Tag: Keragodu

  • ಕೆರೆಗೋಡು ಹನುಮ ಧ್ವಜ ಪ್ರಕರಣ – ಪಿಡಿಓ ಅಮಾನತು

    ಕೆರೆಗೋಡು ಹನುಮ ಧ್ವಜ ಪ್ರಕರಣ – ಪಿಡಿಓ ಅಮಾನತು

    ಮಂಡ್ಯ: ಕೆರಗೋಡು (Keragodu) ಹನುಮ ಧ್ವಜ  (Hanuman Flag Clash) ಪ್ರಕರಣದಲ್ಲಿ ಕೆರಗೋಡು ಗ್ರಾಮ ಪಂಚಾಯತಿಯ ಪಿಡಿಓ ತಲೆದಂಡವಾಗಿದೆ. ಪಿಡಿಓ (PDO) ಜೀವನ್ ಬಿ.ಎಂ ಅವರನ್ನು ಐದು ಕಾರಣ ನೀಡಿ ಅಮಾನತು ಮಾಡಲಾಗಿದೆ.

    ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ತನ್ವೀರ್ ಆಶೀಫ್ ಸೇಠ್ ಪಿಡಿಓ ಅವರನ್ನು ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ. ಗ್ರಾಪಂ ಸ್ವತ್ತನ್ನು ಖಾಸಗಿಯವರಿಗೆ ನೀಡುವುದಕ್ಕೆ ಸರ್ಕಾರದ ಅನುಮತಿ ಕಡ್ಡಾಯ. ಈ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿ ಖಾಸಗಿಯವರಿಗೆ ನೀಡಲಾಗಿದೆ. ಕೆರಗೋಡು ಗ್ರಾಮದಲ್ಲಿ ನಡೆದ ಸಂಘರ್ಷಕ್ಕೆ ಪಿಡಿಓ ನೇರ ಕಾರಣವಾಗಿದ್ದಾರೆ. ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವಿಗೆ ಆಕ್ರೋಶ- ಮಂಡ್ಯದಲ್ಲಿ ಕಲ್ಲು ತೂರಾಟ, ಲಾಠಿಚಾರ್ಜ್

    ಇಷ್ಟೇ ಅಲ್ಲದೇ ಧ್ವಜ ಸ್ತಂಭದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಅನುಮತಿ ನೀಡಿ, ಷರತ್ತು ಉಲ್ಲಂಘಿಸಿದ್ದರೂ ಕ್ರಮಕೈಗೊಳ್ಳದೆ ಪಿಡಿಓ ನಿರ್ಲಕ್ಷವಹಿಸಿದ್ದಾರೆ. ರಾಷ್ಟ್ರ ಧ್ವಜದ ಬದಲು ಹನುಮ ಧ್ವಜ ಹಾರಿಸಲು ಅವಕಾಶ ನೀಡಿರುವುದು ಹಾಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕಾರಣ ನೀಡಿ ಪಿಡಿಓ ಅವರನ್ನು ಅಮಾನತು ಮಾಡಿ ಆದೇಶ ಹೊಡಿಸಲಾಗಿದೆ.

    ಕೆರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಸ್ಥರು ರಾಷ್ಟ್ರ ಧ್ವಜ ಹಾರಿಸಲು ಅನುಮತಿ ಪಡೆದು, ಹನುಮ ಧ್ವಜ ಹಾರಿಸಿದ್ದರು. ಬಳಿಕ ಪೊಲೀಸರು ಪ್ರವೇಶಿಸಿ ಹನುಮ ಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ್ದರು. ಹನುಮ ಧ್ವಜ ಇಳಿಸಿದ ವಿಚಾರಕ್ಕೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದವು. ಇದನ್ನೂ ಓದಿ: ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ

  • ಕೆರಗೋಡು ಹನುಮ ಧ್ವಜ ತೆರವಿಗೆ ಆಕ್ರೋಶ- ಮಂಡ್ಯದಲ್ಲಿ ಕಲ್ಲು ತೂರಾಟ, ಲಾಠಿಚಾರ್ಜ್

    ಕೆರಗೋಡು ಹನುಮ ಧ್ವಜ ತೆರವಿಗೆ ಆಕ್ರೋಶ- ಮಂಡ್ಯದಲ್ಲಿ ಕಲ್ಲು ತೂರಾಟ, ಲಾಠಿಚಾರ್ಜ್

    ಮಂಡ್ಯ: ಲೋಕಸಭಾ ಚುನಾವಣೆ (Loksabha Election) ಸನಿಹದಲ್ಲಿ ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಶುರುವಾಗಿದೆ. ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿವಾದ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ಮಾಡಿದೆ. ಅದ್ರಲ್ಲೂ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟದ ತೀವ್ರತೆ ಹೆಚ್ಚಿತ್ತು.

    ಸಿಟಿ ರವಿ (CT Ravi) ನೇತೃತ್ವದಲ್ಲಿ ಕೆರಗೋಡಿನಿಂದ ಮಂಡ್ಯವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ಮಂದಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಹನುಮ ಧ್ವಜ ಹಿಡಿದು ಹಿಂದೂ ಪರ ಘೋಷಣೆಗಳನ್ನು ಮಾಡಿದ್ರು. ಕಂಡ ಕಂಡ ಕಟ್ಟಡಗಳ ಮೇಲೆಲ್ಲಾ ಹನುಮ ಧ್ವಜ ಹಾರಿಸಿದ್ರು. ಮಾರ್ಗಮಧ್ಯೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್, ಬ್ಯಾನರ್ ಗಳು ಹರಿದೆಸೆದು, ಕಲ್ಲು-ಚಪ್ಪಲಿ ತೂರಿ ಆಕ್ರೋಶ ಹೊರಹಾಕಿದ್ರು.

    ಪೊಲೀಸ್ ಬಲದ ಮೂಲಕ ಈ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೀತು. ಮಂಡ್ಯದಲ್ಲಿ ಫ್ಲೆಕ್ಸ್ ಕಿತ್ತೆಸೆಯುವ ಸಂದರ್ಭದಲ್ಲಿ ಪೊಲೀಸರು ಲಾಠಿ ಬೀಸಿದ್ರು. ಪೊಲೀಸ್ ಬಲಪ್ರಯೋಗ ಮಾಡ್ತಿದ್ದಂತೆ ಆಕ್ರೋಶಿತರು ಚಲ್ಲಾಪಿಲ್ಲಿಯಾಗಿ ಓಡಿದ್ರು. ಬಿಜೆಪಿ ಕಾರ್ಯಕರ್ತರೊಬ್ಬರ ಕಣ್ಣಿಗೆ ಗಾಯವಾಯ್ತು. ಇಷ್ಟೆಲ್ಲಾ ಆದ್ಮೇಲೆ ಕೇಸರಿಧಾರಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಎಂಟ್ರಿ ಕೊಟ್ರು. ಲಾಠಿಚಾರ್ಜ್ ಖಂಡಿಸಿ ರಸ್ತೆ ಮೇಲೆ ಧರಣಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.  ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ

    ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ: ಕೆರಗೋಡು ಧ್ವಜ (Keragodu Hanuman Flag) ಪ್ರಕರಣ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಮುಗಿಬಿದ್ದಿವೆ. ತುಷ್ಟೀಕರಣದ ಆಧುನಿಕ ಪಿತಾಮಹ ಸಿದ್ದರಾಮಯ್ಯ ಎಂದು ಬಿಜೆಪಿ ಜರೆದಿದೆ. ಒಂದು ಸಮುದಾಯದ ಓಲೈಕೆಗಾಗಿ ಸಂವಿಧಾನವನ್ನೇ ಬುಡಮೇಲು ಮಾಡುವ ಸೊಕ್ಕನ್ನು ಪ್ರದರ್ಶಿಸಿ ನಾನೇ ತುಘಲಕ್ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಿಡಿಕಾರಿದೆ. ಮತಾಂಧ ಜಿಹಾದಿಗಳು ಬಹಿರಂಗವಾಗಿ ತಲ್ವಾರ್ ಹಿಡಿಯಬಹುದು, ಮತಾಂಧರ ಕಟೌಟ್ ಹಾಕಬಹುದು.ಆದರೆ ಹಿಂದೂಗಳು ಮಾತ್ರ ಏನೂ ಮಾಡುವಂತಿಲ್ಲ. ಅದಕ್ಕೆ ಕಾರಣ ರಾಜ್ಯದಲ್ಲಿ ಇರುವುದು ಐಸಿಸ್ ಮಾದರಿಯ ಸರ್ವಾಧಿಕಾರದ ಅಡಳಿತ ಎಂದು ಟ್ವೀಟ್ ಮೂಲಕ ಕಿಡಿಕಾರಿದೆ. ಬಿಜೆಪಿಯ ಅಶೋಕ್, ಅಶ್ವಥ್‍ನಾರಾಯಣ್, ಸಿಟಿ ರವಿ ಸೇರಿ ಹಲವರು ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವ್ರಂತೂ ಧ್ವಜಸ್ತಂಭದ ವಿಚಾರವಾಗಿ ಸುಳ್ಳು ದಾಖಲೆ ಸೃಷ್ಟಿಯಾಗಿದೆ. ಲಾಠಿ ಚಾರ್ಜ್ ಮಾಡಿರೋದು ರಾಕ್ಷಸಿ ಪ್ರವೃತ್ತಿ ಎಂದು ಕಿಡಿಕಾರಿದ್ದಾರೆ. ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ ಕೊಡಲಾಗಿದೆ.

    ಕಾಂಗ್ರೆಸ್ ಕೌಂಟರ್: ಬಿಜೆಪಿ-ಜೆಡಿಎಸ್ (BJP_ JDS) ಜಂಟಿ ಹೋರಾಟಕ್ಕೆ ಕಾಂಗ್ರೆಸ್ ಡೋಂಟ್ ಕೇರ್ ಎಂದಿದೆ. ಬಿಜೆಪಿಯ ಲೋಕಸಭೆ ಚುನಾವಣೆ ತಾಲೀಮು ಮಂಡ್ಯದಲ್ಲಿ ಶುರುವಾಗಿದೆ. ಇದಕ್ಕೆ ಸೋಕಾಲ್ಡ್ ಜಾತ್ಯಾತೀತ ಜನತಾದಳ ಪೂರ್ಣ ಸಹಕಾರ ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಬ್ರಿಟಿಷರನ್ನೇ ಎದುರಿಸಿದ ಕಾಂಗ್ರೆಸ್, ಈ ಬಿಜೆಪಿ ಮತ್ತು ಆರ್ ಎಸ್‍ಎಸ್ ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ ಎಂದು ಕೆಣಕಿದೆ. ಬ್ರಿಟಿಷರ ಗುಂಡಿಗೆ ಎದೆಗೊಟ್ಟು ತಿರಂಗಾ ಹಾರಿಸಿದ ಪರಂಪರೆ ನಮ್ಮದು. ಈ ಸಂಘಿ, ಕ್ರಿಮಿಕೀಟಗಳು ನಮ್ಮನ್ನು ತಡೆಯಲು ಸಾಧ್ಯವೇ. ನಾವು ದೇಶದ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದೇವೆ. ದೇಶದ್ರೋಹಿ ಬಿಜೆಪಿಗೆ ದಮ್ಮು ತಾಕತ್ತಿದ್ದರೆ ಈ ರಾಷ್ಟ್ರ ಧ್ವಜವನ್ನು ಕಿತ್ತು ಹಾಕುವ ಧೈರ್ಯ ತೋರಲಿ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸವಾಲ್ ಹಾಕಿದೆ.

    ಎಲೆಕ್ಷನ್‍ಗಾಗಿ ಬಿಜೆಪಿ ಹೀಗೆಲ್ಲಾ ಕುತಂತ್ರ ಮಾಡ್ತಿದೆ. ಇದಕ್ಕೆ ಕುಮಾರಸ್ವಾಮಿ ತುಪ್ಪ ಸುರಿಯುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ. ಬಿಜೆಪಿಯವರು ಅಶಾಂತಿ ಸೃಷ್ಟಿಸಲು ಹೀಗೆ ಮಾಡ್ತಿದ್ದಾರೆ ಎಂದು ಡಿಸಿಎಂ ಕಿಡಿಕಾರಿದ್ದಾರೆ. ಸ್ಥಳೀಯ ಶಾಸಕ ಗಣಿಗ ರವಿ ಕೂಡ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆರ್‍ಎಸ್‍ಎಸ್‍ನವರು ಹೊರಗಿನಿಂದ ಬಂದು ಗಲಾಟೆ ಮಾಡಿದ್ದಾರೆ. ಈ ಗಲಾಟೆ ಜೆಡಿಎಸ್-ಆರ್ ಎಸ್‍ಎಸ್ ಕ್ರಿಮಿನಲ್ ಮೈಂಡ್‍ಗಳಿವೆ.. ನಮ್ಮ ಇಂಟೆಲಿಜೆನ್ಸ್ ಫೇಲ್ ಆಗಿದೆ.. ಎಂದು ಗಣಿಗ ರವಿ ಆಪಾದಿಸಿದ್ದಾರೆ. ನಾವು 1 ಲಕ್ಷ ಧ್ವಜ ಹಾರಿಸ್ತೇವೆ.. ಅದ್ಯಾರು ತಡೀತಾರೋ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

  • ದೇವರ ಹೆಸರಲ್ಲಿ ರಾಜಕೀಯ ಸೂಕ್ತವಲ್ಲ: ಕೆ.ಹೆಚ್ ಮುನಿಯಪ್ಪ

    ದೇವರ ಹೆಸರಲ್ಲಿ ರಾಜಕೀಯ ಸೂಕ್ತವಲ್ಲ: ಕೆ.ಹೆಚ್ ಮುನಿಯಪ್ಪ

    – ನಮಗಿಂತ ಒಳ್ಳೆಯ ಕೆಲಸ ಮಾಡಿ ಮತ ಕೇಳಲಿ

    ಬೆಂಗಳೂರು: ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ ಎಂದು ಸಚಿವ ಕೆ.ಹೆಚ್ ಮುನಿಯಪ್ಪ (KH Muniyappa) ಅವರು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ (Mandya) ಹನುಮ ಧ್ವಜ (Keragodu, Hanuman Flag Clash) ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ. ಈ ವೇಳೆ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ. ಭಾರತ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಈ ರಾಷ್ಟ್ರದಲ್ಲಿ ಎಲ್ಲಾ ವರ್ಗದ, ಎಲ್ಲಾ ಧರ್ಮಗಳ ಜನ ಇದ್ದಾರೆ. ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ನಾವೆಲ್ಲ ಅಣ್ಣ-ತಮ್ಮಂದಿರಂತೆ ಬಾಳಬೇಕು ಎಂದಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಒಳ್ಳೆಯ ಅಭ್ಯರ್ಥಿ ತನ್ನಿ- ವೇದಿಕೆಯಲ್ಲೇ ವಿಜಯೇಂದ್ರ ಕಾಲಿಗೆ ಬಿದ್ದ ಚೌಹಾಣ್

    ನಾವು ಗ್ಯಾರೆಂಟಿಗಳನ್ನು ಕೊಟ್ಟು ಮತ ಕೇಳುತ್ತಿದ್ದೇವೆ. ಅವರು ನಮಗಿಂತ ಒಳ್ಳೆಯ ಕೆಲಸ ಮಾಡಿ ಮತ ಕೇಳಲಿ. ರಾಜಕೀಯ ಪಕ್ಷಗಳು ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕು. ಎಲ್ಲಾ ಪಕ್ಷಗಳಲ್ಲೂ ಎಲ್ಲಾ ಧರ್ಮದ ಜನರು ಇರುತ್ತಾರೆ. ಅವರಿಗೆ ಇಷ್ಟ ಬಂದ ದೇವರನ್ನು ಪೂಜೆ ಮಾಡುತ್ತಾರೆ. ರಾಮ ಮಂದಿರದ ವಿಚಾರ ಮುಂದಿಟ್ಟು ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.

    ವೈಯಕ್ತಿಕ ಆಚಾರ-ವಿಚಾರಗಳಲ್ಲಿ ಪಾಲಿಟಿಕ್ಸ್ ಸಲ್ಲದು:

    ಸಿದ್ದರಾಮಯ್ಯನವರ ಹೆಸರೇ ರಾಮನ ಹೆಸರು, ಅದರಲ್ಲಿ ವಿರೋಧ ಹೇಗೆ ಆಗುತ್ತದೆ. ಹೇಳುವುದಕ್ಕೆ ಒಂದು ರೀತಿ ನೀತಿ ಇರಬೇಕು. ಅವರ ಹೆಸರಿನಲ್ಲೇ ರಾಮ ಇರುವಾಗ ವಿರೋಧ ಹೇಗೆ ಮಾಡುತ್ತಾರೆ? ಯಾವ ಧರ್ಮಕ್ಕೂ ವಿರೋಧ ಮಾಡುವುದು ಸಂವಿಧಾನ ಬದ್ಧವಾಗಿ ಇಲ್ಲ. ಆ ರೀತಿ ವಿರೋಧ ಮಾಡುವುದು ಕಾನೂನು ಬಾಹಿರ. ದೇವರ ಮೇಲೆ ಪ್ರೀತಿ ವಿಶ್ವಾಸ ಎಲ್ಲರಿಗೂ ಇದೆ. ಕೆಲವರು ಹಿಂದು, ಕೆಲವರು ಮುಸ್ಲಿಂ ಹಾಗೂ ಕೆಲವರು ಕ್ರೈಸ್ತರು ಅವರವರ ವೈಯಕ್ತಿಕ ಆಚಾರ ವಿಚಾರಗಳಲ್ಲಿ ರಾಜಕೀಯ ಬೆರೆಸಬಾರದು. ನಾವು ಹಿಂದುಗಳಿದ್ದೇವೆ ದೇವರನ್ನು ಪೂಜೆ ಮಾಡುತ್ತೇವೆ ಎಂದಿದ್ದಾರೆ.

    ನಾವು ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರನ್ನು ವಿರೋಧ ಮಾಡುವುದಿಲ್ಲ. ಕಾರಣ ಇಷ್ಟೇ ಗಾಂಧೀಜಿಯವರ ನೇತೃತ್ವದಲ್ಲಿ ಎಲ್ಲರೂ ಒಗ್ಗೂಡಿ ಸ್ವಾತಂತ್ರ್ಯ ತಂದಿದ್ದಾರೆ. ಸೈದ್ಧಾಂತಿಕವಾಗಿ ಜಾತ್ಯತೀತ ರಾಷ್ಟ್ರ ನಮ್ಮದು, ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವವರ ಜೊತೆಗೆ ಏನು ಮಾತನಾಡಲು ಆಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ

  • ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ

    ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ

    ಮಂಡ್ಯ: ತಾಲೂಕಿನ ಕೆರಗೋಡಿನಲ್ಲಿ (Keragodu) ಹನುಮ ಧ್ವಜ ಇಳಿಸಿದ ವಿಚಾರಕ್ಕೆ (Hanuman Flag Clash) ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಇನ್ನೂ ಹಿಂದೂ ಪರ ಸಂಘಟನೆಗಳು ಫೆಬ್ರವರಿ 9 ರಂದು ಮಂಡ್ಯ (Mandya) ಬಂದ್‍ಗೆ ಕರೆಕೊಟ್ಟಿದ್ದು, ಬಿಜೆಪಿ ಹಾಗೂ ಜೆಡಿಎಸ್ ಬಂದ್‍ಗೆ ಬೆಂಬಲ ಸೂಚಿಸಿವೆ.

    ಘಟನೆ ಖಂಡಿಸಿ ಈಗಾಗಲೇ ಬಿಜೆಪಿ (BJP) ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿ ಜಿಲ್ಲೆಗಳಲ್ಲೂ ಹನುಮ ಧ್ವಜ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಿಟ್ಟು ಹನುಮ ಧ್ವಜ ತೆಗಿಸಿದ್ದಾರೆ. ರಾಜ್ಯದ ಶಾಂತಿ ಸುವ್ಯವಸ್ಥೆ ಕದಡಲು ಕಾಂಗ್ರೆಸ್ (Congress) ಮುಂದಾಗಿದೆ. ಅಲ್ಪ ಸಂಖ್ಯಾತರನ್ನು ಒಲೈಸಲು ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ. ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮಾಜಿ ಸಿಎಂ ಹೆಚ್‍ಡಿಕೆ (HD Kumaraswamy) ಸಹ ಈ ಸಂಬಂಧ ತೀವ್ರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹನುಮಂತನ ಕೆಣಕಿದ್ದಕ್ಕೆ ಲಂಕ ದಹನವಾಯ್ತು, ಅದೇ ರೀತಿ ನಿಮ್ಮ ಅವನತಿಯಾಗುತ್ತೆ: ಹೆಚ್‍ಡಿಕೆ ವಾಗ್ದಾಳಿ

    ಅಲ್ಲದೇ ಮಂಡ್ಯದ ಮಹಾವೀರ ಸರ್ಕಲ್‍ನಲ್ಲಿ, ಹನುಮ ಧ್ವಜ ಇಳಿಸಿದ್ದನ್ನು ಖಂಡಿಸಿ ನಡೆದ ಪಾದಯಾತ್ರೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದನ್ನು ಖಂಡಿಸಿ ರಸ್ತೆಯಲ್ಲಿಯೇ ಕುಳಿತು ಪಾದಯಾತ್ರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಾದಯಾತ್ರೆ ವೇಳೆ ಶಾಸಕ ಗಣಿಗ ರವಿ ಅವರ ಫ್ಲೆಕ್ಸ್‍ಗಳನ್ನು ಪ್ರತಿಭಟನಾಕಾರರು ಕಿತ್ತೆಸೆದಿದ್ದಾರೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜವನ್ನು ಹಾರಿಸುತ್ತೇವೆಂದು ಅನುಮತಿ ಪಡೆದು, ಹನುಮ ಧ್ವಜ ಹಾರಿಸಿದ್ದಾರೆ. ಅದೇ ರೀತಿ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾರೆ. ಯಾವುದೇ ಧರ್ಮದ ಬಾವುಟವನ್ನು ಆ ಕಂಬದಲ್ಲಿ ಹಾರಿಸುವುದಿಲ್ಲ ಎಂದಿದ್ದರು. ಈಗ ಹನುಮ ಧ್ವಜ ಹಾಕಿದ್ದಾರೆ. ಅದು ಅವರೇ ಬರೆದುಕೊಟ್ಟ ಮುಚ್ಚಳಿಕೆಗೆ ವಿರುದ್ಧವಾಗಿದೆ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಆಗಿದ್ದವರು. ಅವರೇ ಪ್ರತಿಭಟನೆಗೆ ಹೋಗ್ತಾರೆ ಎಂದರೆ, ಅದು ಪ್ರಚೋದನೆ ಮಾಡುವುದಕ್ಕೆ, ಚುನಾವಣಾ ರಾಜಕೀಯಕ್ಕೆ ಎಂದು ವ್ಯಂಗ್ಯವಾಡಿದ್ದಾರೆ. ಇದು ರಾಜಕೀಯ ಕುತಂತ್ರ. ಅಲ್ಲಿ ಸರ್ಕಾರದ ಯಾವುದೇ ವೈಫಲ್ಯ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜಕೀಯ ಮಾಡೋದು ಬಿಟ್ಟು ಜನರ ಭಾವನೆಗಳಿಗೆ ಬೆಲೆ ಕೊಡಲಿ: ಅಶ್ವಥ್ ನಾರಾಯಣ್

  • ಸಿದ್ದರಾಮಯ್ಯ ರಾಜಕೀಯ ಮಾಡೋದು ಬಿಟ್ಟು ಜನರ ಭಾವನೆಗಳಿಗೆ ಬೆಲೆ ಕೊಡಲಿ: ಅಶ್ವಥ್ ನಾರಾಯಣ್

    ಸಿದ್ದರಾಮಯ್ಯ ರಾಜಕೀಯ ಮಾಡೋದು ಬಿಟ್ಟು ಜನರ ಭಾವನೆಗಳಿಗೆ ಬೆಲೆ ಕೊಡಲಿ: ಅಶ್ವಥ್ ನಾರಾಯಣ್

    ಬೆಂಗಳೂರು: ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಕೆರಗೋಡಿನಲ್ಲಿ (Keragodu) ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (CN Ashwath Narayan) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆರಗೋಡಿನ ಗ್ರಾಮಸ್ಥರು ಸ್ವಂತ ಹಣದಲ್ಲಿ ಧ್ವಜಸ್ತಂಭ ನಿಲ್ಲಿಸಿದ್ದಾರೆ. ಪಂಚಾಯತ್‌ನಿಂದ ನಿರ್ಣಯ ಮಾಡಿದ್ದಾರೆ. ರಾಷ್ಟ್ರಧ್ವಜ, ನಾಡಧ್ವಜ, ಭಗವಾನ್ ಧ್ವಜ ಹಾರಿಸಲು ಅನುಮತಿ ಪಡೆದಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಯಾವ ಕಡೆಯೂ ಭಗವಾನ್ ಧ್ವಜ ಹಾಕಿಲ್ಲ. ಈ ಸರ್ಕಾರಕ್ಕೆ ಇದೊಂದೆ ಧ್ವಜಸ್ತಂಭ ಕಂಡಿದ್ದಾ? ಭಗವಾನ್ ಧ್ವಜ ಹಾರಿಸಿದ್ದು ಕಾನೂನಿನಲ್ಲಿ ತಪ್ಪು ಇದ್ದರೆ ನೋಟಿಸ್ ಕೊಡಬಹುದಿತ್ತು. ಆದರೆ ಇವರು ಏಕಾಏಕಿ ಬಂದು ಭಗವಾನ್ ಧ್ವಜ ಇಳಿಸಿದರು ಎಂದು ಕಿಡಿಕಾರಿದರು. ಇದನ್ನೂ ಓದಿ:‌ ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ: ಹೆಚ್‌ಡಿಕೆ ವಾಗ್ದಾಳಿ

    ರಾಷ್ಟ್ರಧ್ವಜ ಹಾರಾಟ ಮಾಡಲು ಅಧಿಕಾರಿಗಳು ಕಾನೂನು ಪಾಲನೆ ಮಾಡಿಲ್ಲ. ಎಸಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಗ್ರಾಮಸ್ಥರು ಎಸಿ ವಿರುದ್ಧ ದೂರು ಕೊಟ್ಟಿದ್ದಾರೆ. ತಕ್ಷಣ ಅವರ ಮೇಲೆ ಕ್ರಮ ಆಗಬೇಕು. ಎಫ್‌ಐಆರ್ ಹಾಕಬೇಕು. ಎಸಿ ವಿರುದ್ಧ ಕ್ರಮ ಆಗಬೇಕು. ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: I am a Hindu, ಆದ್ರೆ ಬಿಜೆಪಿಯವರು ಚುನಾವಣೆಗೋಸ್ಕರ ಪ್ರಚೋದನೆ ಕೊಡ್ತಿದ್ದಾರೆ: ಸಿಎಂ ಸಿಡಿಮಿಡಿ

    ಭಗವಾನ್ ಧ್ವಜ ಹಾರಾಟ ಬಿಜೆಪಿ ಅವರ ರಾಜಕೀಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕನ್ಫ್ಯೂಸ್ ಆಗಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಮಾಡೋದ್ರಲ್ಲಿ ನಿಸ್ಸೀಮರು. ಮಂಡ್ಯದ ಶಾಸಕರು ಯಾರು ಕಾಂಗ್ರೆಸ್ ಶಾಸಕರೇ ಅಲ್ಲವಾ? ಅಲ್ಲಿನ ಜನರೇ ಹಣ ಸಂಗ್ರಹ ಮಾಡಿ ಧ್ವಜ ಸ್ಥಾಪನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜೀವನದಲ್ಲಿ ಎರಡು ರೂಪಾಯಿ ಖರ್ಚು ಮಾಡಿಲ್ಲ. ಜನರೇ ದುಡ್ಡು ಹಾಕಿ ಮಾಡಿದ್ದಾರೆ. ಈಗ ಅದಕ್ಕೂ ಇವರು ವಿರೋಧ ಮಾಡುತ್ತಿದ್ದಾರೆ. ಸರ್ಕಾರ ಭಾವನೆಗಳನ್ನು ಗೌರವಿಸಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ ಮಹಿಳಾ ರಾಷ್ಟ್ರಪತಿಗೆ ಕೊಡೋ ಗೌರವ ಇದೇನಾ – ಪ್ರಹ್ಲಾದ್‌ ಜೋಶಿ ಪ್ರಶ್ನೆ

    ಸಿದ್ದರಾಮಯ್ಯಗೆ ಜನ ಆಡಳಿತ ಮಾಡಲು ಅಧಿಕಾರ ಕೊಟ್ಟಿದ್ದಾರೆ. ಆದರೆ ಅವರು ಆಡಳಿತ ಬಿಟ್ಟು ಬೇರೆ ಎಲ್ಲಾ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ರಾಜಕೀಯ ಮಾಡೋದು ಬೇಡ. ಸಿದ್ದರಾಮಯ್ಯ ಅವರು ರಾಜಕೀಯ ಬಿಟ್ಟು ಜನರ ಭಾವನೆಗೆ ಬೆಲೆ ಕೊಡಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ಭುಗಿಲೆದ್ದ ಆಕ್ರೋಶ – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ

  • ಹನುಮಧ್ವಜ ಸಂಘರ್ಷ; ಭುಗಿಲೆದ್ದ ಆಕ್ರೋಶ – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ

    ಹನುಮಧ್ವಜ ಸಂಘರ್ಷ; ಭುಗಿಲೆದ್ದ ಆಕ್ರೋಶ – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ

    – ನೋಟಿಸ್ ನೀಡಿದರೂ ಪ್ರತಿಭಟನೆಗೆ ಮುಂದಾದ ಬಿಜೆಪಿಗರು
    – ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ

    ಬೆಂಗಳೂರು: ಮಂಡ್ಯದ (Mandya) ಕೆರಗೋಡಿನಲ್ಲಿ (Keragodu) ಹನುಮ ಧ್ವಜ ತೆರವುಗೊಳಿಸಿದ ಪ್ರಕರಣ ಖಂಡಿಸಿ ಇಂದು (ಸೋಮವಾರ) ರಾಜ್ಯಾದ್ಯಂತ ಬಿಜೆಪಿಯಿಂದ (BJP) ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲೂ (Mysuru Bank Circle) ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಭಾರೀ ಹೈಡ್ರಾಮಾ ಕಂಡುಬಂದಿತು. ಇದನ್ನೂ ಓದಿ: ಇನ್ನೊಂದೇ ವಾರದಲ್ಲಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ -‌ ಬಿಜೆಪಿ ಸಚಿವರ ಗ್ಯಾರಂಟಿ

    ರಾಷ್ಟ್ರಧ್ವಜಕ್ಕೆ ಸರ್ಕಾರದಿಂದ ಅಪಮಾನ ಹಾಗೂ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಐವರು ಇನ್ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿದೆ. ಪ್ರತಿಭಟನೆಗೆ ಅವಕಾಶ ನಿರಾಕರಿಸಿ ನೊಟೀಸ್ ಜಾರಿ ಮಾಡಲಾಗಿದೆ. ಆದರೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಶಾಸಕರು ಪ್ರತಿಭಟನೆಗೆ ಧುಮುಕಿದ್ದಾರೆ. ಇದನ್ನೂ ಓದಿ: ಶೋಷಿತರ ಸಮಾವೇಶದಲ್ಲಿ ಕ್ಷಿಂಟಾಲ್‌ಗಟ್ಟಲೇ ಚಿಕನ್ ಬಿರಿಯಾನಿ ನೆಲದ ಪಾಲು

    ಬ್ಯಾರಿಕೇಡ್ ಮತ್ತು ಪೊಲೀಸ್ ದಿಗ್ಬಂಧನದ ನಡುವೆ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟವೂ ನಡೆದಿದ್ದು, ನಂತರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಡ್ರೋನ್‌ ದಾಳಿಗೆ ಅಮೆರಿಕದ ಮೂವರು ಸೈನಿಕರು ಬಲಿ – ತಕ್ಕ ಉತ್ತರ ಕೊಡುತ್ತೇವೆ: ಬೈಡನ್‌ ಎಚ್ಚರಿಕೆ

    ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅಶೋಕ್ ಆಗಮಿಸುವ ಮೊದಲೇ ಪ್ರತಿಭಟನೆ ಮುಗಿದುಹೋಗಿದೆ. ಅಶೋಕ್ ಆಗಮನದ ಮೊದಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿರುವ ಪ್ರಸಂಗವೂ ನಡೆದಿದೆ. ಇದನ್ನೂ ಓದಿ: ಗಣರಾಜ್ಯೋತ್ಸವ ನೃತ್ಯದಲ್ಲಿ ಕಮಲದ ಹೂವನ್ನು ಎದ್ದು ಕಾಣುವಂತೆ ತೋರಿಸಿದ್ದರು – ಶಿವಲಿಂಗೇಗೌಡ

    ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಿ.ಕೆ ರಾಮಮೂರ್ತಿ, ಕೆರಗೋಡಿನಲ್ಲಿ ಹನುಮ ಧ್ವಜಕ್ಕೆ ಅಪಮಾನ ಆಗಿದೆ. ಅದಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಶಾಸಕ ರವಿ ಗಣಿಗರು ಪೊಲೀಸರನ್ನು ಬಿಟ್ಟು ಲಾಠಿ ಚಾರ್ಜ್ ಮಾಡಿಸಿದ್ದಾರೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳಿಗೆ ರಕ್ಷಣೆ ಇಲ್ಲ. ಹೋರಾಟ ಮಾಡುವವರ ಮೇಲೆ ಎಫ್‌ಐಆರ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಾಂಗ್ಲಾದೇಶದ ಮುಖ್ಯಮಂತ್ರಿನಾ? ಪಾಕಿಸ್ತಾನದ ಮುಖ್ಯಮಂತ್ರಿನಾ? ಡಿಸಿ ಕಚೇರಿಗೆ ಮನವಿ ಕೊಡಲು ಪೊಲೀಸರು ಬಿಡುತ್ತಿಲ್ಲ. ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಶಾಸಕ ರವಿ ಗಣಿಗರನ್ನು ಜೈಲಿಗೆ ಹಾಕಿ, ನಮ್ಮನ್ನಲ್ಲ. ನಾವೇ ರವಿ ಗಣಿಗ ವಿರುದ್ಧ ದೂರು ಕೊಡುತ್ತೇವೆ. ಎಫ್‌ಐಆರ್ ಹಾಕಲಿ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ

  • ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರಧ್ವಜ ಹಾರಿಸಲಷ್ಟೇ ಅವಕಾಶ: ಚಲುವರಾಯಸ್ವಾಮಿ ಸ್ಪಷ್ಟನೆ

    ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರಧ್ವಜ ಹಾರಿಸಲಷ್ಟೇ ಅವಕಾಶ: ಚಲುವರಾಯಸ್ವಾಮಿ ಸ್ಪಷ್ಟನೆ

    – ರಾಜಕೀಯ, ಧಾರ್ಮಿಕ ಧ್ವಜಗಳಿಗೆ ಅವಕಾಶ ಇಲ್ಲ ಎಂದ ಸಚಿವ

    ಬೆಂಗಳೂರು: ಸಂವಿಧಾನದ ಅಡಿಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲಷ್ಟೇ ಅವಕಾಶವಿದೆ. ಇದರ ಹೊರತಾಗಿ ಯಾವುದೇ ರಾಜಕೀಯ, ಧಾರ್ಮಿಕ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ (N Chaluvarayaswamy) ತಿಳಿಸಿದರು.

    ಕೆರಗೋಡು (Keragodu) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹನುಮ ಧ್ವಜ (Hanuman Flag) ಹಾರಿಸಿರುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದನ್ನು ಹೊರತುಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸೋದು ತಪ್ಪು. ಸೋಮವಾರ ಬೆಳಗ್ಗೆ ಡಿಸಿ ಕಚೇರಿ ಮುಂದೆ ಹಾರಿಸುತ್ತೇನೆ ಎನ್ನುತ್ತಾರೆ. ಆಗ ಅವಕಾಶ ಕೊಡಲು ಆಗುತ್ತಾ? ಇದು ಒಂದು ಕಡೆ ಅವಕಾಶ ಕೊಟ್ಟರೆ ಎಲ್ಲಾ ಕಡೆ ಕೇಳುತ್ತಾರೆ. ಇದು ತಪ್ಪು ಎಂದರು. ಇದನ್ನೂ ಓದಿ: ಕಸ ಮತ್ತೆ ಡಸ್ಟ್‌ಬಿನ್‌ಗೆ ಹೋಗಿದೆ – ಪಕ್ಷ ತೊರೆದ ನಿತೀಶ್ ಕುಮಾರ್‌ಗೆ ಲಾಲೂ ಪುತ್ರಿ ಟಾಂಗ್

    ಸ್ಥಳೀಯ ಯುವಕರು ಒಳ್ಳೆಯವರೇ, ಅವರನ್ನ ದಾರಿ ತಪ್ಪಿಸುತ್ತಿದ್ದಾರೆ. ಎಲ್ಲಾ ಯುವಕರ ಜೊತೆ ಮಾತನಾಡುತ್ತೇನೆ. ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹನುಮಾನ್ ಧ್ವಜ ಹಾರಿಸಲು ಅವಕಾಶ ಕೊಡೋಣ. ಆದರೆ ಸರ್ಕಾರಿ ಕಚೇರಿ ಮುಂದೆ ಬೇಡ ಎಂದು ಹೇಳಿದರು. ಇದನ್ನೂ ಓದಿ: ಇಂದು ಸಂಜೆ 5 ಕ್ಕೆ ಬಿಹಾರ ಸಿಎಂ ಆಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ – BJPಯ ಇಬ್ಬರು ಡಿಸಿಎಂ

    ನಾನು ರಾಮ ಭಕ್ತ, ನಮ್ಮ ಮನೆ ದೇವರು ವಿಷ್ಣು. ನಾವು ಯಾವುದೇ ಧ್ವಜದ ವಿರೋಧಿಗಳಲ್ಲ. ಪಂಚಾಯತ್‌ನ ಸಭೆಯಲ್ಲಿ ಹನುಮ ಧ್ವಜ ಹಾರಿಸಲು ಅನುಮೋದನೆ ನೀಡಿದರೆ ತಪ್ಪು. ಅವರ ವಿರುದ್ಧವೂ ಕ್ರಮ ಆಗುತ್ತದೆ. ಇದರಲ್ಲಿ ನಾನಾಗಲಿ, ಸ್ಥಳೀಯ ಶಾಸಕರಾಗಲಿ ರಾಜಕೀಯ ಮಾಡುತ್ತಿಲ್ಲ. ಸರ್ಕಾರಿ ಕಚೇರಿ ಮುಂದೆ ಹನುಮ ಧ್ವಜ ಹಾರಿಸಿರುವುದು ಸಂವಿಧಾನಕ್ಕೆ ವಿರುದ್ಧ ಆಗಿರುವುದರಿಂದ ಅದನ್ನು ತೆರವು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಷ್ಟ್ರ ಧ್ವಜ ಹಾರಿಸೋ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ – ಸಿದ್ದರಾಮಯ್ಯ