Tag: Kashmir Pandit

  • ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ಶ್ರೀನಗರ: ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಗುಂಡು ಮತ್ತೆ ಸದ್ದು ಮಾಡಿದ್ದು, ದಾಳಿಯಲ್ಲಿ ಓರ್ವ ಕಾಶ್ಮೀರಿ ಪಂಡಿತ ಸಾವನ್ನಪ್ಪಿದ್ದು, ಮತ್ತೋರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ಶೋಪಿಯಾನ್‍ನ ಚೋಟಿಪೋರಾ ಪ್ರದೇಶದಲ್ಲಿದ್ದ ಆಪಲ್ ಆರ್ಕಿಡ್‍ನಲ್ಲಿ ಭಯೋತ್ಪಾದಕರು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿ ಈ ಹತ್ಯೆ ಮಾಡಿದ್ದಾರೆ.

    45 ವರ್ಷದ ಕಾಶ್ಮೀರ ಪಂಡಿತ ಸುನೀಲ್ ಭಟ್ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದು, ಭಟ್ ಸಹೋದರನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಪ್ರದೇಶವನ್ನು ಜಮ್ಮು-ಕಾಶ್ಮೀರ ಪೊಲೀಸರು ಸುತ್ತುವರಿದಿದ್ದು ಭಯೋತ್ಪಾದಕರ ಹುಡುಕಾಟ ಆರಂಭವಾಗಿದೆ.

    ಕಳೆದ ಕೆಲವು ತಿಂಗಳುಗಳಿಂದ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಮತ್ತು ಇತರ ನಾಗರಿಕರನ್ನು ಗುರಿಯಾಗಿಸಿಕೊಂಡ ಉದ್ದೇಶಿತ ಹತ್ಯೆಗಳ ನಡೆಯುತ್ತಿವೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ಹೊಸ ದಾಳಿ ನಡೆದಿದ್ದು, ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನದಿ ಕಣಿವೆಗೆ ಉರುಳಿದ ಬಸ್- 6 ಮಂದಿ ಯೋಧರು ಹುತಾತ್ಮ

    Kashmiri_Pandits

    ಮೇ 31 ರಂದು ಜಮ್ಮುವಿನ ಸಾಂಬಾ ಜಿಲ್ಲೆಗೆ ಸೇರಿದ ಶಾಲಾ ಶಿಕ್ಷಕಿ ರಜನಿ ಬಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಕಾಶ್ಮೀರಿ ಪಂಡಿತರಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಅವರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸದಿದ್ದರೆ ಕಣಿವೆಯಿಂದ ಸಾಮೂಹಿಕ ವಲಸೆಯನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಿದರು.

    ಶಾಲೆಯಲ್ಲಿ ನಡೆದ ದಾಳಿಗೆ ಕೇವಲ ಎರಡು ವಾರಗಳ ಮೊದಲು ಅಂದರೆ ಮೇ 12 ರಂದು ಕಾಶ್ಮೀರದ ಚದೂರ ಪಟ್ಟಣದ ಸರ್ಕಾರಿ ಕಚೇರಿಗೆ ಬಂದೂಕುಧಾರಿಯೊಬ್ಬ ನುಗ್ಗಿ ಕಾಶ್ಮೀರಿ ಹಿಂದೂ ಉದ್ಯೋಗಿ ರಾಹುಲ್ ಭಟ್ ಮೇಲೆ ಗುಂಡು ಹಾರಿಸಿದನು. ರಾಹುಲ್ ಭಟ್‍ನನ್ನು ಕೊಂದ ಲತೀಫ್ ರಾಥರ್ ಸೇರಿದಂತೆ ಮೂವರು ಆರೋಪಿಗಳು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ್ದರು. ಈ ತಿಂಗಳ ಆರಂಭದಲ್ಲಿ ಬುದ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಇವರನ್ನು ಹೊಡೆದುರುಳಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಪಂಡಿತನ ಮೇಲಿನ ದಾಳಿಯಲ್ಲ, ಅದು ಕಾಶ್ಮೀರದ ಆತ್ಮದ ಮೇಲಿನ ದಾಳಿ: ಫಾರೂಕ್ ಅಬ್ದುಲ್ಲಾ

    ಪಂಡಿತನ ಮೇಲಿನ ದಾಳಿಯಲ್ಲ, ಅದು ಕಾಶ್ಮೀರದ ಆತ್ಮದ ಮೇಲಿನ ದಾಳಿ: ಫಾರೂಕ್ ಅಬ್ದುಲ್ಲಾ

    ಶ್ರೀನಗರ: ಕಾಶ್ಮೀರಿ ಪಂಡಿತರ ಮೇಲಿನ ಪ್ರತಿಯೊಂದು ದಾಳಿಯು ಕಾಶ್ಮೀರದ ಆತ್ಮದ ಮೇಲೆಯೇ ದಾಳಿ ಮಾಡಿದಂತಾಗುತ್ತದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದರು.

    ಸಂವಾದದಲ್ಲಿ ಮಾತನಾಡಿದ ಅವರು, ಕಾಶ್ಮೀರಿ ಪಂಡಿತರ ಹತ್ಯೆಗಳು ಕಣಿವೆಯಲ್ಲಿ ಹೆಚ್ಚಳವಾಗುತ್ತಿದ್ದರೂ, ಇದರ ವಿರುದ್ಧವಾಗಿ ಸರ್ಕಾರದ ಹೇಳಿಕೆಯನ್ನು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಪಂಡಿತ ಸಹೋದರರ ಮೇಲಿನ ಪ್ರತಿಯೊಂದು ದಾಳಿಯು ಕಾಶ್ಮೀರದ ಆತ್ಮದ ಮೇಲಿನ ದಾಳಿಯಾಗಿದೆ. ಕಾಶ್ಮೀರಿ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತರು ಇಬ್ಬರೂ ಅಕ್ಕಪಕ್ಕದಲ್ಲಿ ವಾಸಿಸುವ ಸಮಯವನ್ನು ಎದುರು ನೋಡುತ್ತಿದ್ದೇನೆ. ಆದರೆ ಪ್ರಸ್ತುತ ಸರ್ಕಾರವು ಕೇವಲ ಆಡಂಬರ, ಪ್ರದರ್ಶನ ತೋರಿಸುತ್ತಿದೆಯೇ ವಿನಃ ಮತ್ತು ಶಾಶ್ವತ ವಾಪಸಾತಿಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಲು ಯಾವುದೇ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹ್ಯಾರೀಸ್ ಅಂಧ ದರ್ಬಾರ್- ಗ್ರಂಥಾಲಯದ ಜಾಗದಲ್ಲಿ ಶಾಸಕರ ಕಚೇರಿ!

    ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರ ಮತ್ತು ಪೊಲೀಸರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿರುವ ಸರ್ಕಾರವು ರಾಜಕೀಯ ಭರವಸೆಯನ್ನು ನೀಡುತ್ತಿದೆಯೇ ಹೊರತಾಗಿ ಕಾಶ್ಮೀರದಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸಲು ಏನನ್ನು ಮಾಡಿಲ್ಲ ಎಂದ ಅವರು, ಕಾಶ್ಮೀರಿ ಪಂಡಿತರು ಮಾತ್ರವಲ್ಲದೆ ಸಿಖ್ಖರು ಮತ್ತು ಇತರೆ ಅಲ್ಪ ಸಂಖ್ಯಾತರು ಕಾಶ್ಮೀರದ ಸಾಮಾಜಿಕ- ಸಾಂಸ್ಕೃತಿಕ ಪರಿಸರದ ಭಾಗವಾಗಿದ್ದಾರೆ ಎಂದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೆ ಸಕ್ರಿಯವಾಯ್ತು ದರೋಡೆ ಗ್ಯಾಂಗ್‌

    ಗುರುವಾರ ಚದೂರದಲ್ಲಿರುವ ತಹಸಿಲ್ದಾರ್‌ ಕಚೇರಿಗೆ ಭಯೋತ್ಪಾದಕರು ನುಗ್ಗಿ ಗುಮಾಸ್ತ ರಾಹುಲ್ ಭಟ್ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ದಿನದ ನಂತರ, ಜಿಲ್ಲೆಯ ಗುಡೂರದಲ್ಲಿ ಕಾನ್‍ಸ್ಟೆಬಲ್ ರಿಯಾಜ್ ಅಹ್ಮದ್ ಥೋಕರ್ ಮೇಲೆ ಗುಂಡು ಹಾರಿಸಲಾಗಿತ್ತು. ಆಗ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

  • ಕಾಶ್ಮೀರ ಹತ್ಯಾಕಾಂಡ – ಮೂರು ಬೇಡಿಕೆಯನ್ನಿಟ್ಟು ಮರು ತನಿಖೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ

    ಕಾಶ್ಮೀರ ಹತ್ಯಾಕಾಂಡ – ಮೂರು ಬೇಡಿಕೆಯನ್ನಿಟ್ಟು ಮರು ತನಿಖೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ

    ನವದೆಹಲಿ: ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ 1990ರಲ್ಲಿ ಕಾಶ್ಮೀರ ಪಂಡಿತರ ಹತ್ಯಾಕಾಂಡದ ಕುರಿತು ಮರು ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

    ಕಾಶ್ಮೀರ ಪಂಡಿತರ ಸಂಘಟನೆ ʼರೂಟ್‌ ಇನ್‌ ಕಾಶ್ಮೀರ್‌ʼ ಸುಪ್ರೀಂ ಕೋರ್ಟ್‌ಗೆ ಕ್ಯುರೇಟಿವ್‌ ಅರ್ಜಿಯನ್ನು ಸಲ್ಲಿಸಿದೆ. ಈ ಮೂಲಕ 2017ರಲ್ಲಿ ವಜಾಗೊಂಡಿದ್ದ ಪ್ರಕರಣಕ್ಕೆ ಈಗ ಮರುಜೀವ ಬಂದಿದೆ.

    ಕೇವಲ ಊಹೆಯ ಆಧಾರದಲ್ಲಿ ಆರಂಭಿಕ ಹಂತದಲ್ಲಿ ರಿಟ್ ಅರ್ಜಿಯನ್ನು ವಜಾಗೊಳಿಸಿರುವುದು ಸರಿಯಲ್ಲ. 2007 ರ ಜಪಾನಿ ಸಾಹೂ ವರ್ಸಸ್ ಚಂದ್ರ ಶೇಖರ್ ಮೊಹಂತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ “ಅಪರಾಧ ಎಂದಿಗೂ ಸಾಯುವುದಿಲ್ಲ” ಎಂದು ಹೇಳಿದೆ. ಹೀಗಾಗಿ ಮತ್ತೊಮ್ಮೆ ಅರ್ಜಿಯನ್ನು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದೆ.

    ಮೂರು ಬೇಡಿಕೆ:
    ಅರ್ಜಿಯಲ್ಲಿ ಮೂರು ಬೇಡಿಕೆಯನ್ನು ಕೋರ್ಟ್‌ ಮುಂದೆ ಇರಿಸಲಾಗಿದೆ. ಈ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸೀನ್‌ ಮಲಿಕ್‌ ಮತ್ತು ಬಿಟ್ಟಾ ಕರಾಟೆಯನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಬೇಕು. ಹತ್ಯಾಕಾಂಡದ ಸಂಪೂರ್ಣ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು. ಮೂರನೇಯದಾಗಿ ಈ ಘಟನೆಯ ತನಿಖೆಗೆ ಸ್ವತಂತ್ರ ತನಿಖಾ ಆಯೋಗವನ್ನು ರಚಿಸಲು ಆದೇಶ ನೀಡಬೇಕು ಎಂದು ಬೇಡಿಕೆ ಇಡಲಾಗಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    ಅರ್ಜಿ ವಜಾಗೊಂಡಿತ್ತು:
    1989-90ರಲ್ಲಿ ಕಣಿವೆಯಲ್ಲಿ ಉಗ್ರಗಾಮಿಗಳ ಅಟ್ಟಹಾಸ ಉತ್ತುಂಗದಲ್ಲಿದ್ದ ಸಮಯದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ, ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಸೇರಿದಂತೆ ವಿವಿಧ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುವಂತೆ ಸಲ್ಲಿಸಲಾದ ಅರ್ಜಿಯನ್ನು 2019ರಲ್ಲಿ ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.

    ಅಂದಿನ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ಮತ್ತು ನ್ಯಾ. ಡಿ ವೈ ಚಂದ್ರಚೂಡ್ ಅವರ ಪೀಠ, ಪ್ರಕರಣ ನಡೆದು ಸುಮಾರು 27 ವರ್ಷಗಳು ಕಳೆದಿವೆ. ಕಣಿವೆಯಿಂದ ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಗೆ ಕಾರಣವಾದ ಕೊಲೆ, ಬೆಂಕಿ ಹಚ್ಚುವಿಕೆ ಮತ್ತು ಲೂಟಿ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುವುದು ತುಂಬಾ ಕಷ್ಟ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತ್ತು. 27 ವರ್ಷದವರೆಗೆ ನೀವು ಸುಮ್ಮನಿದ್ದೀರಿ. ಈಗ ಸಾಕ್ಷ್ಯವು ಎಲ್ಲಿಂದ ಬರುತ್ತದೆ ಎಂದು ನಮಗೆ ತಿಳಿಸಿ ಎಂದು ಪೀಠ ಅರ್ಜಿದಾರರನ್ನು ಖಾರವಾಗಿ ಪ್ರಶ್ನಿಸಿತ್ತು.

    ರಾಷ್ಟ್ರಪತಿಗಳಿಗೆ ಪತ್ರ:
    1990ರಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪ್ರಕರಣ ತೆರೆದು ವಿಶೇಷ ತನಿಖಾ ತಂಡದಿಂದ(ಎಸ್‌ಐಟಿ) ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ. 33 ವರ್ಷಗಳ ಹಿಂದೆ ನಡೆದ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದ ವಿಷಯಗಳ ಮರು ತನಿಖೆ ನಡೆಸಬಹುದಾದರೆ, 27 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತರ ಪ್ರಕರಣಗಳನ್ನೂ ಸಹ ಮತ್ತೆ ತನಿಖೆ ನಡೆಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬೇಕಿದ್ರೆ ʻದಿ ಕಾಶ್ಮೀರ್‌ ಫೈಲ್ಸ್‌ʼನ್ನು ಯೂಟ್ಯೂಬ್‌ಗೆ ಹಾಕಲಿ: ತೆರಿಗೆ ವಿನಾಯಿತಿ ಕೇಳಿದ ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್

    ಘಟನೆಯ ಸಂತ್ರಸ್ತರು, ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆಘಾತದ ಸ್ಥಿತಿಯಲ್ಲಿದ್ದಾರೆ. ಕಳೆದ ಹಲವು ವರ್ಷಗಳಿಂದ ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿದ್ದರಿಂದ ಅವರು ತಮಗೆ ಆಗಿರುವ ಅನ್ಯಾಯಗಳ ಬಗ್ಗೆ ದೂರುಗಳನ್ನು ದಾಖಲಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಈಗ ಅವರ ಹೇಳಿಕೆಗಳನ್ನು ದಾಖಲಿಸಿ ನ್ಯಾಯ ನೀಡಬೇಕೆಂದು ಮನವಿ ಮಾಡಿದ್ದಾರೆ.

    ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದು, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಮತ್ತು ಇತರರು ನಟಿಸಿದ್ದಾರೆ. 200 ಕೋಟಿಗೂ ಹೆಚ್ಚು ಹಣವನ್ನು ಸಿನಿಮಾ ಗಳಿಕೆ ಮಾಡಿದ್ದು ಕೋವಿಡ್‌ ನಂತರ ಅತಿ ಹೆಚ್ಚು ಹಣ ಸಂಗ್ರಹವಾದ ಬಾಲಿವುಡ್‌ ಫಿಲ್ಮ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.