Tag: kashaya

  • ಆರೋಗ್ಯಕರ ಕಷಾಯ ರೆಸಿಪಿ – ನೀವೊಮ್ಮೆ ಮಾಡಿ

    ಆರೋಗ್ಯಕರ ಕಷಾಯ ರೆಸಿಪಿ – ನೀವೊಮ್ಮೆ ಮಾಡಿ

    ದೀಗ ಚಳಿಯ ವಾತಾವರಣ ಹೆಚ್ಚಿರುವ ಕಾಲವಾದ್ದರಿಂದ, ನೆಗಡಿ, ಗಂಟಲುನೋವು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಂದರ್ಭ ನೀವು ಆರೋಗ್ಯ ಹಾಗೂ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕೆಂದರೆ ಉತ್ತಮ ಆಹಾರಾಭ್ಯಸವನ್ನು ಮೈಗೂಡಿಸಿಕೊಳ್ಳುವುದೂ ಅಗತ್ಯ. ನಾವಿಂದು ಚಹಾ ಅಥವಾ ಕಾಫಿ ಬದಲಿಗೆ ಸವಿಯಬಹುದಾದ ಆರೋಗ್ಯಕರ ಕಷಾಯ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೆಗಡಿ ಮಾತ್ರವಲ್ಲದೇ ಜೀರ್ಣಕ್ರಿಯೆ, ಆಮ್ಲೀಯತೆಗೂ ಈ ರೆಸಿಪಿ ಮದ್ದಾಗುತ್ತದೆ. ನೀವು ಕಷಾಯದ ಪುಡಿಯನ್ನು ಮಾಡಿಟ್ಟುಕೊಂಡರೆ ಬೇಕೆನಿಸಿದಾಗ ಹಾಲಿನೊಂದಿಗೆ ಸವಿಯಬಹುದು.

    ಬೇಕಾಗುವ ಪದಾರ್ಥಗಳು:
    ಕಷಾಯ ಪುಡಿ ತಯಾರಿಸಲು:
    ಕೊತ್ತಂಬರಿ ಬೀಜ – 1 ಕಪ್
    ಜೀರಿಗೆ – ಅರ್ಧ ಕಪ್
    ಸೋಂಪು – 3 ಟೀಸ್ಪೂನ್
    ಮೆಂತ್ಯ – 2 ಟೀಸ್ಪೂನ್
    ಕರಿ ಮೆಣಸು – 2 ಟೀಸ್ಪೂನ್
    ಲವಂಗ – 10
    ಏಲಕ್ಕಿ – 5
    ಜಾಯಿಕಾಯಿ – 1
    ಅರಿಶಿನ – 2 ಟೀಸ್ಪೂನ್
    ಒಣ ಶುಂಠಿ ಪುಡಿ – 2 ಟೀಸ್ಪೂನ್
    ಕಷಾಯ ಮಾಡಲು:
    ನೀರು – 1 ಕಪ್
    ಹಾಲು – 1 ಕಪ್
    ಕಷಾಯ ಪುಡಿ – 1-2 ಟೀಸ್ಪೂನ್
    ಬೆಲ್ಲ – ಸ್ವಾದಕ್ಕನುಸಾರ

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್ ಅನ್ನು ಬಿಸಿ ಮಾಡಿ, ಅದರಲ್ಲಿ ಕೊತ್ತಂಬರಿ ಬೀಜ, ಜೀರಿಗೆ ಹಾಗೂ ಸೋಂಪು ಹಾಕಿ ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಿಕೊಳ್ಳಿ.
    * ಮಸಾಲೆ ಪದಾರ್ಥಗಳು ಪರಿಮಳ ಹಾಗೂ ಗರಿಗರಿಯಾಗುವವರೆಗೆ ಹುರಿದುಕೊಂಡು ಬಳಿಕ ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ.
    * ಈಗ ಅದೇ ಪ್ಯಾನ್‌ಗೆ ಮೆಂತ್ಯ, ಕರಿಮೆಣಸು, ಲವಂಗ, ಏಲಕ್ಕಿ ಹಾಗೂ ಜಾಯಿಕಾಯಿ ಹಾಕಿ ಹುರಿದುಕೊಳ್ಳಿ.
    * ಈಗ ಹುರಿದ ಎಲ್ಲಾ ಮಸಾಲೆಗಳನ್ನೂ ತಟ್ಟೆಗೆ ವರ್ಗಾಯಿಸಿ, ಅರಶಿನ ಮತ್ತು ಒಣ ಶುಂಠಿ ಪುಡಿ ಸೇರಿಸಿ.
    * ಹುರಿದ ಎಲ್ಲಾ ಮಸಾಲೆ ಪದಾರ್ಥಗಳು ತಣ್ಣಗಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಅವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ (ನೀರು ಹಾಕುವುದು ಬೇಡ).
    * ಇದೀಗ ಕಷಾಯ ಪುಡಿ ತಯಾರಾಗಿದ್ದು, ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ. ನೀವು ಬೇಕೆಂದಾಗ ಇದನ್ನು ಬಳಸಬಹುದು.
    * ಇದೀಗ ಕಷಾಯ ತಯಾರಿಸಲು ಒಂದು ಸಣ್ಣ ಪಾತ್ರೆ ತೆಗೆದುಕೊಳ್ಳಿ. ಒಂದು ಕಪ್ ನೀರು ಹಾಕಿ, ಬೆಲ್ಲ ಸೇರಿಸಿ ಕುದಿಸಿಕೊಳ್ಳಿ.
    * ನೀರು ಕುದಿ ಬರಲು ಪ್ರಾರಂಭವಾದಾಗ ಕಷಾಯ ಪುಡಿಯನ್ನು 1-2 ಟೀಸ್ಪೂನ್‌ನಷ್ಟು ಹಾಕಿ. ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಕಷಾಯವನ್ನು ಚೆನ್ನಾಗಿ ಕುದಿಯಲು ಬಿಡಿ.
    * ಬಳಿಕ ಉರಿಯನ್ನು ಆಫ್ ಮಾಡಿ, ಬಿಸಿ ಹಾಲನ್ನು ಕಷಾಯಕ್ಕೆ ಸೇರಿಸಿ. ಹಾಗೂ ಮಿಶ್ರಣ ಮಾಡಿ.
    * ಇದೀಗ ಆರೋಗ್ಯಕರ ಕಷಾಯ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಹೊರ ರಾಜ್ಯದಿಂದ ಬಂದವರಿಗೆ ಕಾರ್ಕಳದಲ್ಲಿ ಪ್ರತಿದಿನ ಕಷಾಯ- ಕೊರೊನಾ ತಡೆಗೆ ಮುನ್ನೆಚ್ಚರಿಕೆ

    ಹೊರ ರಾಜ್ಯದಿಂದ ಬಂದವರಿಗೆ ಕಾರ್ಕಳದಲ್ಲಿ ಪ್ರತಿದಿನ ಕಷಾಯ- ಕೊರೊನಾ ತಡೆಗೆ ಮುನ್ನೆಚ್ಚರಿಕೆ

    ಉಡುಪಿ: ವಿಶ್ವಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೋವಿಡ್-19ಗೆ ಇನ್ನೂ ಚುಚ್ಚು ಮದ್ದು ಸಿಕ್ಕಿಲ್ಲ. ವಿಶ್ವದ ಎಲ್ಲಾ ದೇಶಗಳು ಕೊರೊನಾ ಚುಚ್ಚು ಮದ್ದನ್ನು ಕಂಡು ಹುಡುಕುವಲ್ಲಿ ಹಗಲು ರಾತ್ರಿ ಶ್ರಮಿಸುತ್ತಿವೆ.

    ಈ ನಡುವೆ ಕೊರೊನಾ ವೈರಸ್ ದೇಹಕ್ಕೆ ಬಾಧಿಸದಂತೆ ಆಯುರ್ವೇದದಲ್ಲಿ ಚಿಕಿತ್ಸೆ ಇದೆ ಎಂದು ಆಯುಷ್ ಇಲಾಖೆ ಹೇಳಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಇದನ್ನು ಪ್ರಯೋಗ ಮಾಡಲಾಗುತ್ತಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ತಾಲೂಕಿನಾದ್ಯಂತ ಕಷಾಯ ವಿತರಣೆ ಆರಂಭಿಸಲಾಗಿದೆ. ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ಜನ ಹೊರ ರಾಜ್ಯದಿಂದ ಬಂದವರು ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಕ್ವಾರಂಟೈನ್ ಆಗಿದ್ದಾರೆ.

    ಶುಂಠಿ, ಅರಿಶಿನ, ಬೆಲ್ಲ, ಏಲಕ್ಕಿ, ನಿಂಬೆ ಹಣ್ಣು ಮುಂತಾದ ದ್ರವ್ಯಗಳನ್ನು ಮಿಶ್ರಣ ಮಾಡಿ ಕಷಾಯ ತಯಾರಿಸಲಾಗುತ್ತದೆ. ಇದಕ್ಕೆ ಕರಾವಳಿಯ ಖಡಕ್ ಕಾಳುಮೆಣಸನ್ನು ಸೇರಿಸಲಾಗುತ್ತಿದೆ. ಈ ಎಲ್ಲ ದ್ರವ್ಯಗಳಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವ ಸಾಮಥ್ರ್ಯ ಇದೆ ಎಂಬುದು ಆಯುಷ್ ಇಲಾಖೆಯ ಅಭಿಪ್ರಾಯ. ಹೀಗಾಗಿ ಇದನ್ನು ಕಾರ್ಕಳದಲ್ಲಿ ಪ್ರಯೋಗಕ್ಕೆ ತರಲಾಗಿದೆ.

    ಮಹಾರಾಷ್ಟ್ರ, ತೆಲಂಗಾಣ ಕೇರಳ, ತಮಿಳುನಾಡು ಸೇರಿದಂತೆ ದೇಶದ ಸುಮಾರು ಏಳೆಂಟು ರಾಜ್ಯಗಳಿಂದ ಉಡುಪಿಗೆ ವಾಪಸ್ ಆಗಿರುವವರಿಗೆ ಈ ಕಷಾಯವನ್ನು ಕೊಡಲಾಗುತ್ತಿದೆ. ಕೊರೊನಾ ಬಾರಿಸಿದವರಿಗೆ ಒಂದು ಕಡೆಯಿಂದ ಚಿಕಿತ್ಸೆ ನಡೆಯುತ್ತಿದ್ದರೆ ಕೊರೊನಾ ಬಾರದಂತೆ ತಡೆಗಟ್ಟುವುದು ಮತ್ತು ಮುನ್ನೆಚ್ಚರಿಕೆ ವಹಿಸುವ ಕೆಲಸ ಇನ್ನೊಂದು ಕಡೆಯಿಂದ ಆಗ್ತಾಯಿದೆ.

    ವೈರಲ್ ಜ್ವರಗಳಿಗೆ ಆಯುರ್ವೇದದಲ್ಲಿ ಮದ್ದು ಇದೆ. ಈ ಹಿಂದೆಯೇ ಸಾಕಷ್ಟು ಬಾರಿ ಸಾಬೀತಾಗಿತ್ತು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಚಾರದಲ್ಲಿ ಆಯುಷ್ ಇಲಾಖೆ ಸಾಕಷ್ಟು ಸಲಹೆಗಳನ್ನು ಸರ್ಕಾರಕ್ಕೆ ಕೊಟ್ಟಿದೆ. ನಾವು ಪ್ರತಿನಿತ್ಯ ಸೇವಿಸುವ ವಸ್ತುಗಳಲ್ಲೇ ಆಯುರ್ವೇದಿಕ್ ಅಂಶಗಳು ಬೆರೆತಿರುತ್ತದೆ. ಆ ಎಲ್ಲ ವಸ್ತುಗಳನ್ನು ಸೇರಿಸಿ ಕಷಾಯ ಮಾಡಿದರೆ ಅದರ ಫಲ ಆ ವ್ಯಕ್ತಿಗಳಿಗೆ ಸಿಕ್ಕೇ ಸಿಗುತ್ತದೆ. ರೋಗ ಬಾರದಂತೆ ತಡೆಗಟ್ಟಿದರೆ ಉತ್ತಮ ಅನ್ನುವ ನಿರ್ಧಾರದಿಂದ ಕಷಾಯ ವಿತರಿಸುವ ಯೋಜನೆಯನ್ನು ರೂಪಿಸಿದ್ದೇವೆ. ಕ್ವಾರಂಟೈನ್ ಅವಧಿಯ ಉದ್ದಕ್ಕೂ ಎಲ್ಲರಿಗೂ ಈ ಕಷಾಯವನ್ನು ಕೊಡುತ್ತೇವೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

    ಕ್ವಾರಂಟೈನ್‍ನಲ್ಲಿ ಇರುವವರಿಗೆ ಪ್ರತಿದಿನ ಕಷಾಯ ಕೊಡುತ್ತೇವೆ. ಇದು ನಿರಂತರ ನಡೆಯಲಿದೆ. ಹೊರ ರಾಜ್ಯದಿಂದ ಬಂದ ಎಲ್ಲರಿಗೂ ನೀಡುವ ಆಲೋಚನೆ ಇದೆ. ಕಷಾಯ ತಯಾರಿಗೆ ತಜ್ಞರನ್ನು, ಬಾಣಸಿಗರನ್ನು ಶಾಸಕ ಸುನೀಲ್ ಕುಮಾರ್ ಕಚೇರಿಯಿಂದ ನೇಮಕ ಮಾಡಲಾಗಿದೆ.