Tag: Kaveri Residence

  • ಐದು ದಿನ ಸಿಎಂ ಯಡಿಯೂರಪ್ಪ ಸೆಲ್ಫ್ ಕ್ವಾರಂಟೈನ್- ಅಧಿಕೃತವಾಗಿ ಪ್ರಕಟ

    ಐದು ದಿನ ಸಿಎಂ ಯಡಿಯೂರಪ್ಪ ಸೆಲ್ಫ್ ಕ್ವಾರಂಟೈನ್- ಅಧಿಕೃತವಾಗಿ ಪ್ರಕಟ

    ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮತ್ತೆ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದಿನಿಂದ ಕೆಲ ದಿನಗಳ ಕಾಲ ಮನೆಯಲ್ಲಿ ಉಳಿಯಲು ತೀರ್ಮಾನ ಮಾಡಿದ್ದಾರೆ.

    ಸಿಎಂ ಯಡಿಯೂರಪ್ಪ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ. ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

    ಯಾರೂ ಆತಂಕ ಪಡುವ ಅಗತ್ಯವಿಲ್ಲ ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ ಎಂದು ಸೆಲ್ಫ್ ಕ್ವಾರಂಟೈನ್ ಬಗ್ಗೆ ಸಿಎಂ ಯಡಿಯೂರಪ್ಪ ಅಧಿಕೃತವಾಗಿ ಪ್ರಕಟಿಸಿದ್ದಾರೆ.

    ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.  ಈಗಾಗಲೇ ಸಿಎಂ ಕಾವೇರಿ ನಿವಾಸಕ್ಕೆ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸ್ ಮಾಡುತ್ತಿದ್ದಾರೆ. ಕಾವೇರಿ ನಿವಾಸದ ಮುಖ್ಯ ಗೇಟ್, ಮನೆ, ಹಾಗೂ ಗೃಹ ಕಚೇರಿ ಕೃಷ್ಣಾಗೆ ಸ್ಯಾನಿಟೈಸ್ ಮಾಡುತ್ತಿದ್ದಾರೆ.

  • ಸಿಎಂ ಗೃಹ ಕಚೇರಿ ಸಿಬ್ಬಂದಿಗೂ ಸೋಂಕು- ಬಿಎಸ್‍ವೈಗೆ ಕೊರೊನಾತಂಕ

    ಸಿಎಂ ಗೃಹ ಕಚೇರಿ ಸಿಬ್ಬಂದಿಗೂ ಸೋಂಕು- ಬಿಎಸ್‍ವೈಗೆ ಕೊರೊನಾತಂಕ

    – ಕಾರ್ಯಕ್ರಮ ರದ್ದುಗೊಳಿಸಿ ಮನೆಯಲ್ಲೇ ಉಳಿದ ಸಿಎಂ

    ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮತ್ತೆ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಭೀತಿ ಶುರುವಾಗಿದೆ.

    ತಮ್ಮ ಕಚೇರಿಯಲ್ಲೇ ಸೋಂಕು ಕಾಣಿಸಿಕೊಂಡ ಕಾರಣ ಸಿಎಂ ಬಿಎಸ್‍ವೈ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ ಮನೆಯಲ್ಲೇ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಿವೃತ್ತಿ ಹೊಂದಿರುವ ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮಲ್ಲಿ ಸಿಎಂ ಗೈರು ಹಾಜರಾಗಲಿದ್ದಾರೆ. ಇಂದು ಇಡೀ ದಿನ ಸಿಎಂ ತಮ್ಮ ಕಾವೇರಿ ನಿವಾಸದಲ್ಲೇ ಇರಲಿದ್ದಾರೆ.

    ಸದ್ಯ ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಳೆದ ಹಲವು ದಿನಗಳಿಂದಲೂ ಮೂರೂ ನಿವಾಸಗಳಲ್ಲಿರುವ ಸಿಬ್ಬಂದಿಗೆ ಸೋಂಕು ಪಾಸಿಟಿವ್ ಪತ್ತೆ ಆಗುತ್ತಿದ್ದು, ಸಿಎಂಗೆ ಕೊರೊನಾಂತಕ ಎದುರಾಗಿದೆ. ಈ ನಡುವೆ ಸಿಎಂ ಸಚಿವಾಲಯದಿಂದ ಮಾಹಿತಿ ಮುಚ್ಚಿಡುವ ಪ್ರಯತ್ನ ನಡೆಯುತ್ತಿದ್ಯಾ? ಎಂಬ ಅನುಮಾನಗಳು ಮೂಡಿವೆ.

    ಸಿಎಂ ಕಾರು ಚಾಲಕನಿಗೂ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಧವಳಗಿರಿ ನಿವಾಸದ ಅಡುಗೆ ನೌಕರನಿಗೂ ಸೋಂಕು ಇರುವುದು ದೃಢಪಟ್ಟಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹಲವು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಇತ್ತೀಚೆಗೆ ಕೃಷ್ಣಾದಲ್ಲಿ ಹಲವು ಸಭೆಗಳು ನಡೆದಿವೆ. ಸೆಂಟ್ರಲ್ ಟೀಂ ಜತೆ ಸಿಎಂ ಕಳೆದ ಮಂಗಳವಾರ ಸಭೆ ನಡೆಸಿದ್ದಾರೆ. ಸಾಕಷ್ಟು ಸಚಿವರು, ಶಾಸಕರು, ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ ಇಷ್ಟದರೂ ಈ ಮಾಹಿತಿಯನ್ನು ಸಚಿವಾಲಯ ಮುಚ್ಚಿಟ್ಟಿದ್ದು, ಯಾಕೆ ಎಂಬ ಪ್ರಶ್ನೆ ಎದ್ದಿದೆ.

  • ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲು ಸಜ್ಜಾದ ಸಿಎಂ – ಜನ್ಮದಿನದಂದೇ ವಿಶೇಷ ಪೂಜೆ

    ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲು ಸಜ್ಜಾದ ಸಿಎಂ – ಜನ್ಮದಿನದಂದೇ ವಿಶೇಷ ಪೂಜೆ

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲು ತಯಾರಿ ಆರಂಭಿಸಿದ್ದಾರೆ. ಸದ್ಯ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ವಾಸವಿರುವ ಸಿಎಂ ಬಿಎಸ್‍ವೈ ಸದ್ಯದಲ್ಲೇ ಕಾವೇರಿ ನಿವಾಸಕ್ಕೆ ಅಧಿಕೃತವಾಗಿ ಸ್ಥಳಾಂತರವಾಗಲಿದ್ದಾರೆ.

    ಈಗಾಗಲೇ ಕಳೆದ ಕೆಲವು ದಿನಗಳಿಂದ ಕಾವೇರಿ ನಿವಾಸದಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ನವೀಕರಣ ಕಾರ್ಯವನ್ನು ಬೇಗನೇ ಮುಗಿಸಲು ಡಿಪಿಎಆರ್ ಇಲಾಖೆ ಸಿಬ್ಬಂದಿಗೆ ಸೂಚಿಸಿರುವ ಸಿಎಂ ಯಡಿಯೂರಪ್ಪ, ಎಷ್ಟು ಬೇಗ ನವೀಕರಣ ಮುಗಿಯುತ್ತೋ ಅಷ್ಟು ಬೇಗ ಕಾವೇರಿ ನಿವಾಸಕ್ಕೆ ಶಿಫ್ಟಾಗಲು ನಿರ್ಧರಿಸಿದ್ದಾರೆ.

    ಯುಗಾದಿಗೂ ಮುನ್ನ ಸಿಎಂ ಯಡಿಯೂರಪ್ಪ ಧವಳಗಿರಿ ನಿವಾಸದಿಂದ ಕಾವೇರಿ ನಿವಾಸಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಲಿದ್ದಾರೆ. ಸಾಧ್ಯವಾದರೆ ಮಾರ್ಚ್ 5 ರಂದು ಬಜೆಟ್ ಪುಸ್ತಕವನ್ನು ಕಾವೇರಿ ನಿವಾಸದಿಂದಲೇ ಕೊಡೊಯ್ಯುವ ಕುರಿತು ಸಿಎಂ ಚಿಂತನೆ ನಡೆಸುತ್ತಿದ್ದಾರೆ. ಹೀಗಾಗಿಯೇ ಶನಿವಾರ ಪ್ರಥಮ ಬಾರಿಗೆ ಸಿಎಂ ಯಡಿಯೂರಪ್ಪ ಯಾರಿಗೂ ಹೇಳದೇ ಕಾವೇರಿ ನಿವಾಸಕ್ಕೆ ತೆರಳಿ ನವೀಕರಣ ಕಾರ್ಯದ ಪ್ರಗತಿ ಪರಿಶೀಲಿಸಿದ್ದರು.

    ಕಾವೇರಿಯಲ್ಲಿ ವಿಶೇಷ ಪೂಜೆ
    ಇದೇ ಫೆಬ್ರವರಿ 27 ರಂದು ಸಿಎಂ ಯಡಿಯೂರಪ್ಪ ಅವರು 77 ವಸಂತಗಳನ್ನು ಪೂರೈಸಿ 78ಕ್ಕೆ ಕಾಲಿಡಲಿದ್ದಾರೆ. ತಮ್ಮ ಜನ್ಮದಿನದಂದೇ ಸಿಎಂ ಯಡಿಯೂರಪ್ಪ ಕಾವೇರಿ ಸರ್ಕಾರಿ ನಿವಾಸದಲ್ಲಿ ವಿಶೇಷ ಪೂಜೆ, ಹೋಮ-ಹವನಗಳನ್ನು ಹಮ್ಮಿಕೊಂಡಿದ್ದಾರೆ. ಬಿಎಸ್‍ವೈ ತಮ್ಮ ಕುಟುಂಬದ ಸದಸ್ಯರ ಜೊತೆ ಅಂದು ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದಾರೆ.

  • ಸಿಎಂ V/S ಸಿದ್ದರಾಮಯ್ಯ- ಕಾವೇರಿ ನಿವಾಸದ ಬೋರ್ಡ್ ತೆಗೆದ ಅಧಿಕಾರಿಗಳು

    ಸಿಎಂ V/S ಸಿದ್ದರಾಮಯ್ಯ- ಕಾವೇರಿ ನಿವಾಸದ ಬೋರ್ಡ್ ತೆಗೆದ ಅಧಿಕಾರಿಗಳು

    ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ `ಕಾವೇರಿ’ ಜಟಾಪಟಿ ಮುಂದುವರಿದಿದ್ದು, ಇದೀಗ ಅಧಿಕಾರಿಗಳು ಸಿದ್ದರಾಮಯ್ಯನವರ ಕಾವೇರಿ ನಿವಾಸದ ಬೋರ್ಡ್ ತೆಗೆದು ಹಾಕಿದ್ದಾರೆ.

    ಈ ಮೂಲಕ ಸರ್ಕಾರ ವರ್ಸಸ್ ಸಿದ್ದರಾಮಯ್ಯ ಎನ್ನುವಂತಾಗಿದ್ದು, ಈ ಹಿಂದೆ ಮನೆ ಖಾಲಿ ಮಾಡುವಂತೆ ಸಿದ್ದರಾಮಯ್ಯನವರಿಗೆ ತಿಳಿಸಲಾಗಿತ್ತು. ಆದರೆ ತುಂಬಾ ದಿನಗಳಿಂದ ಅದೇ ಮನೆಯಲ್ಲಿ ಇರುವುದರಿಂದ ಸಿದ್ದರಾಮಯ್ಯನವರು ಖಾಲಿ ಮಾಡಿರಲಿಲ್ಲ. ಇನ್ನೂ ನಿವಾಸ ಖಾಲಿ ಮಾಡದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಸಿದ್ದರಾಮಯ್ಯ ನಿವಾಸದ ಬೋರ್ಡ್ ತೆಗೆದು ಹಾಕಿದ್ದಾರೆ.

    ಡಿಪಿಎಆರ್ ಸಿಬ್ಬಂದಿಯಿಂದ ಸಿದ್ದು ನಿವಾಸದ ಬೋರ್ಡ್ ತೆರವುಗೊಳಿಸಲಾಗಿದ್ದು, ಈ ಮೂಲಕ ಕಾವೇರಿ ನಿವಾಸವನ್ನು ಖಾಲಿ ಮಾಡುವಂತೆ ಮತ್ತೆ ಸೂಚನೆ ನೀಡಿದ್ದಾರೆ. ಅಲ್ಲದೆ ಇನ್ನೂ ಮೂರ್ನಾಲ್ಕು ದಿನಗಳೊಳಗೆ ಕಾವೇರಿ ನಿವಾಸ ಬಿಟ್ಟುಕೊಡುವಂತೆ ಸೂಚಿಸಿದ್ದಾರೆ. ಕಾವೇರಿಯಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದು, ಹೀಗಾಗಿ ನಿವಾಸವನ್ನು ಬಿಟ್ಟುಕೊಡುವಂತೆ ತಿಳಿಸಿದ್ದಾರೆ.

    ಮೂರ್ನಾಲ್ಕು ದಿನಗಳಲ್ಲಿ ನಿವಾಸ ಖಾಲಿ ಮಾಡದಿದ್ದಲ್ಲಿ ನೀರಿನ ಸಂಪರ್ಕವನ್ನು ಸಹ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮನೆ ಖಾಲಿ ಮಾಡುತ್ತಾರಾ ಅಥವಾ ಸಿಎಂಗೆ ಸೆಡ್ಡು ಹೊಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    ಇತ್ತ ಕಾವೇರಿ ನಿವಾಸವನ್ನು ಖಾಲಿ ಮಾಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ. ವಿಪಕ್ಷ ನಾಯಕನಾದ ನಂತರ ಕಾವೇರಿ ನಿವಾಸದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯರ ರಾಜಕೀಯ ಏಳಿಗೆಯಲ್ಲಿ ಆ ಮನೆ ಮಹತ್ವದ ಪಾತ್ರ ವಹಿಸಿದೆ. ಈಗ ಪುನಃ ವಿಪಕ್ಷ ನಾಯಕನ ಸ್ಥಾನ ಸಿಕ್ಕಿದೆ. ಆದ್ದರಿಂದ ಕಾವೇರಿ ನಿವಾಸದಲ್ಲೇ ಮುಂದುವರಿದರೆ ಮತ್ತಷ್ಟು ರಾಜಕೀಯ ಉನ್ನತಿ ಸಿಗಬಹುದು ಎಂಬುದು ಸಿದ್ದರಾಮಯ್ಯ ಪತ್ನಿಯ ನಂಬಿಕೆ ಎಂದು ಹೇಳಲಾಗಿತ್ತು.

    ಕಾವೇರಿ ಪಕ್ಕದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ ಇರುವುದರಿಂದ ಕಾವೇರಿಯಲ್ಲಿ ಸಿಎಂ ಇದ್ದರೆ ಓಡಾಟ ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಕಾವೇರಿ ನಿವಾಸವನ್ನು ಸಿಎಂಗೆ ನೀಡಲಾಗಿದೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯಗೆ ರೇಸ್ ಕೋರ್ಸ್ ರಸ್ತೆಯ ನಿವಾಸವನ್ನು ನೀಡಲಾಗಿದೆ. ಆದರೆ ಕಳೆದ ಆರೂವರೆ ವರ್ಷದಿಂದ ಕಾವೇರಿ ನಿವಾಸದಲ್ಲೇ ಇರುವ ಸಿದ್ದರಾಮಯ್ಯ ಮಾತ್ರ ಕಾವೇರಿ ನಿವಾಸದಲ್ಲೇ ಮುಂದುವರಿಯುವ ಕಸರತ್ತು ಮುಂದುವರಿಸಿದ್ದರಿಂದ ಇಂದು ಅಧಿಕಾರಿಗಳು ಬೋರ್ಡ್ ಕಿತ್ತು ಹಾಕಿದ್ದಾರೆ.