Tag: Karnool Bus Fire

  • ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ!

    ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ!

    – ನಿಯಮ ಕಡ್ಡಾಯಗೊಳಿಸಲು ಸಚಿವ ರಾಮಲಿಂಗಾರೆಡ್ಡಿ ಸೂಚನೆ

    ಬೆಂಗಳೂರು: ಕರ್ನೂಲ್ ಬಸ್ ದುರಂತದ (Karnool Bus Fire) ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳ ಎಂಡಿಗಳಿಗೆ ಬಸ್‌ಗಳಲ್ಲಿ ಕೆಲ ನಿಯಮಗಳನ್ನ ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.

    ಪ್ರಮುಖವಾಗಿ ಬಸ್‌ಗಳಲ್ಲಿ ಬೆಂಕಿ ಸ್ಪರ್ಶಕ್ಕೆ ಸರಳವಾಗಿ ಉರಿಯುವ ವಸ್ತುಗಳ ಸಾಗಣಿಕೆಗೆ ಬ್ರೇಕ್ ಹಾಕಬೇಕು. ಬಸ್ ಗಳಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನ ತೆಗೆದುಕೊಂಡು ಹೋಗಬಾರದು. ಎಲ್ಲಾ ಎಸಿ ಬಸ್‌ಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ್ದು, ಇದರಿಂದ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಬಳಸಲು ಸಹಾಯವಾಗಲಿದೆ. ಅಲ್ಲದೇ ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ‌ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

    ಜೊತೆಗೆ ಬಸ್ಸುಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸಿ, ಬಸ್ ಗಳಲ್ಲಿ ಯಾವುದೇ ನೂನ್ಯತೆ ಕಂಡುಬಂದರೂ ಕಠಿಣ ಕ್ರಮಕ್ಕೆ ಆದೇಶಕ್ಕೆ ಸೂಚಿಸಿದ್ದಾರೆ.

    ಇದ್ರ ನಡುವೆ ನಿನ್ನೆ ಹಾಗೂ ಇಂದು ರಾಜ್ಯ ಸಾರಿಗೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ರು, ಬೆಂಗಳೂರಿನಿಂದ ಹೋಗುವಂತ ಎಲ್ಲಾ ಬಸ್ಸುಗಳನ್ನ ಪರಿಶೀಲನೆಗೆ ಮುಂದಾಗಿದ್ದಾರೆ. ಮೆಜೆಸ್ಟಿಕ್ ನಲ್ಲಿ ಖಾಸಗಿ ಎಸಿ ಬಸ್ ಗಳ ಪರಿಶೀಲನೆ ನಡೆಸಿ, ಡ್ರೈವರ್ ಲೈಸೆನ್ಸ್, ಬಸ್ ಗಳ ದಾಖಲೆ ಚೆಕ್ ಮಾಡುತ್ತಿದ್ದಾರೆ.

  • Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    – ಮೃತರಿಗೆ ತಲಾ 5 ಲಕ್ಷ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಸಾರಿಗೆ ಸಚಿವ

    ನವದೆಹಲಿ/ಹೈದರಾಬಾದ್: ಆಂಧ್ರದ ಕರ್ನೂಲಿನಲ್ಲಿ (Karnool) ನಡೆದ ಭೀಕರ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಧನ ಘೋಷಿಸಿದೆ.

    ಗುರುವಾರ (ಅ.23) ಮಧ್ಯರಾತ್ರಿ 3ರ ಸುಮಾರಿಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಪಿಎಂ ಕಚೇರಿ (PMO) ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಿಎಂ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ನೀಡುವುದಾಗಿ ತಿಳಿಸಿದೆ.ಇದನ್ನೂ ಓದಿ: Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    ಈ ಕುರಿತು ಆಂಧ್ರಪ್ರದೇಶ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ (Ram Prasad Reddy) ಮಾತನಾಡಿ, ಇದು ಹಳೆಯ ಬಸ್ ಆಗಿದ್ದ ಕಾರಣ ಇದರಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಇರಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ಎಸಿ ಬಸ್ ಆಂಧ್ರದ ಕರ್ನೂಲ್ ಬಳಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾದ ಬಳಿಕವೂ ಡ್ರೈವರ್‌ ಬಸ್ ನಿಲ್ಲಿಸದೇ ಸವಾರನ ಸಮೇತ ಬೈಕ್ ಅನ್ನು ಸುಮಾರು 300 ಮೀಟರ್ ಎಳೆದೊಯ್ದಿದ್ದಾನೆ. ಈ ವೇಳೆ, ಬೈಕ್‌ನಲ್ಲಿದ್ದ ಪೆಟ್ರೋಲ್ ಚೆಲ್ಲಿ ಬಸ್ ಅಡಿ ಬೆಂಕಿ ಹೊತ್ತಿಕೊಂಡಿದೆ. ನಂತರ ಇಡೀ ಬಸ್‌ಗೆ ಬೆಂಕಿ ಹಬ್ಬಿದೆ. ಎಸಿ ಬಸ್ ಆಗಿದ್ದ ಕಾರಣ ಕ್ಷಣಾರ್ಧದಲ್ಲಿ ಇಡೀ ಬಸ್‌ಗೆ ಬೆಂಕಿ ಆವರಿಸಿದೆ.

    ಮುಂಜಾನೆ 3 ಗಂಟೆ ಸುಮಾರಿನಲ್ಲಿ ದುರಂತ ಸಂಭವಿಸಿದ್ದು, ಪ್ರಯಾಣಿಕರು ನಿದ್ದೆಯಲ್ಲಿದ್ದರು. ಹೀಗಾಗಿ, 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಕೂಡ ಸುಟ್ಟಗಾಯಗಳಿಂದಾಗಿ ಒದ್ದಾಡುತ್ತಿದ್ದಾರೆ. ದುರಂತಕ್ಕೆ ತೆಲಂಗಾಣ-ಆಂಧ್ರಪ್ರದೇಶ-ಕರ್ನಾಟಕದ ಮುಖ್ಯಮಂತ್ರಿಗಳು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.ಇದನ್ನೂ ಓದಿ: ಡ್ರೈವರ್‌, ಕಂಡಕ್ಟರ್ ಬೆಂಕಿ ನಂದಿಸ್ತಿದ್ದರು, 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡ್ವಿ – ಪ್ರಾಣಾಪಾಯದಿಂದ ಪಾರಾದ ಆಕಾಶ್ ಮಾತು

  • ಕರ್ನೂಲ್ ಬಸ್ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆಂಧ್ರ ಸರ್ಕಾರಕ್ಕೆ ಹೇಳಿದ್ದೇವೆ: ಡಿಕೆಶಿ

    ಕರ್ನೂಲ್ ಬಸ್ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆಂಧ್ರ ಸರ್ಕಾರಕ್ಕೆ ಹೇಳಿದ್ದೇವೆ: ಡಿಕೆಶಿ

    ಬೆಂಗಳೂರು: ಕರ್ನೂಲ್ ಬಸ್ ದುರಂತದ (Karnool Bus Fire) ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆ ರಾಜ್ಯ ಸರ್ಕಾರಕ್ಕೆ ಹೇಳಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನೂಲ್‌ನಲ್ಲಿ ಸಂಭವಿಸಿರುವ ಬಸ್ ಅಪಘಾತ ದುರಾದೃಷ್ಟಕರ. ಇತ್ತೀಚೆಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಗ್ರೀನ್ ಲೈನ್ ಬಸ್ ಕೂಡ ಇದೇ ರೀತಿ ದುರಂತಕ್ಕೆ ಒಳಗಾಗಿತ್ತು. ಆಗ ನಮ್ಮ ಪಕ್ಷದ ರಾಯಚೂರು ಅಧ್ಯಕ್ಷೆ ಚಾಲಕನನ್ನು ಎಚ್ಚರಿಸಿದ ಪರಿಣಾಮ, ಬಸ್‌ನಲ್ಲಿದ್ದ 20 ಮೆಡಿಕಲ್ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದರು. ಕೆಲವು ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ಆ ರಾಜ್ಯದ ಪೊಲೀಸರು ಅಗತ್ಯ ಕ್ರಮ ಕೈಗೊಂಡಿರಲಿಲ್ಲ. ನಾನು ರಾಯಚೂರಿಗೆ ಹೋದಾಗ ಅಲ್ಲಿ ಕೆಲವರು ನನಗೆ ಅದರ ವಿಡಿಯೋ ತೋರಿಸಿದರು ಎಂದು ಹೇಳಿದರು.ಇದನ್ನೂ ಓದಿ: ಡ್ರೈವರ್‌, ಕಂಡಕ್ಟರ್ ಬೆಂಕಿ ನಂದಿಸ್ತಿದ್ದರು, 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡ್ವಿ – ಪ್ರಾಣಾಪಾಯದಿಂದ ಪಾರಾದ ಆಕಾಶ್ ಮಾತು

    ಈ ದುರಂತ ಬೇರೆ ರಾಜ್ಯದಲ್ಲಿ ಆಗಿದ್ದರೂ ಈ ಬಗ್ಗೆ ಗಮನಹರಿಸುವಂತೆ ಸಾರಿಗೆ ಸಚಿವರು ಹಾಗೂ ಗೃಹ ಸಚಿವರಿಗೆ ಸೂಚಿಸುತ್ತೇವೆ. ಯಾವುದೇ ರಾಜ್ಯದ ಸರ್ಕಾರವಾಗಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೀಗಾಗಿ ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ನಡೆಸಬೇಕಿದೆ. ಇದು ಸಣ್ಣ ಘಟನೆಯಲ್ಲ. ಇಂತಹ ದುರ್ಘಟನೆ ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

    ಇದೇ ವೇಳೆ ತೇಜಸ್ವಿ ಸೂರ್ಯ ಬಗ್ಗೆ ಮಾತನಾಡಿದ ಅವರು, ಎಷ್ಟು ಬಾರಿ ಪ್ರಧಾನಿಯವರನ್ನು ಭೇಟಿ ಮಾಡಿ ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಅನುದಾನ ಕೋರಿದ್ದಾರೆ. ಲೋಕಸಭಾ ಸದಸ್ಯನಾಗಿ ಆತ ಕರ್ನಾಟಕಕ್ಕೆ ಎಷ್ಟು ಅನುದಾನ ತಂದಿದ್ದಾನೆ? ನಿಗದಿತವಾಗಿ ದೊರೆಯುವ ಅನುದಾನ ಬೇರೆಯಾದರೆ ವಿಶೇಷ ಅನುದಾನದ ಬಗ್ಗೆ ನಾನು ಪ್ರಶ್ನೆ ಮಾಡುತ್ತಿದ್ದೇನೆ. ಬೆಂಗಳೂರಿನ ಜನ ಆತನಿಗೆ ಮತ ನೀಡಿದ್ದಾರೆ. ಬೆಂಗಳೂರಿಗೆ ಆತನ ಕೊಡುಗೆ ಏನೆಂದು ಉತ್ತರಿಸಲಿ ಎಂದು ತಿರುಗೇಟು ನೀಡಿದರು.ಇದನ್ನೂ ಓದಿ: ಚಿತ್ತಾಪುರದಲ್ಲಿ RSS ಪಥಸಂಚಲನ ವಿವಾದ – ಅ.28ಕ್ಕೆ ಶಾಂತಿ ಸಭೆ ನಡೆಸಲು ಕೋರ್ಟ್ ಸೂಚನೆ