Tag: Kerala Blast

  • ಕೇರಳ ಸ್ಫೋಟ – ಮಹಿಳೆ ಸಾವು, ಸಾವಿನ ಸಂಖ್ಯೆ 5ಕ್ಕೆ ಏರಿಕೆ

    ಕೇರಳ ಸ್ಫೋಟ – ಮಹಿಳೆ ಸಾವು, ಸಾವಿನ ಸಂಖ್ಯೆ 5ಕ್ಕೆ ಏರಿಕೆ

    ತಿರುವನಂತಪುರಂ: ಕೇರಳದ (Kerala) ಕೊಚ್ಚಿಯಲ್ಲಿ (Kochi) ನಡೆದ ಕ್ರಿಶ್ಚಿಯನ್ನರ ಪ್ರಾರ್ಥನಾ ಸಭೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ (Blast) ಸಂಬಂಧಿಸಿದಂತೆ ಇದೀಗ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. 45 ವರ್ಷದ ಮಹಿಳೆ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    ಮೃತರನ್ನು ಸಾಲಿ ಪ್ರದೀಪ್ (45) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ 10:30 ರ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಪ್ರಕಾರ ಮೃತ ಮಹಿಳೆಯ ಮಗಳು ಲಿಬ್ನಾ ತಿಂಗಳ ಹಿಂದೆ ಸ್ಫೋಟ ಸಂಭವಿಸಿದ ವೇಳೆ ತೀವ್ರವಾದ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಳು. ಆಕೆಯ ಸಹೋದರನ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ.

    ರಾಜ್ಯ ಆರೋಗ್ಯ ಇಲಾಖೆಯು ಅಧಿಕಾರಿಗಳ ಪ್ರಕಾರ ದುರ್ಘಟನೆಯ ಬಳಿಕ ಸ್ಫೋಟದಲ್ಲಿ ಗಾಯಗೊಂಡವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಪರೀಕ್ಷಾ ಅಕ್ರಮ ಕೇಸ್ – ಸಿಐಡಿ ಫುಲ್ ಅಲರ್ಟ್

    ಅಕ್ಟೋಬರ್ 29 ರಂದು ಕೊಚ್ಚಿಯ ಕಲಮಸ್ಸೆರಿ ಪ್ರದೇಶದಲ್ಲಿ ಪ್ರಾರ್ಥನಾ ಸಭೆಯಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದವು. ಘಟನೆ ಬಳಿಕ ಡೊಮಿನಿಕ್ ಮಾರ್ಟಿನ್ ಎಂಬಾತ ತಾನೇ ಬಾಂಬ್‌ಗಳನ್ನು ಸ್ಫೋಟಿಸಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದ. ಇದೀಗ ಆರೋಪಿಯನ್ನು ನವೆಂಬರ್ 15 ರವರೆಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

    ರಿಮೋಟ್ ನಿಯಂತ್ರಿತ ಸುಧಾರಿತ ಸ್ಫೋಟಕ ಸಾಧನದಿಂದ (ಐಇಡಿ) ಸ್ಫೋಟ ಸಂಭವಿಸಿದೆ ಎಂದು ಕೇರಳ ಪೊಲೀಸರು ಹೇಳಿದ್ದರು. ಮಾರ್ಟಿನ್ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಹಠಾತ್ ಬ್ರೇಕ್ – ಇಬ್ಬರ ದುರ್ಮರಣ

  • ಕೇರಳ ಬ್ಲಾಸ್ಟ್- ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಸಾವು

    ಕೇರಳ ಬ್ಲಾಸ್ಟ್- ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಸಾವು

    – ಸಾವಿನ ಸಂಖ್ಯೆ 4ಕ್ಕೆ ಏರಿಕೆ

    ತಿರುವನಂತಪುರಂ: ಅಕ್ಟೋಬರ್ 29ರಂದು ಕೇರಳದ (Kerala) ಕೊಚ್ಚಿಯಲ್ಲಿ (Kochi) ಕ್ರಿಶ್ಚಿಯನ್ ಧಾರ್ಮಿಕ ಸಭೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ (Bomb Blast) ಮೃತಪಟ್ಟವರ ಸಂಖ್ಯೆ ಇಲ್ಲಿಯವರೆಗೆ 4ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಇಂದು (ಸೋಮವಾರ) ಸಾವನ್ನಪ್ಪಿದ್ದಾರೆ.

    ಮೃತ ಮಹಿಳೆಯನ್ನು ಕಲಮಸ್ಸೆರಿಯ ಮೋಲಿ ಜಾಯ್ ಎಂದು ಗುರುತಿಸಲಾಗಿದೆ. ಸ್ಫೋಟ ಸಂಭವಿಸಿದ ವೇಳೆ ಮಹಿಳೆಗೆ 70% ರಷ್ಟು ಸುಟ್ಟ ಗಾಯಗಳಾಗಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ವೆಂಟಿಲೇಟರ್‌ನ ಬೆಂಬಲದಲ್ಲಿದ್ದರು. ಸೋಮವಾರ ಮುಂಜಾನೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಮಹಿಳೆಗೆ ಆರಂಭದಲ್ಲಿ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಎರ್ನಾಕುಲಂ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಎರ್ನಾಕುಲಂ ಜಿಲ್ಲೆಯ ಮಲಯತ್ತೂರ್‌ನ ಲಿಬಿನಾ ಎಂಬ 12 ವರ್ಷದ ಬಾಲಕಿ ಕೂಡ ಅಕ್ಟೋಬರ್ 30 ರಂದು ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಇದನ್ನೂ ಓದಿ: ಸತತ 4ನೇ ದಿನ ವಾಯುಗುಣಮಟ್ಟ ಕುಸಿತ – ದೆಹಲಿಯಲ್ಲಿ ಹೈವೋಲ್ಟೇಜ್‌ ಸಭೆ ಕರೆದ ಸಿಎಂ

    ಸ್ಫೋಟ ನಡೆದ ದಿನ ಸ್ಥಳದಲ್ಲಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಘಟನೆಯಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಫೋಟ ಸಂಭವಿಸಿದ ಕೆಲ ಗಂಟೆಗಳ ನಂತರ ತ್ರಿಶ್ಶೂರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ಆತ ಈ ಸ್ಫೋಟಗಳನ್ನು ನಡೆಸಿರುವುದಾಗಿ ಹೇಳಿಕೊಂಡಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್