Tag: karnatakabyelections2019

  • ಅಂದಿನ ಸಿಎಂ ಜನ್ರ ಮುಂದೆ ಬಂದು ಕಣ್ಣೀರು ಹಾಕ್ತಿದ್ರು: ಪ್ರಧಾನಿ ಮೋದಿ

    ಅಂದಿನ ಸಿಎಂ ಜನ್ರ ಮುಂದೆ ಬಂದು ಕಣ್ಣೀರು ಹಾಕ್ತಿದ್ರು: ಪ್ರಧಾನಿ ಮೋದಿ

    – ಸಿಎಂ ಬಿಎಸ್‍ವೈಗೆ ಮೋದಿ ವಿಶ್

    ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, 12 ಕ್ಷೇತ್ರಗಳು ಕಮಲದ ಪಾಲಾಗಿದೆ. ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಕರ್ನಾಟಕದಲ್ಲಿ ಬಿಜೆಪಿ ಜಯದ ಕುರಿತು ಜಾರ್ಖಂಡ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಒಂದೂವರೆ ವರ್ಷದ ಆಡಳಿತ ನೋಡಿದ್ದರು. ಹಾಗಾಗಿ ಇಂದು ಜನತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಉತ್ತರ ನೀಡಿದ್ದಾರೆ ಎಂದರು.

    ಕಾಂಗ್ರೆಸ್ ಮತ್ತು ಜೆಡಿಎಸ್ ರಾತ್ರೊರಾತ್ರಿ ಸರ್ಕಾರ ರಚನೆ ಮಾಡಿ ಕುರ್ಚಿಯ ಮೇಲೆ ಕೂತಿದ್ದರು. ಜನಾದೇಶದ ವಿರುದ್ಧ ಕೆಲಸ ಮಾಡಿದವರಿಗೆ ಜನರು ತಮಗೆ ಸಿಕ್ಕ ಮೊದಲ ಅವಕಾಶದಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ತನ್ನ ಹಿತಕ್ಕಾಗಿ ಮುಖ್ಯಮಂತ್ರಿಯಾಗಿ ಒಬ್ಬರನ್ನು ಮಾಡಿ ಒತ್ತಡ ಹಾಕಲು ಆರಂಭಿಸಿತು. ಕಾಂಗ್ರೆಸ್ ಕೈಗೊಂಬೆಯಾಗಿದ್ದ ಅಂದಿನ ಮುಖ್ಯಮಂತ್ರಿಯನ್ನು ಕಿಡ್ನಾಪ್ ಮಾಡಿತ್ತು. ಮುಖ್ಯಮಂತ್ರಿಯನ್ನ ಅಪಹರಿಸಿದ್ದ ಕಾಂಗ್ರೆಸ್, ದೆಹಲಿಗಾಗಿ ಆ ಕೆಲಸ ಮಾಡಿಕೊಡಿ, ಇದು ಮಾಡಬೇಕೆಂದು ಷರತ್ತುಗಳ ಜೊತೆ ಒತ್ತಡ ಹಾಕುತ್ತಿತ್ತು. ಇದೆಲ್ಲದರಿಂದ ನೊಂದ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಜನರ ಮುಂದೆ ಬಂದು ಕಣ್ಣೀರು ಹಾಕುತ್ತಿದ್ದರು ಎಂದು ತಿಳಿಸಿದರು.

    ಈ ಚುನಾವಣೆಯಲ್ಲಿ ಕಾಂಗ್ರೆಸ್ ಇತರರೊಂದಿಗೆ ತೆರೆಮರೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು. ಈ ರೀತಿಯ ಅನೈತಿಕ ಮೈತ್ರಿಗಳು ನಮಗೆ ಬೇಡವೆಂದು ಕರ್ನಾಟಕ ಜನತೆ ಉತ್ತರ ನೀಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಜಾರ್ಖಂಡ್ ನಲ್ಲಿಯೂ ಸುಭದ್ರ ಸರ್ಕಾರಕ್ಕೆ ಕಮಲದ ಗುರುತಿಗೆ ನೀವು ಮತ ನೀಡಬೇಕಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

    ಈ ಮಧ್ಯೆ ಬಿಎಸ್‍ವೈಗೆ ದೂರವಾಣಿ ಕರೆ ಮಾಡಿರುವ ಪ್ರಧಾನಿಯವರು, ಆರ್ ಯೂ ನೌ ಹ್ಯಾಪಿ (ಈಗ ನಿಮಗೆ ಖುಚಿಯಾಯ್ತಾ) ಎಂದು ಕೇಳಿ ಶುಭಾಶಯಗಳು ಎಂದು ತಿಳಿಸಿದ್ದಾರೆ. ಈ ವೇಳೆ ಸಿಎಂ ಕೂಡ, ನೌ ಐ ಆ್ಯಮ್ ಹ್ಯಾಪಿ (ಈಗ ನನಗೆ ಖುಷಿಯಾಯ್ತು) ಎಂದು ಹೇಳಿ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೆಡವಲು ಕಾರಣರಾದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಇದರ ಫಲಿತಾಂಶ ಇಂದು ಹೊರ ಬಿದ್ದಿದ್ದು, 12 ಕಡೆಗಳಲ್ಲಿ ಕಮಲ ಅರಳಿದೆ. ಅದರಲ್ಲಿಯೂ ಜೆಡಿಎಸ್ ಭದ್ರ ಕೋಟೆಯಾಗಿದ್ದ ಮಂಡ್ಯದ ಕೆ ಆರ್ ಪೇಟೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಜಯಗಳಿಸಿರುವುದು ಅಚ್ಚರಿ ಮೂಡಿಸಿದೆ. ಹುಣಸೂರು ಹಾಗೂ ಶಿವಾಜಿನಗರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಜಯಗಳಿಸಿದ್ದಾರೆ.

  • ಉಪಚುನಾವಣೆಯ ನಂತ್ರ ರಾಜ್ಯ ರಾಜಕೀಯ ಬದಲಾಗುತ್ತೆ: ಸಿದ್ದರಾಮಯ್ಯ

    ಉಪಚುನಾವಣೆಯ ನಂತ್ರ ರಾಜ್ಯ ರಾಜಕೀಯ ಬದಲಾಗುತ್ತೆ: ಸಿದ್ದರಾಮಯ್ಯ

    ಹುಬ್ಬಳ್ಳಿ: ಉಪಚುನಾವಣೆ ನಂತರ ರಾಜ್ಯ ರಾಜಕೀಯ ಬದಲಾವಣೆ ಆಗುತ್ತದೆ. ಬಿಜೆಪಿ 8 ಸ್ಥಾನಗಳಲ್ಲಿ ಗೆಲ್ಲದಿದ್ದರೆ ರಾಜೀನಾಮೆ ಕೊಡಲೇಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ 5 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ. ಉಪಚುನಾವಣೆ ನಂತರ ರಾಜ್ಯ ರಾಜಕೀಯ ಬದಲಾವಣೆ ಆಗುತ್ತದೆ ಎಂದರು.

    ಬಿಜೆಪಿ 8 ಸ್ಥಾನಗಳಲ್ಲಿ ಗೆಲ್ಲದಿದ್ದರೆ ರಾಜೀನಾಮೆ ಕೊಡಲೇಬೇಕು. 17 ಜನರಿಗೆ ರಾಜೀನಾಮೆ ಕೊಡಿಸಿ ಕುದುರೆ ವ್ಯಾಪಾರ ಮಾಡಿದ್ದಾರೆ ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡಲ್ಲ ನನಗೆ ನಂಬಿಕೆ ಇದೆ. ಅವರು ಬಿಜೆಪಿ ಬೆಂಬಲಿಸುವುದಿಲ್ಲ. ಬಿಎಸ್‍ವೈ ಡಿಸ್ಟರ್ಬ್ ಆಗಿದ್ದಾರೆ ಅದಕ್ಕೆ ಏನೇನೋ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ರಾತ್ರೋ ರಾತ್ರಿ ರಾಷ್ಟ್ರಪತಿ ಆಡಳಿತ ಹಿಂಪಡೆದಿದ್ದು, ಶಿವಸೇನೆ ಬಿಜೆಪಿಯಿಂದ ಈಗಾಗಲೇ ಹೊರಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನವಾದ್ರೆ ನಾನು ಸಿಎಂ ಆಗುವುದಾಗಿ ಎಲ್ಲಿಯೂ ಹೇಳಿಲ್ಲ. ಬಿಜೆಪಿ ಸರ್ಕಾರ ಪತನವಾದ್ರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರೋ ಸಾಧ್ಯತೆಯಿದೆ. ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ದೊರೆಯಲಿದೆ. ಮುಂದೆ ನಾನು ಸಿಎಂ ಆಗೋ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.

  • ಬಿಜೆಪಿಗಲ್ಲ ನನಗೆ ಮತ ಹಾಕಿ – ಮುಸ್ಲಿಮರಲ್ಲಿ ರಮೇಶ್ ಜಾರಕಿಹೊಳಿ ವಿನಂತಿ

    ಬಿಜೆಪಿಗಲ್ಲ ನನಗೆ ಮತ ಹಾಕಿ – ಮುಸ್ಲಿಮರಲ್ಲಿ ರಮೇಶ್ ಜಾರಕಿಹೊಳಿ ವಿನಂತಿ

    ಬೆಳಗಾವಿ: ಕಾಂಗ್ರೆಸ್ ಪರ ಮತ ಕೇಳಿದ ಬೆನ್ನಲ್ಲೇ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ನೋಡಬೇಡಿ. ನನ್ನ ನೋಡಿ ಮತಹಾಕಿ ಎಂದು ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪ್ರಚಾರದ ವೇಳೆ ಮಮದಾಪುರದ ಜಾಮಿಯಾ ಮಸೀದಿ ಎದುರು ನಿಂತಿದ್ದ ಮುಖಂಡರ ಬಳಿ ಒಳಗೆ ಬರಲೋ ಬೇಡ್ವೋ ಅಂತ ಕೇಳಿ ನಂತರ ನಗುತ್ತಾ ಮಸೀದಿಯೊಳಗೆ ತೆರಳಿದರು. ಆ ಬಳಿಕ ಬಿಜೆಪಿ ನೋಡಬೇಡಿ. ನನ್ನ ನೋಡಿ ಮತಹಾಕಿ ಎಂದು ಮುಸ್ಲಿಮರಲ್ಲಿ ಕೇಳಿಕೊಂಡರು.

    ಡಿಸೆಂಬರ್ 5ಕ್ಕೆ ಗೋಕಾಕ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಇಂದಿನಿಂದ ಪ್ರಚಾಯ ಕಾರ್ಯ ಆರಂಭಿಸಿದರು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಏಕಾಂಗಿಯಾಗಿ ಭರ್ಜರಿ ಪ್ರಚಾರ ಮಾಡುತ್ತಿರುವ ರಮೇಶ್ ಜಾರಕಿಹೊಳಿ, ಪ್ರಚಾರಕ್ಕೂ ಮುನ್ನ ಟೆಂಪಲ್ ರನ್ ಮಾಡಿದರು. ಬಿಜೆಪಿ ಸೇರಿ ಇದೇ ಮೊದಲ ಬಾರಿ ಮಮದಾಪುರಕ್ಕೆ ರಮೇಶ್ ಆಗಮಿಸಿದ್ದರಿಂದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಸಾಹುಕಾರ್ ಅವರಿಗೆ 50 ಮಂದಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪರ ಮತ ಕೇಳಿದ ಬಿಜೆಪಿ ಅಭ್ಯರ್ಥಿ ಸಾಹುಕಾರ್

    ಗ್ರಾಮದ ಚರಮೂರ್ತೀಶ್ವರ ದೇವಸ್ಥಾನದಲ್ಲಿ ಪೂಜೆ, ಮಾರುತಿ ದೇವಸ್ಥಾನ, ಬಸವೇಶ್ವರ ದೇವಸ್ಥಾನ ಸೇರಿ ಗ್ರಾಮದ ಎಲ್ಲ ದೇವಾಲಯದಲ್ಲಿ ರಮೇಶ್ ಜಾರಕಿಹೊಳಿ ಪೂಜೆ ಸಲ್ಲಿಸಿದರು. ನಂತರ ಗ್ರಾಮದಲ್ಲಿ ಪಾದಯಾತ್ರೆ ಮಾಡುತ್ತಾ ಭರ್ಜರಿ ಮತಯಾಚನೆ ಮಾಡಿದ್ದು, ಸಾಹುಕಾರ್ ಗೆ ಸ್ಥಳೀಯ ಮುಖಂಡರು ಸಾಥ್ ನೀಡಿದರು.