Tag: kashmir

  • ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ

    ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ

    ಬೆಂಗಳೂರು: ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 35 ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಂದು ಕಾಶ್ಮೀರ ಮಾಡಲು ಸರ್ಕಾರ ಹೊರಟಿದೆ. ಇದನ್ನು ತೋರಿಸಲು ಈ ವಿಡಿಯೋ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದರು.

    ಸರ್ಕಾರ ಯಾವುದೇ ತಪ್ಪು ಮಾಡದೇ ಇದ್ದಿದ್ದರೆ, ಪೊಲೀಸರು ಇಂತಹ ವರ್ತನೆ ತೋರಿಸದೇ ಹೋಗಿದ್ದರೆ ಏನು ಆಗುತ್ತಿರಲಿಲ್ಲ. ಎಲ್ಲಾ ಜಿಲ್ಲೆಯಲ್ಲಿ ಪ್ರತಿಭಟನೆ ನಡೆದಿದೆ. ಆದರೆ ಮಂಗಳೂರಿನಲ್ಲಿ ಮಾತ್ರ ಇಂತಹ ಘಟನೆ ನಡೆದಿದ್ದು, ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು. ಈ ಎಲ್ಲ ಘಟನೆಗಳಿಗೆ ಪೊಲೀಸ್ ಆಯುಕ್ತ ಹರ್ಷ ಅವರೇ ಕಾರಣ. ಕೂಡಲೇ ಅವರನ್ನು ಅಮಾನತುಗೊಳಿಸಬೇಕೆಂದು ಎಚ್‍ಡಿಕೆ ಆಗ್ರಹಿಸಿದರು.

    ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ತನಿಖೆ ಮಾಡುತ್ತಿದ್ದಾರೆ. ಸರ್ಕಾರ ಹೇಳಿದಂತೆ ಅವರು ವರದಿ ನೀಡುತ್ತಾರೆ. ಜನತಾ ಅದಾಲತ್ ನಲ್ಲಿ ಜನರೇ ಈ ವಿಡಿಯೋ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರೇ ಇಲ್ಲಿ ತಪ್ಪು ಮಾಡಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

    ಅಂಗಡಿ ಮುಂದೆ ನಿಂತವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಕಲ್ಲು ತುಂಬಿದ್ದ ಗಾಡಿ 4 ಟ್ರಿಪ್ ಬೇರೆ ಕಡೆ ಹೊಡೆದಿತ್ತು. ಉದ್ದೇಶ ಪೂರ್ವಕವಾಗಿ ಕಲ್ಲು ತುಂಬಿಸಿಕೊಂಡು ಬಂದಿರಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

    ಸಿಟಿಜನ್ ಫೋರಂನಿಂದ ಜನತಾ ಆಂದೋಲನ ಮಾಡಲು ತೀರ್ಮಾನ ಮಾಡಲಾಗಿತ್ತು. ಈ ಸಂಬಂಧ ನಿವೃತ್ತ ನ್ಯಾ.ಗೋಪಾಲಗೌಡ, ಸುಗತ ಶ್ರೀನಿವಾಸ್ ಸೇರಿ 3 ಜನತಾ ತಂಡ ರಚನೆ ಮಾಡಿ ಜನತಾ ಅದಾಲತ್ ಮಾಡಲಾಗಿತ್ತು. ಮಂಗಳೂರು ಗಲಭೆ ಸಂಬಂಧ ದಾಖಲಾತಿ ಸಂಗ್ರಹ ಮಾಡಿದ್ದೇನೆ. ವಿಧಾನಸಭೆಯಲ್ಲಿ ಈ ವಿಚಾರದ ಬಗ್ಗೆ ಮಾಡುತ್ತೇನೆ. ಪೊಲೀಸರು ಮಾಡಿದ ತಪ್ಪನ್ನು ಚರ್ಚೆ ಮಾಡುತ್ತೇನೆ. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಪ್ರಕರಣ ತಿರುಚಲು ಹೋಗುತ್ತಿದೆ. ಮೊನ್ನೆ ಜನತಾ ಅದಾಲತ್ ಮಾಡಲು ಹೋದಾಗ ಅಲ್ಲಿನ ಎಸ್‍ಐ ಅದಕ್ಕೆ ಅವಕಾಶ ನೀಡಲಿಲ್ಲ. ಪೊಲೀಸರಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದರು.

  • ಸೈನಿಕರ ಮೇಲೆ ಅಭಿಮಾನ – ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದ ವೈದ್ಯ

    ಸೈನಿಕರ ಮೇಲೆ ಅಭಿಮಾನ – ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದ ವೈದ್ಯ

    ಕಾರವಾರ: ಭಾರತೀಯ ಸೈನಿಕರ ಮೇಲೆ ಅಭಿಮಾನ ಮತ್ತು ಪ್ರೀತಿಯಿಂದ ಜಿಲ್ಲೆಯ ಸಿದ್ದಾಪುರ ತಾಲೂಕಿನ ವೈದ್ಯರೊಬ್ಬರು ಶ್ರೀನಗರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದು ಗಮನ ಸೆಳೆದಿದ್ದಾರೆ.

    ಸಿದ್ದಾಪುರ ತಾಲೂಕಿನ ಅತ್ತಿಗಾರ ಜಡ್ಡಿ ಗ್ರಾಮದ ಯುವ ವೈದ್ಯ ಡಾ.ಹರ್ಷವರ್ಧನ್ ನಾರಾಯಣ ನಾಯ್ಕ ಸೈನಿಕರ ಅಭಿಮಾನದಿಂದ ಸಾಧನೆ ಮಾಡಿದ್ದಾರೆ. ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ 3,715 ಕಿಲೋಮೀಟರ್ ದೂರವನ್ನು ಕೇವಲ 19 ದಿನ 5  ಗಂಟೆ ಒಳಗೆ ಕ್ರಮಿಸಿ ಸಾಧನೆ ಮಾಡಿದ್ದಾರೆ.

    ನವೆಂಬರ್ 14 ರಂದು ಶ್ರೀನಗರದಿಂದ ಸೈಕಲ್ ತುಳಿಯಲು ಪ್ರಾರಂಭಿಸಿದ ವೈದ್ಯ ಪ್ರತಿ ದಿನ 200 ಕಿ.ಮೀ. ಸೈಕಲ್ ತುಳಿದು ಶ್ರೀನಗರ, ಅಮೃತಸರ, ಕಿಶನ್ ಗಡ, ಶಿರಡಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು, ಹೊಸೂರು, ಧರ್ಮಾಪುರಿ, ಮಧುರೈ ಮೂಲಕ ಕನ್ಯಾಕುಮಾರಿ ತಲುಪಿ ಇಂದು ಕರ್ನಾಟಕಕ್ಕೆ ಮರಳಿದ್ದಾರೆ.

    ಮೂಲತಃ ಸಿದ್ದಾಪುರದವರಾದ ಇವರು ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ ಬೆಂಗಳೂರಿನ ಹೆಚ್.ಸಿ.ಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತಿದ್ದರು. ಚಿಕ್ಕ ವಯಸ್ಸಿನಲ್ಲೇ ಸೈನಿಕರ ಮೇಲೆ ಪ್ರೀತಿ ಹೊಂದಿದ್ದ ಇವರ ಕುಟುಂದಲ್ಲಿ ಅಣ್ಣ, ಬಾವ ಸೇರಿದಂತೆ ಬಹುತೇಕರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರಣಾಂತರದಿಂದಾಗಿ ಇವರು ಸೈನ್ಯಕ್ಕೆ ಸೇರುವ ಅವಕಾಶ ತಪ್ಪಿದ ಕಾರಣ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು.

    ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ್ ನಿಂದ ಸ್ಫೂರ್ತಿ ಪಡೆದು ಜನರಲ್ಲಿ ಸೈನ್ಯದ ಬಗ್ಗೆ ಅರಿವು ಸೈನ್ಯಕ್ಕೆ ಸೇರಲು ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸೆಲ್ಯುಟ್ ಫಾರ್ ಅವರ್ ಸೋಲ್ಜರ್ಸ್ ಎಂಬ ಹೆಸರಿನ ಮೂಲಕ ಸೈಕಲ್ ಯಾತ್ರೆ ಪ್ರಾರಂಭಿಸಿದರು. ಇದಕ್ಕಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಈ ಕೆಲಸಕ್ಕೆ ಕೈ ಹಾಕಿ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.

    ಯಾತ್ರೆಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯುವಕರಲ್ಲಿ ಸ್ಪೂರ್ತಿ ಹಾಗೂ ಸೈನ್ಯಕ್ಕೆ ಸೇರುವಂತೆ ಜಾಗೃತಿ ಮೂಡಿಸಿದ್ದೇನೆ. ಭಾರತೀಯ ಸೈನಿಕರ ಮೇಲೆ ನಮ್ಮ ದೇಶದಲ್ಲಿ ಅಪಾರ ಪ್ರೀತಿ ಹೊಂದಿರುವ ಜನ ನಾನು ಬಂದಾಗ ಸೆಲ್ಯೂಟ್ ಮಾಡಬೇಕು ಎಂಬ ಆಸೆ ನನ್ನದು. ಈ ಯಾತ್ರೆ ನಂತರವೂ ಸೈನ್ಯಕ್ಕೆ ಯುವಕರು ಸೇರುವಂತೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸುತ್ತೇನೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.

  • ಅಯೋಧ್ಯೆ, ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿದ ಪಾಕಿಗೆ ಚಳಿ ಬಿಡಿಸಿದ ಭಾರತದ ಅಧಿಕಾರಿ

    ಅಯೋಧ್ಯೆ, ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿದ ಪಾಕಿಗೆ ಚಳಿ ಬಿಡಿಸಿದ ಭಾರತದ ಅಧಿಕಾರಿ

    – ವಿಶ್ವಸಂಸ್ಥೆಯಲ್ಲಿ ಮುಜುಗರಕ್ಕೀಡಾದ ಪಾಕ್

    ಪ್ಯಾರಿಸ್: ಕಾಶ್ಮೀರ ಮತ್ತು ಅಯೋಧ್ಯೆ ವಿಚಾರದಲ್ಲಿ ಮೂಗು ತೂರಿಸಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕಾರಿ ಚಳಿ ಬಿಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ.

    ಯುನೆಸ್ಕೋ(UNESCO)ದ 40ನೇ ಸಾಮಾನ್ಯ ಸಭೆ(ಜನರಲ್ ಕಾನ್ಫರೆನ್ಸ್)ಯಲ್ಲಿ ಕಾಶ್ಮೀರ ಮತ್ತು ಅಯೋಧ್ಯೆ ವಿಷಯಗಳನ್ನು ಪಾಕಿಸ್ತಾನ ಪ್ರಸ್ತಾಪ ಮಾಡಿತು. ಈ ಎರಡು ಭಾರತದ ಆಂತರಿಕ ವಿಚಾರಗಳಾಗಿವೆ. ಹಾಗಾಗಿ ಪಾಕಿಸ್ತಾನ ಇದರಲ್ಲಿ ಹಸ್ತಕ್ಷೇಪ ಮಾಡದಿರುವುದೇ ಉತ್ತಮ ಹಾಗೂ ಈ ವಿಷಯಗಳಲ್ಲಿ ನಮ್ಮ ಮೇಲೆ ಯಾವುದೇ ಒತ್ತಡ ಹಾಕುವಂತಿಲ್ಲ ಎಂದು ಭಾರತದ ಪ್ರತಿನಿಧಿ ಖಡಕ್ ಆಗಿ ಯುನೆಸ್ಕೋದಲ್ಲಿ ಹೇಳಿದ್ದಾರೆ.

    ನಾವು ಪಾಕಿಸ್ತಾನದ ದುಷ್ಟಬುದ್ಧಿ ಮತ್ತು ಸುಳ್ಳು ಪ್ರಚಾರವನ್ನು ಬಲವಾಗಿ ಖಂಡಿಸುತ್ತೇವೆ. ಪಾಕಿಸ್ತಾನ ತನ್ನ ಸುಳ್ಳುಗಳಿಂದ ಭಾರತದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಭಾರತದ ಸವೋಚ್ಛ ನ್ಯಾಯಾಲಯ ನೀಡಿದ ಅಯೋಧ್ಯೆ ತೀರ್ಪನ್ನು ಪಾಕಿಸ್ತಾನ ಟೀಕಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದೆ. ಅಯೋಧ್ಯೆ ವಿಷಯ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದ್ದು, ಪಾಕಿಸ್ತಾನಕ್ಕೆ ಈ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

    ಪಾಕಿಸ್ತಾನದ ಶಿಕ್ಷಣ ಮಂತ್ರಿ ಶಫಾಕತ್ ಮಹಮೂದ್ ಅಯೋಧ್ಯೆಯ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕುತ್ತಾ, ಯುನೆಸ್ಕೋದ ಧಾರ್ಮಿಕ ಸ್ವಾತಂತ್ರ್ಯದ ಮೌಲ್ಯಗಳಿಗೆ ಅನುಗುಣವಾಗಿ ತೀರ್ಪು ಬಂದಿಲ್ಲ ಎಂದು ಮೂಗು ತೂರಿಸುವ ಪ್ರಯತ್ನ ಮಾಡಿದ್ದರು.

    ಶಫಾಕತ್‍ಗೆ ತಿರುಗೇಟು ನೀಡಿದ ಭಾರತದ ಪ್ರತಿನಿಧಿ, ಜೀವನದ ಅಧಿಕಾರ (Right To life) ದೇಶದ ಮೂಲಭೂತ ಅಧಿಕಾರವಾಗಿದೆ. ವಿಶ್ವಮಟ್ಟದಲ್ಲಿ ಈ ಅಧಿಕಾರಕ್ಕೆ ಭಯೋತ್ಪಾದನೆ ದೊಡ್ಡ ವಿಘ್ನವಾಗಿದೆ. ಪಾಕಿಸ್ತಾನ ಭಯೋತ್ಪಾದನೆಯ ಉತ್ಪಾದಕ ಕೇಂದ್ರ ಮತ್ತು ರಪ್ತು ಮಾಡುವ ದೇಶವಾಗಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ಭಯೋತ್ಪಾದನೆ ಬೇರೂರಿದೆ. ಪಾಕಿಸ್ತಾನದ ಮೂಲಕವೇ ಭಯೋತ್ಪಾದನೆ ಮುಖ್ಯವಾಹಿನಿಗೆ ಬರುತ್ತಿದೆ ಎಂಬುವುದು ವಿಶ್ವಮಟ್ಟದಲ್ಲಿ ಗೊತ್ತಾಗಿದೆ ಎಂದು ಚಳಿ ಬಿಡಿಸಿದರು.

    ಇದೇ ವೇಳೆ ಪಾಕಿಸ್ತಾನ ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮೂರು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಈ ಮೂರು ಭಾಗಗಳು ಯಾವಾಗಲೂ ಭಾರತದ ಅಂಗಗಳಾಗಿಯೇ ಇರಲಿವೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸಹ ಸೇರಿದೆ. ಪಾಕಿಸ್ತಾನ ಕಾನೂನುಬಾಹಿರ ಮತ್ತು ಬಲವಂತವಾಗಿ ಕಾಶ್ಮೀರದ ಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಭಾರತದ ಪ್ರತಿನಿಧಿ ಆರೋಪಿಸಿದರು.

     

  • ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    – ಮಸೀದಿಯಲ್ಲಿ ಪ್ರಾರ್ಥನೆಗೆ ನಿಷೇಧ

    ಶ್ರೀನಗರ: ಕಣಿವೆ ರಾಜ್ಯ ಸದ್ಯ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಎರಡು ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ವಿಕೃತಿ ಮೆರೆದ ಪರಿಣಾಮ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ನಿಷೇಧ ಹೇರಲಾಗಿದೆ.

    ಗುರುವಾರ ರಾತ್ರಿ ದುಷ್ಕರ್ಮಿಗಳು ಎರಡು ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಮೊದಲಿಗೆ ಚವಾಲ್ಗಾಮ್ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಬೆಂಕಿ ಹಚ್ಚಿ, ಬಳಿಕ ಅದೇ ರೀತಿ ವಾಡೂನಲ್ಲಿರುವ ಮತ್ತೊಂದು ಶಾಲೆಗೂ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಶುಕ್ರವಾರ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ನಡೆಯಬೇಕಿದ್ದ ಸಾಮೂಹಿಕ ನಮಾಜ್ ಅನ್ನು ನಿಷೇಧಿಸಲಾಗಿತ್ತು. ಈ ವೇಳೆ ಈ ನಿರ್ಧಾರವನ್ನು ವಿರೋಧಿಸಿ ಶ್ರೀನಗರದಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದರು.

    ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಅವರ ವಾಹನಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆಗ ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ.

    ಈ ಹಿಂದೆ ಗುರುವಾರ ಸಂಜೆ ಕಾಶ್ಮೀರದಲ್ಲಿ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದರು. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದರು. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಶ್ರೀನಗರ: ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು, ಗುರುವಾರ ಸಂಜೆ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದಾರೆ. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದಾರೆ. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಾಲಕರು ನಿರ್ಜನ ಪ್ರದೇಶಕ್ಕೆ ತೆರಳುತ್ತಿರುವ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ. ಭದ್ರತಾ ಪಡೆಗೆ ತಿಳಿಸದೆ ಚಾಲಕರು ಟ್ರಕ್‍ಗಳನ್ನು ಕೊಂಡೊಯ್ದಿದ್ದರು ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಯೇ ಕಳೆದ 3 ದಿನಗಳಲ್ಲಿ ಇದು ಟ್ರಕ್ ಚಾಲಕರನ್ನು ಉಗ್ರರು ಕೊಂದ ಮೂರನೇ ಪ್ರಕರಣವಾಗಿದೆ.

    ಈಗಾಗಲೇ ಘಟನಾ ಸ್ಥಳದಿಂದ ಚಾಲಕರ ಮೃತದೇಹವನ್ನು ತರಲಾಗಿದೆ. ಇತ್ತ ಗಾಯಗೊಂಡ ಚಾಲಕನನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದು, ಆದಷ್ಟು ಬೇಗ ಉಗ್ರರನ್ನು ಬಂಧಿಸುವ ಪ್ರಯತ್ನದಲ್ಲಿದ್ದೇವೆ ಎಂದು ಭದ್ರತಾ ಪಡೆ ತಿಳಿಸಿದೆ.

    ಆಗಸ್ಟ್ 5ರಿಂದ ಕಾಶ್ಮಿರದಲ್ಲಿ ಪೋಸ್ಟ್ ಪೇಡ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸತತ 70 ದಿನಗಳ ಬಳಿಕ ಮತ್ತೆ ಪೋಸ್ಟ್ ಪೇಡ್ ಮೊಬೈಲ್ ಸೇವೆ ಆರಂಭಗೊಳಿಸಲಾಗಿದೆ. ಹೀಗಾಗಿ ಮತ್ತೆ ಕಣಿವೆ ರಾಜ್ಯದಲ್ಲಿ ವ್ಯಾಪಾರ, ವ್ಯಹಿವಾಟು ಎಂದಿನಂತೆ ಆರಂಭಗೊಂಡಿದೆ. ಆದರೆ ಉಗ್ರರು ವಲಸಿಗ ವ್ಯಾಪಾರಿಗಳು ಹಾಗೂ ಟ್ರಕ್ ಚಾಲಕರಲ್ಲಿ ಭಯಹುಟ್ಟಿಸಲು ಅವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳಿಲ್ಲ ಎಂದು ಬಿಂಬಿಸಲು ಈ ರೀತಿ ದಾಳಿಗಳನ್ನು ಉಗ್ರರು ಮಾಡುತ್ತಿದ್ದಾರೆ.

  • ಸೇನೆಯ ಗುಂಡಿನ ದಾಳಿಗೆ ಎದ್ನೋ ಬಿದ್ನೋ ರೀತಿ ಓಡಿದ ಉಗ್ರರು – ವಿಡಿಯೋ ವೈರಲ್

    ಸೇನೆಯ ಗುಂಡಿನ ದಾಳಿಗೆ ಎದ್ನೋ ಬಿದ್ನೋ ರೀತಿ ಓಡಿದ ಉಗ್ರರು – ವಿಡಿಯೋ ವೈರಲ್

    ಶ್ರೀನಗರ: ಗಡಿಯಲ್ಲಿ ನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಸೇನೆ ಗುಂಡಿನ ದಾಳಿಗೆ ಹೆದರಿ ಉಗ್ರರು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಜುಲೈ 30 ರಂದು ಕುಪ್ವಾರಾ ಸೆಕ್ಟರ್ ನಲ್ಲಿರುವ ಗಡಿನಿಯಂತ್ರಣ ರೇಖೆಯ ಬಳಿ ಮಧ್ಯಾಹ್ನ 1:32ರ ವೇಳೆಗೆ ಉಗ್ರರು ಭಾರತದತ್ತ ನುಸುಳಲು ಯತ್ನಿಸುತ್ತಿದ್ದರು. ಉಗ್ರರು ನುಸುಳುವುದನ್ನು ನೋಡುತ್ತಿದ್ದಂತೆ ಭಾರತೀಯ ಸೇನೆ ಗುಂಡಿನ ಮಳೆಯನ್ನೇ ಸುರಿಸಿದೆ.

    ಸೇನೆಯ ಒಂದೇ ಸಮನೆ ಗುಂಡಿನ ದಾಳಿ ನಡೆಸುವುದನ್ನು ಕಂಡು ಉಗ್ರರು ದಿಕ್ಕಾಪಾಲಾಗಿ ಓಡಿ ಪಾಕ್ ಗಡಿಯತ್ತ ಓಡಿದ್ದಾರೆ. ಸುದ್ದಿ ಸಂಸ್ಥೆಯೊಂದು ಈ ವಿಡಿಯೋವನ್ನು ಪ್ರಕಟಿಸಿದೆ.

    ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಅವರ ಮೇಲೆ ಗುಂಡಿನ ದಾಳಿ ನಡೆಸಬಾರದಿತ್ತು. ಬಾಂಬ್ ಹಾಕಬೇಕಿತ್ತು ಎಂದು ಕಮೆಂಟ್ ಹಾಕುತ್ತಿದ್ದಾರೆ.

  • ಕಾಶ್ಮೀರದ ಕುರಿತು ನಮಗೇಕೆ, ಕ್ರಿಕೆಟ್ ಬಗ್ಗೆ ಮಾತನಾಡಿ: ಪಾಕ್ ಕ್ರಿಕೆಟ್ ಕೋಚ್

    ಕಾಶ್ಮೀರದ ಕುರಿತು ನಮಗೇಕೆ, ಕ್ರಿಕೆಟ್ ಬಗ್ಗೆ ಮಾತನಾಡಿ: ಪಾಕ್ ಕ್ರಿಕೆಟ್ ಕೋಚ್

    ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡ ಮಾಜಿ ಆಟಗಾರ ಮಿಸ್ಬಾ ಉಲ್ ಹಕ್, ಕಾಶ್ಮೀರದ ಕುರಿತ ಪತ್ರಕರ್ತನ ಪ್ರಶ್ನೆಗೆ ಗರಂ ಆಗಿದ್ದಾರೆ.

    ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಿಸ್ಬಾ ಉಲ್ ಹಕ್ ಅವರಿಗೆ ಪತ್ರಕರ್ತನೊಬ್ಬ ಕಾಶ್ಮೀರದ ಕುರಿತು ಪ್ರಶ್ನೆ ಮಾಡಿದ್ದ.

    ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರು ಸೇನೆಗೆ ಬೆಂಬಲ ನೀಡಲು ಆರ್ಮಿ ಕ್ಯಾಪ್ ಧರಿಸಿ ಪಂದ್ಯವಾಡಿದ್ದರು. ಸದ್ಯ ಪಾಕ್ ಕ್ರಿಕೆಟ್ ತಂಡದ ಕಾಶ್ಮೀರದ ಸಮಸ್ಯೆಯೊಂದಿಗೆ ನಿಲ್ಲಲು ಏನಾದರೂ ಪ್ಲಾನ್ ಮಾಡಲಾಗಿದೆಯಾ ಎಂದು ಪ್ರಶ್ನಿಸಿದ್ದ.

    ಈ ಪ್ರಶ್ನೆಗೆ ಉತ್ತರಿಸಲು ಇಷ್ಟಪಡದ ಮಿಸ್ಬಾ, ನಮಗೇಕೆ ಕಾಶ್ಮೀರದ ವಿಚಾರದ ಕುರಿತು ಪ್ರಶ್ನೆ ಕೇಳುತ್ತಿದ್ದೀರಿ. ಇಲ್ಲಿ ಕೇವಲ ಕ್ರಿಕೆಟ್ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ. ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಲು ನಾವು ಇಲ್ಲಿ ಬಂದಿದ್ದೇವೆ ಎಂದಿದ್ದಾರೆ. ಬರೋಬ್ಬರಿ 10 ವರ್ಷಗಳ ಬಳಿಕ ಕರಾಚಿಯಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವಾಡಲು ಸಿದ್ಧವಾಗಿತ್ತು. ಆದರೆ ಮಳೆಯ ಕಾರಣ ಟೂರ್ನಿ ಮೊದಲ ಪಂದ್ಯ ರದ್ದಾಗಿದೆ.

    370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಪಾಕಿಸ್ತಾನ ಹಲವು ಕ್ರಿಕೆಟರ್ ಗಳು ಭಾರತದ ನಡೆಯ ವಿರುದ್ಧ ಟೀಕೆ ಮಾಡಿದ್ದರು. ಅಲ್ಲದೇ ಈ ಅಂಶವನ್ನು ಮುಂದಿಟ್ಟುಕೊಂಡು ವಿಶ್ವ ರಾಷ್ಟ್ರಗಳ ಗಮನವನ್ನು ಸೆಳೆಯಲು ಯತ್ನಿಸಿದ್ದ ಪಾಕ್‍ನ ಕುತಂತ್ರ ಕೂಡ ವಿಫಲವಾಗಿತ್ತು.

  • ಮೋದಿಗೆ ನರಕ ತೋರಿಸುತ್ತೇನೆ ಎಂದ ಪಾಕ್ ಗಾಯಕಿಗೆ 2 ವರ್ಷ ಜೈಲು ಶಿಕ್ಷೆ?

    ಮೋದಿಗೆ ನರಕ ತೋರಿಸುತ್ತೇನೆ ಎಂದ ಪಾಕ್ ಗಾಯಕಿಗೆ 2 ವರ್ಷ ಜೈಲು ಶಿಕ್ಷೆ?

    ಇಸ್ಲಾಮಾಬಾದ್: ಕಾಶ್ಮೀರ ಬೇಕು ಎನ್ನುತ್ತಿರುವ ಮೋದಿಗೆ ನರಕ ತೋರಿಸುತ್ತೇನೆ ಎಂದು ಹೆಬ್ಬಾವಿನ ಜೊತೆ ವಿಡಿಯೋ ಮಾಡಿದ್ದ ಪಾಕಿಸ್ತಾನದ ಪಾಪ್ ಸಿಂಗರ್‍ಗೆ ಈಗ ಎರಡು ವರ್ಷ ಜೈಲಿಗೆ ಹೋಗುವ ಸ್ಥಿತಿ ಬಂದಿದೆ.

    ಲಹೋರ್ ನಲ್ಲಿರುವ ತನ್ನ ಬ್ಯೂಟಿ ಪಾರ್ಲರ್ ನಲ್ಲಿ ಹೆಬ್ಬಾವು ಮತ್ತು ಮೊಸಳೆ ಜೊತೆ ವಿಡಿಯೋ ಮಾಡಿ ಮೋದಿಗೆ ನಿಂದಿಸಿದ್ದ ಪಾಕ್ ಸಿಂಗರ್ ಮತ್ತು ಟಿವಿ ನಿರೂಪಕಿ ರಬಿ ಪಿರ್ಜಾದಾ ವಿರುದ್ಧ ದೂರು ದಾಖಲಾಗಿದೆ.

    ಹೆಬ್ಬಾವು ಮತ್ತು ಮೊಸಳೆಯನ್ನು ಹಿಡಿದು ವಿಡಿಯೋ ಮಾಡಿದ್ದ ರಬಿ, ನಾನು ಕಾಶ್ಮೀರಿ ಮಹಿಳೆ, ಭಾರತಕ್ಕಾಗಿ ನಾವು ಹಾವುಗಳೊಂದಿಗೆ ಸಿದ್ಧವಾಗಿದ್ದೇವೆ. ಈ ಉಡುಗೊರೆಗಳು ನಿಜಕ್ಕೂ ಮೋದಿಯವರಿಗೆ. ನೀವು ಕಾಶ್ಮೀರಿಗಳಿಗೆ ತೊಂದರೆ ನೀಡುತ್ತಿದ್ದೀರಿ. ಆದ್ದರಿಂದ ನಾನು ನಿಮಗಾಗಿ ಈ ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಿದ್ದೇನೆ. ನೀವು ನರಕದಲ್ಲಿ ಸಾಯಲು ಸಿದ್ಧರಾಗಿ. ನನ್ನ ಸ್ನೇಹಿತರು ನರಕದಲ್ಲಿ ನಿಮ್ಮ ಜೊತೆ ಹಬ್ಬವನ್ನು ಮಾಡುತ್ತಾರೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಳು.

    ಈ ವಿಡಿಯೋ ಮಾಡಿ ಸೆಪ್ಟಂಬರ್ 2 ರಂದು ತನ್ನ ಅಧಿಕೃತ ಟ್ವಿಟ್ಟರ್, ಯೂಟ್ಯೂಬ್ ಮತ್ತು ಇನ್‍ಸ್ಟಾಗ್ರಾಮ್ ಖಾತೆಗೆ ಅಪ್ಲೋಡ್ ಮಾಡಿದ್ದಳು. ಈ ವಿಡಿಯೋವನ್ನು ಭಾರತ ಮತ್ತು ಪಾಕಿಸ್ತಾನದ ಮಾಧ್ಯಮಗಳು ಪ್ರಸಾರ ಮಾಡಿತ್ತು. ಇದರ ಜೊತೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಸಖತ್ ವೈರಲ್ ಆಗಿತ್ತು.

    ವಿಡಿಯೋ ಅಪ್ಲೋಡ್ ಮಾಡಿ ಒಂದು ವಾರದ ನಂತರ ಎಚ್ಚೆತ್ತ ಪಾಕಿಸ್ತಾನ ಪಂಜಾಬ್ ಸರ್ಕಾರ ವ್ಯಜೀವಿ ಸಂರಕ್ಷಣಾ ಸಂಸ್ಥೆ ಮನೆಯಲ್ಲಿ ನಾಯಿಗಳ ರೀತಿಯಲ್ಲಿ ವಿಷಕಾರಕ ಮತ್ತು ವಿಲಕ್ಷಣ ಪ್ರಾಣಿಗಳನ್ನು ಸಾಕುವುದು ಅಥವಾ ಇಟ್ಟುಕೊಳ್ಳುವುದು ತಪ್ಪು ಎಂದು ರಬಿ ಪಿರ್ಜಾದಾ ಮೇಲೆ ದೂರು ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಸೂಹೈಲ್ ಅಶ್ರಫ್, ಪಾಕಿಸ್ತಾನದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಈ ರೀತಿಯ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದನ್ನು ನಿಷೇಧಿಸಲಾಗಿದೆ. ಆಕೆಯು ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಯಾವುದೇ ರೀತಿಯ ಪರವಾನಗಿ ಪಡೆದಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ದರಿಂದ ರಬಿ ಪಿರ್ಜಾದಗೆ ಎರಡು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

  • ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದು ಉಗ್ರರು ಪರಾರಿ

    ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದು ಉಗ್ರರು ಪರಾರಿ

    ಶ್ರೀನಗರ: ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಬಳಿ ಶಸ್ತ್ರಾಸ್ತ್ರ ಕಸಿದ ಉಗ್ರರು ಪರಾರಿಯಾದ ಹಿನ್ನೆಲೆಯಲ್ಲಿ ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

    ಸ್ಥಳೀಯ ಪಿಡಿಪಿ ಮುಖಂಡ ಶೇಖ್ ನಾಸಿರ್ ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿಯ ಬಳಿ ಉಗ್ರರು ಶಸ್ತ್ರಸ್ತ್ರ ಕಸಿದುಕೊಂಡು ಪರಾರಿಯಾಗಿದ್ದಾರೆ. ಮುಖಂಡನ ಬೆಂಬಲಿಗರ ಗುಂಪಿನಲ್ಲಿ ಸೇರಿಕೊಂಡಿದ್ದ ಶಂಕಿತ ಉಗ್ರರು ಕರ್ತವ್ಯ ನಿರತ ಸಿಬ್ಬಂದಿಯ ಬಂದೂಕು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಇದೀಗ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಮೂಲಗಳು ಪ್ರಕಾರ, ಭದ್ರತಾ ಸಿಬ್ಬಂದಿಯ ಒಂದು ಎಕೆ 47 ಬಂದೂಕನ್ನು ಶಂಕಿತ ಉಗ್ರರು ಕಸಿದುಕೊಂಡು ಓಡಿಹೋಗಿದ್ದಾರೆ. ಬಂದೂಕು ಕಸಿದ ಉಗ್ರರನ್ನು ಸೆರೆಹಿಡಿಯಲು ಭಾರತೀಯ ಸೇನೆ ತೀವ್ರ ಶೋಧ ನಡೆಸುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ತಲುಪಿಸಿದ್ದಾರೆ. ಸೈನಿಕರ ಜೊತೆ ಸ್ಥಳೀಯ ಪೊಲೀಸರು ಕೂಡ ಶೋಧಕಾರ್ಯಕ್ಕೆ ಸಾಥ್ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಇದೀಗ ನಾಕಾಬಂದಿ ಹಾಕಲಾಗಿದೆ.

    ಈ ವರ್ಷದಲ್ಲಿ ಹೀಗೆ ಉಗ್ರರು ಭದ್ರತಾ ಸಿಬ್ಬಂದಿಯ ಬಂದೂಕು ಕಸಿದು ಪರಾರಿಯಾಗಿರುವುದು ಇದು 2ನೇ ಪ್ರಕರಣವಾಗಿದೆ. ಈ ಹಿಂದೆ ಮಾರ್ಚ್ 8ರಂದು ಮುಸುಕುಧಾರಿ ಉಗ್ರರು ಶಾಹಿಗ್ ಮಜಾರ್ ಪ್ರಾಂತ್ಯದ ಪಿಎಸ್‍ಒ ದುಲೀಪ್ ಕುಮಾರ್ ಅವರ ಮನೆಗೆ ನುಗ್ಗಿ, ಅವರ ಬಳಿಯಿದ್ದ ಒಂದು ಎಕೆ 47 ಬಂದೂಕನ್ನು ಕಸಿದಿದ್ದರು. ಅದರ ಜೊತೆಗೆ ಉಗ್ರರು 90 ಬುಲೆಟ್‍ಗಳನ್ನೂ ಕೂಡ ತೆಗೆದುಕೊಂಡು ಓಡಿಹೋಗಿದ್ದರು.

    ಈ ಬಗ್ಗೆ ಕಿಶ್ತ್ವಾರ್ ಡಿಸಿ ಎ.ಎಸ್ ರಾಣಾ ಅವರು ಮಾತನಾಡಿ, ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತರಾಗಿರುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.

  • ಕಾಶ್ಮೀರ ಬಿಟ್ಟು ದೇಶದ ಆರ್ಥಿತಕೆ ಬಗ್ಗೆ ಗಮನ ಕೊಡಿ- ಪಾಕ್ ಪ್ರಧಾನಿಗೆ 15ರ ಪೋರ ಸಲಹೆ

    ಕಾಶ್ಮೀರ ಬಿಟ್ಟು ದೇಶದ ಆರ್ಥಿತಕೆ ಬಗ್ಗೆ ಗಮನ ಕೊಡಿ- ಪಾಕ್ ಪ್ರಧಾನಿಗೆ 15ರ ಪೋರ ಸಲಹೆ

    ಇಸ್ಲಾಮಾಬಾದ್: ಕಾಶ್ಮೀರದ ವಿಚಾರ ಬಿಡಿ, ಹಳ್ಳ ಹಿಡಿದಿರುವ ನಮ್ಮ ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಯೋಚನೆ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್‍ಗೆ ಪಾಕಿನ 15 ವರ್ಷದ ಬಾಲಕನೋರ್ವ ಸಲಹೆ ಕೊಟ್ಟಿದ್ದಾನೆ.

    ಭಾರತ ಜಾಗತಿಕವಾಗಿ ಪ್ರಭಾವವನ್ನು ಹೊಂದಿದೆ, ಆರ್ಥಿಕ ಪ್ರಗತಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತ ಮುಂದಿದೆ. ಆರ್ಥಿಕತೆ ವಿಷಯದಲ್ಲಿ ಪಾಕಿಸ್ತಾನವನ್ನು ಭಾರತಕ್ಕೆ ಹೋಲಿಸಿದರೆ ಪರಿಗಣನೆಗೆ ಸಿಗದಷ್ಟು ಪಾಕ್ ಹಿಂದೆ ಉಳಿದಿದೆ. ಭಾರತಕ್ಕೆ ಸಮನಾಗಿ ತನ್ನ ಆರ್ಥಿಕತೆಯನ್ನು ಬಲಪಡಿಸುವವರೆಗೂ ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

    ಪಾಕಿಸ್ತಾನವು ಭಾರತದೊಂದಿಗೆ ವ್ಯಾಪಾರಿ ಅನಿವಾರ್ಯತೆ ಹೊಂದಿದೆ ಎನ್ನುವುದನ್ನು ದೇಶ ಅರ್ಥ ಮಾಡಿಕೊಳ್ಳಬೇಕು. ಇಡೀ ವಿಶ್ವದ ಮೇಲೆ ಭಾರತ ಪ್ರಭಾವ ಬೀರಿದೆ, ವ್ಯವಹಾರ ವಾಣಿಜ್ಯ ಕಾರಣಕ್ಕೆ ಭಾರತ ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಿದೆ. ಈ ಲಾಬಿ ಇಡೀ ಜಗತ್ತನ್ನು ಭಾರತದೊಂದಿಗೆ ಕರೆದೊಯ್ಯುತ್ತಿದೆ. ಎಲ್ಲಿಯವರೆಗೆ, ಪಾಕಿಸ್ತಾನದ ಆರ್ಥಿಕತೆಯು ಭಾರತದ ಆರ್ಥಿಕತೆಗೆ ಸಮನಾಗುವುದಿಲ್ಲವೋ, ಅಲ್ಲಿಯವರೆಗೆ ಪಾಕಿಸ್ತಾನ ಸಮಸ್ಯೆ ಬಗೆಹರಿಯಲ್ಲ. ಸಮಸ್ಯೆ ಬಗೆಹರಿಸಲು ಪಾಕ್ ಭಾರತದ ಸಮಾನವಾಗಿ ನಿಲ್ಲಲು ಸಾಧ್ಯವಾಗಲ್ಲ ಎಂದು ಹೇಳಿದ್ದಾನೆ.

    ಪಾಕಿಸ್ತಾನವು ಭಾರತವನ್ನು ಆರ್ಥಿಕವಾಗಿ ಹಿಂದಿಕ್ಕುವವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯಲ್ಲ. ಹಾಗೆಯೇ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲುವುದರ ಮೂಲಕ ಭಾರತದ ಕೋಪಕ್ಕೆ ಒಳಗಾಗಲು ಯಾವ ದೇಶ ಕೂಡ ಬಯಸುವುದಿಲ್ಲ. ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸಿದರೆ ಮಾತ್ರ ಕಾಶ್ಮೀರ ಸಮಸ್ಯೆ, ಸೇರಿದಂತೆ ನಮ್ಮ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತೆ ಎಂದು ಬಾಲಕ ಧೈರ್ಯದಿಂದ ಪ್ರಧಾನಿಗೇನೆ ಖಡಕ್ ಡೈಲಾಗ್ ಹೇಳಿ ತಿರುಗೇಟು ನೀಡಿದ್ದಾನೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ, ಪಾಕ್ ಪ್ರಧಾನಿಗೆ ಚಿಕ್ಕ ಹುಡುಗನು ಸಲಹೆ ಕೊಡುವಂತೆ ಆಯಿತು ಎಂದು ಎಲ್ಲೆಡೆ ಟ್ರೋಲ್ ಆಗುತ್ತಿದೆ. ಚಿಕ್ಕವಯಸ್ಸಿನಲ್ಲೇ ದೇಶದ ಬಗ್ಗೆ ಆಲೋಚಿಸಿದ ಬಾಕಲನ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.