Tag: kashmir

  • ಕಾಶ್ಮೀರ ಮಧ್ಯಸ್ಥಿಕೆಗೆ ಮೋದಿ ಮನವಿ – ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ ಭಾರತ

    ಕಾಶ್ಮೀರ ಮಧ್ಯಸ್ಥಿಕೆಗೆ ಮೋದಿ ಮನವಿ – ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ ಭಾರತ

    ವಾಷಿಂಗ್ಟನ್: ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಮೋದಿ ನನ್ನ ಬಳಿ ಮನವಿ ಮಾಡಿದ್ದಾರೆ ಎಂಬ ಟ್ರಂಪ್ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ.

    ಪಾಕ್ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಇಮ್ರಾನ್ ಖಾನ್ ಶ್ವೇತಭವನಕ್ಕೆ ಭೇಟಿ ನೀಡಿ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ-ಪಾಕ್ ಒಪ್ಪಿದರೆ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಹೇಳಿದ್ದಾರೆ.

     

    ಈ ಸಂದರ್ಭದಲ್ಲಿ ಎರಡು ವಾರಗಳ ಹಿಂದೆ ನಾನು ಮತ್ತು ಮೋದಿ ಕಾಶ್ಮೀರ ವಿಚಾರದ ಬಗ್ಗೆ ಚರ್ಚೆ ನಡೆಸಿದೆವು. ಈ ವೇಳೆ ಮೋದಿ ಈ ಸಮಸ್ಯೆ ಪರಿಹಾರಕ್ಕೆ ಮಧ್ಯವರ್ತಿ ಆಗುತ್ತೀರಾ ಎಂದು ಕೇಳಿದರು. ಇದಕ್ಕೆ ನಾನು ನನ್ನಿಂದ ಸಹಾಯವಾಗುತ್ತದೆ ಎಂದಾದರೆ ನಾನು ಮಧ್ಯವರ್ತಿಯಾಗುತ್ತೇನೆ ಎಂದು ತಿಳಿಸಿದ್ದೆ ಎಂದು ಟ್ರಂಪ್ ತಿಳಿಸಿದರು.

    ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸಲು ಆಸಕ್ತಿ ತೋರಿದ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇಮ್ರಾನ್‍ಖಾನ್ ಸ್ವಾಗತಿಸಿದ್ದಾರೆ.

    ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಪ್ರತಿಕ್ರಿಯಿಸಿ, ದ್ವಿಪಕ್ಷೀಯ ಮಾತುಕತೆಯಿಂದ ಮಾತ್ರ ಜಮ್ಮು ಕಾಶ್ಮೀರ ವಿವಾದ ಪರಿಹರಿಸಲು ಸಾಧ್ಯ. ಈ ಮಾತುಕತೆ ನಡೆಯಬೇಕಾದರೆ ಪಾಕಿಸ್ತಾನ ಗಡಿಯಲ್ಲಿ ನಡೆಸುತ್ತಿರುವ ಉಗ್ರಗಾಮಿ ಚಟುವಟಿಕೆ ನಿಲ್ಲಬೇಕು. ಪ್ರಧಾನಿ ಮೋದಿಯವರು ಈ ಸಮಸ್ಯೆ ಪರಿಹಾರಕ್ಕೆ ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಹೇಳಿ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

  • ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತೇವೆ – ರಾಜನಾಥ್ ಸಿಂಗ್

    ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತೇವೆ – ರಾಜನಾಥ್ ಸಿಂಗ್

    ನವದೆಹಲಿ: ಭಾರತ- ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣವಾಗಿರುವ ಕಾಶ್ಮೀರ ವಿವಾದ ಇತ್ಯರ್ಥ ಹಂತವನ್ನು ತಲುಪಿದ್ದು, ಜಗತ್ತಿನ ಯಾವ ಶಕ್ತಿಯಿಂದಲೂ ಈ ವಿಚಾರ ಇತ್ಯರ್ಥ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ.

    ಕಾರ್ಗಿಲ್ ವಿಜಯದ 20ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶನಿವಾರ ಜಮ್ಮು-ಕಾಶ್ಮೀರದ ದ್ರಾಸ್ ವಲಯದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ ರಾಜ್‍ನಾಥ್ ಸಿಂಗ್ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಬಳಿಕ ಕಠುವಾ ಜಿಲ್ಲೆಯ ಉಜ್ ಮತ್ತು ಸಾಂಬಾ ಜಿಲ್ಲೆಯ ಬಸಂತರ್‍ನಲ್ಲಿ 50 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲಾಗಿರುವ ಎರಡು ಸೇತುವೆಗಳನ್ನು ಉದ್ಘಾಟನೆ ಮಾಡಿದರು.

    ಈ ವೇಳೆ ಮಾತನಾಡುತ್ತ ಕಾಶ್ಮೀರದ ವಿವಾದದ ಬಗ್ಗೆ ಪ್ರಸ್ತಾಪಿಸಿ, ಕಾಶ್ಮೀರ ನನ್ನ ಹೃದಯದಲ್ಲಿದೆ. ಅಲ್ಲದೆ ಸರ್ಕಾರ ಕಾಶ್ಮೀರವನ್ನು ಕೇವಲ ಭಾರತದ ಸ್ವರ್ಗವನ್ನಾಗಿ ಅಷ್ಟೇ ಇರಿಸಿದೆ. ಜಾಗತಿಕ ಮಟ್ಟದಲ್ಲಿ ಕಾಶ್ಮೀರವನ್ನು ಪ್ರವಾಸಿಗರ ಸ್ವರ್ಗವನ್ನಾಗಿಸಲು ಪ್ರಯತ್ನಿಸುತ್ತಿದೆ. ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಸಾಗಲು ಸರ್ಕಾರ ಹೆಚ್ಚಿನ ಶ್ರಮವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.

    ನಮ್ಮ ಸರ್ಕಾರ ಕಾಶ್ಮೀರ ವಿವಾದವನ್ನು ಬಗೆಹರಿಸಲಿದೆ. ಮಾತುಕತೆಯ ಮೂಲಕ ಬಗೆಹರಿಯದಿದ್ದರೆ ಯಾವ ತಂತ್ರವನ್ನು ಬಳಸಬೇಕು ಎಂಬುದು ನಮಗೆ ಗೊತ್ತಿದೆ. ಈ ಭೂಮಿ ಮೇಲಿನ ಯಾವ ಶಕ್ತಿಯೂ ಕಾಶ್ಮೀರ ವಿವಾದ ಇತ್ಯರ್ಥವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಇದನ್ನು ನಾವು ಬಗೆಹರಿಸಿಯೇ ತೀರುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    1999ರಲ್ಲಿ ಭಾರತೀಯ ಸೇನೆಯು ಅಕ್ರಮವಾಗಿ ಒಳ ನುಸುಳುತ್ತಿದ್ದ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಹೋರಾಡಿ, ಶ್ರೀನಗರದ ಲೇಹ್ ಹೆದ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಕಿಸ್ತಾನ ಆಕ್ರಮಿಸಿದ್ದ ಹಲವು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿತ್ತು.

    ಜು.14ರ ಭಾರತದ ವಿಜಯ ದಿನದಂದು ರಾಜ್‍ನಾಥ್ ಸಿಂಗ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, `ವಿಜಯ ಜ್ವಾಲೆ’ಯನ್ನು ಹೊತ್ತಿಸಿದ್ದರು. ಜ್ವಾಲೆಯು ಜು.26 ರಂದು ದ್ರಾಸ್ ತಲುಪಲಿದ್ದು, ಸುಮಾರು 9 ಪಟ್ಟಣಗಳು ಹಾಗೂ ನಗರಗಳನ್ನು ಹಾದು ಹೋಗಲಿದೆ. ನಂತರ ಕಾರ್ಗಿಲ್‍ಗೆ ತಲುಪಿ ಶಾಶ್ವತ ವಿಜಯ ಜ್ವಾಲೆ ಬಳಿ ವಿಲೀನಗೊಳಿಸಲಾಗುತ್ತದೆ.

    ವಿಜಯ ದಿನವನ್ನು ಭಾರತೀಯ ಸೇನೆ ವಿಜೃಂಭಣೆಯಿಂದ ಆಚರಿಸಿದೆ. ಈ ಮೂಲಕ ಆಪರೇಷನ್ ವಿಜಯ್‍ನಲ್ಲಿ ಭಾಗವಹಿಸಿದ ಯೋಧರಿಗೆ ನಮನ ಸಲ್ಲಿಸಲಾಯಿತು. ಆಪರೇಷನ್ ವಿಜಯ್‍ನ್ನು `ರಿಮೆಂಬರ್, ರೀಜಾಯ್ಸ್ ಆಂಡ್ ರಿನ್ಯೂ(ನೆನಪಿಡಿ, ಹೆಮ್ಮೆಪಡಿ ಮತ್ತು ನವೀಕರಿಸಿ)’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು. ಅಲ್ಲದೆ, ಸೈನ್ಯದ ಮೂರು ಬೆಟಾಲಿಯನ್‍ಗಳು ಅಸಾಧ್ಯವಾಗದ ಸ್ಥಿಯಲ್ಲಿ ಹೋರಾಡಿದ ಶಿಖರಗಳಿಗೆ ದಂಡಯಾತ್ರೆ ಕೈಗೊಳ್ಳಲಾಗಿದೆ.

    ಕಾರ್ಗಿಲ್ ವಿಜಯ ದಿನದ ಅಂಗವಾಗಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಬಿಎಸ್‍ಎಫ್ ಯೋಧರ ತಂಡಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸೈನಿಕರು, ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಧೈರ್ಯದ ಕಥೆಗಳನ್ನು ಪ್ರದರ್ಶಿಸಿತು. ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಸೇನೆ ಏರ್ಪಡಿಸಿದ್ದು, ಕಾರ್ಗಿಲ್ ವಿಜಯ ದಿನದ ಹಿನ್ನೆಲೆ ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರ ಕುಟುಂಬ ಸದಸ್ಯರನ್ನು ಗೌರವಿಸಲಾಯಿತು.

  • ನಮ್ಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು – ವೈರಲ್ ಫೋಟೋ ಹಿಂದಿನ ಸತ್ಯಾಂಶ

    ನಮ್ಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು – ವೈರಲ್ ಫೋಟೋ ಹಿಂದಿನ ಸತ್ಯಾಂಶ

    ನವದೆಹಲಿ: ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿರಾಟ್ ಕೊಹ್ಲಿ ನಮಗೆ ಬೇಕು, ನಮಗೆ ಕಾಶ್ಮೀರ ಬೇಡ ವಿರಾಟ್ ಕೊಹ್ಲಿ ಬೇಕು ಎಂದು ಪಾಕಿಸ್ತಾನಿಗಳು ಬೇಡಿಕೆ ಇಟ್ಟಿರುವುದಾಗಿ ಎಂದು ಹೇಳಲಾಗುವ ಫೋಟೋವನ್ನು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಾಶ್ಮೀರ ಮೂಲದ ಇಬಾ ಸಿನಾ ಎಂಬವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ಇವಾಗ ಖುಷಿನಾ ಎಂದು ಬರೆದುಕೊಂಡಿದ್ದಾರೆ. ಇದೇ ಸಿನಾ ಪಿನ್ ಮಾಡಿಕೊಂಡಿರುವ ಟ್ವೀಟ್ ನಲ್ಲಿ ನಾನೋರ್ವ ಮುಸ್ಲಿಂ, ಆದ್ರೆ ಹಿಂದೂಗಿಂತ ಕಡಿಮೆ ಏನಿಲ್ಲ. ನನ್ನ ಧರ್ಮ ಇಸ್ಲಾಂ, ಆದ್ರೆ ನನ್ನ ಸಂಸ್ಕೃತಿ  ಹಿಂದೂ ಎಂದು ಬರೆದುಕೊಂಡಿದ್ದಾರೆ.

    https://twitter.com/Ibne_Sena/status/1140530531399921664

    ಈ ಟ್ವೀಟ್‍ನ್ನು ಸಾಹಿತಿ ಮಧು ಕಿಶ್ವರ್ ರೀಟ್ವೀಟ್ ಮಾಡಿದ್ದು, ಒಂದು ಕಾಲದಲ್ಲಿ ಪಾಕಿಸ್ತಾನದವರು ನಟಿ ಮಾಧುರಿಯವರನ್ನು ಕೊಡಿ ಪಾಕಿಸ್ತಾನ ತೆಗೆದುಕೊಳ್ಳಿ ಎಂದು ಜಪಿಸಿದ್ದರು. ಈಗ ಪಂದ್ಯ ಸೋತ ಹತಾಶೆಯಲ್ಲಿ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪಾಕ್ ಕಾಲೆಳೆದಿದ್ದಾರೆ.

    ವೈರಲ್ ಫೋಟೋ ನಿಜಾನಾ?
    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಸುಳ್ಳು ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ. 2016ರಲ್ಲಿ ಕಶ್ಮೀರಾ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಭಾರತೀಯ ಸೇನೆ ಹತ್ಯೆ ಮಾಡಿತ್ತು. ಇದನ್ನು ಖಂಡಿಸಿ ಕೆಲ ಕಾಶ್ಮೀರಿ ಯುವಕರು ಪಾಕ್ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು.

    ಅಂದು ಕಾಶ್ಮೀರಿ ಕೆಲ ಯುವಕರು ಹಸಿರು ಬಣ್ಣದ ದೊಡ್ಡ ಬ್ಯಾನರ್ ಜೊತೆ ಪಾಕಿಸ್ತಾನ ಧ್ವಜಗಳನ್ನು ಹಿಡಿದು ನಿಂತಿದ್ದರು. ಹಸಿರು ಬ್ಯಾನರ್ ಮೇಲೆ ನಮಗೆ ಸ್ವಾತಂತ್ರ ಬೇಕೆಂದು ಬರೆಯಲಾಗಿತ್ತು. ಇದೀಗ ಅದೇ ಫೋಟೋವನ್ನು ಎಡಿಟ್ ಮಾಡಿ, ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.

    ಕಾರ್ಗಿಲ್ ಯುದ್ಧದಷ್ಟೇ ಕಾವು ಪಡೆದ ಮತ್ತು ಕ್ರಿಕೆಟ್ ಲೋಕದ ಅತಿದೊಡ್ಡ ಕಾದಾಟವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಭಾರತದ ವಿರುದ್ಧದ ಸೋಲನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಾಕ್ ತಂಡದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ, ಹಿರಿಯ ಆಟಗಾರರು ಕೂಡ ನಾಯಕ ಸರ್ಫರಾಜ್ ವಿರುದ್ಧ ಕಿಡಿಕಾರಿದ್ದಾರೆ.

  • ಕಾಶ್ಮೀರ ಎನ್‍ಕೌಂಟರ್: ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ

    ಕಾಶ್ಮೀರ ಎನ್‍ಕೌಂಟರ್: ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ

    ಶ್ರೀನಗರ: ಇಂದು ಬೆಳ್ಳಂಬೆಳಗ್ಗೆ ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಭದ್ರತಾ ಪಡೆ ನಡೆಸಿದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಮಾಡಲಾಗಿದ್ದು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

    ಉಗ್ರರನ್ನು ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆಯವರೆಂದು ಶಂಕಿಸಲಾಗಿದೆ. ಓರ್ವ ಉಗ್ರ ಕಟ್ಟಡದೊಳಗೆ ಅವಿತುಕೊಂಡಿರಬಹುದೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಉಗ್ರರು ಸಮೀಪದಲ್ಲಿಯೇ ಅಡಗಿದ್ದಾರೆಂದು ಗುಪ್ತಚರ ಇಲಾಖೆಗೆ ಮಾಹಿತಿ ಸಿಗುತ್ತಿದ್ದಂತೆಯೇ ಭದ್ರತಾ ಪಡೆಯು ಕಾರ್ಯಚರಣೆಯನ್ನು ಆರಂಭಿಸಿದೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಹೀಗಾಗಿ ಕಾರ್ಯಾಚರಣೆಯನ್ನು ನಿಲ್ಲಿಸಿ ಯೋಧರು ಎನ್ ಕೌಂಟರ್ ಮಾಡಿದ್ದಾರೆ.

    ಫೆಬ್ರವರಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಬೆಂಗಾವಲಿನಲ್ಲಿದ್ದ ಪುಲ್ವಾಮದ ಸೇನಾ ವಾಹನವನ್ನು ಜೆಇಎಂ ಉಗ್ರರು ಸುಧಾರಿತ ಸ್ಫೋಟಕಗಳಿಂದ ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದರು. ಸೋಮವಾರ ನಡೆದ ದಾಳಿಯಲ್ಲಿ ಆರು ಮಂದಿ ಯೋಧರು ಮತ್ತು ಇಬ್ಬರು ಸಿವಿಲಿಯನ್ಸ್ ಗಾಯಗೊಂಡಿದ್ದಾರೆ.

    ಅನಂತ್‍ನಾಗ್‍ನಲ್ಲಿ ಸೋಮವಾರ ನಡೆದ ಮತ್ತೊಂದು ದಾಳಿಯಲ್ಲಿ ಒಬ್ಬ ಸೇನಾ ಪ್ರಮುಖ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಮತ್ತು ಆರ್ಮಿ ಚೀಫ್ ಜನರಲ್ ಬಿಪಿನ್ ರಾವತ್ ಹುತಾತ್ಮರಾದ ಸೇನಾ ಪ್ರಮುಖ ಕೆತನ್ ಶರ್ಮರವರಿಗೆ ಗೌರವ ಸಲ್ಲಿಸಿದ್ದಾರೆ.

  • ಅಧಿಕಾರದಲ್ಲಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಎಚ್‍ಡಿಡಿಯಿಂದ ಪರಿಹಾರ ಆಗ್ತಿತ್ತು: ಪೇಜಾವರ ಶ್ರೀ

    ಅಧಿಕಾರದಲ್ಲಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಎಚ್‍ಡಿಡಿಯಿಂದ ಪರಿಹಾರ ಆಗ್ತಿತ್ತು: ಪೇಜಾವರ ಶ್ರೀ

    ಉಡುಪಿ: ಸದಾ ಬಿಜೆಪಿ ಪರ ಮಾತನಾಡ್ತಾರೆ ಎಂದು ಟೀಕೆಗೆ ಒಳಪಡುವ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ. ಕಾಶ್ಮೀರ ಸಮಸ್ಯೆ ದೊಡ್ಡ ಗೌಡರಿಂದ ಪರಿಹಾರ ಆಗುತ್ತಿತ್ತು ಎಂದು ಹೇಳಿದ್ದಾರೆ.

    ಪೇಜಾವರ ಶ್ರೀಗಳ 88ನೇ ಜನ್ಮ ನಕ್ಷತ್ರ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದರು. ಈ ವೇಳೆ ಪರಸ್ಪರ ಆರೋಗ್ಯ ವಿಚಾರಿಸಿಕೊಂಡು, ಗೌರವಾರ್ಪಣೆ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರು ಅತ್ಯಂತ ಹಿರಿಯರು. ಪ್ರಧಾನ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದರು. ದೇವೇಗೌಡರೇ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯಲು ಅವಕಾಶ ಇತ್ತು ಎಂದು ಹಾಡಿ ಹೊಗಳಿದರು.

    ದೇವೇಗೌಡರಿಗೆ ಆಶೀರ್ವಾದ ಮಾಡಿದ್ದೇನೆ. ದೇವೇಗೌಡರಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಲು ಕಡಿಮೆ ಅವಧಿ ಸಿಕ್ಕಿತ್ತು. ಆದರೆ ಗೌಡರ ಕುಟುಂಬದಿಂದ ಹೆಚ್ಚಿನ ರಾಷ್ಟ್ರಸೇವೆ ಆಗಲಿ. ನಾವಿಬ್ಬರೂ ರಾಜಕೀಯ ವಿಚಾರ ಮಾತನಾಡಿಲ್ಲ. ಗೌಡರು ಬನ್ನಂಜೆ ಗೋವಿಂದಾಚಾರ್ಯರ, ಮಧ್ವಾಚಾರ್ಯರ ಚರಿತ್ರೆ ಕುರಿತ ಪುಸ್ತಕ ಓದುತ್ತಿದ್ದಾರೆ ಎಂದು ತಿಳಿಸಿದರು.

    ಗೌಡರ ಪತ್ನಿ ಚೆನ್ನಮ್ಮ ಅತ್ಯಂತ ಸರಳಜೀವಿ ಮಹಾನ್ ದೈವಭಕ್ತೆ. ಇಬ್ಬರಿಗೂ ಯಾವ ಶ್ರೀಮಂತಿಕೆ, ಆಡಂಭರ ಇಲ್ಲ. ಅಂದೂ ಇಂದೂ ಅದೇ ತರದ ಬಟ್ಟೆ ಧರಿಸುತ್ತಾರೆ ಎಂದು ಪೇಜಾವರ ಸ್ವಾಮೀಜಿ ಭಾರೀ ಪ್ರಶಂಸೆ ವ್ಯಕ್ತಗೊಳಿಸಿದರು. ಅಲ್ಲದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಬಹಳ ಚರ್ಚೆ ಮಾಡಿದ್ದೆವು ಎಂದು ಗೌಡರ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡರು, ಸ್ವಾಮೀಜಿಯ ಆಶೀರ್ವಾದ ಪಡೆದಿದ್ದೇನೆ, ಅವರಿಗೆ ಶುಭ ಹಾರೈಸಿದ್ದೇನೆ. ಮೂಳೂರಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದೇನೆ. ರಾಜಕೀಯವಾಗಿ ಮಾತಾಡಲ್ಲ ಎಂದು ಹೇಳಿ ತೆರಳಿದರು. ಅಲ್ಲಿಂದ ಪತ್ನಿ ಸಮೇತರಾಗಿ ಕೃಷ್ಣಮಠಕ್ಕೆ ತೆರಳಿ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿ, ಪರ್ಯಾಯ ಪಲಿಮಾರು ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.

  • ಅಭಿವೃದ್ಧಿಯೇ ನಮ್ಮ ಮಂತ್ರ, ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು – ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಅಭಿವೃದ್ಧಿಯೇ ನಮ್ಮ ಮಂತ್ರ, ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು – ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಲಾಗುವುದು ಎಂದು ಹೇಳಿದೆ.

    45 ಪುಟಗಳ ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಮೊದಲ ಸ್ಥಾನವನ್ನು ನೀಡಲಾಗಿದೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ. ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ತಿಳಿಸಿದೆ.

    ಭಯೋತ್ಪಾದನೆ ನಿರ್ಮೂಲನೆ ನಮ್ಮ ಪ್ರಮುಖ ಗುರಿಯಾಗಿದ್ದು, ಸ್ವದೇಶಿ ಶಸ್ತ್ರಾಸ್ತ್ರಗಳ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ. ಏಕರೂಪದ ನಾಗರಿಕ ಸಂಹಿತೆ, ನಾಗರಿಕತ್ವ ತಿದ್ದುಪಡಿ ಮಸೂದೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ 2022ಕ್ಕೆ ಒಂದು ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಿ ಕೊಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ.

    ಗೃಹ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಅಭಿವೃದ್ಧಿಯೇ ನಮ್ಮ ಮಂತ್ರವಾಗಿದ್ದು, ಕಳೆದ ಬಾರಿ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಿದೆ. ನಾವು ಗಟ್ಟಿ ಮತ್ತು ಸುಭದ್ರವಾದ ಸರ್ಕಾರವನ್ನು ನೀಡಲಿದ್ದೇವೆ. ಈ ಸಂಕಲ್ಪ ಪತ್ರದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲಿದ್ದೇವೆ. ಹೀಗಾಗಿ ನಮಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.

    ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು:
    – 1 ಲಕ್ಷ ರೂ. ವರೆಗಿನ ರೈತರ ಸಾಲಕ್ಕೆ ಶೂನ್ಯ ಬಡ್ಡಿ ದರ
    – ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಹೆಸರಿನಲ್ಲಿ ನೀರಾವರಿ ಯೋಜನೆಗೆ ಆಧ್ಯತೆ
    – 60 ವರ್ಷ ಮೇಲ್ಪಟ್ಟ ಸಣ್ಣ ಮತ್ತು ಮಧ್ಯಮ ರೈತರಿಗೆ ಪಿಂಚಣಿ
    – ಉನ್ನತ ಶಿಕ್ಷಣ ಮೂಲಭೂತ ಸೌಕರ್ಯಕ್ಕೆ 1 ಲಕ್ಷ ಕೋಟಿ ನೆರವು
    – ಉನ್ನತ ಮ್ಯಾನೇಜ್‍ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಸೀಟ್ ಗಳ ಸಂಖ್ಯೆ ಹೆಚ್ಚಳ.

     

    – ಒಂದು ಕುಟುಂಬಕ್ಕೆ ಒಂದು ಮನೆ ನಿರ್ಮಾಣ
    – ಗ್ರಾಮೀಣ ಭಾಗದ ಎಲ್ಲ ಕುಟುಂಬಕ್ಕೆ ಗ್ಯಾಸ್ ಸಂಪರ್ಕ
    – ಗ್ರಾಮೀಣ ಭಾಗದಲ್ಲಿ ಶೇ.100 ವಿದ್ಯುತ್ ಸಂಪರ್ಕ, ಪ್ರತಿ ಮನೆಗೆ ಶೌಚಾಲಯ
    – ರಾಷ್ಟ್ರೀಯ ಹೆದ್ದಾರಿ ಉದ್ದವನ್ನು ದ್ವಿಗುಣ
    – ಅಕ್ರಮವಾಗಿ ಈಶಾನ್ಯ ರಾಜ್ಯಗಳಲ್ಲಿ ನುಸುಳುವ ವ್ಯಕ್ತಿಗಳ ವಿರುದ್ಧ ಕ್ರಮ

    – 2022 ರೊಳಗೆ ರೈತರ ಆದಾಯ ದ್ವಿಗುಣಕ್ಕೆ ಗುರಿ
    – ಕೃಷಿ ಗ್ರಾಮಿಣಾಭಿವೃದ್ಧಿಗೆ 25 ಲಕ್ಷ ಕೋಟಿ ಮೀಸಲು
    – ಬೇನಾಮಿ ಆಸ್ತಿ ಕಡಿವಾಣಕ್ಕೆ ಕ್ರಮ
    – ರಾಷ್ಟ್ರಿಯ ವ್ಯಾಪಾರಿ ಆಯೋಗ ರಚನೆಗೆ ಕ್ರಮ
    – ವಿಶ್ವದ ಟಾಪ್ 3 ದೇಶಗಳ ಪಟ್ಟಿಯಲ್ಲಿ ಸೇರ್ಪಡೆಗೆ ಸಂಕಲ್ಪ
    – 75 ಹೊಸ ಮೆಡಿಕಲ್ ಕಾಲೇಜ್

  • ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರದಿಂದ ಶಾಕ್!

    ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರದಿಂದ ಶಾಕ್!

    – ಜಮಾತ್-ಇ-ಇಸ್ಲಾಂನ 70 ಪ್ರತ್ಯೇಕತಾವಾದಿಗಳ ಆಸ್ತಿ ಜಪ್ತಿ

    ನವದೆಹಲಿ: ಪುಲ್ವಾಮ ದಾಳಿ ಮಾಡಿದ ಭಯೋತ್ಪಾದಕರಿಗೆ ಹಣ ನೀಡಿರುವ ಆರೋಪದ ಮೇಲೆ ಕಾಶ್ಮೀರದ 70 ಪ್ರತ್ಯೇಕತಾವಾದಿಗಳ ಆಸ್ತಿಗಳನ್ನು ಕೇಂದ್ರ ಸರ್ಕಾರ ಜಪ್ತಿ ಮಾಡಿದೆ. ಅಲ್ಲದೆ ಉಗ್ರರಿಗೆ ಬೆಂಬಲಿಸುವ ಎಲ್ಲಾ ಪ್ರತ್ಯೇಕವಾದಿಗಳ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

    ಹೌದು, ಫೆ. 14ರಂದು ನಡೆದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ ಈ ಪ್ರತ್ಯೇಕತಾವಾದಿಗಳು ಹಣ ನೀಡಿದ್ದರು. ಅಲ್ಲದೆ ಭಾರತದಲ್ಲೇ ಇದ್ದುಕೊಂಡು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಣವನ್ನು ನೀಡಿ ಬೆಂಬಲಿಸುತ್ತಿದ್ದರು ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಸೆಕ್ಷನ್ 42 ಸಂಬಂಧಿಸಿದಂತೆ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಈ ಆದೇಶವನ್ನು ಮಾಡಲಾಗಿದೆ. ದಿನಕ್ಕೊಂದು ಶಾಕ್ ನೀಡುತ್ತಿರುವ ಸರ್ಕಾರದ ನಡೆಗೆ ಪ್ರತ್ಯೇಕತಾವಾದಿಗಳು ಇದೀಗ ಕಂಗಾಲಾಗಿದ್ದಾರೆ.

    ಸೆಕ್ಷನ್ 42 ರ ಪ್ರಕಾರ, ಕೇಂದ್ರವು “ಸೆಕ್ಷನ್ 7, ಸೆಕ್ಷನ್ 8 ಈ ಎರಡು ಸೆಕ್ಷನ್ ಅಡಿಯಲ್ಲಿ ಬಳಸಿಕೊಳ್ಳಬಹುದಾದ ಎಲ್ಲಾ ಅಧಿಕಾರವನ್ನು ಪ್ರತಿನಿಧಿಸಬಹುದು”. ಸೆಕ್ಷನ್ 7ರಲ್ಲಿ ಕಾನೂನು ಬಾಹಿರ ಸಂಘದ ನಿಧಿ ಬಳಸುವುದನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವನ್ನು ನೀಡಲಾಗಿದೆ. ಹಾಗೆಯೇ ಸೆಕ್ಷನ್ 8ರ ಪ್ರಕಾರ ಕಾನೂನು ಬಾಹಿರ ಉದ್ದೇಶಕ್ಕಾಗಿ ಬಳಸಲಾಗುವ ಸ್ಥಳಗಳ ಮೇಲೆ ಕ್ರಮ ತೆಗೆದುಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಂಘಟನೆ ನಿಷೇಧ:
    ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳಿಗೆ ನೆರವು ನೀಡಿ ಯುವಕರಲ್ಲಿ ದೇಶ ವಿರೋಧಿ ಭಾವನೆ ಬಿತ್ತುತ್ತಿರುವ ಆರೋಪದ ಮೇರೆಗೆ ಕೇಂದ್ರ ಸರ್ಕಾರ ಜಮಾತ್-ಇ-ಇಸ್ಲಾಮಿ (ಜೆಇಐ) ಸಂಘಟನೆಯನ್ನು ನಿಷೇಧ ಮಾಡಿದೆ. ಕಾನೂನು ಬಾಹಿರ ಚಟುವಟಿಕೆ ಕಾಯ್ದೆ 1967ರ ಸೆಕ್ಷನ್ 3ರ ಅಡಿಯಲ್ಲಿ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿತ್ತು.

    ಮುಂದಿನ ಐದು ವರ್ಷಗಳ ಕಾಲ ಈ ಸಂಘಟನೆಯನ್ನು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ನಿಷೇಧಿಸಲಾಗಿದ್ದು, ಸಂಘಟನೆಯು ಯಾವುದೇ ರೀತಿಯ ಬಹಿರಂಗ ಸಭೆ ಕಾರ್ಯಕ್ರಮ ನಡೆಸಿದರೂ ಅದು ಕಾನೂನು ಬಾಹಿರ ಎಂದು ಸೂಚಿಸಿದೆ. 1953ರಲ್ಲಿ ಬಂದ ಜೆಇಐ ಸಂಘಟನೆ ಕಾಶ್ಮೀರದಲ್ಲಿ ಪ್ರಮುಖ ಪ್ರತ್ಯೇಕತಾವಾದಿ ಸಂಘಟನೆಯಾಗಿತ್ತು. 1987ರವರೆಗೂ ಈ ಸಂಘಟನೆ ಕಾಶ್ಮೀರದ ಎಲ್ಲ ರೀತಿಯ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿತ್ತು. ಅಲ್ಲದೆ ಕಾಶ್ಮೀರದ ಹುರಿಯತ್ ಮುಖಂಡ ಸೈಯ್ಯದ್ ಅಲಿ ಶಾ ಗಿಲಾನಿ ಕೂಡ ಈ ಹಿಂದೆ ಇದೇ ಸಂಘಟನೆ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1989ರಲ್ಲಿ ಮೊದಲ ಬಾರಿಗೆ ಉಗ್ರ ಸಂಘಟನೆಗಳೊಂದಿಗೆ ಕೈ ಜೋಡಿಸಿದ್ದ ಈ ಜೆಇಐ ಸಂಘಟನೆ ಚುನಾವಣೆಗಳಿಂದ ದೂರ ಉಳಿದಿತ್ತು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತ್ಯೇಕತಾವಾದಿಗಳ ಪರ ಕಣಿವೆ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ ಸರ್ಕಾರ ಪಾಕಿಸ್ತಾನಕ್ಕೆ ಗುರಿಮಾಡಿ ಮಾತಾಡೋದು ತಪ್ಪು: ಕಾಂಗ್ರೆಸ್ ವಕ್ತಾರ

    ಭಾರತ ಸರ್ಕಾರ ಪಾಕಿಸ್ತಾನಕ್ಕೆ ಗುರಿಮಾಡಿ ಮಾತಾಡೋದು ತಪ್ಪು: ಕಾಂಗ್ರೆಸ್ ವಕ್ತಾರ

    ವಿಜಯಪುರ: ಭಾರತ ಸರ್ಕಾರ ಪಾಕಿಸ್ತಾನಕ್ಕೆ ಗುರಿಮಾಡಿ ಮಾತಾಡುವುದು ತಪ್ಪು ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ ಪಾಟೀಲ್ ಗಣಿಹಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಾಕ್ ಹಾಗೂ ಕಾಶ್ಮೀರಿ ಭಯೋತ್ಪಾದಕರ ಪರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಘಟನೆಗೆ ಗೌರ್ನರ್ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅದರ ಕುರಿತು ಸಮಗ್ರ ತನಿಖೆ ಆಗಬೇಕು. ಕಳೆದ 30 ವರ್ಷಗಳಿಂದ ಕೂಡಾ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಹೀಗಾಗಿ ಅದರ ಮೂಲ ಎಲ್ಲಿದೆ ಎಂದು ಕುಂಡು ಹಿಡಿಯಬೇಕು. ಇದಲ್ಲದೆ ಕಳೆದ 4 ವರ್ಷಗಳ ಅವಧಿಯಲ್ಲಿ ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಾಗಿದೆ. ಮೊದಲು ಇವುಗಳ ಮೂಲ ಕಂಡು ಹಿಡಿಯಬೇಕು. ಅದನ್ನು ಹೊರತುಪಡಿಸಿ ಪಾಕ್ ಹಾಗೂ ಮುಸ್ಲೀಂರ ಮೇಲೆ ಬೊಟ್ಟು ಮಾಡಿ ತೋರಿಸುವುದರಿಂದ ಉಪಯೋಗವಿಲ್ಲ. ಭಾರತ ಸರ್ಕಾರ ಪಾಕಿಸ್ತಾನಕ್ಕೆ ಗುರಿಮಾಡಿ ಮಾತಾಡುವುದು ತಪ್ಪು ಎಂದು ಪಾಟೀಲ್ ಗಣಿಹಾರ್ ಹೇಳಿದ್ದಾರೆ.

    ಮಕ್ಕಳನ್ನ ಬಗಲಲ್ಲಿ ಇಟ್ಟುಕೊಂಡು ಬಂದು ಹೆಣ್ಣು ಮಕ್ಕಳು ಪೊಲೀಸರು ಮತ್ತು ಯೋಧರ ಮೇಲೆ ಕಲ್ಲು ತೂರುತ್ತಿದ್ದಾರೆ. ಅವರಿಗೂ ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟುತ್ತಿದ್ದೀರಿ. ಕೇವಲ ಹಣೆಪಟ್ಟಿ ಕಟ್ಟುವುದಲ್ಲ, ಯಾಕೆ ಮಕ್ಕಳನ್ನ ಕರೆದುಕೊಂಡು ಬರುತ್ತಿದ್ದಾರೆ, ಯಾಕೆ ಭಯೋತ್ಪಾದಕರು ಹೆಚ್ಚುಗುತ್ತಿದ್ದಾರೆ ಎಂಬುದನ್ನ ಕಂಡುಹಿಡಿಯಬೇಕು. ಕಾಶ್ಮೀರಿಗಳನ್ನ ಭಾರತೀಯರನ್ನಾಗಿ ಮಾಡಿದಾಗ ಇದಕ್ಕೆ ಪರಿಹಾರ ಇದೆ. ಭಾರತದಲ್ಲಿ ಧ್ವಜ ಹಿಡಿದುಕೊಂಡು ಓಡಾಡುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಎಸ್.ಎಂ ಪಾಟೀಲ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಅವರ ವಿರುದ್ಧ ದೂರು ದಾಖಲಿಸಲು ದೇಶಭಕ್ತರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಫ್ರಿದಿ ಹೇಳಿದ್ದು ಸರಿ, ಕಾಶ್ಮೀರ ಎಂದಿಗೂ ಭಾರತದದ್ದೇ: ರಾಜನಾಥ್ ಸಿಂಗ್

    ಅಫ್ರಿದಿ ಹೇಳಿದ್ದು ಸರಿ, ಕಾಶ್ಮೀರ ಎಂದಿಗೂ ಭಾರತದದ್ದೇ: ರಾಜನಾಥ್ ಸಿಂಗ್

    ನವದೆಹಲಿ: ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವ್ಯಕ್ತಪಡಿಸಿರುವ ಅಭಿಪ್ರಾಯ ಸರಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಚತ್ತೀಸ್‍ಗಢದ ರಾಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಅಫ್ರಿದಿ ಹೇಳಿಕೆ ಸರಿಯಾಗಿದ್ದು, ಪಾಕಿಸ್ತಾನಕ್ಕೆ ತನ್ನ ಬಳಿ ಇರುವ 4 ಪ್ರಾಂತ್ಯಗಳನ್ನೇ ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಇನ್ನು ಕಾಶ್ಮೀರವನ್ನು ಹೇಗೆ ನೋಡಿಕೊಳ್ಳುತ್ತದೆ? ಕಾಶ್ಮೀರ ಎಂದಿಗೂ ಭಾರತದ ಭಾಗವಾಗಿರುತ್ತದೆ ಎಂದು ಹೇಳಿದರು.

    ಶಾಹಿದ್ ಅಫ್ರಿದಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬ್ರಿಟಿಷ್ ಪಾರ್ಲಿಮೆಂಟ್ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದ್ದು, ಈ ಹೇಳಿಕೆ ಪಾಕಿಸ್ತಾನದ ಹೊಸ ಸರ್ಕಾರಕ್ಕೆ ತೀವ್ರ ಮುಜುಗರ ಆಗುವಂತೆ ಮಾಡಿತ್ತು.

    ಪಾಕಿಸ್ತಾನವನ್ನು ಒಗ್ಗೂಡಿಸುವಲ್ಲಿ ಇಮ್ರಾನ್ ಖಾನ್ ವಿಫಲರಾಗಿದ್ದಾರೆ. ದೇಶದ ನಾಗರೀಕರನ್ನು ಉಗ್ರರಿಂದ ರಕ್ಷಿಸಲು ಸರ್ಕಾರ ವಿಫಲವಾಗಿದೆ. ಹೀಗಾಗಿ ಕಾಶ್ಮೀರ ಪಾಕಿಸ್ತಾನಕ್ಕೆ ಅಗತ್ಯವಿಲ್ಲ. ಕಾಶ್ಮೀರ ಒಂದು ಸ್ವತಂತ್ರ ದೇಶವಾಗಬೇಕು. ಆ ಮೂಲಕ ಮಾನವೀಯತೆ ಉಳಿಯಬೇಕು. ಕಾಶ್ಮೀರದಲ್ಲಿ ಜನರು ಸಾಯಬಾರದು. ಅಲ್ಲಿನ ಜನ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಬಿಡಬೇಕು. ಹೀಗಾಗಿ ಜಾತಿ ಯಾವುದೇ ಆಗಿದ್ದರೂ, ಮೊದಲು ಮಾನವೀಯತೆ ಮುಖ್ಯವಾಗಬೇಕು. ಅಲ್ಲದೇ ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳಿಗೆ ಪೂರ್ಣವಿರಾಮ ಬೀಳಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತನ್ನ ಪ್ರಾಂತ್ಯಗಳನ್ನೇ ನೋಡಿಕೊಳ್ಳಲಾಗದ ಪಾಕಿಸ್ತಾನಕ್ಕೆ, ಕಾಶ್ಮೀರ ಬೇಕಾ: ಶಾಹಿದ್ ಅಫ್ರಿದಿ

    ತನ್ನ ಪ್ರಾಂತ್ಯಗಳನ್ನೇ ನೋಡಿಕೊಳ್ಳಲಾಗದ ಪಾಕಿಸ್ತಾನಕ್ಕೆ, ಕಾಶ್ಮೀರ ಬೇಕಾ: ಶಾಹಿದ್ ಅಫ್ರಿದಿ

    ಲಂಡನ್: ಪಾಕಿಸ್ತಾನಕ್ಕೆ ತನ್ನ ನಾಲ್ಕು ಪ್ರಾಂತ್ಯಗಳನ್ನೇ ಸರಿಯಾಗಿ ನೋಡಿಕೊಳ್ಳದೇ ಇರುವಾಗ, ಕಾಶ್ಮೀರದ ಅವಶ್ಯಕತೆ ಇದೆಯೇ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪ್ರಧಾನಿ ಇಮ್ರಾನ್ ಖಾನ್‍ಗೆ ಪ್ರಶ್ನಿಸಿದ್ದಾರೆ.

    ಯುನೈಟೆಡ್ ಕಿಂಗ್ಡಮ್ ನ ಬ್ರಿಟಿಷ್ ಸಂಸತ್ತಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಮಾತನಾಡಿದ ಅವರು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರಕ್ಕಾಗಿ ಒತ್ತಾಯ ಮಾಡುವುದು ಸರಿಯಲ್ಲ. ಪ್ರಧಾನಿ ಇಮ್ರಾನ್ ಗೆ ಪಾಕಿಸ್ತಾನದ ಬಲೂಚಿಸ್ತಾನ, ಪಂಜಾಬ್, ಸಿಂಧ್ ಹಾಗೂ ಖೈಬರ್ ಪ್ರಾಂತ್ಯಗಳನ್ನೇ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಕಾಶ್ಮೀರಕ್ಕಾಗಿ ಆಗ್ರಹಿಸುವುದು ಉತ್ತಮವಲ್ಲವೆಂದು ಹೇಳಿದ್ದಾರೆ.

    ಪಾಕಿಸ್ತಾನವನ್ನು ಒಗ್ಗೂಡಿಸುವಲ್ಲಿ ಇಮ್ರಾನ್ ಖಾನ್ ವಿಫಲರಾಗಿದ್ದಾರೆ. ದೇಶದಲ್ಲಿರುವ ನಾಗರೀಕರನ್ನು ಉಗ್ರಗಾಮಿಗಳಿಂದ ಸುರಕ್ಷಿತವಾಗಿ ರಕ್ಷಿಸಲೂ ಸಹ ಅವರ ಸರ್ಕಾರ ವಿಫಲವಾಗಿದೆ. ಹೀಗಾಗಿ ಪಾಕಿಸ್ತಾನಕ್ಕೆ ಕಾಶ್ಮೀರದ ಅಗತ್ಯವೂ ಇಲ್ಲ. ಅಲ್ಲದೇ ಕಾಶ್ಮೀರವನ್ನು ಭಾರತಕ್ಕೂ ಕೊಡಬಾರದು ಎಂದು ತಿಳಿಸಿದ್ದಾರೆ.

    ಕಾಶ್ಮೀರವನ್ನು ಪ್ರತ್ಯೇಕ ದೇಶವನ್ನಾಗಿ ಮಾಡಬೇಕು. ಅಲ್ಲಿನ ಜನ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಬಿಡಬೇಕು. ಹೀಗಾಗಿ ಜಾತಿ ಯಾವುದೇ ಆಗಿದ್ದರೂ, ಮೊದಲು ಮಾನವೀಯತೆ ಮುಖ್ಯವಾಗೇಕು. ಅಲ್ಲದೇ ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳಿಗೆ ಪೂರ್ಣವಿರಾಮ ಬೀಳಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.

    ಈ ಹಿಂದೆ ಭಾರತದ ವಿರುದ್ಧ ಹೇಳಿಕೆ ನೀಡಿದ್ದ ಅಫ್ರಿದಿ:
    2018ರ ಏಫ್ರಿಲ್ ನಲ್ಲಿ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಕರೆಯುವ ಮೂಲಕ ಅಫ್ರಿದಿ ಉದ್ಧಟತನ ತೋರಿದ್ದರು. ಅಲ್ಲದೇ ತಮ್ಮ ಟ್ವಿಟ್ಟರಿನಲ್ಲಿ ಭಾರತ ಆಕ್ರಮಿತ ಕಾಶ್ಮೀರದಲ್ಲಿ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದ್ದು, ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಅಲ್ಲಿನ ಮುಕ್ತ ಧ್ವನಿ ಹಾಗೂ ಸ್ವಾತಂತ್ರ್ಯ ಮನೋಭಾವ ಹೊಂದಿರುವ ಮುಗ್ಧರನ್ನು ಹತ್ಯೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ವಿಶ್ವಸಂಸ್ಥೆ ಮತ್ತು ಆದರ ಇತರೆ ಅಂಗ ಸಂಸ್ಥೆಗಳು ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಯಾವ ಕ್ರಮವನ್ನು ಕ್ರಮಗೊಂಡಿದೆ ಎಂದು ಪ್ರಶ್ನಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews