Tag: kashmir

  • ಲಷ್ಕರ್ ಉಗ್ರ ಅಬು ದುಜಾನಾ ನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಲಷ್ಕರ್ ಉಗ್ರ ಅಬು ದುಜಾನಾ ನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿಯ ಹಕ್ರೀಪುರದಲ್ಲಿ ಇಂದು ಬೆಳಿಗ್ಗೆ ನಡೆದ ಎನ್‍ಕೌಂಟರ್‍ನಲ್ಲಿ ಲಷ್ಕರ್ ಸಂಘಟನೆಯ ಉಗ್ರ ಅಬು ದುಜಾನಾ ಹಾಗೂ ಆತನ ಸಹಚರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

    ಆರಿಫ್ ಲಲಿಹಾರಿ ಹಾಗೂ ಮತ್ತಿಬ್ಬರು ಉಗ್ರರ ಜೊತೆ ದುಜಾನಾ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಇಂದು ಮುಂಜಾನೆ 3 ಗಂಟೆ ವೇಳೆಗೆ ಭದ್ರತಾ ಪಡೆ ಮನೆಯನ್ನ ಸುತ್ತುವರಿದಿತ್ತು. ಗ್ರಾಮದಲ್ಲಿ ಉಗ್ರರು ಅಡಗಿರುವ ಬಗ್ಗೆ ಸೇನೆಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಸೇನೆ ಕಾರ್ಯಾಚರಣೆ ನಡೆಸಲು ಬಂದ ವೇಳೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ರು. ನಂತರ ಭದ್ರತಾ ಪಡೆ ಪ್ರತಿ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದೆ.

    ಪಾಕಿಸ್ತಾನದಲ್ಲಿ ಜನಿಸಿದ ದುಜಾನಾ ಕಾಶ್ಮೀರ ಕಣಿವೆಯಲ್ಲಿ ಲಷ್ಕರ್ ಕಮಾಂಡರ್ ಆಗಿದ್ದ. ಆದ್ರೆ ಕೆಲವು ತಿಂಗಳ ಹಿಂದೆ ಸಂಘಟನೆಯಲ್ಲಿ ಜಗಳವಾಗಿ ಆತನನ್ನು ಕೆಳಗಿಳಿಸಲಾಗಿತ್ತು.

    ಭದ್ರತಾ ಪಡೆ ಹಾಗೂ ಸಾರ್ವಜನಿಕರ ಮೇಲಿನ ದಾಳಿಗೆ ಸಂಬಂಧಿಸಿದಂತೆ ಸುಮಾರು 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ದುಜಾನಾ ಬೇಕಾಗಿದ್ದ. ಆತನ ತಲೆಗೆ 15 ಲಕ್ಷ ರೂ. ಬಹುಮಾನ ಕೂಡ ಘೋಷಿಸಲಾಗಿತ್ತು.

    ಸದ್ಯಕ್ಕೆ ಕಾರ್ಯಾಚರಣೆ ಮುಗಿದಿದ್ದು, ಉಗ್ರರ ಮೃತದೇಹಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

  • ಎಕೆ 47 ಹಿಡಿದುಕೊಂಡು ಕ್ರಿಕೆಟ್ ಆಡಿದ್ರು ಉಗ್ರರು! ವಿಡಿಯೋ ನೋಡಿ

    ಎಕೆ 47 ಹಿಡಿದುಕೊಂಡು ಕ್ರಿಕೆಟ್ ಆಡಿದ್ರು ಉಗ್ರರು! ವಿಡಿಯೋ ನೋಡಿ

    ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರ ತಂಡವೊಂದು ಎಕೆ 47 ಗನ್ ಗಳನ್ನು ವಿಕೆಟ್ ರೀತಿಯಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಹೌದು 5 ನಿಮಿಷ ಇರುವ ವಿಡಿಯೋದಲ್ಲಿ 6 ಮಂದಿ ಆಡುವ ದೃಶ್ಯವಿದ್ದು, ಒಬ್ಬಾತ ಮೊಬೈಲ್ ನಲ್ಲಿ ಆಟವನ್ನು ಸೆರೆ ಹಿಡಿದಿದ್ದಾನೆ.

    ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಕ್ರಿಕೆಟ್ ಆಡಿದ್ದಾರೆ ಎಂದು ಹೇಳಲಾಗುತ್ತಿದ್ದು ಯಾವ ಸ್ಥಳದಲ್ಲಿ ಮತ್ತು ಯಾವಾಗ ಆಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

    ಈಗಾಗಲೇ ಭಾರತೀಯ ಸೇನೆ ಜಮ್ಮುಕಾಶ್ಮೀರದಲ್ಲಿ ಉಗ್ರರನ್ನು ಸಾವಿನ ಮನೆಗೆ ಕಳುಹಿಸುತ್ತಿದೆ. ಕೆಲ ತಿಂಗಳ ಕಾರ್ಯಾಚರಣೆಯಲ್ಲಿ ಸೇನೆ 90ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದೆ.

  • ಅಮರನಾಥ ಯಾತ್ರಿಕರ ಹತ್ಯೆಗೆ ಪ್ರತ್ಯುತ್ತರ: 3 ಉಗ್ರರನ್ನು ಸದೆಬಡಿದ ಸೇನೆ

    ಅಮರನಾಥ ಯಾತ್ರಿಕರ ಹತ್ಯೆಗೆ ಪ್ರತ್ಯುತ್ತರ: 3 ಉಗ್ರರನ್ನು ಸದೆಬಡಿದ ಸೇನೆ

     

    ಶ್ರೀನಗರ: ಜಮ್ಮು ಕಾಶ್ಮೀರದ ಬುದ್ಗಾಮ್‍ನಲ್ಲಿ ಮಧ್ಯರಾತ್ರಿ ಭದ್ರತಾ ಪಡೆ ಎನ್‍ಕೌಂಟರ್ ನಡೆಸಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರನ್ನು ಸದೆಬಡಿದಿದೆ.

    ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರ ಪೊಲೀಸ್‍ನ ಸ್ಪೆಷಲ್ ಆಪರೇಷನ್ ಗ್ರೂಪ್(ಎಸ್‍ಓಜಿ) ಹಾಗೂ ಸಿಆರ್‍ಪಿಎಫ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ.

    ಗುಪ್ತಚರ ಮಾಹಿತಿಯ ಮೇರೆಗೆ ಸೇನಾ ಪಡೆ ಮಂಗಳವಾರ ರಾತ್ರಿ ಈ ಪ್ರದೇಶವನ್ನ ಸುತ್ತುವರಿದಿತ್ತು. ಶೋಧ ಕಾರ್ಯದ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ಮಾಡಿದ್ರು. ಕೊನೆಗೆ ಶೋಧ ಕಾರ್ಯ ಎನ್‍ಕೌಂಟರ್ ಆಗಿ ಮಾರ್ಪಟ್ಟಿದ್ದು ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ದಾಳಿ ಸ್ಥಳದಲ್ಲಿ ಭದ್ರತಾ ಪಡೆ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದೆ.

    ಸೋಮವಾರದಂದು ಅಮರನಾಥ ಯಾತ್ರಿಕರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 6 ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.

  • ಕಾಶ್ಮೀರದಲ್ಲಿ ಪಾಕ್ ಸೈನಿಕರ ಗುಂಡಿನ ದಾಳಿ: ಯೋಧ, ಪತ್ನಿ ಸಾವು – ಮಕ್ಕಳಿಗೆ ಗಾಯ

    ಕಾಶ್ಮೀರದಲ್ಲಿ ಪಾಕ್ ಸೈನಿಕರ ಗುಂಡಿನ ದಾಳಿ: ಯೋಧ, ಪತ್ನಿ ಸಾವು – ಮಕ್ಕಳಿಗೆ ಗಾಯ

     

    ಶ್ರೀನಗರ: ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ಗಡಿ ನಿಯಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಓರ್ವ ಸೈನಿಕ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.

    ಇಲ್ಲಿನ ಚಕ್ಕಾ ದಾ ಭಾಗ್ ಹಾಗೂ ಖರ್ರಿ ಕರ್ಮಾರಾ ಪ್ರದೇಶದ ಗ್ರಾಮಗಳಲ್ಲಿರುವ ಭಾರತೀಯ ನೆಲೆಗಳನ್ನ ಗುರಿಯಾಗಿಸಿಕೊಂಡು ಇಂದು ಬೆಳಿಗ್ಗೆ 6.30ರ ವೇಳೆಗೆ ಪಾಕ್ ಸೇನೆ ಮಾರ್ಟರ್ ಶೆಲ್ ದಾಳಿ ನಡೆಸಿದೆ.

    ಘಟನೆಯಲ್ಲಿ ಯೋಧ ಮೊಹಮ್ಮದ್ ಶೌಕತ್ ಹಾಗೂ ಅವರ ಪತ್ನಿ ಸಾಫಿಯಾ ಬೀ ಮೃತಪಟ್ಟಿದ್ದು, ಅವರ ಇಬ್ಬರು ಮಕ್ಕಳಿಗೆ ಗಂಭಿರವಾಗಿ ಗಾಯವಾಗಿದೆ.

    ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರು ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಸೇನಾ ಮೂಲಗಳ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಸೈನಿಕರು 82 ಎಮ್‍ಎಮ್ ಹಾಗೂ 120 ಎಮ್‍ಎಮ್ ನ ಮಾರ್ಟರ್ ಶೆಲ್‍ಗಳನ್ನ ಬಳಸುತ್ತಿದ್ದಾರೆ. ಗುಪ್ತಚರ ಮಾಹಿತಿಯ ಪ್ರಕಾರ ಪಾಕಿಸ್ತಾನ ಈ ದಾಳಿಯನ್ನ ಬಳಸಿಕೊಂಡು ಉಗ್ರರನ್ನು ಗಡಿಯಿಂದ ಮತ್ತೊಂದು ಭಾಗಕ್ಕೆ ಕಳಿಸಬೇಕೆಂದಿದೆ ಎನ್ನಲಾಗಿದೆ.

  • ಕಾಶ್ಮೀರದಲ್ಲಿ ಎಕೆ-47 ರೈಫಲ್‍ನೊಂದಿಗೆ ಯೋಧ ನಾಪತ್ತೆ

    ಕಾಶ್ಮೀರದಲ್ಲಿ ಎಕೆ-47 ರೈಫಲ್‍ನೊಂದಿಗೆ ಯೋಧ ನಾಪತ್ತೆ

    ಶ್ರೀನಗರ: ಶಸ್ತ್ರಾಸ್ತ್ರ ಸಮೇತ ಸೇನಾ ಶಿಬಿರದಿಂದ ಓರ್ವ ಸೈನಿಕ ನಾಪತ್ತೆಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾದ ಗಂಟ್‍ಮುಲ್ಲಾ ಪ್ರದೇಶದಲ್ಲಿ ನಡೆದಿದೆ.

    ಬುಧವಾರ ತಡರಾತ್ರಿ ಎಕೆ-47 ರೈಫಲ್ ಹಾಗೂ 3 ಮ್ಯಾಗ್ಜಿನ್‍ಗಳೊಂದಿಗೆ ಯೋಧ ಜಹೂರ್ ಅಹಮದ್ ಠಾಕೂರ್ ಪಾರಾರಿಯಾಗಿದ್ದು, ಯೋಧನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪುಲ್ವಾಮಾ ಮೂಲದವರಾದ ತಾಕೂರ್ ಎಕೆ-47 ರೈಫಲ್‍ನೊಂದಿಗೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಠಾಕೂರ್ ಅವರು ಪ್ರಾದೇಶಿಕ ಸೈನ್ಯದ 173 ಬೆಟಾಲಿಯನ್‍ನಲ್ಲಿ ಎಂಜಿನಿಯರಿಂಗ್ ವಿಭಾದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾಶ್ಮೀರದಲ್ಲಿ ಬಂದ್ ನಡುವೆಯೂ ಉಗ್ರ ಲಷ್ಕರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು ಸಾವಿರಾರು ಜನ

    ಕಾಶ್ಮೀರದಲ್ಲಿ ಬಂದ್ ನಡುವೆಯೂ ಉಗ್ರ ಲಷ್ಕರಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು ಸಾವಿರಾರು ಜನ

     

    ಶ್ರೀನಗರ: ಗಣ್ಯವ್ಯಕ್ತಿಗಳು ನಿಧನರಾದ್ರೆ ಅವರ ಅಂತ್ಯಕ್ರಿಯೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಭಾಗವಹಿಸೋದು ಸಾಮಾನ್ಯ. ಆದ್ರೆ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಶನಿವಾರದಂದು ಭದ್ರತಾ ಪಡೆಯಿಂದ ಹತ್ಯೆಗೀಡಾದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಬಷೀರ್ ಲಷ್ಕರಿ ಅಂತ್ಯಕ್ರಿಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು, ಇದರ ಫೋಟೋಗಳು ಆನ್‍ಲೈನ್‍ನಲ್ಲಿ ಹರಿದಾಡ್ತಿವೆ. ಕಾಶ್ಮೀರದಲ್ಲಿ ಬಂದ್ ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ಉಗ್ರನ ಅಂತ್ಯಕ್ರಿಯೆಯಲ್ಲಿ ಜನ ಭಾಗವಹಿಸಿದ್ದಾರೆ.

    ಶನಿವಾರದಂದು ಅನಂತ್‍ನಾಗ್ ಜಿಲ್ಲೆಯ ಬ್ರಿಂಟಿ ಡಯಲ್‍ಗಾಮ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಅಡಗಿದ್ದ ಉಗ್ರ ಲಷ್ಕರಿ ಹಾಗೂ ಆತನ ಸಹಚರನನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಯೋಧರ ಕಾರ್ಯಾಚರಣೆ ವೇಳೆ ಓರ್ವ ಮಹಿಳೆ ಹಾಗೂ ಯುವಕ ಸೇರಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದರು.

    ಲಷ್ಕರಿಯ ಅಂತ್ಯಕ್ರಿಯೆ ಭಾನುವಾರದಂದು ಅನಂತ್‍ನಾಗ್‍ನ ಕೋಕರ್‍ನಾಗ್‍ನಲ್ಲಿರುವ ಸೋಫ್ ಶಾಲಿ ಗ್ರಾಮದಲ್ಲಿ ನಡೆದಿದ್ದು, ಸಾವಿರಾರು ಜನ ಭಾಗವಹಿಸಿದ್ದರು. ಲಷ್ಕರಿಯ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ಭಾರತದ ಆಡಳಿತದಿಂದ ಸ್ವಾತಂತ್ರ್ಯ ಬೇಕೆಂದು ಘೋಷಣೆ ಕೂಗಿದ್ರು. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶನಿವಾರ ರಾತ್ರಿ ಅಂತಿಮ ದರ್ಶನ ನಡೆದಿದ್ದು, ಈ ವೇಳೆ ಕೆಲವರು ಸ್ಥಳಕ್ಕೆ ಬಂದು ಗನ್ ಸೆಲ್ಯೂಟ್ ಅರ್ಪಿಸಿದ್ರು ಎಂದು ವರದಿಯಾಗಿದೆ.

    ಈ ನಡುವೆ ಪ್ರತ್ಯೇಕತಾವಾದಿ ಮುಖಂಡರಾದ ಸೈಯದ್ ಅಲಿ, ಗಿಲಾನಿ ಹಾಗೂ ಮಿರ್ವೈಸ್ ಉಮರ್ ಫರೂಕ್ ಹಾಗೂ ಯಾಸಿನ್ ಮಲಿಕ್ ನೀಡಿದ್ದ ಕರೆಯ ಹಿನ್ನೆಲೆಯಲ್ಲಿ ಶ್ರೀನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ಅಂಗಡಿಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿತ್ತು.

    ಶ್ರೀನಗರ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಧಿಕಾರಿಗಳು ಕೆಲವು ಪ್ರಮುಖ ನಗರಗಳಲ್ಲಿ ನಿರ್ಬಂಧ ಹೇರಿದ್ದರು. ನೌಹಟ್ಟಾ, ಎಮ್‍ಆರ್ ಗುಂಜ್, ರೈನಾವರಿ, ಖನ್‍ಯಾರ್, ಸಫಕ್ದಲ್, ಮೈಸುಮಾ ಹಾಗೂ ಕ್ರಾಲ್‍ಕುದ್‍ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಉತ್ತರ ಕಾಶ್ಮೀರದ ಬರಾಮುಲ್ಲಾದಿಂದ ಶ್ರೀನಗರ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾಗೇ ಕೇಂದ್ರ ಕಾಶ್ಮೀರದಿಂದ ದಕ್ಷಿಣ ಕಾಶ್ಮೀರ ನಡುವಿನ ರೈಲುಗಳ ಸಂಚಾರವನ್ನೂ ಕೂಡ ಸ್ಥಗಿತಗೊಳಿಸಲಾಗಿದೆ.

  • ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ನವದೆಹಲಿ: ಐಫೆಲ್ ಟವರ್‍ ಗಿಂತ ಎತ್ತರವಾದ ರೈಲ್ವೆ ಸೇತುವೆಯೊಂದು ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗ್ತಿದ್ದು, 2019ರೊಳಗೆ ಸೇತುವೆ ನಿರ್ಮಾಣ ಪೂರ್ಣವಾಗಲಿದೆ. ಈ ಸೇತುವೆ ಜಗತ್ತಿನ ಅತ್ಯಂತ ಎತ್ತರದ ಸೇತುವೆ ಆಗಲಿದೆ.

    ಈ 1.3 ಕಿ.ಮೀ ಉದ್ದದ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ ಸ್ಟೀಲ್‍ನಿಂದ ಈ ಸೇತುವೆ ನಿರ್ಮಾಣವಾಗ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 1,110 ಕೋಟಿ. ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗ್ತಿದೆ.

    ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನ ಮುರಿಯಲಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ 324 ಮೀ(1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದ್ರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ(1177.82 ಅಡಿ) ಎತ್ತರವಿರಲಿದೆ.

    ಬ್ರಿಡ್ಜ್ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್‍ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಅಪ್ಪನ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು: ಪಾ(ಪಿ)ಕಿಗಳಿಂದ ಶಿರಚ್ಛೇದನಗೊಂಡ ಯೋಧನ ಮಗಳ ಮಾತು

    ಅಪ್ಪನ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು: ಪಾ(ಪಿ)ಕಿಗಳಿಂದ ಶಿರಚ್ಛೇದನಗೊಂಡ ಯೋಧನ ಮಗಳ ಮಾತು

    ನವದೆಹಲಿ: ನನ್ನ ತಂದೆಯ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು ಎಂದು ಪಾಕಿಸ್ತಾನದ ಸೈನಿಕರ ಪೈಶಾಚಿಕ ಕೃತ್ಯದಿಂದ ಹುತಾತ್ಮರಾದ ಯೋಧರೊಬ್ಬರ ಮಗಳು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.

    ಸೋಮವಾರದಂದು ಪಾಕಿಸ್ತಾನದ ಸೈನಿಕರು ಕಾಶ್ಮೀರದಲ್ಲಿ ಭಾರತದೊಳಗೆ ನುಗ್ಗಿ ಇಬ್ಬರು ಯೋಧರನ್ನು ಕೊಂದು ಅವರ ಶಿರಚ್ಛೇದನ ಮಾಡಿದ್ದರು. ಮೃತರಲ್ಲಿ ಬಿಎಸ್‍ಎಫ್ ಯೋಧ ಪ್ರೇಮ್ ಸಾಗರ ಕೂಡ ಒಬ್ಬರಾಗಿದ್ದು, ಅವರ ಮಗಳು ತನ್ನ ತಂದೆಯ ಬಲಿದಾನಕ್ಕೆ ಭಾರತ ಹೇಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬುದನ್ನ ಈ ಮಾತುಗಳ ಮೂಲಕ ಹೇಳಿದ್ದಾರೆ.

    ಪಾಕಿಸ್ತಾನಿ ಸೈನಿಕರ ಈ ಅಮಾನವೀಯ ಕೃತ್ಯಕ್ಕೆ ಹುತಾತ್ಮರಾದ ಮತ್ತೊಬ್ಬ ಯೋಧ ಪರಮ್‍ಜೀತ್ ಸಿಂಗ್ ಅವರ ಮೃತದೇಹವನ್ನು ಇಂದು ಪಂಜಾಬ್‍ನ ಸ್ವಗ್ರಾಮ ಟಾರ್ನ್ ಟರಾನ್‍ಗೆ ಕೊಂಡೊಯ್ಯಲಾಯ್ತು. ಆಕ್ರೋಶಗೊಂಡ ಪರಮ್‍ಜೀತ್ ಅವರ ಸಂಬಂಧಿಕರು, ನಾವು ಅವರ ಮುಖವನ್ನು ನೋಡುವವರೆಗೂ ದೇಹವನ್ನು ಅಂತ್ಯಕ್ರಿಯೆ ಮಾಡುವುದಿಲ್ಲ. ಯಾರ ದೇಹ ಇದು? ಬಾಕ್ಸ್‍ನೊಳಗೆ ಮುಚ್ಚಲಾಗಿದೆ ಎಂದು ರಾಷ್ಟ್ರಧ್ವಜವನ್ನು ಹೊದಿಸಿದ್ದ ಶವಪೆಟ್ಟಿಗೆಯನ್ನು ತೋರಿಸುತ್ತಾ ಹೇಳಿ ದುಃಖಿತರಾದ್ರು. ನಮಗೆ ದೇಹವನ್ನು ತೋರುಸುತ್ತಿಲ್ಲವಲ್ಲ ಯಾಕೆ? ಎಂದು ಪ್ರಶ್ನಿಸಿದ್ರು.

    ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ಪೂಂಚ್ ಸೆಕ್ಟರ್‍ನ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಯೋಧರು ಎರಡು ಪೋಸ್ಟ್‍ಗಳ ನಡುವೆ ಗಸ್ತು ತಿರುಗುತ್ತಿದ್ದ ವೇಳೆ ಅವರ ಮೇಲೆ ಪಾಕಿಸ್ತಾನಿಗಳು ಮಾರ್ಟರ್ ಬಾಂಬ್‍ಗಳಿಂದ ದಾಳಿ ನೆಡೆಸಿದ್ದರು. ಈ ವೇಳೆ ಇಬ್ಬರು ಯೋಧರು ರಕ್ಷಣೆಗಾಗಿ ಓಡಿದ್ರು. ಇನ್ನುಳಿದ ಇಬ್ಬರ ಮೇಲೆ ಪಾಕಿಸ್ತಾನಿಗಳು ದಾಳಿ ಮಾಡಿ ಶಿರಚ್ಛೇದನ ಮಾಡಿದ್ದರು.

  • ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟಿಗರು ಪೊಲೀಸರ ವಶಕ್ಕೆ

    ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟಿಗರು ಪೊಲೀಸರ ವಶಕ್ಕೆ

    ಶ್ರೀನಗರ: ಪಾಕಿಸ್ತಾನ ಕ್ರಿಕೆಟ್ ತಂಡದ ಸಮವಸ್ತ್ರ ಧರಿಸಿ ಪಾಕಿಸ್ತಾನ ರಾಷ್ಟ್ರಗೀತೆಯನ್ನು ಹಾಡಿದ್ದ ಕಾಶ್ಮೀರದ ಕ್ರಿಕೆಟಿಗರನ್ನು ಗಂದೇರ್‍ಬಾಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕ್ರಿಕೆಟಿಗರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಅವರೀಗ ಪೊಲೀಸ್ ಠಾಣೆಯಲ್ಲಿ ಇದ್ದಾರೆ ಎಂದು ಕೇಂದ್ರ ಕಾಶ್ಮೀರ ಡಿಐಜಿ ಗುಲಾಮ್ ಹಸನ್ ಭಟ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಪೊಲೀಸರು ಕ್ರಿಕೆಟಿಗರನ್ನು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯರು ಪೊಲೀಸ್ ಠಾಣೆ ಎದುರು ಜಮಾಯಿಸಿ ಯುವಕರನ್ನು ಬಿಡುಗಡೆಗೊಳೀಸುವಂತೆ ಒತ್ತಾಯಿಸಿದ್ದಾರೆಂದು ವರದಿಯಾಗಿದೆ.

    ಕಾಶ್ಮೀರದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದ ಆರಂಭಕ್ಕೂ ಮುನ್ನ ಎರಡರಲ್ಲಿ ಒಂದು ತಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಹಸಿರು ಬಣ್ಣದ ಸಮವಸ್ತ್ರ ಧರಿಸಿ ಪಾಕಿಸ್ತಾನ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ವೇಳೆ ಎದೆ ಮೇಲೆ ಕೈ ಇರಿಸಿಕೊಂಡು ರಾಷ್ಟ್ರಗೀತೆಗೆ ಗೌರವ ಸೂಚಿಸಿದ ವೀಡಿಯೋ ಬುಧವಾರದಂದು ವೈರಲ್ ಆಗಿತ್ತು.

    ಪ್ರಧಾನಿ ಮೋದಿ ಏಪ್ರಿಲ್ 2 ರಂದು ಚೆನಾನಿ – ನಶ್ರಿ ರಸ್ತೆ ಸುರಂಗ ಮಾರ್ಗ ಉದ್ಘಾಟಿಸಲು ಕಾಶ್ಮೀರಕ್ಕೆ ಭೇಟಿ ನೀಡಿದ್ದ ದಿನದಂದೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

    https://www.youtube.com/watch?v=lW6nC77lzV4

  • ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ- ಓರ್ವ ಪೊಲೀಸ್ ಪೇದೆ ಹುತಾತ್ಮ

    ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ- ಓರ್ವ ಪೊಲೀಸ್ ಪೇದೆ ಹುತಾತ್ಮ

    – ಕಟ್ಟಡ ಸುತ್ತುವರೆದು ಒರ್ವ ಉಗ್ರನನ್ನು ಕೊಂದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್‍ವಾಮಾ ಭಾಗದ ಟ್ರಾಲ್‍ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

    ಇಲ್ಲಿನ ಜನವಸತಿ ಕಟ್ಟಡದೊಳಗೆ ಹಿಜ್‍ಬುಲ್ ಮುಜಾಹಿದ್ದೀನ್ ಸಂಘಟನೆಯ 5 ಉಗ್ರರು ನುಗ್ಗಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಓರ್ವ ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

    ಶನಿವಾರ ಸಂಜೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಕಾರ್ಯಾಚರಣೆ ವೇಳೆ ಪೊಲೀಸ್ ಪೇದೆ ಮನ್ಜೂರ್ ಅಹಮದ್ ಹುತಾತ್ಮರಾಗಿದ್ದಾರೆ. ಇನ್ನೂ ಕೆಲವು ಉಗ್ರರು ಕಟ್ಟದೊಳಗೆ ಅಡಗಿರುವ ಶಂಕೆಯಿದ್ದು ಭಾರತೀಯ ಸೇನೆಯ ಕಾರ್ಯಾಚರಣೆ ಮುಂದುವರೆದಿದೆ.

    ಘಟನಾ ಸ್ಥಳದ 10 ಕಿ.ಮೀ ದೂರದವರಗೆ ಕರ್ಫ್ಯೂ ಜಾರಿ ಮಾಡಲಾಗಿದೆ.