Tag: kashmir

  • ಗಡಿಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಬಂದ ಯೋಧನಿಗೆ ಗೌರವ

    ಗಡಿಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಬಂದ ಯೋಧನಿಗೆ ಗೌರವ

    ಬೆಂಗಳೂರು: ಕಾಶ್ಮೀರದ ಪುಲ್ವಾಮ ದಾಳಿ, ಮಹಾರಾಷ್ಟ್ರ, ಮಥುರಾ, ಕಾರ್ಗಿಲ್ ಮುಂತಾದ ನಾನಾ ಕಡೆ ಸತತವಾಗಿ 17 ವರ್ಷ ನಿರಂತರವಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಇಂದು ತನ್ನ ಹುಟ್ಟೂರಿಗೆ ಮರಳಿದ ಯೋಧನಿಗೆ, ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಅದ್ದೂರಿ ಸ್ವಾಗತ ಮಾಡಿದ್ದಾರೆ.

    ನೆಲಮಂಗಲ ತಾಲೂಕಿನ ಹೊನ್ನರಾಯನಹಳ್ಳಿಯ ಯೋಧ ಶಿವಕುಮಾರ್. ಸತತ 17 ವರ್ಷ ದೇಶಕ್ಕಾಗಿ ದುಡಿದು ಇಂದು ನಿವೃತ್ತಿ ಹೊಂದಿ ತವರೂರಿಗೆ ಆಗಮಿಸಿದರು. ಯೋಧನ ಆಗಮನವಾಗುತ್ತಿದ್ದಂತೆ ಸ್ನೇಹಿತ ಬಳಗ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಹೂಮಾಲೆ ಹಾಕಿ ಆರತಿ ಬೆಳಗಿ ಅರಿಶಿನಕುಂಟೆಯಿಂದ ನೆಲಮಂಗಲದವರೆಗೂ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿ ಯೋಧನಿಗೆ ಅಭಿನಂದಿಸಿದರು.

    ಮೆರವಣಿಗೆ ವೇಳೆ ರಸ್ತೆಯುದ್ದಕ್ಕೂ ವಂದೇ ಮಾತರಂ ಜೈಕಾರ, ಬೈಕ್ ರ್ಯಾಲಿ ಮೂಲಕ ತವರಿಗೆ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ನಿವೃತ್ತ ಯೋಧ ಶಿವಕುಮಾರ್ ದೇಶಕ್ಕೆ ಅವಶ್ಯಕತೆ ಬಿದ್ದಾಗ ದೇಶ ಕಾಯೋ ಸೈನಿಕನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕರೆ ಹೋಗಿ ಕೆಲಸ ಮಾಡಿ ಅಂತ ಯುವಕರಿಗೆ ಕರೆ ನೀಡಿದರು.

  • ಪವರ್ ಸ್ಟಾರ್ ಹೊಸ ಹೇರ್ ಸ್ಟೈಲ್‌ಗೆ ನೆಟ್ಟಿಗರು ಫಿದಾ

    ಪವರ್ ಸ್ಟಾರ್ ಹೊಸ ಹೇರ್ ಸ್ಟೈಲ್‌ಗೆ ನೆಟ್ಟಿಗರು ಫಿದಾ

    ಬೆಂಗಳೂರು: ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡು ಕಾಶ್ಮೀರ ಕಣಿವೆ ಬೀದಿ ಬೀದಿಯಲ್ಲಿ ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಪುನೀತ್ ರಾಜ್‍ಕುಮಾರ್ ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿದ್ದಾರೆ. ಕಾಶ್ಮೀರದ ಗಲ್ಲಿಗಳಲ್ಲಿ ಸುತ್ತಾಡುತ್ತಾ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಜೇಮ್ಸ್ ಚಿತ್ರೀಕರಣ ನಿಮಿತ್ತ ಕಾಶ್ಮೀರದಲ್ಲಿರುವ ಪುನೀತ್ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಜೇಮ್ಸ್ ಚಿತ್ರೀಕರಣ ಕಾಶ್ಮೀರದಲ್ಲಿ ಭರದಿಂದ ಸಾಗುತ್ತಿದ್ದು, ಚಿತ್ರತಂಡದೊಂದಿಗೆ ಪುನೀತ್ ರಾಜ್‍ಕುಮಾರ್ ಕಾಶ್ಮೀರದಲ್ಲಿ ಬಿಡುಬಿಟ್ಟಿದ್ದಾರೆ. ಜೇಮ್ಸ್ ಚಿತ್ರಕ್ಕಾಗಿ ಪುನೀತ್ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಹೊಸ ಹೇರ್ ಸ್ಟೈಲ್ ನಲ್ಲಿ ಪುನೀತ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ನೆಟ್ಟಿಗರು ಪುನೀತ್ ಹೇರ್ ಸ್ಟೈಲ್‍ಗೆ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ.

    ಸಿನಿಮಾ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಹೇರ್ ಸ್ಟೈಲ್ , ಉಡುಪು, ದೇಹವನ್ನು ಪುನೀತ್ ಬದಲಿಸಿಕೊಳ್ಳುತ್ತಾರೆ. ಯುವರತ್ನ ಸಿನಿಮಾಕ್ಕಾಗಿ ಗಡ್ಡವನ್ನು ಬಿಟ್ಟಿದ್ದರು. ಇದೀಗ ಹೇರ್ ಸ್ಟೈಲ್ ಬದಲಿಸಿಕೊಂಡು ಮೋಡಿ ಮಾಡುತ್ತಿದ್ದಾರೆ. ಜೇಮ್ಸ್ ಸ್ಟಾರ್ ಈ ಹೊಸ ಲುಕ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.

    ಕಳೆದ ಒಂದುವಾರದಿಂದ ಕಾಶ್ಮೀರ ಕಣಿವೆಯಲ್ಲಿರುವ ಜೇಮ್ಸ್ ಚಿತ್ರತಂಡ ಆ್ಯಕ್ಷನ್ ಸೀಕ್ವೆನ್ಸ್ ಹಾಗೂ ಹಾಡಿನ ಚಿತ್ರೀಕರಣವನ್ನು ಮಾಡುತ್ತಿದೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಪುನೀತ್ ಸುತ್ತಮುತ್ತಲಿನ ಪ್ರದೇಶವನ್ನು ಸುತ್ತಾಡುತ್ತಾ ಜನರೊಂದಿಗೆ ಬೆರೆಯುತ್ತಿದ್ದಾರೆ. ಅಲ್ಲಿನ ಜನರೊಂದಿಗೆ ಮಾತನಾಡುತ್ತಾ ಸೆಲ್ಫಿ ತೆಗೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ಫೋಟೋಗಳಲ್ಲಿ ಪವರ್ ಸ್ಟಾರ್‍ನ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ ಯುವರತ್ನ ಏ.1ರಂದು ರಿಲೀಸ್ ಆಗಲಿದೆ. ಚಿತ್ರತಂಡ ಸಿನಿಮಾದ ಪ್ರಚಾರದಲ್ಲಿ ನಿರತವಾಗಿದೆ. ಪುನೀತ್ ರಾಜ್‍ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಯುವರತ್ನ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಜತೆಗೆ ಜೇಮ್ಸ್ ಸಿನಿಮಾದ ಚೀತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಭಯೋತ್ಪಾದಕರ ದಾಳಿಗೆ ಇಬ್ಬರು ಪೊಲೀಸರು ಬಲಿ

    ಭಯೋತ್ಪಾದಕರ ದಾಳಿಗೆ ಇಬ್ಬರು ಪೊಲೀಸರು ಬಲಿ

    ಶ್ರೀನಗರ: ಭಯೋತ್ಪಾದಕರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಶುಕ್ರವಾರ ಕಾಶ್ಮೀರದ ಶ್ರೀನಗರ ಜಿಲ್ಲೆಯ ಬಾಗಟ್ ಬರ್ಜುಲ್ಲಾದಲ್ಲಿ ನಡೆದಿದೆ. ಹೆಚ್ಚಿನ ಸುರಕ್ಷತೆ ಇರುವ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಬಾಗಾಟ್ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಪೊಲೀಸ್ ಮೃತಪಟ್ಟಿದ್ದು, ಮತ್ತೋರ್ವ ಪೊಲೀಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಭಯೋತ್ಪಾದಕರು ಬಹಳ ಸಮೀಪದಿಂದ ಗುಂಡು ಹಾರಿಸಿದ್ದರಿಂದ ಪೊಲೀಸ್ ಸಿಬ್ಬಂದಿ ಸಾರ್ಜೆಂಟ್ ಸಿ.ಟಿ ಮೊಹಮ್ಮದ್ ಯೂಸೂಫ್ ಮತ್ತು ಸಿಟಿ ಸುಹೇಲ್ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೆ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

    ಸದ್ಯ ಆರೋಪಿಗಳನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿರುವುದಾಗಿ ಪೊಲಿಸರು ತಿಳಿಸಿದ್ದಾರೆ. ಈ ಕುರಿರು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ಇಂದು ಶ್ರೀನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉಗ್ರಗಾಮಿಗಳ ಈ ಕೃತ್ಯವನ್ನು ನಾನು ಖಂಡಿಸುತ್ತೇನೆ ಮತ್ತು ಈ ಧೈರ್ಯಶಾಲಿಗಳ ಕುಟುಂಬಗಳಿಗೆ ಸಂತಾಪ ಸೂಚಿಸುವುದಾಗಿ ತಿಳಿಸಿದ್ದಾರೆ.

  • ʼಜೇಮ್ಸ್‌ʼಗಾಗಿ ಕಾಶ್ಮೀರಕ್ಕೆ ಹಾರಲಿದ್ದಾರೆ ಪವರ್ ಸ್ಟಾರ್

    ʼಜೇಮ್ಸ್‌ʼಗಾಗಿ ಕಾಶ್ಮೀರಕ್ಕೆ ಹಾರಲಿದ್ದಾರೆ ಪವರ್ ಸ್ಟಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೇಮ್ಸ್ ಚಿತ್ರದ ಶೂಟಿಂಗ್‍ಗಾಗಿ ಕಾಶ್ಮೀರಕ್ಕೆ ತೆರಳಲಿದ್ದಾರೆ.

    ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಆ್ಯಕ್ಷನ್ ಕಮರ್ಷಿಯಲ್ ಜೇಮ್ಸ್ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಇದೀಗ ಸಿನಿಮಾದ ಮತ್ತಷ್ಟು ಚಿತ್ರೀಕರಣಕ್ಕಾಗಿ ಜೇಮ್ಸ್ ಚಿತ್ರತಂಡ ಕಾಶ್ಮೀರಕ್ಕೆ ಹಾರಲಿದೆ. 10 ದಿನ ಕಾಶ್ಮೀರದಲ್ಲಿ ನಡೆಯುವ ಜೇಮ್ಸ್ ಸಿನಿಮಾ ಶೂಟಿಂಗ್‍ನಲ್ಲಿ ಹಾಡಿನ ಚಿತ್ರೀಕರಣ, ಫೈಟ್ ಸಿಕ್ವೆನ್ಸ್ ಮತ್ತು ಸಿನಿಮಾದ ಕೆಲವು ಭಾಗಗಳನ್ನು ಚಿತ್ರೀಕರಿಸಲಾಗುತ್ತದೆ.

    ಈಗಾಗಲೇ ಸಿನಿಮಾದ ಚಿತ್ರೀಕರಣ ಕುರಿತ ಅನುಭವವನ್ನು ನಿರ್ದೇಶಕ ಚೇತನ್ ಕುಮಾರ್ ಹಂಚಿಕೊಂಡಿದ್ದು, ಸಿನಿಮಾ ತಯಾರಕರು ಇಂದಿನಿಂದ ನಟ ಪುನೀತ್ ರಾಜ್‍ಕುಮಾರ್ ಮತ್ತು ಸಿಬ್ಬಂದಿ ಜೇಮ್ಸ್ ತಂಡಕ್ಕೆ ಸೇರಿಕೊಳ್ಳುತ್ತಾರೆ ನಿರೀಕ್ಷೆ ಹೊಂದಿದ್ದಾರೆ. ಕಾಶ್ಮೀರದಲ್ಲಿ ನಡೆಯುವ ಹಾಡಿನ ಚಿತ್ರೀಕರಣಕ್ಕೆ ಎ. ಹರ್ಷ ನೃತ್ಯ ನಿರ್ದೇಶಿಸಲಿದ್ದಾರೆ ಮತ್ತು ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಲಿದ್ದಾರೆ.

    ಈಗಾಗಲೇ ಬಹದ್ದೂರ್, ಭರ್ಜರಿ, ಭರಾಟೆ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಚೇತನ್ ಕುಮಾರ್‍ಗೆ ಜೇಮ್ಸ್ ಸಿನಿಮಾ ನಾಲ್ಕನೇ ಸಿನಿಮಾವಾಗಿದೆ. ಜೇಮ್ಸ್ ಚಿತ್ರದಲ್ಲಿ ಪುನೀತ್ ಜೊತೆ ನಾಯಕಿಯಾಗಿ ಪ್ರಿಯಾ ಆನಂದ್ ಸಾಥ್ ನೀಡುತ್ತಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತಾ ಸಂಯೋಜಿಸಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ ಬಂಡವಾಳ ಹೂಡಿದ್ದಾರೆ.

  • ಗುಲಾಂ ನಬಿ ಆಜಾದ್‌ ಕಾರ್ಯ ನೆನೆದು ಭಾವುಕರಾದ ಪ್ರಧಾನಿ ಮೋದಿ

    ಗುಲಾಂ ನಬಿ ಆಜಾದ್‌ ಕಾರ್ಯ ನೆನೆದು ಭಾವುಕರಾದ ಪ್ರಧಾನಿ ಮೋದಿ

    ನವದೆಹಲಿ: ಕಾಂಗ್ರೆಸ್‌ ಸದಸ್ಯ, ಪ್ರತಿ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಕಣ್ಣೀರು ಹಾಕಿದ್ದಾರೆ.

    ಗುಲಾಂ ನಬಿ ಆಜಾದ್ ಕಾರ್ಯಗಳನ್ನು ಶ್ಲಾಘಿಸಿದ ಮೋದಿ, ಆಜಾದ್ ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಿರಲಿಲ್ಲ. ದೇಶ ಮತ್ತು ಸದನದ ಬಗ್ಗೆ ಕಾಳಜಿ ಹೊಂದಿದ್ದರು ಎಂದು ಹೇಳಿ ಭಾವುಕರಾದರು.

    ಆಜಾದ್‌ ಅವರು ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಸಂದರ್ಭವನ್ನು ಪ್ರಸ್ತಾಪಿಸಿದ ಮೋದಿ, ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದಾಗಿ ಗುಜರಾತಿನ ಜನ ಸಿಲುಕಿಕೊಂಡಾಗ ಆಜಾದ್‌ ಮತ್ತು ಪ್ರಣಬ್‌ ಮುಖರ್ಜಿ ಅವರ ಶ್ರಮವನ್ನು ನಾನು ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಿಲ್ಲ. ಆ ದಿನ ರಾತ್ರಿ ಗುಲಾ ನಬಿಜೀ ಕರೆ ಮಾಡಿ ಮಾತನಾಡಿದ್ದರು ಎಂದು ಹೇಳಿ ಕಣ್ಣೀರು ಹಾಕಿದರು.

    ಅವರು ತಮ್ಮ ಕುಟುಂಬದ ಸದಸ್ಯರಂತೆ ನಮ್ಮ ಜನರನ್ನು ನೋಡಿಕೊಂಡರು. ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಅಧಿಕಾರದಲ್ಲಿದ್ದಾಗ ಹೇಗೆ ಕೆಲಸ ಮಾಡಿದ್ದರು ಎಂಬುದು ನೆನಪಿನಲ್ಲಿರುತ್ತದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

    ನಾನು ಮತ್ತು ಗುಲಾ ನಬಿ ಆಜಾದ್‌ ಹಲವು ವರ್ಷಗಳ ಹಿಂದೆಯೇ ಪರಿಚಿತರು. ನಾವಿಬ್ಬರು ಒಟ್ಟಿಗೆ ಮುಖ್ಯಮಂತ್ರಿಗಳಾಗಿದ್ದೆವು. ನಾನು ಮುಖ್ಯಮಂತ್ರಿ ಆಗುವುದಕ್ಕೂ ಮೊದಲೇ ಗುಲಾಂ ನಬಿ ಅವರ ಜೊತೆ ಮಾತನಾಡಿದ್ದೆ. ಬಹಳಷ್ಟು ಜನರಿಗೆ ಒಂದು ವಿಚಾರ ತಿಳಿದಿಲ್ಲ. ಆಜಾದ್‌ ಅವರಿಗೆ ಗಾರ್ಡನಿಂಗ್‌ ಅಂದರೆ ಬಹಳ ಇಷ್ಟ ಎಂದು ತಿಳಿಸಿದರು.

    ಸೋಮವಾರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ್ದ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್‌ ಅವರನ್ನು ಶ್ಲಾಘಿಸಿ ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದರು.

    ಆಜಾದ್‌ ಅವರು ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಯಶಸ್ವಿಯಾಗಿ ನಡೆದಿದ್ದಕ್ಕೆ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದರು. ಅವರ ಈ ಹೇಳಿಕೆಯನ್ನು ಕಾಂಗ್ರೆಸ್‌ ಸಕಾರಾತ್ಮಕವಾಗಿ ನೋಡಬೇಕೇ ಹೊರತೂ ಅವರನ್ನು ಜಿ-23ರ ಗುಂಪಿಗೆ ಸೇರಿಸಬಾರದು ಎಂದು ಹೇಳಿ ವ್ಯಂಗ್ಯವಾಡಿದ್ದರು.

    ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಸುಧಾರಣೆ ಕೋರಿ ಪತ್ರ ಬರೆದು 23 ನಾಯಕರು ಬಂಡಾಯ ಎದ್ದಿದ್ದನ್ನು ಪರೋಕ್ಷವಾಗಿ ಮೋದಿ ಉಲ್ಲೇಖಿಸಿದ್ದರು.

  • ಎನ್‌ಕೌಂಟರ್‌ ಭಯ – ಕೈ ಎತ್ತಿ ಶರಣಾದ ಉಗ್ರ, ಸೈನಿಕರ ಕಾಲಿಗೆ ಅಡ್ಡ ಬಿದ್ದ ತಂದೆ

    ಎನ್‌ಕೌಂಟರ್‌ ಭಯ – ಕೈ ಎತ್ತಿ ಶರಣಾದ ಉಗ್ರ, ಸೈನಿಕರ ಕಾಲಿಗೆ ಅಡ್ಡ ಬಿದ್ದ ತಂದೆ

    ಶ್ರೀನಗರ: ಎನ್‌ಕೌಂಟರ್‌ ಕಾರ್ಯಾಚರಣೆಯ ವೇಳೆ ಯುವ ಉಗ್ರನೊಬ್ಬ ಭಾರತೀಯ ಸೇನೆಗೆ ಶರಣಾಗಿದ್ದಾನೆ.

    ಉಗ್ರರು ಇರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬುದ್ಗಾಂನಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಯಕ್ಕೆ ಬಿದ್ದ ಉಗ್ರನೊಬ್ಬ ಸೇನೆಗೆ ಶರಣಾಗಿದ್ದಾನೆ.

    ಪ್ರದೇಶವನ್ನು ಸೇನೆ ಸುತ್ತವರಿದ ವೇಳೆ ಉಗ್ರ ನಾನು ಶರಣಾಗುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಸೈನಿಕರು, ನಿನ್ನನ್ನು ಏನು ಮಾಡುವುದಿಲ್ಲ. ಹತ್ತಿರ ಬರುವ ಮೊದಲು ಶರ್ಟ್‌ ತೆಗೆಯಬೇಕು ಎಂದು ಹೇಳಿದ್ದಾರೆ.

    ಹತ್ತಿರ ಬಂದ ಬಳಿಕ ಆತನ ದೇಹದಲ್ಲಿ ಯಾವುದಾದರೂ ಶಸ್ತ್ರಾಸ್ತ್ರಗಳು ಇದೆಯೇ ಎಂದು ಪರಿಶೀಲಿಸಿದ್ದಾರೆ. ಬಳಿಕ ಇತನ ತಂದೆ ಸ್ಥಳಕ್ಕೆ ಬಂದು ಸೈನಿಕರ ಕಾಲಿಗೆ ಬಿದ್ದು ಕೃತಜ್ಞತೆ ಹೇಳಿದ್ದಾರೆ. ಬಳಿಕ ಮಗನಿಗೆ ಮತ್ತೆ ಉಗ್ರರ ಜೊತೆ ಕೈ ಜೋಡಿಸಬೇಡ ಎಂದು ಬುದ್ಧಿವಾದ ಹೇಳಿದ್ದಾರೆ.

    ಈತ ಕೆಲ ದಿನಗಳ ಹಿಂದೆಯಷ್ಟೇ ಯುವಕ  ಉಗ್ರರ ಜೊತೆ ಸೇರಿದ್ದ. ಆತನ ಬಳಿಯಿಂದ ಎಕೆ 47 ರೈಫಲ್‌ ವಶಪಡಿಸಿಕೊಳ್ಳಲಾಗಿದೆ.

    ಈ ವಿಚಾರದ ಬಗ್ಗೆ ಭಾರತೀಯ ಸೇನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಅಕ್ಟೋಬರ್‌ 13 ರಂದು ವಿಶೇಷ ಪೊಲೀಸ್‌ ಅಧಿಕಾರಿ 2 ಎಕೆ 47 ರೈಫಲ್‌ ಜೊತೆ ಪರಾರಿಯಾದ ಬಗ್ಗೆ ವರದಿ ಬಂತು. ಇದೇ ದಿನ ಚಡೂರದಿಂದ ಜಹಾಂಗೀರ್‌ ಬಟ್‌ ಎಂಬಾತ ನಾಪತ್ತೆಯಾಗಿದ್ದ. ಈತನ ಕುಟುಂಬ ಈತನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿತ್ತು. ಇಂದು ಬೆಳಗ್ಗೆ ನಡೆದ ಜಂಟಿ ಕಾರ್ಯಾಚರಣೆಯ ವೇಳೆ ಈತ ಪತ್ತೆಯಾಗಿ ಶರಣಾಗಿದ್ದಾನೆ” ಎಂದು ತಿಳಿಸಿದೆ.

    https://twitter.com/PawanDurani/status/1317077178866040838

    ಎನ್‌ಕೌಂಟರ್‌ ವೇಳೆ ಉಗ್ರರು ಸೇನೆಗೆ ಶರಣಾಗುವುದು ಅಪರೂಪದಲ್ಲಿ ಅಪರೂಪ. ಈ ಹಿಂದೆ ಅಗಸ್ಟ್‌ನಲ್ಲಿ ಶೋಪಿಯನ್‌ ಜಿಲ್ಲೆಯ ಕಿಲ್ಲೂರ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆಗೆ ಇಳಿದಾಗ ಒಬ್ಬ ಉಗ್ರ ಶರಣಾಗಿದ್ದ. ಈ ಕಾರ್ಯಾಚರಣೆಯಲ್ಲಿ 4 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು.

    https://twitter.com/Delta6470/status/1317080787435450373

  • ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

    ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

    ನವದೆಹಲಿ: ಇಂದು ಭಾರತಕ್ಕೆ 5 ರಫೇಲ್‌ ಯುದ್ಧ ವಿಮಾನಗಳು ಲ್ಯಾಂಡ್‌ ಆಗಲಿದೆ. ಈ ರಫೇಲ್‌ ವಿಮಾನಗಳು ಭಾರತಕ್ಕೆ ಬರುವಲ್ಲಿ ಜಮ್ಮು ಕಾಶ್ಮೀರ ಮೂಲದ ವಾಯುಸೇನೆಯ ಅಧಿಕಾರಿ ಹಿಲಾಲ್‌ ಅಹ್ಮದ್‌ ಪ್ರಮುಖ ಪಾತ್ರವಹಿಸಿದ್ದಾರೆ.

    ಕಳೆದ ಒಂದು ವರ್ಷದಿಂದ ಫ್ರಾನ್ಸ್‌ನಲ್ಲಿರುವ ಏರ್‌ ಕಮಾಂಡರ್‌ ಹಿಲಾಲ್‌ ಅಹ್ಮದ್‌ ಭಾರತದ ಬೇಡಿಕೆಗೆ ಅನುಗುಣವಾಗಿ ಡಸಾಲ್ಡ್‌ ಕಂಪನಿಯ ಜೊತೆ ಸಂವಹನ ನಡೆಸಿ ರಫೇಲ್‌ ವಿಮಾನವನ್ನು ರೂಪಿಸಿದ್ದಾರೆ.

    52 ವರ್ಷದ ಹಿಲಾಲ್‌ ಅನಂತ್‌ನಾಗ್‌ ಜಿಲ್ಲೆ ಭಕ್ಷಿಬಾದ್‌ ನಗರದಲ್ಲಿ ಜನಿಸಿದ್ದು, ಇವರ ತಂದೆ ದಿವಂಗತ ಮೊಹಮ್ಮದ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

    1988ರ ಡಿಸೆಂಬರ್‌ 17 ರಂದು ವಾಯುಸೇನೆಗೆ ಪೈಲಟ್‌ ಆಗಿ ಸೇರ್ಪಡೆಗೊಂಡ ಇವರು 1993ರಲ್ಲಿ ಫೈಲ್ಡ್‌ ಲೆಫ್ಟಿನೆಂಟ್‌ ಆಗಿ ನೇಮಕಗೊಂಡರು. 2004ರಲ್ಲಿ ವಿಂಗ್‌ ಕಮಾಂಡರ್‌, 2016ರಲ್ಲಿ ಗ್ರೂಪ್‌ ಕ್ಯಾಪ್ಟನ್‌, 2016ರಲ್ಲಿ ಏರ್‌ ಕಮಾಂಡರ್‌ ಹುದ್ದೆ ಸಿಕ್ಕಿತ್ತು.

    ಹಿಲಾಲ್ ಜಮ್ಮು ಜಿಲ್ಲೆಯ ನಾಗ್ರೋಟಾ ಪಟ್ಟಣದ ಸೈನಿಕ್ ಶಾಲೆಯಲ್ಲಿ ಓದಿದ್ದಾರೆ. ಡಿಫೆನ್ಸ್‌ ಸರ್ವಿಸಸ್‌ ಸ್ಟಾಫ್‌ ಕಾಲೇಜಿನಲ್ಲಿ ಪದವಿ ಪಡೆದ ಇವರು ಅಮೆರಿಕದಲ್ಲಿರುವ ಏರ್‌ ವಾರ್‌ ಕಾಲೇಜಿನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪದವಿ ತೇರ್ಗಡೆಯಾಗಿದ್ದರು. ವಾಯು ಸೇನಾ ಮೆಡಲ್‌ ಮತ್ತು ವಿಶಿಷ್ಟ ಸೇವಾ ಮೆಡಲ್‌ ಸಹ ಇವರಿಗೆ ಸಿಕ್ಕಿದೆ.

    ಮೀರಾಜ್‌ -2000, ಮಿಗ್‌ 21, ಕಿರಣ್‌ ವಿಮಾನವನ್ನು ಅಪಘಾತ ರಹಿತವಾಗಿ ಚಲಾಯಿಸಿದ ಅನುಭವ ಇವರಿಗೆ ಇದೆ. 3 ಸಾವಿರ ಕಿ.ಮೀ ಹಾರಾಟದ ಅನುಭವ ಹೊಂದಿದ್ದ ಕಾರಣ  ಹಿಲಾಲ್‌ ಅಹ್ಮದ್ ಅವರಿಗೆ ರಫೇಲ್‌ ಉಸ್ತುವಾರಿಯನ್ನು ನೀಡಲಾಗಿತ್ತು.

    ಮೊದಲ ಬ್ಯಾಚ್‌ನ 10 ಯುದ್ಧ ವಿಮಾನಗಳ ಪೈಕಿ 5 ಯುದ್ಧ ವಿಮಾನಗಳು ಇಂದು ಭಾರತಕ್ಕೆ ಬರುತ್ತಿದ್ದು ಹರ್ಯಾಣದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಈ ವಿಮಾನಗಳು ನಿಯೋಜನೆಗೊಳ್ಳಲಿವೆ.

    2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ವಿಮಾನಗಳನ್ನು(28 ಸಿಂಗಲ್‌ ಸೀಟರ್‌, 8 ಡಬಲ್‌ ಸೀಟರ್‌) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್‌ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‌ಲೈನ್‌ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್‌ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.

    ರಫೇಲ್ ವಿಶೇಷತೆ ಏನು?
    ರಫೇಲ್‌ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮೀ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

    ಭಾರತದ ಬೇಡಿಕೆ ಏನಿತ್ತು?
    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿತ್ತು.

  • ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ

    ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ

    ನವದೆಹಲಿ: ಇನ್ಮೇಲಿಂದ ಶಾಹಿದ್ ಅಫ್ರಿದಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವನು ಮಿತಿಗಳನ್ನು ದಾಟಿದ್ದಾನೆ ಎಂದು ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಗರಂ ಆಗಿದ್ದಾರೆ.

    ಸದಾ ಕಾಶ್ಮೀರಾ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಅಫ್ರಿದಿ ಆಗಾಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಈಗ ಮತ್ತೆ ಕಾಶ್ಮೀರ ವಿಚಾರವಾಗಿ ಮಾತನಾಡಿರುವ ಅಫ್ರಿದಿ, ಭಾರತದ ಪ್ರಧಾನಿ ಮೋದಿ ಅವರನ್ನು ಬಗ್ಗೆಯೂ ತೆಗಳಿ ಟ್ವೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಭಾರತೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

    ಇದಕ್ಕೂ ಮುನ್ನ ಅಫ್ರಿದಿ ಮತ್ತು ಹರ್ಭಜನ್ ಸಿಂಗ್ ಅವರು ಉತ್ತಮ ಸ್ನೇಹಿತರಾಗಿದ್ದರು. ಜೊತೆಗೆ ಪಾಕಿಸ್ತಾನದಲ್ಲಿ ಇರುವ ಶಾಹಿದ್ ಅಫ್ರಿದಿ ಫೌಂಡೇಶನ್ ಗೆ ಸಹಾಯ ಮಾಡುವಂತೆ ಸ್ವತಃ ಹರ್ಭಜನ್ ಸಿಂಗ್ ಅವರೇ ಕೇಳಿಕೊಂಡಿದ್ದರು. ಆದರೆ ಕಾಶ್ಮೀರದ ಬಗ್ಗೆ ಅಫ್ರಿದಿ ಕೆಟ್ಟ ಹೇಳಿಕೆ ನೀಡಿದ ನಂತರ ಭಜ್ಜಿ ಅಫ್ರಿದಿ ಮೇಲೆ ಗರಂ ಆಗಿದ್ದಾರೆ. ಅವನು ಮಿತಿ ಮೀರಿದ್ದಾನೆ. ಇನ್ಮೇಮಿಂದ ಅವನಿಗೂ ನನಗೂ ಸಂಬಂಧವಿಲ್ಲ ಎಂದು ಭಜ್ಜಿ ಹೇಳಿದ್ದಾರೆ.

    ಈ ವಿಚಾರವಾಗಿ ಸ್ಪೋರ್ಟ್ಸ್ ಚಾನೆಲ್‍ವೊಂದರಲ್ಲಿ ಮಾತನಾಡಿರುವ ಭಜ್ಜಿ, ಶಾಹಿದ್ ಅಫ್ರಿದಿ ನಮ್ಮ ದೇಶದ ಬಗ್ಗೆ ಮತ್ತು ನಮ್ಮ ಪ್ರಧಾನಿ ಮೋದಿ ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಮಾತಿನ ಮೇಲೆ ನಿಗಾ ಇರಬೇಕು. ಅಫ್ರಿದಿಗೆ ನಮ್ಮ ದೇಶದ ಬಗ್ಗೆ ಮಾತನಾಡಲು ಯಾವುದೇ ಹಕ್ಕು ಇಲ್ಲ. ಜೊತೆಗೆ ನಾವು ಕೂಡ ಅಫ್ರಿದಿಯೊಂದಿಗೆ ಸೇರಿ ಏನೂ ಮಾಡಬೇಕಿಲ್ಲ ಎಂದು ಭಜ್ಜಿ ಕಿಡಿಕಾರಿದ್ದಾರೆ.

    ಈ ಹಿಂದೆ ಯುವರಾಜ್ ಸಿಂಗ್ ಮತ್ತು ಭಜ್ಜಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಫೌಂಡೇಶನ್‍ಗೆ ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ನಂತರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿ ಸ್ಪಷ್ಟನೆಯನ್ನು ನೀಡಿದ್ದರು. ಈ ವಿಚಾರದ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಪ್ರಮಾಣಿಕವಾಗಿ ಹೇಳಬೇಕು ಎಂದರೆ ಆತ ನಮಗೆ ಅವನ ಚಾರಿಟಿಗಾಗಿ ಮನವಿ ಮಾಡಲು ಹೇಳಿದ್ದ. ಒಳ್ಳೆಯ ವಿಚಾರ ಎಂದು ನಾವು ಮನವಿ ಮಾಡಿದೆವು ಅಷ್ಟೇ ಎಂದು ತಿಳಿಸಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟ ಗಡಿಗಳು ಮತ್ತು ಧರ್ಮ, ಜಾತಿಗಳನ್ನು ಮೀರಿ ಮಾಡಬೇಕು ಎಂದು ನಮ್ಮ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ಹಾಗಾಗಿ ನಾವು ಮಾಡುತ್ತಿರುವ ಮನವಿ ಬಗ್ಗೆ ತುಂಬ ಸ್ಪಷ್ಟತೆ ಇತ್ತು. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಸಹಾಯ ಆಗಲಿ ಎಂದು ನಾವು ಮನವಿ ಮಾಡಿಕೊಂಡಿದ್ದೇವು. ಆದರೆ ಈಗ ಆತ ನಮ್ಮ ದೇಶದ ವಿರುದ್ಧವೇ ಮಾತನಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ.

    ನಾನು ಈ ದೇಶದಲ್ಲಿ ಹುಟ್ಟಿದ್ದೇನೆ ಈ ದೇಶಕ್ಕಾಗಿ ಪ್ರಾಣ ನೀಡುತ್ತೇನೆ. 20 ವರ್ಷ ದೇಶದ ಪರವಾಗಿ ಆಡಿ ಹಲವಾರು ಪಂದ್ಯಗಳನ್ನು ಗೆದ್ದಿದ್ದೇವೆ. ನಾನು ದೇಶದ ವಿರುದ್ಧವಾಗಿ ಏನಾದರೂ ಮಾಡಿದ್ದೇನೆ ಎಂದು ಯಾರೂ ಹೇಳುವುದಿಲ್ಲ. ಇಂದಿಲ್ಲ ನಾಳೆ ನನ್ನ ದೇಶಕ್ಕೆ ಎಲ್ಲಿಯಾದರೂ ನನ್ನ ಅವಶ್ಯಕತೆ ಇದ್ದರೆ ಅದೂ ಗಡಿಯಲ್ಲಿ ಆದರೂ ಸರಿ ನಾನು ಹೋಗುತ್ತೇನೆ. ನನ್ನ ದೇಶಕ್ಕಾಗಿ ಗನ್ ಹಿಡಿದು ಹೋರಾಟ ನಡೆಸುತ್ತೇನೆ ಎಂದು ಭಜ್ಜಿ ಹೇಳಿದ್ದಾರೆ.

    ಅಫ್ರಿದಿ ಟ್ವೀಟ್
    ಕಾಶ್ಮೀರಿಗಳ ಸಂಕಟವನ್ನು ಅನುಭವಿಸಲು ಧಾರ್ಮಿಕ ನಂಬಿಕೆಯನ್ನು ತೆಗೆದುಕೊಳ್ಳಬೇಡಿ. ಅದರ ಬದಲು ಸೂಕ್ತವಾದ ಸ್ಥಳದಲ್ಲಿ ಒಳ್ಳೆಯ ಮನಸ್ಸು ಇರಬೇಕು. ಕಾಶ್ಮೀರವನ್ನು ಉಳಿಸಿ ಎಂದು ಬರೆದು ಅಫ್ರಿದಿ ಶುಕ್ರವಾರ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಂತರ ಟ್ವೀಟ್ ಮಾಡಿದ್ದ ಗೌತಮ್ ಗಂಭೀರ್ ಅಫ್ರಿದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

  • ದೇಶದಲ್ಲಿ ಇಂದು ಒಂದೇ ದಿನಕ್ಕೆ ಕೊರೊನಾಗೆ ಇಬ್ಬರು ಬಲಿ

    ದೇಶದಲ್ಲಿ ಇಂದು ಒಂದೇ ದಿನಕ್ಕೆ ಕೊರೊನಾಗೆ ಇಬ್ಬರು ಬಲಿ

    – ಸಾವಿನ ಸಂಖ್ಯೆ 15ಕ್ಕೆ ಏರಿಕೆ

    ನವದೆಹಲಿ: ಮಾರಕ ಕೊರೊನಾ ವೈರಸ್ ದೇಶದಲ್ಲಿ ಇಂದು ಒಂದೇ ದಿನಕ್ಕೆ ಇಬ್ಬರನ್ನು ಬಲಿ ಪಡೆದುಕೊಂಡಿದ್ದು, ಈವರೆಗೆ ಕೊರೊನಾ ಸೋಂಕಿತ 15 ಜನರು ಮೃತಪಟ್ಟಿದ್ದಾರೆ.

    ಜಮ್ಮು-ಕಾಶ್ಮೀರದಲ್ಲಿ ಸಿಂಗಪುರ್‌ನ ಹೈದರ್‌ಪೊರಾದಿಂದ ಬಂದಿದ್ದ 65 ವರ್ಷದ ಕೊರೊನಾ ಸೋಂಕಿತ ವೃದ್ಧ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಜಮ್ಮು-ಕಾಶ್ಮೀರದಲ್ಲಿ ಕೊರೊನಾಗೆ ಮೊದಲ ಬಲಿ ಇದಾಗಿದೆ. ಅಷ್ಟೇ ಅಲ್ಲದೆ ಅವರ ಜೊತೆಗೆ ಸಂಪರ್ಕ ಹೊಂದಿದ್ದ ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

    ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕೊರೊನಾ ಸೋಂಕಿತ 65 ವರ್ಷದ ವೃದ್ಧೆ ನಿಧನರಾಗಿದ್ದಾರೆ. ಮುಂಬೈ ಮತ್ತು ಥಾಣೆಗಳಲ್ಲಿ ಹೊಸದಾಗಿ ಎರಡು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 124 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಒಟ್ಟು ಮೂವರು ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.

    ವಿಶ್ವದಾದ್ಯಂತ 21,000ಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಅಷ್ಟೇ 7,500ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಸ್ಪೇನ್‍ನಲ್ಲಿ 3,600ಕ್ಕೂ ಹೆಚ್ಚು ಮೃತಪಟ್ಟಿದ್ದು, ಚೀನಾದ ಸಾವಿನ ಸಂಖ್ಯೆಯನ್ನು ದಾಟಿದೆ. ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ 900ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 60,000 ಮಂದಿ ಸೋಂಕಿತರಿದ್ದಾರೆ. ಇರಿಂದಾಗಿ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ದೊಡ್ಡಣ್ಣ ಅಪಾಯಕಾರಿ ಮಟ್ಟವನ್ನು ತಲುಪಿದೆ.

    ಭಾರತದಲ್ಲಿ ಇಲ್ಲಿಯವರೆಗೆ 600ಕ್ಕೂ ಹೆಚ್ಚು ಪ್ರಕರಣಗಳಿದ್ದು, 15 ಜನರು ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶವನ್ನು ಸಂಪೂರ್ಣ ಲಾಕ್‍ಡೌನ್ ಮಾಡುವಂತೆ ಆದೇಶ ನೀಡಿದ್ದಾರೆ. ಈ ಮೂಲಕ ಮನೆಯೊಳಗೆ ಇರಲು ಮತ್ತು ಅಗತ್ಯಗಳಿಗಾಗಿ ಮಾತ್ರ ಮನೆಯಿಂದ ಹೊರಗೆ ಬರುವಂತೆ ತಿಳಿಸಲಾಗಿದೆ.

    ಭಾರತದಲ್ಲಿ ಬುಧವಾರ ಒಂದೇ ದಿನಕ್ಕೆ 100ಕ್ಕೂ ಹೆಚ್ಚು ಕೊರೊನಾ ಹೊಸ ಪ್ರಕರಣಗಳು ಹಾಗೂ 3 ಸಾವು ದಾಖಲಿಸಿದೆ. 125 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ ರಾಜ್ಯವಾಗಿದೆ.

  • ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳು ಅಮಾನತು

    ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳು ಅಮಾನತು

    ಹುಬ್ಬಳ್ಳಿ: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಕಾಶ್ಮೀರ ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿ ಆದೇಶ ಹೊರಡಿಸಿದೆ.

    ಪುಲ್ವಾಮಾ ದಾಳಿಯಾಗಿ ಶುಕ್ರವಾರಕ್ಕೆ ಒಂದು ವರ್ಷವಾದ ಬೆನ್ನಲ್ಲೇ ಕಾಶ್ಮೀರ ಮೂಲದ ಅಮೀರ್, ತಾಲೀಬ್ ಮತ್ತು ಬಸೀತ್ ಪಾಕಿಸ್ತಾನ ಸೇನೆಯ ಹಾಡಿಗೆ ಧ್ವನಿಗೂಡಿಸಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ವಿಡಿಯೋ ಮಾಡಿ ಮೊಬೈಲ್ ಸ್ಟೇಟಸ್ ಹಾಕಿಕೊಂಡಿದ್ದರು. ಇಂದು ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಮಾಡಿದಲ್ಲದೇ ವಿದ್ಯಾರ್ಥಿಗಳನ್ನ ಥಳಿಸಿದ್ದರು.

    ಬಂಧಿತ ಅಮೀರ್ ಸಿವಿಲ್ ಇಂಜಿನಿಯರಿಂಗ್‍ನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ದಕ್ಷಿಣ ಕಾಶ್ಮೀರದ ಅನಂತನಾಗ್ ಭಾಗದವನು ಎಂದು ತಿಳಿದು ಬಂದಿದೆ. ಅಲ್ಲದೇ ತಾಲೀಬ್ ಹಾಗೂ ಬಸೀತ್ ಇಬ್ಬರು ಸಿವಿಲ್ ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. ತಾಲೀಬ್ ದಕ್ಷಿಣ ಕಾಶ್ಮೀರದ ಅನಂತನಾಗ್ ಭಾಗದ ವಿದ್ಯಾರ್ಥಿಯಾದರೆ, ಬಸೀತ್ ಉತ್ತರ ಕಾಶ್ಮೀರದ ಸಂಪೂರೆಯವನು ಎಂದು ತಿಳಿದು ಬಂದಿದೆ.

    ಈ ಮೂವರು ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ತನಿಖೆ ಕೈಗೊಳ್ಳುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಮೂವರು ಕಾಶ್ಮೀರ ಮೂಲದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.