Tag: kejriwal

  • ಬಿಜೆಪಿಯವರಿಗೆ ದುರಹಂಕಾರ, ಎಎಪಿಗೆ ಒಂದು ಚಾನ್ಸ್ ಕೊಡಿ: ಗುಜರಾತ್ ಜನತೆಗೆ ಕೇಜ್ರಿವಾಲ್ ಮನವಿ

    ಬಿಜೆಪಿಯವರಿಗೆ ದುರಹಂಕಾರ, ಎಎಪಿಗೆ ಒಂದು ಚಾನ್ಸ್ ಕೊಡಿ: ಗುಜರಾತ್ ಜನತೆಗೆ ಕೇಜ್ರಿವಾಲ್ ಮನವಿ

    ಗಾಂಧಿನಗರ: ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ಗುಜರಾತ್‌ನತ್ತ ತನ್ನ ಗಮನವನ್ನು ಹರಿಸಿದೆ.

    ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ರೊಂದಿಗೆ ಕೇಜ್ರಿವಾಲ್ ಶನಿವಾರ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಬಳಿಕ ಎಎಪಿ ತಿರಂಗ ಯಾತ್ರೆ (ರೋಡ್‌ಶೋ) ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಗುಜರಾತ್‌ನಲ್ಲಿ ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ ಇಲ್ಲಿನ ಭ್ರಷ್ಟಾಚಾರ ಇಂದಿನವರೆಗೂ ಕೊನೆಯಾಗಿಲ್ಲ. ನಾನು ಯಾವುದೇ ಪಕ್ಷವನ್ನು ಟೀಕಿಸಲು ಇಲ್ಲಿಗೆ ಬಂದಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಅನ್ನು ಸೋಲಿಸುವುದೂ ನನ್ನ ಗುರಿಯಲ್ಲ. ನಾನಿಲ್ಲಿಗೆ ಬಂದಿರುವ ಉದ್ದೇಶ ಗುಜರಾತ್ ಅನ್ನು ಗೆಲ್ಲಿಸುವುದು, ಗುಜರಾತಿಗಳನ್ನು ಗೆಲ್ಲಿಸುವುದು ಹಾಗೂ ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಎಂದರು. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್

     

    25 ವರ್ಷಗಳ ಅಧಿಕಾರದ ಬಳಿಕ ಬಿಜೆಪಿ ದುರಹಂಕಾರದಿಂದ ಕೂಡಿದೆ. ಇನ್ನು ಮುಂದೆ ಅವರು ಜನರ ಮಾತು ಕೇಳುವುದಿಲ್ಲ. ದೆಹಲಿಯ ಜನರು ಆಮ್ ಆದ್ಮಿಗೆ ಅವಕಾಶ ನೀಡಿದ್ದಾರೆ. ಬಳಿಕ ಪಂಜಾಬ್ ಕೂಡಾ ಆಮ್ ಆದ್ಮಿಗೆ ಅವಕಾಶ ನೀಡಿದೆ. ಇದೀಗ ನಿಮ್ಮ ಸರದಿ. ನಮಗೆ ಒಂದು ಬಾರಿ ಅವಕಾಶ ನೀಡಿ. ಒಂದು ವೇಳೆ ನಿಮಗೆ ನಮ್ಮ ಆಡಳಿತ ಇಷ್ಟವಾಗಿಲ್ಲ ಎಂದರೆ ಮುಂದಿನ ಬಾರಿ ಬದಲಾಯಿಸಿ. ನೀವು ಒಂದು ಸಲ ಎಎಪಿ ಪಕ್ಷಕ್ಕೆ ಅವಕಾಶ ನೀಡಿದರೆ ಉಳಿದ ಎಲ್ಲಾ ಪಕ್ಷಗಳನ್ನು ಮರೆತುಬಿಡುತ್ತೀರಿ ಎಂದು ಕೇಜ್ರಿವಾಲ್ ಭಾಷಣದಲ್ಲಿ ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ದೇವಾಲಯಗಳಿಗೆ ತೆರಿಗೆ ವಿನಾಯ್ತಿ: ಯೋಗಿ ಆದಿತ್ಯನಾಥ್

    ಪಂಚರಾಜ್ಯ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಅಧಿಕಾರ ಗಟ್ಟಿಸಿಕೊಂಡಿರುವ ಎಎಪಿ ಇದೀಗ ಪಕ್ಕದ ಗುಜರಾತ್ ಕಡೆ ತನ್ನ ದೃಷ್ಟಿ ನೆಟ್ಟಿದೆ. ಮುಂಬರುವ ಗುಜರಾತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಎಪಿ ಈಗಿನಿಂದಲೇ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿದೆ.

  • ಸ್ಥಳೀಯರಿಗೆ ಖಾಸಗಿ ಕ್ಷೇತ್ರದಲ್ಲಿ ಶೇ.80 ಮೀಸಲಾತಿ, ಪ್ರತಿ ಮನೆಗೆ ಉದ್ಯೋಗ – ಗೋವಾದಲ್ಲಿ ಕೇಜ್ರಿವಾಲ್ ಘೋಷಣೆ

    ಸ್ಥಳೀಯರಿಗೆ ಖಾಸಗಿ ಕ್ಷೇತ್ರದಲ್ಲಿ ಶೇ.80 ಮೀಸಲಾತಿ, ಪ್ರತಿ ಮನೆಗೆ ಉದ್ಯೋಗ – ಗೋವಾದಲ್ಲಿ ಕೇಜ್ರಿವಾಲ್ ಘೋಷಣೆ

    ಪಣಜಿ: ಗೋವಾದಲ್ಲಿ ಆಮ್ ಅದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಸ್ಥಳೀಯರಿಗೆ ಖಾಸಗಿ ಕ್ಷೇತ್ರದಲ್ಲಿ ಶೇ.80 ರಷ್ಟು ಉದ್ಯೋಗಗಳನ್ನು ಮೀಸಲಿಡುವುದಾಗಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಚಾರಕ್ಕೆ ತೆರಳಿದ್ದ ಅವರು ಯುವ ಜನತೆಗೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ಯುವ ಮತಗಳ ಮೇಲೆ ಕಣ್ಣಿಟ್ಟಿರುವ ಅರವಿಂದ್ ಕೇಜ್ರಿವಾಲ್ ನಿರುದ್ಯೋಗ ಸಮಸ್ಯೆಯನ್ನು ಚುನಾವಣಾ ಅಸ್ತ್ರ ಮಾಡಿಕೊಂಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋವಾದಲ್ಲಿ ಸರ್ಕಾರಿ ಉದ್ಯೋಗ ರಾಜಕಾರಣಿಗಳ ಸಂಬಂಧಿಗಳಿಗೆ ಮೀಸಲಾಗಿದೆ. ಸಾಮಾನ್ಯ ಯುವಕರು ಇಲ್ಲಿ ಸರ್ಕಾರ ನೌಕರಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

    ಒಂದು ವೇಳೆ ಗೋವಾದಲ್ಲಿ ಆಮ್ ಅದ್ಮಿ ಅಧಿಕಾರಕ್ಕೆ ಬಂದಲ್ಲಿ ಸಾಮಾನ್ಯ ಯುವಕರಿಗೆ ಸರ್ಕಾರಿ ಹುದ್ದೆ ಹೊಂದಬಹುದು. ಖಾಸಗಿ ಕ್ಷೇತ್ರದ ಶೇ.80ರಷ್ಟು ನೌಕರಿಗಳನ್ನು ಸ್ಥಳೀಯರಿಗೆ ಮೀಸಲಿಡುವ ಕಾನೂನು ತರಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು.

    ಪ್ರತಿ ಮನೆಗೆ ಒಂದು ಉದ್ಯೋಗ ನೀಡಲಾಗುವುದು, ಉದ್ಯೋಗ ಸಿಗುವವರೆಗೂ 3000 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿದ ಅವರು, ಕೊರೊನಾದಿಂದ ಉದ್ಯೋಗ ಕಳೆದುಕೊಂಡ ಪ್ರವಾಸೋದ್ಯಮ ವಲಯದ ಜನರಿಗೆ, ಹಾಗೂ ಗಣಿಗಾರಿಕೆ ನಿಷೇಧದಿಂದ ನಿರುದ್ಯೋಗಿಗಳಾದ ಜನರಿಗೆ 5,000 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ನನಗೆ ಎರಡು ಬಾರಿ ರಾಜ್ಯಸಭಾ ಸೀಟ್ ಆಫರ್ ಬಂದಿತ್ತು: ಸೋನು ಸೂದ್

    ಗೋವಾ ಸಿಎಂ ಪ್ರಮೋದ್ ಸಾವಂತ್ ದೆಹಲಿ ಸರ್ಕಾರದ ಯೋಜನೆಗಳನ್ನು ನಕಲು ಮಾಡಿ ಮನೆ ಬಾಗಿಲಿಗೆ ಸೇವೆ ಕಾರ್ಯಕ್ರಮ ಆರಂಭಿಸಿದ್ದಾರೆ. ನಕಲಿ ಸರ್ಕಾರಕ್ಕೆ ಏಕೆ ಮತ ಹಾಕುಬೇಕು ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

  • ಕೊರೊನಾ ಆರ್ಭಟಕ್ಕೆ ರಾಷ್ಟ್ರ ರಾಜಧಾನಿ ತತ್ತರ

    ಕೊರೊನಾ ಆರ್ಭಟಕ್ಕೆ ರಾಷ್ಟ್ರ ರಾಜಧಾನಿ ತತ್ತರ

    – ಮಣ್ಣಲ್ಲಿ ಶವಗಳನ್ನ ಹೂಳಲು ಜಾಗ ಸಿಗ್ತಿಲ್ಲ
    – ಕೇಜ್ರಿವಾಲ್‍ಗೂ ಕೊರೊನಾ ಕಂಟಕ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ರಣ ಕೇಕೆ ಹಾಕಿ ಆರ್ಭಟಿಸುತ್ತಿದೆ. ದಿನದಿಂದ ದಿನಕ್ಕೆ ಸರ್ಕಾರದ ಕೈ ಮೀರಿ ಸೋಂಕು ಹಬ್ಬುತ್ತಿದೆ. ಒಂದು ಕಡೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ಮತ್ತೊಂದು ಕಡೆ ಮಣ್ಣಲ್ಲಿ ಶವಗಳನ್ನು ಹೂಳಲು ಜಾಗ ಸಿಗುತ್ತಿಲ್ಲ. ಈ ನಡುವೆ ದೆಹಲಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿರುವ ಭೀತಿ ಸೃಷ್ಟಿಯಾಗಿದೆ.

    ದೆಹಲಿ ರಾಜಕೀಯ ವ್ಯವಸ್ಥೆಯ ಶಕ್ತಿ ಕೇಂದ್ರ. ಕೇಂದ್ರಾಡಳಿತ ಪ್ರದೇಶವಾಗಿರುವ ಈ ರಾಜ್ಯ ಈಗ ಕೊರೊನಾ ವಿಚಾರದಲ್ಲಿ ದೊಡ್ಡ ಸದ್ದು ಮಾಡಲು ಆರಂಭಿಸಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಹಬ್ಬುತ್ತಿರುವ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಸೋಂಕು ಹಬ್ಬುತ್ತಿರುವ ತೀವ್ರತೆಗೆ ಅಧಿಕಾರ ನಡೆಸುತ್ತಿರುವ ಆಪ್ ಆದ್ಮಿ ಪಕ್ಷ ಅಕ್ಷರ ಸಹ ದಿಕ್ಕು ತೋಚದಂತಾಗಿದೆ.

    ದೆಹಲಿಯಲ್ಲಿ ಸೋಮವಾರ ಸಂಜೆಯ ವರದಿಗೆ 1,007 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 29,943 ಮಂದಿಗೆ ಕೊರೊನಾ ವಕ್ಕರಿಸಿಕೊಂಡಿದೆ. ಈ ಪೈಕಿ 874 ಮಂದಿ ಸಾವನ್ನಪ್ಪಿದ್ರೆ 11,357 ಮಂದಿ ಗುಣಮುಖರಾಗಿದ್ದು, 17,712 ಸಕ್ರಿಯ ಪ್ರಕರಣಗಳನ್ನು ಒಳಗೊಂಡಿದೆ.

    ದೆಹಲಿಯಂತಹ ಪುಟ್ಟ ರಾಜ್ಯದಲ್ಲಿ ಸೋಂಕು ಹರಡುತ್ತಿರುವ ತೀವ್ರತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಹೈರಾಣ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಒಂದು ಕಡೆ ಬೆಡ್‍ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮತ್ತೊಂದು ಕಡೆ ಚಿಕ್ಕ ರಾಜ್ಯದಲ್ಲಿ ಸ್ಮಶಾನದ ಪ್ರದೇಶ ಕಡಿಮೆ ಇದ್ದು, ಶವ ಹೂಳಲು ಜಾಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ತೆಗೆದುಕೊಂಡಿದ್ದ ದೆಹಲಿ ಸರ್ಕಾರ, ಎಲ್ಲ ಖಾಸಗಿ ಆಸ್ಪತ್ರೆ 20% ರಷ್ಟು ಬೆಡ್‍ಗಳನ್ನು ಕೊರೊನಾಗೆ ಮೀಸಲಿಟ್ಟಿದ್ದು, ವ್ಯಕ್ತಿಯಲ್ಲಿ ತೀವ್ರ ಸೋಂಕಿನ ಗುಣಲಕ್ಷಣಗಳಿದ್ದರೇ ಮಾತ್ರ ಚಿಕಿತ್ಸೆ, ಸಣ್ಣ ಮತ್ತು ಮಧ್ಯಮ ಗುಣಲಕ್ಷಣಗಳಿರುವ ರೋಗಿಗಳು ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸಿದೆ.

    ಕೇಜ್ರಿವಾಲ್‍ಗೂ ಕೊರೊನಾ ಕಂಟಕ:
    ಈ ನಡುವೆ ಕೊರೊನಾ ಹೋರಾಟದಲ್ಲಿ ಮುನ್ನಲೇಯಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರಲ್ಲೂ ಕೊರೊನಾದ ಗುಣಲಕ್ಷಣಗಳು ಕಂಡು ಬಂದಿದೆ. ಭಾನುವಾರದಿಂದ ಅವರಲ್ಲಿ ತೀವ್ರ ಜ್ವರ, ಗಂಟಲು ನೋವು ಕಾಣಿಸಿಕೊಂಡಿದೆ. ಸದ್ಯ ಐಸೋಲೇಷನಲ್ಲಿರುವ ಕೇಜ್ರಿವಾಲ್ ವೈದ್ಯರ ಸಲಹೆ ಮೇರೆಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲಿದ್ದಾರೆ.

    ಹೀಗೆ ಸರ್ಕಾರದ ನಿಯಂತ್ರಣ ಮೀರಿ ಬೆಳೆಯುತ್ತಿರುವ ಸೋಂಕು ಸಮುದಾಯದಲ್ಲಿ ಹರಡಿರುವ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ಸಭೆಯ ನಡೆಯಲಿದೆ. ಸಭೆಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ಇತರೆ ಉನ್ನತ ಅಧಿಕಾರಿಗಳು ಭಾಗಿಯಾಗಲಿದ್ದು, ದೆಹಲಿಯಲ್ಲಿ ಕೊರೊನಾ ಸೋಂಕು ಹಬ್ಬುತ್ತಿರುವ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಲ್ಲದೇ ಸೋಂಕು ಹಬ್ಬುತ್ತಿರುವ ವೇಗ ಹಾಗೂ ಸರ್ಕಾರದ ನೀತಿ ನಿಯಮಗಳನ್ನು ಬದಲಿಸುವ ಬಗ್ಗೆ ಮಹತ್ವ ಚರ್ಚೆ ನಡೆಯಲಿದೆ. ದೆಹಲಿಯ ಸ್ಲಂಗಳಲ್ಲಿ ಹರಡಿರುವ ಸೋಂಕಿನ ಮೂಲಕ ಸಮುದಾಯಕ್ಕೆ ಹರಡಿರುವ ಭೀತಿ ದೆಹಲಿ ಸರ್ಕಾರಕ್ಕೆ ಎದುರಾಗಿದ್ದು, ಶಕ್ತಿ ಮೀರಿ ನಿಯಂತ್ರಿಸುವ ಕೆಲಸ ಮಾಡುವ ಪ್ರಯತ್ನದಲ್ಲಿದೆ.

  • ಕೊರೊನಾ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ 1 ಕೋಟಿ ಪರಿಹಾರ: ಕೇಜ್ರಿವಾಲ್

    ಕೊರೊನಾ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ 1 ಕೋಟಿ ಪರಿಹಾರ: ಕೇಜ್ರಿವಾಲ್

    – ದೇಶ ರಕ್ಷಿಸೋ ಸೈನಿಕರಿಗಿಂತ ವೈದ್ಯರ ಕೆಲಸ ಕಡಿಮೆಯಿಲ್ಲ

    ನವದೆಹಲಿ: ಕೊರೊನಾ ವೈರಸ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವವರು “ದೇಶವನ್ನು ರಕ್ಷಿಸುವ ಸೈನಿಕರಿಗಿಂತ ಕಡಿಮೆಯಿಲ್ಲ”. ಹೀಗಾಗಿ ಕೊವೀಡ್-19 ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

    “ಯುದ್ಧದ ಸಮಯದಲ್ಲಿ ಸೈನಿಕ ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಾನೆ. ಆದ್ದರಿಂದ ನಮ್ಮ ಇಡೀ ರಾಷ್ಟ್ರವು ಅವರಿಗೆ ಋಣಿಯಾಗಿದೆ. ಇಂದು ಆರೋಗ್ಯ ಕಾರ್ಯಕರ್ತರು ಕೂಡ ದೇಶದ ಜನರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಸಿಬ್ಬಂದಿಯ ಕೆಲಸವು ಸೈನಿಕರ ಕೆಲಸಕ್ಕಿಂತ ಕಡಿಮೆಯಿಲ್ಲ” ಎಂದು ಕೇಜ್ರಿವಾಲ್ ಹೇಳಿದರು.

    “ಈ ಹಿಂದೆ ದೆಹಲಿ ಸರ್ಕಾರ ದೇಶಕ್ಕಾಗಿ ಹೋರಾಡುವಾಗ ಯಾವುದೇ ಸೈನಿಕ ಹುತಾತ್ಮರಾದರೆ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿತ್ತು. ಈಗ ಕೊವಿಡ್-19 ವಿರುದ್ಧದ ಹೋರಾಟದಲ್ಲಿ ದುರಾದೃಷ್ಟವಶಾತ್ ಯಾವುದೇ ಆರೋಗ್ಯ ಕಾರ್ಯಕರ್ತ, ವೈದ್ಯ, ನೈರ್ಮಲ್ಯ ಕಾರ್ಮಿಕರು ಅಥವಾ ನರ್ಸ್ ಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

    ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವರನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ಕೇಜ್ರಿವಾಲ್ ಅವರು ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲವು ವೈದ್ಯಕೀಯ ವೃತ್ತಿಪರರೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ಕೊರೊನಾ ವೈರಸ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.

    ನಿಮ್ಮ ಸ್ಥೈರ್ಯ ಮತ್ತು ಕರ್ತವ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ ಎಂದು ವೈದ್ಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಬೆಂಬಲಕ್ಕೆ ಸರ್ಕಾರ ಇರುತ್ತದೆ. ನೀವು ನೀಡಿರುವ ಸಲಹೆಗಳನ್ನು ಶೀಘ್ರದಲ್ಲಿಯೇ ದೆಹಲಿ ಸರ್ಕಾರ ಕಾರ್ಯಗತಗೊಳಿಸುತ್ತದೆ ಎಂದು ಭರವಸೆ ಕೂಡ ನೀಡಿದರು. ದೆಹಲಿಯಲ್ಲಿ ಇದುವರೆಗೂ 120 ಕೊರೊನಾ ಸೋಂಕಿತ ರೋಗಿಗಳಿದ್ದಾರೆ ಎಂದು ವರದಿಯಾಗಿದೆ .

  • `ದೆಹಲಿ ಸುಲ್ತಾನ’ – ಮೌನಿ ಬಾಬಾ ಹಾಗೂ ತೀರ್ಥಯಾತ್ರೆ..!!

    `ದೆಹಲಿ ಸುಲ್ತಾನ’ – ಮೌನಿ ಬಾಬಾ ಹಾಗೂ ತೀರ್ಥಯಾತ್ರೆ..!!

    ದಿವಾಕರ್
    ಮಾತು `ಮತ’ ಕೆಡಿಸಿತು… ಮೌನ `ಮತ’ ಗಳಿಸಿತು..!! ಎಲ್ಲಾ ಉಚಿತ… ಮತ ಖಚಿತ…!! ಅರವಿಂದ ಕೇಜ್ರಿವಾಲ್ ಕೈಗೆ ಮತ್ತೆ ರಾಜದಂಡ ದಯಪಾಲಿಸಿ, ದೈತ್ಯ ಬಿಜೆಪಿಯನ್ನು ಹೊಸಕಿ ಹಾಕಿರುವ ದೆಹಲಿ ಜನಾದೇಶದ ಗುಟ್ಟು ಈ ಎರಡು ಸಾಲುಗಳಲ್ಲೇ ಅಡಗಿದೆ.

    ಒಬ್ಬ `ಮೌನಿ ಬಾಬಾ’ ಇಡೀ ದೆಹಲಿ ಚುನಾವಣೆಯ ದಿಕ್ಕು ದೆಸೆಯನ್ನೇ ಬದಲಿಸಿಬಿಟ್ಟಿದ್ದಾನೆ!! ಒಬ್ಬ `ಮೌನಿ ಬಾಬಾ’, ಕೇಜ್ರಿವಾಲ್‍ನ ಹ್ಯಾಟ್ರಿಕ್ ಹೀರೋ ಮಾಡಿಬಿಟ್ಟಿದ್ದಾನೆ!! ಒಬ್ಬ `ಮೌನಿ ಬಾಬಾ’ ಮಾತಿನ ಮಲ್ಲ ಮೋದಿ-ಅಮಿತ್ ಶಾ ಚಾಣಕ್ಯ ಜೋಡಿಯನ್ನು ಮಕಾಡೆ ಮಲಗಿಸಿಬಿಟ್ಟಿದ್ದಾನೆ!! ಆ `ಮೌನಿ ಬಾಬಾ’ನ ಕ್ಷಾತ್ರ ಗುಣಕ್ಕೆ ಕುರುಕ್ಷೇತ್ರದಲ್ಲಿ ಕೇಸರಿ ಗಣ ಹೇಳ ಹೆಸರಿಲ್ಲದಂತೆ ಕಳೆದು ಹೋಗಿದೆ. ಇನ್ನು ಕಾಂಗ್ರೆಸ್‍ನಲ್ಲಿ ಶೂನ್ಯ ಆವರಿಸಿದೆ.

    ಕೇಜ್ರಿವಾಲ್ ಪಾಲಿಗೆ ವರದ ಹಸ್ತನಾಗಿದ್ದ ಆ ಮೌನಿ ಬಾಬಾ., ಮೋದಿ ಪಾಲಿಗೆ ಶಾಪವಾಗಿ ಕಾಡಿದ್ದಾನೆ. ದೆಹಲಿ ಗದ್ದುಗೆ ಗುದ್ದಾಟದಲ್ಲಿ ಆ ಮೌನಿ ಬಾಬಾ ಅತೀವ ಹಾಗೂ ಅದ್ಭುತ ಪ್ರಭಾವ ಬೀರಿದ್ದಂತೂ ನಿಜ. ಹಾಗಾದ್ರೆ ಯಾರು ಆ ಮೌನಿ ಬಾಬಾ..!? ದೇವ ಮಾನವನಾ..? ಅವದೂತನಾ..? ಮಹಾಮಹಿಮನಾ..? ತ್ರಿಕಾಲ ಜ್ಞಾನಿಯಾ..? ಊಹೂಂ ಇವರಾರೂ ಅಲ್ಲ.

    ಮೌನಿ ಬಾಬಾ ಅಂದರೆ ಮೌನ ..! ನಮ್ಮೊಳಗಿನ ಮೌನ ಅಷ್ಟೇ..!! ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿನಲ್ಲಿ ನಿರಾಕಾರ ಮೌನದ ಕಾಣಿಕೆ ಬೆಟ್ಟದಷ್ಟಿದೆ ಅಂದರೆ ಎಲ್ಲರೂ ಒಪ್ಪಲೇಬೇಕು. ರಾಜಕೀಯದಲ್ಲಿ ಮಾತೆಂಬುದು ಅತ್ಯಂತ ಶಕ್ತಿಶಾಲಿ ಸಾಧನ. ಇಂಥ ಪ್ರಬಲ ಅಸ್ತ್ರವನ್ನೇ ತ್ಯಜಿಸಿದ ಅರವಿಂದ ಕೇಜ್ರಿವಾಲ್, ಮೌನವನ್ನು ರೂಢಿಸಿಕೊಂಡು ಎದುರಾಳಿಗಳನ್ನು ನೆಲಕ್ಕೆ ಕೆಡವಿದ್ದು ಮಾತ್ರ ಪ್ರತಿಶತ ಸತ್ಯ..!!

    ಹೌದು, ನೀವು ಕೂಡ ಗಮನಿಸಿರಬಹುದು. ಪ್ರತಿನಿತ್ಯ ಮೋದಿ ವಿರುದ್ಧ ಮೊನಚಾದ ಟೀಕಾಸ್ತ್ರ ಪ್ರಯೋಗಿಸುತ್ತಿದ್ದ ವಾಚಾಳಿ ಅರವಿಂದ ಕೇಜ್ರಿವಾಲ್ ಕಳೆದ ಲೋಕಸಭೆ ಚುನಾವಣೆ ಬಳಿಕ ಮೌನಕ್ಕೆ ಶರಣಾಗಿದ್ದರು. `ಮಾತು ಕಡಿಮೆ – ಹೆಚ್ಚು ದುಡಿಮೆ’ ಎಂಬ ಆದರ್ಶದ ಕಡೆ ವಾಲಿಬಿಟ್ಟಿದ್ದರು. ಮೌನದಿಂದಲೇ ಮೋದಿಯನ್ನು ಸೋಲಿಸುವ ತಂತ್ರ ಹೆಣೆದು, ಅದನ್ನು ಕಾರ್ಯರೂಪಕ್ಕೆ ತಂದಿದ್ದರು. `ಮೌನ’ ಪ್ರತಿಜ್ಞೆಯ ಹಿಂದೆ ಮಾಡು ಮಡಿ ಸ್ಥಿತಿಯ ಕಾರಣವೂ ಇತ್ತು.

    2019ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಕ್ಷರಶಃ ಸಮಾಧಿಯಾಗಿತ್ತು. ದೆಹಲಿಯ ಏಳೂ ಲೋಕಸಭಾ ಕ್ಷೇತ್ರಗಳಲ್ಲಿ ಧೂಳೆಬ್ಬಿಸಿದ್ದ ಮೋದಿ ಪಡೆ `ಆಪ್’ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದಿತ್ತು. ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳ ಪೈಕಿ ಐವರು ಠೇವಣಿ ಕಳೆದುಕೊಂಡಿದ್ದರು. ಅಷ್ಟರ ಮಟ್ಟಿಗೆ ಆಮ್ ಆದ್ಮಿ ಪಾರ್ಟಿಯನ್ನು ಮಟ್ಟ ಹಾಕಿದ್ದರು ಮೋದಿ. ಲೋಕಸಭೆ ಮಾತ್ರವಲ್ಲ ದೆಹಲಿ ವಿಧಾನಸಭೆಯೂ ಬಿಜೆಪಿ ಪಾಲು ಅಂತ ಅಂದೇ ಕುಣಿದು ಕುಪ್ಪಳಿಸಿದ್ದರು ಕೇಸರಿ ಕಾರ್ಯಕರ್ತರು. ಆದ್ರೆ ಮತದಾರ ಪ್ರಭುವಿನ ಮನದಾಳ ಅರಿತವರು ಯಾರು..? ಕೆಲವೇ ತಿಂಗಳಲ್ಲಿ ಬದಲಾಗೋಯ್ತು ದೆಹಲಿ ಮತದಾರರ ನಿಷ್ಠೆ..!!

    ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತ್ರ ಒಣ ಮಾತಿಂದ ಏನೂ ಆಗದು ಎಂಬ ತೀರ್ಮಾನಕ್ಕೆ ಬಂದ ಕೇಜ್ರಿವಾಲ್ ಮೌನವೆಂಬ ಆಭರಣ ತೊಟ್ಟುಬಿಟ್ಟರು. ಮೋದಿಯನ್ನು ಟೀಕಿಸದೇ, ಕುಟುಕದೇ, ಕೆಣಕದೇ, ಕೆರಳಿಸದೇ, ಕಟಕಿಯಾಡದೇ, ಎಲ್ಲೂ ಕಲಹಕ್ಕೆ ಆಸ್ಪದ ಕೊಡದೇ ಮೌನಂ ಶರಣಂ ಗಚ್ಛಾಮಿ ಅಂತ ಬಾಯ್ಮೇಲೆ ಬೆರಳಿಟ್ಟು ಬಿಟ್ಟರು ಕೇಜ್ರಿವಾಲ್.

    ಆಗಸ್ಟ್ 16 ಕೇಜ್ರಿವಾಲ್ ಜನ್ಮದಿನ. ಅಂದು ಮೋದಿ ಕೇಜ್ರಿವಾಲ್‍ಗೆ ಶುಭಾಶಯ ಹೇಳಿದ್ದರು. ಶುಭಾಶಯ ಸಂದೇಶವನ್ನು ವಿನಮ್ರವಾಗಿ ಸ್ವೀಕರಿಸಿದ್ದ ಕೇಜ್ರಿವಾಲ್, ` Thank you so much PM sir for ur good wishes…’.’ ಎಂದು ಅಚ್ಚರಿದಾಯಕ ಪ್ರತಿಕ್ರಿಯೆ ನೀಡಿದ್ದರು. 2014ರ ಚುನಾವಣೆ ವೇಳೆ ವಾರಾಣಸಿಯಲ್ಲಿ ಮೋದಿ ವಿರುದ್ಧ ತೊಡೆ ತಟ್ಟಿದ್ದು ಇವರೇನಾ ಅನ್ನುವಷ್ಟು ಬದಲಾವಣೆಯನ್ನು ಅರವಿಂದ ಕೇಜ್ರಿವಾಲ್ ಅವರಲ್ಲಿ ತಂದಿದ್ದ ಮೌನಿ ಬಾಬಾ.!!

    ಇಷ್ಟಕ್ಕೇ ನಿಲ್ಲಲಿಲ್ಲ ಕೇಜ್ರಿವಾಲ್ ರಾಜಕೀಯ ವರಸೆ…, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ಯನ್ನು ರದ್ದು ಮಾಡಿದ ಮೋದಿ ವಿರುದ್ಧ ವೈರಿಗಳೆಲ್ಲಾ ಕತ್ತಿ ಮಸೆಯುತ್ತಿದ್ದರೆ, ಇತ್ತ ಆಮ್ ಆದ್ಮಿ ಪಕ್ಷ ಮಾತ್ರ ಕೇಂದ್ರದ ನಿಲುವನ್ನು ಸ್ವಾಗತಿಸಿತ್ತು..!! ಮೋದಿ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಅಂತ ಹೇಳಿದ್ದರು ಕೇಜ್ರಿವಾಲ್ !! ಕೇಜ್ರಿವಾಲ್ ಅವರ ಈ ಚತುರ ನಡೆಯಿಂದ ಮೋದಿಯಂಥ ಮೋದಿಯೇ ಅವಾಕ್ ಆಗಿದ್ದರು.

    ಅಷ್ಟೇ ಅಲ್ಲ ಬಿಜೆಪಿಯ ಹಿಂದುತ್ವ ಅಜೆಂಡಾಗೆ ಮೃದು ಹಿಂದುತ್ವದ ಮೂಲಕವೇ ಪೆಟ್ಟು ಕೊಟ್ಟರು ಅರವಿಂದ ಕೇಜ್ರಿವಾಲ್. ಇದರಲ್ಲಿ ಅವರು ಹೊರತಂದ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆ ಪ್ರಮುಖವಾದದ್ದು. ದೆಹಲಿಯ 60 ವರ್ಷ ಮೇಲ್ಪಟ್ಟ ವೃದ್ಧರಿಗೆಂದೇ ರೂಪಿಸಲಾದ `ಉಚಿತ’ ತೀರ್ಥಯಾತ್ರೆ ಕಾರ್ಯಕ್ರಮ ನಿಸ್ಸಂಶಯವಾಗಿ ಕೇಜ್ರಿವಾಲ್ ಜನಪ್ರಿಯತೆ ಹೆಚ್ಚಿಸಿತು. ದೆಹಲಿಯ ವೃದ್ಧ ತಂದೆ-ತಾಯಂದಿರ ಪಾಲಿಗೆ ಕೇಜ್ರಿವಾಲ್ ಆಧುನಿಕ ಶ್ರವಣಕುಮಾರನಂತೆ ಕಂಡರು.

    ಇನ್ನು ದೆಹಲಿಯ ಶಾಲೆಗಳಲ್ಲಿ ದೇಶಭಕ್ತಿ ವಿಷಯಗಳ ಬೋಧನೆಗೆಂದೇ ಪ್ರತ್ಯೇಕ ಸಮಯ ಮೀಸಲಿಟ್ಟು ಆದೇಶ ಹೊರಡಿಸಿದ ಕೇಜ್ರಿವಾಲ್, ಮೋದಿಯ ರಾಷ್ಟ್ರಭಕ್ತಿ ತಂತ್ರಕ್ಕೆ ಪ್ರತಿತಂತ್ರ ಹೂಡಿದ್ದರು. ಈ ಮೂಲಕ ಆಮ್ ಆದ್ಮಿ ಪಾರ್ಟಿ ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ ಅಲ್ಲ ಎಂದು ಪ್ರಚಾರ ಮಾಡಿದ್ದರು. ಇದು ಕೂಡ ಮತದಾರರ ಮೇಲೆ ಗಾಢ ಪ್ರಭಾವ ಬೀರಿತ್ತು .

    ಎಲ್ಲಕ್ಕಿಂತ ಮುಖ್ಯವಾಗಿ ದೆಹಲಿ ಜನತೆಗೆ `Free’ಮ್ಯಾನ್ (ಕೇಜ್ರಿವಾಲ್) ಕೊಟ್ಟ ಉಚಿತ ಭಾಗ್ಯಗಳ ಸ್ಕೀಮುಗಳು ಬಂಪರ್ ಮತ ಫಸಲಿಗೆ ಕಾರಣವಾದವು. ಉಚಿತ ವಿದ್ಯುತ್, ಉಚಿತ ವೈದ್ಯಕೀಯ ಸೇವೆ (ಮೊಹಲ್ಲಾ ಕ್ಲಿನಿಕ್) ಮಹಿಳೆಯರಿಗೆ ಉಚಿತ ಬಸ್ ಹಾಗೂ ಮೆಟ್ರೋ ಪ್ರಯಾಣ, ಶುದ್ಧ ನೀರು ಪೂರೈಕೆ, ಸ್ವಚ್ಛ ಆಡಳಿತ… ಹೀಗೆ ಹತ್ತು ಹಲವು ಜನಸೇವೆಯೇ ಜನಾರ್ದನ ಸೇವೆ ಕಾರ್ಯಗಳು ಅರವಿಂದ ಕೇಜ್ರಿವಾಲ್‍ಗೆ ಹ್ಯಾಟ್ರಿಕ್ ಪಟ್ಟ ಕಟ್ಟಿವೆ.

    ಪ್ರಚಂಡ ವೈಯಕ್ತಿಕ ಪ್ರಭಾವ, ಆರ್ಟಿಕಲ್ 370 ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ರಾಮಮಂದಿರದಂಥ ಪ್ರಬಲ ಅಸ್ತ್ರಗಳು ಮೋದಿ ಅವರ ಕೈಯಲ್ಲಿದ್ದರೂ, `ಮೌನ’ ಎಂಬ ಬ್ರಹ್ಮಾಸ್ತ್ರದ ಮೂಲಕ ಅವೆಲ್ಲವನ್ನೂ ಹೊಡೆದುರುಳಿಸಿದ್ದಾರೆ ಕೇಜ್ರಿವಾಲ್. ಬಿಜೆಪಿ ವಿರುದ್ಧ `62-8’ರಲ್ಲಿ ಘನ ವಿಜಯ ಸಾಧಿಸಿರುವ ಅವರೀಗ  `ದೆಹಲಿ ಸುಲ್ತಾನ’. ಲಗೇ ರಹೋ ಕೇಜ್ರಿವಾಲ್…!!

    ಗಾಳಿಪಟ: ನಮ್ಮ ಸಿದ್ದರಾಮಯ್ಯ ಕೂಡ ಹಲವು ಭಾಗ್ಯಗಳ ಹರಿಕಾರರು?! ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಶೂ ಭಾಗ್ಯ…, ಹೀಗೆ ಕರುಣಿಸಿದ ಭಾಗ್ಯಗಳ ಸಂಖ್ಯೆ ಒಂದಾ ಎರಡಾ..? ಇಷ್ಟಾದ್ರೂ ಸಿದ್ದಣ್ಣ ಯಾಕೆ ಗೆಲ್ಲಲಿಲ್ಲ. ಸಿದ್ದು ಸರ್ಕಾರ್ 2.0 ಯಾಕೆ ಬರಲಿಲ್ಲ..!? ಬಹುಶಃ ಕೇಜ್ರಿವಾಲ್ ರೀತಿ `ಮೌನ’ ಭಾಗ್ಯವನ್ನು ಸಿದ್ದರಾಮಯ್ಯ ಅಳವಡಿಸಿಕೊಂಡಿದ್ರೆ ಅವರೇ ಮತ್ತೆ ಮುಖ್ಯಮಂತ್ರಿ ಆಗ್ತಿದ್ರೇನೋ..!! ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು…, ಏನಂತೀರಿ ಸಿದ್ರಾಮಣ್ಣ..!!

  • ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ನವದೆಹಲಿ: ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರೆ ಗೆಲುವು ಖಂಡಿತ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ರಾಜಧಾನಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಸೋಲಿಸಿ ಅಧಿಕಾರಕ್ಕೆ ಏರಿದೆ. ಈ ಮೂಲಕ ಶೀಲಾ ದೀಕ್ಷಿತ್ ಬಳಿಕ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

    ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲ 7 ಸ್ಥಾನಗಳನ್ನು ಗೆದ್ದುಕೊಂಡಿದ್ದರಿಂದ ವಿಧಾನಸಭಾ ಚುನಾವಣೆಯಲ್ಲೂ ಕಮಲ ಅರಳಿ ಅಧಿಕಾರಕ್ಕೆ ಏರಲಿದ್ದೇವೆ ಎಂದು ಬಿಜೆಪಿ ನಾಯಕರು ಪ್ರಚಾರದಲ್ಲಿ ಹೇಳುತ್ತಿದ್ದರು. ಮಾಜಿ ರಾಷ್ಟ್ರೀಯ ಅಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಈ ಬಾರಿ 45ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಚಾಣಕ್ಯನ ತಂತ್ರಗಾರಿಕೆ ಸೋಲಾಗಿದೆ.

    ಎಲ್ಲ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಬಾರಿಯೂ ಕೇಜ್ರಿವಾಲ್‍ರದ್ದೇ ಹವಾ ಎಂದು ಭವಿಷ್ಯ ನುಡಿದಿತ್ತು. ಈ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. 2015ರ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳ ಪೈಕಿ ಆಪ್ 67, ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು. ಆದರೆ ಈ ಬಾರಿ ಆಪ್ 63, ಬಿಜೆಪಿ 7 ಸ್ಥಾನ ಪಡೆದರೆ ಕಾಂಗ್ರೆಸ್ ಈ ಬಾರಿಯೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

    ಹಾಗೆ ನೋಡಿದರೆ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳಿಸಿದೆ. ಅಷ್ಟೇ ಅಲ್ಲದೇ ಶೇಖಡವಾರು ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. 2015ರಲ್ಲಿ ಆಪ್ ಶೇ.54, ಬಿಜೆಪಿ ಶೇ.32, ಕಾಂಗ್ರೆಸ್ ಶೇ.9 ರಷ್ಟು ಮತ ಪಡೆದಿದ್ದರೆ ಈ ಬಾರಿ ಆಪ್ ಶೇ.53, ಬಿಜೆಪಿ ಶೇ.38, ಕಾಂಗ್ರೆಸ್ ಶೇ.4 ರಷ್ಟು ಮತ ಪಡೆದಿದೆ.

    ಆಪ್ ಗೆದ್ದಿದ್ದು ಹೇಗೆ?
    ಎರಡು ವರ್ಷಕ್ಕೂ ಮುನ್ನ ದೆಹಲಿ ಚುನಾವಣೆ ಮೇಲೆ ಆಮ್ ಅದ್ಮಿ ಪಕ್ಷ ಕಣ್ಣಿಟ್ಟಿತ್ತು. ಆರಂಭದಿಂದಲೇ ಬಿಜೆಪಿ ಟೀಕೆಗೆ ಕೇಜ್ರಿವಾಲ್ ತಟಸ್ಥ ನಿಲುವು ಕಾಯ್ದುಕೊಂಡಿದ್ದರು. ಜಗಳಗಂಟ ಎನ್ನುವ ಆರೋಪದಿಂದ ದೂರ ಉಳಿಯುವ ಈ ಪ್ರಯೋಗ ಯಶಸ್ವಿ ಆಯ್ತು.

    ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಟ್ವಿಟ್ಟರ್ ನಲ್ಲಿ ಟೀಕೆ ಮಾಡುತ್ತಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ನಂತರ ಮೋದಿ ವಿರುದ್ಧ ಟೀಕೆಗೆ ಜಾಸ್ತಿ ಹೋಗದೇ ಅಭಿವೃದ್ಧಿ ಮಂತ್ರವನ್ನೇ ಹೆಚ್ಚು ಹೆಚ್ಚು ಜಪಿಸತೊಡಗಿದರು.

    ಬಡವರು, ಸ್ಲಂ ನಿವಾಸಿಗಳಿಗೆ ಉಚಿತವಾಗಿ ವಿದ್ಯುತ್, ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿತ್ತು. ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ, ಔಷಧಿ ನೀಡಿತ್ತು. ಸ್ಲಂ ನಿವಾಸಿಗಳಿಗಾಗಿ ಮೊಹಲ್ಲಾ ಕ್ಲಿನಿಕ್ ವ್ಯವಸ್ಥೆ, ಇತ್ತಿಚೆಗೆ ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ವ್ಯವಸ್ಥೆ ಮತ್ತು 200 ಯೂನಿಟ್ ವಿದ್ಯುತ್ ಉಚಿತ ನೀಡುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು.

    ಇತ್ತೀಚೆಗೆ ಮಹಿಳೆಯರಿಗೆ ಉಚಿತ ಸಾರಿಗೆಯನ್ನು ಕೇಜ್ರಿವಾಲ್ ಪ್ರಕಟಿಸಿದ್ದರು. ಸಿಎಎ, ಎನ್‍ಆರ್.ಸಿ ಎನ್‍ಪಿಆರ್ ವಿಚಾರಗಳಲ್ಲಿ ಕೇಜ್ರಿವಾಲ್ ತಟಸ್ಥ ಧೋರಣೆ ಅನುಸರಿಸುವ ಮೂಲಕ ವಿವಾದ ಆಗದಂತೆ ನೋಡಿಕೊಂಡರು. ಬಿಜೆಪಿಯ ಭಯೋತ್ಪಾದಕ ಟೀಕೆಗೆ ಕೇಜ್ರಿವಾಲ್ ಮೌನಕ್ಕೆ ಶರಣಾಗಿದ್ದರು.

    ವಿಶೇಷವಾಗಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಕೇಜ್ರಿವಾಲ್ ಕೇಂದ್ರದ ಪರ ನಿಂತಿದ್ದರು. ಇತ್ತೀಚಿಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಫೆಡರಲ್ ಮಂತ್ರಿ ಫವಾದ್ ಚೌಧರಿ, ಭಾರತೀಯರು ಮೋದಿಯನ್ನು ಸೋಲಿಸಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕೇಜ್ರಿವಾಲ್ ಮೋದಿ ಪರ ಬ್ಯಾಟ್ ಮಾಡಿ, ಭಯೋತ್ಪಾದನೆಗೆ ನೆರವು ನೀಡುವ ದೇಶ ಭಾರತದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

    ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಮತ್ತು ನನಗೂ ಅವರು ಪ್ರಧಾನ ಮಂತ್ರಿ. ದೆಹಲಿಯ ಚುನಾವಣೆ ಭಾರತದ ಆಂತರಿಕ ವಿಚಾರ. ಹಾಗಾಗಿ ಪಾಕಿಸ್ತಾನ ಎಷ್ಟೇ ಪ್ರಯತ್ನ ಮಾಡಿದರೂ ಭಾರತ ದೇಶದ ಏಕತೆಯನ್ನು ಹಾಳು ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದರು.

    ಬಹಳ ಮುಖ್ಯವಾಗಿ ಆಪ್ ಈ ಹಿಂದಿನ ಎರಡು ಚುನಾವಣೆ ಹೋಲಿಸಿದರೆ ಆಪ್ ಬಹಳ ಗಂಭೀರವಾಗಿ ಈ ಚುನಾವಣೆಯನ್ನು ತೆಗೆದುಕೊಂಡಿತ್ತು. ಸಾಮಾಜಿಕ ಜಾಲತಾಣ ವಿಚಾರ ಬಂದಾಗ ದೆಹಲಿಯಲ್ಲಿ ಕಾಂಗ್ರೆಸ್ಸಿಗಿಂತ ಆಪ್ ಬಲಿಷ್ಟವಾಗಿದ್ದರೂ ಬಿಜೆಪಿಯನ್ನು ಸೋಲಿಸಲು ಚುನಾವಣಾ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ಕೇಜ್ರಿವಾಲ್ ಸಂಪರ್ಕಿಸಿದ್ದರು. ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ಸಾಮಾಜಿಕ ಜಾಲತಾಣದಲ್ಲಿ ಅತ್ಯುತ್ತಮವಾಗಿ ಪ್ರಚಾರ ನಡೆಸುವ ಮೂಲಕ ಆಪ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ.

    ಬಿಜೆಪಿಗಿಂತ ಆಪ್ ಹೆಚ್ಚು ಸಮರ್ಥವಾಗಿ ಸಮಾಜಿಕ ಜಾಣತಾಣಗಳನ್ನು ಸಮರ್ಥವಾಗಿ ನಿಭಾಯಿಸಿತ್ತು. ಸಿಸಿಟಿವಿ ಅಳವಡಿಕೆ ಪ್ರಶ್ನಿಸಿದ್ದ ಅಮಿತ್ ಶಾಗೆ ಅವರ ಭಾಷಣ ಮೂರು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದ ತುಣುಕು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಲಾಗಿತ್ತು. ಶಾಲೆ ಅವ್ಯವಸ್ಥೆ ವಿಡಿಯೋ ಮಾಡಿ ಮಾತನಾಡಿದ್ದ ಸಂಸದ ಗೌತಮ್ ಗಂಭೀರ್‍ಗೆ ಅದೇ ವಿಡಿಯೋದಲ್ಲಿನ ನೋಟಿಸ್ ರಿಟ್ವೀಟ್ ಮಾಡಿ ವ್ಯಂಗ್ಯ ಮಾಡಲಾಗಿತ್ತು. ತನ್ನೇಲ್ಲ ನಿಲುವುಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಜನರಿಗೆ ಯಶಸ್ವಿಯಾಗಿ ತಲುಪಿಸಿದ್ದು ಚುನಾವಣಾ ಗೆಲುವಿಗೆ ಸಹಕಾರಿಯಾಗಿದೆ.

    ಬಿಜೆಪಿ ಸೋತಿದ್ದು ಹೇಗೆ?
    ದೆಹಲಿಯಲ್ಲಿ ಕಾಂಗ್ರೆಸ್ಸಿಗೆ ವೋಟ್ ಹಾಕಿದ್ದರೂ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೆಂದು ಕಾಂಗ್ರೆಸ್ ಮತದಾರರು ಆಪ್ ಪಕ್ಷವನ್ನು ಬೆಂಬಲಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ಮತ ಆಪ್‍ಗೆ ವರ್ಗಾವಣೆಯಾಗಿತ್ತು.

    ಸಿಎಎ, ಎನ್‍ಆರ್‍ಸಿ ವಿರೋಧಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಆಪ್‍ಗೆ ಬಿದ್ದಿತ್ತು. ಚುನಾವಣೆಗೆ ನಾಯಕತ್ವದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮುಖವನ್ನು ಇಟ್ಟುಕೊಂಡು ಬಿಜೆಪಿ ಮತ ಕೇಳಿತ್ತು. ಇದರಿಂದಾಗಿ ಚುನಾವಣೆ ಕೇಂದ್ರ ಸರ್ಕಾರ ವರ್ಸಸ್ ಕೇಜ್ರಿವಾಲ್ ಎಂದೇ ಬಿಂಬಿತವಾಗಿತ್ತು.

    ಕೇಜ್ರಿವಾಲ್ ಎದುರು ಸಿಎಂ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡಿರಲಿಲ್ಲ. ಡಾ. ಹರ್ಷವರ್ಧನ್, ಮನೋಜ್ ತಿವಾರಿ ಬೆಂಬಲಿಗರ ಕಿತ್ತಾಟದಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿತ್ತು. ಬಿಜೆಪಿ ಅಭಿವೃದ್ಧಿ ವಿಚಾರ ಬಿಟ್ಟು ಶಾಹೀನ್ ಭಾಗ್, ಪಾಕ್ ವಿಚಾರಕ್ಕೆ ಹೆಚ್ಚು ಒತ್ತು ನೀಡಿತ್ತು. ಇದರ ಜೊತೆ “ಕೇಂದ್ರಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್” ಎಂಬ ನಿಲುವಿಗೆ ಮತದಾರರು ಬಂದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಮತ್ತು ಕೈಯನ್ನು ಪೊರಕೆ ಗುಡಿಸಿ ಹಾಕಿದೆ.

    ಪ್ರಚಾರದ ಕೊನೆಯಲ್ಲಿ ಚುನಾವಣೆ ಭಾವನ್ಮಾಕ ರೂಪ ಪಡೆದುಕೊಂಡಿತ್ತು. ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಭಾಷಣದ ಅಬ್ಬರದಲ್ಲಿ ಕೇಜ್ರಿವಾಲ್ ಅವರನ್ನ ಭಯೋತ್ಪಾದಕ ಎಂದಿದ್ದರು. ಇದರಿಂದ ನೊಂದಿದ್ದ ಕೇಜ್ರಿವಾಲ್ ಕಣ್ಣಿರಿಟ್ಟಿದ್ದರು. ಇದನ್ನೇ ಬಳಸಿಕೊಂಡ ಕೇಜ್ರಿವಾಲ್, ನಾನು ನಿಮ್ಮ ಮಗ ನಿಮಗಾಗಿ ಕೆಲಸ ಮಾಡುತ್ತೇನೆ ನನ್ನನ್ನು ಭಯೋತ್ಪಾದಕ ಎನ್ನುತ್ತಾರೆ ಎನ್ನುವ ಮೂಲಕ ಅನುಕಂಪದ ಅಲೆ ಸೃಷ್ಟಿಸುವ ಪ್ರಯತ್ನ ಮಾಡಿ ಮತ ಸೆಳೆಯುವಲ್ಲಿ ಯಶಸ್ವಿಯಾದರು.

  • ಬಿಜೆಪಿಗೆ ಮತ್ತೆ ಮುಖಭಂಗ – ದೆಹಲಿಯಲ್ಲಿ ಎಎಪಿಗೆ ಹ್ಯಾಟ್ರಿಕ್ ಗೆಲುವು ಪಕ್ಕಾ

    ಬಿಜೆಪಿಗೆ ಮತ್ತೆ ಮುಖಭಂಗ – ದೆಹಲಿಯಲ್ಲಿ ಎಎಪಿಗೆ ಹ್ಯಾಟ್ರಿಕ್ ಗೆಲುವು ಪಕ್ಕಾ

    ನವದೆಹಲಿ: ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಜಯಗಳಿಸಲಿದೆ ಎಂದು ಎಲ್ಲ ಚುನಾವಣಾ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಈ ಮೂಲಕ ಕೇಜ್ರಿವಾಲ್ ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿವೆ.

    ಹೇಗಾದರೂ ಮಾಡಿ 22 ವರ್ಷದ ವನವಾಸ ಮುಗಿಸಿ ರಾಜಧಾನಿಯಲ್ಲಿ ಕಮಲ ಅರಳಿಸಬೇಕೆಂದು ಬಿಜೆಪಿ ನಾಯಕರು ಶತ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಅಂತೂ ಯುದ್ಧಕ್ಕೆ ಮೊದಲೇ ಶಸ್ತ್ರ ತ್ಯಾಗ ಮಾಡಿದೆ. ದೆಹಲಿ ಮತದಾರರ ಮನಸ್ಸಲ್ಲಿ ಖಚಿತವಾಗಿ ಏನಿದ್ಯೋ ಗೊತ್ತಿಲ್ಲ. ಆದ್ರೆ ಇವತ್ತು ಮೂರು ಪಕ್ಷಗಳ ಭವಿಷ್ಯವಂತೂ ಬರೆದಾಗಿದೆ. ದೆಹಲಿ ಚುನಾವಣಾ ಪೂರ್ವ ನಡೆದಿದ್ದ ಎಲ್ಲಾ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷವೇ ಗೆಲ್ಲುತ್ತೆ ಎಂದು ಹೇಳಲಾಗಿತ್ತು. ಮತದಾನ ಅಂತ್ಯದ ಬಳಿಕ ಸಂಜೆ ಹೊರಬಿದ್ದ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿಯೂ ಹೆಚ್ಚು ಕಡಿಮೆ ಅದೇ ಫಲಿತಾಂಶ ಹೊರಬಿದ್ದಿದೆ.

    ಆಮ್ ಆದ್ಮಿ ಪಕ್ಷವೇ ಮತ್ತೆ ದೆಹಲಿ ಗದ್ದುಗೆ ಏರಲಿದೆ ಎಂದು ಎಕ್ಸಿಟ್ ಪೋಲ್ ಹೇಳುತ್ತಿದೆ. ಇತ್ತೀಚಿಗೆ ಜಾರ್ಖಂಡ್, ಮಹಾರಾಷ್ಟ್ರವನ್ನು ಕಳೆದುಕೊಂಡಿದ್ದ ಬಿಜೆಪಿಗೆ ಈ ಬಾರಿಯೂ ದೆಹಲಿ ಕೈಗೆಟುಕಲ್ಲ ಎನ್ನಲಾಗ್ತಿದೆ. ಒಟ್ಟು 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ದೆಹಲಿ ಬಹುಮತದೊಂದಿಗೆ ಜಯಗಳಿಸಲಿದೆ ಎಂದು ಎಲ್ಲ ಸಮೀಕ್ಷೆಗಳು ಅಭಿಪ್ರಾಯಪಟ್ಟಿದೆ.

    ಸಮೀಕ್ಷೆಗಳು ಹೇಳೋದು ಏನು?
    ಟೈಮ್ಸ್ ನೌ: ಆಪ್- 44 , ಬಿಜೆಪಿ- 26, ಕಾಂಗ್ರೆಸ್- 00, ಇತರೆ – 00

    ಜನ್ ಕೀ ಬಾತ್: ಆಪ್- 48-61, ಬಿಜೆಪಿ – 09-21, ಕಾಂಗ್ರೆಸ್- 0-1, ಇತರೆ – 00-00

    ನ್ಯೂಸ್ ಎಕ್ಸ್: ಆಪ್- 53-57, ಬಿಜೆಪಿ- 11-17, ಕಾಂಗ್ರೆಸ್ – 00-02, ಇತರೆ – 00-00

    ಸಿಸಿರೋ: ಆಪ್ – 54, ಬಿಜೆಪಿ – 15, ಕಾಂಗ್ರೆಸ್ – 01, ಇತರೆ – 00

    ನ್ಯೂಸ್ ನೇಷನ್: ಆಪ್- 55, ಬಿಜೆಪಿ- 14, ಕಾಂಗ್ರೆಸ್- 01, ಇತರೆ – 00

    ಕಡಿಮೆ ಮತದಾನ:
    ಇನ್ನು 2015ರಲ್ಲಿ ಮತದಾನಕ್ಕೆ ಕಂಡುಬಂದಿದ್ದ ಉತ್ಸಾಹ ಈ ಬಾರಿ ಕಂಡುಬರಲಿಲ್ಲ. ಕಳೆದ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ಕಡಿಮೆ ಮತದಾನ ಆಗಿದೆ. 2015ರಲ್ಲಿ ಶೇ.65 ರಷ್ಟು ಮತದಾನ ಆಗಿದ್ದರೆ ಈ ಬಾರಿ ಸಂಜೆ ಶೇ.55ರಷ್ಟು ಮತದಾನ ನಡೆದಿದೆ. ಫೆಬ್ರವರಿ 11ಕ್ಕೆ ಫಲಿತಾಂಶ ಹೊರಬೀಳಲಿದೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಬಿಎಲ್ ಸಂತೋಷ್ ಸೇರಿದಂತೆ ಹಲವು ಗಣ್ಯರು ಮತಚಲಾಯಿಸಿದರು. ಚಿನ್ಹೆ ಧರಿಸಿ ಮತದಾನಕ್ಕೆ ಬಂದಿದ್ದನ್ನು ಪ್ರಶ್ನೆ ಮಾಡಿದ ಆಪ್ ಕಾರ್ಯಕರ್ತನಿಗೆ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಕಪಾಳಕ್ಕೆ ಬಾರಿಸಿದ್ದಾರೆ. ಮಧುಮಗನೊಬ್ಬ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿ ಕುಣಿದುಕುಪ್ಪಳಿಸಿದ್ದಾನೆ. 100ಕ್ಕೂ ಹೆಚ್ಚು ಶತಾಯಷಿಗಳು ಮತ ಚಲಾಯಿಸಿದ್ದಾರೆ.

    2015ರ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ 67 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಬಿಜೆಪಿ ಕೇವಲ 3 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಉಳಿದ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಶಿರೋಮಣಿ ಅಕಾಲಿಕ ದಳ, ಇಂಡಿಯ್ ನ್ಯಾಷನಲ್ ಲೋಕದಳ ಖಾತೆ ತೆರೆಯುವಲ್ಲಿ ವಿಫಲವಾಗಿದ್ದವು.

  • ಇಂದಿನಿಂದ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭ

    ಇಂದಿನಿಂದ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭ

    ನವದೆಹಲಿ: ಇಂದಿನಿಂದ ದೆಹಲಿ ಸಾರಿಗೆ ನಿಗಮ(ಡಿಟಿಸಿ) ಬಸ್ಸುಗಳು ಮತ್ತು ಕ್ಲಸ್ಟರ್ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಗೊಂಡಿದ್ದು, ಕೇಜ್ರಿವಾಲ್ ಸರ್ಕಾರದ ಈ ಹೊಸ ಯೋಜನೆ ದೀಪಾವಳಿಗೆ ಮಹಿಳೆಯರಿಗೆ ಉಡುಗೊರೆ ನೀಡಿದಂತಾಗಿದೆ.

    ಭಾಯ್ ಧೂಜ್‍ನಲ್ಲಿ ಪ್ರಾರಂಭವಾದ ಫ್ರೀ-ರೈಡ್ ಯೋಜನೆಯನ್ನು ಪಡೆಯಲು ಡಿಟಿಸಿ ಮತ್ತು ಕ್ಲಸ್ಟರ್ ಬಸ್‍ಗಳಲ್ಲಿ ಮಹಿಳೆಯರಿಗೆ ಗುಲಾಬಿ ಬಣ್ಣದ ಟಿಕೆಟ್ ನೀಡಲಾಗುವುದು. ಹೀಗೆ ವಿತರಿಸಲಾದ ಗುಲಾಬಿ ಟಿಕೆಟ್ ಆಧಾರದ ಮೇಲೆ ಸರ್ಕಾರ ಸಾರಿಗೆಗೆ ಟಿಕೆಟ್ ದರವನ್ನು ಮರುಪಾವತಿ ಮಾಡಲಿದೆ.

    ದೆಹಲಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಸವಾರಿ ಇಂದಿನಿಂದ ಪ್ರಾರಂಭವಾಗಿದೆ. ಅಭಿನಂದನೆಗಳು ದೆಹಲಿ! ಮಹಿಳಾ ಸುರಕ್ಷತೆಯ ಹೊರತಾಗಿ, ಇದು ದೆಹಲಿ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನೂ ಹೆಚ್ಚಿಸುತ್ತದೆ ಎಂದು ಉಪಮುಖ್ಯಮಂತ್ರಿ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

    ಸೋಮವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಬಸ್‍ಗಳಲ್ಲಿನ ಸುರಕ್ಷತಾ ವ್ಯವಸ್ಥೆ ಕುರಿತಾಗಿ ತಿಳಿಸಿದರು. ಮಹಿಳೆಯರ ಸುರಕ್ಷತೆಗಾಗಿ ಮಂಗಳವಾರದಿಂದ ದೆಹಲಿಯ ಎಲ್ಲಾ ಬಸ್‍ಗಳಲ್ಲಿ ಬಸ್ ಮಾರ್ಷಲ್‍ಗಳನ್ನು ನಿಯೋಜಿಸಲಾಗುವುದು. ಇದಕ್ಕಾಗಿ 13,000 ಬಸ್ ಮಾರ್ಷಲ್‍ಗಳನ್ನು ನೇಮಕ ಮಾಡಲಾಗಿದೆ ಎಂದು ಸಿಹಿ ಸುದ್ದಿ ನೀಡಿದ್ದರು.

    ದೆಹಲಿಯಲ್ಲಿ ಪ್ರತಿದಿನ 45 ಲಕ್ಷ ಪ್ರಯಾಣಿಕರು ಬಸ್ ಸೇವೆಯನ್ನು ಪಡೆಯುತ್ತಿದ್ದಾರೆ. ಪ್ರತಿದಿನ ಕೆಲಸಕ್ಕೆ ತೆರಳಲು ಮಹಿಳೆಯರಿಗೆ ಸಹಾಯವಾಗಲಿ, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ದೆಹಲಿ ಸರ್ಕಾರ ಹೊಸ ಯೋಜನೆ ರೂಪಿಸಿತ್ತು. ದೆಹಲಿಯ ರಾಜ್ಯ ವಿಧಾನಸಭಾ ಚುನಾವಣೆಯ ಮೊದಲು ವಿಧಾನಸಭೆ ಅಧಿವೇಶನದಲ್ಲಿ ಆಗಸ್ಟ್ 29ರಂದು ದೆಹಲಿ ಸಚಿವ ಸಂಪುಟ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಅನುಮೋದನೆ ನೀಡಿತ್ತು.

  • ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    – ನಾಳೆಯಿಂದ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ನವದೆಹಲಿ: ಸಾರ್ವಜನಿಕರ ಸಂಪರ್ಕ ಸಾರಿಗೆ ಬಸ್‍ಗಳಲ್ಲಿ ನಿತ್ಯ ಓಡಾಡುವ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಿಎಂ ಕೇಜ್ರಿವಾಲ್ ಸರ್ಕಾರ, ಮತ್ತೆ 13 ಸಾವಿರ ಮಂದಿ ಮಾರ್ಷಲ್ ಗಳನ್ನ ನೇಮಕ ಮಾಡಿಕೊಳ್ಳುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಕೇಜ್ರಿವಾಲ್, ಮಂಗಳವಾರದಿಂದ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ದೃಷ್ಟಿಯಿಂದ 13 ಸಾವಿರ ಮಾರ್ಷಲ್ ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಈ ಯೋಜನೆ ಜಾರಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

    ಮಹಿಳೆಯರಿಗೆ ರಕ್ಷಣೆ ನೀಡುವುದೆ ನಮ್ಮ ಮೊದಲ ಆದ್ಯತೆ. ನಮ್ಮ ಸರ್ಕಾರ ಸಂತಸದಿಂದ ತೆಗೆದುಕೊಂಡ ನಿರ್ಧಾರವಾಗಿದ್ದು, ಇದುವರೆಗೂ ವಿಶ್ವದ ಯಾವುದೇ ನಗರದಲ್ಲಿ ನೀಡಿರದ ಮಾದರಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ.

    ಮಹಿಳೆಯರು ಸಾರಿಗೆ ವಾಹನದಲ್ಲಿ ಪ್ರಯಾಣಿಸುವ ವೇಳೆ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವ ಅನುಭವ ಪಡೆಯಬೇಕು ಎಂದು ತಿಳಿಸಿದರು. ನವದೆಹಲಿಯಲ್ಲಿ ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವ ಯೋಜನೆ ಜಾರಿಯಾಗುವ ಒಂದು ದಿನ ಮುನ್ನ ಕೇಜ್ರಿವಾಲ್ ಈ ತೀರ್ಮಾನ ಪ್ರಕಟಿಸಿರುವುದು ವಿಶೇಷವಾಗಿದೆ. ಅಲ್ಲದೇ ಕೇಜ್ರಿವಾಲ್ ಇಂದಿನಿಂದಲೇ ಮುಂದಿನ ಚುನಾವಣೆಗೆ ಜನಪ್ರಿಯ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  • ದೆಹಲಿ ಸಿಎಂ ಕೇಜ್ರಿವಾಲ್ ಕಾರು ಕಳ್ಳತನ: ಎಫ್‍ಐಆರ್ ದಾಖಲು

    ದೆಹಲಿ ಸಿಎಂ ಕೇಜ್ರಿವಾಲ್ ಕಾರು ಕಳ್ಳತನ: ಎಫ್‍ಐಆರ್ ದಾಖಲು

    ನವದೆಹಲಿ: ಆಪ್ ನಾಯಕ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ಕಳುವಾಗಿದೆ.

    ದೆಹಲಿಯ ಸಚಿವಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ ನೀಲಿ ಬಣ್ಣದ ಕಾರನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

    ವಿದೇಶಿ ಸ್ನೇಹಿತರೊಬ್ಬರು ಕೇಜ್ರಿವಾಲ್ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014ರಲ್ಲಿ  ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಈ ಕಾರಿನಲ್ಲೇ ಕೇಜ್ರಿವಾಲ್ ರಾತ್ರಿ ನಿದ್ದೆಮಾಡಿದ್ದರು. ಆರಂಭದಲ್ಲಿ ಆಪ್ ಪ್ರಚಾರ ಕಾರ್ಯದ ವೇಳೆ ಈ ಕಾರು ಮೂಲಕವೇ ಕೇಜ್ರಿವಾಲ್ ಪ್ರಚಾರಕ್ಕೆ ತೆರಳುತ್ತಿದ್ದರು.

    ಕಾರು ಕಳ್ಳತನ ಪ್ರಕರಣವನ್ನು ಬೇಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.