Tag: Kateel durgaparameshwari

  • ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ

    ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ

    ಬೆಂಗಳೂರು: 2012ರಲ್ಲಿ ಡಿ.ವಿ ಸದಾನಂದ ಗೌಡ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಜುಲೈ 7 ರಂದು ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದರು. ಅದಾದ 9 ವರ್ಷಗಳ ಬಳಿಕ ಕಾಕತಾಳೀಯವೆಂಬಂತೆ ಇದೇ ದಿನ ಕೇಂದ್ರ ಸಚಿವ ಸಂಪುಟಕ್ಕೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿಎಸ್ ರಾಜೀನಾಮೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಾಗಿದೆ. ಕರ್ನಾಟಕದ ನಾಲ್ವರು ಮೋದಿ ಸಂಪುಟಕ್ಕೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಡಿವಿಎಸ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ ಇದೇ ದಿನ ಮುಖ್ಯಮಂತ್ರಿಯಾಗಿದ್ದ ವೇಳೆ ಕಟೀಲಿಗೆ ಬಂದು ದೇವಿ ದರ್ಶನ ಪಡೆದಿದ್ದರು. ಇದೇ ದಿನ ಇಂದು ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಮೋದಿ ಸಂಪುಟದಲ್ಲಿ ಸದಾನಂದ ಗೌಡರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ

    ಮೋದಿ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿದ್ದ ಡಿವಿಎಸ್, ಇಂದು ಕೇಂದ್ರ ಸಂಪುಟದಲ್ಲಿರುವ ವರಿಷ್ಠರ ಸೂಚನೆಯಂತೆ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡ ಅವರು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರ್ಪಡೆಯಾಗಿದ್ದಾರೆ.

    ಕಳೆದ ವಾರವೇ ಡಿವಿಎಸ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಡಿವಿಎಸ್ ಬದಲಿಗೆ ಒಕ್ಕಲಿಗರಾಗಿರುವ ಶೋಭಾ ಕರಂದ್ಲಾಜೆ ಅಥವಾ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದವು.

  • ಸಂಭ್ರಮದಿಂದ ನಡೆದ ಕಟೀಲು ಬ್ರಹ್ಮಕಲಶೋತ್ಸವ

    ಸಂಭ್ರಮದಿಂದ ನಡೆದ ಕಟೀಲು ಬ್ರಹ್ಮಕಲಶೋತ್ಸವ

    ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತುಳುನಾಡಿನ ಪುರಾಣ ಪ್ರಸಿದ್ಧ ಸ್ಥಳವಾಗಿದ್ದು, ಈ ಪವಿತ್ರ ಸ್ಥಳದಲ್ಲಿ ಈಗ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯುತ್ತಿದೆ. ಲಕ್ಷಾಂತರ ಭಕ್ತರ ದಂಡು ಕಟೀಲಿನತ್ತ ಹರಿದುಬರುತ್ತಿದೆ.

    ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವ ಸಂಭ್ರಮ ಈಗ ನಡೆಯುತ್ತಿದೆ. ರಾಜ್ಯದ, ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರ ಸಮಾಗಮ ಕಟೀಲಿನಲ್ಲಿ ನಡೆದಿದೆ. ದುರ್ಗಾಪರಮೇಶ್ವರಿಗೆ ವೈಭವದ ಬ್ರಹ್ಮಕಲಶೋತ್ಸವ ನಡೆದಿದ್ದು, ಜನರು ತಾಯಿಯ ಆಶೀರ್ವಾದ ಪಡೆದು ಧನ್ಯರಾಗಿದ್ದಾರೆ.

    20 ಸಾವಿರ ಸ್ವಯಂಸೇವಕರು ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದು, ಭಕ್ತರು ತಮ್ಮ ಶಕ್ತಿಯನುಸಾರ ಸೇವೆ ಸಲ್ಲಿಸಿದ್ದಾರೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಹೀಗಾಗಿ ಜನರು ಅಕ್ಕಿ, ತರಕಾರಿ, ಅಡುಗೆ ಸಾಮಾನು ಸೇರಿದಂತೆ ಪಾತ್ರೆ-ಪಗಡೆಗಳನ್ನು ಭಕ್ತಿಯಿಂದ ಕ್ಷೇತ್ರಕ್ಕೆ ನೀಡುತ್ತಿದ್ದಾರೆ.

    ನಾನಾ ಕಾರಣಗಳಿಂದ ಕ್ಷೇತ್ರದಲ್ಲಿ ಶಕ್ತಿ, ಸಾನಿಧ್ಯವನ್ನು ಪುನಃ ಕ್ರೂಢೀಕರಿಸಿ, ಆ ಮೂಲಕ ದೇವರ ಸಾನಿಧ್ಯವನ್ನು ಅತ್ಯಂತ ಜಾಗೃತಗೊಳಿಸೋದು ಬ್ರಹ್ಮಕಲಶೋತ್ಸವದ ಉದ್ದೇಶವಾಗಿದೆ.

    ಬ್ರಹ್ಮಕಲಶ ಮಂಡಲದಲ್ಲಿ 984 ಚಿಕ್ಕ ಕಲಶಗಳನ್ನಿಟ್ಟು, ಮಂಡಲದ ಮಧ್ಯದಲ್ಲಿ ಬ್ರಹ್ಮಕಲಶವನ್ನಿಟ್ಟು ಎಲ್ಲಾ ದೇವಾಧಿದೇವತೆಗಳನ್ನು ಪೂಜಿಸಿ ಪವಿತ್ರ ದ್ರವ್ಯದಿಂದ ದೇವಿಗೆ ಕಲಶಾಭಿಷೇಕ ಮಾಡಲಾಗಿದೆ. ಪ್ರತಿದಿನ ಲಕ್ಷಾಂತರ ಮಂದಿ ದೇವಸ್ಥಾನಕ್ಕೆ ಬಂದರೂ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಲಾಗಿದೆ.

    ಜನವರಿ 22 ರಂದು ಆರಂಭವಾದ ಬ್ರಹ್ಮಕಲಶೋತ್ಸವ ಸಂಭ್ರಮ ಫೆಬ್ರವರಿ 3ರವರೆಗೆ ನಡೆಯಲಿದೆ. ನಾಗಮಂಡಲ, ಕೋಟಿ ಜಪಯಜ್ಞ, ಸಹಸ್ರ ಚಂಡಿಕಾಯಾಗವೂ ನಡೆಯಲಿದೆ. ಈ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ಕಟೀಲು ದುರ್ಗಾಪರಮೇಶ್ವರಿಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸಂಭ್ರಮದ ಕ್ಷಣದಲ್ಲಿ ಭಾಗಿಯಾಗಿದ್ದಾರೆ.

    ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಪ್ರಮುಖ ಗಣ್ಯರೂ ದೇವಸ್ಥಾನಕ್ಕೆ ಭೇಟಿ ನೀಡಿ ದುರ್ಗಾಪರಮೇಶ್ವರಿಯ ಆಶೀರ್ವಾದ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಜೋರಾಗಿ ನಡೆಯುತ್ತಿದೆ. ಕಾರಣಿಕ ಶಕ್ತಿಯಾಗಿ ಮೆರೆಯುತ್ತಿರುವ ಮಂದಸ್ಮಿತ ದುರ್ಗಾಪರಮೇಶ್ವರಿಯನ್ನು ಕಂಡು ಜನ ಸಂಪ್ರೀತರಾಗಿದ್ದಾರೆ.