Tag: kasaragodu

  • 2 ಡೋಸ್ ವ್ಯಾಕ್ಸಿನ್ ಅಥವಾ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಪ್ರವೇಶ!

    2 ಡೋಸ್ ವ್ಯಾಕ್ಸಿನ್ ಅಥವಾ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಪ್ರವೇಶ!

    – ಕೇರಳದ ಕಾಸರಗೋಡು ಜಿಲ್ಲೆಯ ನಗರ ಪ್ರದೇಶಗಳ ಪ್ರವೇಶಕ್ಕೆ ಮಾರ್ಗಸೂಚಿ

    ಕಾಸರಗೋಡು: ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಕರಣಗಳನ್ನು ಕಂಡು ಕೋವಿಡ್ ನಿಯಂತ್ರಣಕ್ಕೆ ಕಾಸರಗೋಡು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹೊಸ ನಿಯಮಾವಳಿಗಳು ಏ.24ರ ಶನಿವಾರದಿಂದ ಆರಂಭಗೊಳ್ಳಲಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೇಳಿದ್ದಾರೆ.

    ನಿಯಮಗಳೇನು?: 14 ದಿನಗಳ ಅವಧಿಯಲ್ಲಿ ಕೋವಿಡ್ ತಪಾಸಣೆ ನಡೆಸಿ ಪಡೆದ ನೆಗೆಟಿವ್ ಸರ್ಟಿಫಿಕೆಟ್ ಅಥವಾ ಎರಡು ಡೋಸ್ ವಾಕ್ಸಿನೇಷನ್ ನಡೆಸಿರುವ ಸರ್ಟಿಫಿಕೆಟ್ ಇರುವವರು ಮಾತ್ರ ಜಿಲ್ಲೆಯ ಪ್ರಧಾನ ಕೇಂದ್ರಗಳಾದ ಕಾಸರಗೋಡು, ಉಪ್ಪಳ, ಕುಂಬಳೆ, ಕಾಞಂಗಾಡು, ನೀಲೇಶ್ವರ, ಚೆರುವತ್ತೂರು ಪೇಟೆಗಳನ್ನು ಪ್ರವೇಶಿಸಬಹುದಾಗಿದೆ ಎಂದು ಸಭೆ ತಿಳಿಸಿದೆ. ಈ ಆದೇಶ ಅನುಷ್ಠಾನವಿರುವ ಪೇಟೆಗಳ ರಸ್ತೆಗಳ ಎರಡೂ ಬದಿಗಳಲ್ಲಿ ಪೊಲೀಸರು ತಪಾಸಣೆ ನಡೆಸುವರು. ಕೋವಿಡ್ ತಪಾಸಣೆ ಮತ್ತು ವಾಕ್ಸಿನೇಷನ್ ಸೌಲಭ್ಯಗಳೂ ಈ ತಪಾಸಣೆ ಕೇಂದ್ರಗಳಲ್ಲಿ ಇರುವುವು. ಈ ಕಟ್ಟುನಿಟ್ಟಿನ ಪ್ರದೇಶಗಳಲ್ಲಿ ತಲಾ ಒಬ್ಬ ಕಾರ್ಯಕಾರಿ ಮೆಜಿಸ್ಟ್ರೇಟ್ ಅವರನ್ನು ನೇಮಿಸಲಾಗುವುದು.

    ಕಾಸರಗೋಡು ಜಿಲ್ಲಾ ವಿಪತ್ತು ನಿವಾರಣೆ ಪ್ರಾಧಿಕಾರದ ಸಭೆಯಲ್ಲಿ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.

    ಇಂದಿನಿಂದಲೇ ಈ ಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ತಕ್ಷಣ ಜಾರಿಗೊಳಿಸಿದಲ್ಲಿ ಸಾರ್ವಜನಿಕರಿಗೆ ಸಂಭವಿಸಬಹುದಾದ ಸಂಕಷ್ಟ ಮನಗಂಡು ಮುಂದಿನ ಶನಿವಾರದಿಂದ ಈ ನಿಯಮ ಕಟ್ಟುನಿಟ್ಟು ಜಾರಿಗೊಳಿಸಲು ಇಂದು ನಡೆದ ಜಿಲ್ಲಾ ವಿಪತ್ತು ನಿವಾರಣೆ ಪ್ರಾಧಿಕಾರದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

  • ಇಯರ್ ಫೋನ್ ವೈರ್ ಬಿಗಿದು ನವಜಾತ ಶಿಶುವಿನ ಕೊಂದ ತಾಯಿ!

    ಇಯರ್ ಫೋನ್ ವೈರ್ ಬಿಗಿದು ನವಜಾತ ಶಿಶುವಿನ ಕೊಂದ ತಾಯಿ!

    – ಮೊದಲ ಮಗುವಾದ ಕೂಡ್ಲೆ ಗರ್ಭಿಣಿಯಾಗಿದ್ದರಿಂದ ಕೊಲೆ

    ಮಂಗಳೂರು: ಪಾಪಿ ತಾಯಿಯೊಬ್ಬಳು ನವಜಾತ ಶಿಶುವನ್ನು ಇಯರ್ ಫೋನ್ ವೈರ್‍ನಿಂದ ಬಿಗಿದು ಕೊಲೆಗೈದ ಘಟನೆ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದಿದೆ.

    ಪಾಪಿ ತಾಯಿಯನ್ನು ಶಾಹಿನಾ ಎಂದು ಗುರುತಿಸಲಾಗಿದ್ದು, ಈಕೆ ಚೆದಕ್ಕೋಲ್ ನಿವಾಸಿ. ಘಟನೆಗೆ ಸಂಬಂಧಿಸಿದಂತೆ ಸದ್ಯ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

    2020ರ ಡಿಸೆಂಬರ್ 15ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ಶಾಹಿನಾಗೆ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದೌಡಾಯಿಸಿದ್ದಳು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು, ಕೆಲ ಗಂಟೆಗಳ ಹಿಂದೆ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಹಿನಾ ಕುಟುಂಬಸ್ಥರು ಮನೆಯಲ್ಲಿ ಹುಡುಕಾಡಿದಾಗ ಮಗುವಿನ ಮೃತದೇಹ ಸಿಕ್ಕಿದೆ. ಮಂಚದ ಕೆಳಗೆ ಬಟ್ಟೆಯಿಂದ ಸುತ್ತಿದ್ದ ರೀತಿಯಲ್ಲಿ ಮಗುವಿನ ದೇಹ ಪತ್ತೆಯಾಗಿದೆ.

    ಈ ಸಂಬಂಧ ಆರೋಪಿ ಶಾಹಿನಾಳನ್ನು ತನಿಖೆ ನಡೆಸಿದಾಗ ಆಕೆ, ತಾನು ಮಗುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮೊದಲ ಮಗುವಾದ ಕೂಡಲೇ ಮತ್ತೆ ಗರ್ಭಿಣಿಯಾಗಿದ್ದರಿಂದ ಬೇರಸಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಈಕೆ ಗರ್ಭಿಣಿಯಾಗಿರುವುದು ಆಕೆಯ ಪತಿ ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 15ರಂದು ಮಗು ಹುಟ್ಟಿದ ಕೂಡಲೇ ಅದನ್ನು ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.

    ಇತ್ತ ಮಗುವಿನ ಮೃತದೇಹವನ್ನು ಕಣ್ಣೂರಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ವರದಿಯಲ್ಲಿ ಮಗುವನ್ನು ದಪ್ಪವಾದ ಕೇಬಲ್ ನಿಂದ ಬಿಗಿದು ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ತಾಯಿಯನ್ನು ವಿಚಾರಣೆ ನಡೆಸಿದಾಗ ಆಕೆ ಮೊಬೈಲ್ ಇಯರ್ ಫೋನ್ ವೈರ್ ಬಳಸಿ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ.

  • ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ – ಅ.9ರವರೆಗೆ ಕಾಸರಗೋಡಿನಲ್ಲಿ ನಿಷೇಧಾಜ್ಞೆ ಜಾರಿ

    ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ – ಅ.9ರವರೆಗೆ ಕಾಸರಗೋಡಿನಲ್ಲಿ ನಿಷೇಧಾಜ್ಞೆ ಜಾರಿ

    ಕಾಸರಗೋಡು: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿಸಿ ಡಾ.ಡಿ ಸಜಿತ್ ಬಾಬು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಅ.2 ರಾತ್ರಿ 12 ಗಂಟೆಯಿಂದ ಅ.9ರಂದು ರಾತ್ರಿ 12 ಗಂಟೆವರೆಗೆ 1973ರ ಕ್ರಿಮಿನಲ್ ಕಾಯಿದೆ 144 ಪ್ರಕಾರದ ನಿಷೇಧಾಜ್ಞೆ ಜಾರಿಯಲ್ಲಿರುವುದು. ಹೀಗಾಗಿ ಜಿಲ್ಲೆಯ ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಬೂನು/ ಸಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿ, ಮಾಸ್ಕ್ ಸೂಕ್ತ ರೀತಿ ಬಳಸಿ, ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿಕೊಳ್ಳುವ ಮೂಲಕ ಸಹಕರಿಸುವಂತೆ ಹೇಳಿದರು.

    ವಿವಾಹ ಸಂಬಂಧ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ, ಮರಣ, ಉತ್ತರ ಕ್ರಿಯೆ ಸಹಿತ ಸಮಾರಂಭಗಳಲ್ಲಿ ಗರಿಷ್ಠ 20 ಮಂದಿ ಭಾಗವಹಿಸಬಹುದಾಗಿದೆ. ಅಧಿಕೃತ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆ, ರಾಜಕೀಯ ಪಕ್ಷಗಳ ಸಭೆಗಳು, ಸಾಂಸ್ಕೃತಿಕ-ಸಾಮಾಜಿಕ ಸಾರ್ವಜನಿಕ ಸಮಾರಂಭಗಳು ಇತ್ಯಾದಿ ಕಡೆ 20 ಮಂದಿ ಭಾಗವಹಿಸಲು ಮಾತ್ರ ಅನುಮತಿ ನೀಡಲಾಗುವುದು.

    ಸಾರ್ವಜನಿಕ ಉತ್ಸವಗಳು, ಬಸ್ ನಿಲ್ದಾಣ, ಸಾರ್ವಜನಿಕ ಸಂಚಾರ ವ್ಯವಸ್ಥೆ, ಕಚೇರಿಗಳು, ನೌಕರಿ ಕೇಂದ್ರಗಳು, ಅಂಗಡಿಗಳು, ಇನ್ನಿತರ ವಾಣಿಜ್ಯ-ವ್ಯಾಪಾರ ಸಂಸ್ಥೇಗಳು, ಉದ್ದಿಮೆ ಕೇಂದ್ರಗಳು, ಆಸ್ಪತ್ರೆಗಳು, ಆರೋಗ್ಯ ಕ್ಲಬ್ ಗಳು, ಕ್ರೀಡಾ ತರಬೇತಿ ಕೇಂದ್ರಗಳು, ಪರೀಕ್ಷೆ, ರಿಕ್ರೂಟ್ ಮೆಂಟ್ ವ್ಯವಸ್ಥೇಗಳು ಇತ್ಯಾದಿ ಕಡ್ಡಾಯವಾಗಿ ಕೋವಿಡ್ ಪ್ರತಿರೋಧ ಅಂಗವಾಗಿ ಬ್ರೇಕ್ ದಿ ಚೈನ್ ಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು.

    ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ, ಪರಪ್ಪ, ಒಡಯಂಚಾಲ್, ಪನತ್ತಡಿ ಪೇಟೆ ವ್ಯಾಪ್ತಿಗಳಲ್ಲೂ 5 ಮಂದಿಗಿಂತ ಅಧಿಕ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರ ಆದೇಶದಲ್ಲಿ ತಿಳಿಸಲಾಗಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಆದೇಶದ ಜಾರಿಯ ಖಚಿತತೆ ನಡೆಸಬೇಕು. ಜನ ಸೇರುವ ಸಾರ್ವಜನಿಕ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣ, ಬಸ್ ಗಾಗಿ ಕಾದು ನಿಲ್ಲುವ ತಾಣಗಳು ಸಹಿತ ಕೇಂದ್ರಗಳಲ್ಲಿ ದಿನಕ್ಕೆ ಕನಿಷ್ಠ ಒಂದು ಬಾರಿ ರೋಗಾಣುಮುಕ್ತ ಚಟುವಟಿಕೆ ನಡೆಸುವಂತೆ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಆದೇಶ ನೀಡಲಾಗಿದೆ.

  • ಕಾಸರಗೋಡಿನಲ್ಲಿ 8 ಸಾವಿರ ದಾಟಿದ ಸೋಂಕಿತರ ಸಂಖ್ಯೆ

    ಕಾಸರಗೋಡಿನಲ್ಲಿ 8 ಸಾವಿರ ದಾಟಿದ ಸೋಂಕಿತರ ಸಂಖ್ಯೆ

    – ಇಂದು 145 ಮಂದಿಗೆ ಕೊರೊನಾ ದೃಢ

    ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 145 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ. 130 ಮಂದಿಗೆ ಸಂಪರ್ಕ ಮೂಲಕ ರೋಗ ತಗಲಿದೆ. ವಿದೇಶದಿಂದ ಆಗಮಿಸಿದ್ದ 10 ಮಂದಿ, ಇತರ ರಾಜ್ಯಗಳಿಂದ ಆಗಮಿಸಿದ್ದ 5 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಂದು 121 ಮಂದಿ ಕೋವಿಡ್ ರೋಗದಿಂದ ಮುಕ್ತರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್ ತಿಳಿಸಿದ್ದಾರೆ.

    ಸ್ಥಳೀಯಾಡಳಿತ ಮಟ್ಟದ ಅಂಕಿ ಅಂಶದಂತೆ ಮಂಗಲ್ಪಾಡಿ- 17, ಮಂಜೇಶ್ವರ- 11, ಮುಳಿಯಾರ್- 10, ಕಾಞಂಗಾಡ್- 9, ಕಾಸರಗೋಡು- 9, ಮೀಂಜ- 8, ಅಜಾನೂರ್- 7,ಪಳ್ಳಿಕ್ಕರ- 7, ತ್ರಿಕ್ಕರಿಪುರ್ – 7, ಮಡಿಕೈ- 6, ಪುಲ್ಲೂರ್ ಪೆರಿಯಾ -6, ಚೆರುವತ್ತೂರ್- 5, ಚೆಂಗಳ – 5, ಪಿಲಿಕೋಡ್- 4, ಪೈವಳಿಕೆ- 4, ಕೋಡೋಂ-ಬೇಳೂರು- 4, ಕಯ್ಯೂರ್ ಚೀಮೆನಿ- 4, ಕುಂಬಳೆ- 3, ಎಣ್ಮಕಜೆ- 2, ಬದಿಯಡ್ಕ- 2, ಮೊಗ್ರಾಲ್ ಪುತ್ತೂರು- 2, ಈಸ್ಟ್ ಏಳೇರಿ- 2, ಪಡನ್ನ -2, ಮಧೂರು- 2, ನೀಲೇಶ್ವರಂ- 2, ಪುತ್ತಿಗೆ- 1, ಚೆಮ್ಮನಾಡ್- 1, ವಲಿಯಪರಂಬ- 1, ಕಳ್ಳಾರ್- 1, ಕಿನಾನೂರ್ ಕರಿಂತಳಂ -1 ಮಂದಿಯಲ್ಲಿ ಕೊರೊನಾ ಅಂಟಿಕೊಂಡಿದೆ.

    ಕಾಸರಗೋಡು- 8, ಕೋಡೋಂ-ಬೇಳೂರ್- 7, ಮಧೂರು- 6, ಕಾಞಂಗಾಡ್- 6, ಉದುಮ- 5, ಮಂಜೇಶ್ವರ- 5, ತ್ರಿಕ್ಕರಿಪುರ್- 4, ಕುಂಬಳೆ- 4, ಪಡನ್ನ- 3, ಮೊಗ್ರಾಲ್ ಪುತ್ತೂರು- 3, ಕುತ್ತಿಕೋಲ್- 2, ಎಣ್ಮಕಜೆ- 2, ಪುತ್ತಿಗೆ- 2, ಪುಲ್ಲೂರ್ ಪೆರಿಯ- 2, ಮಂಗಲ್ಪಾಡಿ- 1, ಚೆರುವತ್ತೂರ್- 1, ವರ್ಕಾಡಿ- 1, ಪಿಲಿಕೋಡ್- 1, ಬೇಡಡ್ಕ- 1, ಮಡಿಕೈ- 1, ಪೈವಳಿಕೆ- 1, ಕಳ್ಳಾರ್- 1, ದೇಲಂಪಾಡಿ- 1 (ಇತರ ಜಿಲ್ಲೆ – ಚಪ್ಪಾರಪದವ್- 1) ಹೀಗೆ ಒಟ್ಟು 121 ಮಂದಿ ಗುಣಮುಖರಾಗಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 4849 ಮಂದಿ ನಿಗಾದಲ್ಲಿದ್ದಾರೆ. 3589 ಮಂದಿ ಮನೆಗಳಲ್ಲಿ ಹಾಗೂ 1260 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. 214 ಮಂದಿ ಹೊಸದಾಗಿ ನಿಗಾ ಪ್ರವೇಶಿಸಿದ್ದಾರೆ. ಶುಕ್ರವಾರ 306 ಮಂದಿ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಸೆಂಟಿನಲ್ ಸರ್ವೈಲೆನ್ಸ್ ಸಹಿತ 1131 ಮಾದರಿಗಳನ್ನು ಹೊಸದಾಗಿ ತಪಾಸಣೆಗೆ ಕಳುಹಿಸಲಾಗಿದೆ. 291 ಮಂದಿಯ ಪರೀಕ್ಷಾ ಫಲಿತಾಂಶ ಲಭಿಸಿಲ್ಲ. ಇಂದು 340 ಮಂದಿಯನ್ನು ಜಿಲ್ಲೆಯ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಿಸಲಾಗಿದೆ. ಆಸ್ಪತ್ರೆ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದ 154 ಮಂದಿಯನ್ನು ಇಂದು ಬಿಡುಗಡೆಗೊಳಿಸಲಾಗಿದೆ.

    ಕಾಸರಗೋಡು ಜಿಲ್ಲೆಯಲ್ಲಿ ಈವರೆಗೆ ಒಟ್ಟು 8005 ಮಂದಿಗೆ ಕೋವಿಡ್ ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.ವಿದೇಶದಿಂದ ಆಗಮಿಸಿದ್ದ 652 ಮಂದಿ, ಇತರ ರಾಜ್ಯಗಳಿಂದ ಆಗಮಿಸಿದ್ದ 480 ಮಂದಿಗೆ ಕೋವಿಡ್ ದೃಢಪಟ್ಟಿದೆ. 6873 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ಜಿಲ್ಲೆಯಲ್ಲಿ ಒಟ್ಟು 5916 ಮಂದಿ ಕೋವಿಡ್ ರೋಗದಿಂದ ಮುಕ್ತರಾಗಿದ್ದಾರೆ. ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿದೆ.

  • ಕಾಸರಗೋಡಿನಲ್ಲಿ ಇಂದು 56 ಮಂದಿಗೆ ಕೊರೊನಾ ಪಾಸಿಟಿವ್

    ಕಾಸರಗೋಡಿನಲ್ಲಿ ಇಂದು 56 ಮಂದಿಗೆ ಕೊರೊನಾ ಪಾಸಿಟಿವ್

    – 135 ಮಂದಿಯ ವರದಿ ನೆಗೆಟಿವ್
    – 5,288 ಮಂದಿ ನಿಗಾದಲ್ಲಿದ್ದಾರೆ

    ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 56 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 52 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇಬ್ಬರು ವಿದೆಶದಿಂದ, ಇಬ್ಬರು ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.

    ಪಾಸಿಟಿವ್ ಆದವರ ಸ್ಥಳೀಯಾಡಳಿತ ಮಟ್ಟದ ಗಣನೆ ಮಾಡಲಾಗಿದೆ. ಕಾಸರಗೋಡು ನಗರಸಭೆ 6, ಮಧೂರು ಪಂಚಾಯತ್ 6, ಮಂಗಲ್ಪಾಡಿ ಪಂಚಾಯತ್ 9, ಬದಿಯಡ್ಕ ಪಂಚಾಯತ್ 2, ಮಂಜೇಶ್ವರ ಪಂಚಾಯತ್ 2, ಪೈವಳಿಕೆ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 1, ಮುಳಿಯಾರು ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 1, ವರ್ಕಾಡಿ ಪಂಚಾಯತ್ 1, ಚೆಂಗಳ ಪಂಚಾಯತ್ 1, ಕಾಞಂಗಾಡ್ ನಗರಸಭೆ 3, ಉದುಮಾ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 6, ಅಜಾನೂರು ಪಂಚಾಯತ್ 5, ಪಡನ್ನ ಪಂಚಾಯತ್ 1, ಪಿಲಿಕೋಡ್ ಪಂಚಾಯತ್ 1, ವಲಿಯ ಪರಂಬ ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 4, ಕೋಡೋಂ-ಬೇಳೂರು ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.

    ಜಿಲ್ಲೆಯಲ್ಲಿ ಇಂದು 135 ಮಂದಿಗೆ ಕೋವಿಡ್ ನೆಗೆಟಿವ್ ಎಂದು ವರದಿ ಬಂದಿದೆ. ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆಯಾಗಿದ್ದು, ಕಾಸರಗೋಡು ನಗರಸಭೆ 17, ಮಧೂರು ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 5, ಚೆಂಗಳ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 1, ಮುಳಿಯಾರು ಪಂಚಾಯತ್ 12, ದೇಲಂಪಾಡಿ 5, ಕುಂಬಳೆ ಪಂಚಾಯತ್ 2, ಕುತ್ತಿಕೋಲು ಪಂಚಾಯತ್ 2, ಕಾಞಂಗಾಡ್ ನಗರಸಭೆ 16, ಅಜಾನೂರು ಪಂಚಾಯತ್ 21, ಪಳ್ಳಿಕ್ಕರೆ ಪಂಚಾಯತ್ 5, ಕಳ್ಳಾರ್ ಪಂಚಾಯತ್ 4, ಪಿಲಿಕೋಡ್ ಪಂಚಾಯತ್ 1, ಉದುಮಾ ಪಂಚಾಯತ್ 4, ಮಡಿಕೈ ಪಂಚಾಯತ್ 4, ನೀಲೇಶ್ವರ ನಗರಸಭೆ 7, ಕಿನಾನೂರು-ಕರಿಂದಲಂ ಪಂಚಾಯತ್ 3, ಕೋಡೋಂ-ಬೇಳೂರು ಪಂಚಾಯತ್ 3, ವಲಿಯಪರಂಬ ಪಂಚಾಯತ್ 1, ವೆಸ್ಟ್ ಏಳೇರಿ ಪಂಚಾಯತ್ 1, ಆಲಕ್ಕೋಡ್ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 6, ಕಯ್ಯೂರು-ಚೀಮೇನಿ ಪಂಚಾಯತ್ 6, ಚೆರುವತ್ತೂರು ಪಂಚಾಯತ್ 3, ಈಸ್ಟ್ ಏಳೇರಿ ಪಂಚಾಯತ್ 2 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.

    ಜಿಲ್ಲೆಯಲ್ಲಿ 5288 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 4052 ಮಂದಿ ಮನೆಗಳಲ್ಲಿ, 1236 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 557 ಮಂದಿ ನಿಗಾ ಪ್ರವೇಶಿಸಿದ್ದಾರೆ. 512 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 243 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 47 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.

    ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,250 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 6,168 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 621 ಮಂದಿ ವಿದೇಶದಿಂದ, 461 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 5,322 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸದ್ರಿ 1,872 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 56 ಆಗಿದೆ.

  • ಮಂಗ್ಳೂರು ಏರ್‌ಪೋರ್ಟಿಗೆ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ

    ಮಂಗ್ಳೂರು ಏರ್‌ಪೋರ್ಟಿಗೆ ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ

    ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಇದೀಗ ಕರಾವಳಿಗೂ ಕಾಲಿಟ್ಟಿದೆ. ದುಬೈನಿಂದ ಮಂಗಳೂರಿಗೆ ಬಂದಿಳಿದ ಕಾಸರಗೋಡು ಮೂಲದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದರಿಂದ ಆತನ ಜೊತೆ ಬಂದಿದ್ದ ಸಹಪ್ರಯಾಣಿಕರು ಆತಂಕಗೊಂಡಿದ್ದಾರೆ.

    ಕಾಸರಗೋಡಿನ ಬದಿಯಡ್ಕದ ನೀರ್ಚಾಲು ನಿವಾಸಿ ಮಾರ್ಚ್ 14ರಂದು ಬೆಳಗ್ಗೆ 5:20ಕ್ಕೆ ಏರ್ ಇಂಡಿಯಾ ಐಎಕ್ಸ್ 814 ವಿಮಾನದಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವ್ಯಕ್ತಿಯ ವರದಿ ಪಾಸಿಟಿವ್ ಎಂಬುದಾಗಿ ಬಂದಿದೆ. ಹೀಗಾಗಿ ಅವರನ್ನು ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    130 ಪ್ರಯಾಣಿಕರಲ್ಲಿ ಆತಂಕ:
    ಕಾಸರಗೋಡು ಮೂಲದ ಕೊರೊನಾ ಶಂಕಿತನ ಪಾಸಿಟಿವ್ ವರದಿ ಹಿನ್ನೆಲೆಯಲ್ಲಿ ಅವರ ಜೊತೆ ಪ್ರಯಾಣಿಸಿದ್ದ ಸಹ ಪ್ರಯಾಣಿಕರು ಆತಂಕಗೊಂಡಿದ್ದಾರೆ. ವಿಮಾನದಲ್ಲಿ ಒಟ್ಟು 130 ಪ್ರಯಾಣಿಕರಿದ್ದರು. ಅದರಲ್ಲಿ 90 ಜನ ಮಂಗಳೂರು ಮೂಲದ ಪ್ರಯಾಣಿಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ವಿಮಾನದಲ್ಲಿ ಬಂದವರಿಗೂ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕಾಸರಗೋಡು ಜಿಲ್ಲಾಡಳಿತ ಅಲರ್ಟ್ ಆಗಿದೆ.

    ಈ ಬಗ್ಗೆ ಮಂಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ವಿಮಾನದಲ್ಲಿದ್ದ ಎಲ್ಲರ ಮಾಹಿತಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪಡೆದುಕೊಳ್ಳುತ್ತಿದ್ದೇವೆ. ಜಿಲ್ಲಾಡಳಿತ ಎಲ್ಲರನ್ನೂ ಸಂಪರ್ಕಿಸಿ ಆರೋಗ್ಯ ತಪಾಸಣೆ ನಡೆಸುತ್ತದೆ ಎಂದು ತಿಳಿಸಿದ್ದಾರೆ.

    ಮಂಗ್ಳೂರಿನಿಂದ ವಿದೇಶಿ ವಿಮಾನಗಳ ಹಾರಾಟ ರದ್ದು:
    ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಮಂಗಳೂರಿನಿಂದ ಕುವೈತ್, ಕತಾರ್, ಸೌದಿ ಅರೇಬಿಯಾಕ್ಕೆ ತೆರಳುವ ವಿಮಾನಗಳನ್ನು ಭಾರತ ಸರ್ಕಾರದ ಸೂಚನೆಯಂತೆ ರದ್ದುಗೊಳಿಸಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,596 ಜನರ ಸ್ಕ್ರೀನಿಂಗ್ ಮಾಡಲಾಗಿದ್ದು ವಿದೇಶದಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.

  • ಕಾಸರಗೋಡು ಸಂತ್ರಸ್ತೆಯನ್ನು ಸಿಎಂಗೆ ಭೇಟಿ ಮಾಡಿಸಿದ ಶೋಭಾ ಕರಂದ್ಲಾಜೆ

    ಕಾಸರಗೋಡು ಸಂತ್ರಸ್ತೆಯನ್ನು ಸಿಎಂಗೆ ಭೇಟಿ ಮಾಡಿಸಿದ ಶೋಭಾ ಕರಂದ್ಲಾಜೆ

    ಬೆಂಗಳೂರು: ಕಾಸರಗೋಡಿನಲ್ಲಿ ನಡೆದಿದೆ ಎನ್ನಲಾದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ. ಸಂತ್ರಸ್ತೆ ಪರ ಸಂಸದೆ ಶೋಭಾ ಕರಂದ್ಲಾಜೆ ಕಾನೂನು ಹೋರಾಟಕ್ಕಿಳಿದಿದ್ದಾರೆ.

    ಸಂತ್ರಸ್ತೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಕೇರಳದ ಯುವಕರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಇಂದು ಮಧ್ಯಾಹ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಂಸದೆ ಶೋಭಾ ಕರಂದ್ಲಾಜೆ ದೂರು ಕೊಟ್ಟಿದ್ದಾರೆ. ಆ ಯುವಕರು ಯುವತಿ ಮೇಲೆ ಅತ್ಯಾಚಾರ ನಡೆಸಿ, ವೀಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗದಿದ್ದರೆ ವೀಡಿಯೋ ಬಹಿರಂಗಪಡಿಸುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ ಎಂದು ಸಂಸದೆ ಆರೋಪಿಸಿದ್ದಾರೆ.

    ಪೊಲೀಸ್ ದೂರು ಕೊಡುವ ಮುನ್ನ ಸಂತ್ರಸ್ತೆಯನ್ನು ಸಂಸದೆಯವರು ಸಿಎಂ ಅವರನ್ನು ಭೇಟಿ ಮಾಡಿಸಿದರು. ಧವಳಗಿರಿ ನಿವಾಸದಲ್ಲಿ ಸಂತ್ರಸ್ತೆಯನ್ನು ಸಿಎಂ ಭೇಟಿ ಮಾಡಿಸಲಾಯ್ತು. ಸಂತ್ರಸ್ತೆಗೆ ನ್ಯಾಯ ಕೊಡಿಸುವ ಭರವಸೆಯನ್ನು ಇದೇ ವೇಳೆ ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ಕಾಸರಗೋಡಿನಲ್ಲಿರುವ ಸಂತ್ರಸ್ತೆ ಕುಟುಂಬಕ್ಕೆ ಭದ್ರತೆ ಕೊಡಿಸುವ ಸಂಬಂಧವೂ ಕೇರಳದ ಗೃಹ ಇಲಾಖೆ ಜೊತೆ ಮಾತುಕತೆ ನಡೆಸುವ ಭರವಸೆ ಕೊಟ್ಟರು ಎಂದು ಹೇಳಲಾಗಿದೆ.

  • 2 ಯುವ ಕಾಂಗ್ರೆಸ್ ಕಾರ್ಯಕರ್ತರ ಬರ್ಬರ ಹತ್ಯೆ!- ಕೃತ್ಯ ಖಂಡಿಸಿ ರಾಹುಲ್ ಗಾಂಧಿ ಟ್ವೀಟ್

    2 ಯುವ ಕಾಂಗ್ರೆಸ್ ಕಾರ್ಯಕರ್ತರ ಬರ್ಬರ ಹತ್ಯೆ!- ಕೃತ್ಯ ಖಂಡಿಸಿ ರಾಹುಲ್ ಗಾಂಧಿ ಟ್ವೀಟ್

    ಕಾಸರಗೋಡು: ಭಾನುವಾರ ರಾತ್ರಿ ವೇಳೆ ದುಷ್ಕರ್ಮಿಗಳು ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕರ್ನಾಟಕ-ಕೇರಳ ಗಡಿಯ ಕಾಸರಗೋಡಿನಲ್ಲಿ ನಡೆದಿದ್ದು, ಈ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

    ಭಾನುವಾರ ರಾತ್ರಿ 8 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಕೃಪೇಶ್ ಹಾಗೂ ಶರತ್ ಲಾಲ್ ಎಂದು ಗುರುತಿಸಲಾಗಿದೆ. ರಾತ್ರಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಇಬ್ಬರು ಕಾರ್ಯಕರ್ತರು ಬೈಕ್ ಮೇಲೆ ಮನೆಗೆ ತೆರೆಳುತ್ತಿದ್ದ ವೇಳೆ ಕಾರಿನಲ್ಲಿ ಬಂದು ದುಷ್ಕರ್ಮಿಗಳು ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

    ಈ ಘಟನೆ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕಾಂಗ್ರೆಸ್ ಸಿಪಿಐ(ಎಂ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಸಿಪಿಐಎಂ ಗೂಂಡಾಗಳನ್ನು ಬಳಸಿಕೊಂಡು ಈ ರೀತಿ ದುಷ್ಕೃತ್ಯ  ನಡೆಸುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಪಿಐಎಂ ಪಕ್ಷದವರೇ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲ ಆರೋಪಿಸಿದ್ದಾರೆ.

    ಯಾವುದೇ ಗಲಾಟೆ ಅಥವಾ ಪ್ರಚೋದನೆ ಇಲ್ಲದಿದ್ದರೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ನಡೆಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲೂ ಭಾಗಿಯಾಗಿರಲಿಲ್ಲ. ಆದರೂ ಈ ರೀತಿ ಅವರನ್ನು ಹತ್ಯೆಗೈದಿದ್ದಾರೆ. ಸರ್ಕಾರ ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ, ಅವರಿಗೆ ಶಿಕ್ಷೆ ವಿಧಿಸಬೇಕೆಂದು ಚೆನ್ನಿತಾಲ ಆಗ್ರಹಿಸಿದ್ದಾರೆ.

    ಈ ಘಟನೆಯನ್ನು ಖಂಡಿಸಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಅವರು, ಹಂತಕರಿಗೆ ಶಿಕ್ಷೆ ಕೊಡಿಸುವವರೆಗೆ ನಮ್ಮ ಪಕ್ಷ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ, ಕಾಸರಗೋಡಿನಲ್ಲಿ ನಮ್ಮ ಯುವ ಕಾಂಗ್ರೆಸ್ ಕುಟುಂಬದ ಇಬ್ಬರು ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ಯುವಕರ ಕುಟುಂಬಗಳಿಗೆ ಕಾಂಗ್ರೆಸ್ ನೈತಿಕ ಬೆಂಬಲ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೆ, ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಖಂಡಿಸಿ ಕಾಂಗ್ರೆಸ್ ಇಂದು ಕೇರಳ ಬಂದ್‍ಗೆ ಕರೆ ಕೊಟ್ಟಿದ್ದು, ವಿವಿಧೆಡೆ ಗಲಾಟೆ ನಡೆಯುತ್ತಿದೆ. ಕೃಪೇಶ್ ಮತ್ತು ಶರತ್‍ಲಾಲ್ ಹತ್ಯೆಗೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿ ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ ಮೆರವಣಿಗೆ ನಡೆಸಿದೆ. ಅಲ್ಲದೆ ಹಂತಕರನ್ನು ಕಾನೂನಿಗೆ ಒಪ್ಪಿಸುವ ತನಕ ಪಕ್ಷ ವಿಶ್ರಾಂತಿ ಪಡೆಯುವುದಿಲ್ಲ ಕಾಂಗ್ರೆಸ್ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!

    ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!

    ಮಂಗಳೂರು: ಶಬರಿಮಲೆ ವಿಚಾರದ ಹಿನ್ನೆಲೆ ಕಾಸರಗೋಡಿನಲ್ಲಿ ಹಿಂಸಾಕೃತ್ಯ ಮುಂದುವರಿದಿದ್ದು, ಗುರುವಾರ ರಾತ್ರಿ ಕಿಡಿಗೇಡಿಗಳು ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡದ ಮಂಜೇಶ್ವರ ಬಳಿಯ ಕುಂಜತ್ತೂರಿನಲ್ಲಿ ನಡೆದಿದೆ.

    ಹಲ್ಲೆಗೊಳಗಾದವರನ್ನು ಕುಂಜತ್ತೂರಿನ ನಿವಾಸಿಗಳಾದ ಸಂತೋಷ್, ಶರತ್, ರಾಜೇಶ್, ನಿತೇಶ್, ಗುಣಪಾಲ್ ಎಂದು ಗುರುತಿಸಲಾಗಿದೆ. ಈ ಹಲ್ಲೆಯಲ್ಲಿ ಇಬ್ಬರು ಗಂಭೀರ ಗಾಯವಾಗಿದ್ದು, ಎಲ್ಲರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಷ್ಟೇ ಅಲ್ಲದೆ ಕಡಂಬಾರು ದೇವಸ್ಥಾನದ ಬಳಿಯಿದ್ದ ಇಬ್ಬರು ಯುವಕರ ಮೇಲೂ ತಲ್ವಾರ್‍ನಿಂದ ಹಲ್ಲೆ ಮಾಡಲಾಗಿದೆ. ಘಟನೆ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಡಿ ನೀಡಿ ಪರಿಶೀಲನೆ ನಡೆಸಿದ್ದು, ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಕಾಸರಗೋಡಿನಲ್ಲಿ ಮುಂದುವರಿದ ಹಿಂಸಾಕೃತ್ಯ ಹಿನ್ನೆಲೆ ಇಂದು ಮಂಜೇಶ್ವರ ತಾಲೂಕಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಹಾಗೆಯೇ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಈ ಸಂಬಂಧ ಹಿಂಸಾಚಾರ ಮುಂದುವರಿದು ಕೋಮುದ್ವೇಷಕ್ಕೆ ತಿರುಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ ವಿಚಾರವಾಗಿ ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಎಲ್ಲೆಡೆ ಈ ವಿಚಾರವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆ, ಹಿಂಸಾಚಾರ, ಕಲ್ಲು ತೂರಾಟ ಹೀಗೆ ಪ್ರತಿಭಟನಾಕಾರರು ಸಿಡಿದೆದ್ದಿದ್ದಾರೆ. ಇದೇ ಬಿಸಿ ಗಡಿಜಿಲ್ಲೆ ಕಾಸರಗೋಡಿಗೂ ತಟ್ಟಿದೆ. ಗುರುವಾರ ಹಲವೆಡೆ ಕಲ್ಲು ತೂರಾಟ ಹಾಗೂ ಗಲಾಟೆಗಳು ಕೂಡ ನಡೆದಿತ್ತು. ಇಂದು ಕೂಡ ಕೇರಳದ ಕಾಸರಗೋಡಿನಲ್ಲಿ ಹಿಂಸಾಕೃತ್ಯ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕನ್ನಡಿಗರ ಮನಗೆದ್ದಿತು ರಿಷಬ್ ಶೆಟ್ಟಿ ಕ್ರಿಯೇಟಿವಿಟಿ!

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕನ್ನಡಿಗರ ಮನಗೆದ್ದಿತು ರಿಷಬ್ ಶೆಟ್ಟಿ ಕ್ರಿಯೇಟಿವಿಟಿ!

    ಬೆಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ನಿಜಕ್ಕೂ ಜಾದೂ ಮಾಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಡೀ ಕರ್ನಾಟಕದ ಎಲ್ಲ ಭಾಗಗಳ ಜನರೂ ಈ ಚಿತ್ರವನ್ನು ಪ್ರೀತಿಯಿಂದ ವೀಕ್ಷಿಸುತ್ತಿದ್ದಾರೆ, ಮೆಚ್ಚಿಕೊಳ್ಳುತ್ತಿದ್ದಾರೆ. ಬಾಯಿಮಾತಲ್ಲೇ ಹರಡಿಕೊಂಡಿದ್ದ ಒಳ್ಳೆ ಮಾತುಗಳೆಲ್ಲವೂ ಈ ಚಿತ್ರದ ಗೆಲುವಾಗಿ ಮಾರ್ಪಾಡಾಗಿದೆ.

    ಒಂದು ಕಥೆಯನ್ನು ಒಂದು ಚೌಕಟ್ಟಿಗೆ ಸಿಗದಂತೆ ಮತ್ತು ಕಥೆಯ ಬಿಂದು ಚದುರದಂತೆ ಕಟ್ಟಿ ಕೊಡುವುದು ತ್ರಾಸದಾಯಕ ಕೆಲಸ. ಆದರೆ ಇದರಲ್ಲಿ ರಿಷಬ್ ಶೆಟ್ಟಿ ಸಂಪೂರ್ಣವಾಗಿ ಗೆದ್ದಿದ್ದಾರೆ. ಆರಂಭದಲ್ಲಿ ಈ ಚಿತ್ರ ಕಲಾತ್ಮಕ ಎಂಬ ಸುದ್ದಿ ಹರಡಿತ್ತು. ಆ ನಂತರದಲ್ಲಿ ಮಕ್ಕಳ ಚಿತ್ರ ಎಂಬ ಸುದ್ದಿಯೂ ಅಲ್ಲಲ್ಲಿ ಹಬ್ಬಿಕೊಂಡಿತ್ತು. ಆದರೆ ರಿಷಬ್ ಮಾತ್ರ ಈ ಚಿತ್ರ ಅದ್ಯಾವುದೂ ಅಲ್ಲ, ಇದು ಪಕ್ಕಾ ಜ್ಯೂನಿಯರ್ ಕಿರಿಕ್ ಪಾರ್ಟಿ ಅಂತ ಸ್ಪಷ್ಟವಾಗಿಯೇ ಹೇಳಿದ್ದರು.

    ಚಿತ್ರ ನೋಡಿದ ಎಲ್ಲರಿಗೂ ಜ್ಯೂನಿಯರ್ ಕಿರಿಕ್ ಪಾರ್ಟಿಗಳ ಕೀಟಲೆ, ಅದರ ಜೊತೆಗೆ ತೆರೆದುಕೊಳ್ಳೋ ಮನ ಮಿಡಿಯುವ ಕಥೆಗಳೆಲ್ಲವೂ ಇಷ್ಟವಾಗಿವೆ. ಇದು ಕಾಸರಗೋಡು ಸೀಮೆಯಲ್ಲಿ ನಡೆಯೋ ಕಥೆಯಾದರೂ ಗುರುತು ಪರಿಚಯವಿಲ್ಲದ ಪ್ರದೇಶಗಳ ಮನಸುಗಳನ್ನೂ ಸೂರೆಗೊಂಡಿದೆ.

    ಮಕ್ಕಳ ಚಿತ್ರದ ಚೌಕಟ್ಟಿಗೂ ಸಿಗದೆ, ಗಡಿನಾಡಿನ ಸಮಸ್ಯೆಗಳ ಪರಿಧಿಯಲ್ಲಿಯೂ ನಿಲ್ಲದೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿರೋ ಈ ಚಿತ್ರ ಪಕ್ಕಾ ಎಂಟರ್ ಟೈನರ್ ಎಂಬುದರಲ್ಲಿ ಎರಡು ಮಾತಿಲ್ಲ. ನೀವು ಈವರೆಗೂ ಈ ಚಿತ್ರವನ್ನು ನೋಡಿಲ್ಲವಾದರೆ ಈ ವೀಕೆಂಡ್ ಅದಕ್ಕಾಗಿ ಮೀಸಲಾಗಲಿ. ಒಂದು ವೇಳೆ ಈ ಚಿತ್ರವನ್ನು ಮಿಸ್ ಮಾಡಿಕೊಂಡರೆ ಒಂದೊಳ್ಳೆ ಚಿತ್ರ ನೋಡೋ ಅವಕಾಶವನ್ನೂ ಕಳೆದುಕೊಂಡಂತಾಗುತ್ತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv