Tag: Kashmir Issue

  • ನೆಹರೂ ಯಾಕೆ ಹೀಗೆ ಮಾಡಿದ್ರು: ಕಾಶ್ಮೀರ ಬಗ್ಗೆ ನಿರ್ಮಲಾ ಸೀತಾರಾಮನ್‌ ಪ್ರಶ್ನೆ

    ನೆಹರೂ ಯಾಕೆ ಹೀಗೆ ಮಾಡಿದ್ರು: ಕಾಶ್ಮೀರ ಬಗ್ಗೆ ನಿರ್ಮಲಾ ಸೀತಾರಾಮನ್‌ ಪ್ರಶ್ನೆ

    ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಕೆಲಸವನ್ನು ಯಾಕೆ ಮಾಡಿದರು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಶ್ನಿಸಿದ್ದಾರೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನೆಹರೂ ಅವರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಮೂಲಕ ಅದನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿಸಿದ್ದಾರೆ. ಇದು ಆಂತರಿಕ ವಿಚಾರವಾಗಿರುವುದರಿಂದ ಜಾಗತಿಕ ವೇದಿಕೆಗೆ ಹೋಗಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇದು ಉತ್ತರ ಪ್ರದೇಶ ಅಲ್ಲ, ಬಂಗಾಳ: ಬಿಜೆಪಿಗೆ ಮಮತಾ ತಿರುಗೇಟು

    ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಯುದ್ಧ ಪ್ರಾರಂಭವಾದ ನಂತರ 1948ರ ಜನವರಿಯಂದು ನೆಹರೂ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (UNSC) ಮನವಿ ಮಾಡಿದ್ದರು. ಅವರ ಮನವಿಯನ್ನು ಆಧರಿಸಿ ಕೌನ್ಸಿಲ್ ಎರಡು ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಭಾರತ ಮತ್ತು ಪಾಕಿಸ್ತಾನಕ್ಕಾಗಿ ವಿಶ್ವಸಂಸ್ಥೆಯ ಆಯೋಗವನ್ನು ಸ್ಥಾಪಿಸಿತು. ಕಾಶ್ಮೀರ ಸಮಸ್ಯೆ ಮೂಲಭೂತವಾಗಿ ಭಾರತಕ್ಕೆ ಸಂಬಂಧಿಸಿದ ವಿಷಯ. ಅದನ್ನು ಕಾಂಗ್ರೆಸ್‌, ವಿಶ್ವಸಂಸ್ಥೆಗೆ ಕೊಂಡೊಯ್ಯಿತು. ಬ್ರಿಟಿಷರು ಅವರಿಗೆ ಏನಾದರೂ ಸಲಹೆ ನೀಡಿರಬಹುದು. ಸಮಸ್ಯೆ ಸುಧಾರಿಸುವುದಿಲ್ಲ ಅಂತ ಯುಎನ್‌ಗೆ ಕೊಂಡೊಯ್ದರು ಎಂದು ಸನ್ನಿವೇಶ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನವನ್ನು ಉಲ್ಲೇಖಿಸಿದ ಸೀತಾರಾಮನ್, ಇದುವರೆಗೂ ನಮ್ಮ ನೆರೆಹೊರೆಯವರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ. ಇದು ಜಾಗತಿಕ ವೇದಿಕೆಗೆ ಹೋಗಬಾರದ ವಿಷಯ. ಇದು ಮೂಲಭೂತವಾಗಿ ಭಾರತೀಯ ಸಮಸ್ಯೆಯಾಗಿದೆ. ನಾವು ಈಗ ಅದನ್ನು ನಿಭಾಯಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ IAS ಅಧಿಕಾರಿ ನಿಯಾಜ್‌ ಖಾನ್‌ಗೆ ನೋಟಿಸ್‌: MP ಗೃಹ ಸಚಿವ

    ಜಮ್ಮು ಮತ್ತು ಕಾಶ್ಮೀರಕ್ಕೆ 2022-23ನೇ ಸಾಲಿನಲ್ಲಿ 1.42 ಲಕ್ಷ ಕೋಟಿ ರೂ. ಹಣ ಮೀಸಲಿಡಲು ಬಜೆಟ್‌ಗೆ ಸಂಸತ್‌ ಬುಧವಾರ ಅನುಮೋದನೆ ನೀಡಿತು. ರಾಜ್ಯಸಭೆಯು ಸಂಬಂಧಿತ ಮಸೂದೆಗಳನ್ನು ಲೋಕಸಭೆಗೆ ಹಿಂದಿರುಗಿಸಿತು. ಲೋಕಸಭೆಯು ಮಾರ್ಚ್ 14 ರಂದು ಮಸೂದೆಗಳನ್ನು ಅಂಗೀಕರಿಸಿತ್ತು.

  • ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ: ಯೂ ಟರ್ನ್ ಹೊಡೆದ ಪಾಕ್

    ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ: ಯೂ ಟರ್ನ್ ಹೊಡೆದ ಪಾಕ್

    ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ ಎಂದು ಪಾಕಿಸ್ತಾನ ಸಚಿವ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.

    ಪಾಕ್ ಸಚಿವ ಖುರೇಷಿ ಅವರ ಹೇಳಿಕೆಯೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯದ ವಿರುದ್ಧವಾಗಿದೆ. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಜಾಗತಿಕ ಸಮುದಾಯ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ ಪರಮಾಣು ಯುದ್ಧ ಮಾಡಲಾಗುವುದು. ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಯೂ ಇದೆ ಎಂದು ಇಮ್ರಾನ್ ಖಾನ್ ಬೆದರಿಕೆ ಹಾಕಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಖುರೇಷಿ ಅವರು, ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ ಎಂದು ಹೇಳುವ ಮೂಲಕ ಯೂ ಟರ್ನ್ ಹೊಡೆದಿದ್ದಾರೆ. ಇದನ್ನೂ ಓದಿ:  ಭಾರತ-ಪಾಕ್ ಮಧ್ಯೆ ಅಕ್ಟೋಬರ್ ಇಲ್ಲವೇ ನವೆಂಬರ್‌ನಲ್ಲಿ ಯುದ್ಧ: ಪಾಕ್ ಸಚಿವ

    ಸಂದರ್ಶನವೊಂದರಲ್ಲಿ ಮಾತನಾಡಿದ ಮೊಹಮ್ಮದ್ ಖುರೇಷಿ ಅವರು, ದಕ್ಷಿಣ ಏಷ್ಯಾದ ಮೇಲೆ ಪರಮಾಣು ನೆರಳು ಸುಳಿದಾಡುತ್ತಿದೆ. ಭಾರತ ಹಾಗೂ ಪಾಕಿಸ್ತಾನವು ಕಾಶ್ಮೀರ ಕುರಿತು ಮಾತುಕತೆ ಪ್ರಾರಂಭಿಸಲು ಶೂನ್ಯ ಮೊತ್ತದ ಮನಸ್ಥಿತಿಯಿಂದ ಹೊರಬರಬೇಕು. ಪಾಕಿಸ್ತಾನ ಯಾವಾಗಲು ಶಾಂತಿಯನ್ನು ಬಯಸುತ್ತದೆ. ಆಕ್ರಮಣಕಾರಿ ನೀತಿಯನ್ನು ಎಂದಿಗೂ ಅನುಸರಿಸಲಿಲ್ಲ ಎಂದು ಹೇಳಿದ್ದಾರೆ.

    ಪರಮಾಣು ಬಾಂಬ್ ಹೊಂದಿರುವ ಎರಡು ನೆರೆಯ ದೇಶಗಳು ಯುದ್ಧಕ್ಕೆ ಹೋಗುವ ಭಾರೀ ಅಪಾಯಕ್ಕೆ ಮುಂದಾಗಬಾರದು. ಈ ವಿಚಾರವಾಗಿ ಅನೇಕ ಬಾರಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿಕೆ ನೀಡಿದ್ದಾರೆ. ಅವರ ನೇತೃತ್ವದ ಸರ್ಕಾರವು ಮಾತುಕತೆ ಪ್ರಾರಂಭಿಸಲು ಭಾರತಕ್ಕೆ ಪದೇ ಪದೇ ಅವಕಾಶ ನೀಡುತ್ತಿದೆ ಎಂದು ಖುರೇಷಿ ತಿಳಿಸಿದ್ದಾರೆ. ಇದನ್ನೂ ಓದಿ:  ಭಾರತದೊಂದಿಗೆ ಯುದ್ಧದ ಭವಿಷ್ಯ ನುಡಿದಿದ್ದ ಪಾಕ್ ಸಚಿವನಿಗೆ ವಿದ್ಯುತ್ ಶಾಕ್: ವಿಡಿಯೋ

    ಖುರೇಷಿ ಅವರು, ಕಾಶ್ಮೀರ ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂಬ ಭಾರತದ ಸಮರ್ಥನೆಯನ್ನು ತಳ್ಳಿಹಾಕಿದ್ದು, ಇದು ಅಂತರಾಷ್ಟ್ರೀಯ ವಿಷಯವಾಗಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

    ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದಾಗಿನಿಂದ ಇಮ್ರಾನ್ ಖಾನ್ ಭಾರತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಕಾಶ್ಮೀರದ ಮೇಲಿನ ಭಾರತದ ನಡೆಯನ್ನು ಕಾನೂನುಬಾಹಿರ ಎಂದು ದೂರಿದ್ದಾರೆ. ಇದು ಭಾರತ-ಪಾಕಿಸ್ತಾನ ನಡುವಿನ ಶಿಮ್ಲಾ ಒಪ್ಪಂದದ ಬಗೆಗಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

  • ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರೀ ಮುಖಭಂಗ – ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಕಕ್ಕಾಬಿಕ್ಕಿ

    ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರೀ ಮುಖಭಂಗ – ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಕಕ್ಕಾಬಿಕ್ಕಿ

    ನ್ಯೂಯಾರ್ಕ್: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

    ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತದ ಸರ್ಕಾರ ಕೈಗೊಂಡ ನಿರ್ಧಾರದ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಗೌಪ್ಯ ಸಭೆ ನಡೆಸಲಾಯಿತು. ಶಿಷ್ಟಾಚಾರದಂತೆ ಹಾರ್ಸ್ ಶೂ ಟೇಬಲ್‍ನಲ್ಲಿ ಸಭೆಯನ್ನು ನಡೆಸಬೇಕು. ಆದರೆ ಈ ಸಭೆಯು ಭದ್ರತಾ ಮಂಡಳಿಯ ಸಮಾಲೋಚನಾ ಕೊಠಡಿಯಲ್ಲಿ ಅನೌಪಚಾರಿಕವಾಗಿ ನಡೆಯಿತು.

    ಕಾಶ್ಮೀರ ಕಣಿವೆಯಲ್ಲಿ ಮಾನವಹಕ್ಕುಗಳ ದಮನವಾಗುತ್ತಿದೆ. ಆ ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿ ತುಂಬಾ ಅಪಾಯಕಾರಿ ಎಂದು ಚೀನಾ ಸಭೆಯಲ್ಲಿ ಆತಂಕ ವ್ಯಕ್ತಪಡಿಸುವ ಮೂಲಕ ಪಾಕ್ ಪರ ಬ್ಯಾಟ್ ಬೀಸಿತ್ತು.

    ಭಾರತ ಉಪಖಂಡದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಿ. ಮಾತುಕತೆ ಮೂಲಕ ಜಮ್ಮು-ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಿ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನಕ್ಕೆ ಸಲಹೆ ನೀಡಿವೆ. ಜೊತೆಗೆ ಈ ಸಭೆಯಲ್ಲಿ ಪಾಕಿಸ್ತಾನದ ಬೆಂಬಲಕ್ಕೆ ಕೇವಲ ಚೀನಾ ಮಾತ್ರ ನಿಂತಿತ್ತು. ಆದರೆ ಭಾರತದ ಪರ ರಷ್ಯಾ, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ ನಿಂತಿತ್ತು.

    ಈ ಸಭೆಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ರಷ್ಯಾದ ಉಪ ಶಾಶ್ವತ ಪ್ರತಿನಿಧಿ ಡಿಮಿಟ್ರಿ ಪೋಲ್ಯಾನ್‍ಸ್ಕಿ ಅವರು, ಕಾಶ್ಮೀರ ವಿಷಯ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಮಸ್ಯೆ. ಅದನ್ನು ಎರಡು ರಾಷ್ಟ್ರಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು.

    ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಭಾರತದ ಆಂತರಿಕ ವಿಷಯ. ಆ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೂ ಚೀನಾ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸುತ್ತಿದೆ. ಚೀನಾ ಅಭಿಪ್ರಾಯವು ಜಾಗತಿಕ ಅಭಿಪ್ರಾಯವಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಒಟ್ಟು 5 ಪ್ರಶ್ನೆಗಳಿಗೆ ಉತ್ತರಿಸಿದ ಅಕ್ಬರುದ್ದೀನ್ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಪಾಕ್ ಪತ್ರಕರ್ತ ರಿಗೆ ಶೇಕ್ ಹ್ಯಾಂಡ್ ಮಾಡಿ ವ್ಯಂಗ್ಯವಾಗಿ ಕುಟುಕಿದ ವಿಡಿಯೋಗೆ ಭಾರತೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    50 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ರೀತಿಯ ಸಭೆ ನಡೆದಿತ್ತು‌.