Tag: Kerala Government

  • ಕೇರಳ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಪ್ಲ್ಯಾನ್ – ವ್ಯಾಪಕ ವಿರೋಧವೇಕೆ?

    ಕೇರಳ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಪ್ಲ್ಯಾನ್ – ವ್ಯಾಪಕ ವಿರೋಧವೇಕೆ?

    ‌ಇಡೀ ವಿಶ್ವದಲ್ಲೇ ಅತಿಹೆಚ್ಚು ಜೀವವೈವಿದ್ಯ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದಾಗಿದೆ. ವರದಿಗಳ ಪ್ರಕಾರ ಶೇ.8 ರಷ್ಟು ಜೀವ ವೈವಿದ್ಯ ಸಂಪತ್ತು ನಮ್ಮಲ್ಲಿದೆ. ಆದ್ರೆ ಇತ್ತೀಚೆಗೆ ಉಂಟಾಗುತ್ತಿರುವ ಹವಾಮಾನ ವೈರಪರಿತ್ಯಕ್ಕೆ ಕಾರಣಗಳನ್ನ ನೋಡಿದಾಗ ಅವುಗಳಲ್ಲಿ ಅರಣ್ಯ ನಾಶ ಸಹ ಪ್ರಮುಖವಾಗಿ ಕಂಡುಬಂದಿದೆ.

    ದೇಶದ ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ಶೇ.33 ರಷ್ಟು ಅರಣ್ಯ ಇರಬೇಕು, ಗುಡ್ಡಗಾಡು ಪ್ರದೇಶ ಶೇ.66 ರಷ್ಟು ಇರಬೇಕು ಎಂದು ರಾಷ್ಟ್ರೀಯ ಅರಣ್ಯ ನೀತಿ 1988 ಹೇಳುತ್ತದೆ. ಆದ್ರೆ ವಾಸ್ತವಾಂಶದಲ್ಲಿ ಅದು ಶೇ.21ಕ್ಕೆ ಇಳಿದಿದೆ ಎನ್ನಲಾಗಿದೆ. ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ, ವನ್ಯ ಜೀವಗಳಿದ್ದರೆ ಕಾಡು, ಕಾಡಿದ್ದರೆ ನಾಡುವ ಎನ್ನುವ ಉದ್ದೇಶದೊಂದಿಗೆ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ 5 ದಶಕಗಳ ಹಿಂದೆಯೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು. ಆದ್ರೆ ಇತ್ತೀಚೆಗೆ ಕೇರಳದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದ ಪ್ರಿಯಾಂಕಾ ಗಾಂಧಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ನಾಟಕ-ಕೇರಳ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಈಗಿರುವ ರಾತ್ರಿ ಸಂಚಾರ ನಿರ್ಬಂಧ ತೆರವುಗೊಳಿಸುವುದಾಗಿ ಹೇಳಿ ಟೀಕೆಗೆ ಗುರಿಯಾಗಿದ್ದರು. ಇದೀಗ ಕೇರಳ ಸರ್ಕಾರ ವನ್ಯ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಹೊಸ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದೆ.

    ಕೇರಳ ಸರ್ಕಾರವು ಕೇರಳ ಅರಣ್ಯ ಕಾಯ್ದೆ-1981ಕ್ಕೆ ತಿದ್ದುಪಡಿ ತರಲು ಮಸೂದೆಯೊಂದನ್ನು ಸಿದ್ಧಪಡಿಸಿದೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದ್ರೆ ಕೇರಳದಲ್ಲಿರುವ 941 ಗ್ರಾಮ ಪಂಚಾಯಿಗಳ ಪೈಕಿ 430 ಬೆಸ ಗ್ರಾಮ ಪಂಚಾಯಿತಿಗಳಲ್ಲಿ ವಾಸಿಸುವ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಕೇರಳ ಸರ್ಕಾರ ಸಿದ್ಧಪಡಿಸಿರುವ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಇದರ ಉದ್ದೇಶವೇನು ಎಂಬುದನ್ನು ನೋಡೋಣ

    ಮಸೂದೆ ಉದ್ದೇಶವೇನು?

    ಪ್ರಸ್ತುತ ಕೇರಳ ಅರಣ್ಯ (ತಿದ್ದುಪಡಿ) ಮಸೂದೆ 2024, ಅರಣ್ಯ ಸರಂಕ್ಷಣೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸುತ್ತದೆ. ಅರಣ್ಯ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿ ಬಳಸುತ್ತಿರುವುದನ್ನು ತಡೆಯುವುದು, ಅರಣ್ಯದೊಳಗಿನ ನದಿ ಅಥವಾ ಅರಣ್ಯ ಪ್ರದೇಶಗಳಲ್ಲಿ ಹರಿಯುವ ಜಲಮೂಲಗಳಲ್ಲಿ ತ್ಯಾಜ್ಯ ಎಸೆಯುವುದರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯವನ್ನು ಸೂಚಿಸುತ್ತದೆ. ಕಾಡಿನ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಒದಗಿಸುವ ಜೊತೆಗೆ ವಿವಿಧ ಅಪರಾಧಗಳಿಗೆ ವಿಧಿಸುವ ದಂಡ ಹಾಗೂ ಶಿಕ್ಷೆಯ ಪ್ರಮಾಣವನ್ನೂ ದುಪ್ಪಟ್ಟು ಮಾಡುವುದು ಇದರ ಉದ್ದೇಶವಾಗಿದೆ.

    ವಿವಾದಾತ್ಮಕ ಅಂಶಗಳೇನು?

    ಕೇರಳ ಸರ್ಕಾರವು ವನ್ಯ ಸಂಪತ್ತನ್ನು ರಕ್ಷಿಸುವ ಉದ್ದೇಶಕ್ಕಾಗಿ ಮಸೂದೆ ತಿದ್ದುಪಡಿಜಾರಿಗೊಳಿಸುತ್ತಿದೆ. ಆದ್ರೆ ಇದರಲ್ಲಿ ಕೆಲವು ವಿವಾದಾತ್ಮಕ ಅಂಶಗಳು ಕಂಡುಬಂದಿರುವುದು ಜನರ ನಿದ್ದೆಗೆಡಿಸಿವೆ.

    ವಾರಂಟ್ ಇಲ್ಲದೇ ಬಂಧಿಸುವ ಅಧಿಕಾರ:
    ಸದ್ಯ ಕರಡಿನಲ್ಲಿ ಪರಿಶೀಲಿಸಲಾದ ಅಂಶಗಳ ಪ್ರಕಾರ ಹೊಸ ಮಸೂದೆಯು ಅರಣ್ಯಾಧಿಕಾರಿಗಳು ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಮೇಲೆ ಸಂಶಯ ಬಂದರೂ ವಾರಂಟ್‌ ಇಲ್ಲದೇ ಆತನನ್ನ ಬಂಧಿಸುವ ಅಧಿಕಾರ ನೀಡುತ್ತದೆ. ಈಗಾಗಲೇ ಅರಣ್ಯಾಧಿಕಾರಿಗಳು ಕೆಲವೊಂದು ಅಪರಾಧಗಳಲ್ಲಿ ಅಮಾಯಕರನ್ನು ಬಂಧಿಸಿ ಶಿಕ್ಷೆಗೆ ಗುರಿ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಮಸೂದೆ ಜಾರಿಯಾದರೆ ಕಾನೂನು ದುರ್ಬಳಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಅನ್ನೋದು ವನ್ಯಜೀವಿ ತಜ್ಞರ ಕಳವಳ.

    ಹೆಚ್ಚಿನ ಸಿಬ್ಬಂದಿಗೆ ʻಅರಣ್ಯ ಅಧಿಕಾರಿʼ ಅಧಿಕಾರ:

    ಹೊಸ ತಿದ್ದುಪಡಿಯು ಬೀಟ್ ಫಾರೆಸ್ಟ್ ಆಫೀಸರ್, ಬುಡಕಟ್ಟು ವೀಕ್ಷಕ ಮತ್ತು ಅರಣ್ಯ ವೀಕ್ಷಕರನ್ನು ʻಅರಣ್ಯ ಅಧಿಕಾರಿ’ ಎಂಬ ವ್ಯಾಖ್ಯಾನಕ್ಕೆ ತಂದಿದೆ. ಈ ಮೂಲಕ ಅವರು ಅರಣ್ಯಾಧಿಕಾರಿಯ ಯಾವುದೇ ಕರ್ತವ್ಯವನ್ನು ನಿರ್ವಹಿಸಬಹುದು ಎನ್ನಲಾಗಿದೆ. ಸದ್ಯ ಕೆಲವರು ರಾಜಕೀಯ ಪಕ್ಷಗಳ ಶಿಫಾರಸುಗಳ ಆಧಾರದ ಮೇಲೆ ನೇಮಕಗೊಂಡಿದ್ದಾರೆ. ಇನ್ನೂ ಕೆಲವರು ತಾತ್ಕಾಲಿಕ ಅವಧಿ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಅರಣ್ಯ ಅಧಿಕಾರಿಯ ಅಧಿಕಾರ ನೀಡುವುದರಿಂದ ಅವರು ಅದನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

    ಅರಣ್ಯಕ್ಕೆ ಹರಿಯುವ ನದಿಗಳ ಬಗ್ಗೆ ಮಾತ್ರವೇ ಕಾಳಜಿ?

    ಈ ಮಸೂದೆಯು ಅರಣ್ಯ ಪ್ರದೇಶದ ಮೂಲಕ ಹರಿಯುವ ನದಿಗಳನ್ನು ಹೊರತುಪಡಿಸಿ, ಅರಣ್ಯಕ್ಕೆ ಹರಿಯುವ ನದಿಗಳ ಸಂರಕ್ಷಣೆ ಮಾಡುವುದನ್ನು ಮಾತ್ರ ಕಾಯ್ದೆ ವ್ಯಾಪ್ತಿಯೊಳಗೆ ತಂದಿದೆ. ಕೇರಳದಲ್ಲಿ ಅನೇಕ ನದಿಗಳು ಅರಣ್ಯ ಪ್ರವೇಶಿಸುವ ಮೊದಲು ಇತರ ಭೂಪ್ರದೇಶಗಳಲ್ಲಿ ಹರಿಯುತ್ತದೆ. ತಿದ್ದುಪಡಿ ಕಾಯ್ದೆ ಅಂಶದಿಂದ ಅರಣ್ಯದ ಹೊರಗಿನ ನದಿಗಳ ಮೇಲೂ ಹಕ್ಕನ್ನು ನೀಡಿದಂತಾಗುತ್ತದೆ. ಅಲ್ಲದೇ ಸ್ಥಳೀಯರು ಅರಣ್ಯ ಅಪರಾಧಗಳನ್ನು ಎದುರಿಸುವಂತಾಗುತ್ತದೆ ಎಂಬ ಆತಂಕ ಎದುರಾಗಿದೆ.

    ದಂಡದ ಪ್ರಮಾಣ ದುಪ್ಪಟು:

    ಸದ್ಯ ಅರಣ್ಯ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಸಣ್ಣ ಅರಣ್ಯ ಅಪರಾಧಗಳಿಗೆ 1,000 ರೂ. ದಂಡ ವಿಧಿಸಲಾಗುತ್ತಿದೆ. ಈ ಪ್ರಮಾಣ 25,000 ರೂ.ಗಳಿಗೆ ಹೆಚ್ಚಾಗುತ್ತದೆ. 25,000 ರೂ. ವರೆಗಿನ ಇತರ ದಂಡದ ಪ್ರಮಾಣ 50,000 ರೂ.ಗಳಿಗೆ ಹೆಚ್ಚಾಗುತ್ತದೆ.

    ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ:

    ಈ ಮಸೂದೆ ಅನುಷ್ಠಾನಗೊಳಸುವ ಮೂಲಕ ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ. ಬೀಟ್‌ ಫಾರೆಸ್ಟ್‌ ಅಧಿಕಾರಿ ಸಹ ಯಾವುದೇ ವಾಹನವನ್ನು ನಿಲ್ಲಿಸಬಹುದು, ಶೋಧಿಸಬಹುದು ಅಥವಾ ವಿಚಾರಣೆ ನಡೆಸಬಹುದು. ಅಲ್ಲದೇ ಆ ಅಧಿಕಾರಿಯ ವ್ಯಾಪ್ತಿಯಲ್ಲಿರುವ ಕಟ್ಟಡ, ಆವರಣ, ಜಮೀನು ಹಡಗುಗಳನ್ನು ಪ್ರವೇಶಿಸಿ ಶೋಧಿಸಬಹುದು. ಯಾವುದೇ ಸಂಶಯಾಸ್ಪದ ವ್ಯಕ್ತಿಯನ್ನು ತನ್ನ ನಿಯಂತ್ರಣದಲ್ಲಿಡುವುದಕ್ಕೆ ಅನುವುಮಾಡಿಕೊಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

    ಹೀಗಾಗಿ ಕೇರಳ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ನೂತನ ಮಸೂದೆಯ ಕರಡಿನಲ್ಲಿ ಅನುಕೂಲಕರ ಅಂಶಗಳಿಗಿಂತ ಅನಾನುಕೂಲಕರ ಅಂಶಗಳೇ ಹೆಚ್ಚಾಗಿವೆ. ಹೀಗಾಗಿ ಇದಕ್ಕೆ ಸ್ಥಳೀಯರ ವಿರೋಧ ಹೆಚ್ಚಾಗಿದೆ. ಈ ನಡುವೆ ಈ ಅಂಶಗಳಲ್ಲಿ ಮಾರ್ಪಾಡು ತರುವ ಬಗ್ಗೆ ಚರ್ಚಿಸಬೇಕು ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.

  • ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

    ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

    ತಿರುವನಂತಪುರಂ: ಪ್ರವಾಸಿ ದೋಣಿ (Tourist Boat) ಮುಳುಗಡೆಯಾಗಿ 22 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಕೇರಳ ಸರ್ಕಾರ (Kerala Government) ಘೋಷಣೆ ಮಾಡಿದೆ.

    ಪ್ರವಾಸಿ ದೋಣಿ ದುರಂತ ಸಂಬಂಧ ಕೇರಳ ಸರ್ಕಾರವು ಸಂಪೂರ್ಣ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರವೇ ಭರಿಸಲಿದೆ. ಪೊಲೀಸ್ ವಿಶೇಷ ತನಿಖಾ ತಂಡವು ಈ ಸಂಬಂಧ ತನಿಖೆ ನಡೆಸಲಿದೆ ಎಂದು ಸಿಎಂಒ ಮಾಹಿತಿ ನೀಡಿದೆ.

    ಇತ್ತ ಘಟನೆಯಲ್ಲಿ ಮೃತಪಟ್ಟ ಕುಟುಂಬಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಂತಾಪ ಸೂಚಿಸಿದ್ದು, ಪರಿಹಾರ ನಿಧಿಯಿಂದ 2 ಲಕ್ಷ ರೂ. ಘೋಷಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ದೋಣಿ ದುರಂತದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಪಿಎಂಎನ್‍ಆರ್ ಎಫ್‍ನಿಂದ 2 ಲಕ್ಷ ರೂ.ವನ್ನು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದರು.

    ಏನಿದು ಘಟನೆ?: ಸುಮಾರು 30 ಮಂದಿಯಿದ್ದ ಪ್ರವಾಸಿ ದೋಣಿಯು ಭಾನುವಾರ ಮಲಪ್ಪುರಂನ ತನೂರಿನ ತೂವಲ್ತೀರಂ ಕಡಲತೀರದ ಸಮೀಪ ಸಂಜೆ 7 ಗಂಟೆ ಸುಮಾರಿಗೆ ಮುಳುಗಡೆಯಾಗಿತ್ತು. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, ಸುಮಾರು 7 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದನ್ನೂ ಓದಿ: ಪ್ರವಾಸಿ ದೋಣಿ ಮುಳುಗಡೆ – ಮಕ್ಕಳು ಸೇರಿದಂತೆ 22 ಮಂದಿ ನೀರುಪಾಲು

    ಈ ಸಂಬಂಧ ಮಲಪ್ಪುರಂ ಪೊಲೀಸರು ಮಾಧ್ಯಮದ ಜೊತೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆಯ ಬಳಿಕ ದುರಂತ ಸಂಬಂಧ ತನಿಖೆ ನಡೆಸುತ್ತೇವೆ. ಹೆಚ್ಚಿನ ಜನ ಹಾಕಿಕೊಂಡು ಹೋಗಿರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಆದರೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಘಟನೆಯ ಬಳಿಕ ದೋಣಿಯ ಮಾಲೀಕ ನಜಾರ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.

  • ಚಿನ್ನ ಕಳ್ಳಸಾಗಣೆ ಪ್ರಕರಣ ಕರ್ನಾಟಕಕ್ಕೆ ವರ್ಗಾಯಿಸಲು ಕೋರಿದ್ದ ED ಮನವಿಗೆ ವಿರೋಧ – ಸುಪ್ರೀಂಗೆ ಕೇರಳ ಸರ್ಕಾರ ಅಫಿಡವಿಟ್‌

    ಚಿನ್ನ ಕಳ್ಳಸಾಗಣೆ ಪ್ರಕರಣ ಕರ್ನಾಟಕಕ್ಕೆ ವರ್ಗಾಯಿಸಲು ಕೋರಿದ್ದ ED ಮನವಿಗೆ ವಿರೋಧ – ಸುಪ್ರೀಂಗೆ ಕೇರಳ ಸರ್ಕಾರ ಅಫಿಡವಿಟ್‌

    ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣವನ್ನು (Gold Smuggling Case) ಕರ್ನಾಟಕಕ್ಕೆ (Karnataka) ವರ್ಗಾಯಿಸಲು ಕೋರಿರುವ ಜಾರಿ ನಿರ್ದೇಶನಾಲಯದ (ED) ಮನವಿಗೆ ನಮ್ಮ ವಿರೋಧವಿದೆ. ತನಿಖಾ ಸಂಸ್ಥೆಯ ಮನವಿಯು ಆಧಾರರಹಿತ ಆರೋಪಗಳ ಮೂಲಕ ಸರ್ಕಾರಕ್ಕೆ ಕಳಂಕ ತರುವುದಾಗಿದೆ ಎಂದು ಕೇರಳ (Kerala) ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

    ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಪಿಎಂಎಲ್‌ಎ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಕೋರಿ ಇಡಿ ಸಲ್ಲಿಸಿರುವ ಅರ್ಜಿಯು ಆಧಾರರಹಿತ ಆರೋಪಗಳನ್ನು ಎತ್ತುವ ಮೂಲಕ ಕೇರಳ ಸರ್ಕಾರಕ್ಕೆ ಕಳಂಕ ತರುವ ದುರುದ್ದೇಶದಿಂದ ಕೂಡಿದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    ಪ್ರಕರಣ ವರ್ಗಾವಣೆಗೆ ಕೋರಿರುವ ಮನವಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಆಧಾರರಹಿತವಾದದ್ದು, ಊಹಾಪೋಹಗಳಿಂದ ಕೂಡಿದೆ. ಪ್ರಕರಣದ ವಿಚಾರಣೆಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸಲು ವರ್ಗಾವಣೆ ಅರ್ಜಿಯಲ್ಲಿ ಯಾವುದೇ ನೈಜ ಕಾರಣಗಳನ್ನು ಹೇಳಲಾಗಿಲ್ಲ ಎಂದು ಸರ್ಕಾರ ಆರೋಪಿಸಿದೆ.

    ರಾಜ್ಯ ಪೊಲೀಸರು ಮತ್ತು ಕೇರಳ ಸರ್ಕಾರವು ಜಾರಿ ನಿರ್ದೇಶನಾಲಯವು ನಡೆಸುತ್ತಿರುವ ತನಿಖೆಯಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂಬುದು ಸುಳ್ಳು. ಇಡಿ ತನಿಖಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಒಂದೇ ಒಂದು ಘಟನೆಯೂ ನಡೆದಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: 10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ

    ಎರ್ನಾಕುಲಂನ ಪಿಎಂಎಲ್‌ಎ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ರಾಜ್ಯದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲು ಜಾರಿ ನಿರ್ದೇಶನಾಲಯವು ಮನವಿ ಸಲ್ಲಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಕೇರಳದಲ್ಲಿ ನರಬಲಿ ಕೇಸ್‌ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ

    ಕೇರಳದಲ್ಲಿ ನರಬಲಿ ಕೇಸ್‌ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ

    ತಿರುನಂತರಪುರಂ: ನರಬಲಿ (Human Sacrifice) ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ (Kerala Government) ಮಾಟ, ಮಂತ್ರಗಳ ತಡೆಗೆ ಕಠಿಣ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ.

    ಅಲ್ಲದೇ ಮಾಟ, ಮಂತ್ರಗಳ ತಡೆಗೆ ಪ್ರಸ್ತುತವಾಗಿರುವ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರೀ ಮಳೆ, ಹಲವೆಡೆ ರಸ್ತೆ ಸಂಚಾರ ಬಂದ್

    ಗುರುವಾರವಷ್ಟೇ ನರಬಲಿಗೆ ಕಾರಣವಾಗಿದ್ದ ಮಂತ್ರವಾದಿಯನ್ನ ಕೋರ್ಟ್‌ (Court) ಒಪ್ಪಿಸಲಾಗಿದೆ. ಮಾಟ, ಮಂತ್ರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ದಂಪತಿಯನ್ನ ಬಂಧಿಸಲಾಗಿದೆ.

    ಏನಿದು ನರಬಲಿ ಪ್ರಕರಣ?
    ಹಣಕ್ಕಾಗಿ ಇಬ್ಬರು ಮಹಿಳೆಯರನ್ನ ನರಬಲಿ ಕೊಟ್ಟಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪದ್ಮಾ (52) ಮತ್ತು ರೋಸ್ಲಿನ್ (50) ಮೃತ ಮಹಿಳೆಯರು. ಎರ್ಬಾಕುಲಂ ಜಿಲ್ಲೆಯ ಪ್ರತ್ಯೇಕ ಊರಿನವರಾಗಿದ್ದ ರೋಸ್ಲಿನ್ ಹಾಗೂ ಪದ್ಮಾರನ್ನು ಮಾಂತ್ರಿಕ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಸೇರಿ ಹೆಚ್ಚು ಹಣ ಗಳಿಸಲು ನರಬಲಿ ನೀಡಿದ್ದರು. ಇದಕ್ಕಾಗಿ ಶಿಹಾಬ್ ಎಂಬಾತನ ಸಹಾಯ ಪಡೆದು ಅವನಿಗೂ ಕೆಲ ಆಮಿಷವೊಡ್ಡಿ ನಂಬಿಸಿದ್ದರು. ಇವರು ಹೇಳಿದ್ದ ಆಮಿಷಕ್ಕೆ ಬಲಿಯಾದ ಶಿಹಾಬ್, ಪದ್ಮಾ ಹಾಗೂ ರೋಸ್ಲಿನ್ ಅನ್ನು ಅಪಹರಿಸಿದ್ದ. ಘಟನೆಗೆ ಸಂಬಂಧಿಸಿ ಸೆ. 26ರಂದು ಪ್ರಕರಣ (FIR) ದಾಖಲಾಗಿತ್ತು. ಇದನ್ನೂ ಓದಿ: ಕಾಂತಾರ: ಬಾಲಿವುಡ್‌ನಲ್ಲಿ ಧೂಳ್, ತಮಿಳಿನ ಟ್ರೇಲರ್‌ಗೂ ಸಖತ್ ರೆಸ್ಪಾನ್ಸ್

    ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದಂಪತಿ ಭಗವಲ್ ಸಿಂಗ್ ಮತ್ತು ಲೀಲಾ ಹಾಗೂ ಏಜೆಂಟ್ ಶಿಹಾಬ್‌ನನ್ನು ಪೊಲೀಸರು (Police) ಬಂಧಿಸಿದ್ದರು. ತನಿಖೆ ವೇಳೆ ಬಲಿಯಾದ ಮಹಿಳೆಯರ ದೇಹವು 56 ತುಂಡುಗಳಾಗಿದ್ದು, ನರಬಲಿಯ ಬಳಿಕ ನರಮಾಂಸವನ್ನೂ ಭಕ್ಷಣೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಾರಾಯಣಗುರು ಹೆಸರನ್ನು ಸಮಾಜ ವಿಭಜಿಸೋದಕ್ಕೆ ಬಳಸಿಕೊಳ್ತಿದ್ದಾರೆ: ಸುನೀಲ್ ಕುಮಾರ್ ಆರೋಪ

    ನಾರಾಯಣಗುರು ಹೆಸರನ್ನು ಸಮಾಜ ವಿಭಜಿಸೋದಕ್ಕೆ ಬಳಸಿಕೊಳ್ತಿದ್ದಾರೆ: ಸುನೀಲ್ ಕುಮಾರ್ ಆರೋಪ

    ಮಂಗಳೂರು: ಲೇಡಿ ಹಿಲ್ ವೃತ್ತಕ್ಕೆ ಮಹರ್ಷಿ ನಾರಾಯಣ ಗುರು ಹೆಸರಿಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯ ತೆಗೆದುಕೊಂಡಾಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮರೆತು ಬಿಟ್ಟಿದ್ದು, ನಾರಾಯಣ ಗುರುಗಳ ಹೆಸರನ್ನು ಸಮಾಜ ವಿಭಜಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕನ್ನಡ, ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ತೆಗೆದುಕೊಂಡ ನಿರ್ಣಯವನ್ನು ಕಾಂಗ್ರೆಸ್ ವಿರೋಧಿಸಿದ್ದರ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಆದರೆ ಆ ಸಮಯದಲ್ಲಿ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದು ಏಕೆ, ನಾರಾಯಣ ಗುರುಗಳ ಬಗ್ಗೆ ನಿಮಗೆ ಆಗ ಗೌರವ ಇರಲಿಲ್ಲವೇ, ಕೇರಳ ಸರ್ಕಾರ ಸೃಷ್ಟಿಸಿದ ತಪ್ಪನ್ನು ನೀವ್ಯಾಕೆ ಪೋಷಿಸುತ್ತೀರಿ ಎಂದು ಪ್ರಶ್ನಿಸಿದರು.

    siddaramaiah

    ಹಿಂದೂ ಮಹಾಪುರುಷರ ಬಗ್ಗೆ ನಿಮ್ಮ ಗೌರವ ಹಾಗೂ ಕಾಳಜಿ ಸಾಂದರ್ಭಿಕವಾಗಿರುತ್ತದೆ. ಎಲ್ಲಿ ರಾಜಕೀಯ ಲಾಭ ಸಿಗುತ್ತದೋ ಆ ಸಂದರ್ಭದಲ್ಲಿ ಮಾತ್ರ ಅನಾವರಣವಾಗುತ್ತದೆ. ನಿಮ್ಮ ಶಾಶ್ವತ ಪ್ರೀತಿ ಯಾರ ಕಡೆಗೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾದ ಅಗತ್ಯವಿಲ್ಲ ಎಂದು ಟೀಕಿಸಿದ್ದಾರೆ.  ಇದನ್ನೂ ಓದಿ: ಸಲ್ಮಾನ್ ಫಾರ್ಮ್‍ಹೌಸ್‍ನಲ್ಲಿ ಸೆಲೆಬ್ರಿಟಿಗಳ ಶವ, ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತೆ ಎಂದ ನೆರೆಮನೆಯವ!

    ಕೇಂದ್ರ ಸರ್ಕಾರದ ವಿರುದ್ಧ ಅನಗತ್ಯ ಅಪಪ್ರಚಾರದ ಜೊತೆಗೆ ಸಮಾಜ ಒಡೆಯುವ ಕೃತ್ಯಕ್ಕೆ ಪ್ರೇರಣೆ ನೀಡುವುದಕ್ಕಾಗಿ ಮಹರ್ಷಿ ನಾರಾಯಣ ಗುರು ಸ್ಥಬ್ಧ ಚಿತ್ರ ವಿಚಾರವನ್ನು ಕೇರಳದ ಕಮ್ಯುನಿಷ್ಟ್ ಸರ್ಕಾರ ಬಳಸಿಕೊಳ್ಳುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಉರಿಯುವ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ಗಣರಾಜ್ಯೋತ್ಸವ ಪರೇಡ್‍ಗೆ ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡುವುದು ಕೇಂದ್ರ ಸರ್ಕಾರವಲ್ಲ. ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿ ಸ್ಥಬ್ಧ ಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಕೇರಳ ಸರ್ಕಾರ ವಿವಾದ ಸೃಷ್ಟಿಸಬೇಕೆಂಬ ಉದ್ದೇಶದಿಂದಲೇ ನಿಯಮ ಉಲ್ಲಂಘಿಸಿ ಜಟಾಯು, ಮಹರ್ಷಿ ನಾರಾಯಣಗುರು ಹಾಗೂ ಶಂಕರಾಚಾರ್ಯರನ್ನು ವಿವಾದದಲ್ಲಿ ಎಳೆದು ತಂದಿದೆ. ನಿಯಮ ಉಲ್ಲಂಘನೆ ಮಾಡಿದ ಕೇರಳದ ಕಮ್ಯುನಿಸ್ಟ್ ಸರ್ಕಾರ ಈಗ ಈ ವಿಚಾರವನ್ನು ಸಮಾಜವನ್ನು ಒಡೆಯುವುದಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಜಿಲ್ಲೆಗೊಂದು ಮಠ ಮಾಡಲಿ ಮೂರನೇ ಪಂಚಮಸಾಲಿ ಪೀಠಕ್ಕೆ ನಮ್ಮ ಬೆಂಬಲ: ವಚನಾನಂದ ಸ್ವಾಮೀಜಿ

    ಕೇರಳ ರಾಜ್ಯ ಸೃಷ್ಟಿಸಿದ ವಿವಾದದ ಕೂಸನ್ನು ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎತ್ತಿ ಆಡಿಸುತ್ತಿದ್ದಾರೆ. ಸಮಾಜವನ್ನು ಜಾತಿ, ಧರ್ಮದ ಆಧಾರದ ಮೇಲೆ ಒಡೆಯುವ ಕೆಲಸದಲ್ಲಿ ಸಿದ್ದರಾಮಯ್ಯ ಉನ್ನತ ಪದವಿ ಪಡೆದಿದ್ದಾರೆ. ಹೀಗಾಗಿ ನಾರಾಯಣ ಗುರುಗಳನ್ನೂ ತಮ್ಮ ಕ್ಷುಲ್ಲಕ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರಾಜ್ಯದಲ್ಲಿ ವಿಷಮ ಸಮರಾಂಗಣ ಸೃಷ್ಟಿಸಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಚುನಾವಣೆ ಗೆಲ್ಲುವುದಕ್ಕಾಗಿ ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮದ ವಿವಾದ ಹುಟ್ಟುಹಾಕಿದರು. ದೇಶವನ್ನು ಕಾಯುವ ಸೈನಿಕರ ಜಾತಿ ಹುಡುಕುವ ಸಣ್ಣತನ ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದಲ್ಲೂ ಜಾತಿ ವಿಷ ಬೀಜ ಬಿತ್ತಿದರು. ಶಾದಿ ಭಾಗ್ಯ ಯೋಜನೆಯ ಮೂಲಕ ಧರ್ಮಗಳ ಮಧ್ಯೆ ದ್ವೇಷ ಸೃಷ್ಟಿಸಿದರು. ಟಿಪ್ಪು ಜಯಂತಿಯ ಮೂಲಕ ಹಿಂದು ಕಾರ್ಯಕರ್ತರ ನರಮೇಧಕ್ಕೆ ಪೋಷಣೆ ನೀಡಿದರು. ಈಗ ನಾರಾಯಣ ಗುರುಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಒಂದು ಸಮುದಾಯದ ಭಾವನೆ ಕೆಣಕುವುದು ನಿಮಗೆ ಶೋಭೆ ತರುತ್ತದೆಯೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಸಿದ್ದರಾಮಯ್ಯ ಅವರ ಮಾತಿನಲ್ಲಿ ಬೆಲ್ಲ, ಕೈಯಲ್ಲಿ ಕೋಲು ಎಂಬ ಧೋರಣೆಯನ್ನು ಕರ್ನಾಟಕದ ಜನತೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗದವರ ಭಾವನೆ ಕೆಣಕಿ ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಿಸುವ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೊನಾ ಪಾಸಿಟಿವ್

    ಗಣರಾಜ್ಯೋತ್ಸವದ ದಿನ ಮಹರ್ಷಿ ನಾರಾಯಣಗುರುಗಳ ಸ್ತಬ್ಧ ಚಿತ್ರದ ಮೆರವಣಿಗೆಯನ್ನು ರಾಜ್ಯದಲ್ಲಿ ನಡೆಸುತ್ತೇವೆ ಎಂದು ಕೆಲ ಸಂಘಟನೆಗಳು ಕರೆ ನೀಡಿವೆ. ನಾರಾಯಣ ಗುರುಗಳ ಬಗ್ಗೆ ಅಪಾರ ಗೌರವ ಹೊಂದಿರುವ ನಾನು ಈ ನಡೆಯನ್ನು ಸ್ವಾಗತಿಸುತ್ತೇನೆ. ಸ್ತಬ್ಧ ಚಿತ್ರ ಮೆರವಣಿಗೆಗೆ ನಮ್ಮ ಕಡೆಯಿಂದ ಅಗತ್ಯವಿರುವ ಎಲ್ಲಾ ಸಹಕಾರವನ್ನು ಹೃದಯಪೂರ್ವಕವಾಗಿ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.

  • ಮೇ 15ರಿಂದ ಕೇರಳದ ಪ್ರತಿ ಕುಟುಂಬಕ್ಕೆ ಉಚಿತ ಆಹಾರ ಕಿಟ್ ವಿತರಣೆ

    ಮೇ 15ರಿಂದ ಕೇರಳದ ಪ್ರತಿ ಕುಟುಂಬಕ್ಕೆ ಉಚಿತ ಆಹಾರ ಕಿಟ್ ವಿತರಣೆ

    – ಫುಡ್ ಕಿಟ್‍ನಲ್ಲಿ ಏನೆಲ್ಲ ಇರುತ್ತೆ?

    ತಿರುವನಂತಪುರ: ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನೂತನವಾಗಿ ಅಧಿಕಾರಕ್ಕೆ ಬಂದಿರುವ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ವಲಸೆ ಕಾರ್ಮಿಕರು ಸೇರಿದಂತೆ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಮೇ 15 ರಿಂದ ಉಚಿತ ಆಹಾರ ಕಿಟ್ ವಿತರಿಸಲು ಮುಂದಾಗಿದೆ.

    ಕೊರೊನಾ ಎರಡನೇ ಅಲೆಯಿಂದಾಗಿ ಇದೀಗ ಕೇರಳದಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಈ ವೇಳೆ ಯಾವುದೇ ಒಬ್ಬ ನಾಗರಿಕನಿಗೂ ಕೂಡ ಆಹಾರಕ್ಕೆ ಸಮಸ್ಯೆ ಆಗಬಾರೆಂಬ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

    ಈ ಕುರಿತು ಟ್ವಿಟ್ಟರ್ ಮೂಲಕ ತಿಳಿಸಿರುವ ಪಿಣರಾಯಿ ವಿಜಯನ್, ಲಾಕ್‍ಡೌನ್ ಅವಧಿಯಲ್ಲಿ ಯಾರೊಬ್ಬರೂ ಕೂಡ ಹಸಿವಿನಿಂದ ಒದ್ದಾಡಬಾರದು. ಹಾಗಾಗಿ ಮುಂದಿನ ವಾರದಿಂದ ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಸೇರಿ ಪ್ರತಿಯೊಂದು ಕುಟುಂಬಕ್ಕೂ ಕೂಡ ಉಚಿತ ಆಹಾರ ಕಿಟ್ ವಿತರಣೆಗೆ ನಿರ್ಧರಿಸಲಾಗಿದೆ. ನಿಮ್ಮ ಸ್ಥಳೀಯ ಆಡಳಿತವು ನಿಮಗೆ ಆಹಾರ ಕಿಟ್‍ಗಳನ್ನು ತಲುಪಿಸುವ ಕಾರ್ಯ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.

    ಇದಲ್ಲದೆ ಸ್ಥಳೀಯ ಆಡಳಿತ ಯಾರಿಗೆ ಆಹಾರದ ಅವಶ್ಯಕತೆ ಇದೆ ಅಂತವರಿಗೆ ಕಮ್ಯೂನಿಟಿ ಕಿಚನ್ ತೆರೆದು ಆಹಾರ ಕೊಡುವಂತೆ ಸೂಚಿಸಿದ್ದಾರೆ. ಸರ್ಕಾರದಿಂದ ಬರುವ ಆಹಾರ ಕಿಟ್‍ನಲ್ಲಿ ಒಟ್ಟು 10 ಬಗೆಯ ಸಾಮಾಗ್ರಿಗಳಿರಲಿದ್ದು, ತೊಗರಿ ಬೇಳೆ 500ಗ್ರಾಂ, ಹೆಸರು ಕಾಳು 500ಗ್ರಾಂ, ಸಕ್ಕರೆ 1 ಕೆ.ಜಿ, ಚಹ ಪುಡಿ 100 ಗ್ರಾಂ, ಮೆಣಸಿನ ಪುಡಿ 100 ಗ್ರಾಂ, ಅರಶಿನ ಪುಡಿ 100 ಗ್ರಾಂ, ಉಪ್ಪು 1 ಕೆ.ಜಿ, ಅಕ್ಕಿ 5 ಕೆ.ಜಿ, ತೆಂಗಿನ ಎಣ್ಣೆ 1 ಲೀಟರ್, ಬಟಾಟೆ 1 ಕೆ.ಜಿ, ಈರುಳ್ಳಿ 1 ಕೆ.ಜಿ ಇರಲಿದೆ ಎಂದು ತಿಳಿಸಿದ್ದಾರೆ.

    ಕೇರಳದಲ್ಲಿ ಈಗಾಗಲೇ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೂ ಕೂಡ ಆಹಾರ ಕಿಟ್ ವಿತರಣೆ ಮಾಡಲು ಮುಂದಾಗಿರುವುದರಿಂದ ಹಲವರ ಹಸಿವನ್ನು ನೀಗಿಸುವ ಕಾರ್ಯಕ್ಕೆ ಕೇರಳ ಸರ್ಕಾರ ಮುಂದಾಗಿದೆ ಎಂದು ಸರ್ಕಾರದ ನಡೆಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ.

  • ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಪೈಲಟ್ ಮಾಡಲಿದೆ ಕೇರಳ ಸರ್ಕಾರ

    ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಪೈಲಟ್ ಮಾಡಲಿದೆ ಕೇರಳ ಸರ್ಕಾರ

    ತಿರುವನಂತಪುರಂ: ತೃತೀಯ ಲಿಂಗಿ ಎಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಕೇರಳ ಸರ್ಕಾರ ಕಮರ್ಷಿಯಲ್ ಪೈಲಟ್ ಮಾಡಲು ಮುಂದಾಗಿದೆ.

    ಕೇರಳದ 20 ವರ್ಷದ ತೃತೀಯ ಲಿಂಗಿ ಆಡಂ ಹ್ಯಾರಿಯನ್ನು ಆತನ ಪೋಷಕರು ಮನೆಯಿಂದ ಹೊರ ಹಾಕಿದ್ದಾರೆ. ಆಡಂ ಈಗ ದೇಶದ ಮೊದಲ ತೃತೀಯ ಲಿಂಗಿ ಕಮರ್ಷಿಯಲ್ ಪೈಲಟ್ ಆಗಲಿದ್ದಾರೆ. ಅಲ್ಲದೆ ಕೇರಳ ಸರ್ಕಾರ ಆಡಂ ಟ್ರೈನಿಂಗ್ ಖರ್ಚು ನೋಡಿಕೊಳ್ಳುವುದಾಗಿ ತಿಳಿಸಿದೆ.

    ಆಡಂ ಬಳಿ ಈಗಾಗಲೇ ಪ್ರೈವೆಟ್ ಪೈಲಟ್ ಲೈಸೆನ್ಸ್ ಇದೆ. ಆದರೆ ಪ್ರಯಾಣಿಕರ ವಿಮಾನವನ್ನು ಚಲಾಯಿಸಲು ಕಮರ್ಷಿಯಲ್ ಲೈಸೆನ್ಸ್ ಬೇಕಾಗಿದೆ. ಕುಟುಂಬಸ್ಥರು ಮನೆಯಿಂದ ಹೊರಹಾಕಿದ ಕಾರಣ ಆಡಂ ಬಳಿ ತರಬೇತಿಯ ಶುಲ್ಕ ಪಾವತಿಸಲು ಹಣವಿರಲಿಲ್ಲ. ಆಡಂನ 3 ವರ್ಷಗಳ ತರಬೇತಿಗಾಗಿ ಕೇರಳ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ 23.34 ಲಕ್ಷ ರೂ. ಬಿಡುಗಡೆ ಮಾಡಿದೆ.

    ಆಡಂ ಈಗ ತಿರುವನಂತಪುರಂನ ರಾಜೀವ್ ಗಾಂಧಿ ಏವಿಯೇಷನ್ ಟೆಕ್ನಾಲಜಿ ಅಕಾಡೆಮಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಅಧ್ಯಯನ ಮಾಡಲಿದ್ದಾರೆ. ಇದನ್ನೂ ಓದಿ:  ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

    ಈ ಬಗ್ಗೆ ಪ್ರತಿಕ್ರಿಯಿಸಿದ ಆಡಂ ಹ್ಯಾರಿ, ಈ ಸಹಾಯಕ್ಕಾಗಿ ಕೇರಳ ಸರ್ಕಾರಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಬಾಲ್ಯದ ಕನಸು ನನಸಾಗುತ್ತಿರುವುದ್ದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

    ಕಮರ್ಷಿಯಲ್ ಲೈಸೆನ್ಸ್ ಬೇಕೆಂದರೆ ಪೈಲಟ್‍ಗೆ 200 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿರುವ ಅನುಭವ ಬೇಕಾಗುತ್ತದೆ. ಆಡಂ ಕೇರಳದ ತ್ರಿಶೂರ್ ಜಿಲ್ಲೆಯವರಾಗಿದ್ದು, ಪ್ರೈವೇಟ್ ಪೈಲಟ್ ಲೈಸೆನ್ಸ್ ಪಡೆದ ದೇಶದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಂ 2017ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ತರಬೇತಿ ಪಡೆದ ನಂತರ ಅವರಿಗೆ ಲೈಸೆನ್ಸ್ ನೀಡಲಾಗಿತ್ತು.

  • 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ

    50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ

    ತಿರುವನಂತಪುರ: 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

    ಶಬರಿಮಲೆಯ ದೇವಾಲಯಕ್ಕೆ ಎಲ್ಲ ವಯೋಮಾನದವರಿಗೂ ಪ್ರವೇಶ ಕಲ್ಪಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಇದುವರೆಗೂ 51 ಮಹಿಳೆಯರು ದೇವಾಲಯ ಪ್ರವೇಶ ಮಾಡಿದ್ದಾರೆ ಎಂದು ಸರ್ಕಾರ ನೀಡಿರುವ ಮಾಹಿತಿಯಲ್ಲಿ ತಿಳಿದು ಬಂದಿದೆ. ಪ್ರಮುಖವಾಗಿ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯಲ್ಲಿ ದೇಗುಲ ಪ್ರವೇಶ ಮಾಡಿದ ಎಲ್ಲಾ ಮಹಿಳೆಯರ ಹೆಸರುಗಳನ್ನು ಡಿಜಿಪಿ ನಮೂದಿಸಿದ್ದಾರೆ. ಇದರಲ್ಲಿ ಕೆಲ ಮಹಿಳೆಯರು 18 ಮೆಟ್ಟಿಲು ಹತ್ತಿ ದೇಗುಲ ಪ್ರವೇಶ ಮಾಡಿದರೆ, ಉಳಿದವರು ವಿಶೇಷ ದರ್ಶನ ಮಾಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

    ಕೇರಳ ಸರ್ಕಾರ ಪರವಾಗಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥರು ಈ ಮಾಹಿತಿಯನ್ನು ನೀಡಿದ್ದಾರೆ. ಪ್ರಮುಖವಾಗಿ ದೇವಾಲಯ ಪ್ರವೇಶ ಮಾಡಿರುವ ಮಹಿಳೆಯರಲ್ಲಿ ಕೇರಳದವರು ಕಡಿಮೆ ಸಂಖ್ಯೆಯಲ್ಲಿದ್ದು, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೇ ದೇಗುಲ ಪ್ರವೇಶ ಮಾಡಲು ಇದುವರೆಗೂ ಸುಮಾರು 7,500 ಸಾವಿರ ಮಹಿಳೆಯರು ತಮ್ಮ ಆಧಾರ್ ಮಾಹಿತಿ ಮೂಲಕ ನೋಂದಣಿ ಮಾಡಿಕೊಂಡಿದ್ದು, 50 ಮಹಿಳೆಯರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿಯಲ್ಲಿ ನೀಡಲಾಗಿದೆ.

    ಜ. 2ರಂದು ದೇವಾಲಯ ಪ್ರವೇಶ ಮಾಡಿದ್ದ ಕನಕದುರ್ಗ ಎಂಬ ಮಹಿಳೆ ವಿರುದ್ಧ ಕುಟುಂಬಸ್ಥರೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಕನಕದುರ್ಗ ಅವರ ಮೇಲೆ ಹಲ್ಲೆ ಕೂಡ ನಡೆಸಲಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ರಕ್ಷಣೆಗಾಗಿ ನ್ಯಾಯಾಲಯದ ಮೆಟ್ಟಲು ಹತ್ತಿದ್ದ ಕನಕದುರ್ಗ ಹಾಗೂ ಬಿಂದು ಅವರಿಗೆ ರಕ್ಷಣೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv