Tag: KBC

  • ಕೆಬಿಸಿ ನಿರೂಪಣೆ ಒಪ್ಪಿಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಬಿಗ್ ಬಿ

    ಕೆಬಿಸಿ ನಿರೂಪಣೆ ಒಪ್ಪಿಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಬಿಗ್ ಬಿ

    ಮುಂಬೈ: ಬಾಲಿವುಡ್ ಆಲ್ ಟೈಮ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್‍ಪತಿ (ಕೆಬಿಸಿ) ನಿರೂಪಣೆಯನ್ನು ಒಪ್ಪಿಕೊಳ್ಳಲು ನಿಜವಾದ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

    ಕೆಬಿಸಿಯಲ್ಲಿ ಬಿಗ್ ಬಿ ವರ್ಚಸ್ಸು ನೋಡಿ ಹಲವಾರು ಜನ ಫಿದಾ ಆಗಿದ್ದಾರೆ. ಅವರ ಧ್ವನಿ ಪ್ರಶ್ನೆ ಕೇಳಬೇಕಾದರೆ ಅವರಿಗಿರುವ ಗಾಂಭೀರ್ಯತೆ ಜೀವನದಲ್ಲಿ ಸೋತೆ ಎಂದು ಹೇಳುವವರಿಗೆ ಅವರು ನೀಡುವ ಬೆಂಬಲ ಎಲ್ಲವನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ಈಗ ಕೆಬಿಸಿ 13 ಶೋ 1000 ಎಪಿಸೋಡ್‍ಗಳನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆ ಕೌಟುಂಬಿಕ ಸಂಚಿಕೆಯನ್ನು ಮಾಡಲಾಗಿತ್ತು. ಇದನ್ನೂ ಓದಿ: ಭಾರತೀಯ ಮೂಲದ ಗಣಿತಜ್ಞನಿಗೆ ಸಿಪ್ರಿಯನ್ ಫೊಯಾಸ್ ಪ್ರಶಸ್ತಿ

    ಈ ಹಿನ್ನೆಲೆ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಹಾಟ್ ಸೀಟ್‍ಗಳಲ್ಲಿದ್ದರೆ, ಹಿರಿಯ ನಟಿ ಜಯಾ ಬಚ್ಚನ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಫ್ಯಾಮ್-ಜಾಮ್ ನಲ್ಲಿ ಇವರ ಜೊತೆಗೆ ಸೇರಿದರು. ಈ ವೇಳೆ ಹಾಟ್ ಸೀಟ್‍ನಲ್ಲಿದ್ದ ಬಿಗ್ ಬಿ ಅವರ ಮಗಳು ಅವರಿಗೆ, ಈ ಶೋ ಹೇಗೆ ಅನಿಸಿತು ಎಂದು ಪ್ರಶ್ನಿಸಿದರು. ಅದಕ್ಕೆ ಬಿಗ್ ಬಿ ಉತ್ತರಿಸಿದರು.

    ಬಿಗ್ ಬಿ, ಈ ಶೋ ಪ್ರಾರಂಭವಾಗಿ 1000 ಎಪಿಸೋಡ್‍ಗಳಾಗಿದೆ. ಈ ಶೋ 2000ರಲ್ಲಿ ಶುರುವಾಗಿತ್ತು. ಆಗ ಹಲವು ಜನರು ನೀವು ಸಿನಿಮಾದಿಂದ ಟಿವಿ ಹೋಗುತ್ತಿದ್ದೀರಾ, ದೊಡ್ಡ ಪರದೆ ಯಿಂದ ಚಿಕ್ಕ ಪರದೆ ಹೋಗುತ್ತಿದ್ದೀರಾ? ನಿಮ್ಮ ಇಮೇಜ್ ಕಮ್ಮಿಯಾಗುತ್ತೆ ಎಂದು ಹೇಳಿದ್ದರು. ಈ ಹೆಜ್ಜೆ ನಿಮಗೆ ಕಷ್ಟ ಆಗುತ್ತೆ ಎಂದು ಹೇಳಿದ್ದರು. ಅದರಂತೆ ಸ್ವಲ್ಪ ದಿನ ಸಿನಿಮಾಗಳು ಸಹ ಬಂದಿರಲಿಲ್ಲ. ಆದರೆ ಈ ಶೋ ಟಿವಿಯಲ್ಲಿ ಬಂದಾಗ ಇಡೀ ಜಗತ್ತೆ ಬದಲಾಯಿತು ಎಂದು ನನಗೆ ಅನಿಸಿತ್ತು ಎಂದರು.

    ಎಲ್ಲದಕ್ಕಿಂತ ನನಗೆ ತುಂಬಾ ಇಷ್ಟವಾದ ವಿಷಯವೆಂದರೆ ನಮ್ಮ ಶೋಗೆ ಬರುತ್ತಿದ್ದ ಸ್ಪರ್ಧಿಗಳು. ಅವರಿಂದ ನನಗೆ ಪ್ರತಿದಿನ ಒಂದೊಂದು ವಿಷಯಗಳನ್ನು ಕಲಿಯಲು ಸಿಗುತ್ತಿತ್ತು. ಅವರಿಂದ ನಾನು ತುಂಬಾ ವಿಷಯಗಳನ್ನು ಕಲಿತುಕೊಂಡಿದ್ದೇನೆ ಎಂದು ತಿಳಿಸಿದರು.

    ಈ ವೇಳೆ ಕೆಬಿಸಿ ನಡೆದುಬಂದ ಆದಿಯನ್ನು ಶೋನಲ್ಲಿ ಪ್ರಸಾರ ಮಾಡಲಾಯಿತು. ಈ ವೀಡಿಯೋ ನೋಡಿ ಬಚ್ಚನ್ ಭಾವುಕರಾದರು. ಬಿಗ್ ಬಿ ಕೆಬಿಸಿ ನಿರೂಪಣೆಯನ್ನು ಮಾಡಿದ್ದು, ಅದರೊಂದಿಗೆ ಒಂದು ಅವಿನಾಭವ ಸಂಬಂಧ ಹೊಂದಿದ್ದಾರೆ. ಅದು ಅಲ್ಲದೇ ಕೆಬಿಸಿಯ ಸೀಸನ್ 3 ಶೋ ಅನ್ನು ಶಾರುಖ್ ಖಾನ್ ಅನ್ನು ಹೋಸ್ಟ್ ಮಾಡಿದರು. ಇದನ್ನೂ ಓದಿ: ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುವ ಈಶ್ವರಪ್ಪಗೆ ಸಿಎಂ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

    ಕೌನ್ ಬನೇಗಾ ಕರೋಡ್ ಪತಿ ‘ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್’ ಶೀರ್ಷಿಕೆಯ ಬ್ರಿಟಿಷ್ ಟಿವಿ ಕಾರ್ಯಕ್ರಮವನ್ನು ಆಧರಿಸಿದ ಗೇಮ್ ಶೋ. 03 ಜುಲೈ 2000ರಲ್ಲಿ ಕೌನ್ ಬನೇಗಾ ಕರೋಡ್ ಪತಿ ಖಾಸಗಿ ಚಾನೆಲ್ ವೊಂದರಲ್ಲಿ ರಾತ್ರಿ 9 ಗಂಟೆಗೆ ಪ್ರಾರಂಭವಾಯಿತು. ಈ ಶೋ ಭಾರತದಲ್ಲಿ ಒಂದು ಹೊಸ ಪ್ರಾರಂಭಕ್ಕೆ ನಂದಿಯಾಗಿತ್ತು ಎಂದರೆ ತಪ್ಪಾಗುವುದಿಲ್ಲ.

  • ಪ್ರಾಂಶುಪಾಲರ ಮೂರು ಷರತ್ತು ಒಪ್ಪಿ ಎಂಜಿನಿಯರಿಂಗ್ ಸೇರಿದ್ದ ಸುಧಾಮೂರ್ತಿ

    ಪ್ರಾಂಶುಪಾಲರ ಮೂರು ಷರತ್ತು ಒಪ್ಪಿ ಎಂಜಿನಿಯರಿಂಗ್ ಸೇರಿದ್ದ ಸುಧಾಮೂರ್ತಿ

    ನವದೆಹಲಿ: ಎಂಜಿನಿಯರಿಂಗ್ ಪದವಿ ಕೋರ್ಸ್ ಸೇರುವ ಸಂದರ್ಭದಲ್ಲಿ ಪ್ರಾಂಶುಪಾಲರು ನನಗೆ ಮೂರು ಷರತ್ತುಗಳನ್ನು ವಿಧಿಸಿದ್ದರು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಈ ಕುರಿತು ಹಿಂದಿಯ ಖಾಸಗಿ ವಾಹಿನಿಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಇದರ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಧಾಮೂರ್ತಿಯವರು ಭಾಗವಹಿಸಿರುವ ಕಾರ್ಯಕ್ರಮ ನವೆಂಬರ್ 29ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

    ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಬಿಗ್ ಬಿ ಕೇಳುವ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಸುಧಾಮೂರ್ತಿಯವರು ಉತ್ತರಿಸಿದ್ದಾರೆ. ಇದೇ ವೇಳೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ವಿಧಿಸುವ ಷರತ್ತುಗಳ ಕುರಿತು ವಿವರಿಸಿದ್ದಾರೆ.

    https://www.instagram.com/tv/B5ShWE0lsEE/?utm_source=ig_embed

    ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದವರಾಗಿದ್ದು, ತಮ್ಮ ಎಂಜಿನಿಯರಿಂಗ್ ಪದವಿಯನ್ನು ಹಾವೇರಿಯ ಬಿವಿಬಿ(ಈಗಿನ ಕೆಎಲ್‍ಇ) ಕಾಲೇಜಿನಲ್ಲಿ ಓದಿದ್ದಾರೆ.

    ಚಿಕ್ಕವಯಸ್ಸಿನಲ್ಲೇ ಓದಿನಲ್ಲಿ ಮುಂದಿದ್ದ ನಾನು ಎಂಜಿನಿಯರಿಂಗ್ ಓದುವ ಬಯಕೆಯನ್ನು ಹೊಂದಿದ್ದೆ. 1968ರಲ್ಲಿ ಎಂಜಿನಿಯರಿಂಗ್ ಓದುವ ಹುಡುಗಿಯರೇ ಇರಲಿಲ್ಲ. ಹೀಗಾಗಿ ಎಂಜಿನಿಯರಿಂಗ್ ಓದಿದರೆ ಯಾವ ಹುಡುಗನೂ ಸಿಗುವುದಿಲ್ಲ ಎಂಬ ಭಯ ನಮ್ಮ ಮನೆಯವರಲ್ಲಿತ್ತು. ಆದರೆ ಹೇಗೋ ಮನೆಯವರ ಮನವೊಲಿಸಿ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

    ಆಗ ಕಾಲೇಜಿನಲ್ಲಿ 599 ಹುಡುಗರಿದ್ದರೆ, ನಾನೊಬ್ಬಳೇ ಹುಡುಗಿ. ಹೀಗಾಗಿ ಕಾಲೇಜು ಸೇರಿಕೊಳ್ಳುವಾಗ ಪ್ರಾಂಶುಪಾಲರು ನನಗೆ ಷರತ್ತು ವಿಧಿಸಿದ್ದರು. ಕಾಲೇಜಿಗೆ ಸೀರೆಯನ್ನು ಮಾತ್ರ ಧರಿಸಿಕೊಂಡು ಬರಬೇಕು. ಕಾಲೇಜು ಕ್ಯಾಂಟೀನಿಗೆ ಹೋಗುವ ಹಾಗಿಲ್ಲ ಹಾಗೂ ಹುಡುಗರೊಂದಿಗೆ ಯಾವುದೇ ಕಾರಣಕ್ಕೂ ಮಾತನಾಡುವಂತಿಲ್ಲ ಎಂಬ ಮೂರು ಷರತ್ತು ವಿಧಿಸಿದ್ದರು ಎಂದು ಹೇಳಿ ಷರತ್ತುಗಳ ಗುಟ್ಟನ್ನು ಸುಧಾಮೂರ್ತಿ ಬಿಚ್ಚಿಟ್ಟರು. ಇದನ್ನೂ ಓದಿ: ಸರಳವಾಗಿ ನಡೆಯಲಿದೆ ಇನ್ಫಿ ದಂಪತಿಯ ಮಗನ ವಿವಾಹ

    ಮೊದಲೆರಡು ಷರತ್ತುಗಳು ನನಗೆ ಕಷ್ಟವೆನಿಸಲಿಲ್ಲ. ಆದರೆ ಮೂರನೇ ಷರತ್ತಿಗೆ ಸಂಬಂಧಿಸಿದಂತೆ ಮೊದಲ ವರ್ಷ ನಾನು ಹುಡುಗರನ್ನು ಮಾತನಾಡಿಸಲಿಲ್ಲ. ಆದರೆ ನಾನು ಓದಿನಲ್ಲಿ ಮುಂದಿರುವುದನ್ನು ಕಂಡು ಎರಡನೇ ವರ್ಷ ಅವರೇ ನನ್ನನ್ನು ಮಾತನಾಡಿಸಲು ಪ್ರಾರಂಭಿಸಿದರು ಎಂದು ಮೂರನೇ ಷರತ್ತಿನ ಕುರಿತು ವಿವರಿಸಿದರು. ಇದೇ ವೇಳೆ ಕಾಲೇಜಿನಲ್ಲಿ ಪಟ್ಟ ಕಷ್ಟವನ್ನು ಸಹ ಸುಧಾಮೂರ್ತಿಯವರು ನೆನೆದಿದ್ದು, ಕಾಲೇಜಿನಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಹೆಣ್ಣು ಮಕ್ಕಳ ಕಷ್ಟ ಅರಿತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾದ ನಂತರ ಸುಮಾರು 16 ಸಾವಿರ ಶೌಚಾಲಯಗಳನ್ನು ಕಟ್ಟಿಸಿದ್ದೇವೆ ಎಂದು ಮಾಹಿತಿ ನೀಡಿದರು.

    ಈ ಪ್ರೋಮೋದಲ್ಲಿ ಸುಧಾಮೂರ್ತಿಯವರು ಬಡವರಿಗೆ, ಹಳ್ಳಿಗಳಲ್ಲಿನ ಮಕ್ಕಳಿಗೆ, ನಿರ್ಗತಿಕರಿಗೆ ಮಾಡಿರುವ ಸಮಾಜಮುಖಿ ಕೆಲಸಗಳನ್ನು ಸಹ ತೋರಿಸಲಾಗಿದೆ. ಪ್ರೋಮೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಹಲವರು ಸುಧಾಮೂರ್ತಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನಾನು ಬ್ಲ್ಯಾಕ್ ಬೆಲ್ಟ್ ಹೊಂದಿದ್ರೆ ನೀವು ಇಂದು ಶ್ರೀಮಂತರಾಗಬಹುದಾಗಿತ್ತು- ಕೆಬಿಸಿ ಸ್ಪರ್ಧಿಗೆ ಸೂರ್ಯ ಟ್ವೀಟ್

    ನಾನು ಬ್ಲ್ಯಾಕ್ ಬೆಲ್ಟ್ ಹೊಂದಿದ್ರೆ ನೀವು ಇಂದು ಶ್ರೀಮಂತರಾಗಬಹುದಾಗಿತ್ತು- ಕೆಬಿಸಿ ಸ್ಪರ್ಧಿಗೆ ಸೂರ್ಯ ಟ್ವೀಟ್

    ಬೆಂಗಳೂರು: ಬಿಜೆಪಿಯ ಯುವ ನಾಯಕ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ‘ಕೌನ್ ಬನೇಗಾ ಕರೋಡ್‌ಪತಿ ಶೋ’ನ ಫೋಟೋವನ್ನು ಟ್ವೀಟ್ ಮಾಡಿದ್ದು, ತಮ್ಮ ಹೆಸರನ್ನು ಆಯ್ಕೆ ಮಾಡಿ ತಪ್ಪು ಉತ್ತರ ನೀಡಿದ ವ್ಯಕ್ತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ವಾಹಿನಿಯ ಜನಪ್ರಿಯ ಶೋ ಆಗಿರುವ ‘ಕೌನ್ ಬನೇಗಾ ಕರೋಡ್‌ಪತಿ’ (ಕೆಬಿಸಿ) ಕಾರ್ಯಕ್ರಮದ ಸ್ಪರ್ಧಿಗೆ ೧೭ನೇ ಲೋಕಸಭಾ ಸದನದ ಸದಸ್ಯರ ಕುರಿತ ಪ್ರಶ್ನೆಯನ್ನು ಕೇಳಲಾಗಿತ್ತು. ಆದರೆ ಈ ಪ್ರಶ್ನೆಗೆ ಸ್ಪರ್ಧಿ, ತೇಜಸ್ವಿ ಸೂರ್ಯ ಅವರ ಹೆಸರನ್ನು ಆಯ್ಕೆ ಮಾಡಿ ಸ್ಪರ್ಧಿ ತಪ್ಪು ಉತ್ತರ ನೀಡಿದ್ದರು.

    ಉತ್ತರ ಪ್ರದೇಶ ಮಥುರಾದಿಂದ ಶೋಗೆ ಆಗಮಿಸಿದ್ದ ನರೇಂದ್ರ ಕುಮಾರ್ ಅವರು ೧೧ನೇ ಆವೃತ್ತಿಯ ಕೆಬಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ೧೦ನೇ ಪ್ರಶ್ನೆವರೆಗೂ ಸರಿ ಉತ್ತರಿಸಿದ್ದ ನರೇಂದ್ರ ಕುಮಾರ್ ೩.೨೦ ಲಕ್ಷ ರೂ.ಗಳನ್ನು ಗೆದ್ದಿದ್ದರು. ಆದರೆ ೧೧ನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿ ೬.೪೦ ಲಕ್ಷ ರೂ. ಗೆಲ್ಲುವ ಅವಕಾಶದಿಂದ ವಂಚಿತರಾಗಿ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು.

    ೧೭ನೇ ಲೋಕಸಭಾ ಸದನದ ಸದಸ್ಯರಾದ ಕೆಳಗಿನ ೪ ನಾಲ್ಕು ಸದಸ್ಯರಲ್ಲಿ ಯಾರಿಗೆ ಐಕಿಡೋ (ಮಾರ್ಷಲ್ ಆರ್ಟ್ಸ್)ದಲ್ಲಿ ಬ್ಲ್ಯಾಕ್ ಬೆಲ್ಟ್ ಲಭಿಸಿದೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಎ) ಗೌತಮ್ ಗಂಭೀರ್, ಬಿ) ರಾಹುಲ್ ಗಾಂಧಿ, ಸಿ) ಅನುರಾಗ್ ಠಾಕೂರ್, ಡಿ) ತೇಜಸ್ವಿ ಸೂರ್ಯ ಆಯ್ಕೆಗಳನ್ನು ನೀಡಲಾಗಿತ್ತು. ಈ ಪ್ರಶ್ನೆಗೆ ನರೇಂದ್ರ ಅವರು ತೇಜಸ್ವಿ ಸೂರ್ಯ ಅವರ ಹೆಸರನ್ನು ಆಯ್ಕೆ ಮಾಡಿದ್ದರು. ಇದನ್ನು ಓದಿ: ಜಪಾನಿನ ಐಕಿಡೋ ಮಾರ್ಷಲ್ ಆರ್ಟ್ ನಲ್ಲಿ ರಾಹುಲ್ ಗಾಂಧಿ ‘ಬ್ಲ್ಯಾಕ್ ಬೆಲ್ಟ್’-ಫೋಟೋ ನೋಡಿ

    ಕಾರ್ಯಕ್ರಮದ ಈ ಪ್ರಶ್ನೆಯನ್ನು ಗಮನಿಸಿದ ತೇಜಸ್ವಿ ಸೂರ್ಯ ಅವರು ಫೋಟೋವನ್ನು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ನಿಜಕ್ಕೂ ಐಕಿಡೊದಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದರೆ ಇಂದು ನೀವು ಶ್ರೀಮಂತ ವ್ಯಕ್ತಿಯಾಗುತ್ತಿದ್ದೀರಿ ಎಂದು ತಿಳಿಸಿದ್ದಾರೆ.

    ಅಂದಹಾಗೇ ೨೦೧೭ ರಲ್ಲಿ ರಾಹುಲ್ ಗಾಂಧಿ ಅವರು ಐಕಿಡೊ ತರಬೇತಿ ಪಡೆಯುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸದ್ಯ ತೇಜಸ್ವಿ ಅವರ ಟ್ವೀಟ್‌ಗೆ ಭಾರೀ ಪ್ರತಿಕ್ರಿಯೆ ಲಭಿಸಿದ್ದು, ಇದುವರೆಗೂ ೩೧ ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ.

  • ಸ್ಪರ್ಧಿಯ ಕಾಲಿಗೆ ನಮಸ್ಕರಿಸಿದ ಬಿಗ್-ಬಿ

    ಸ್ಪರ್ಧಿಯ ಕಾಲಿಗೆ ನಮಸ್ಕರಿಸಿದ ಬಿಗ್-ಬಿ

    ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಿರೂಪಣೆಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮ ಪುನಃ ಆರಂಭಗೊಂಡಿದೆ. ಈ ಬಾರಿಯೂ ಕಾರ್ಯಕ್ರಮದಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ‘ಕರ್ಮವೀರ್’ ಎಂಬ ವಿಶೇಷ ಸಂಚಿಕೆಗಳು ಈ ಬಾರಿ ಪ್ರಸಾರಗೊಳ್ಳಲಿವೆ. ಮೊದಲ ಕರ್ಮವೀರ್ ಸಂಚಿಕೆ ಶುಕ್ರವಾರ ಪ್ರಸಾರವಾಗಿದ್ದು, ಸ್ಪರ್ಧಿಯಾಗಿ ಆಗಮಿಸಿರುವ ಸಮಾಜ ಸೇವಕಿ ಸಿಂಧುತಾಯಿ ಸಪ್ಕಾಲ್ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಅಮಿತಾಬ್ ಬಚ್ಚನ್ ವಿಶೇಷ ಅತಿಥಿಯನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದಾರೆ.

    ಮಹಾರಾಷ್ಟ್ರದಲ್ಲಿ ‘ಅನಾಥ ಮಕ್ಕಳ ತಾಯಿ’ ಎಂದು ಗುರುತಿಸಿಕೊಳ್ಳುವ ಸಿಂಧುತಾಯಿ ಈ ಬಾರಿ ಕೌನ್ ಬನೇಗಾ ಕರೋಡಪತಿಗೆ ಅಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಂಧುತಾಯಿ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ನೋಡುಗರೊಂದಿಗೆ ಹಂಚಿಕೊಂಡಿದ್ದಾರೆ. ಕೆಬಿಸಿಯಲ್ಲಿ ಸಿಂಧುತಾಯಿ ತಮ್ಮ ಕಥೆಯನ್ನು ಹೇಳಿದಾಗ ಕೇಳುಗರ ರೋಮ ರೋಮಾಂಚನವಾಗಿದೆ.

    ನಾನು 20 ವರ್ಷದವಳಿದ್ದಾಗ ಅತ್ತೆ ನನ್ನನ್ನು ಮನೆಯಿಂದ ಹೊರಹಾಕಿದರು. 10 ದಿನದ ಮಗಳು ಮಮತಾಳೊಂದಿಗೆ ಮನೆಯಿಂದ ಹೊರಬಂದಾಗ ಅಮ್ಮ ಸಹ ನನ್ನನ್ನು ಸೇರಿಸಿಕೊಳ್ಳಲಿಲ್ಲ. ಪುಟ್ಟ ಕಂದನನ್ನು ಕರೆದುಕೊಂಡು ಎಲ್ಲಿಗೆ ಹೋಗೋದು? ಎಲ್ಲಿ ಇರಬೇಕು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡವು. ಕೊನೆಗೆ ರೈಲಿನಲ್ಲಿ ಹಾಡು ಹಾಡುವ ಜೀವನ ಆರಂಭಿಸಿದೆ. ಹಗಲಿನಲ್ಲಿ ರೈಲಿನಲ್ಲಿ ಮಗಳೊಂದಿಗೆ ಹಾಡು ಹೇಳಿ, ರಾತ್ರಿ ಸ್ಮಶಾನದಲ್ಲಿ ಉಳಿದುಕೊಳ್ಳುತ್ತಿದೆ. ಒಮ್ಮೆ ದೇಶದಲ್ಲಿ ಎಷ್ಟೋ ಮಕ್ಕಳಿಗೆ ಅಮ್ಮ ಇರಲ್ಲ. ಅಂತಹ ಅನಾಥ ಮಕ್ಕಳಿಗೆ ಅಮ್ಮನ ಅವಶ್ಯಕತೆ ಇರುತ್ತದೆ. ಈ ಯೋಚನೆ ಬಂದ ದಿನವೇ ಅನಾಥ ಮಕ್ಕಳನ್ನು ನನ್ನ ಜೊತೆ ಇರಿಸಿಕೊಳ್ಳಲು ಆರಂಭಿಸಿದೆ ಎಂದು ಸಿಂಧುತಾಯಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಇದೂವರೆಗೂ ಸಿಂಧುತಾಯಿ 1,200 ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಸದ್ಯ 36 ಸೊಸೆಯಂದಿರು, 272 ಅಳಿಯಂದಿರು ಮತ್ತು 450ಕ್ಕೂ ಹೆಚ್ಚು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಯಾರಿಗೆ ತಾಯಿ ಇಲ್ಲವೋ ಅವರಿಗೆಲ್ಲ ನಾನು ಅಮ್ಮನಾಗುತ್ತಾನೆ ಎಂದು ಸಿಂಧುತಾಯಿ ಹೇಳುತ್ತಿರುತ್ತಾರೆ. ರೈಲ್ವೇ ಟ್ರ್ಯಾಕ್ ನಲ್ಲಿ ಸಿಕ್ಕ ದೀಪಕ್ ಸಿಂಧುತಾಯಿ ದತ್ತು ಪಡೆದ ಮೊದಲ ಮಗು.

    ಸಿಂಧುತಾಯಿ ಅವರ ಸೇವೆಗೆ 750ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ. 2013ರಲ್ಲಿ ಐಕಾನಿಕ್ ಮದರ್ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸಿಂಧುತಾಯಿ ಅವರನ್ನು ಗೌರವಿಸಲಾಗಿದೆ. 2010ರಲ್ಲಿ ಮಹಾರಾಷ್ಟ್ರ ಸರ್ಕಾರದ ಅಹಿಲ್ಯಾಬಾಯಿ ಹೋಲ್ಕರ್, 2012ರಲ್ಲಿ ಸಿಎನ್‍ಎನ್-ಐಬಿಎನ್ ಮತ್ತು ರಿಲಯನ್ಸ್ ಫೌಂಡೇಶನ್ ವತಿಯಿಂದ ನೀಡಲಾಗುವ ‘ರಿಯಲ್ ಹೀರೋ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2018ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂ ದ್ ಅವರು ‘ನಾರಿ ಶಕ್ತಿ’ ಅವಾರ್ಡ್ ನೀಡಿ ಗೌರವಿಸಲಾಗಿದೆ.

    ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಸಿಂಧುತಾಯಿ ಮಗಳು ಮಮತಾ ಜೊತೆ ಸೀಟ್ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಿಂಧುತಾಯಿ 25 ಲಕ್ಷ ರೂ. ಗಳಿಸಿದ್ದಾರೆ.

  • ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಯುವಕನಿಗೆ ವಂಚಿಸಲು ಯತ್ನ

    ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಯುವಕನಿಗೆ ವಂಚಿಸಲು ಯತ್ನ

    ಕೊಪ್ಪಳ: ಕೌನ್ ಬನೇಗಾ ಕರೋಡ್ ಪತಿ ಹೆಸರು ಹೇಳಿಕೊಂಡು ಯುವಕನಿಗೆ ವಂಚಿಸಲು ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಕವಲೂರು ಗ್ರಾಮದ ಶ್ರೀಕಾಂತ್ ಎಂಬವರಿಗೆ ಕರೆಯೊಂದು ಬಂದಿದೆ. ನೀವು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಜಯಶಾಲಿ ಆಗಿದ್ದು, 25 ಲಕ್ಷ ರೂ. ನಿಮ್ಮದಾಗಿದೆ ಅಂತಾ ಹೇಳಿದ್ದಾರೆ. ಈ ವೇಳೆ ಕರೆ ಮಾಡಿದ್ದ ವ್ಯಕ್ತಿಯ ಪರಿಚಯ ಕೇಳಿದಾಗ ತನ್ನ ಹೆಸರು ರೋಹಿತ್, ಕೋಲ್ಕತ್ತಾ ಕಚೇರಿಯಿಂದ ಕರೆ ಮಾಡಿದ್ದಾಗಿ ಹೇಳಿದ್ದಾನೆ. 25 ಲಕ್ಷ ರೂ. ಹೇಳಿದ ಕ್ಷಣ ಶ್ರೀಕಾಂತ್ ಖಷಿಯಾಗಿದ್ದಾರೆ. 25 ಲಕ್ಷ ರೂ. ಇದೇ ವೇಳೆ ನಿಮ್ಮ ಖಾತೆಗೆ ಬರಬೇಕೆಂದು ಕೆಲವು ಕಂಡೀಷನ್ ಗಳನ್ನು ಹೇಳಿದ್ದಾನೆ.

    ಕಂಡೀಷನ್ ಕೇಳಿ ಸುಸ್ತಾದ ಶ್ರೀಕಾಂತ್?
    ಪ್ರತಿ ಒಂದು ಲಕ್ಷಕ್ಕೆ ಒಂದು ಪಿನ್ ಕೋಡ್ ಓಪನ್ ಆಗುತ್ತೆ. ಅಂದರೆ ಆ ಪಿನ್ ಕೋಡ್ ಓಪನ್ ಮಾಡಬೇಕಾದರೆ ನಾವು ಒಂದು ಲಕ್ಷಕ್ಕೆ ಒಂದು ಸಾವಿರ ರೂ. ಹಣವನ್ನು ಅವರ ಖಾತೆಗೆ ಹಾಕಬೇಕು. ಅದರಂತೆ ನಿಮ್ಮ 25 ಲಕ್ಷ ಹಣಕ್ಕಾಗಿ ನೀವು 25 ಸಾವಿರ ರೂ. ಹಣ ನಮ್ಮ ಖಾತೆಗೆ ಜಮಾ ಮಾಡಿದ ತಕ್ಷಣ ನಿಮ್ಮ ಖಾತೆಗೆ 25 ಲಕ್ಷ ಹಣ ಜಮಾ ಆಗುತ್ತೆ ಅಂತಾ ರೋಹಿತ್ ಹೇಳಿದ್ದಾನೆ. ಕಂಡೀಷನ್ ಕೇಳಿದ ಶ್ರೀಕಾಂತ್ ನಿಮ್ಮ ಹಣ ನನಗೆ ಬೇಡ ಅಂತಾ ಹೇಳಿ ಫೋನ್ ಕಟ್ ಮಾಡಿದ್ದಾರೆ.

    ಇಷ್ಟಕ್ಕೆ ಸುಮ್ಮನಾಗದ ವಂಚಕ ವಾಟ್ಸಪ್ ಮುಖಾಂತರ ತನ್ನ ಫೋಟೋ, 25 ಲಕ್ಷ ರೂ. ಬರೆದಿರುವ ನಕಲಿ ಚೆಕ್ ಮತ್ತು ಹಣದ ರಾಶಿ ಇರುವ ವಿಡಿಯೋ ಕಳುಹಿಸಿದ್ದಾನೆ. ಶ್ರೀಕಾಂತ್ ಅವರಿಗೆ ಪದೇ ಪದೇ ಕರೆ ಮಾಡುತ್ತಿರುವ ವಂಚಕರು 25 ಸಾವಿರ ರೂ. ಹಣ ಹಾಕುವಂತೆ ತಮ್ಮ ಮೃದುವಾದ ಮಾತುಗಳಿಂದ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು ನಾನು ನೋಡುವುದಿಲ್ಲ. ಅದರ ಬಗ್ಗೆ ಕೇಳಿದ್ದೇನೆ ಹೊರತು ನೋಡಲು ನನಗೆ ಅದು ಅರ್ಥವಾಗಲ್ಲ. ಆದರೂ ರೋಹಿತ್ ಎಂಬಾತ ಕರೆ ಮಾಡುತ್ತಿದ್ದಾನೆ ಅಂತ ಶ್ರೀಕಾಂತ್ ಕಿಡಿಕಾರಿದ್ದಾರೆ.

    ಇತ್ತ ಮಂಗಳೂರು ಮೂಲದ ಯುವತಿಗೂ ಇದೇ ರೀತಿಯ ಮೆಸೇಜ್ ಬಂದಿದೆ. ವಾಟ್ಸಪ್ ಗೆ ಮೆಸೇಜ್ ಬಂದಾಗ ಯಾರಾದರೂ ಫ್ರೆಂಡ್ಸ್ ಮೆಸೇಜ್ ಮಾಡಿರಬಹುದು ಎಂದು ತಿಳಿದುಬಂದಿದೆ. ತದನಂತರ ಇದೊಂದು ಆನ್‍ಲೈನ್ ವಂಚಕರ ಗುಂಪು ಎಂಬುದು ನನಗೆ ಮನವರಿಕೆ ಆಯಿತು. ನಾನು ಕಾರ್ಯಕ್ರಮದ ಯಾವುದೇ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿಲ್ಲ. ನಾನು ಸ್ಪರ್ಧೆಯಲ್ಲಿಯೂ ಭಾಗಿಯಾಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಯುವತಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv