Tag: Kasturinagar

  • ನುಂಗಿದ್ದು ಸಾಕು ರಸ್ತೆ ನಿರ್ಮಿಸಿ – ಬಿಬಿಎಂಪಿ ವಿರುದ್ಧ ಕಸ್ತೂರಿ ನಗರ ನಿವಾಸಿಗಳ ಪ್ರತಿಭಟನೆ

    ನುಂಗಿದ್ದು ಸಾಕು ರಸ್ತೆ ನಿರ್ಮಿಸಿ – ಬಿಬಿಎಂಪಿ ವಿರುದ್ಧ ಕಸ್ತೂರಿ ನಗರ ನಿವಾಸಿಗಳ ಪ್ರತಿಭಟನೆ

    ಬೆಂಗಳೂರು: “ಬಿಬಿಎಂಪಿಗೆ ಮಾನ ಮರ್ಯಾದೆ ಇದೆಯೇ? ಮುಖ್ಯ ರಸ್ತೆಯನ್ನು ಸರಿ ಮಾಡಲು ಒಂದೂವರೆ ವರ್ಷ ಬೇಕೇ? ನುಂಗಿದ್ದು ಸಾಕು ರಸ್ತೆ ಬೇಕು. ಶಾಸಕರೇ ಸಂಸದರೇ ಎಲ್ಲಿದ್ದೀರಿ?” ಈ ರೀತಿಯ ಘೋಷಣೆ ಕೂಗಿ ಪಾಲಿಕೆ ವಿರುದ್ಧ ಕಸ್ತೂರಿ ನಗರದ ಜನತೆ ಇಂದು ಪ್ರತಿಭಟಿಸಿದ್ದಾರೆ.

    ಕಸ್ತೂರಿನಗರ ಬಡಾವಣೆಯ 2ನೇ ಮುಖ್ಯರಸ್ತೆ ಹಾಗೂ 4ನೇ ಮುಖ್ಯರಸ್ತೆಯಲ್ಲಿಯ ಮೂಲಕ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ರಸ್ತೆಯನ್ನು ಒಂದೂವರೆ ವರ್ಷದ ಹಿಂದೆ ಅಗೆಯಲಾಗಿದೆ. ಅಗೆಯಲಾಗಿದ್ದರೂ ರಸ್ತೆ ಮಾತ್ರ ಸರಿ ಮಾಡಲೇ ಇಲ್ಲ.

    https://twitter.com/Varsit_/status/1176065940821295106

    ಕೆಲ ದಿನಗಳ ಬಳಿಕ ರಸ್ತೆ ಸರಿ ಮಾಡಬಹುದು ಎಂದು ಬಡಾವಣೆಯ ನಿವಾಸಿಗಳು ನಿರೀಕ್ಷಿಸಿದ್ದರು. ದಿನ, ತಿಂಗಳು, ವರ್ಷ ಕಳೆದರೂ ಬಿಬಿಎಂಪಿ ಅಧಿಕಾರಿಗಳು ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಈ ಬಡಾವಣೆಗೆ ಮತ್ತು ನಮಗೆ ಸಂಬಂಧ ಇಲ್ಲದಂತೆ ವರ್ತಿಸಿದ್ದಾರೆ. ಕೊನೆಗೆ ಬಡಾವಣೆಯ ನಿವಾಸಿಗಳು ನಿದ್ದೆ ಮಾಡುತ್ತಿರುವ ಬಿಎಂಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಸಿವಿ ರಾಮನ್ ನಗರದದ ಶಾಸಕ ಎಸ್ ರಘು ಮತ್ತು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಅವರಿಗೆ ದೂರು ನೀಡಿದರೂ ಕೆಲಸ ಮಾತ್ರ ಆಗಲೇ ಇಲ್ಲ.

    ಸಾಕಷ್ಟು ಬಾರಿ ದೂರು ನೀಡಿದರೂ ಕೆಲಸ ಆಗದ ಕಾರಣ ಬಡಾವಣೆಯ ನಿವಾಸಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಹೀಗಾಗಿ ಇಂದು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಸ್ತೂರಿ ನಗರದ ಮುಖ್ಯ ರಸ್ತೆಯಲ್ಲಿರುವ ವಿವೇಕಾನಂದ ಪಾರ್ಕ್ ಬಳಿ ರಸ್ತೆ ತಡೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸಿದ್ದಾರೆ.

    ಚುನಾವಣೆಯ ಸಮಯದಲ್ಲಿ ಮತ ಕೇಳುವಾಗ ದಾರಿ ಸರಿ ಇಲ್ಲದೇ ಇದ್ದರೂ ನುಗ್ಗಿಕೊಂಡು ಮನೆ ಮನೆಗೆ ಬಂದು ಪ್ರಚಾರ ಮಾಡುತ್ತಾರೆ. ಈಗ ವಾಹನಗಳು ಸಂಚರಿಸುವ ಮುಖ್ಯ ರಸ್ತೆ ಹಾಳಾಗಿ ಹೋಗಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಜನರಿಗೆ ಸಮಸ್ಯೆ ಆಗುತ್ತದೆ ಎನ್ನುವ ಪರಿಜ್ಞಾನವೇ ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆ ವಿದ್ಯಾರ್ಥಿಗಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ಎಲ್ಲರಿಗೂ ಸಮಸ್ಯೆ ಆಗುತ್ತಲೇ ಇದೆ. ಶಾಸಕ ರಘು ಮತ್ತು ಸಂಸದ ಮೋಹನ್ ಅವರು ಸ್ಥಳಕ್ಕೆ ಬಂದೇ ಇಲ್ಲ. ಮಳೆಗಾಲದಲ್ಲಿ ರಸ್ತೆ ಗದ್ದೆಯಂತಾದರೆ ಮಳೆ ಇಲ್ಲದಾಗ ಧೂಳು ದೇಹದ ಒಳಗಡೆ ಹೋಗಿ ಮಕ್ಕಳು ಮತ್ತು ಹಿರಿಯ ವ್ಯಕ್ತಿಗಳ ಆರೋಗ್ಯ ಕೆಡುತ್ತಿದೆ. ರಸ್ತೆಗಳು ಚೆನ್ನಾಗಿ ಇದ್ದರೂ ಅಲ್ಲಿ ವೈಟ್ ಟಾಪಿಂಗ್ ಮಾಡಲು ಆಸಕ್ತಿ ತೋರಿಸುವ ಬಿಬಿಎಂಪಿ ಅಭಿವೃದ್ಧಿಗಾಗಿ ರಸ್ತೆ ಅಗೆದು ಸರಿ ಯಾಕೆ ಮಾಡುತ್ತಿಲ್ಲ? ರಾಜಕಾರಣಿ, ಅಧಿಕಾರಿಗಳಿರುವ ಕಡೆ ಕೂಡಲೇ ಸಮಸ್ಯೆ ಬಗೆ ಹರಿಸುವ ಬಿಬಿಎಂಪಿ ಜನ ಸಾಮಾನ್ಯರ ಸಮಸ್ಯೆಗೆ ಯಾಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.