Tag: kavery

  • ಮತ್ತೆ ತಮಿಳುನಾಡು ಕಾವೇರಿ ಕ್ಯಾತೆ – ಕರ್ನಾಟಕ ರಣಧೀರ ಪಡೆಯಿಂದ ಎಚ್ಚರಿಕೆ

    ಮತ್ತೆ ತಮಿಳುನಾಡು ಕಾವೇರಿ ಕ್ಯಾತೆ – ಕರ್ನಾಟಕ ರಣಧೀರ ಪಡೆಯಿಂದ ಎಚ್ಚರಿಕೆ

    ಬೆಂಗಳೂರು: ತಮಿಳುನಾಡು ಸರ್ಕಾರ ಕೈಗೊಂಡಿರುವ ಕಾವೇರಿ ನದಿ ತಿರುವು ಯೋಜನೆಗೆ ಈಗ ಕನ್ನಡಿಗರು ಸಿಡಿದೆದ್ದಿದ್ದಾರೆ.

    ಕರ್ನಾಟಕ ಸರ್ಕಾರವೂ ಅಡ್ಡಗೋಡೆ ಮೇಲೆ ದೀಪವಿಟ್ಟು ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸದೇ ಈ ಯೋಜನೆಯನ್ನು ಸ್ಪಷ್ಟವಾಗಿ ವಿರೋಧಿಸಬೇಕು ಅಂತ ಹರೀಶ್ ಕುಮಾರ್ ನೇತೃತ್ವದ ಕರ್ನಾಟಕ ರಣಧೀರ ಪಡೆ ಎಚ್ಚರಿಸಿದೆ.

    ಕಾವೇರಿ, ವೈಗೈ ಹಾಗೂ ಗುಂಡರ್ ನದಿಗಳನ್ನು ಜೋಡಿಸುವ 14,400 ಕೋಟಿ ವೆಚ್ಚದ ಯೋಜನೆಯ ಮೊದಲ ಹಂತದ ಕಾಮಗಾರಿಗೆ ತಮಿಳುನಾಡು ಸರ್ಕಾರ ಈಗಾಗಲೇ ಭೂಮಿ ಪೂಜೆ ನಡೆಸಿದೆ. ಇದು ತಮಿಳುನಾಡಿನ ದಕ್ಷಿಣ ಭಾಗಕ್ಕೆ 6,000 ಘನ ಅಡಿಗಳಷ್ಟು ಹೆಚ್ಚುವರಿ ನೀರನ್ನು ಈ ಯೋಜನೆಯಡಿ ತಿರುಗಿಸಿ ಹರಿಸುತ್ತದೆ ಎಂದು ಹೇಳಲಾಗಿದೆ. ಇದು ಕರ್ನಾಟಕದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

    ಈಗಾಗಲೇ ಈ ಸಂಬಂಧ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿಯವರು ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿರುವುದು ಸ್ವಾಗತಾರ್ಹ. ಆದರೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಲು ನಿರ್ಧರಿಸಿರುವ ರೀತಿಯ ಬಗ್ಗೆ ಕರ್ನಾಟಕ ರಣಧೀರ ಪಡೆ ಸೇರಿದಂತೆ ಕನ್ನಡ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದೆ. ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಬಳಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ ರೂಪಿಸಿರುವ ನದಿ ಜೋಡಣೆ ಯೋಜನೆಯು ರಾಜ್ಯದ ರೈತರ ಹಿತಾಸಕ್ತಿಗೆ ಮಾರಕವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

    ಈಗಾಗಲೇ ಕಾವೇರಿ ನೀರು ಹಂಚಿಕೆ ವಿವಾದದಲ್ಲಿದೆ. ಹಂಚಿಕೆಯಾದ ನೀರಿನ ಬಗ್ಗೆ ತಮಿಳುನಾಡು ಪದೇ ಪದೇ ತಕರಾರು ತೆಗೆಯುತ್ತಿದೆ. ಮತ್ತೆ ನದಿ ತಿರುವಿನ ಮೂಲಕ ಹೆಚ್ಚುವರಿ ನೀರು ಪೂರೈಕೆಗೆ ತಮಿಳುನಾಡು ಕಾವೇರಿಯನ್ನೇ ಗುರಿಯಾಗಿರಿಸಿಕೊಂಡರೆ ಅದರ ನೇರ ಪರಿಣಾಮ ಕರ್ನಾಟಕದ ಮೇಲಾಗುತ್ತದೆ. ತಮಿಳುನಾಡಿನಲ್ಲಿ ಕಾವೇರಿ ನದಿ ಅವಲಂಬನೆ ಪ್ರದೇಶಗಳು ವಿಸ್ತಾರಗೊಂಡಂತೆ ನೀರಿನ ಬೇಡಿಕೆಯೂ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಕಾವೇರಿ, ವೈಗೈ ಹಾಗೂ ಗುಂಡರ್ ನದಿಗಳನ್ನು ಜೋಡಿಸುವ ಕಾಮಗಾರಿಗೆ ಕೇಂದ್ರ ತಡೆ ನೀಡಬೇಕು ಎಂದು ಕರ್ನಾಟಕ ರಣಧೀರಪಡೆ ಆಗ್ರಹಿಸಿದೆ.

    ಇದೇ ಆಗ್ರಹವನ್ನು ರಾಜ್ಯ ಸರ್ಕಾರವೂ ಕೇಂದ್ರದ ಮುಂದೆ ಸ್ಪಷ್ಟವಾಗಿ ಮಂಡಿಸಬೇಕು ಅಂತ ಕರ್ನಾಟಕ ರಣಧೀರಪಡೆ ರಾಜ್ಯಾಧ್ಯಕ್ಷ ಬಿ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.

  • ತಲಕಾವೇರಿಯಲ್ಲಿ ತೀರ್ಥೋದ್ಭವ- ತೀರ್ಥ ರೂಪದಲ್ಲಿ ಕಾವೇರಿ ದರ್ಶನ

    ತಲಕಾವೇರಿಯಲ್ಲಿ ತೀರ್ಥೋದ್ಭವ- ತೀರ್ಥ ರೂಪದಲ್ಲಿ ಕಾವೇರಿ ದರ್ಶನ

    ಮಡಿಕೇರಿ: ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನ ನೀಡಿದ್ದಾರೆ.

    ಇಂದು ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ಕನ್ಯಾಲಗ್ನದಲ್ಲಿ ತೀರ್ಥೋದ್ಭವವಾಗಿದೆ. ಬ್ರಹ್ಮಕುಂಡಿಕೆಯ ಬಳಿ ಗೋಪಾಲ್ ಕೃಷ್ಣ ಆಚಾರ್ ನೇ ತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನೆರವೇರುತ್ತಿದ್ದು, ಬ್ರಹ್ಮ ಕುಂಡಿಕೆ, ಅಗಸ್ತೇಶ್ವರ ದೇವಾಲಯ ಮತ್ತು ಭಾಗಮಂಡಲ ದೇವಾಲಯಗಳಿಗೆ ವಿದ್ಯುತ್ ದೀಪ ಮತ್ತು ಪುಷ್ಪಾಲಂಕಾರ ಮಾಡಲಾಗಿದೆ.

    ಕೋವಿಡ್ ಮಿತಿ ಮೀರುತ್ತಿರುವುದರಿಂದ ತೀರ್ಥೋಧ್ಭವ ಸಂದರ್ಭದಲ್ಲಿ ದೇವಾಲಯ ಅರ್ಚಕರು, ಸಿಬ್ಬಂದಿ ಮತ್ತು ಉಸ್ತುವಾರಿ ಸಚಿವರು ಹಾಗೂ ಕೆಲವೇ ಅಧಿಕಾರಿಗಳಿಗೆ ಮಾತ್ರವೇ ಭಾಗವಹಿಸಲು ಅವಕಾಶ ನೀಡಲಾಗಿದೆ. ತೀರ್ಥೋಧ್ಭವದ ಬಳಿಕ ಭಕ್ತರು ತಲಕಾವೇರಿಗೆ ಬಂದು ತೀರ್ಥ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

    ತೀರ್ಥ ಪಡೆದುಕೊಳ್ಳಲು ನೂಕುನುಗ್ಗಲು ಆಗದಂತೆ ಕೊಳದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ತೀರ್ಥ ವಿತರಣೆಗೆ ಐದು ಕೌಂಟರ್ ತೆರಯಾಗಿದ್ದು, ಪ್ರತೀ ಕೌಂಟರ್ ಬಳಿ ತಲಾ ಎರಡು ಮೂರು ಕೊಳಾಯಿಗಳನ್ನು ಇಟ್ಟು ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.

    ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಸಮಾಧಾನ:
    ಕಾವೇರಿ ತೀರ್ಥೋಧ್ಭವಕ್ಕೆ ಭಾಗವಹಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಸಮಾಧಾನ ಹೊರಹಾಕಿದ್ದಾರೆ. ತಲಕಾವೇರಿ ಹೆಬ್ಬಾಗಿಲಿನಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕೊಡಗಿನ ಪದ್ಧತಿ ಬಗ್ಗೆ ಡಿಸಿಗೆ ಏನು ಗೊತ್ತು. ತೀರ್ಥೋಧ್ಭವ ವರ್ಷಕ್ಕೆ ಒಮ್ಮೆ ಆಗೋದು. ಅದಕ್ಕೆ ಬಿಡೋದಿಲ್ಲ ಅಂದರೆ ಹೇಗೆ?. ಇದು ಭಾರತವೇ ಇಲ್ಲ ಪಾಕಿಸ್ತಾನವೇ. ಎಲ್ಲದಕ್ಕೂ ಕೊರೊನಾ ಕೊರೊನಾ ಎಂದರೆ ಹೇಗೆ?. ಎಲ್ಲವನ್ನು ಅವರ ಇಚ್ಛೆಯಂತೆ ಮಾಡಿದರೆ ಹೇಗೆ ಎಂದು ಪ್ರಶ್ನಿಸುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

  • ಕಾವೇರಿ ನಿವಾಸಕ್ಕಾಗಿ ಹಾಲಿ-ಮಾಜಿ ಸಿಎಂಗಳ ನಡುವೆ ಕಿತ್ತಾಟ

    ಕಾವೇರಿ ನಿವಾಸಕ್ಕಾಗಿ ಹಾಲಿ-ಮಾಜಿ ಸಿಎಂಗಳ ನಡುವೆ ಕಿತ್ತಾಟ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನ ಖಾಲಿ ಮಾಡೋ ಲಕ್ಷಣವೇ ಕಾಣುತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸರ್ಕಾರ ಬೇರೆ ಸರ್ಕಾರಿ ನಿವಾಸ ಕೊಟ್ಟರೂ ಕಾವೇರಿ ನಿವಾಸವನ್ನ ಇನ್ನೂ ಖಾಲಿ ಮಾಡಿಲ್ಲ. ಡಿಸೆಂಬರ್ ವೇಳೆಗೆ ಖಾಲಿ ಮಾಡೋದಾಗಿ ಹೇಳಿದ್ದ ಸಿದ್ದರಾಮಯ್ಯ, ಈಗ ಯೂಟರ್ನ್ ಹೊಡೆದಿದ್ದಾರಂತೆ. ಸದ್ಯಕ್ಕೆ ನಾನು ಮನೆ ಖಾಲಿ ಮಾಡೊಲ್ಲ ಅಂತ ಹಠಕ್ಕೆ ಬಿದ್ದಿದ್ದು, ಸಿಎಂ ಯಡಿಯೂರಪ್ಪಗೆ ಸರ್ಕಾರಿ ಬಂಗಲೆ ಇಲ್ಲದೆ ತಮ್ಮ ಖಾಸಗಿ ಮನೆಯಿಂದಾನೆ ಓಡಾಡುತ್ತಿದ್ದಾರೆ.

    ಸಿದ್ದರಾಮಯ್ಯ ಸಿಎಂ ಆದಾಗಿನಿಂದ ಸಮ್ಮಿಶ್ರ ಸರ್ಕಾರ ಬಂದಾಗಲು ಇದೇ ಬಂಗಲೆಯಲ್ಲಿ ಮುಂದುವರಿದಿದ್ದಾರೆ. ತಮಗೆ ಕಾವೇರಿ ಲಕ್ಕಿ ಮನೆ ಅಂತ ಸಿದ್ದರಾಮಯ್ಯ ಮನೆ ಖಾಲಿ ಮಾಡೋಕೆ ಮೀನಾಮೇಷ ಏಣಿಸುತ್ತಿದ್ದಾರೆ. ಗೃಹ ಕಚೇರಿ ಕೃಷ್ಣಗೆ ಕಾವೇರಿ ಪಕ್ಕವೇ ಇರೋದರಿಂದ ನಿತ್ಯ ಸರ್ಕಾರಿ ಕೆಲಸಗಳಿಗೆ ಅನುಕೂಲ ಆಗುತ್ತೆ ಅಂತ ಸಿಎಂ ಯಡಿಯೂರಪ್ಪ ಕಾವೇರಿಗೆ ಶಿಫ್ಟ್ ಆಗೋಕೆ ನಿರ್ಧಾರ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಸದ್ಯಕ್ಕೆ ಮನೆ ಖಾಲಿ ಮಾಡೊಲ್ಲ ಅಂತ ಮೊಂಡು ಹಠಕ್ಕೆ ಬಿದ್ದಿದ್ದಾರಂತೆ. ಹೀಗಾಗಿ ಕಾವೇರಿ ಬಂಗಲೆ ಇಬ್ಬರು ನಾಯಕರ ಮಧ್ಯೆ ಮತ್ತೆ ಪ್ರತಿಷ್ಠೆ ವೇದಿಕೆಯಾಗಿದೆ.

    ಸಿದ್ದರಾಮಯ್ಯ ಕಾವೇರಿ ಖಾಲಿ ಮಾಡುತ್ತಾರೆ ಅಂತ ಸಿಎಂ ಯಡಿಯೂರಪ್ಪ ಕಾದು ಕಾದು ಸುಸ್ತಾಗಿದ್ದಾರೆ. ಅಧಿಕಾರಿಗಳು ಎಷ್ಟೇ ಹೇಳಿದ್ರು ಸಿದ್ದರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡ್ತಿಲ್ಲವಂತೆ. ಇದು ಅಧಿಕಾರಿಗಳಿಗೆ ತಲೆ ನೋವು ತರಿಸಿದೆ. ಒಂದು ವೇಳೆ ಸಿದ್ದರಾಮಯ್ಯ ಮನೆ ಖಾಲಿ ಮಾಡಿದ್ರೆ ಸಂಕ್ರಾಂತಿ ಬಳಿಕ ಸಿಎಂ ಕಾವೇರಿ ಮನೆಗೆ ಗೃಹ ಪ್ರವೇಶ ಮಾಡಿಲಿದ್ದಾರೆ.