ಬಳ್ಳಾರಿ: ಡ್ರೈವರ್, ಕಂಡಕ್ಟರ್ ಬೆಂಕಿ ನಂದಿಸುತ್ತಿದ್ದರು, ನಾವು 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡೆವು ಎಂದು ಕರ್ನೂಲ್ ಬಸ್ ಅಪಘಾತದಲ್ಲಿ (Karnool Bus Fire) ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕ ಆಕಾಶ್ ಭಯಾನಕ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಾನು ಗುರುವಾರ (ಅ.23) ರಾತ್ರಿ 10:30ಕ್ಕೆ ಹೈದರಾಬಾದ್‌ನಲ್ಲಿ ಬಸ್ ಹತ್ತಿ, ಬೆಂಗಳೂರಿಗೆ ಹೊರಟಿದ್ದೆವು. ಮಧ್ಯರಾತ್ರಿ 2:35ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ನಾವೆಲ್ಲ ಮಲಗಿಕೊಂಡಿದ್ದೆವು. ಆಗ ಬೈಕ್ ಡಿಕ್ಕಿ ಹೊಡೆದ ಶಬ್ದವೊಂದು ಕೇಳಿಸಿತು. ಆ ಶಬ್ದಕ್ಕೆ ಪಕ್ಕದಲ್ಲಿದ್ದ ಅಂಕಲ್ ಒಬ್ಬರು ನಮ್ಮನ್ನು ಎಬ್ಬಿಸಿದ್ದರು. ಎದ್ದು ನೋಡಿದಾಗ ಬಸ್ಸಿನ ಎಡಗಡೆ ಭಾಗ ಹಾಗೂ ರಸ್ತೆಯ ಮೇಲೆ ಬೆಂಕಿ ಹೊತ್ತಿಕೊಂಡಿತ್ತು. ಡೀಸೆಲ್ ಚೆಲ್ಲಿತ್ತಾ? ಪೆಟ್ರೋಲ್ ಚೆಲ್ಲಿತ್ತಾ? ಗೊತ್ತಿಲ್ಲ. ನಮಗೆ ಹೊರಬರೋಕೆ ಕೇವಲ 5 ಸೆಕೆಂಡ್ ಮಾತ್ರ ಇತ್ತು. ಆ ಸಮಯದಲ್ಲಿ ಡ್ರೈವರ್ ಹಾಗೂ ಕಂಡಕ್ಟರ್ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದರು. ಅವರೇನಾದರೂ ಎಬ್ಬಿಸಿದ್ರೆ ಹೆಚ್ಚಿನ ಜನ ಆಚೆ ಬರಬಹುದಿತ್ತು ಎಂದು ಹೇಳಿದರು.ಇದನ್ನೂ ಓದಿ: Kurnool Bus Fire | ಸೂರ್ಯೋದಯಕ್ಕೂ ಮುನ್ನ ಸಾವಿನ ಮನೆ ಕದ ತಟ್ಟಿದ ಸುಂದರ ಕುಟುಂಬ
ನಮ್ಮನ್ನು ಎಬ್ಬಿಸಿದ ಅಂಕಲ್ ಡ್ರೈವರ್ ಸೀಟಿನ ಪಕ್ಕದ ಕಿಟಿಕಿಯಿಂದ ಆಚೆ ಹೋದರು. ನಾನು ಆ ಕಿಟಕಿಯನ್ನು ಕೈಯಿಂದ ಒಡೆದು, ಕಾಲಿಂದ ಒದ್ದು ಗಾಜು ಬಿಳಿಸಿ ಆಚೆ ಬಂದೆ. ನನ್ನ ಜೊತೆ ಮೂವರು ಆಚೆ ಬಂದರು. ಹೊರಗಡೆ ಬಂದ 5 ರಿಂದ 10 ಸೆಕೆಂಡ್‌ನಲ್ಲಿ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಯಿತು. ಆ ಸಮಯದಲ್ಲಿ ನಾವು ಯಾರಿಗೂ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ. ಇದನ್ನೆಲ್ಲ ನೋಡಿದರೆ ನಮಗೆ ಪುನರ್ಜನ್ಮ ಸಿಕ್ಕಿದಂತಾಗಿದೆ ಎಂದರು.
ಏನಿದು ಅವಘಡ?
ಆಂಧ್ರದ ಕರ್ನೂಲ್ ಬಳಿಯ ಚಿನ್ನಟೇಕೂರು ಬಳಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅವಘಡ ಸಂಭವಸಿದೆ. ದುರಂತದಲ್ಲಿ 23 ಮಂದಿ ಪ್ರಯಾಣಿಕರು ಪಾರಾದರೂ 19 ಮಂದಿ ಜೀವಂತವಾಗಿ ಸುಟ್ಟು ಹೋಗಿದ್ದಾರೆ. ಪ್ರಯಾಣಿಕರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ
ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿದವು. ರಕ್ಷಣಾ ತಂಡಗಳು ಸ್ಥಳಕ್ಕೆ ಬರುವಷ್ಟರಲ್ಲಿ ಬಸ್ಸು ಬಹುತೇಕ ಸುಟ್ಟುಹೋಗಿತ್ತು. ಈಗ ಅಧಿಕಾರಿಗಳು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕೆಲಸ ಆರಂಭಿಸಿದ್ದಾರೆ. ಸ್ಲೀಪರ್ ಕೋಚ್ ಬಸ್ಸು ಆಗಿದ್ದ ಕಾರಣ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು. ಸಾಧಾರಣವಾಗಿ ವೋಲ್ವೋ ಬಸ್ಸಿನಲ್ಲಿ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಲಾಕ್ ಆಗಿರುತ್ತದೆ. ಹೀಗಿದ್ದರೂ ಬೆಂಕಿ ಕಾಣಿಸಿದ ಕೂಡಲೇ ಕೆಲ ಪ್ರಯಾಣಿಕರು ಗಾಜನ್ನು ಒಡೆದು ಕೆಳಗೆ ಹಾರಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್ ಗುದ್ದಿದ್ದಾಗ ಏನಾಯ್ತು?






