Tag: Karnataka Valmiki Nigama

  • ಜೂನ್‌ 6ರ ಒಳಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು – ಡೆಡ್‌ಲೈನ್‌ ಕೊಟ್ಟ ಅಶೋಕ್

    ಜೂನ್‌ 6ರ ಒಳಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು – ಡೆಡ್‌ಲೈನ್‌ ಕೊಟ್ಟ ಅಶೋಕ್

    – ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆಂಧ್ರ, ತಮಿಳುನಾಡು ವರೆಗೂ ವ್ಯಾಪಿಸಿದೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲು ಮುಖ್ಯಮಂತ್ರಿಗಳು (Chief Minister), ಆಮೇಲೆ ಸಂಬಂಧಪಟ್ಟ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು. ಜೂನ್ 6ರ ಒಳಗೆ ರಾಜೀನಾಮೆ ಕೊಡದಿದ್ದರೇ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashoka) ಗಡುವು ನೀಡಿದ್ದಾರೆ.

    ಬಿಜೆಪಿ (BJP) ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ (Siddaramaiah) ಹಲವು ಪ್ರಶ್ನೆಗಳನ್ನು ಹಾಕಿದ್ರು. ಎಫ್ಐಆರ್ ನಲ್ಲಿ (FIR) ಮಂತ್ರಿಯ ಹೆಸರು ಯಾಕಿಲ್ಲ? ಹಣ ಗುಳುಂ ಮಾಡಿದ್ದ ಅಧಿಕಾರಿಗಳನ್ನ ಏಕೆ ಬಂಧಿಸಿಲ್ಲ? ಅವರನ್ನು ಬಂಧಿಸಿದ್ರೆ ನಿಮ್ಮ ಬಂಡವಾಳ ಬಯಲಿಗೆ ಬರುತ್ತಾ? ಸಿಐಡಿಗೆ ಯಾಕೆ ಕೊಟ್ಟಿದ್ದು? ಸಿಐಡಿ ಅಂದ್ರೆ ಕಾಂಗ್ರೆಸ್ ಇನ್ವೆಸ್ಟಿಗೇಶನ್ ಟೀಮ್. ನಾನು ವರ್ಗಾವಣೆಯಲ್ಲಿ ಹಣ ಮಾಡಿದ್ರೆ ರಾಜೀನಾಮೆ ಕೊಡ್ತೀನಿ ಅಂದ್ರಲ್ಲಾ ಸಿದ್ದರಾಮಯ್ಯನವರೇ ಈಗ ತಾವು ಯಾವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ? ಅಂತ ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ಮೃತರ ಮನೆಯಲ್ಲಿದ್ದ ಪೆನ್‌ಡ್ರೈವ್‌ (Pendrive) ಅನ್ನು ಯಾಕೆ ತಗೊಂಡು ಹೋದ್ರಿ? ಅದನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು. ಆವತ್ತು ಈಶ್ವರಪ್ಪ ಕೇಸ್ ನಲ್ಲಿ ಕರ್ನಾಟಕಕ್ಕೆ ಕೆಟ್ಟ ದಿನ ಅಂದಿದ್ದರು, ಸುರ್ಜೇವಾಲ ಅವರು ಕಾಂಗ್ರೆಸ್ (Congress) ಲೂಟಿಯನ್ನ ಸಹಿಸೋದಿಲ್ಲ ಅಂತ ಹೇಳಿದ್ದರು. ಈಶ್ವರಪ್ಪರನ್ನು ಬಂಧಿಸಿ ಅಂದ್ರು. ಈಗ ಏನ್ ಮಾಡ್ತೀರಾ? ಅಶೋಕ್‌ ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಚೆಕ್‍ಇನ್ ಮುಗಿಸಿರೋ ಪ್ರಜ್ವಲ್ ಗುರುವಾರ ಮಧ್ಯರಾತ್ರಿ ಬೆಂಗ್ಳೂರಿಗೆ ಆಗಮನ

    ಇವಾಗ ಯಾರ ಮೇಲೆ ಕೇಸ್ ಹಾಕಿದ್ದೀಯಪ್ಪ? ಎಂದು ಸಿಎಂ ಸಿದ್ದರಾಮಯ್ಯಗೆ ಏಕ‌ ವಚನದಲ್ಲೇ ಕಿಡಿಕಾರಿದ್ರು. ದುಡ್ಡು ವಾಪಸ್ಸು ತರುತ್ತೇನೆ ಅಂದ್ರಲ್ಲ ಹಾಗೇ ಆ ಅಧಿಕಾರಿ ಜೀವವನ್ನ ವಾಪಸ್ಸು ತರುತ್ತೀರಾ? ಅವರಿಗೆ ಹೋದ ಮರ್ಯಾದೆ ವಾಪಸ್ಸು ತರುತ್ತೀರಾ? ಅಧಿಕಾರಿಯ ಸಾವಿಗೆ ಬೆಲೆ ಇಲ್ಲವಾ? ಇದರ ಹಿಂದೆ ದೊಡ್ಡ ಜಾಲವೇ ಇದೆ. ಇದು ಆಂಧ್ರ, ತಮಿಳುನಾಡಿಗೆ ಹೋಗಿದೆ. ಅದಕ್ಕಾಗಿ ಇದನ್ನು ಸಿಬಿಐಗೆ ವಹಿಸಬೇಕು. ಈ ವಿಷಯವನ್ನು ಸುಮ್ಮನೆ ಬಿಡಬಾರದು ಎಂದು ನಮ್ಮ ಪಕ್ಷ ತೀರ್ಮಾನಿಸಿದೆ. ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯವ ತನಕ ಬಿಡುವುದಿಲ್ಲ ಅಂತ ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: ʼಸಂತ್ರಸ್ತೆಗೆ 150 – 200 ಸೀರೆ ಕೊಡಿಸಿʼ – ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಹೇಗಿತ್ತು? ವಾದ, ಪ್ರತಿವಾದ ಏನಿತ್ತು? 

  • ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯದ್ದು ಆತ್ಮಹತ್ಯೆ ಅಲ್ಲ, ಕೊಲೆ – ಆರ್. ಅಶೋಕ್

    ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯದ್ದು ಆತ್ಮಹತ್ಯೆ ಅಲ್ಲ, ಕೊಲೆ – ಆರ್. ಅಶೋಕ್

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ‌ ನಿಗಮದ (Karnataka Maharshi Valmiki Scheduled Tribes) ಅಧಿಕಾರಿ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಅಧಿಕಾರಿಯದ್ದು ಆತ್ಮಹತ್ಯೆಯಲ್ಲ, ಕೊಲೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashoka) ಆಗ್ರಹಿಸಿದ್ದಾರೆ.

    ತಮ್ಮ ಎಕ್ಸ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅಶೋಕ್, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಮೌಲ್ಯದ ಬೃಹತ್ ಭ್ರಷ್ಟಾಚಾರವನ್ನ ಅಧಿಕಾರಿಯ ತಲೆಗೆ ಕಟ್ಟಲು ಹೋಗಿ ಕಿರುಕುಳ ನೀಡಿ ಆತ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ ಈ ಕೊಲೆಗಡುಕ ಕಾಂಗ್ರೆಸ್ ಸರ್ಕಾರ (Congress Govt). ಸಿಎಂ ಅವರೇ ಇದು ಆತ್ಮಹತ್ಯೆ ಅಲ್ಲ, ಕೊಲೆ. ಈ ಕೊಲೆಗೆ ಹೊಣೆ ಯಾರು? ನಿಮ್ಮ ಸರ್ಕಾರದ ಕಮಿಷನ್ ದಾಹಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು‌? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಅನುಮತಿ ಇಲ್ಲ, ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ಬೇಕಿಲ್ಲ: ಬಿಜೆಪಿ ಕಿಡಿ

    ಇನ್ನೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ 11,000 ಕೋಟಿ ರೂ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನ ಗ್ಯಾರಂಟಿ ಹೆಸರಿನಲ್ಲಿ ಲಪಟಾಯಿಸಿ ಈಗಾಗಲೇ ದಲಿತರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡಿದ್ದೀರಿ. ಈಗ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಭ್ರಷ್ಟಾಚಾರ (Corruption) ನಡೆಸಿ ಒಬ್ಬ ಅಧಿಕಾರಿಯ ಸಾವಿಗೆ ಕಾರಣರಾಗಿದ್ದೀರಿ. ಈ ಕೂಡಲೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರನ್ನ ಸಂಪುಟದಿಂದ ವಜಾ ಮಾಡಬೇಕು. ಈ ಪ್ರಕರಣದ ತನಿಖೆಗೆ ಆದೇಶ ಮಾಡಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಆತ್ಮಹತ್ಯೆಗೆ ಶರಣಾದ ಅಧಿಕಾರಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ಒತ್ತಾಯಿಸಿದ್ದಾರೆ.

    ಎಸ್ಐಟಿ ರಚಿಸಿ ಕೈತೊಳೆದುಕೊಳ್ಳಬೇಡಿ:
    ಬಿಜೆಪಿ ಶಾಸಕ ಸುನೀಲ್ ಕುಮಾರ್ (Sunil Kumar) ಅವರೂ ಸಹ ಅಧಿಕಾರಿ ಆತ್ಮಹತ್ಯೆ ಬಗ್ಗೆ ಎಕ್ಸ್‌ ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಜಾಪ್ರಭುತ್ವ, ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ನೆಹರೂ – ಸಿದ್ದರಾಮಯ್ಯ

    ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಶಿವಮೊಗ್ಗದಲ್ಲಿ ಶಂಕಾಸ್ಪದ ರೀತಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಈ ಸಾವಿನ ಸುತ್ತ ಭ್ರಷ್ಟಾಚಾರದ ಹುತ್ತ ಕಟ್ಟಿದ ಅನುಮಾನ ಬರುತ್ತಿದೆ. ಇಲಾಖೆಯಲ್ಲಿನ ಕಾಣದ ಕೈಗಳ ಕರಾಮತ್ತು ಯಾವುದೆಂಬುದು ಮಹದೇವನೇ ಬಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಸಾಕ್ಷ್ಯ ನಾಶ ಮಾಡಿ ಎಸ್‌ಐಟಿ ತನಿಖೆ ಎಂಬ ರಾಗವನ್ನು ಸರ್ಕಾರ ಹಾಡದಿರಲಿ ಎಂದು ಸುನೀಲ್ ಕುಮಾರ್ ಎಂದು ಸಲಹೆ ನೀಡಿದ್ದಾರೆ.

  • ಅಧಿಕಾರಿಗಳ ಹೆಸರು ಉಲ್ಲೇಖಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ!

    ಅಧಿಕಾರಿಗಳ ಹೆಸರು ಉಲ್ಲೇಖಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ!

    – ಡೆತ್‌ನೋಟ್‌ನಲ್ಲಿ ಬಹುಕೋಟಿ ರಹಸ್ಯ ಬಿಚ್ಚಿಟ್ಟ ಮೃತ ಅಧಿಕಾರಿ

    ಶಿವಮೊಗ್ಗ: ಡೆತ್‌ನೋಟ್‌ನಲ್ಲಿ ಮೂವರು ಅಧಿಕಾರಿಗಳ ಹೆಸರು ಉಲ್ಲೇಖಿಸಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Karnataka Valmiki Nigama) ಅಧಿಕಾರಿಯೊಬ್ಬರು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ (Shivamogga) ವಿನೋಬನಗರದಲ್ಲಿ ನಡೆದಿದೆ.

    ಇಲ್ಲಿನ ವಿನೋಬನಗರದ ಕೆಂಚಪ್ಪ ಬಡಾವಣೆಯ ನಿವಾಸಿ ಚಂದ್ರಶೇಖರನ್ (45) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯಾಗಿದ್ದ ಚಂದ್ರಶೇಖರನ್ ಬೆಂಗಳೂರಿನ ಕಚೇರಿಯಲ್ಲಿ (Bengaluru Office) ಕೆಲಸ ನಿರ್ವಹಿಸುತ್ತಿದ್ದರು. ಅವಮಾನ ಸಹಿಸದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಅಲ್ಲದೇ ಡೆತ್‌ನೋಟ್‌ನಲ್ಲಿ ಮೂವರು ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿ, ಬಹುಕೋಟಿ ಭ್ರಷ್ಟಾಚಾರ ರಹಸ್ಯವನ್ನೂ ಬಿಚ್ಚಿಟ್ಟಿದ್ದಾರೆ. ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ, ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ನೆಹರೂ – ಸಿದ್ದರಾಮಯ್ಯ

    ಡೆತ್‌ನೋಟ್‌ನಲ್ಲಿ ಬಹುಕೋಟಿ ಭ್ರಷ್ಟಾಚಾರ ರಹಸ್ಯ:
    ನನ್ನ ಸಾವಿಗೆ ನಿಗಮದ ಅಧಿಕಾರಿಗಳು ಕಾರಣ. ನಿಗಮದ ವ್ಯವಸ್ಥಾಪಕ ನಿದೇರ್ಶಕರಾದ ಜೆ.ಪದ್ಮನಾಭ, ಅಕೌಂಟ್ ವ್ಯವಸ್ಥಾಪಕ ಪರಶುರಾಮ್ ದುರ್ಗಣ್ಣನವರ್, ಯೂನಿಯನ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ಶುಚಿಸ್ಮಿತ ಕಾರಣ. ವಾಲ್ಮೀಕಿ ನಿಗಮದ ಅನುದಾನದಲ್ಲಿ 80 ರಿಂದ 85 ಕೋಟಿ ರೂ.ಗಳನ್ನು ನಿಯಮ ಬಾಹಿರವಾಗಿ ಲೂಟಿ ಮಾಡಿದ್ದಾರೆ. ಈ ಅವ್ಯವಹಾರದಲ್ಲಿ ನನ್ನ ಪಾತ್ರವಿಲ್ಲ. ಆದರೆ ಕೆಲಸದ ಒತ್ತಡದಲ್ಲಿ ಸದರಿ ಖಾತೆಯ ಚೆಕ್ ಪುಸ್ತಕ ಪಡೆಯದಿರುವುದು ಮತ್ತು ಕ್ಯಾಶ್ ಪುಸ್ತಕ ಮುಕ್ತಾಯಗೊಳಿಸದಿರುವುದು ನನ್ನ ತಪ್ಪಾಗಿದೆ. ಈ ಹಗರಣದಲ್ಲಿ ನಾನು ಕಾರಣ ನಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಶಾಸಕ ಎಸ್.ಎನ್ ಚನ್ನಬಸಪ್ಪ ಭೇಟಿ ನೀಡಿದ್ದು, ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಅನುಮತಿ ಇಲ್ಲ, ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ಬೇಕಿಲ್ಲ: ಬಿಜೆಪಿ ಕಿಡಿ