Tag: kashinath

  • PSI ಅಕ್ರಮ – ಪರೀಕ್ಷಾ ಕೇಂದ್ರದಲ್ಲಿ ಡೀಲಿಂಗ್ ಹೇಗೆ ನಡೀತಿತ್ತು? ಒಬ್ಬರಿಗೆ ಎಷ್ಟು ಲಕ್ಷ?

    PSI ಅಕ್ರಮ – ಪರೀಕ್ಷಾ ಕೇಂದ್ರದಲ್ಲಿ ಡೀಲಿಂಗ್ ಹೇಗೆ ನಡೀತಿತ್ತು? ಒಬ್ಬರಿಗೆ ಎಷ್ಟು ಲಕ್ಷ?

    ಬೆಂಗಳೂರು: ಪಿಎಸ್‍ಐ ಪರೀಕ್ಷೆಯ ಅಕ್ರಮದಲ್ಲಿ ಬಗೆದಷ್ಟು ರಹಸ್ಯ ಬಯಲಾಗುತ್ತಿದ್ದು, ಜ್ಞಾನಜ್ಯೋತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಡಿಲಿಂಗ್ ಹೇಗೆ ನಡೆಯುತಿತ್ತು ಎಂಬುವುದರ ಬಗ್ಗೆ ಪ್ರಿನ್ಸಿಪಾಲ್ ಆಗಿರುವ ಆರೋಪಿ ಕಾಶಿನಾಥ ಬಹಿರಂಗ ಪಡೆಸಿದ್ದಾನೆ.

    ಸಿಐಡಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು ಸ್ಫೋಟಕ ವಿಚಾರಗಳು ಲಭ್ಯವಾಗುತ್ತಿದೆ. 2014ರಿಂದ ಈ ರೀತಿಯ ಕೃತ್ಯ ಎಸಗುತ್ತಿದ್ದೆ ಎಂದು ಕಾಶಿನಾಥ ಹೇಳಿರುವುದಾಗಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಉಸ್ಮಾನಿಯಾ ವಿವಿಯಲ್ಲಿ ರಾಹುಲ್ ಸಂವಾದಕ್ಕೆ ಬ್ರೇಕ್ – ಹೈಕೋರ್ಟ್‍ನಿಂದ ಅರ್ಜಿ ವಜಾ

    KARNATAKA PSI EXAM

    ದಿವ್ಯಾ ಹಾಗರಗಿ ಹಾಗೂ ಮಂಜುನಾಥ ಮೇಲ್ಕುಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು. ಕ್ಯಾಂಡಿಡೇಟ್‍ಗಳಿಂದ ಅರ್ಧ ಹಣ ಪಾವತಿ ಆಗುತ್ತಿದ್ದಂತೆ ಆಗುತ್ತಿದ್ದಂತೆ ರೋಲ್ ನಂಬರ್ ಸ್ಕೂಲ್ ಪ್ರಿನ್ಸಿಪಾಲ್‍ಗೆ ಹೋಗುತ್ತಿತ್ತು. ನಂತರ ಜ್ಞಾನ ಜ್ಯೋತಿ ಸ್ಕೂಲ್ ಪ್ರಿನ್ಸಿಪಾಲ್ ಕಾಶಿನಾಥ ಡೀಲಿಂಗ್ ಪಡೆಯುತ್ತಿದ್ದ. ಡೀಲಿಂಗ್ ಪಡೆದು ಇನ್ವಿಜಿಲೇಟರ್‌ಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದ.

    545 ಪಿಎಸ್‍ಐ ಪೋಸ್ಟ್ ಪರೀಕ್ಷೆ ಯಲ್ಲಿ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರಕ್ಕೆ ಸಾವಿತ್ರಿ, ಸುಮಾ, ಅರ್ಚನಾ, ಸುನಂದಾ, ಸಿದ್ದಮ್ಮ ಇನ್ವಿಜಿಲೇಟರ್‌ಗಳಾಗಿ ಹೋಗಿದ್ದರು. ಈ ಐವರಿಗೂ ಕಾಶಿನಾಥ್ ಅಭ್ಯರ್ಥಿಗಳ ರೋಲ್ ನಂಬರ್ ಮೆಸೇಜ್ ಮಾಡುತ್ತಿದ್ದನು. ನಂತರ ಆ ರೋಲ್ ನಂಬರ್‌ನಲ್ಲಿರುವ ಕ್ಯಾಂಡಿಡೇಟ್‍ಗಳಿಗೆ ಇದೇ ಮೇಲ್ವಿಚಾರಕರು ಉತ್ತರಗಳ ಚೀಟಿಯನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಇದೇ ವೇಳೆ ಬೇರೆ ಅಭ್ಯರ್ಥಿಗಳು ನೋಡಬಹುದು ಅಂತ ಎಕ್ಸಾಂನ ಬಳಿಕ ಮೇಲ್ವಿಚಾರಕರು ತಿದ್ದುವುದಾಗಿ ಹೇಳುತ್ತಿದ್ದರು.

    Divya hagaragi (2)

    ಕೇವಲ ವಾಟ್ಸಪ್ ಮೂಲಕವೇ ಕಾಶಿನಾಥ ಮೇಲ್ವಿಚಾರಕರಿಗೆ ಎಲ್ಲ ಮಾಹಿತಿಯನ್ನು ನೀಡುತ್ತಿದ್ದ. ಈ ಕೆಲಸವನ್ನು ಮಾಡಲು ಒಬ್ಬೊಬ್ಬ ಮೇಲ್ವಿಚಾರಕರಿಗೆ ಕಾಶಿನಾಥ 1 ಲಕ್ಷ ರೂಪಾಯಿ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನವೇ ನೀಡುತ್ತಿದ್ದ. ಹಣವನ್ನು ಪಡೆದ ಬಳಿಕ ಇವರು ಕೊಠಡಿಯ ಪರಿವೀಕ್ಷಣೆಗೆ ತೆರಳುತ್ತಿದ್ದರು. ಈ ಸ್ಕ್ಯಾಮ್‍ನಲ್ಲಿ ಕಾಶಿನಾಥ ನಾಲ್ಕು ಲಕ್ಷ ರೂಪಾಯಿ ಇಟ್ಟುಕೊಳ್ಳುತ್ತಿದ್ದನು. ಇದೀಗ ಸಿಐಡಿ  ಪೊಲೀಸರ ಮುಂದೆ 2014 ರಿಂದ ವ್ಯವಹಾರ ಮಾಡುತ್ತಿದ್ದೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ದಿವ್ಯಾ, ಮಂಜುನಾಥ ಹೇಳುತ್ತಿದ್ದಂತೆ ನನಗೆ ಬೇಕಾದ ಮೇಲ್ವಿಚಾರಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾನೆ. ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಆರ್ಭಟ – GRPA ಆ್ಯಕ್ಷನ್ ಪ್ಲಾನ್‌ನಂತೆ ರೆಡ್‌ಅಲರ್ಟ್ ಘೋಷಣೆ

    ಮತ್ತಷ್ಟು ತನಿಖೆ ನಡೆಸಬೇಕಾದ ಕಾರಣ ಮತ್ತೆ ಎಂಟು ದಿನಗಳ ಕಾಲ ಮಂಜುನಾಥ ಮೇಲ್ಕುಂದಿ, ಕಾಶಿನಾಥ, ಅಭ್ಯರ್ಥಿ ಶ್ರೀಧರನನ್ನು ಕಸ್ಟಡಿಗೆ ಪಡೆಯಲಾಗಿದೆ. ಈ ಹಿಂದೆ ಸೆಲೆಕ್ಟ್ ಆದ ವ್ಯಕ್ತಿಗಳ ಮಾಹಿತಿಯನ್ನು ಕೂಡ ಕಾಶಿನಾಥ ಬಾಯ್ಬಿಟ್ಟಿದ್ದಾನಂತೆ. ಈಗಿರುವ ಹಾಲಿ ಪಿಎಸ್‍ಐಗಳ ಗುಂಪಲ್ಲೂ ಗೋಲ್ ಮಾಲ್ ನಡೆದು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಕಾಶಿನಾಥ ಹೇಳಿದ್ದಾನೆ.

    ಮತ್ತೊಂದೆಡೆ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಅಕ್ರಮಗಳಿಗೆ ಪೊಲೀಸರೇ ಶ್ರೀರಕ್ಷೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಪಾಲು ಬಹಳ ದೊಡ್ಡದಿದೆ. ಅದಕ್ಕೆ ಅರೆಸ್ಟ್ ಆಗಿ ಸಿಐಡಿ ಕಸ್ಟಡಿಯಲ್ಲಿರೋ ಅಭ್ಯರ್ಥಿಗಳ ಸಂಖ್ಯೆ ಸಾಕ್ಷಿ. ಅಲ್ಲದೆ, ಬಹುತೇಕ ಟಾಪರ್ಸ್‍ಗಳೇ ಹಿಟ್ ಲಿಸ್ಟ್‍ನಲ್ಲಿದ್ದಾರೆ. ಪಿಎಸ್‍ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಟಾಪರ್ಸ್‍ಗಳೇ ಆರೋಪಿಗಳ ಪಟ್ಟಿಯಲ್ಲಿದ್ದಾರೆ.

    ಈ ಪ್ರಕರಣದಲ್ಲಿ ನಾಲ್ವರು ಡಿವೈಎಸ್‍ಪಿ, ಇಬ್ಬರು ಸಿಪಿಐಗಳು ಭಾಗಿಯಾಗಿದ್ದು, ಅಭ್ಯರ್ಥಿಗಳಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈಗಾಗಲೇ ಮೂವರು ಡಿವೈಎಸ್‍ಪಿಗಳ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಓರ್ವ ಡಿವೈಎಸ್‍ಪಿಯ ಎರಡು ಮೊಬೈಲ್ ಸೀಜ್ ಮಾಡಿದ್ದಾರೆ.

  • 2018ರಲ್ಲಿ ನಮ್ಮನ್ನ ಅಗಲಿದ ಗಣ್ಯರು

    2018ರಲ್ಲಿ ನಮ್ಮನ್ನ ಅಗಲಿದ ಗಣ್ಯರು

    ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ, ತಮಿಳುನಾಡಿನ ಡಿಎಂಕೆ ನಾಯಕ ಕರುಣಾನಿಧಿ, ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ, ಸಚಿವ ಅನಂತ್ ಕುಮಾರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ವರ್ಷ ವಿಧವಶರಾಗಿದ್ದಾರೆ. ಅಷ್ಟೇ ಅಲ್ಲದೆ ವರ್ಷ ಆರಂಭವಾದ ಕೆಲ ದಿನಗಳಲ್ಲಿಯೇ ಕಾಶಿನಾಥ್ ಅವರನ್ನು ಕಳೆದುಕೊಂಡಿದ್ದ ಸ್ಯಾಂಡ್‍ವುಲ್ ವರ್ಷಾಂತ್ಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡಿತು.

    ರಾಧಾ ವಿಶ್ವನಾಥ್:
    ಎಂ.ಎಸ್. ಸುಬ್ಬಲಕ್ಷ್ಮಿ ಅವರ ಪುತ್ರಿ ಹಾಗೂ ಖ್ಯಾತ ಗಾಯಕಿಯಾಗಿದ್ದ ರಾಧಾ ವಿಶ್ವನಾಥ್ ಅವರು ಜನವರಿ 2ರಂದು ನಿಧನರಾದರು.

    ಕಾಶಿನಾಥ್:
    ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ ಕಾಶಿನಾಥ್(67) ಅವರು ಜನವರಿ 18ರಂದು ನಿಧನರಾದರು. ಅಂದು ಚಾಮರಾಜಪೇಟೆಯ ಟಿಆರ್ ಮಿಲ್‍ನ ರುದ್ರಭೂಮಿಯಲ್ಲಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

    ಶ್ರೀದೇವಿ:
    ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ (54) ಹೃದಯಾಘಾತದಿಂದ ದುಬೈಯಲ್ಲಿ ಫೆಬ್ರವರಿ 24ರಂದು ರಾತ್ರಿ ಮೃತಪಟ್ಟಿದ್ದರು. ನಟಿ ಶ್ರೀದೇವಿ ಸಾವು ಭಾರೀ ಚರ್ಚೆಗೆ ಕಾರಣವಾಗಿತ್ತು. ದುಬೈನಿಂದ ಮೃತದೇಹವನ್ನು ಮುಂಬೈಗೆ ತಂದು ಫೆಬ್ರವರಿ 27ರಂದು ವಿಲೆ ಪಾರ್ಲೆ ಸೇವಾ ಸಮಾಜದ ಶವಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ತಮಿಳುನಾಡಿನ ಶಿವಕಾಶಿಯಲ್ಲಿ 1963ರ ಆಗಸ್ಟ್ 13ರಂದು ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲಿಯೇ ತಮಿಳಿನ `ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು.

    ಕರುಣಾನಿಧಿ:
    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕಲೈನರ್ ಕರುಣಾನಿಧಿ(94) ಆಗಸ್ಟ್ 7ರಂದು ವಿಧಿವಶರಾದರು. ಮರಿನಾ ಬೀಚ್‍ನಲ್ಲಿ ಅಂತ್ಯಸಂಸ್ಕಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಜಾಗದ ಸಮಸ್ಯೆಯನ್ನು ಆಲಿಸಿದ ಕೋರ್ಟ್ ಆಗಸ್ಟ್ 8ರಂದು ರಾತ್ರಿಯೇ ವಿಚಾರಣೆ ನಡೆಸಿ, ಮರಿನಾ ಬೀಚ್‍ನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಿತು. ಇದರಿಂದಾಗಿ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರ ಅಂತ್ಯಸಂಸ್ಕಾರ ನೆರವೇರಿದ ಮರಿನಾ ಬೀಚ್‍ನಲ್ಲಿಯೇ ಕರುಣಾನಿಧಿ ಅವರಿಗೂ ಜಾಗ ಸಿಕ್ಕಂತಾಯಿತು.

    ಸೋಮನಾಥ ಚಟರ್ಜಿ:
    ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ(89) ಆಗಸ್ಟ್ 13ರಂದು ಕೋಲ್ಕತಾದ ಆಸ್ಪತ್ರೆಯಲ್ಲಿ ನಿಧನರಾದರು. ಚಟರ್ಜಿ ಅವರು 10 ಬಾರಿ ಲೋಕಸಭಾ ಸದಸ್ಯರಾಗಿದ್ದರು ಮತ್ತು ಸಿಪಿಐ(ಎಂ) ನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 2004 ರಿಂದ 2009ರವರೆಗೆ ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

    ಅಟಲ್ ಬಿಹಾರಿ ವಾಜಪೇಯಿ:
    ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ(93) ಅವರು ಆಗಸ್ಟ್ 16ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಅನೇಕ ರಾಜಕೀಯ ನಾಯಕರು ಪಕ್ಷಭೇದ ಮರೆತು ದೇಶದ ಮೂಲೆ ಮೂಲೆಯಿಂದ ಬಂದು ಅಟಲ್ ಜೀ ಅವರ ಅಂತಿಮ ದರ್ಶನ ಪಡೆದರು. ಬ್ರಾಹ್ಮಣ ಸಂಪ್ರದಾಯದಂತೆ ವಾಜಪೇಯಿ ಅವರ ಅಂತ್ಯಸಂಸ್ಕಾರವು ಆಗಸ್ಟ್ 17ರಂದು ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಿತು.

    ಅನಂತ್ ಕುಮಾರ್:
    ದೆಹಲಿಯ ಕನ್ನಡ ಧ್ವನಿ ಎಂದೇ ಗುರುತಿಸಿಕೊಂಡಿದ್ದ ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ಸಚಿವ ಅನಂತ್ ಕುಮಾರ್ (59) ಅವರು ನವೆಂಬರ್ 12ರಂದು ನಿಧನರಾದರು. ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅನಂತ್ ಕುಮಾರ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

    ರೆಬಲ್ ಸ್ಟಾರ್ ಅಂಬರೀಶ್:
    ಮಾಜಿ ಸಚಿವ, ಸ್ಯಾಂಡಲ್‍ವುಡ್ ಟ್ರಬಲ್ ಶೂಟರ್, ರೆಬೆಲ್ ಸ್ಟಾರ್ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ವಿಧಿವಶರಾದರು. ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ಮೂಲಕ ಸಾಗಿಸಿ ಅಲ್ಲಿನ ಜನತೆಗೆ ದರ್ಶನ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿತು. ಅಂಬರೀಶ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ನೆರವೇರಿಸಿದರು.

    ಜಾಫರ್ ಶರೀಫ್:
    ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್(85) ಅವರು ನವೆಂಬರ್ 25ರಂದು ನಿಧನರಾದರು. ನವೆಂಬರ್ 3, 1933 ರಂದು ಜನಿಸಿದ್ದ ಷರೀಫ್ 1991-95ರ ಅವಧಿಯಲ್ಲಿ ಕೇಂದ್ರ ರೈಲ್ವೇ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಆಪ್ತರಾಗಿದ್ದ ಜಾಫರ್ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದರು. ಬೆಂಗಳೂರಿನ ಖಬರಸ್ತಾನ ಸ್ಮಶಾನದಲ್ಲಿ ನವೆಂಬರ್ 26ರಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಮಧುಕರ್ ಶೆಟ್ಟಿ:
    ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಅವರು ಹೈದ್ರಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಡಿಸೆಂಬರ್ 28ರಂದು ವಿಧಿವಶರಾದರು. ಉಡುಪಿ ಮೂಲದ ಮಧುಕರ್ ಶೆಟ್ಟಿ ಅವರು, ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ. 1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ, ರಾಮನಗರ ಚನ್ನಪಟ್ಟಣದಿಂದ ವೃತ್ತಿ ಜೀವನ ಆರಂಭಿಸಿದ್ದರು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿಯ ಮನೆಯ ಅಡಿಕೆ ತೋಟದಲ್ಲಿ ಡಿಸೆಂಬರ್ 30ರಂದು ಅಂತ್ಯಕ್ರಿಯೆ ನೆರವೇರಿತು.

    ಸೂಲಗಿತ್ತಿ ನರಸಮ್ಮ:
    ದೇಶದ ಉನ್ನತ ನಾಗರಿಕ ಪದ್ಮ ಪ್ರಶಸ್ತಿ ಪುರಸ್ಕೃತ ಕನ್ನಡತಿ ಸೂಲಗಿತ್ತಿ(98) ನರಸಮ್ಮ ಅವರು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಡಿಸೆಂಬರ್ 25ರಂದು ನಿಧನರಾದರು. ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಾಪುರದ ಮೂಲದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಕಾಲದ ಹೆರಿಗೆ ತಜ್ಞೆಯಂತೆ 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದರು. ಸೂಲಗಿತ್ತಿ ನರಸಮ್ಮ ಅವರ ಅಂತ್ಯ ಸಂಸ್ಕಾರ ಡಿಸೆಂಬರ್ 26ರಂದು ನಗರದ ಗಂಗಸಂದ್ರ ಸರ್ಕಾರಿ ಜಮೀನಿನಲ್ಲಿ ನೆರವೇರಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

    2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

    2018 ಮುಗಿದು 2019ಕ್ಕೆ ಎಲ್ಲರು ಪಾದಾರ್ಪಣೆ ಮಾಡುತ್ತಿದ್ದೇವೆ. ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಚಿತ್ರರಂಗ ಹಲವು ಏರುಪೇರುಗಳನ್ನು ಕಂಡಿದೆ. ಸಿನಿಮಾದ ದಂತಕತೆ ಎಂದು ಕರೆಸಿಕೊಳ್ಳುತ್ತಿದ್ದ ಅಂಬರೀಶ್, ಶ್ರೀದೇವಿ, ಕಾಶಿನಾಥ್ ಸೇರಿದಂತೆ ಹಲವು ಗಣ್ಯರನ್ನು 2018ರಲ್ಲಿ ನಾವೆಲ್ಲ ಕಳೆದುಕೊಂಡಿದ್ದೇವೆ.

    ಕಾಶಿನಾಥ್:
    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಜನವರಿ 18ರಂದು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಶ್ರೀಶಂಕರ್ ಆಸ್ಪತ್ರೆಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದರು. ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು. ಕಾಶಿನಾಥ್ ಅವರು 43 ಸಿನಿಮಾಗಳಲ್ಲಿ ನಟಿಸಿದ್ದರು. 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ. ಅಷ್ಟೇ ಅಲ್ಲದೇ ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದಾಗಿದೆ.

    ಕೃಷ್ಣಕುಮಾರಿ:
    60-80 ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಕೃಷ್ಣಕುಮಾರಿ ಜನವರಿ 24ರಂದು ವಿಧಿವಶರಾದರು. ಕೃಷ್ಣಕುಮಾರಿ ನೈಹಾತಿಯ ತೆಲಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ತೆಲುಗು, ತಮಿಳು, ಕನ್ನಡ ಮಲೆಯಾಳಂ ಹಾಗು ಹಿಂದಿ ಸೇರಿದಂತೆ ಸುಮಾರು 230ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣಕುಮಾರಿ ನಟಿಸಿದ್ದರು. 1951ರಲ್ಲಿ ನವ್ವಿತೆ ನವರತ್ನುಲು ಎಂಬ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಕೃಷ್ಣ ಕುಮಾರಿ, ಡಾ.ರಾಜ್ ಕುಮಾರ್, ಎನ್‍ಟಿಆರ್, ಎಎನ್‍ಆರ್, ಶಿವಾಜಿ ಗಣೇಶನ್ ರಂತಹ ಸ್ಟಾರ್ ನಟರ ಜೊತೆ ನಟಿಸಿದ್ದರು.

    ಶ್ರೀದೇವಿ:
    ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಫೆಬ್ರವರಿ 25ರಂದು ಹೃದಯಾಘಾತಗೊಂಡು ನಿಧನರಾಗಿದ್ದರು. 13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು.

    ಪಿ.ಎನ್.ಸತ್ಯ:
    ನಿರ್ದೇಶಕ, ನಟ ಪಿ.ಎನ್ ಸತ್ಯ ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೆ ಮೇ 5ರಂದು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೆಜೆಸ್ಟಿಕ್, ಡಾನ್, ದಾಸ, ಶಾಸ್ತ್ರೀ, ಗೂಳಿ ಸೇರಿದಂತೆ 16 ಚಿತ್ರಗಳನ್ನ ನಿರ್ದೇಶಿಸಿದ್ದ ಸತ್ಯ ಅವರ ಕೊನೆಯ ಚಿತ್ರ ಮರಿ ಟೈಗರ್ ಆಗಿತ್ತು. ನಿರ್ದೇಶನ ಮಾತ್ರವಲ್ಲದೇ 21 ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಇವರ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದರು.

    ನಿರೂಪಕ ಚಂದನ್:
    ಖಾಸಗಿ ವಾಹಿನಿ ನಿರೂಪಕ ಚಂದನ್ ಅಪಘಾತದಲ್ಲಿ ಮೃತಪಟ್ಟಿದ್ದರು. ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪತ್ನಿ ಮೀನಾ ತಮ್ಮ ಮಗ ತುಷಾರ್ ನನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕೊನೆಗೂ ಅವರು ಮೃತಪಟ್ಟಿದ್ದಾರೆ. ತುಷಾರ್ ಕಣ್ಣನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

    ಹಾಸ್ಯನಟ ಮಲ್ಲೇಶ್:
    ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚಲನಚಿತ್ರ ಹಾಸ್ಯ ನಟ ವಠಾರ ಮಲ್ಲೇಶ್(42) ಜೂನ್ 6ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ್ರು. ಮಲ್ಲೇಶ್ ಬನ್ನೇರುಘಟ್ಟದ ಜಂಗಲಪಾಳ್ಯದಲ್ಲಿ ವಾಸವಾಗಿದ್ದರು. ಮಲ್ಲೇಶ್ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ಟೆಲಿಫೋನ್ ಬೂತ್ ಕೆಲಸ ಮಾಡುತ್ತಿದ್ದರು. ಮಲ್ಲೇಶ್ ಅವರು ಸುಮಾರು 250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಯಲ್ಲಿ ಸುಮಾರು 60ಕ್ಕೂ ಅಧಿಕ ಧಾರಾವಾಹಿಯಲ್ಲಿ ನಟಿಸಿದ್ದಾರೆ.

    ಸದಾಶಿವ ಬ್ರಹ್ಮಾವರ್:
    ತೆರೆಯ ಮೇಲೆ ಜನರನ್ನು ರಂಜಿಸಿ ಅದೆಷ್ಟೋ ಪಾತ್ರಕ್ಕೆ ಜೀವ ತುಂಬಿದ ಮೇರು ಕಲಾವಿದ ಸದಾಶಿವ ಬ್ರಹ್ಮಾವರ್(90) ವಯೋಸಹಜ ಖಾಯಿಲೆಯಿಂದ ಸೆಪ್ಟೆಂಬರ್ 20ರಂದು ವಿಧಿವಶರಾಗಿದ್ದಾರೆ. ಸದಾಶಿವ ಬ್ರಹ್ಮಾವರ್ ಅವರು ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್, ದರ್ಶನ್, ಸುದೀಪ್, ರವಿಚಂದ್ರನ್, ಜಗ್ಗೇಶ್ ಸೇರಿದಂತೆ ಅನೇಕ ನಟರ ಜೊತೆ ಅಭಿನಯಿಸಿದ್ದರು. ಇವರು ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬುತ್ತಿದ್ದರು.

    ಅನ್ನಪೂರ್ಣ ದೇವಿ:
    ಖ್ಯಾತ ಹಿಂದುಸ್ತಾನಿ ಗಾಯಕಿ ಅನ್ನಪೂರ್ಣದೇವಿ (91) ಅಕ್ಟೋಬರ್ 13ರಂದು ವಿಧಿವಶರಾಗಿದ್ದಾರೆ. ಪದ್ಮಭೂಷಣ ಪುರಸ್ಕೃತ, ಮಾಯಿಹಾರ್ ಗರಾನಾ ಸಂಸ್ಥಾಪಕರಾದ ಅನ್ನಪೂರ್ಣ ದೇವಿಯವರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅಲ್ಲಾವುದಿನ್ ಖಾನ್ ಮತ್ತು ಮದೀನಾ ಬೇಗಮ್ ದಂಪತಿಯ ನಾಲ್ಕು ಮಕ್ಕಳ ಪೈಕಿ ಕಿರಿಯ ಮಗಳಾದ ಅನ್ನಪೂರ್ಣ ದೇವಿ ಅವರು ಮಧ್ಯಪ್ರದೇಶದ ಮಾಯಿಹಾರ್ನಲ್ಲಿ 1927ರ ಏಪ್ರಿಲ್ 23 ರಂದು ಜನಿಸಿದ್ದರು. ಪೋಷಕರು ಮಗಳಿಗೆ ರೋಷನಾರಾ ಎಂದು ಹೆಸರನ್ನು ಇಟ್ಟಿದ್ದರೂ ಮಧ್ಯಪ್ರದೇಶದ ರಾಜ ಬ್ರಿಜನಾಥ್ ಸಿಂಗ್ ಅನ್ನಪೂರ್ಣ ದೇವಿ ಎಂದು ಹೆಸರನ್ನು ನೀಡಿದ್ದರು. ಮುಂದೆ ಅನ್ನಪೂರ್ಣದೇವಿ ಎನ್ನುವ ಹೆಸರೇ ಪ್ರಸಿದ್ಧವಾಗಿತ್ತು.

    ಅಂಬರೀಶ್:
    ನವೆಂಬರ್ 24 ರೆಬೆಲ್ ಸ್ಟಾರ್ ಅಂಬಬರೀಶ್ ನಿಧನದ ಸುದ್ದಿ ಚಂದನವನಕ್ಕೆ ಬರ ಸಿಡಲಿನಂತೆ ಅಪ್ಪಳಿಸಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 24 ಶನಿವಾರ ರಾತ್ರಿ ವಿಧಿವಶರಾದರು. ಭಾನುವಾರ ಕಂಠೀರವ ಸ್ಟೇಡಿಯಂನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಮಂಡ್ಯದ ಜನತೆಗೆ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಿಸಬೇಕೆಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅಭಿಮಾನಿಗಳಿಗಾಗಿ ಅಂಬಿ ಮೃತ ದೇಹವನ್ನು ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದ ವಿಶ್ವೇಶರಯ್ಯ ಕ್ರೀಡಾಂಗಣಕ್ಕೆ ರವಾನಿಸಲಾಗಿತ್ತು.

    ಭಾನುವಾರ ರಾತ್ರಿ ಚಳಿಯನ್ನು ಲೆಕ್ಕಿಸದೇ ತಮ್ಮ ನೆಚ್ಚಿನ ನಟ, ಜನನಾಯಕ ಅಂತಿಮ ದರ್ಶನ ಪಡೆದರು. ಸೋಮವಾರ ನವೆಂಬರ್ 25ರಂದು ಬೆಳಗ್ಗೆ ಅದೇ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಯ್ತು. ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಮೂಲಕ ಕಂಡೀರವ ಸ್ಟುಡಿಯೋ ತಲುಪಿಸಲಾಯ್ತು. ವಿಧಿವಿಧಾನಗಳ ಮೂಲಕ ಕುಟುಂಬಸ್ಥರು, ಹಿರಿಯ ನಟರು, ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.

    ನಿರ್ದೇಶಕ ಎ.ಆರ್.ಬಾಬು:
    ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಿರ್ದೇಶಕ, ನಟ ಎ.ಆರ್. ಬಾಬು ಡಿಸೆಂಬರ್ 4ರಂದು ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದ್ರು. ನಟ ಮತ್ತು ನಿರ್ದೇಶಕರಾಗಿದ್ದ ಎ.ಆರ್. ಬಾಬು ಚಂದನವನದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಬಾಬು ಅವರಿಗೆ 56 ವರ್ಷ ವಯಸ್ಸಾಗಿತ್ತು. ಹಲೋ ಯಮ, ಖಳನಾಯಕ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ, ಕಾಸಿದ್ದವನೇ ಬಾಸು, ಸಪ್ನೋಂಕಿ ರಾಣಿ, ಚಮ್ಕಾಯಿಸಿ ಚಿಂದಿ ಉಡಾಯಿಸಿ, ಕೂಲಿ ರಾಜ, ಮರುಜನ್ಮ ಸಿನಿಮಾಗಳು ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದವು. ಚಂದನವನದ ಹಿರಿಯ ನಿರ್ದೇಶಕರಾಗಿದ್ದ ಬಾಬು ಅವರ ಗರಡಿಯಲ್ಲಿ ಜೋಗಿ ಪ್ರೇಮ್ ಪಳಗಿದ್ದರು. ನಿರ್ದೇಶಕನ ಸಾವಿಗೆ ಸ್ಯಾಂಡಲ್‍ವುಡ್ ಗಣ್ಯರು ಸಂತಾಪ ಸೂಚಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳಚಿತು ಸಿನಿಮಾ ರಂಗದ ಕೊಂಡಿ – ಪಂಚಭೂತಗಳಲ್ಲಿ ಕಾಶಿನಾಥ್ ಲೀನ

    ಕಳಚಿತು ಸಿನಿಮಾ ರಂಗದ ಕೊಂಡಿ – ಪಂಚಭೂತಗಳಲ್ಲಿ ಕಾಶಿನಾಥ್ ಲೀನ

    ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ನಾಲ್ಕು ದಶಕಗಳಿಗೂ ಹೆಚ್ಚು ಬಣ್ಣದ ಲೋಕದಲ್ಲಿ ಮಿಂದೆದ್ದಿದ್ದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ಪ್ರಯೋಗಾತ್ಮಕ ಚಿತ್ರಗಳ ಅದ್ಭುತ ಪ್ರತಿಭೆ ಕಾಶಿನಾಥ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

    ಚಾಮರಾಜಪೇಟೆಯ ಟಿಆರ್ ಮಿಲ್‍ನ ರುದ್ರಭೂಮಿಯಲ್ಲಿ ರಾತ್ರಿ 8 ಗಂಟೆಗೆ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯ್ತು. ಮಗ ಅಭಿಮನ್ಯು ಕಾಶಿನಾಥ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶಿಸಿದರು.

    ರಕ್ತಕಣಗಳಿಗೆ ಸಂಬಂಧಿಸಿದ್ದ ಹಾರ್ಟ್ ಸ್ಕಿಲ್ಸ್ ಲಿಂಕ್-4 ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಕಾಶಿನಾಥ್ ಏಳು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ, ಒಂದು ತಿಂಗಳ ಹಿಂದೆ ಚಿಕಿತ್ಸೆ ಮುಗಿದಿತ್ತು.

    ಕಳೆದ 2 ದಿನಗಳ ಹಿಂದೆ ಮತ್ತೆ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟ, ಕಫಾದಿಂದ ತೀವ್ರವಾಗಿ ಬಳಲುತ್ತಿದ್ದರು. ಡಾ. ಶೇಖರ್ ಪಾಟೀಲ್ ಚಿಕಿತ್ಸೆ ಕೊಡ್ತಿದ್ರು. ಆದ್ರೆ, ಇವತ್ತು ಬೆಳಗ್ಗೆ 7.15ರ ಸುಮಾರಿಗೆ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

    ಕಾಶಿನಾಥ್‍ಗೆ ಅಲೋಕ್, ಅಮೃತವರ್ಷಿಣಿ ಇಬ್ಬರು ಮಕ್ಕಳಿದ್ದಾರೆ. ಪುತ್ರಿ ಅಮೃತ ದುಬೈನಿಂದ ಆಗಮಿಸಿದ್ರು. ಹಿರಿಯ ಕಲಾವಿದ ಅಗಲಿಗೆ ಸುದ್ದಿ ಕೇಳಿದಾಕ್ಷಣ ಚಿತ್ರರಂಗ ದಿಗ್ಭ್ರಮೆಯಿಂದ ಶೋಕಸಾಗರದಲ್ಲಿ ಮುಳುಗಿತು. ಕಾಶಿನಾಥ್ ಇದ್ದ ಆಸ್ಪತ್ರೆ, ಬಸವನಗುಡಿಯ ಎಪಿಎಸ್ ಕಾಲೇಜ್ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಲಾಯ್ತು. ನಂತರ ಜಯನಗರದ ಅವರ ನಿವಾಸದ ಬಳಿ ಸ್ವಲ್ಪ ಹೊತ್ತು ಇರಿಸಿಲಾಗಿತ್ತು. ಕಾಶಿನಾಥ್ ಕುಟುಂಬಕ್ಕೆ ಗಣ್ಯರು ಸಾಂತ್ವನ ಹೇಳಿದ್ರು.

    https://www.youtube.com/watch?v=8-v4xsIuJOk

  • ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಕಾಶಿನಾಥ್ ಅಂದು ಹೀಗೆ ಹೇಳಿದ್ರು

    ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಕಾಶಿನಾಥ್ ಅಂದು ಹೀಗೆ ಹೇಳಿದ್ರು

    ಬೆಂಗಳೂರು: ಕೆಲವು ದಿನಗಳ ಹಿಂದೆ ಶಿಷ್ಯ, ನಟರಾಗಿರುವ ಉಪೇಂದ್ರ ರಾಜಕೀಯ ಪ್ರವೇಶಿಸಿದ್ದಾಗ ಪ್ರತಿಕ್ರಿಯಿಸಿದ ಕಾಶಿನಾಥ್, ಪ್ರಯತ್ನ ಭಿನ್ನವಾಗಿದ್ದು ಯಾವುದಕ್ಕೂ ಹೆದರಬೇಡ. ಸೋಲು-ಗೆಲುವು ಬಗ್ಗೆ ಚಿಂತಿಸಿರಬಾರದು, ನಮ್ಮ ಕೆಲಸದ ಫಲಾಪೇಕ್ಷವನ್ನು ದೇವರಿಗೆ ಬಿಟ್ಟು ಮುನ್ನುಗ್ಗುತ್ತಿರಬೇಕು. ಮುಂದಿನ ದಿನಗಳಲ್ಲಿ ನಿನ್ನ ಆಲೋಚನೆಗಳಿಗೆ ಬೆಂಬಲ ಸಿಗುತ್ತದೆ ಎಂದು ಶುಭಕೋರಿದ್ದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅವರು, ನಿರೀಕ್ಷೆ ಮಾಡದ ರೀತಿಯಲ್ಲಿ ಬೆಳೆದಂತಹ ಜನರನ್ನು ನಾವು ನೋಡಿದ್ದೇವೆ. ಪಾರ್ಟಿ ಓರಿಯೆಂಟಡ್ ಪೊಲಿಟಿಕ್ಸ್ ಗಿಂತ, ಪರ್ಸನ್ ಓರಿಯಟೆಂಡ್ ಪೊಲಿಟಿಕ್ಸ್ ಇರಬೇಕೆಂದು ನಾನು ತುಂಬಾ ಬಾರಿ ಹಲವರೊಂದಿಗೆ ಚರ್ಚೆ ಮಾಡಿದ್ದೇನೆ. ಇವತ್ತಿನ ರಾಜಕೀಯಕ್ಕೆ ಉಪೇಂದ್ರ ಹೊಂದುತ್ತರೋ ಎಂಬ ಪ್ರಶ್ನೆ ಅಲ್ಲ. ಒಬ್ಬ ವ್ಯಕ್ತಿ ಪ್ರಯತ್ನ ಮಾಡುವುದು ಮುಖ್ಯ. ಪ್ರಯತ್ನ ಮಾಡದೇ ಹೊಂದುತ್ತಾರೆ ಅಂತಾ ಚಿಂತಿಸುತ್ತಾ ಕುಳಿತರೆ ಯಾವುದು ಸಾಧ್ಯವಾಗಲ್ಲ ಅಂತಾ ಹೇಳಿದ್ರು.

    ಉಪೇಂದ್ರ ರೀತಿಯಲ್ಲಿ ಯೋಚಿಸುವರು ಸಾವಿರ ಜನ ಇರಬಹುದು. ಇಂದು ಅವರೆಲ್ಲಾ ನಮ್ಮ ಕಡೆಯಿಂದ ಏನು ಮಾಡಲಿಕ್ಕೆ ಸಾಧ್ಯವಾಗಲ್ಲ ಎಂಬ ದೃಷ್ಟಿಕೋನದಲ್ಲಿ ಇರಬಹುದು. ಆಗಲ್ಲ ಎಂಬ ಯೋಚನೆಯಲ್ಲಿ ಇದ್ದವರನ್ನು ಸಿಡಿದೆಬ್ಬಿಸಿದಾಗ ಅವರ ಸಪೋರ್ಟ್ ಉಪೇಂದ್ರಗೆ ಸಿಗಬಹುದು. ಮುಂದೆ ಬರುವ ಅಡೆತಡೆಗಳ ಬಗ್ಗೆ ನಾನು ಯೋಚನೆ ಮಾಡಲ್ಲ. ನನ್ನಲ್ಲಿ ಸಮಾಜವನ್ನು ಬದಲಾಯಿಸುವ ಶಕ್ತಿಯಿದೆ ಎಂಬ ಆಶಾವಾದದಿಂದ ಮುನ್ನುಗುವುದು ಮಹತ್ವವನ್ನು ಪಡೆದುಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಅಡೆತಡೆ ಬಂದಾಗ ಎದುರಿಸುವ ಸಾಮಥ್ರ್ಯ ತಾನೇ ಹುಟ್ಟಿಕೊಳ್ಳುತ್ತದೆ ಎಂದು ಹೇಳೀ ಉಪೇಂದ್ರ ರಾಜಕೀಯ ಜೀವನಕ್ಕೆ ಶುಭಹಾರೈಸಿದರು.

    ಇಂದು ಬೆಳಗಿನ ಜಾವ ಕಾಶಿನಾಥ್ ವಿಧಿವಶರಾಗಿದ್ದು, ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    https://www.youtube.com/watch?v=-s9cVIJZHTI

  • ‘ಅನುಭವ’ ನೋಡೋದಕ್ಕೆ 6ನೇ ವಾರದ ನಂತ್ರ ಥಿಯೇಟರ್‍ನಲ್ಲಿ ಮಹಿಳೆಯರೇ ಜಾಸ್ತಿ ಬಂದಿದ್ರು: ಕಾಶಿನಾಥ್

    ‘ಅನುಭವ’ ನೋಡೋದಕ್ಕೆ 6ನೇ ವಾರದ ನಂತ್ರ ಥಿಯೇಟರ್‍ನಲ್ಲಿ ಮಹಿಳೆಯರೇ ಜಾಸ್ತಿ ಬಂದಿದ್ರು: ಕಾಶಿನಾಥ್

    ಬೆಂಗಳೂರು: ಮೊದಲ ಬಾರಿಗೆ `ಅನುಭವ’ ಸಿನಿಮಾ ರಿಲೀಸ್ ಬಳಿಕ ಥಿಯೇಟರ್‍ಗೆ ಯಾವ ಮಹಿಳೆ, ಹುಡುಗಿಯರು ಬಂದು ನೋಡಲ್ಲಾ ಅಂತಾ ತುಂಬಾ ಜನ ಹೇಳಿದ್ರು. ಆದರೆ ಸಿನಿಮಾ ತೆರೆಕಂಡ 6ನೇ ವಾರಕ್ಕೆ ಕೈಲಾಶ್ ಥಿಯೇಟರ್‍ನಲ್ಲಿ ಶೇ.80 ರಷ್ಟು ಜನ ಮಹಿಳೆಯರೇ ಇದ್ರು ಅಂತಾ ಕಾಶಿನಾಥ್ ತಿಳಿಸಿದ್ದರು.

    2013ರ ನವೆಂಬರ್ ನಲ್ಲಿ ಕಾಶಿನಾಥ್ ಅವರನ್ನು ಪಬ್ಲಿಕ್ ಟಿವಿಯ ಮುಖ್ಯಸ್ಥ ರಂಗನಾಥ್ ಅವರು ಸಂದರ್ಶನ ಮಾಡಿದ್ದರು. ಈ ಸಂದರ್ಶನದಲ್ಲಿ ಅನುಭವ ಸಿನಿಮಾ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದರು. ಹೀಗಾಗಿ ರಂಗನಾಥ್ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

    6ನೇ ವಾರಕ್ಕೆ ಮಹಿಳೆಯರು ಚಿತ್ರ ನೋಡಲು ಬಂದಿದ್ದು ಯಾಕೆ?
    ಫಿಲ್ಮ್ ರಿಲೀಸ್ ಆದಾಗ ಕ್ರೇಜ್ ಮತ್ತು ರಶ್ ಇತ್ತು. ಹಾಗಾಗಿ ಮಹಿಳೆಯರು ಚಿತ್ರಮಂದಿರಗಳತ್ತ ಬಂದಿರಲಿಲ್ಲ. ಸಿನಿಮಾ ನೋಡಬೇಕು ಎನ್ನುವ ಮನಸ್ಸಿದ್ದರೂ ಕ್ರೇಜ್ ಕಡಿಮೆಯಾದ ಬಳಿಕ ಬಂದು ನೋಡಿದರು. ಹೆಚ್ಚಾಗಿ ಗದ್ದಲವಿದ್ದಾಗ ಸಿನಿಮಾ ನೋಡಲು ಮಹಿಳೆಯರು ಇಷ್ಟಪಡಲ್ಲ. ಹಾಗಾಗಿ ಸಿನಿಮಾದ ಟ್ರೆಂಡ್ ಕಡಿಮೆ ಆಗುತ್ತಿದ್ದಂತೆ ಚಿತ್ರಮಂದಿರಕ್ಕೆ ಪುರುಷರು ಬರೋದು ಕಡಿಮೆ ಆಯಿತು. ರೆಷ್ ಕಡಿಮೆಯಾದಾಗ ಸಹಜವಾಗಿ ಮಹಿಳೆಯರು ಥಿಯೇಟರ್‍ಗೆ ಬಂದು ಸಿನಿಮಾವನ್ನು ನೋಡಿದ್ರು.

    ಅನುಭವ ಫಿಲ್ಮ್ ಮಾಡಿ ಬ್ರ್ಯಾಂಡ್ ಆಗ್ಬಿಟ್ರಾ ಕಾಶಿನಾಥ್?
    ಥಿಯೇಟರ್ ವಾತಾವರಣವನ್ನು ಎನ್‍ಕ್ಯಾಶ್ ಮಾಡಿಕೊಂಡು `ಅನುಭವ’ ಚಿತ್ರವನ್ನು ರಿ ರಿಲೀಸ್ ಮಾಡುತ್ತಿದ್ದೇನೆ. ನಾನು ಎರಡೇ ಬೋಲ್ಡ್ ಸಿನಿಮಾಗಳನ್ನು ಮಾಡಿದ್ದು, ಉಳಿದಂತೆ ಹಲವಾರು ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಮಾಡಿದ್ದೇನೆ. ಇಷ್ಟು ಸಿನಿಮಾ ಮಾಡಿದ್ರೂ ಆ ಎರಡೇ ಫಿಲ್ಮ್ ಮೇಲೆ ಯಾಕೆ ಕಣ್ಣು ಹೋಗುತ್ತೆ? ಅದು ಅವರ ಮನೋಭಾವವನ್ನು ತೋರಿಸುತ್ತದೆ. ಒಂದು ಸ್ಥಳದಲ್ಲಿ 10 ಪುಸ್ತಕಗಳಿರುತ್ತದೆ. ಆ 10 ಪುಸ್ತಕಗಳಲ್ಲಿ 2 ಸೆಕ್ಸ್ ಬುಕ್‍ಗಳಿದ್ದರೆ ಹೆಚ್ಚಿನ ಜನರು ಕಣ್ಣು ಆ ಎರಡು ಪುಸ್ತಕಗಳ ಮೇಲೆಯೇ ಹೋಗುತ್ತದೆ. ಅದಕ್ಕೆ ನಾನು ಏನೂ ಮಾಡಲು ಸಾಧ್ಯವಿಲ್ಲ.

    ಅನುಭವ ಚಿತ್ರವನ್ನು ರಿಲೀಸ್ ತಡೆಯುವ ಪ್ರಯತ್ನ ನಡೆಸಿದ್ರಾ?
    ಸಿನಿಮಾ ರಿಲೀಸ್ ಮಾಡುವಾಗ ಏನಾದ್ರೂ ತೊಂದರೆ ಬಂದರೆ ನೋಡಿಕೊಳ್ಳುವಂತೆ ನಂಬಿಕಸ್ಥ ವ್ಯಕ್ತಿಗೆ ಹೇಳಿದ್ದೆ. ಬಿಡುಗಡೆಯ ವೇಳೆ ಕೆಲವರು ನಿಗದಿತ ಸ್ಥಳಗಳಲ್ಲಿ ಚಿತ್ರ ಪ್ರದರ್ಶನ ಮಾಡಬಾರದೆಂದು ಹೇಳಿದ್ದರು.(ಬಿಡುಗಡೆ ಕೆಲವರು ಅಡ್ಡಿಯಾಗಿದ್ದರು ಎಂದು ಕಾಶಿನಾಥ್ ಹೇಳಿದರೇ ವಿನಾಃ ಅಡ್ಡಿ ಪಡಿಸಿದ ವ್ಯಕ್ತಿಗಳು ಯಾರು ಎನ್ನುವುದನ್ನು ತಿಳಿಸಲಿಲ್ಲ)

    ಈಗ ‘ಅನುಭವ’ದಂತಹ ಸಿನಿಮಾಗಳನ್ನು ಮಾಡ್ತಿಲ್ಲ ಯಾಕೆ?
    ಅನುಭವ ಸಿನಿಮಾದ ವಿಷಯವನ್ನು ಆಧಾರವಾಗಿ ಇಟ್ಟುಕೊಂಡು ಇಂದು ಸಿನಿಮಾಗಳನನ್ನು ಮಾಡೋದಕ್ಕೆ ಆಗುವುದಿಲ್ಲ. ಸಮಾಜ ತುಂಬಾ ಮುಂದುವರೆದಿದ್ದು, ಅದಕ್ಕಿಂತಲೂ ಮುಂದಿನದನ್ನು ಎಲ್ಲರೂ ತಮ್ಮ ಮೊಬೈಲ್‍ಗಳಲ್ಲಿ ನೋಡುತ್ತಾರೆ. ನನಗೆ ಆ ಫಿಲ್ಮ್ ಮಾಡುವಾಗ ನನ್ನ ಉದ್ದೇಶ ಕಾಮಿಡಿ ಆಗಿತ್ತು. ಸಿನಿಮಾದಲ್ಲಿ ಎಕ್ಸ್ ಪೋಸ್ ಮಾಡೋದು ಅಲ್ಲ.

    https://www.youtube.com/watch?v=xeiXKW6Cujk

    https://www.youtube.com/watch?v=ZajXLwlDoxM

  • ಕಾಶಿನಾಥ್ ನಿಧನ- ಅಂತಿಮ ದರ್ಶನ ಪಡೆದ ನಟ ದರ್ಶನ್

    ಕಾಶಿನಾಥ್ ನಿಧನ- ಅಂತಿಮ ದರ್ಶನ ಪಡೆದ ನಟ ದರ್ಶನ್

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ನಟ ದರ್ಶನ್, ಉಪೇಂದ್ರ, ಶಿವರಾಜ್‍ಕುಮಾರ್, ಸುದೀಪ್, ತರುಣ್ ಸುಧೀರ್, ವಿ. ಮನೋಹರ್, ಬಿಗ್‍ಬಾಸ್ ಪ್ರಥಮ್, ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಅಂತಿಮ ದರ್ಶನ ಪಡೆದಿದ್ದಾರೆ.

    ನಟ ದರ್ಶನ್ ಕಾಶಿನಾಥ್ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಟ್ವಿಟ್ಟರ್‍ನಲ್ಲೂ ಕೂಡ ದರ್ಶನ್ ಕಾಶಿನಾಥ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

     

    2 ದಿನಗಳ ಹಿಂದೆ ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬಸವನಗುಡಿಯ ಎನ್‍ಆರ್ ಕಾಲೋನಿಯ ಎಪಿಎಸ್ ಕಾಲೇಜ್ ಗ್ರೌಂಡ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಕಾಶಿನಾಥ್ ಅವರ ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    https://www.youtube.com/watch?v=gnBbvv8FdKo

    https://www.youtube.com/watch?v=d2LtElBseS0

    https://www.youtube.com/watch?v=Z-vlkIrlNXw

  • ಕಾಶಿನಾಥ್ ನನ್ನ ಪಾಲಿನ ದೇವರು: ಉಪೇಂದ್ರ

    ಕಾಶಿನಾಥ್ ನನ್ನ ಪಾಲಿನ ದೇವರು: ಉಪೇಂದ್ರ

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಅಗಲಿಕೆಯ ಬಗ್ಗೆ ಅವರ ಶಿಷ್ಯ ನಟ ಉಪೇಂದ್ರ ಸಂತಾಪ ಸೂಚಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಶಾಕಿಂಗ್ ಅಂತಾ ಹೇಳಬಹುದು. ಇಷ್ಟು ಬೇಗ ನಮ್ಮಲ್ಲೆರನ್ನು ಬಿಟ್ಟು ಹೋಗುತ್ತಾರೆ ಅಂತಾ ಅಂದುಕೊಂಡಿರಲಿಲ್ಲ. ನನಗೆ ಅವರಿಗೆ ಉಷಾರಿಲ್ಲ ಅಂತಾ ಗೊತ್ತಿರಲಿಲ್ಲ. ಅವರು ಯಾರ ಬಳಿನೂ ಏನನ್ನು ಹೇಳಿಕೊಳ್ಳಲ್ಲ. ಬೆಳಿಗ್ಗೆ ಸುದ್ದಿ ಬಂದಾಗ ಶಾಕ್ ಆಯಿತು. ನನ್ನ ಪಾಲಿಗೆ ಮಾತ್ರ ಅವರು ದೇವರು. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. ನನ್ನ ದೇವರು ಅವರು. ಅವರ ಕುಟುಂಬದವರಿಗೆ, ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಇದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

    ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದಾರೆ. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಸುಮಾರು ನಸುಕಿನ ಜಾವ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಕಾಶಿನಾಥ್ ಅಗಲಿದ್ದಾರೆ.

    43 ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ, ಅವನೇ ನನ್ನ ಗಂಡ ಮುಂತಾದ ಸಿನಿಮಾಗಳಲ್ಲಿ ಕಾಶಿನಾಥ್ ನಟನೆ ಮಾಡಿದ್ದರು. ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದು. 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ.

  • ಕಾಶಿನಾಥ್ ಒಬ್ಬ ಲೆಜೆಂಡ್, ಕಾಶಿನಾಥ್ ಸಿನಿಮಾಗಳು ಅಂದ್ರೆನೇ ಬ್ರಾಂಡ್- ಶಿವರಾಜ್‍ಕುಮಾರ್

    ಕಾಶಿನಾಥ್ ಒಬ್ಬ ಲೆಜೆಂಡ್, ಕಾಶಿನಾಥ್ ಸಿನಿಮಾಗಳು ಅಂದ್ರೆನೇ ಬ್ರಾಂಡ್- ಶಿವರಾಜ್‍ಕುಮಾರ್

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ನಟ ಶಿವರಾಜ್‍ಕುಮಾರ್ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

    ಇದೇ ವೇಳೆ ಮಾತನಾಡಿದ ಅವರು, ಕಾಶೀನಾಥ್ ನಿಧನ ಸುದ್ದಿಕೇಳಿ ತುಂಬ ನೋವಾಯ್ತು. ಕಾಶಿನಾಥ್ ಒಬ್ಬ ಲೆಜೆಂಡ್. ಕಾಶಿನಾಥ್ ಸಿನಿಮಾಗಳು ಅಂದ್ರೆನೇ ಬ್ರಾಂಡ್. ಪುಟ್ಟಣ್ಣ ಕಣಗಲ್ ಬಿಟ್ರೆ ನನಗೆ ಬಹಳ ಅಚ್ಚುಮೆಚ್ಚಿನ ನಿರ್ದೇಶಕ ಅಂತ ಹೇಳಿದ್ರು.

    ಅವರ ಧ್ವನಿ ನನಗೆ ಬಹಳ ಇಷ್ಟ. ಬಹಳ ಮುಗ್ಧತೆ ಹಾಗೂ ಮಾನವಿಯತೆ ಇರೋ ನಟ. ಸುದ್ದಿ ಕೇಳಿ ನಂಬಲು ಸಾಧ್ಯವಾಗಲಿಲ್ಲ. ಇನ್ನೂ ಹಲವು ದಿನ ನಮ್ಮೊಂದಿಗೆ ಇರಬೇಕಿತ್ತು. ತುಂಬಾ ಶಾಕಿಂಗ್ ಸುದ್ದಿ. ಶೂಟಿಂಗ್ ಮೊಟಕುಗೊಳಿಸಿ ಇಲ್ಲಿಗೆ ಬಂದ್ವಿ. ಕಾಶಿನಾಥ್ ಸಿನಿಮಾಗಳಿಗೆ ಅವರದ್ದೇ ಬ್ರಾಂಡ್ ಇತ್ತು. ಹಾಗಾಗಿಯೇ ಅವರು ಸಿನಿಮಾರಂಗದ ಲೆಜೆಂಡ್ ಆಗಿದ್ರು. ಅವರ ಮನೆಯವರಿಗೆ ದುಖ ಭರಿಸೋ ಶಕ್ತಿ ದೇವರು ನೀಡಲಿ ಎಂದು ಹೇಳಿದ್ರು.