Tag: Kasturi Rangan

  • ನೂತನ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದ ವೇಗದ ಕ್ರಮ: ಕಸ್ತೂರಿ ರಂಗನ್ ಶ್ಲಾಘನೆ

    ನೂತನ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದ ವೇಗದ ಕ್ರಮ: ಕಸ್ತೂರಿ ರಂಗನ್ ಶ್ಲಾಘನೆ

    ಬೆಂಗಳೂರು: 21ನೇ ಶತಮಾನದಲ್ಲಿ ಕರ್ನಾಟಕ ಸೇರಿ ಇಡೀ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ  ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷರೂ ಆದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದ್ದಾರೆ.

    ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಡೆನ್ಮಾರ್ಕ್ ನ ಅಲ್ಬೋರ್ಗ್ ವಿವಿಯ ಯುನೆಸ್ಕೊ ಸೆಂಟರ್ ಫಾರ್ ಪ್ರಾಬ್ಲಮ್ ಬೇಸ್ಡ್ ಲನಿರ್ಂಗ್ ಇನ್ ಎಂಜಿನಿಯರಿಂಗ್ ಸೈನ್ಸ್ ಮತ್ತು ಸಸ್ಟೈನಬಿಲಿಟಿ ಸಹಯೋಗದಲ್ಲಿ  ‘ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಲಿಕಾ ಪದ್ಧತಿ’ ಬಗೆಗಿನ ಪ್ರಾದೇಶಿಕ ಸಂಶೋಧನಾ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.

    “ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಜಾರಿಗೆ ಬರುತ್ತಿದೆ. ನೂತನ ಶಿಕ್ಷಣ ನೀತಿಯ ಕರಡು ಲಭ್ಯವಾದ ಕೂಡಲೇ ಹಾಗೂ ಕೇಂದ್ರ ಸರಕಾರ ಈ ನೀತಿಯನ್ನು ಪ್ರಕಟಿಸಿದ ಮೊದಲ ದಿನದಿಂದಲೇ ಸರಕಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಿದ್ದನ್ನು ಕಂಡಿದ್ದೇನೆ” ಎಂದು ಕಸ್ತೂರಿರಂಗನ್ ಮೆಚ್ವುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನೂತನ ಶಿಕ್ಷಣ ನೀತಿ ಈ ವರ್ಷದಿಂದ್ಲೇ ಜಾರಿ: ಅಶ್ವಥ್ ನಾರಾಯಣ್

    ಶಿಕ್ಷಣ ನೀತಿಯ ಬಗ್ಗೆ ರಾಜ್ಯ ಸರಕಾರಕ್ಕೆ ಇರುವ ಬದ್ಧತೆ, ದೂರದೃಷ್ಟಿ ಶ್ಲಾಘನೀಯ. ಡಾ.ಅಶ್ವತ್ಥನಾರಾಯಣ ಅವರು ಹೋಗುತ್ತಿರುವ ವೇಗ ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಕಸ್ತೂರಿ ರಂಗನ್ ಹೇಳಿದರು.

    ಈ ವರ್ಷವೇ ಜಾರಿಗೆ ಸಿದ್ಧತೆ
    ಉನ್ನತ ಶಿಕ್ಷಣ ಸಚಿವ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮಾತನಾಡಿ, “ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ” ಎಂದರು.

    ರಾಜ್ಯವು ಉದ್ಯಮಶೀಲತೆ, ಆವಿಷ್ಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಶಿಕ್ಷಣ ನೀತಿಯೂ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಹುರುಪು ನೀಡಲಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ಶಿಕ್ಷಣ ನೀಡುವ ಮೂಲಕ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಶೀಘ್ರದಲ್ಲೇ ಸಾಕಾರವಾಗಲಿದೆ ಎಂದೇ ಡಿಸಿಎಂ ಹೇಳಿದರು.

    ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು, ನನ್ನ ಜೀವಮಾನದಲ್ಲಿ ಸಿಕ್ಕಿದ ಸುವರ್ಣಾವಕಾಶ ಎಂದ ಡಿಸಿಎಂ, ನಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಲು ನೀತಿಯೂ ಹೆಚ್ಚು ಪರಿಣಾಮಕಾರಿ. ಎಲ್ಲ ಸಮಸ್ಯೆಗಳಿಗೂ ಇದೊಂದೇ ಪರಿಹಾರ ಎಂದರು.

    ಯುನೆಸ್ಕೋದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಲಿಕಾ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೊ ಅನೆಟ್ ಕೊಲ್ಮಾಸ್ ಅವರು ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಮತ್ತು ಆವಿಷ್ಕಾರ ಶಿಕ್ಷಣಕ್ಕೆ ಯುನೆಸ್ಕೋ ಹೆಚ್ಚು ಒತ್ತು ನೀಡುತ್ತಿದೆ. ಆ ನಿಟ್ಟಿನಲ್ಲಿ ನಾವು ಎಲ್ಲ ದೇಶಗಳ ಜತೆ, ಮುಖ್ಯವಾಗಿ ಭಾರತದ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

    ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಸೇರಿದಂತೆ ದೇಶ- ವಿದೇಶಗಳ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

  • ರೇವಾ ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪಕರ ದಿನಾಚರಣೆ

    ರೇವಾ ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪಕರ ದಿನಾಚರಣೆ

    ಬೆಂಗಳೂರು: ರೇವಾ ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನಾಚರಣೆಯನ್ನು ಜ.6 ರಂದು ರೇವಾ ಕ್ಯಾಂಪಸ್‍ನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ದಿನವು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪಿ.ಶ್ಯಾಮರಾಜುರವರ ಹುಟ್ಟುಹಬ್ಬದ ದಿನವೂ ಆಗಿರುತ್ತದೆ. ಇದೇ ಸಂದರ್ಭದಲ್ಲಿ ರೇವಾ ವಿಶ್ವವಿದ್ಯಾಲಯದ ಪ್ರಗತಿಯ ಬಗ್ಗೆ ಒಂದು ಕಿರುಚಿತ್ರವನ್ನೂ ತೋರಿಸಲಾಯಿತು.

    ಪ್ರತಿವರ್ಷದಂತೆ ಈ ವರ್ಷವೂ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವರ್ಷ ಇಸ್ರೋದ ಮಾಜಿ ಅಧ್ಯಕ್ಷ ರಾಜಸ್ಥಾನದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಕಸ್ತೂರಿ ರಂಗನ್ ಮತ್ತು ಪ್ರಖ್ಯಾತ ಭಾರತೀಯ ಸಿನಿಮಾ ನಿರ್ದೇಶಕ, ಕಥಾಸಂಕಲನಕಾರ ನಿರ್ಮಾಪಕರಾಗಿರುವ ಕೆ. ರಾಘವೇಂದ್ರರಾವ್ ಅವರಿಗೆ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಕ್ಷಣಾ ಸಚಿವಾಲಯ ವೈಜ್ಞಾನಿಕ ಸಲಹೆಗಾರರಾಗಿರುವ ಸತೀಶ್ ರೆಡ್ಡಿ ಅವರಿಗೆ ರೇವಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

    ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಮಾತನಾಡಿದ ಕಸ್ತೂರಿ ರಂಗನ್, ವಿಶ್ವವಿದ್ಯಾಲಯದ ಪ್ರಗತಿಯ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದರು. ಇಲ್ಲಿರುವ ವ್ಯವಸ್ಥಾಪಕರು, ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳ ಕೊಡುಗೆಯನ್ನು ಪ್ರಶಂಸಿಸಿ ಸಂಶೋಧನೆ ಬಗ್ಗೆ ಬಹಳ ಒತ್ತು ಕೊಡಬೇಕು. ನಮ್ಮ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.

    ರಾಘವೇಂದ್ರ ರಾವ್ ಅವರು ತಮ್ಮ 50 ವರ್ಷದ ಸಿನಿಮಾ ರಂಗದ ಪಯಣದ ಅನುಭವವನ್ನು ಹಂಚಿಕೊಂಡರು. ಯುವಕರು ನಮ್ಮ ದೇಶದ ಪ್ರಗತಿಗಾಗಿ ತಮ್ಮನ್ನು ತಾವು ಸಮರ್ಪಣಾಭಾವದಿಂದ ತೊಡಗಿಸಿಕೊಳ್ಳಬೇಕು. ತಮ್ಮ ತಾಯ್ನಾಡಿನ ಬಗ್ಗೆ ಹೆಮ್ಮ ಮತ್ತು ಗರ್ವ ಇರಬೇಕೆಂದು ತಿಳಿಸಿದರು.

    ಡಾ. ಸತೀಶ್‍ರೆಡ್ಡಿ ಅವರ ಪರವಾಗಿ ಡಾ.ಸುಧೀರ್ ಕಾಮತ್ ರೇವಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ಸ್ವೀಕರಿಸಿ, ರೇವಾ ವಿಶ್ವವಿದ್ಯಾಲಯಕ್ಕೆ ಶುಭಕೋರಿ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ರೇವಾ ಮಾಡುತ್ತಿರುವ ಸಂಶೋಧನೆಯನ್ನು ಪ್ರಶಂಸಿದರು.

    ಸಂಸ್ಥಾಪಕರ ದಿನಾಚರಣೆ ಅಧ್ಯಕ್ಷತೆ ವಹಿಸಿದ್ದ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪಿ. ಶ್ಯಾಮರಾಜುರವರು ಮಾತನಾಡುತ್ತಾ, ಕಲಿಕೆ ನಿರಂತರವಾದದ್ದು, ನಾವು ಕಲಿಯುವುದು ಬಹಳವಿದೆ. ರೇವಾ ಈ ಹಂತಕ್ಕೆ ಬರುವುದಕ್ಕೆ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳೇ ಕಾರಣ ಎಂದು ಶ್ಲಾಘಿಸಿದರು. ಸಂಸ್ಥಾಪಕರ ದಿನಾಚರಣೆಯ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.