Tag: kasaragodu

  • ಹಳಿ ದಾಟುವಾಗ ಡಿಕ್ಕಿ ಹೊಡೆದ ರೈಲು-ಒಂದೂವರೆ ವರ್ಷದ ಮಗು ಸೇರಿ ಮೂವರ ಸಾವು

    ಹಳಿ ದಾಟುವಾಗ ಡಿಕ್ಕಿ ಹೊಡೆದ ರೈಲು-ಒಂದೂವರೆ ವರ್ಷದ ಮಗು ಸೇರಿ ಮೂವರ ಸಾವು

    ಮಂಗಳೂರು: ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೂರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡು ಬಳಿಯ ಮಂಜೇಶ್ವರದಲ್ಲಿ ನಡೆದಿದೆ.

    ಮಂಜೇಶ್ವರ ರೈಲ್ವೆ ನಿಲ್ದಾಣದ ಬಳಿಯೇ ಘಟನೆ ನಡೆದಿದ್ದು ಇಬ್ಬರು ಮಹಿಳೆಯರು ಸೇರಿದಂತೆ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಮಂಜೇಶ್ವರದಲ್ಲಿ ಮುಖ್ಯ ರಸ್ತೆಯಿಂದ ಇನ್ನೊಂದು ದಾರಿಗೆ ರೈಲ್ವೆ ಹಳಿಯನ್ನು ದಾಟಬೇಕಾದ ಅನಿವಾರ್ಯತೆ ಇರೋದ್ರಿಂದ ಎಂದಿನಂತೆ ಇಂದು ಸ್ಥಳೀಯರು ರೈಲ್ವೇ ಹಳಿ ದಾಟುತ್ತಿದ್ದರು. ಒಂದು ರೈಲು ಪಾಸಾದ ನಂತ್ರ ಹಳಿ ದಾಟುತ್ತಿದ್ದ ವೇಳೆ ಮತ್ತೊಂದು ಹಳಿಯಲ್ಲಿ ವೇಗವಾಗಿ ಬಂದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ್ದ ಮಹಿಳೆಯರು ಗುರುತು ಪತ್ತೆಯಾಗಿಲ್ಲ.

    ಅಪಘಾತದ ತೀವ್ರತೆಗೆ ಮಗು ಸೇರಿದಂತೆ ಮಹಿಳೆಯರಿಬ್ಬರ ದೇಹ ಸಂಪೂರ್ಣ ನಜ್ಜುಗುಜ್ಜಾಗಿದೆ. ರೈಲ್ವೆ ಹಳಿ ದಾಟಲು ಓವರ್ ಬ್ರಿಡ್ಜ್ ಆಗಬೇಕೆಂದು ಸ್ಥಳೀಯರು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜನರ ಬೇಡಿಕೆ ಈಡೇರಿರಲಿಲ್ಲ. ಇದೀಗ ಸರ್ಕಾರದ ನಿರ್ಲಕ್ಷ್ಯದಿಂದ ಒಂದೇ ಕ್ಷಣದಲ್ಲಿ ಮೂರು ಮಂದಿಯ ಪ್ರಾಣ ಪಕ್ಷಿ ಹಾರಿಹೋಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ರೈಲ್ವೇ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ವೆಲಾಂಕಣಿ ಸಮೀಪ ಭೀಕರ ರಸ್ತೆ ಅಪಘಾತ: 1 ವರ್ಷದ ಮಗು ಸೇರಿ 8 ಮಂದಿ ಸಾವು

    ವೆಲಾಂಕಣಿ ಸಮೀಪ ಭೀಕರ ರಸ್ತೆ ಅಪಘಾತ: 1 ವರ್ಷದ ಮಗು ಸೇರಿ 8 ಮಂದಿ ಸಾವು

    ಕಾಸರಗೋಡು: ಕಾಸರಗೋಡಿನಿಂದ ವೆಲಾಂಕಣಿಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಒಂದು ವರ್ಷದ ಮಗು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 5 ಗಂಟೆ ವೇಳೆಗೆ ತಮಿಳುನಾಡಿನ ವೆಲಾಂಕಣಿ ಸಮೀಪದ ಕರೂರು ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಬಂದ್ಯೋಡು ಮಂಡೆಕಾಪುವಿನ ಹೆರಾಲ್ಡ್ ಮೊಂತೆರೋ (50), ಪತ್ನಿ ಪ್ರಸಿಲ್ಲಾ ಮೊಂತೆರೋ (40), ಹೆರಾಲ್ಡ್ ಸಹೋದರ ಕ್ಯಾತರೀನ್ ಮೊಂತೆರೋ (40), ಪತ್ನಿ ಜಸ್ಮ (30), ಇವರ ಒಂದು ವರ್ಷದ ಮಗು ಸಾನ್ವಿ, ಶಾರೋನ್ (5), ಕುಟುಂಬ ಸದಸ್ಯರಾದ ಅಲ್ವಿನ್ ಮೊಂತೆರೋ (29), ಪತ್ನಿ ಪ್ರೀಮಾ ಮೊಂತೆರೋ (22) ಮೃತಪಟ್ಟವರು.

    ವೆಲಾಂಕಣಿಗೆ ಹೋಗಿ ವಾಪಸ್ ಬರುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಕ್ವಾಲಿಸ್ ಕಾರಿಗೆ ಎದುರುಗಡೆಯಿಂದ ಬಂದ ಲಾರಿ ರಭಸದಿಂದ ಡಿಕ್ಕಿಯಾಗಿದೆ. ಇದರ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಿವರ ತಿಳಿದು ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಆಗಮಿಸಿದರೂ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕಾಸರಗೋಡಿಗೆ ರವಾನೆಯಾಗಲಿದೆ.

    ಒಟ್ಟು 11 ಮಂದಿ ಕ್ವಾಲಿಸ್ ನಲ್ಲಿ ವೆಲಾಂಕಣಿಗೆಂದು ತೆರಳಿದ್ದರು. ಮಹಾರಾಷ್ಟ್ರ ಮೂಲದವರಾದ ಹೆರಾಲ್ಡ್ ಹಾಗೂ ಕುಟುಂಬಸ್ಥರು ಕಳೆದ 10 ವರ್ಷಗಳಿಂದ ಮಂಡೆಕಾಪುವಿನಲ್ಲಿ ವಾಸವಾಗಿದ್ದರು.

    https://www.youtube.com/watch?v=deyWnQA0eR4&feature=youtu.be