Tag: kashinath naik

  • ರಾಷ್ಟ್ರೀಯ ಕ್ರೀಡಾ ದಿನ- ಜಾವೆಲಿನ್ ಕೋಚ್ ಕಾಶಿನಾಥ ನಾಯ್ಕರಿಗೆ ಸನ್ಮಾನ

    ರಾಷ್ಟ್ರೀಯ ಕ್ರೀಡಾ ದಿನ- ಜಾವೆಲಿನ್ ಕೋಚ್ ಕಾಶಿನಾಥ ನಾಯ್ಕರಿಗೆ ಸನ್ಮಾನ

    ಕಾರವಾರ: ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ರಾಷ್ಟ್ರೀಯ ಸೇನಾ ಅಕಾಡೆಮಿಯ ಜಾವೆಲಿನ್ ಕೋಚ್ ಕಾಶಿನಾಥ ನಾಯ್ಕ ಅವರನ್ನು ಕ್ರೀಡಾ ಇಲಾಖೆ ವತಿಯಿಂದ ಇಂದು ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಶಿನಾಥ ನಾಯ್ಕ, ಕ್ರೀಡಾ ಸಾಧಕನ ಜೊತೆ ತರಬೇತುದಾರರನ್ನೂ ಗುರುತಿಸಿದ್ದು ಅವಿಸ್ಮರಣೀಯ. ಸೇನೆಯಲ್ಲಿ ನಿವೃತ್ತಿಯಾದ ಬಳಿಕ ಶಿರಸಿಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸುವ ಗುರಿ ಇದೆ. ಖೇಲೊ ಇಂಡಿಯಾ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ವಿದೇಶಿ ಕೋಚ್ ಗಳಿಗೆ ಸಿಕ್ಕ ಪ್ರೋತ್ಸಾಹ ಸ್ವದೇಶಿ ಕೋಚ್ ಗಳಿಗೆ ಮೊದಲು ಸಿಗುತ್ತಿರಲಿಲ್ಲ ಎಂಬ ಬೇಸವರವಿತ್ತು. ಈಗ ಬೆಂಬಲ ಸಿಗುವ ಭರವಸೆ ಮೂಡಿದೆ ಎಂದರು. ಇದನ್ನೂ ಓದಿ: ಉಡುಪಿಯ ರೈತರಿಗೆ ನೆಮ್ಮದಿ ತಂದ ಮಳೆರಾಯ

    ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಿದೇಶಿ ಕೋಚ್ ಗಳ ಬದಲು ಸ್ವದೇಶಿ ಕೋಚ್ ನೇಮಕಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇವೆ. ಸಾಮಥ್ರ್ಯದ ಕೌಶಲ್ಯ ವೃದ್ಧಿಸಿಕೊಳ್ಳುವತ್ತ ದೃಷ್ಟಿ ನೆಡಬೇಕು. ಕಾಶಿನಾಥ ನಾಯ್ಕ ಅತ್ಯುತ್ತಮ ಕ್ರೀಡಾಪಟು ಅಗಿರುವ ಜೊತೆಗೆ ಅತ್ಯುತ್ತಮ ಗುರು ಎಂಬುದನ್ನೂ ಸಾಬೀತುಪಡಿಸಿದ್ದಾರೆ. ಸಾಧನೆ ನಿರಂತರವಾಗಿರಲಿ, ಯುವಜನತೆಗೆ ಮಾದರಿ ಆಗಿರುವ ಕಾಶಿನಾಥ ಅವರ ಗರಡಿಯಲ್ಲಿ ಇನ್ನಷ್ಟು ಕ್ರೀಡಾಪಟುಗಳು ಹೊರಹೊಮ್ಮಲಿ ಎಂದರು.

    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ಡಿವೈಎಸ್‍ಪಿ ರವಿ ನಾಯ್ಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ, ಕ್ರೀಡಾಧಿಕಾರಿ ಕಿರಣ್ ನಾಯ್ಕ ಭಾಗವಹಿಸಿದ್ದರು.

  • ಕನ್ನಡಿಗ ಗುರುವಿಗೆ ಅಭಿನಂದನೆ ಸಲ್ಲಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    ಕನ್ನಡಿಗ ಗುರುವಿಗೆ ಅಭಿನಂದನೆ ಸಲ್ಲಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    ಬೆಂಗಳೂರು/ಪುಣೆ: ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಛೋಪ್ರಾ ಅವರು ಇಂದು ತಮ್ಮ ಗುರುವಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    2015 ರಿಂದ ಸುಮಾರು ಮೂರು ವರ್ಷಗಳ ಕಾಲ ಪಟಿಯಾಲಾದಲ್ಲಿ ಜಾವಲಿನ್ ಎಸೆತದ ತರಬೇತಿ ನೀಡಿದ್ದ ಕಾಶಿನಾಥ್ ನಾಯ್ಕ್ ಅವರ ಮನೆಗೆ ಭೇಟಿ ನೀಡಿ ನೀರಜ್ ಚೋಪ್ರಾ ಅಭಿನಂದನೆ ಸಲ್ಲಿಸಿದ್ದಾರೆ.

    ಪುಣೆಯ ಕೋರೆಗಾಂವ್ ನಲ್ಲಿರುವ ಕಾಶಿನಾಥ್ ನಾಯ್ಕ್ ಅವರ ಮನೆಗೆ ನೀರಜ್ ಚೋಪ್ರಾ ಆಗಮಿಸಿದ್ದರು. ಈ ವೇಳೆ ಕಾಶಿನಾಥ್ ನಾಯ್ಕ್ ಅವರ ಪತ್ನಿ ಚೈತ್ರಾ ಅವರು ಆರತಿ ಬೆಳಗಿ ಮನೆಗೆ ಸ್ವಾಗತಿಸಿದರು. ಸುಮಾರು ಒಂದು ಗಂಟೆಗಳ ಕಾಲ ಗುರುಶಿಷ್ಯರು ಒಲಿಂಪಿಕ್ಸ್ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ತರಬೇತಿ ನೀಡಿದ್ದಿದ್ದು ಶಿರಸಿಯ ಯೋಧ..!

    ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‍ಸ್ಟಿಟ್ಯೂಟ್‍ನಲ್ಲಿ ತರಬೇತುದಾರರಾಗಿರುವ ಕಾಶಿನಾಥ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು. 23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ್ ನಾಯ್ಕ್, 2010ರ ನವದೆಹಲಿಯ ಕಾಮನ್‍ವೆಲ್ತ್ ಗೇಮ್ಸ್ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2015ರಲ್ಲಿ ಕಾಶಿನಾಥ್ ಬಳಿ ತರಬೇತಿಗೆ ಸೇರಿದ್ದ ನೀರಜ್ ಚೋಪ್ರಾ, 2017ರವರೆಗೆ ತರಬೇತಿ ಪಡೆದಿದ್ದರು. ಅಂದೇ 86.48 ಮೀಟರ್ ಜೂನಿಯರ್ ವಿಶ್ವ ದಾಖಲೆ ಮಾಡಿದ್ದ ನೀರಜ್ ಚೋಪ್ರಾ ರವರು ಇತ್ತೀಚಿಗೆ ವಿದೇಶಿ ತರಬೇತುದಾರರ ಬಳಿ ತರಬೇತಿ ಪಡೆಯಲಾರಂಭಿಸಿದ್ದರು.

  • ಚಿನ್ನದ ಹುಡುಗನಿಗೆ ಕ್ರೀಡಾ ಸಚಿವ ಡಾ. ನಾರಾಯಣಗೌಡರಿಂದ ಅಭಿನಂದನೆ

    ಚಿನ್ನದ ಹುಡುಗನಿಗೆ ಕ್ರೀಡಾ ಸಚಿವ ಡಾ. ನಾರಾಯಣಗೌಡರಿಂದ ಅಭಿನಂದನೆ

    -ತರಬೇತುದಾರ ಕನ್ನಡಿಗ ಕಾಶಿನಾಥ್ ನಾಯ್ಕ್‌ಗೆ ರೂ. 10 ಲಕ್ಷ ಘೋಷಣೆ

    ಬೆಂಗಳೂರು: ಟೋಕಿಯೊ ಓಲಂಪಿಕ್‍ನಲ್ಲಿ ಈಟಿ ಎಸೆತದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ನೀರಜ್ ಛೋಪ್ರಾಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧನೆಗೆ ತರಬೇತಿ ನೀಡಿದ ಶಿರಸಿಯ ಕಾಶಿನಾಥ್ ನಾಯ್ಕ್ ಅವರಿಗೆ ನಗದು ಬಹುಮಾನ ಘೋಷಿಸಿದ್ದಾರೆ.

    ನೀರಜ್ ಛೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಕನ್ನಡಿಗನ ಪಾತ್ರವೂ ಇದೆ. ಛೋಪ್ರಾಗೆ ತರಬೇತಿ ನೀಡಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಶಿನಾಥ್ ನಾಯ್ಕ್. 2010ರ ಕಾಮನ್ವೆಲ್ತ್ ನಲ್ಲಿ ಕಾಶಿನಾಥ್ ಈಟಿ ಎಸೆತದಲ್ಲಿ ಕಂಚಿನ ಪದಕಗಳಿಸಿದ್ದರು. ಅತ್ಯುತ್ತಮ ಕ್ರೀಡಾ ಸಾಧಕ ಕಾಶಿನಾಥ್ ಗರಡಿಯಲ್ಲಿ ಪಳಗಿದ ನೀರಜ್ ಸ್ವರ್ಣಪದಕ ಗಳಿಸಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಇಂತಹ ಸಾಧನೆಗೆ ಬೆನ್ನೆಲುಬಾದ ಕನ್ನಡಿಗ ಕಾಶಿನಾಥ್ ನಾಯ್ಕ್ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರೂ.10 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

    ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾ ಸಾಧಕರಿಗೆ ಸನ್ಮಾನ: ಟೋಕಿಯೋ ಓಲಂಪಿಕ್ ನಲ್ಲಿ ಅಮೋಘ ಸಾಧನೆಗೈದ ಭಾರತದ 7 ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸಲಾಗುವುದು. ಈಗಾಗಲೇ ಸಿಎಂ ಜೊತೆ ಚರ್ಚೆ ನಡೆಸಿರುವ ಡಾ. ನಾರಾಯಣಗೌಡ ಅವರು, ಎಲ್ಲ ಕ್ರೀಡಾಪಟುಗಳನ್ನು ಆಹ್ವಾನಿಸಿ ಗೌರವಿಸಲು ತೀರ್ಮಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ತರಬೇತುದಾರ ಕಾಶಿನಾಥ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

    ಓಲಂಪಿಕ್ ನಲ್ಲಿ ಭಾಗವಹಿಸಿದ ರಾಜ್ಯದ ಕ್ರೀಡಾಪಟುಗಳಿಗೂ ಗೌರವ: ಓಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುವುದು ಒಂದು ದೊಡ್ಡ ಸಾಧನೆಯೆ ಆಗಿದೆ. ಟೋಕಿಯೋ ಓಲಂಪಿಕ್ ನಲ್ಲಿ ಮೂವರು ಕನ್ನಡಿಗರು ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದಾರೆ. ಪದಕ ಗಳಿಸಿದ ಕ್ರೀಡಾ ಸಾಧಕರನ್ನು ಗೌರವಿಸಿದಂತೆಯೇ ರಾಜ್ಯದ ಹೆಮ್ಮೆಯ ಕ್ರೀಡಾಪಟುಗಳಾದ ಅಶೋಕ್, ಶ್ರೀಹರಿ ನಟರಾಜ್, ಫೌವಾದ್ ಮಿರ್ಜಾ ಅವರನ್ನೂ ಸನ್ಮಾನಿಸಲಾಗುವುದು ಎಂದು ಡಾ. ನಾರಾಯಣಗೌಡ ಹೇಳಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ ಬಳಿಕ ರಾಷ್ಟ್ರಗೀತೆ ವೇಳೆ ನೀರಜ್ ಕಣ್ಣೀರು- ಪದಕವನ್ನು ಮಿಲ್ಕಾ ಸಿಂಗ್‍ಗೆ ಸಮರ್ಪಿಸಿದ ಸಾಧಕ

  • ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ತರಬೇತಿ ನೀಡಿದ್ದಿದ್ದು ಶಿರಸಿಯ ಯೋಧ..!

    ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ತರಬೇತಿ ನೀಡಿದ್ದಿದ್ದು ಶಿರಸಿಯ ಯೋಧ..!

    – ನವೀನ್ ಸಾಗರ್
    ಕಾರವಾರ: ಒಲಿಂಪಿಕ್ ‘ಚಿನ್ನದ ವೀರ’ ನೀರಜ್ ಚೋಪ್ರಾ ಹಿಂದಿನ ಶಕ್ತಿ ಉತ್ತರ ಕನ್ನಡ ಜಿಲ್ಲೆಯ ಯೋಧ.

    ಹೌದು, ಒಲಿಂಪಿಕ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದವನಿಗೆ ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ ಕಾಶಿನಾಥ ನಾಯ್ಕ್ ರವರು ಮೊದಲು ತರಬೇತಿ ನೀಡಿದ್ದರು. ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‍ಸ್ಟಿಟ್ಯೂಟ್‍ನಲ್ಲಿ ತರಬೇತುದಾರರಾಗಿರುವ ಕಾಶಿನಾಥ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರಾಗಿದ್ದಾರೆ.

    23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ ನಾಯ್ಕ, 2010ರ ನವದೆಹಲಿಯ ಕಾಮನ್‍ವೆಲ್ತ್ ಗೇಮ್ಸ್ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2015ರಲ್ಲಿ ಕಾಶಿನಾಥ ನಾಯ್ಕರ ಬಳಿ ತರಬೇತಿಗೆ ಸೇರಿದ್ದ ನೀರಜ್ ಚೋಪ್ರಾ, 2017ರವರೆಗೆ ತರಬೇತಿ ಪಡೆದಿದ್ದರು. ಅಂದೇ 86.48 ಮೀಟರ್ ಜೂನಿಯರ್ ವಿಶ್ವ ದಾಖಲೆ ಮಾಡಿದ್ದ ನೀರಜ್ ಚೋಪ್ರಾ ರವರು ಇತ್ತೀಚಿಗೆ ವಿದೇಶಿ ತರಬೇತುದಾರರ ಬಳಿ ತರಬೇತಿ ಪಡೆಯಲಾರಂಭಿಸಿದ್ದರು. ಇದನ್ನೂ ಓದಿ: ಚಿನ್ನ ಗೆದ್ದ ಬಳಿಕ ರಾಷ್ಟ್ರಗೀತೆ ವೇಳೆ ನೀರಜ್ ಕಣ್ಣೀರು- ಪದಕವನ್ನು ಮಿಲ್ಕಾ ಸಿಂಗ್‍ಗೆ ಸಮರ್ಪಿಸಿದ ಸಾಧಕ

    ನೀರಜ್ ಚೋಪ್ರಾ ಚಿನ್ನದ ಪದಕ ವಿಜೇತರಾಗಿರುವ ಬಗ್ಗೆ ಸಂತಸ ಹಂಚಿಕೊಂಡ ಕಾಶಿನಾಥ ನಾಯ್ಕ ಅವರು, 2016ರಲ್ಲೇ ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೆ, ತುಂಬಾ ಉತ್ತಮ ಕ್ರೀಡಾಪಟು ಈತ. ಇಂದು ಆತ ಚಿನ್ನದ ಪದಕ ಗೆಲ್ಲಲು ಕಾರಣವಾಗಿದೆ ಎಂದು ಹೇಳಿದ್ದಾರೆ. ನೀರಜ್ ಚೋಪ್ರಾನಿಗೆ ಪ್ರತಿಭೆ ದೇವರು ಕೊಟ್ಟ ವರ ಎಂದು ತಾನು ತರಬೇತಿ ನೀಡಿದ ಕುರಿತು ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ. ಇದನ್ನೂ ಓದಿ: ಹರಿಯಾಣ ಸರ್ಕಾರ 6 ಕೋಟಿ, ಆನಂದ್ ಮಹೀಂದ್ರ ಕಾರ್ ಗಿಫ್ಟ್- ಚಿನ್ನದ ನೀರಜ್‍ಗೆ ಭರ್ಜರಿ ಉಡುಗೊರೆ

    ನೀರಜ್ ಚೋಪ್ರಾ ಅವರು ಹರಿಯಾಣದ ಪಾಣಿಪತ್ ಬಳಿಯ ಖಂಡ್ರಾ ಗ್ರಾಮದವರು. ಕೂಡು ಕುಟುಂಬದಿಂದ ಬಂದ ನೀರಜ್ ಚೋಪ್ರಾ, ಮನೆಯಲ್ಲಿ 16 ಜನರಿದ್ದಾರೆ. ನೀರಜ್ ತಂದೆ ಕೃಷಿ ಮಾಡುತ್ತಿದ್ದು, ಮನೆಯವರು ಸಾಧಾರಣ ಕೆಲಸ ಹಾಗೂ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಾಕೆಟ್ ಮನಿಯಿಂದಲೇ ಸಲಕರಣೆಗಳನ್ನು ಖರೀದಿಸಿ ನೀರಜ್ ಅಭ್ಯಾಸ ಮಾಡುತ್ತಿದ್ದರು. ನೀರಜ್ ಚೋಪ್ರಾ ಅವರು ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, ಭಾರತೀಯ ಸೇನೆಯಲ್ಲಿ ಸುಬೇದಾರ್ ಕೆಲಸ ಮಾಡುತ್ತಿದ್ದಾರೆ. ನೀರಜ್ ತಮ್ಮ 12ನೇ ವಯಸ್ಸಿನಲ್ಲಿ 90 ಕೆ.ಜಿ.ತೂಕ ಹೊಂದಿದ್ದರು. ಬಳಿಕ ಕುಟುಂಬದವರ ಒತ್ತಾಯದ ಮೇರೆಗೆ ಜಿಮ್ ಮಾಡಿ, ಫಿಟ್ನೆಸ್ ಕಾಪಾಡಿಕೊಂಡರು. ನಂತರ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

    ಆಸ್ಟ್ರೇಲಿಯಾದಲ್ಲಿ ನಡೆದ 2018ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ಬಳಿಕ ಒಲಿಂಪಿಕ್ಸ್ ಗಾಗಿ ತಯಾರಿ ನಡೆಸಿದ್ದರು. ಅಲ್ಲದೆ ನೀರಜ್ ಚೋಪ್ರಾ ಪೋಲೆಂಡ್‍ನಲ್ಲಿ ನಡೆದ ಅಂಡರ್ 20 ಜೂನಿಯರ್ ವರ್ಲ್ಡ್ಸ್ ಚಾಂಪಿಯನ್‍ಶಿಪ್ 2016ರಲ್ಲಿ 86.48 ಮೀಟರ್ ಜಾವೆಲಿನ್ ಎಸೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ನೀರಜ್ ಚೋಪ್ರಾ ಅವರ ಉತ್ತಮ ಎಸೆತ 88.07 ಮೀಟರ್ ಎಂದು ನೀರಜ್ ಚಿಕ್ಕಪ್ಪ ಭೀಮಸೇನ ಚೋಪ್ರಾ ಅವರು ತಿಳಿಸಿದ್ದಾರೆ.

    ಇಂದು ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕ ಮತ್ತು ಚೊಚ್ಚಲ ಬಂಗಾರವಾಗಿದ್ದು ಇಡೀ ದೇಶ ನೀರಜ್ ಜೋಪ್ರಾ ಕಡೆ ತಿರುಗಿ ನೋಡುವಂತೆ ಮಾಡಿದೆ.