Tag: kashmir

  • ಕಾಶ್ಮೀರದ ಪರಿಸ್ಥಿತಿಗೆ ಬೇಸತ್ತು ಐಎಎಸ್ ಅಧಿಕಾರಿ ರಾಜೀನಾಮೆ

    ಕಾಶ್ಮೀರದ ಪರಿಸ್ಥಿತಿಗೆ ಬೇಸತ್ತು ಐಎಎಸ್ ಅಧಿಕಾರಿ ರಾಜೀನಾಮೆ

    ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಬೇಸತ್ತು ಕೇರಳ ಮೂಲದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ.

    ದಾದ್ರಾ ಮತ್ತು ನಗರ ಹವೇಲಿಯ ಪ್ರಮುಖ ಇಲಾಖೆಗಳ ಕಾರ್ಯದರ್ಶಿಯಾಗಿ ಗೋಪಿನಾಥನ್ ಕಾರ್ಯ ನಿರ್ವಹಿಸಿದ್ದರು. ಉತ್ತಮ ಸೇವೆ ನೀಡಿ ಮೆಚ್ಚುಗೆ ಪಡೆದಿದ್ದ ಗೋಪಿನಾಥನ್ ಅವರು ಈಗ ಕೇಂದ್ರ ಸರ್ಕಾರದ ನಡೆಗೆ ಬೇಸತ್ತಿದ್ದಾರೆ. ಏಳು ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿದ್ದ ಗೋಪಿನಾಥನ್ ಆಗಸ್ಟ್ 21ರಂದು ತಮ್ಮ ರಾಜೀನಾಮೆಯನ್ನು ನೀಡಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ರಾಜೀನಾಮೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಸುಮಾರು 20 ದಿನಗಳಿಂದ ಕಾಶ್ಮೀರಿಯರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿರುವುದು ಬೇಸರವಾಗಿದೆ. ಈ ಬಗ್ಗೆ ಧ್ವನಿಯತ್ತಲು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

    ಜಮ್ಮು ಮತ್ತು ಕಾಶ್ಮೀರದಲ್ಲಿ ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು 20 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಅನೇಕ ಭಾರತೀಯರಿಗೆ ಇದು ಸರಿಯಾದ ನಿರ್ಧಾರ ಅನಿಸಬಹುದು. 370 ನೇ ವಿಧಿ ರದ್ದುಪಡಿಸುವುದು ಸಮಸ್ಯೆಯಲ್ಲ, ಆದರೆ ಇದಕ್ಕೆ ನಾಗರಿಕರು ಪ್ರತಿಕ್ರಿಯಿಸುವ ಹಕ್ಕನ್ನು ನಿರಾಕರಿಸುವುದು ಸರಿಯಲ್ಲ. ಕೇಂದ್ರದ ನಡೆಯನ್ನು ಅನುಸರಿಸುವುದು ಅಥವಾ ಪ್ರತಿಭಟಿಸುವುದು ಅವರ ಹಕ್ಕು. ಆದ್ರೆ ಆ ಹಕ್ಕನ್ನೇ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಗೋಪಿನಾಥನ್ ಹೇಳಿದರು.

    ಇದು 1970 ಅಲ್ಲ, ಆಗ ತುರ್ತು ಪರಿಸ್ಥಿತಿ ಘೋಷಿಸಿದಾಗ ಮೂಲಭೂತ ಹಕ್ಕುಗಳ ಬಗ್ಗೆ ಯಾರೂ ಪ್ರಶ್ನಿಸಿರಲಿಲ್ಲ. ಆದರೆ ಇದು 2019, ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು ಸುಲಭದ ಮಾತಲ್ಲ. ಅದನ್ನು ವಿರೋಧಿಸಿ ಧ್ವನಿ ಎತ್ತುವ ಮಂದಿ ಸಾಕಷ್ಟಿದ್ದಾರೆ. ಸರ್ಕಾರಿ ಹುದ್ದೆಯಲಿದ್ದರೆ ಕಾಶ್ಮೀರಿಯರ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವ ಹಕ್ಕು ನಮಗಿರುವುದಿಲ್ಲ. ನಾವು ವಿರೋಧಿಸಿದರೆ ಕ್ರಮ ತೆಗೆದುಕೊಳ್ಳುತ್ತಾರೆ. ಹೀಗಾಗಿ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಒಂದು ವೇಳೆ ನಾನು ಪತ್ರಿಕೆಯನ್ನು ಶುರುಮಾಡಿದರೆ. ನಾಳೆಯ ನನ್ನ ಶೀರ್ಷಿಕೆ ಕೇವಲ 20 ಸಂಖ್ಯೆಗೆ ಸೀಮಿತವಾಗಿರುತ್ತದೆ. ಯಾಕೆಂದರೆ ಕಾಶ್ಮೀರಿಯರು 20 ದಿನಗಳಿಂದ ನಿರ್ಬಂಧಗಳ ನಡುವೆ ಜೀವನ ನಡೆಸುತ್ತಿದ್ದಾರೆ ಎಂದರು.

    ಹಾಗೆಯೇ ಮುಂದಿನ ಜೀವನದ ಬಗ್ಗೆ ಯೋಚಿಸಿಲ್ಲ. ನಾನು ಕೇಂದ್ರದ ನಡೆ ವಿರುದ್ಧ ಹೆಚ್ಚೇನು ಹೋರಾಡಿಲ್ಲ, ಆದರೆ ಮುಂದಿನ 20 ವರ್ಷಗಳ ನಂತರ ಯಾರಾದರೂ ವಾಸ್ತವ ತುರ್ತು ಪರಿಸ್ಥಿತಿಯಲ್ಲಿ ನೀವೇನು ಮಾಡಿದ್ದೀರಾ? ಎಂದು ಪ್ರಶ್ನಿಸಿದರೆ, ನಾನು ಆಗ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದೆ ಎನ್ನುತ್ತೇನೆ ಎಂದು ಪ್ರತಿಕ್ರಿಯಿಸಿದರು.

  • ಕಾಶ್ಮೀರದಿಂದ ಬಂದ ಇಬ್ಬರು ಶಂಕಿತ ವ್ಯಕ್ತಿಗಳ ಅರೆಸ್ಟ್

    ಕಾಶ್ಮೀರದಿಂದ ಬಂದ ಇಬ್ಬರು ಶಂಕಿತ ವ್ಯಕ್ತಿಗಳ ಅರೆಸ್ಟ್

    ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲು.ಎಚ್.ಓ) ಡೈರಕ್ಟರ್ ಎಂದು ಹೇಳಿಕೊಂಡು ಓಡಾಡುತ್ತಿದ್ದ ಇಬ್ಬರು ಕಾಶ್ಮೀರ ಮೂಲದ ಶಂಕಿತ ವ್ಯಕ್ತಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಪಾಕ್‍ನ ಗಡಿ ಜಿಲ್ಲೆ ಗಂದರ್ಬಲ್ ಗಂಜೀಪುರ್ ನಿವಾಸಿ ಶೌಕತ್ ಆಲಿ (28) ಮತ್ತು ಆತನ ಡ್ರೈವರ್ ಎಂದು ಹೇಳಿಕೊಂಡಿದ್ದ ಬಲ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತರು ಡಬ್ಲು.ಎಚ್.ಓ ನಿರ್ದೇಶಕ ಎಂದು ಬೋರ್ಡ್ ಹಾಕಿಕೊಂಡು ಐಷಾರಾಮಿ ಕಾರಲ್ಲಿ ತಿರುಗಾಡುತ್ತಿದ್ದರು ಎನ್ನಲಾಗಿದೆ.

    ಕಾರಿನಲ್ಲಿದ್ದ ಬೋರ್ಡ್ ಬಗ್ಗೆ ಸಂಶಯ ಬಂದು ಆಗಸ್ಟ್ 17 ರಂದು ಇವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಶೌಕತ್ ಅಲಿ ಮುಂಬೈ ಮೂಲದ ಡಾ. ಬಸೀತ್ ಷಾ ಎಂಬ ಹೆಸರಲ್ಲಿ ಮ್ಯಾಟ್ರಿಮೊನಿಗೆ ನೋಂದಣಿ ಮಾಡುತ್ತಿದ್ದ. ನಂತರ ಮ್ಯಾಟ್ರಿಮೋನಿಯಲ್ ಸೈಟಿನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆಯಾಗಿ ಬಳಿಕ ದುಬೈಗೆ ತೆರಳಿ, ಉಗ್ರರಿಗೆ ಯುವತಿಯರನ್ನು ಮಾರುತ್ತಿದ್ದ ಎಂದು ಹೇಳಲಾಗಿದೆ.

    ಗೋವಾ, ಬೆಳಗಾವಿ, ಮುಂಬೈ, ಜೈಪುರ, ಕೋಲ್ಕತ್ತಾ ಮತ್ತು ಹೈದರಾಬಾದ್ ಸೇರಿ ದೇಶಾದ್ಯಂತ ಲಿಂಕ್ ಇರುವ ಶೌಕತ್ ಅಲಿ, ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿ ಯುವತಿಯರನ್ನು ಜಾಲಕ್ಕೆ ಬೀಳಿಸುತ್ತಿದ್ದ ಎಂದು ಶಂಕಿಸಲಾಗಿದೆ. ಈ ವಿಚಾರವಾಗಿಯೇ ಯುವತಿಯೊಬ್ಬಳ ಸಂಪರ್ಕಿಸಲು ಮಂಗಳೂರಿಗೆ ಬಂದಿದ್ದಾಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕಾರು ಚಾಲಕ ಬಲ್ವಿಂದರ್ ಸಿಂಗ್ ಸಹಿತ ಶೌಕತ್ ಆಲಿಯ ತೀವ್ರ ವಿಚಾರಣೆಯನ್ನು ಎನ್‍ಐಎ ಸೇರಿದಂತೆ ದೇಶದ ವಿವಿಧ ಏಜೆನ್ಸಿಗಳು ಮಾಡುತ್ತಿವೆ ಎಂದು ಮಂಗಳೂರು ಕಮಿಷನರ್ ಡಾ. ಪಿ.ಎಸ್ ಹರ್ಷ ಹೇಳಿದ್ದಾರೆ.

  • ಪಾಕ್ ಐಸಿಯುನಲ್ಲಿದೆ, ಕಾಶ್ಮೀರ ಬಿಟ್ಟು ಇಮ್ರಾನ್ ಖಾನ್ ಅದರ ಬಗ್ಗೆ ಯೋಚಿಸಲಿ: ಶಿವಸೇನೆ

    ಪಾಕ್ ಐಸಿಯುನಲ್ಲಿದೆ, ಕಾಶ್ಮೀರ ಬಿಟ್ಟು ಇಮ್ರಾನ್ ಖಾನ್ ಅದರ ಬಗ್ಗೆ ಯೋಚಿಸಲಿ: ಶಿವಸೇನೆ

    ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದುಪಡಿಸಿರುವ ಬಗ್ಗೆ ಶಿವಸೇನೆ ಸೋಮವಾರ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ವಾಗ್ಧಾಳಿ ನಡೆಸಿದೆ. ಪಾಕಿಸ್ತಾನ ಐಸಿಯುನಲ್ಲಿದೆ, ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಚಿಂತೆ ಬಿಟ್ಟು ತಮ್ಮ ದೇಹದ ಬಗ್ಗೆ ಯೋಚಿಸಲಿ ಎಂದು ಟಾಂಗ್ ಕೊಟ್ಟಿದೆ.

    ಪಾಕಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ ಈಗಾಗಲೇ ದೇಶ ತೀವ್ರ ನಿಗಾ ಘಟಕದಲ್ಲಿದೆ(ಐಸಿಯು). ಹೀಗಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಮೇಲೆ ಕೇಂದ್ರೀಕರಿಸುವ ಬದಲು ತಮ್ಮ ದೇಶದ ಸಮಸ್ಯೆ ಬಗೆಹರಿಸುವ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂದು ಎನ್‍ಡಿಎ ಘಟಕದ ಭಾಗವಾಗಿರುವ ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಪ್ರಕಟಿಸಿ ವ್ಯಂಗ್ಯವಾಡಿದೆ.

    ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ನಡೆಯನ್ನು ತಡೆಯಲು ಚೀನಾ ಮತ್ತು ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‍ಎಸ್‍ಸಿ) ಮೊರೆ ಹೋಗಿತ್ತು. ಆದರೆ ಈ ಪ್ರಯತ್ನ ವಿಫಲವಾದ ಕಾರಣಕ್ಕೆ ಶಿವಸೇನಾ ಸಂಪಾದಕೀಯದಲ್ಲಿ ಎರಡೂ ದೇಶಗಳ ಬಗ್ಗೆ ಅಪಹಾಸ್ಯ ಮಾಡಿದೆ. ಯುಎನ್‍ಎಸ್‍ಸಿಯಲ್ಲಿ ನಡೆದ ಕ್ಲೋಸ್ ಡೋರ್ ಸಭೆಯನ್ನು ಉಲ್ಲೇಖಿಸಿ ಶಿವಸೇನೆ ಎರಡೂ ದೇಶಗಳ ಕಾಲೆಳೆದಿದೆ. ಜೊತೆಗೆ ಕೇಂದ್ರದ ನಡೆಯನ್ನು ಶ್ಲಾಘಿಸಿದೆ.

    ಈ ಹಿಂದೆ ಪಾಕಿಸ್ತಾನದ ಪರವಾಗಿ ರ್ಯಾಲಿ ಮಾಡುವ ಮೂಲಕ ಚೀನಾಕ್ಕೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮುಜುಗರವಾಗಿತ್ತು. ಪಾಕಿಸ್ತಾನವು ಕಾಶ್ಮೀರದ ವಿಷಯದಲ್ಲಿ ಸ್ವಯಂ ಹಾನಿ ಮಾಡುವ ಅಭ್ಯಾಸವನ್ನು ಹೊಂದಿದೆ. ಹೀಗಾಗಿ ಯುಎನ್‍ಎಸ್‍ಸಿಯಲ್ಲಿ ಅದರ ವಿನಂತಿಯನ್ನು ರದ್ದುಗೊಳಿಸಿದರೂ, ಪಾಕ್ ಭಯ ಪಡುತ್ತಿದೆ ಮತ್ತು ದುಃಖಿಸುತ್ತಿದೆ. ಪಾಕಿಸ್ತಾನದ ಬೆದರಿಕೆ ‘ಟೊಳ್ಳು’ ಎಂದು ಶಿವಸೇನೆ ಟೀಕಿಸಿದೆ.

    ಯುಎಸ್‍ನಿಂದ ಹೊಡೆತ ತಿಂದಿದ್ದರೂ, ಪಾಕಿಸ್ತಾನವು ಕಂಬದಿಂದ ಪೋಸ್ಟ್ ಗೆ ಚೀನಾ ಒದಗಿಸಿದ ‘ಆಮ್ಲಜನಕ’ ದಿಂದಾಗಿ ಓಡುತ್ತಿದೆ. ವಿಶ್ವಾದ್ಯಂತ ಕಾಶ್ಮೀರ ಸಮಸ್ಯೆಗಳನ್ನು ಹೆಚ್ಚಿಸುವ ಬದಲು ಪಾಕ್‍ನಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಬಡತನ ಮತ್ತು ಕಳಪೆ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಪ್ರಧಾನಿ ತಲೆಕೆಡಿಸಿಕೊಳ್ಳಬೇಕೆಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

  • 370ನೇ ವಿಧಿ ರದ್ದು ಬೆಂಬಲಿಸಿ, ಸ್ವಪಕ್ಷದ ವಿರುದ್ಧವೇ ಗುಡುಗಿದ ‘ಕೈ’ ಕಟ್ಟಾಳು ಹೂಡಾ

    370ನೇ ವಿಧಿ ರದ್ದು ಬೆಂಬಲಿಸಿ, ಸ್ವಪಕ್ಷದ ವಿರುದ್ಧವೇ ಗುಡುಗಿದ ‘ಕೈ’ ಕಟ್ಟಾಳು ಹೂಡಾ

    ನವದೆಹಲಿ: ಭಾರತ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದನ್ನು ಕಾಂಗ್ರೆಸ್ ಕಟ್ಟಾಳು, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲದೆ ಸ್ವಪಕ್ಷದ ವಿರುದ್ಧವೇ ಗುಡುಗಿದ್ದಾರೆ.

    ಹರ್ಯಾಣದ ರೋಹ್ಟಕ್‍ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಸರ್ಕಾರ ಸರಿಯಾದ ನಿರ್ಧಾರವನ್ನೇ ಕೈಗೊಂಡಿದೆ. ನಾವು ಅದನ್ನು ಒಪ್ಪಿಕೊಳ್ಳಬೇಕು. ಆದರೆ ಈ ನಿರ್ಧಾರವನ್ನು ನಮ್ಮ ಹಲವು ಸಹೋದ್ಯೋಗಿಗಳು ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

    ನನ್ನ ಪಕ್ಷ ಕಾಂಗ್ರೆಸ್ ಸಣ್ಣ ಪ್ರಮಾಣದಲ್ಲಿ ದಾರಿ ತಪ್ಪಿದೆ. ಇದು ಹಳೇ ಕಾಂಗ್ರೆಸ್ ಆಗಿ ಉಳಿದಿಲ್ಲ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿಗಳ ಜೊತೆಗೆ ನಾನು ಬೆಂಬಲ ನೀಡುವುದಿಲ್ಲ. ದೇಶಭಕ್ತಿ, ಆತ್ಮಗೌರವದ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ.

    ಹರ್ಯಾಣ ವಿಧಾನಸಭಾ ಚುನಾವಣೆಯು ಇದೇ ವರ್ಷ ನವೆಂಬರ್ ನಲ್ಲಿ ನಡೆಯಲಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ಪ್ರಜಾರ ಆರಂಭಿಸಿವೆ. ಈ ಬೆನ್ನಲ್ಲೇ ಭೂಪೇಂದ್ರ ಸಿಂಗ್ ಹೂಡಾ ಅವರು ಸ್ವಪಕ್ಷ ಕಾಂಗ್ರೆಸ್ ವಿರುದ್ಧವೇ ಕಿಡಿಕಾರಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಹರ್ಯಾಣದಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಹಾಗೂ ವಿವಿಧ ಹುದ್ದೆ ನಿಭಾಯಿಸಿರುವ ಭೂಪೇಂದ್ರ ಸಿಂಗ್ ಹೂಡಾ ಅವರು 4 ದಶಕಗಳಿಂದ ಕಾಂಗ್ರೆಸ್‍ನಲ್ಲಿದ್ದಾರೆ.

    ಈ ಹಿಂದೆ ಕಾಂಗ್ರೆಸ್‍ನ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅವರು, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತೇನೆ. ಈ ಮೂಲಕ ಭಾರತವು ಸಂಪೂರ್ಣ ಏಕೀಕರಣವಾಗಲಿದೆ. ಆದರೆ ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಚೆನ್ನಾಗಿರುತ್ತಿತ್ತು. ಆಗ ಯಾವುದೇ ಪ್ರಶ್ನೆಗಳನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಅದೇನೇ ಇದ್ದರೂ, ಇದು ನಮ್ಮ ದೇಶದ ಹಿತಾಸಕ್ತಿ ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  • ಪಿಓಕೆ ಬಗ್ಗೆ ಮಾತ್ರ ಮಾತುಕತೆ: ಪಾಕಿಸ್ತಾನವನ್ನ ಕುಟುಕಿದ ರಾಜನಾಥ್ ಸಿಂಗ್

    ಪಿಓಕೆ ಬಗ್ಗೆ ಮಾತ್ರ ಮಾತುಕತೆ: ಪಾಕಿಸ್ತಾನವನ್ನ ಕುಟುಕಿದ ರಾಜನಾಥ್ ಸಿಂಗ್

    ನವದೆಹಲಿ: ಭಾರತ ಮತ್ತು ಪಾಕ್ ಮಧ್ಯೆ ಮಾತುಕತೆ ನಡೆಯುವುದಾದರೆ ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರದ (ಪಿಓಕೆ) ಬಗ್ಗೆ ಮಾತ್ರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನವನ್ನು ಕುಟುಕಿದ್ದಾರೆ.

    ಹರ್ಯಾಣದ ಕಲ್ಕಾದಲ್ಲಿ ನಡೆದ ‘ಜನ ಆಶೀರ್ವಾದ ಯಾತ್ರೆ’ಯಲ್ಲಿ ಮಾತನಾಡಿದ ಅವರು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ. ಈ ನಿರ್ಧಾರ ತಪ್ಪು ಅಂತ ಪಾಕಿಸ್ತಾನವು ವಿಶ್ವಸಂಸ್ಥೆಗೆ ದೂರು ನೀಡಿದೆ. ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

    ಹರ್ಯಾಣದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯು ಜನ ಆಶೀರ್ವಾದ ಯಾತ್ರೆಯನ್ನು ಕೈಗೊಂಡಿದೆ. ಈ ಯಾತ್ರೆಯು ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸೆಪ್ಟೆಂಬರ್ 8ರಂದು ರೊಹ್ಟಕ್‍ನಲ್ಲಿ ಮುಕ್ತಾಯವಾಗಲಿದೆ. ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಮತ್ತು ಸಂಪುಟ ಸಚಿವರು ಯಾತ್ರೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ನಮ್ಮ ನೆರೆರಾಷ್ಟ್ರದಂತವರು ಮತ್ಯಾರಿಗೂ ಸಿಗದಿರಲಿ: ಪಾಕ್ ವಿರುದ್ಧ ರಾಜನಾಥ್ ಸಿಂಗ್ ಕಿಡಿ

    ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ಕ್ರಮವನ್ನು ವಿರೋಧಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಮೆಟ್ಟಿಲೇರಿತ್ತು. ಈ ವಿಚಾರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಗೌಪ್ಯ ಸಭೆ ನಡೆಸಲಾಗಿತ್ತು. ಈ ವೇಳೆ ದೂರು ಸಲ್ಲಿಸಿದ್ದ ಪಾಕಿಸ್ತಾನವು ಭಾರೀ ಮುಖಭಂಗ ಅನುಭವಿಸಿದೆ.

    ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಭಾರತದ ಆಂತರಿಕ ವಿಷಯ. ಆ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೂ ಚೀನಾ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸುತ್ತಿದೆ. ಚೀನಾ ಅಭಿಪ್ರಾಯವು ಜಾಗತಿಕ ಅಭಿಪ್ರಾಯವಲ್ಲ ಎಂದು ತಿಳಿಸಿದ್ದರು.

    ಒಟ್ಟು 5 ಪ್ರಶ್ನೆಗಳಿಗೆ ಉತ್ತರಿಸಿದ ಅಕ್ಬರುದ್ದೀನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಪಾಕ್ ಪತ್ರಕರ್ತರಿಗೆ ಶೇಕ್ ಹ್ಯಾಂಡ್ ಮಾಡಿ ವ್ಯಂಗ್ಯವಾಗಿ ಕುಟುಕಿದ ವಿಡಿಯೋಗೆ ಭಾರತೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  • 370 ವಿಧಿ ರದ್ದು- ಪಾಕ್ ಮನವಿಯಂತೆ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆ

    370 ವಿಧಿ ರದ್ದು- ಪಾಕ್ ಮನವಿಯಂತೆ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆ

    ನವದೆಹಲಿ: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಈ ಸಂಬಂಧ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ ನಡೆಯಲಿದೆ.

    ಜಮ್ಮು ಮತ್ತು ಕಾಶ್ಮೀರ ವಿಚಾರ ತುಂಬಾ ಸೂಕ್ಷ್ಮವಾದ ವಿಚಾರವಾದ ಕಾರಣ. ಈ ವಿಚಾರ ಕುರಿತು ಆಗಸ್ಟ್ 16ರಂದು ನಾಲ್ಕು ಗೋಡೆಗಳ ಮಧ್ಯೆ ರಹಸ್ಯವಾಗಿ ಚರ್ಚಿಸಲಾಗುವುದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದು-ರಾಜ್ಯಸಭೆಯಲ್ಲಿ ಅಮಿತ್ ಶಾ ಘೋಷಣೆ

    ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತು ಸಭೆ ಕರೆಯುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ಹೇಳಿದ್ದಾರೆ. ಈ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ ನಡೆಸಲಾಗುತ್ತಿದೆ.

  • ಕಾಶ್ಮೀರದ ಬಳಿಕ ಪಾಕಿಸ್ತಾನವೇ ಭಾರತದ ಟಾರ್ಗೆಟ್: ಇಮ್ರಾನ್ ಖಾನ್ ಆತಂಕ

    ಕಾಶ್ಮೀರದ ಬಳಿಕ ಪಾಕಿಸ್ತಾನವೇ ಭಾರತದ ಟಾರ್ಗೆಟ್: ಇಮ್ರಾನ್ ಖಾನ್ ಆತಂಕ

    – ಹಿಂದೂ ಪ್ರಾಬಲ್ಯದ ಆರ್‌ಎಸ್‌ಎಸ್‌ಗೆ ಸಿದ್ಧಾಂತಕ್ಕೆ ಹೆದರುತ್ತೇನೆ

    ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಬಳಿಕ ಪಾಕಿಸ್ತಾನವೇ ಭಾರತದ ಟಾರ್ಗೆಟ್ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.

    ಜಮ್ಮು-ಕಾಶ್ಮೀರಕ್ಕೆ ನೀಡಿಲಾಗಿದ್ದ ವಿಶೇಷ ಸ್ಥಾನವನ್ನು ರದ್ದು ಮಾಡಿದ್ದನ್ನು ಪ್ರಶ್ನಿಸಿ ಪಾಕ್ ಪ್ರಶ್ನಿಸಿ ಭಾರತ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿತ್ತು. ಬಳಿಕ ಚೀನಾ ಬೆಂಬಲವನ್ನು ಪಡೆದು ಭಾರತದ ಮೇಲೆ ಒತ್ತಡಲು ಯತ್ನಿಸಿದ್ದ ಇಮ್ರಾನ್ ಖಾನ್ ಅವರು ಈಗ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಇದನ್ನು ಓದಿ: ವಿಶ್ವಸಂಸ್ಥೆಯ ಮೊರೆ ಹೋಗಿದ್ದ ಪಾಕಿಗೆ ಭಾರೀ ಮುಖಭಂಗ

    ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್ ಅವರು, ನಾಜಿ ಸಿದ್ಧಾಂತದಿಂದ ಪ್ರೇರಿತವಾದ ಆರ್‌ಎಸ್‌ಎಸ್‌ನಿಂದ ಕರ್ಫ್ಯೂ, ದಮನ ಮತ್ತು ಕಾಶ್ಮೀರಿಗಳ ನರಮೇಧವು ತೆರೆದುಕೊಳ್ಳುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ, “ಜನಾಂಗೀಯ ಶುದ್ಧೀಕರಣದ ಮೂಲಕ ಕಾಶ್ಮೀರದ ಜನಸಂಖ್ಯೆಯನ್ನು ಬದಲಾಯಿಸುವ ಪ್ರಯತ್ನ ನಡೆದಿದೆ. ಮ್ಯೂನಿಚ್‍ನಲ್ಲಿ ಹಿಟ್ಲರ್ ಮಾಡಿದನ್ನು ಜಗತ್ತು ಮತ್ತೆ ನೋಡುತ್ತದೆಯೇ” ಎಂದು ಪ್ರಶ್ನಿಸಿರುವ ಇಮ್ರಾನ್ ಖಾನ್ ಅವರು, ಎರಡನೇ ಮಹಾಯುದ್ಧದ ಆರಂಭವನ್ನು ನೆನೆದು ಭಾರತದ ಮೇಲೆ ಅಸ್ತ್ರ ಪ್ರಯೋಗ ಮಾಡಿದ್ದಾರೆ.

    “ನಾಜಿ ಪ್ರಾಬಲ್ಯವನ್ನು ಅನುಸರಿಸುತ್ತಿರುವ ಹಿಂದೂ ಪ್ರೇರಿತ ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ನಾನು ಹೆದರುತ್ತೇನೆ. ಈ ಸಿದ್ಧಾಂತವು ಭಾರತದಲ್ಲಿ ಮುಸ್ಲಿಮರನ್ನು ನಿಗ್ರಹಿಸಲು ಮತ್ತು ಅಂತಿಮವಾಗಿ ಪಾಕಿಸ್ತಾನವನ್ನು ಗುರಿಯಾಗಿಸಲು ಮುಂದಾಗುತ್ತದೆ. ಹಿಂದೂ ಸರ್ವೋತ್ತಮ ವಾದವು ಹಿಟ್ಲರ್ ಮತ್ತೊಂದು ಆವೃತ್ತಿ” ಎಂದು ಟ್ವೀಟ್ ಮಾಡಿದ್ದಾರೆ.

  • ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

    ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

    ಶ್ರೀನಗರ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಫೋನ್ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆ ಮತ್ತೆ ಆರಂಭವಾಗಿದೆ.

    ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಏನಾದರೂ ಹಿಂಸಾಚಾರ ನಡೆಯಬಹುದೆಂದು ಭದ್ರತಾ ಸಿಬ್ಬಂದಿ ಕಣಿವೆ ರಾಜ್ಯದ ಎಲ್ಲಾ ಕಡೆಗಳಲ್ಲು ಭದ್ರತೆ ಒದಗಿಸುತ್ತಿದ್ದಾರೆ.

    ಶ್ರೀನಗರದಲ್ಲಿರುವ ಮುಖ್ಯ ಜಾಮಾ ಮಸೀದಿಯ ಬಾಗಿಲನ್ನು ಮುಚ್ಚಲಾಗಿದೆ. ಆದರೆ ನಗರದ ಕೆಲ ಸಣ್ಣ ಮಸೀದಿಯಲ್ಲಿ ಮಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗೆಯೇ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಿ, ಯಾವುದೇ ಗಲಾಟೆಗಳು ನಡೆಯದಂತೆ ಜನರು ನೋಡಿಕೊಂಡರೆ ಮಸೀದಿ ಬಾಗಿಲನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿದಂತೆ ಸುಮಾರು 400 ರಾಜಕೀಯ ನಾಯಕರು ಗೃಹ ಬಂಧನದಲ್ಲೇ ಇದ್ದಾರೆ.

    ಗುರುವಾರದಂದು ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, ನಗರದಲ್ಲಿ ಶಾಂತಿಯನ್ನು ಜನರು ಹೀಗೆ ಕಾಯ್ದುಕೊಂಡು ಬಂದರೆ ಶುಕ್ರವಾರದ ಪ್ರಾರ್ಥನೆ ಹಾಗೂ ಈದ್ ಹಬ್ಬಕ್ಕೆ ಹೇರಿರುವ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ಹೇಳಿದ್ದಾರೆ.

    ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುವಾಗ, ಸೋಮವಾರ ನಡೆಯುವ ಈದ್ ಹಬ್ಬದ ಸಂಭ್ರಮಕ್ಕೆ ಸರ್ಕಾರ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ 370ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿರುವುದು ವಾಸ್ತವ್ಯ. ಆದರೆ ಈ ಹಿನ್ನೆಲೆ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು.

    ಕಾಶ್ಮೀರ ಕಣಿವೆಯಲ್ಲಿ ಕಫ್ರ್ಯೂ ಹಾಕಿದ್ದರೂ ಈದ್ ಹಬ್ಬದ ಹಿನ್ನೆಲೆ ರಾಜ್ಯದಿಂದ ಹೊರಗಿರುವ ಕಾಶ್ಮೀರಿ ನಿವಾಸಿಗಳು ಕುಟುಂಬಸ್ಥರ ಜೊತೆ ಹಬ್ಬ ಆಚರಿಸಲು ವಿಮಾನಗಳ ಮೂಲಕ ಶ್ರೀನಗರಕ್ಕೆ ಬರುತ್ತಿದ್ದಾರೆ.

  • ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು

    ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಟೀಕಿಸಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    ವಿಶ್ವಸಂಸ್ಥೆ ನಿರ್ಣಯದ ಪ್ರಕಾರ ಕಾಶ್ಮೀರಿಗಳಿಗೆ ಅವರ ಹಕ್ಕುಗಳನ್ನು ನೀಡಬೇಕು. ನಮ್ಮಲ್ಲೆರಂತೆಯೇ ಅವರಿಗೂ ಸ್ವಾತಂತ್ರ್ಯದ ಹಕ್ಕು ನೀಡಬೇಕು. ವಿಶ್ವಸಂಸ್ಥೆಯನ್ನು ರಚಿಸಿದ್ದು ಯಾಕೆ ಮತ್ತು ಅದು ಯಾಕೆ ನಿದ್ರಿಸುತ್ತಿದೆ? ಕಾಶ್ಮೀರದಲ್ಲಿ ಮಾನವೀಯತೆಯ ವಿರುದ್ಧ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣವನ್ನು ಗಮನಿಸಬೇಕು. ಈ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಬೇಕು ಎಂದು ಶಾಹೀದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ.

    ಇದಕ್ಕೆ ಖಾರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರು ಗೌತಮ್ ಗಂಭೀರ್ ಅವರು, ಶಾಹೀದ್ ಆಫ್ರಿದಿ ಅವರು ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಲ್ಲಿ ಅಪ್ರಚೋದಿತ ಆಕ್ರಮಣ ಹಾಗೂ ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿದೆ. ಇದನ್ನು ಉಲ್ಲೇಖಿಸಿದ್ದಕ್ಕೆ ನಾವರನ್ನು ಶ್ಲಾಘಿಸಬೇಕು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇವೆಲ್ಲವೂ ನಡೆಯುತ್ತಿದೆ ಎಂದು ಹೇಳುವುದನ್ನು ಆಫ್ರಿದಿ ಮರೆತಿದ್ದಾರೆ. ಚಿಂತಿಸಬೇಡಿ, ನಾವು ಪಿಓಕೆ ಇತ್ಯರ್ಥಗೊಳಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

  • ಕೈ ಸಂಸದ ಅಧೀರ್ ರಂಜನ್ ವಿರುದ್ಧ ಸೋನಿಯಾ ಅಸಮಾಧಾನ

    ಕೈ ಸಂಸದ ಅಧೀರ್ ರಂಜನ್ ವಿರುದ್ಧ ಸೋನಿಯಾ ಅಸಮಾಧಾನ

    ನವದೆಹಲಿ: ಕಾಶ್ಮೀರ ಆಂತರಿಕ ವಿಚಾರ ಹೇಗಾಗುತ್ತೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ವಿರುದ್ಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

    ಲೋಕಸಭೆಯಲ್ಲಿ ಮಂಗಳವಾರ ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ನೀಡುವ ರದ್ದು ವಿಚಾರಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಅಧೀರ್ ರಂಜನ್ ಚೌಧರಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರ ಅಂತ ಕೇಂದ್ರ ಸರ್ಕಾರವೇ ಸಾಕಷ್ಟು ಬಾರಿ ಹೇಳಿದೆ. ಪಾಕ್ ಹಾಗೂ ಭಾರತ ಮಧ್ಯೆ ಉಂಟಾಗಿರುವ ಭೂ ವಿವಾದವನ್ನು 1948ರಿಂದಲೂ ವಿಶ್ವಸಂಸ್ಥೆ ಮೇಲ್ವಿಚಾರಣೆ ಮಾಡುತ್ತಲೇ ಬಂದಿದೆ. ನಾವು ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಗೆ ಸಹಿ ಹಾಕಿದ್ದೇವೆ. ಹಾಗಿದ್ದ ಮೇಲೆ ಇದು ಆಂತರಿಕ ವಿಚಾರವೋ ದ್ವಿಪಕ್ಷೀಯ ವಿಚಾರವೋ ನೀವೇ ಹೇಳಿ. ಕಾಂಗ್ರೆಸ್ ಪಕ್ಷಕ್ಕೆ ನೀವು ಜ್ಞಾನೋದಯ ಮಾಡಿಸಿ ಎಂದು ವ್ಯಂಗ್ಯವಾಡಿದರು.

    ಅಧೀರ್ ರಂಜನ್ ಚೌಧರಿ ಅವರ ಮಾತು ಕೇಳುತ್ತಿದ್ದಂತೆ ಪಕ್ಕದಲ್ಲಿಯೇ ಕುಳಿತಿದ್ದ ಸೋನಿಯಾ ಗಾಂಧಿ ಅವರು ಅಸಮಾಧಾನ ಹೊರ ಹಾಕಿದರು. ಅಷ್ಟೇ ಅಲ್ಲೇ ಉಳಿದ ಕೈ ನಾಯಕರ ಮುಖ ನೋಡಿದರು. ಅಧೀರ್ ರಂಜನ್ ಅವರ ಹೇಳಿಕೆಗೆ ಉಳಿದ ಕಾಂಗ್ರೆಸ್ ಸಂಸದರು ಕೂಡ ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣವೇ ಎಚ್ಚೆತ್ತುಕೊಂಡ ಅಧೀರ್ ರಂಜನ್ ಅವರು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವಿರಿ ಎಂದು ಸದನಕ್ಕೆ ಹೇಳುವ ಮೂಲಕ ಸರಿ ಪಡಿಸಲು ಮುಂದಾದರು.

    ಅಧೀರ್ ರಂಜನ್ ಅವರ ಹೇಳಿಕೆಯಿಂದ ಕೋಪಗೊಂಡ ಗೃಹ ಸಚಿವ ಅಮಿತ್ ಶಾ ಅವರು, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಕಾನೂನನ್ನು ರೂಪಿಸಲು ಈ ದೇಶದ ಸಂಸತ್ತು ಯಾವತ್ತೂ ತಡೆಯೊಡ್ಡುವುದಿಲ್ಲ. ಕಾಂಗ್ರೆಸ್ ಹೇಳುವಂತೆ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಬಗೆಹರಿಸುತ್ತದೇಯಾ ಎಂದು ಪ್ರಶ್ನಿಸಿದರು.

    ಜಮ್ಮು ಕಾಶ್ಮೀರವನ್ನು ರಾತ್ರಿ ಬೆಳಗಾಗುವುದರ ಒಳಗಡೆ ಎರಡು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದೀರಿ. ಇದರಿಂದ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹೇಗಾಗುತ್ತದೆ. ನೀವು ಪಾಕ್ ಆಕ್ರಮಿತ ಕಾಶ್ಮೀರ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ನಿಯಮಗಳನ್ನು ಉಲ್ಲಂಘಿಸಿ ರಾಜ್ಯವನ್ನು ವಿಭಜನೆ ಮಾಡುತ್ತಿದ್ದೀರಿ ಎಂದು ಅಧೀರ್ ರಂಜನ್ ಚೌಧರಿ ಆರೋಪಿಸಿದರು.

    ಇದಕ್ಕೆ ಕೂಡಲೇ ಉತ್ತರ ನೀಡಿದ ಶಾ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭಾರತ ಮತ್ತು ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಇದರ ಬಗ್ಗೆ ಆಧಾರವಿದೆ. ಪಿಓಕೆಯನ್ನು ನಾವು ಪರಿಗಣಿಸಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ನಾನು ಹೇಳುತ್ತೇನೆ. ಪಾಕ್ ಆಕ್ರಮಿತ ಕಾಶ್ಮೀರ ಸೇರಿದಾಗ ಮಾತ್ರ ಅದು ಜಮ್ಮು ಕಾಶ್ಮೀರ ಆಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಷಯ್ ಚಿನ್ ಸೇರಿಸಿ ಜಮ್ಮು ಕಾಶ್ಮೀರದ ಗಡಿಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಪಿಓಕೆ ಮತ್ತು ಅಕ್ಷಯ್ ಚಿನ್ ಎರಡೂ ಭಾರತದ ಅವಿಭಾಜ್ಯ ಅಂಗಗಳು. ಜಮ್ಮು ಮತ್ತು ಕಾಶ್ಮೀರಕ್ಕಾಗಿ ನಾನು ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.