Tag: Kashi Yatre

  • “ದಿವ್ಯ ಕಾಶಿ – ಭವ್ಯ ಕಾಶಿ”ಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ: ಬೊಮ್ಮಾಯಿ

    “ದಿವ್ಯ ಕಾಶಿ – ಭವ್ಯ ಕಾಶಿ”ಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ: ಬೊಮ್ಮಾಯಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಅಭಿವೃದ್ದಿಗೊಂಡಿರುವ ಕಾಶಿಗೆ ಹೆಚ್ಚಿನ ಭಕ್ತರು ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಿ, ಡಿಬಿಟಿ ಮೂಲಕ ಆನ್‌ಲೈನ್‌ ಮೂಲಕ ಹಣ ವರ್ಗಾವಣೆಗೆ ಚಾಲನೆ ನೀಡಿ ಹಾಗೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವೆಬ್‌ ಪೋರ್ಟಲ್‌ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ: ಮಂತ್ರಾಲಯ ಶ್ರೀಗಳಿಂದ ನದಿ ಪೂಜೆ

    ಇತ್ತೀಚೆಗೆ ಕಾಶಿಯನ್ನು ಮೋದಿಯವರು ನವೀಕರಣ ಮಾಡಿದ್ದಾರೆ. ಹಿಂದೆ ಕಾಶಿಗೆ ಹೋದರೆ ಅಲ್ಲಿನ ಅವ್ಯವಸ್ಥೆಯಿಂದ ಬೇಸರ ಉಂಟಾಗುತ್ತಿತ್ತು. ಆದರೆ ಈಗ ನೂರಕ್ಕೆ ನೂರು ಬದಲಾವಣೆ ಆಗಿದೆ. 23 ಘಾಟ್ ಗಳನ್ನು ಸ್ವಚ್ಛಗೊಳಿಸಿ ಬದಲಾವಣೆ ಮಾಡಲಾಗಿದೆ. ದೇವಸ್ಥಾನದ ಆವರಣ ಸ್ವಚ್ಛಗೊಳಿಸಿ ಭಕ್ತಿ ಮೂಡುವಂತೆ ಮಾಡಿದ್ದಾರೆ. ಕಾಲಕಾಲದಿಂದ ಕಾಶಿಗೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಕಾಶಿಯಾತ್ರಿಕರಿಗೆ ಸಹಾಯ ಮಾಡಬೇಕು ಅಂತ ಜೊಲ್ಲೆಯವರು ಕಾರ್ಯಕ್ರಮ ರೂಪಿಸಲು ಮುಂದಾದರು. ನೇರ ಹಣ ವರ್ಗಾವಣೆ ಮಾಡುವ ಡಿಬಿಟಿ ಸಿಸ್ಟಮ್ ಜಾರಿಯಾಗಿದೆ. ಒಳ್ಳೆ ಕೆಲಸ ಮಾಡಿದ್ದಾರೆ. ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಎಂಡ್ ಟು ಎಂಡ್ ಬಹಳ ಒಳ್ಳೆಯ ಕೆಲಸ ಮಾಡಿದ್ದು, ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಶಿಗೆ ಸಂದರ್ಶಿಸಲಿ ಎಂದರು.

    ದಿವ್ಯ ಕಾಶಿ – ಭವ್ಯ ಕಾಶಿಯಾಗಿ ಅನಾವರಣಗೊಂಡಿರುವ ಕಾಶಿಯನ್ನ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಇದಕ್ಕಾಗಿ ಅಗತ್ಯ ಅನುದಾನವನ್ನೂ ನೀಡಲಾಗಿದೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಆಸಕ್ತಿಯ ಈ ಯೋಜನೆಯನ್ನ ಸರಳಗೊಳಿಸುವ ಮೂಲಕ ಯಾತ್ರಾರ್ಥಿಗಳು ಸುಲಭವಾಗಿ ಸಹಾಯಧನ ಪಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುವ ವೆಬ್‌ಪೋರ್ಟಲ್‌ನ್ನು ಸೇವಾಸಿಂಧು ವೆಬ್‌ಪೋರ್ಟ್‌ಲ್‌ನಲ್ಲಿ ಸಿದ್ದಪಡಿಸಲಾಗಿದೆ. ಯಾತ್ರಾರ್ಥಿಗಳು ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕರ್ನಾಟಕ ಛತ್ರದಲ್ಲಿ ತಮ್ಮ ನೋಂದಣಿ ಮಾಡಿಸಿಕೊಂಡು ಅಗತ್ಯ ದಾಖಲಾತಿಗಳನ್ನು ವೆಬ್‌ಪೋರ್ಟಲ್‌ ಮೂಲಕ ಸಲ್ಲಿಸಬಹುದು ಎಂದು ತಿಳಿಸಿದರು.

    ಇದೇ ವೇಳೆ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಜರಾಯಿ ಇಲಾಖೆಗೆ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯಗಳ ಸಮಗ್ರ ಅಭಿವೃದ್ದಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಬಲ ತುಂಬಿದ್ದಾರೆ. ಕಳೆದ 10 ವರ್ಷಗಳಿಗೆ ಹೋಲಿಸಿದಲ್ಲಿ ಅತಿಹೆಚ್ಚು ಅನುದಾನ ಈ ಆರ್ಥಿಕ ವರ್ಷದಲ್ಲಿ ನೀಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 693 ಕೋಟಿ ರೂಪಾಯಿಗಳಷ್ಟು ಬೃಹತ್‌ ಅನುದಾನ ನೀಡಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ಮಾಡಬೇಕು ಎನ್ನುವುದು ಬಹಳಷ್ಟು ಜನರ ಅಭಿಲಾಷೆಯಾಗಿರುತ್ತದೆ. ಅದಕ್ಕೆ ಪ್ರೋತ್ಸಾಹ ಧನ ನೀಡಬೇಕು ಎನ್ನುವುದು ನನ್ನ ಬಹಳ ದಿನದ ಆಶಯವಾಗಿತ್ತು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಘೋಷಣೆ ಮಾಡಿದರು. ಅಲ್ಲದೇ ಸೂಕ್ತ ಅನುದಾನವನ್ನೂ ಒದಗಿಸಿದ್ದಾರೆ. ಹಾಗೆಯೇ ಭಾರತ್‌ ಗೌರವ್‌ ಯೋಜನೆ ಪ್ರಾರಂಭಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೊಗಳಿದರು. ಇದನ್ನೂ ಓದಿ: ಮೂರು ತಿಂಗಳ ಮೊದಲೇ KRS ಡ್ಯಾಂ ಸಂಪೂರ್ಣ ಭರ್ತಿ

    ಏಪ್ರಿಲ್‌ 1, 2022 ರಿಂದ ಜುಲೈ 20, 2022 ರ ವರೆಗೆ ಕಾಶಿ ಯಾತ್ರೆಯನ್ನು ಕೈಗೊಂಡಿರುವ ಜನರು ಆಫ್‌ಲೈನ್‌ ಅರ್ಜಿಗಳನ್ನು ಮುಜರಾಯಿ ಆಯುಕ್ತರ ಕಚೇರಿಗೆ ಸಲ್ಲಿಸುವ ಮೂಲಕ ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಇದುವರೆಗೂ 500 ಕ್ಕೂ ಹೆಚ್ಚು ಆಫ್‌ಲೈನ್‌ ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ಮುಂದೆ ಕಾಶಿ ಯಾತ್ರೆಯನ್ನು ಕೈಗೊಂಡು ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳು ಸರ್ಕಾರದ ಮಾರ್ಗಸೂಚಿಯ ಅನ್ವಯ ಸಂಬಂಧಿಸಿದ ದಾಖಲಾತಿಗಳನ್ನು ಇಲಾಖೆಯ ವೆಬ್‌ಸೈಟ್‌ https://itms.kar.nic.in/ ಮತ್ತು ಸೇವಾ ಸಿಂಧು ಮೂಲಕ ವೆಬ್‌ ಪೊರ್ಟ್‌ಲ್‌ನಲ್ಲಿ (https://sevasindhu.karnataka.gov.in/) ಅಪ್‌ಲೋಡ್‌ ಮಾಡಬೇಕು. ಈ ರೀತಿಯಾಗಿ ಅಪ್‌ಲೋಡ್‌ ಮಾಡಲಾದ ದಾಖಲೆಗಳನ್ನು ಪರಿಶೀಲಿಸಿ ಅರ್ಜಿದಾರರ ಆಧಾರ್‌ ಲಿಂಕ್‌ ಹೊಂದಿರತಕ್ಕಂತಹ ಬ್ಯಾಂಕ್‌ ಖಾತೆಗೆ 5,000 ರೂ. ಸಹಾಯಧನವನ್ನು ನೇರವಾಗಿ ಡಿಬಿಟಿ ಮೂಲಕ ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕಾಶಿಯಾತ್ರೆಗೆ ತೆರಳಿದ್ದ 10 ಜನ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಉಮಾಶಂಕರ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಮುಜರಾಯಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಶಿ ಯಾತ್ರೆಗೆ ಅಂತಿಮ ಮಾರ್ಗಸೂಚಿ ಪ್ರಕಟ – 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ

    ಕಾಶಿ ಯಾತ್ರೆಗೆ ಅಂತಿಮ ಮಾರ್ಗಸೂಚಿ ಪ್ರಕಟ – 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ

    – ಏಪ್ರಿಲ್‌ 1 ರಿಂದ ಪೂರ್ವಾನ್ವಯವಾಗುವಂತೆ ಘೋಷಣೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಯವರ ಕನಸಿನ ಯೋಜನೆ ಕಾಶಿ ಕಾರೀಡಾರ್‌ ಗೆ ರಾಜ್ಯದ ಜನರು ಭೇಟಿ ನೀಡುವುದನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ʼಕಾಶಿ ಯಾತ್ರೆʼಗೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ ಸರ್ಕಾರದಿಂದ ಅಂತಿಮ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.

    ಇಂದು ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಭವ್ಯ ಕಾಶಿ – ದಿವ್ಯ ಕಾಶಿಯ ಭವ್ಯತೆಯನ್ನ ಪ್ರಧಾನಿ ನರೇಂದ್ರ ಮೋದಿಯವರ ಮುತುವರ್ಜಿಯಿಂದ ಅಭಿವೃದ್ದಿಗೊಳಿಸಲಾಗಿದೆ. ಈ ಭವ್ಯ ಕಾಶಿಯ ಯಾತ್ರೆ ಬಹಳಷ್ಟು ಜನರ ಜೀವನದ ಅಭಿಲಾಷೆಯಾಗಿರುತ್ತದೆ. ಈ ಯಾತ್ರೆಯ ಅಭಿಲಾಷೆಯನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಯೋಜನೆಯನ್ನು ಪ್ರಾರಂಭಿಸಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಆಯವ್ಯಯದಲ್ಲಿ ಘೋಷಣೆ ಮಾಡಿದ್ದರು.

    ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿಗಳಂತೆ ಸಹಾಯಧನ ನೀಡುವ ಯೋಜನೆಗೆ ಮಾರ್ಗಸೂಚಿಗಳನ್ನು ಇಂದು ಅಂತಿಮಗೊಳಿಸಿದ್ದು, ಸರಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಏಪ್ರಿಲ್‌ 1, 2022 ಕ್ಕೆ ಪೂರ್ವಾನ್ವಯವಾಗುವಂತೆ ಈ ಆದೇಶವನ್ನು ಹೊರಡಿಸಲಾಗಿದ್ದು, ಸೂಕ್ತ ದಾಖಲಾತಿಗಳೊಂದಿಗೆ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಚಿವರು ಹೇಳಿದ್ದಾರೆ.

    ಮಾರ್ಗಸೂಚಿಯ ಅಂಶಗಳು:
    1. ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಅರ್ಹ ಯಾತ್ರಾರ್ಥಿಗಳಿಗೆ ತಲಾ ರೂ 5,೦೦೦/-ಗಳನ್ನು ಸಹಾಯ ಧನವಾಗಿ ನೀಡಲಾಗುವುದು.
    2. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ ಕೆಳಕಂಡ ಯಾವುದಾದರೂ ಒಂದು ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸತಕ್ಕದ್ದು.

    • ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೀಡಿರುವ “ಗುರುತಿನ ಚೀಟಿ’ ಅಥವಾ
    • ಆಧಾರ್‌ ಗುರುತಿನ ಚೀಟಿ ಅಥವಾ
    • ರೇಷನ್ ಕಾರ್ಡ್

    3. ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್‌ 1 ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು, 18 ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸುವುದು. ಇದನ್ನೂ ಓದಿ: ಜಿ7 ಶೃಂಗಸಭೆ – ಮೋದಿ ಬಳಿ ತೆರಳಿ ಬೈಡನ್ ಶೇಕ್ ಹ್ಯಾಂಡ್

    4. ಏಪ್ರಿಲ್‌ 1 ರಿಂದ ಜೂನ್‌ 30ರವರೆಗೆ ಕಾಶಿ ಶ್ರೀ ವಿಶ್ವನಾಥ ಸ್ವಾಮಿಯ ದರ್ಶನಕ್ಕೆ ತೆರಳಿದ ಯಾತ್ರಾರ್ಥಿಗಳು ಸಂಬಂಧಿಸಿದ ದಾಖಲಾತಿ (ಕಾಶಿ ಶ್ರೀ ವಿಶ್ವನಾಥ ಸ್ವಾಮಿ ದೇವಾಲಯಕ್ಕೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಮತ್ತು ಹಿಂದಿರುಗಿದ ಬಗ್ಗೆ ಕಾಯ್ದಿರಿಸಿದ ಟಿಕೆಟ್‌, ಛಾಯಾಚಿತ್ರ ಪೂಜಾ ರಶೀದಿ, ಅಥವಾ ದೇವಾಲಯಕ್ಕೆ ತೆರಳಿ ಮರಳಿದ ಬಗ್ಗೆ ಯಾವುದಾದರೂ ಇತರೆ ದಾಖಲೆ)ಗಳನ್ನು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಇವರ ಕಛೇರಿಗೆ ಸಲ್ಲಿಸತಕ್ಕದ್ದು.

    5. ಜೂನ್‌ 7 ರಿಂದ ಅನ್ವಯವಾಗುವಂತೆ ಯಾತ್ರಾರ್ಥಿಗಳು ಕಾಶಿ ಯಾತ್ರೆ ಕೈಗೊಂಡಿರುವ ಬಗ್ಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಛತ್ರ, ವಾರಣಾಸಿ ಇವರ ಕಛೇರಿಯಿಂದ ಬಯೋಮೆಟ್ರಿಕ್‌ ದೃಢೀಕರಣದೊಂದಿಗೆ, ಆನ್‌ಲೈನ್‌ ಅಥವಾ ಮುದ್ಧಾಂ/ನೊಂದಾಯಿತ ಅಂಚೆ ಮೂಲಕ, ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಕಛೇರಿಗೆ ಸಲ್ಲಿಸತಕ್ಕದ್ದು ಒಂದು ವೇಳೆ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಛತ್ರ, ವಾರಣಾಸಿ ಇವರ ದೃಢೀಕರಣ ಇಲ್ಲದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    6. ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ, ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ.

    7. ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳ ಬ್ಯಾಂಕ್‌ ಖಾತೆಯು ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಾಗಿರಬೇಕು ಮತ್ತು ಕಡ್ಡಾಯವಾಗಿ ಆಧಾರ್ ಲಿಂಕ್‌ ಆಗಿರತಕ್ಕದ್ದು,

    8. ಈ ಸಹಾಯಧನವನ್ನು ಯಾತ್ರೆಯನ್ನು ಪೂರ್ಣಗೊಳಿಸಿ ಸಂಬಂಧಿಸಿದ ದಾಖಲೆಗಳನ್ನು ನಿಗಧಿತ ನಮೂನೆ ಅರ್ಜಿಯನ್ನು ಭರ್ತಿ ಮಾಡಿ ಒದಗಿಸಿದ ನಂತರ ಸದರಿ ಅರ್ಜಿಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಸ್ವೀಕರಿಸಿ, ಪರಿಶಿಲಿಸಿ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದು.

    ಯೋಜನೆಯ ಜೊತೆಯಲ್ಲಿ “ಭಾರತ್‌ ಗೌರವ್‌” ಯೋಜನೆ ಅಡಿಯಲ್ಲಿ ಕಾಶಿ ಯಾತ್ರೆಗೆ ವಿಶೇಷ ರೈಲು 30 ಸಾವಿರ ಜನರಿಗೆ ತಲಾ 5 ಸಾವಿರದಂತೆ ಸಹಾಯಧನ ನೀಡುವ ಯೋಜನೆ ಅಲ್ಲದೆ, ಮತ್ತೊಂದು ವಿಶೇಷ ಯೋಜನೆಯನ್ನು ಮುಜರಾಯಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ.

    ಕೇಂದ್ರ ಸರಕಾರದ “ಭಾರತ ಗೌರವ” ಯೋಜನೆಯ ಅಡಿಯಲ್ಲಿ ಮುಜರಾಯಿ ಇಲಾಖೆಯ ರೈಲ್ವೇ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಾಶಿಗೆ ವಿಶೇಷ ರೈಲಿನ ಕಾರ್ಯಾಚರಣೆ ಸದ್ಯದಲ್ಲೇ ಪ್ರಾರಂಭಿಸಲು ಸಿದ್ದತೆಗಳನ್ನು ಭರದಿಂದ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

    Live Tv