದಂತೆ, ಅಪರಾಧ ವಿಭಾಗದ ಕೇರಳ ಪೊಲೀಸ್ ತಂಡವು ದಿಲೀಪ್ ಮತ್ತು ಆತನ ಸಹೋದರನ ಮನೆ, ಕಚೇರಿಗಳ ಮೇಲೆ ದಾಳಿ ಕೂಡ ನಡೆಸಿತ್ತು. ಬಳಿಕ ಕೇಸ್ ದಾಖಲಿಸಿಕೊಂಡು ದಿಲೀಪ್ ಬಂಧಿಸಲು ತಯಾರಿ ನಡೆಸಲಾಗಿತ್ತು. ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ – ನಟ ದಿಲೀಪ್‌ ಮನೆ ಮೇಲೆ ಕೇರಳ ಪೊಲೀಸರ ದಾಳಿ

    ಪ್ರಕರಣಕ್ಕೆ ಸಂಬಂಧಿಸದಂತೆ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ಈ ಕೇಸ್ ವಿಚಾರಣೆ ನಡೆಸಿ ಜನವರಿ 23, 24, 25ರ ಒಳಗಾಗಿ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ತಿಳಿಸಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಜನವರಿ 27ಕ್ಕೆ ಮೂಂದೂಡಿದ್ದು, ಅಲ್ಲಿಯ ವರೆಗೆ ದಿಲೀಪ್ ಅವರನ್ನು ಬಂಧಿಸದಂತೆ ಆದೇಶಿಸಿದೆ. ಇದನ್ನೂ ಓದಿ: ಸಾಲ ತೀರಿಸಲು ಬ್ಯಾಂಕ್ ರಾಬರಿ ಮಾಡಿದ್ದ ಟೆಕ್ಕಿ ಅರೆಸ್ಟ್

    ಕಳೆದ ವರ್ಷ ನ.25 ರಂದು ನಿರ್ದೇಶಕ ಬಾಲಚಂದ್ರ ಕುಮಾರ್, ದಿಲೀಪ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕೇರಳ ಸಿಎಂಗೆ ದೂರು ಸಲ್ಲಿಸಿದ್ದರು. ಬಳಿಕ ದಿಲೀಪ್ ಅವರ ಬಂಧನವಾಗಿತ್ತು. ಎರಡು ತಿಂಗಳ ಬಳಿಕ ಜಾಮೀನಿನ ಮೇಲೆ ದಿಲೀಪ್ ಬಿಡುಗಡೆಯಾಗಿದ್ದರು. ಬಳಿಕ ಕೇಸ್‍ಗೆ ಸಂಬಂಧಿಸಿದಂತೆ ಇದೀಗ ಮತ್ತೆ ಹೊಸ ವಿಚಾರ ಬಹಿರಂಗಪಡಿಸಿದ ಹಿನ್ನೆಲೆ ಮತ್ತೆ ತನಿಖೆ ಚುರುಕುಗೊಂಡಿದೆ.

  • ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

    ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

    ತಿರುವನಂತಪುರಂ: ಕೇರಳದ ರೋಗಿಗಳಿಗೆ ಕರ್ನಾಟಕದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದುಹಾಕುವಂತೆ ಕೇರಳ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಪ್ರಕಟಿಸಿದೆ.

    ಕೇರಳ ಹೈಕೋರ್ಟ್ ಅಸೋಸಿಯೇಷನ್ ನವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.

    ಮಂಗಳೂರು ಮತ್ತು ಕೇರಳದ ಕಾಸರಗೋಡು ನಡುವೆ ಸಂಪರ್ಕಿಸುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಗಳ ಭಾಗವಾಗಿದೆ. ಆದ್ದರಿಂದ ಈ ರಸ್ತೆಗಳನ್ನು ದಿಗ್ಬಂಧನದಿಂದ ಮುಕ್ತವಾಗಿರಿಸುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕರ್ನಾಟಕವು ನಿರ್ಮಿಸಿರುವ ಗಡಿ ಪ್ರವೇಶ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕಬೇಕೆಂದು ನಾವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ. ಜೊತೆಗೆ ಯಾವುದೇ ವಿಳಂಬವಿಲ್ಲದೆ ಎರಡು ರಾಜ್ಯಗಳ ನಡುವಿನ ಗಡಿಯುದ್ದಕ್ಕೂ, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯುವ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನ್ಯಾಯಮೂರ್ತಿ ಎ.ಕೆ.ಜಯಶಂಕರ್ ನಂಬಿಯಾರ್ ಹಾಗೂ ಶಾಜಿ ಪಿ ಚಲಿ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

    ಭಾರತದ ಪ್ರಜೆ ದೇಶದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮುಕ್ತವಾಗಿ ಸಂಚರಿಸಬಹುದು ಎಂದು ಸಂವಿಧಾನದ 19 (1) (ಡಿ) ವಿಧಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಗಡಿ ದಿಗ್ಬಂಧನ ಸರಿಯಲ್ಲ. ಗಡಿ ದಿಗ್ಬಂಧ ತೆರವು ಸ್ಥಗಿತವಾದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ತೊಂದರೆಯಾಗಬಹುದು ಎಂದು ಹೈಕೋರ್ಟ್ ತಿಳಿಸಿದೆ.

    ಈ ಕುರಿತು ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕಾಸರಗೋಡಿನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಬರುವವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಸಾಮಾನ್ಯ ಸಂಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಚಿಕಿತ್ಸೆಗೆ ಬರುವವರಿಗೆ ಮಾತ್ರ ಎರಡು ರಾಜ್ಯಗಳ ನಡುವಿನ ಹೆದ್ದಾರಿಯನ್ನು ಮುಕ್ತಗೊಳಿಸಬೇಕು. ಕೊರೊನಾ ವಿರುದ್ಧದ ಹೋರಾಟ ಜಾತಿ, ಧರ್ಮ ಮತ್ತು ಗಡಿಯನ್ನು ಮೀರಿದ್ದು ಎಂದು ತಿಳಿಸಿದ್ದಾರೆ.

  • ಅಶ್ಲೀಲ ಫೋಟೋಗಳನ್ನ ಇಟ್ಟುಕೊಳ್ಳೋದು ಅಪರಾಧವಲ್ಲ: ಕೇರಳ ಹೈಕೋರ್ಟ್

    ಅಶ್ಲೀಲ ಫೋಟೋಗಳನ್ನ ಇಟ್ಟುಕೊಳ್ಳೋದು ಅಪರಾಧವಲ್ಲ: ಕೇರಳ ಹೈಕೋರ್ಟ್

    ತಿರುವನಂತಪುರಂ: ಅಶ್ಲೀಲ ಫೋಟೋಗಳನ್ನು ಇಟ್ಟುಕೊಳ್ಳುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

    ಮಹಿಳೆಯರ ಅಸಭ್ಯ ಪ್ರದರ್ಶನ ತಡೆ ಕಾಯಿದೆ ಅಡಿ ಮಹಿಳೆಯ ಅಶ್ಲೀಲ ಫೋಟೋಗಳನ್ನು ಹೊಂದಿದ ಮಾತ್ರಕ್ಕೆ ಅದು ಶಿಕ್ಷಾರ್ಹ ಅಪರಾಧವಾಗುವುದಿಲ್ಲ. ಆದರೆ ಮಹಿಳೆಯ ಅಶ್ಲೀಲ ಫೋಟೋಗಳನ್ನು ಪ್ರಕಟಿಸುವುದು ಮತ್ತು ವಿತರಿಸುವುದು ಕಾನೂನನಿನಡಿ ಶಿಕ್ಷಾರ್ಹವಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

    ಈ ಮೂಲಕ 2008ರಲ್ಲಿ ಓರ್ವ ಪುರುಷ ಮತ್ತು ಮಹಿಳೆಯ ವಿರುದ್ಧದ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.

    ಏನಿದು ಪ್ರಕರಣ?:
    ಕೊಲ್ಲಂ ಪೊಲೀಸರು ಬಸ್ ನಿಲ್ದಾಣದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಶಂಕಿತ ಓರ್ವ ಮಹಿಳೆ ಹಾಗೂ ಪುರುಷನನ್ನು ವಿಚಾರಣೆ ನಡೆಸಿ, ಬ್ಯಾಗ್‍ನಲ್ಲಿದ್ದ ಕ್ಯಾಮೆರಾವನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಪುರುಷನ ಕ್ಯಾಮೆರಾದಲ್ಲಿ ಮಹಿಳೆಯ ಅಶ್ಲೀಲ ಫೋಟೋಗಳಿದ್ದವು. ಹೀಗಾಗಿ ಇಬ್ಬರನ್ನೂ ಬಂಧಿಸಿ, ಕ್ಯಾಮೆರಾವನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು.

    ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಕ್ಯಾಮೆರಾದಲ್ಲಿರುವ ಫೋಟೋಗಳನ್ನು ಪ್ರಕಟಿಸಿದ್ದಾರೆ ಎಂಬುದಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ. ಅಶ್ಲೀಲ ಫೋಟೋಗಳನ್ನು ಇಟ್ಟುಕೊಳ್ಳುವುದು ಅಪರಾಧವಲ್ಲ. ಹೀಗಾಗಿ ಆರೋಪಿಗಳ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.

  • ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ದುಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡಲು ಆಸಕ್ತಿ ತೋರಿದ್ದಾರೆ. ಬಿಸಿಸಿಐ ನನಗೆ ಟೀಂ ಇಂಡಿಯಾ ಪರವಾಗಿ ಅವಕಾಶ ನೀಡದಿದ್ದರೆ ನಾನು ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡುತ್ತೇನೆ ಎಂದು ಶ್ರೀಶಾಂತ್ ದುಬೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಆದರೆ ಶ್ರೀಶಾಂತ್ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಜೀವ ನಿಷೇಧಕ್ಕೊಳಗಾಗಿರುವುದರಿಂದ ಶ್ರೀಶಾಂತ್ ಬೇರೆ ಯಾವುದೇ ಕ್ರಿಕೆಟ್ ಅಸೋಸಿಯೇಷನ್ ಪರ ಆಡುವುದು ಸಾಧ್ಯವಿಲ್ಲ ಎಂದು ಹೇಳಿದೆ. ಮೊನ್ನೆಯಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಬಿಸಿಸಿಐ ಅಜೀವ ನಿಷೇಧ ತೆರವಿಗೆ ತಡೆಯಾಜ್ಞೆ ನೀಡಿತ್ತು.

    ನನ್ನ ಮೇಲೆ ಬಿಸಿಸಿಐ ಮಾತ್ರ ನಿಷೇಧ ಹೇರಿದೆಯೇ ವಿನಃ ಐಸಿಸಿ ನಿಷೇಧ ಹೇರಿಲ್ಲ. ಭಾರತದಲ್ಲಿ ಅವಕಾಶ ಸಿಗದಿದ್ದರೆ ನಾನು ಬೇರೆ ದೇಶದ ಪರ ಆಡಬಹುದು. ಸದ್ಯ ನನಗೆ 34 ವರ್ಷ ವಯಸ್ಸಾಗಿದ್ದು ಇನ್ನೂ 6 ವರ್ಷ ಕ್ರಿಕೆಟ್ ಆಡಬಹುದು ಎಂದು ಹೇಳಿದ್ದಾರೆ. ಓರ್ವ ಕ್ರಿಕೆಟ್ ಪ್ರೇಮಿಯಾಗಿ ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಬಿಸಿಸಿಐ ಎನ್ನುವುದು ಖಾಸಗಿ ಸಂಸ್ಥೆ. ಇದನ್ನು ನಾವು ಮಾತ್ರ ಟೀಂ ಇಂಡಿಯಾ ಎಂದು ಕರೆಯುತ್ತೇವೆ. ಆದರೆ ವಾಸ್ತವದಲ್ಲಿ ಅದೊಂದು ಖಾಸಗಿ ಸಂಸ್ಥೆ ಎಂದು ಹೇಳಿದ್ದಾರೆ.

    ಕೇರಳ ಪರ ರಣಜಿ ಆಡುವುದು ಬೇರೆಯೇ ವಿಚಾರ. ನನಗೆ ಕೇರಳ ಪರ ರಣಜಿ ಹಾಗೂ ಇರಾನಿ ಟ್ರೋಫಿ ಆಡಬೇಕು ಎಂಬ ಆಸೆಯಿತ್ತು. ಆದರೆ ಇದರ ಬಗ್ಗೆ ಬಿಸಿಸಿಐ ನಿರ್ಧರಿಸಬೇಕು ಎಂದು ಹೇಳಿದರು. ಮೊನ್ನೆ ಬಂದ ಕೇರಳ ಹೈಕೋರ್ಟ್ ತೀರ್ಪಿನಿಂದಾಗಿ ಶ್ರೀಶಾಂತ್ ಗೆ ಈಗ ಕೇರಳ ತಂಡದಲ್ಲಿ ಆಡುವುದು ಸಾಧ್ಯವಿಲ್ಲ. ಜೊತೆಗೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಡಿ ಬರುವ ಯಾವುದೇ ಜಾಗದಲ್ಲೂ ಪ್ರಾಕ್ಟೀಸ್ ಕೂಡಾ ನಡೆಸುವಂತಿಲ್ಲ.