Tag: KC generel hospital

  • ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ – ಕೊಂಚ ಯಾಮಾರಿದ್ರೂ ರಣ ಭೀಕರ ದುರಂತ!

    ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ – ಕೊಂಚ ಯಾಮಾರಿದ್ರೂ ರಣ ಭೀಕರ ದುರಂತ!

    – ಹಾರಿಹೋಗ್ತಿತ್ತು  ಸೋಂಕಿತರ ಜೀವ
    – ರಾತ್ರೋರಾತ್ರಿ ಕಾರ್ಯಾಚರಣೆ

    ಬೆಂಗಳೂರು: ಆಕ್ಸಿಜನ್ ಅಭಾವದಿಂದ ರಾತ್ರಿ ಕೆಸಿಜನರಲ್ ಆಸ್ಪತ್ರೆಯಲ್ಲಿ ನಡೆಯಬಹುದಾಗಿದ್ದ ಭಾರೀ ಅನಾಹುತ ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಪೊಲೀಸರ ಪ್ರಯತ್ನದಿಂದ ತಪ್ಪಿದೆ.

    ಒಟ್ಟು 150 ಮಂದಿ ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕ್ಸಿಜನ್ ಟ್ಯಾಂಕ್ ಖಾಲಿಯಾಗುತ್ತಿದ್ದರೂ ಬರಬೇಕಾಗಿದ್ದ ಟ್ಯಾಂಕರ್ ಬಾರದೇ ಇದ್ದ ಕಾರಣ ವೈದ್ಯಧಿಕಾರಿಗಳಿಗೆ ಆತಂಕ ಎದುರಾಗಿತ್ತು. ಮಧ್ಯರಾತ್ರಿ ಡಿಸಿಎಂ ಅಶ್ವತ್ಥ ನಾರಾಯಣ ಮಧ್ಯಪ್ರವೇಶದಿಂದ ಬಿಕ್ಕಟ್ಟು ಬಗೆ ಹರಿದಿದ್ದು ವೈದ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮಧ್ಯರಾತ್ರಿ 3 ಗಂಟೆಗಳ ಕಾಲ ವೈದ್ಯಾಧಿಕಾರಿಗಳು ಮತ್ತು ತಾಂತ್ರಿಕ ತಂಡ ಕಾರ್ಯಾಚರಣೆ ಆಕ್ಸಿಜನ್ ಮೇಲೆ ನಿಗಾ ಇಟ್ಟು ಸಮಸ್ಯೆಯನ್ನು ಪರಿಹರಿಸಿದ್ದಾರೆ.

    ನಡೆದಿದ್ದು ಏನು?
    ಬಳ್ಳಾರಿಯಿಂದ ಹೊರಟಿದ್ದ ಆಕ್ಸಿಜನ್ ಟ್ಯಾಂಕರ್ ರಾತ್ರಿ 11ಕ್ಕೆ ಬರಬೇಕಿತ್ತು. ರಾತ್ರಿ 11:30 ಆದರೂ ಟ್ಯಾಂಕರ್ ಬಾರದೇ ಇದ್ದ ವಿಚಾರ ಆಕ್ಸಿಜನ್ ನಿರ್ವಹಣೆ ಹೊಣೆ ಹೊತ್ತಿದ್ದ ವೈದ್ಯಾಧಿಕಾರಿ ಡಾ. ವೆಂಕಟೇಶ್ ಪ್ರಸಾದ್ ಗಮನಕ್ಕೆ ಬಂದಿದೆ.

    ಯಾಕೆ ಬಂದಿಲ್ಲ ಎಂದು ವಿಚಾರಿಸಿದಾಗ ಟ್ಯಾಂಕರ್ ಸಕ್ರಾ ಆಸ್ಪತ್ರೆಗೆ ಹೋಗಿರುವ ವಿಚಾರ ಗೊತ್ತಾಗಿದೆ. ತಕ್ಷಣ ಕಾರ್ಯೋನ್ಮುಖರಾದ ವೈದ್ಯರು ಎಮರ್ಜೆನ್ಸಿ ಮತ್ತು ಇತರ ವಾರ್ಡ್‍ಗಳ ಆಕ್ಸಿಜನ್ ಮರುಹಂಚಿಕೆ ಮಾಡಿ ನಿಗಾ ಇಟ್ಟಿದ್ದರು.

    ಕೂಡಲೇ ಆಸ್ಪತ್ರೆಯ ವೈದ್ಯರು ನೇರವಾಗಿ ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಪೊಲೀಸರ ಮೊರೆ ಹೋಗುತ್ತಾರೆ. ಬೆಳಗಿನ ಜಾವ 5 ಗಂಟೆಯಷ್ಟೊತ್ತಿಗೆ ಆಕ್ಸಿಜನ್ ಪ್ಲಾಂಟ್ ನಿಂದ ಪೊಲೀಸ್ ಎಸ್ಕಾರ್ಟ್‍ನಲ್ಲಿ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕರ್ ಬರುತ್ತದೆ.

    ಕಡಿಮೆ ಹೇಗಾಯ್ತು?
    ಬೆಳಗ್ಗೆ ಮತ್ತು ಸಂಜೆ ಎರಡು ಗಂಟೆ ಟ್ಯಾಂಕ್‍ಗೆ ಆಕ್ಸಿಜನ್ ಭರ್ತಿ ಮಾಡಲಾಗುತ್ತದೆ. ಆಕ್ಸಿಜನ್ ನೋಡಿಕೊಳ್ಳುವ ತಂಡಕ್ಕೆ ಸಂಜೆ 6 ಗಂಟೆಗೆ ಟ್ಯಾಂಕ್ ಖಾಲಿಯಾಗುತ್ತಿರುವುದು ಗಮನಕ್ಕೆ ಬಂದಿದೆ. 8 ಟನ್ ಸಾಮರ್ಥ್ಯದ ಟ್ಯಾಂಕ್ ನಲ್ಲಿ ರಾತ್ರಿ 9 ಗಂಟೆಯ ವೇಳೆ ಇದು 3 ಟನ್‍ಗೆ ಕುಸಿದಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ. ಕೊನೆಗೆ ಇತರ ವಾರ್ಡ್‍ಗಳಿಗೆ ಮೀಸಲಾಗಿದ್ದ ಆಕ್ಸಿಜನ್ ಬಳಕೆ ಮಾಡಿ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ.

  • ಕೋವಿಡ್ ವಾರ್ಡ್‍ಗೆ ತೆರಳಿ ಸೋಂಕಿತರ ಯೋಗಕ್ಷೇಮ ವಿಚಾರಿಸಿದ ಡಿಸಿಎಂ

    ಕೋವಿಡ್ ವಾರ್ಡ್‍ಗೆ ತೆರಳಿ ಸೋಂಕಿತರ ಯೋಗಕ್ಷೇಮ ವಿಚಾರಿಸಿದ ಡಿಸಿಎಂ

    – ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಹೊಸ ಒಪಿಡಿ ಸ್ಥಾಪನೆಗೆ ಕ್ರಮ

    ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭಾನುವಾರ ಬೆಳಗ್ಗೆ ಕೆ.ಸಿ.ಜನರಲ್ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಘಟಕಗಳಿಗೆ ಭೇಟಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು.

    ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರೊಂದಿಗೆ ಆಸ್ಪತ್ರೆಗೆ ಬಂದ ಅವರು ಪಿಪಿಎ ಕಿಟ್ ಧರಿಸಿ ಸೋಂಕಿತರನ್ನು ಭೇಟಿ ಮಾಡಿ ಮಾತನಾಡಿದರು. ಚಿಕಿತ್ಸೆಯ ಬಗ್ಗೆ ಅವರೊಂದಿಗೆ ಮಾಹಿತಿ ಪಡೆದುಕೊಂಡರು. ಮೋಹನ್ ಅವರೂ ಪಿಪಿಇ ಕಿಟ್ ಧರಿಸಿಯೇ ವಾರ್ಡ್ ಪರಿಶೀಲಿಸಿದರು.

    ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಮಾಡ್ಯೂಲರ್ ಕೋವಿಡ್ ಐಸಿಯು ಘಟಕಗಳ ಒಳಕ್ಕೂ ಅವರು ತೆರಳಿ ಅಲ್ಲಿನ ವ್ಯವಸ್ಥೆಯನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿದರು.

    ಇನ್ನೊಂದು ಒಪಿಡಿ
    ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೆಚ್ಚು ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಅತ್ಯುತ್ತಮ ಸೌಲಭ್ಯಗಳು ಕೂಡ ಇವೆ. ಹೀಗಾಗಿ ಇಲ್ಲಿಯೇ ಇನ್ನೊಂದು ದೊಡ್ಡ ಪ್ರಮಾಣದ ಹೊರ ರೋಗಿಗಳ ವಿಭಾಗ (ಒಪಿಡಿ)ವನ್ನು ತೆರೆಯಲು ಸರಕಾರ ನಿರ್ಧರಿಸಿದೆ ಎಂದು ಡಿಸಿಎಂ ಹೇಳಿದರು.

    ಪಿಎಂ ಮೆಚ್ಚುಗೆ
    ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಖಾ ಎಂಬ ನರ್ಸ್ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ‘ಮನ್ ಕೀ ಬಾತ್’ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದು ಅತ್ಯಂತ ಸಂತೋಷದ ಸಂಗತಿ. ಅವರಿಗೆ ಸರಕಾರದ ಮೆಚ್ಚುಗೆ ಇದೆ. ಹಾಗೆಯೇ ಆಸ್ಪತ್ರೆಯ ಎಲ್ಲ ವೈದ್ಯರು, ನರ್ಸ್‍ಗಳು ಹಾಗೂ ಪ್ಯಾರಾ ಮಡಿಕಲ್ ಸಿಬ್ಬಂದಿ ತಮ್ಮ ಜೀವವನ್ನು ಒತ್ತೆ ಇಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಬೆಡ್ ಕೊರತೆ ನೀಗಿಸುತ್ತೇವೆ
    ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆಗಳ ಕೊರತೆ ಇದೆ. ಅದನ್ನು ಇಲ್ಲ ಎಂದು ಹೇಳುತ್ತಿಲ್ಲ. ಆದರೆ, ಆ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ. ಒಂದು ವೇಳೆ ಬೆಡ್ ಸಿಗದಿದ್ದರೂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಯಾರೇ ಬಂದರೂ ಅವರನ್ನು ತಪಾಸಣೆ ಮಾಡಿ ಉತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಈ ಆಸ್ಪತ್ರೆಯಲ್ಲಿ 450 ಬೆಡ್ ಇದೆ. ಸಾಕಾಗುತ್ತಿಲ್ಲ ನಿಜ, ಆದರೆ ದಿನಕ್ಕೆ ಕೊನೆಪಕ್ಷ 2,000 ಜನರಿಗೆ ಚಿಕಿತ್ಸೆ ಸಿಗುವ ವ್ಯವಸ್ಥೆ ಆಗಬೇಕು. ಅದಕ್ಕೆ ಅಗತ್ಯವಾದ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ಒಪಿಡಿಗೆ ಬಂದು ಚಿಕಿತ್ಸೆ ಪಡೆದು ಮನೆಯಲ್ಲೇ ಹೋಮ್ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು. ಉತ್ತಮ ಔಷಧಿಯನ್ನು ನೀಡಲಾಗುತ್ತಿದೆ. ರೋಗ ಲಕ್ಷಣಗಳಿದ್ದವರೆಲ್ಲ ಬಂದು ಆಸ್ಪತ್ರೆಗೆ ದಾಖಲಾಗಬೇಕು ಎಂದಲ್ಲ, ಮನೆಯಲ್ಲೇ ಇದ್ದು ಉತ್ತಮ ಚಿಕಿತ್ಸೆ ಪಡೆಯಬಹುದು ಎಂದರು ಉಪ ಮುಖ್ಯಮಂತ್ರಿ.

    ರೆಮಿಡಿಸ್ವಿರ್ ಕೊರತೆ ಆಗಲ್ಲ
    ರಾಜ್ಯದಲ್ಲಿ ರೆಮಿಡಿಸ್ವಿರ್ ಕೊರತೆ ಬಹತೇಕ ನೀಗುತ್ತಿದೆ. ಕೇಂದ್ರ ಸರಕಾರದಿಂದ ಇವತ್ತು 1,50,000ಕ್ಕಿಂತ ಹೆಚ್ಚಿನ ರೆಮಿಡಿಸ್ವಿರ್ ವೇಲ್ಸ್ ರಾಜ್ಯಕ್ಕೆ ಹಂಚಿಕೆಯಾಗಿದೆ. ಇನ್ನು ಕೊರತೆಯಾಗಲ್ಲ, ಅಗತ್ಯ ಇರುವವರಿಗೆ ನೀಡಲಾಗುವುದು. ಅದಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.