Tag: Kashmir separatists

  • ಜಮ್ಮು-ಕಾಶ್ಮೀರ ಪ್ರತ್ಯೇಕವಾದಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಜಮ್ಮು-ಕಾಶ್ಮೀರ ಪ್ರತ್ಯೇಕವಾದಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಶ್ರೀನಗರ: ಜಮ್ಮು-ಕಾಶ್ಮೀರ್ ಪ್ರತ್ಯೇಕವಾದಿ ಸಂಘಟನೆಯ ಐವರು ಮುಖಂಡರಿಗೆ ನೀಡಲಾಗಿದ್ದ ಭದ್ರತೆಯನ್ನು ಸರ್ಕಾರವು ಭಾನುವಾರ ಹಿಂಪಡೆಯಲು ನಿರ್ಧರಿದೆ. ಈ ಮೂಲಕ ಪುಲ್ವಾಮಾ ದಾಳಿಯ ಬಿಸಿಯನ್ನು ಪ್ರತ್ಯೇಕವಾದಿಗಳಿಗೆ ಮುಟ್ಟಿಸಲಾಗಿದೆ.

    ಮಿರ್ ವಾಯಿಜ್ ಉಮರ್ ಫಾರೂಕ್ ಸೇರಿದಂತೆ ಐವರು ಮುಖಂಡರು ಹಾಗೂ ಇತರೆ ಪ್ರತ್ಯೇಕವಾದಿಗಳಿಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲವೆಂದು ಜಮ್ಮು-ಕಾಶ್ಮೀರ ಸರ್ಕಾರ ಸೂಚನೆ ಹೊರಡಿಸಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

    ಪ್ರತ್ಯೇಕವಾಗಿ ಮುಖಂಡರು ಯಾರು?:
    ಜಮ್ಮು-ಕಾಶ್ಮೀರ ಪ್ರತ್ಯೇಕವಾದಿ ಮುಖಂಡರಾದ ಮಿರ್‍ವಾಯಿಜ್ ಉಮರ್ ಫಾರೂಕ್, ಶಬೀರ್ ಷಾ, ಹಶಿಮ್ ಖುರೇಷಿ, ಬಿಲಾಲ್ ಲೋನ್ ಮತ್ತು ಅಬ್ದುಲ್ ಘನಿ ಭಟ್ ಇವರಿಗೆ ಈ ಹಿಂದೆ ಸರ್ಕಾರದಿಂದ ಭದ್ರತೆ ನೀಡಲಾಗಿತ್ತು. ಆದರೆ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಯೋಧರು ಹುತಾತ್ಮರಾಗಿದ್ದರಿಂದ ಪ್ರತ್ಯೇಕವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ.

    ಈ ಆದೇಶದ ಅನ್ವಯ, ಪ್ರತ್ಯೇಕವಾದಿಗಳಿಗೆ ನೀಡಲಾಗಿದ್ದ ಎಲ್ಲ ಭದ್ರತಾ ಸಿಬ್ಬಂದಿ ಹಾಗೂ ವಾಹನಗಳನ್ನು ಭಾನುವಾರ ಸಂಜೆ ಹಿಂಪಡೆಯಲಾಗುತ್ತದೆ. ಇನ್ನುಮುಂದೆ ಅವರಿಗೆ ಯಾವುದೇ ಭದ್ರತೆಯನ್ನು ಒದಗಿಸುವುದಿಲ್ಲ. ಅವರಿಗೆ ಸರ್ಕಾರ ಒದಗಿಸಿದ ಎಲ್ಲ ರೀತಿಯ ಸೌಲಭ್ಯಗಳನ್ನು ಹಿಂಪಡೆಯಲಾಗುತ್ತದೆ.

    ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಶನಿವಾರ ನಡೆಸಿದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಗೌಬಾ, ಇಂಟಲಿಜೆನ್ಸ್ ಬ್ಯೂರೋ ನಿರ್ದೇಶಕ ರಾಜೀವ್ ಜೈನ್ ಉಪಸ್ಥಿತರಿದ್ದರು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹಾಗೂ ಜಮ್ಮು-ಕಾಶ್ಮೀರದಲ್ಲಿ ಆತಂಕ ಸೃಷ್ಟಿಸುವ ಗುಂಪುಗಳನ್ನು ಹತ್ತಿಕ್ಕಲ್ಲು ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳ ಮೂಲದಿಂದ ಕೇಳಿಬಂದಿದೆ.

    ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಗೃಹಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆಯಿಂದ ನಿಧಿ ಪಡೆಯುತ್ತಿರುವವರಿಗೆ ನೀಡಿರುವ ಭದ್ರತೆಯನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಅಲ್ಲಿನ ಕೆಲವರು ಐಎಸ್‍ಐ ಮತ್ತು ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಅಂತವರಿಗೆ ಭದ್ರತೆ ನೀಡುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದರು.

    ಕಾಶ್ಮೀರದ ನೆಲದಲ್ಲಿ ಸಂಭವಿಸುತ್ತಿರುವ ಪ್ರತಿ ಘಟನೆಗೂ ಪ್ರತ್ಯೇಕವಾದಿಗಳು ಹಾಗೂ ಮುಖಂಡರು ವಿಷಾದ ವ್ಯಕ್ತಪಡಿಸುತ್ತಾರೆ. ಕಾಶ್ಮೀರ ವಿವಾದದಿಂದಾಗಿ ಈ ಪ್ರದೇಶ ಹಾನಿಗೆ ಒಳಗಾಗುತ್ತಿದೆ ಎಂದು ಪ್ರತ್ಯೇಕವಾದಿ ಮುಖಂಡರಾದ ಸೈಯದ್ ಅಲಿ ಷಾಹ್, ಗೀಲಾನಿ, ಮಿರ್‍ವಾಯಿಜ್ ಉಮರ್ ಫಾರೂಕ್, ಯಾಸಿನ್ ಮಲಿಕ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv