Tag: Kasapa

  • ರಾಜ್ ಕುಮಾರ್ ಗುಣಗಾನ ಮಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ

    ರಾಜ್ ಕುಮಾರ್ ಗುಣಗಾನ ಮಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ

    ಡಾ.ರಾಜ್ ಕುಮಾರ್ (Raj Kumar) ಅವರು ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದರು. ಕನ್ನಡಕ್ಕೊಬ್ಬನೇ ರಾಜ್ ಕುಮಾರ್  ಎನ್ನಿಸಿದ ಅವರು ತಮ್ಮ ಅಭಿನಯ ಮತ್ತು ಬದುಕಿನ ರೀತಿಯಿಂದ ಮಾದರಿ ಎನ್ನಿಸಿ ಕೊಂಡಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು. ಅವರು ಇಂದು  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಡಾ.ರಾಜ್ ಕುಮಾರ್ ಅವರ 95ನೆಯ ಹುಟ್ಟು ಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಂತ್ರಾಲಯ ಮಹತ್ಮೆ’ಯಲ್ಲಿನ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ರಾಯರೇ ಮಾಡಿಸಿದ್ದರು ಎನ್ನುವ ರಾಜ್ ಕುಮಾರ್ ಅವರ ನಂಬಿಕೆಯನ್ನು ಪ್ರಸ್ತಾಪಿಸಿದ ನಾಡೋಜ ಡಾ.ಮಹೇಶ ಜೋಶಿಯವರು ವಿಜ್ಞಾನ ಕೊನೆಗೊಳ್ಳುವಲ್ಲಿ ಅಧ್ಯಾತ್ಮ ಆರಂಭವಾಗುತ್ತದೆ ಎಂದರು. ಸಂತ ಶ್ರೇಷ್ಟರಾದ ಕನಕದಾಸ, ಪುರಂದರ ದಾಸ, ಸರ್ವಜ್ಞ,  ತುಕಾರಂ, ಕಬೀರ ಮೊದಲಾದವರ ಪಾತ್ರಗಳಿಗೆ ಜೀವ ತುಂಬಿದ ಹಾಗೆ ಇಮ್ಮಡಿ ಪುಲಕೇಶಿ, ಮಯೂರ, ಶ್ರೀಕೃಷ್ಣದೇವರಾಯ ಮೊದಲಾದ ಕನ್ನಡ ನಾಡಿನ ವೀರರನ್ನು ಬೆಳ್ಳಿತೆರೆಯ ಮೂಲಕ ಜೀವಂತವಾಗಿಸಿದರು, ರಾಮ, ಕೃಷ್ಣ, ನಾರದ ಮೊದಲಾದ ಪುರಾಣ ಪಾತ್ರಗಳನ್ನೂ ಅಭಿನಯಿಸಿದರು, ಬಾಂಡ್ ನಿಂದ ಭಕ್ತನವರೆಗೆ, ಚಮ್ಮಾರನಿಂದ ಚಕ್ರವರ್ತಿಯವರೆಗೆ ಎಲ್ಲಾ ಮಾದರಿಯ ಪಾತ್ರಗಳನ್ನು ಮಾಡಿ ರಾಜ್ ಕುಮಾರ್ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿ (Mahesh Joshi)  ವಿವರಿಸಿದರು.

    ಐವತ್ತಕ್ಕೂ ಹೆಚ್ಚು ಸಂದರ್ಭಗಳಲ್ಲಿ ರಾಜ್ ಕುಮಾರ್ ಅವರ  ಒಡನಾಟ ತಮಗೆ ದೊರಕಿದ್ದನ್ನ ಸ್ಮರಿಸಿ ಕೊಂಡ ಅವರು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ  ಸ್ವೀಕಾರ ಸಂದರ್ಭದಲ್ಲಿ ನಾಲ್ಕು ದಿನ ದೊರಕಿದ ನಿಕಟ ಒಡನಾಟದ ಅನುಭವವನ್ನು ನೆನಪು ಮಾಡಿ ಕೊಂಡು ರಾಜ್ ಕುಮಾರ್ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇತ್ತು. ಹಠ ಯೋಗವನ್ನೂ ಅವರು ಸಾಧಿಸಿದ್ದರು. ಅವರ ಯೋಗ ಗುರುಗಳಾದ ನಾಯ್ಕರ್ ಅವರ ಗುರುಗಳ ಮೇಲೆ ಶಿಶುನಾಳ ಶರೀಫರ ಪ್ರಭಾವವಿತ್ತು ಎಂದು ನಾಡೋಜ ಡಾ.ಮಹೇಶ ಜೋಶಿಯವರು ನೆನಪು ಮಾಡಿಕೊಂಡರು.

    ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ಸರಳತೆಯನ್ನು ಮೌಲ್ಯವಾಗಿ ಮಾಡಿದ ರಾಜ್ ಕುಮಾರ್ ಚಲನಚಿತ್ರಕ್ಕೆ ಸೀಮಿತವಾಗದೆ ನಮ್ಮ ಕಾಲದ ಸಾಂಸ್ಕೃತಿಕ ರೂಪಕವಾಗಿ ಬೆಳೆದಿದ್ದು ದೊಡ್ಡ ಕೌತಕವೇ ಸರಿ, ಎಲ್ಲಾ ತಲೆಮಾರಿನವರೂ ತಮ್ಮ ಪಾಲಿನ ಆದರ್ಶವನ್ನು ರಾಜ್ ಕುಮಾರ್ ಎನ್ನುವ ಕನ್ನಡಿಯಲ್ಲಿ ಕಂಡರು. ಅವರ ಶೈಲಿಯಲ್ಲಿ ‘ಅಮ್ಮ’ ಎಂದು ಕರೆಸಿ ಕೊಳ್ಳಲು ಎಷ್ಟೋ ಮಹಿಳೆಯರು ಇಂದಿಗೂ ಹಂಬಲಿಸುತ್ತಾರೆ. ಅಣ್ಣ-ತಮ್ಮಂದಿರು ಹೇಗಿರ ಬೇಕು? ಗಂಡ-ಹೆಂಡತಿ ಒಡನಾಟ ಹೇಗಿರ ಬೇಕು? ತಂದೆ-ಮಕ್ಕಳ ಸಂಬಂಧದ ಸ್ವರೂಪ ಯಾವುದೂ ಎಲ್ಲಾ ಪ್ರಶ್ನೆಗಳಿಗೂ  ಅವರ ಚಿತ್ರದಲ್ಲಿ ಉತ್ತರವಿದೆ. ‘ಕನ್ನಡದ ಜನ ನನ್ನನ್ನು ರಾಜನನ್ನಾಗಿ ನೋಡಿದ್ದಾರೆ, ಮಂತ್ರಿ ಸ್ಥಾನ ಏಕೆ ಬೇಕು’ ಎಂದು ರಾಜಕೀಯದಿಂದ ದೂರವಿದ್ದ ರಾಜ್ ಕುಮಾರ್ ತಮ್ಮ ಚಿತ್ರಗಳಲ್ಲಿ ಇಂದಿಗೂ ರಾಜಕಾರಣಿ ಪಾತ್ರವಿರಲಿ ಜಮೀನ್ದಾರ, ಊರ ಗೌಡರ ಪಾತ್ರಗಳನ್ನು ಮಾಡಲಿಲ್ಲ ಮೇಯರ್ ಮುತ್ತಣ್ಣ ಚಿತ್ರದಲ್ಲಿ ಅವರು ಮೇಯರ್ ಆದರೂ ಅದಕ್ಕೆ ಸಂಬಂಧಿಸಿದ ಸನ್ನಿವೇಶಗಳಿಲ್ಲ ಎಂದು ವಿಶ್ಲೇಷಿಸಿದರು. ತಾವೊಮ್ಮೆ ಅವರನ್ನು ‘ನೀವು ನಿರ್ವಹಿಸಲು ಬಯಸಿ ಸಿಕ್ಕದೆ ಹೋದ ಪಾತ್ರ ಯಾವುದು?’ ಎಂದಾಗ ‘ಬಸ್ ಕಂಡೆಕ್ಟರ್’ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡ ಶ್ರೀಧರ ಮೂರ್ತಿ ರಾಜ್ ಕುಮಾರ್ ಎಲ್ಲಾ ವೃತ್ತಿಗಳಿಗೂ ಘನತೆ ತಂದು ಕೊಟ್ಟ ಮಹಾನ್ ಕಲಾವಿದರು ಎಂದು ಹೇಳಿ ಅವರ ಜೊತೆಗಿನ ಒಡನಾಟದ ಅನೇಕ ಘಟನೆಗಳನ್ನು ನೆನಪು ಮಾಡಿಕೊಂಡರು.

    ಕನ್ನಡ ಹೋರಾಟ ಗಾರ ರಾ.ನಂ.ಚಂದ್ರಶೇಖರ್ ಮಾತನಾಡಿ ಗೋಕಾಕ್ ಚಳುವಳಿ ಸಂದರ್ಭದಲ್ಲಿ ಕನ್ನಡಿಗರಿಗೆ ದೊಡ್ಡ ಭರವಸೆಯಾಗಿ ಬಂದವರು ಡಾ.ರಾಜ್ ಕುಮಾರ್, ಅವರು ಯಾವತ್ತೇ ಹೋರಾಟಕ್ಕೆ ಇಳಿದರೂ ಸರ್ಕಾರ ನಡುಗುತ್ತಿತ್ತು ಎಂದು ಹೇಳಿ ಎಂ.ವಿ.ಸೀಯವರ ಅಂತಿಮ ದರ್ಶನ ಪಡೆಯಲು ನಾರು ಮಡಿ ಉಟ್ಟು ಬಂದಿದ್ದ ರಾಜ್ ಕುಮಾರ್ ನಮ್ಮ ನಡುವಿನ ಸಂತ.. ಲೌಕಿಕದಲ್ಲಿ ಇದ್ದೂ ಅವರು ಅಲೌಕಿಕದ ನಡೆಯನ್ನು ಸಾಧಿಸಿದ್ದರು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ,ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಪಟೇಲ್ ಪಾಂಡು, ಹಿರಿಯ ಪತ್ರಕರ್ತ ಪ್ರಶಾಂತ್ ಹೆಬ್ಬಾರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಭಾಗವಹಿಸಿದ್ದರು.

  • ನಾಡೋಜ ಡಾ.ಮಹೇಶ್ ಜೋಶಿ ಕನ್ನಡದ ನಿಷ್ಠಾವಂತ ಸೇವಕ: ಅರವಿಂದರಾವ್ ದೇಶಪಾಂಡೆ

    ನಾಡೋಜ ಡಾ.ಮಹೇಶ್ ಜೋಶಿ ಕನ್ನಡದ ನಿಷ್ಠಾವಂತ ಸೇವಕ: ಅರವಿಂದರಾವ್ ದೇಶಪಾಂಡೆ

    ಚಿಕ್ಕೋಡಿ: ನಾಡೋಜ ಡಾ.ಮಹೇಶ್ ಜೋಶಿ ಅವರು ಕಸಾಪ ರಾಜ್ಯಾಧ್ಯಕ್ಷರಾಗಿರುವುದು ಹರ್ಷ ತಂದಿದೆ. ಅವರು ಕನ್ನಡದ ನಿಷ್ಠಾವಂತ ಸೇವಕ ಎಂದು ಆರ್‍ಎಸ್‍ಎಸ್ ಮುಖಂಡ ಹಾಗೂ ಶಿಕ್ಷಣ ಪ್ರೇಮಿ ಅರವಿಂದರಾವ್ ದೇಶಪಾಂಡೆ ಹೇಳಿದರು.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ದಿನಾಂಕ 21ರಂದು ನಡೆದ ಕಸಾಪ ಚುನಾವಣೆಯಲ್ಲಿ ಜೋಶಿ ಅವರು 69,431 ಮತಗಳನ್ನು ಪಡೆಯುವ ಮೂಲಕ ದಾಖಲೆಯ ಗೆಲುವು ಸಾಧಿಸಿದ್ದಾರೆ. ಕಸಾಪ ನೂತನ ಸಾರಥಿಯಾಗಿ ಜೋಶಿ ಅವರು ಕನ್ನಡಾಂಬೆಯ ಸೇವೆಯನ್ನು ವಿನೂತನ ಮಾದರಿಯಲ್ಲಿ ಮಾಡುತ್ತಾರೆ ಎಂಬ ವಿಶ್ವಾಸದಿಂದ ಕನ್ನಡಿಗರು ಮತ ನೀಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ಧಾರೂಢ ಮಠದಲ್ಲಿ ಪೂಜೆಸಲ್ಲಿಸಲು ಹೋದ ಯುವಕ ಕೆರೆ ಪಾಲು

    ಅದೇ ರೀತಿ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾಗಿ ಮಂಗಲಾ ಮೆಟಗುಡ್ಡ ಅವರು ಮರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರು ಗಡಿಭಾಗದ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸವನ್ನು ಮಾಡಲಿ ಎಂದು ಶುಭ ಹಾರೈಸಿದ ಅವರು ಬಹುಮತ ನೀಡಿ ಆಯ್ಕೆ ಮಾಡಿದ ಮತದಾರರಿಗೆ ಅಭಿನಂದಿಸಿದರು.

    ಅಥಣಿ ತಾಲೂಕಿನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಕನಶೆಟ್ಟಿ ಮಾತನಾಡಿದ್ದು, ನಾಡೋಜ ಡಾ.ಮಹೇಶ್ ಜೋಶಿ ಅವರು ತಮ್ಮ ಪ್ರತಿಸ್ಪರ್ಧಿ ಶೇಖರ್‍ಗೌಡ ಮಾಲಿ ಪಾಟೀಲ್ ಅವರ ವಿರುದ್ಧ 46,236 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹಿಂದಿನ ಅಧ್ಯಕ್ಷರಾದ ಮನು ಬಳಿಗಾರ್ ಅವರ 38 ಸಾವಿರ ಮತಗಳ ದಾಖಲೆಯನ್ನು ಮುರಿದು ಹಾಕಿದ್ದಾರೆ ಎಂದು ತಿಳಿಸಿದರು.

    ಸಮಸ್ತ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಜೋಶಿ ಅವರು ಚುನಾವಣೆಯ ಪೂರ್ವದಲ್ಲಿ ಅನೇಕ ಸುಧಾರಣೆಗಳು ಪ್ರಣಾಳಿಕೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕನ್ನಡಪರ ಕೆಲಸ ಮಾಡುವುದರ ಜೊತೆಗೆ ನಮ್ಮ ಗಡಿಭಾಗದಲ್ಲಿಯೂ ಕೂಡ ಕನ್ನಡ ಅಸ್ಮಿತೆಯನ್ನು ಕಾಪಾಡುವ ಕೆಲಸ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ಯಾರೂ ತಿರುಕನ ಕನಸು ಕಾಣೋದು ಬೇಡ: ಆರ್. ಅಶೋಕ್

    ಈ ವೇಳೆ ಆನಂದ್ ಟೋಣಪಿ, ಅನಿಲ್ ಶಾಸ್ತ್ರಿ, ವೆಂಕಟೇಶ್ ದೇಶಪಾಂಡೆ ಇನ್ನಿತರರು ಉಪಸ್ಥಿತರಿದ್ದರು.

    ಕನ್ನಡ ಸಾಹಿತ್ಯ ಪರಿಷತ್ತಿಗೆ 26ನೇಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡೋಜ ಡಾ.ಮಹೇಶ್ ಜೋಶಿ ಹೆಸರು ಸಮಸ್ತ ಕನ್ನಡಿಗರಿಗೂ ಚಿರಪರಿಚಿತವಾಗಿದೆ. ಸಂತ ಶಿಶುನಾಳ ಶರೀಫರ ಗುರುಗಳಾದ ಗುರು ಗೋವಿಂದ ಭಟ್ಟರ ಮರಿಮೊಮ್ಮಗನಾಗಿರುವ ಜೋಶಿ ಅವರು ದೂರದರ್ಶನ ಚಂದನ ವಾಹಿನಿಯ ಮೂಲಕ ಮಧುರ ಮಧುರವೀ ಮಂಜುಳಗಾನ ಮತ್ತು ಥಟ್ಟಂತ ಹೇಳಿ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದ್ದರು.

  • 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವೆಂಕಟೇಶ ಮೂರ್ತಿ ಆಯ್ಕೆ

    85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವೆಂಕಟೇಶ ಮೂರ್ತಿ ಆಯ್ಕೆ

    ಬೆಂಗಳೂರು: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ, ಅಂಕಣಕಾರ, ವಿಮರ್ಶಕ, ನಾಟಕಕಾರ ಎಚ್.ಎಸ್.ವೆಂಕಟೇಶ ಮೂರ್ತಿ ಆಯ್ಕೆಯಾಗಿದ್ದಾರೆ.

    ಬೆಂಗಳೂರಿನ ಸಾಹಿತ್ಯ ಪರಿಷತ್ ನಲ್ಲಿ ನಡೆದ ಸಭೆಯಲ್ಲಿ ಹೆಚ್.ಎಸ್. ವೆಂಕಟೇಶ ಮೂರ್ತಿ ಹೆಸರು ಅಂತಿಮಗೊಳಿಸಲಾಗಿದೆ. ಕಲಬುರಗಿಯಲ್ಲಿ 2020ರ ಫೆಬ್ರವರಿ 5, 6 ಮತ್ತು 7 ರಂದು 3 ದಿನಗಳ ಕಾಲ ನಡೆಯಲಿದೆ. ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಬಿಸಿಲ ನಾಡಿನಲ್ಲಿ ಕನ್ನಡದ ಕಲರವಕ್ಕೆ ರಂಗು ಬಂದತ್ತಾಗಿದೆ.

    32 ವರುಷಗಳ ನಂತರ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗೆ ಕ್ಯಾಂಪಸ್‍ನಲ್ಲಿ ಸಮ್ಮೇಳನ ನಡೆಸುವ ನಿರ್ಣಯವಾಗಿದ್ದು ಸಿದ್ಧತೆಗಳು ನಡೆಯುತ್ತಿದೆ.

    ಭದ್ರಾವತಿಯಲ್ಲಿ ಡಿಪ್ಲೋಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭಿಸಿದ ವೆಂಕಟೇಶ ಮೂರ್ತಿಯವರು 1966ರಿಂದ 1971ರ ವರೆಗೆ ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದರು. 1971ರಿಂದ 1973ರವರೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಅಧ್ಯಯನ ನಡೆಸಿ 1973ರಿಂದ 2000ದ ವರೆಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ, ಅಲ್ಲೇ ಪ್ರಾಧ್ಯಾಪಕನಾಗಿ ನಿವೃತ್ತಿ ಪಡೆದರು. 2000ದಿಂದ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ.