Tag: KarnatakaHighcourt

  • ನಿಮಗಿನ್ನೂ ಅವಕಾಶವಿದೆ: ಹಿಜಬ್‌ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿ ಸಿಎಂಗೆ ವಿದ್ಯಾರ್ಥಿನಿ ಮನವಿ

    ನಿಮಗಿನ್ನೂ ಅವಕಾಶವಿದೆ: ಹಿಜಬ್‌ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿ ಸಿಎಂಗೆ ವಿದ್ಯಾರ್ಥಿನಿ ಮನವಿ

    ಬೆಂಗಳೂರು: ಹಿಜಬ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳ ಪೈಕಿ ಅಲಿಯಾ ಅಸ್ಸಾದಿ ಎಂಬ ವಿದ್ಯಾರ್ಥಿನಿ, ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮತ್ತೆ ಮನವಿ ಮಾಡಿದ್ದಾರೆ.

    HIJAB

    ಈ ಕುರಿತು ಟ್ವೀಟ್ ಮಾಡಿರುವ ಅವರು, ಇದೇ ತಿಂಗಳ 22ರಿಂದ ದ್ವಿತೀಯ ಪಿಯು ಪರೀಕ್ಷೆಗಳು ಆರಂಭವಾಗಲಿವೆ. ನಮ್ಮ ಭವಿಷ್ಯ ಹಾಳಾಗದಂತೆ ತಡೆಯಲು ಇನ್ನೂ ನಿಮಗೆ ಅವಕಾಶವಿದೆ. ಹಾಗಾಗಿ ನಮಗೆ ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವ ನಿರ್ಧಾರ ಮಾಡಬೇಕು. ನಾವು ದೇಶದ ಭವಿಷ್ಯ ಎಂದು ಹೇಳಿಕೊಂಡಿದ್ದಾರೆ. ಹಿಜಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪೈಕಿ ಅಲಿಯಾ ಅಸ್ಸಾದಿ ಕೂಡ ಒಬ್ಬರು. ಇತರ ಅರ್ಜಿದಾರರಲ್ಲಿ ಆಯಿಷಾ ಪಾಲವ್ಕರ್, ಆಯಿಷಾ ಹಜಾರಾ ಅಲ್ಮಾಸ್ ಮತ್ತು ಮುಸ್ಕಾನ್ ಜೈನಾಬ್ ಸೇರಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಎಕ್ಸಾಂಗೂ ಸಮವಸ್ತ್ರ ಕಡ್ಡಾಯ – ಹಿಜಬ್‍ಗಿಲ್ಲ ಅವಕಾಶ

    HIJAB

    ಶಾಲೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಪಾಲಿಸಬೇಕೆಂಬ ಕರ್ನಾಟಕ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಷ್ಟೇ ಅಲ್ಲದೇ ಹಿಜಬ್ ಮುಸ್ಲಿಂ ಧರ್ಮದ ಕಡ್ಡಾಯ ಆಚರಣೆ ಭಾಗವಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಆನಂತರ ಸುಪ್ರೀಂಕೋರ್ಟ್ 2 ಬಾರಿ ತುರ್ತು ವಿಚಾರಣೆಯನ್ನು ಮುಂದೂಡಿತು. ವಿದ್ಯಾರ್ಥಿನಿ ಆಯಿಷಾ ಪರ ವಕೀಲ ದೇವದತ್ ಕಾಮತ್ ತುರ್ತು ಅರ್ಜಿ ವಿಚಾರಣೆ ನಡೆಸಬೇಕು. ಶಾಲೆಯಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆ 1 ವರ್ಷ ಹಾಳಾಗುತ್ತದೆ. ಹಾಗಾಗಿ ಶೀಘ್ರ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಾಧೀಶ ರಮಣ ಪೀಠದಲ್ಲಿ ಮನವಿ ಮಾಡಿದ್ದರು. ಇದನ್ನೂಓದಿ: ಹಿಜಬ್‍ಗೂ ಪರೀಕ್ಷೆಗೂ ಸಂಬಂಧವಿಲ್ಲ, ತುರ್ತು ವಿಚಾರಣೆ ನಡೆಸಲ್ಲ: ಸುಪ್ರೀಂ

    ಇದಕ್ಕೆ ಅಸಮಧಾನಗೊಂಡ ಸಿಜೆಐ, ಪ್ರಕರಣಕ್ಕೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಸಮಸ್ಯೆಯನ್ನು ಸೂಕ್ಷ್ಮಗೊಳಿಸಬೇಡಿ ಎಂದು ಹೇಳಿ ಮನವಿಯನ್ನು ತಿರಸ್ಕರಿಸಿ ಮತ್ತೊಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡರು. ಈ ಹಿಂದೆಯೇ ತುರ್ತು ವಿಚಾರಣೆ ಕೈಗೊಳ್ಳುವಂತೆಯೂ ಮನವಿ ಮಾಡಿದಾಗ ಹೋಳಿ ಹಬ್ಬದ ರಜೆಯ ಬಳಿಕ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಈ ನಡುವೆ ವಿದ್ಯಾರ್ಥಿಗಳು ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಅಲಿಯಾ ಅಸ್ಸಾದಿ ಮತ್ತೊಮ್ಮೆ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.