Tag: Karnataka Transport Department

  • HSRP ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಗಡುವು

    HSRP ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಗಡುವು

    ಳೆಯ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High Security Registration Plate) ಅಳವಡಿಸಲು ಸಾರಿಗೆ ಇಲಾಖೆ ಇನ್ನೂ ಮೂರು ತಿಂಗಳು ಸಮಯಾವಕಾಶ ಕೊಟ್ಟಿದೆ. ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಕೊನೆಯ ದಿನ ಎಂದು ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಟೈಂ ಕೊಟ್ಟಿದೆ.

    2019ರ ಏಪ್ರಿಲ್‌ 1ಕ್ಕಿಂತ ಮೊದಲು ನೀವು ಖರೀದಿ ಮಾಡಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಇರಲಿಲ್ಲ. 2019ರ ಏಪ್ರಿಲ್ 1ರ ನಂತರ ಖರೀದಿ ಮಾಡಿರುವ ಎಲ್ಲಾ ವಾಹನಗಳಿಗೆ ಷೋರೂಮ್ ನವರೇ HSRP ನಂಬರ್ ಪ್ಲೇಟ್ ನೀಡುತ್ತಿದ್ದಾರೆ. 2019ರ ಏಪ್ರಿಲ್‌ 1ಕ್ಕಿಂತ ಮೊದಲು ನೀವು ವಾಹನ ಖರೀದಿ ಮಾಡಿದ್ದರೆ HSRP ನಂಬರ್ ಪ್ಲೇಟ್ ಹಾಕಿಸಲೇಬೇಕು. ಇದನ್ನೂ ಓದಿ: ರಾತ್ರಿ ನಾನು ಭಾರತ – ನ್ಯೂಜಿಲೆಂಡ್‌ ಸೆಮಿಫೈನಲ್‌ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

    HSRP ನಂಬರ್ ಪ್ಲೇಟ್ ಎಂದರೇನು..?
    ಹೆಚ್‌ಎಸ್‌ಆರ್‌ಪಿ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದ್ದು, ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿ ಅನೇಕ ವಿವರಗಳನ್ನು ಹೊಂದಿರುತ್ತವೆ. ವಿಶಿಷ್ಟವಾದ ಏಳು-ಅಂಕಿಯ ಲೇಸರ್ ಕೋಡ್, ನಕಲು ತಡೆಯಲು ಚಕ್ರಾಕಾರದ ಹೋಲೊಗ್ರಾಮ್, ನಿಮ್ಮ ವಾಹನದ ಎಂಜಿನ್ ಮತ್ತು ಚಾಸಿಸ್ ಸಂಖ್ಯೆ ಹೊಂದಿರುವ ಸ್ವಯಂ-ವಿನಾಶಕಾರಿ ಸ್ಟಿಕ್ಕರ್ ಅನ್ನು ಒಳಗೊಂಡಿದೆ. “IND” ಎಂದು ನೀಲಿ ಬಣ್ಣದಲ್ಲಿ ಎಂಬೋಸ್ ಮಾಡಲಾಗಿರುತ್ತದೆ. ಪ್ಲೇಟ್‌ನಲ್ಲಿರುವ ಎಲ್ಲಾ ಅಕ್ಷರಗಳು ಮತ್ತು ಸಂಖ್ಯೆಗಳಾದ್ಯಂತ 45 ಡಿಗ್ರಿ ಕೋನದಲ್ಲಿINDIA ಎಂದು ಹಾಟ್ ಸ್ಟಾಂಪಿಂಗ್ ಮಾಡಲಾಗಿರುತ್ತದೆ. ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಸ್ನ್ಯಾಪ್-ಆನ್ ಲಾಕ್ ಅನ್ನು ಒಳಗೊಂಡಿರುತ್ತವೆ ಮತ್ತು ಹೇಗಾದರೂ ಆ ಲಾಕ್ ತೆಗೆದುಹಾಕಿದರೆ ಅದನ್ನು ಮರುಬಳಕೆ ಮಾಡಲಾಗುವುದಿಲ್ಲ.

    ಎಲ್ಲಾ ಮೋಟಾರು ವಾಹನಗಳ ರಾಷ್ಟ್ರೀಯ ಡೇಟಾ ಬೇಸ್ ರಚಿಸಲು HSRPಗಳು ಸಹಾಯ ಮಾಡುತ್ತವೆ. ನೀವು ದೇಶದ ಯಾವುದೇ ಹಳ್ಳಿಯಲ್ಲಿ ವಾಸಿಸುತ್ತಿದ್ದರೂ HSRPಗಳು ಕಡ್ಡಾಯ. ಇದನ್ನೂ ಓದಿ: 2 ವರ್ಷಗಳಿಂದ ಜಿ-ಮೇಲ್‌ ಅಕೌಂಟ್‌ನಲ್ಲಿ ನೀವು ಆ್ಯಕ್ಟಿವ್‌ ಆಗಿಲ್ವಾ? – ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ..

    ನಾಲ್ಕು ಚಕ್ರದ ವಾಹನಗಳಿಗೆ ನಂಬರ್ ಪ್ಲೇಟ್ ಹಾಕಿಸಲು 650-850 ರೂಪಾಯಿ ಮತ್ತು ಬೈಕ್, ಸ್ಕೂಟರ್‌ಗಳಿಗೆ 400- 600 ರೂಪಾಯಿ ವೆಚ್ಚವಾಗುತ್ತೆ. HSRP ನಂಬರ್ ಪ್ಲೇಟ್ ಗಳಿಗೆ ಐದು ವರ್ಷಗಳ ವಾರಂಟಿ ಇರುತ್ತದೆ.

    ಹೆಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ..?
    ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು ‘Book HSRP’ ಮೇಲೆ ಕ್ಲಿಕ್ ಮಾಡಿ. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ಮತ್ತು ಅಲ್ಲಿ ಕೇಳುವ ನಿಮ್ಮ ವಾಹನದ ವಿವರವನ್ನು ಭರ್ತಿ ಮಾಡಿ. ಇದನ್ನೂ ಓದಿ: PublicTV Explainer: ‘ಸೋಷಿಯಲ್‌’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?

    ಹೆಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ನಿಮ್ಮ ಸಮೇತದ ವಾಹನ ಡೀಲರ್​ಶಿಪ್​ಆಯ್ಕೆಮಾಡಿ ಮತ್ತು ಆನ್‌ಲೈನ್‌ನಲ್ಲಿ HSRP ಶುಲ್ಕವನ್ನು ಪಾವತಿ ಮಾಡಿ. ನೆನಪಿರಲಿ, ಕೇವಲ ಆನ್‌ಲೈನ್‌ ಮೂಲಕ ಮಾತ್ರ ಶುಲ್ಕ ಪಾವತಿ ಮಾಡಿ, ಯಾವುದೇ ರೀತಿಯ ನಗದು ವ್ಯವಹಾರ ಮಾಡುವಂತಿಲ್ಲ.

    ವಾಹನ ಮಾಲೀಕರ ಮೊಬೈಲ್‌ಗೆ ಒಟಿಪಿ ಬರುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡು, ನೀವು ಈಗಾಗಲೇ ಆಯ್ಕೆ ಮಾಡಿರುವ ಡೀಲರ್‌ ಬಳಿ ಭೇಟಿ ನೀಡಿ HSRP ಅಳವಡಿಸಿಕೊಳ್ಳಿ. ಇದನ್ನೂ ಓದಿ: ಏನಿದು ಡೀಪ್‌ಫೇಕ್‌ ತಂತ್ರಜ್ಞಾನ? ಹೇಗೆ ಮಾಡುತ್ತಾರೆ? – ನೀವು ತಿಳ್ಕೋಳ್ಳಲೇಬೇಕು

  • ಕೊರೊನಾ ವಾರಿಯರ್ಸ್ ಲಿಸ್ಟ್‌ಗೆ ಸಾರಿಗೆ ಸಿಬ್ಬಂದಿ- ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

    ಕೊರೊನಾ ವಾರಿಯರ್ಸ್ ಲಿಸ್ಟ್‌ಗೆ ಸಾರಿಗೆ ಸಿಬ್ಬಂದಿ- ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ

    ಬೆಂಗಳೂರು: ಕೊರೊನಾ ವಿರುದ್ಧ ನಡೆಯುತ್ತಿದ್ದ ಯುದ್ಧದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು, ಮಾಧ್ಯಮಗಳು ನಿರಂತರವಾಗಿ ದುಡಿಯುತ್ತಿದ್ದು, ಸದ್ಯ ಈ ಪಟ್ಟಿಗೆ ಸಾರಿಗೆ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಸೇರ್ಪಡೆ ಮಾಡಿದೆ. ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು, ನಿರ್ವಾಹಕರು ಮೃತಪಟ್ಟರೆ ಕುಟುಂಬಸ್ಥರಿಗೆ 30 ಲಕ್ಷ ಪರಿಹಾರ ನೀಡುವ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

    ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿ ಮಾಹಿತಿ ನೀಡಿದ್ದು, ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಮೇಲಿದ್ದಾಗ ಕೋವಿಡ್-19 ಪಿಡುಗಿಗೆ ತುತ್ತಾಗಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಈ ಪರಿಹಾರವನ್ನು ಸಾರಿಗೆ ಇಲಾಖೆಯಿಂದ ನೀಡಲು ನಿರ್ಧರಿಸಲಾಗಿದೆ. ಮೇ 19 ರಿಂದ ಸಾರಿಗೆ ಸಂಸ್ಥೆಗಳ ಬಸ್ಸುಗಳು ಕಾರ್ಯನಿರ್ವಹಿಸಲಿದ್ದು, ಈ ಸಂದರ್ಭದಲ್ಲಿ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಒದಗಿಸಲು ಕ್ರಮಕೈಗೊಳ್ಳಾಗಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರಿಗೆ ಸಂಸ್ಥೆಗಳ ಎಲ್ಲಾ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿಗಳು ಗಮನಹರಿಸುವ ಮೂಲಕ ಕೋವಿಡ್-19 ರೋಗವನ್ನು ತಡಗಟ್ಟಲು ಸಹಕರಿಸಬೇಕೆಂದು ಸಚಿವ ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡಿದ್ದಾರೆ.

    ಪ್ರಯಾಣಿಕರು ಕೂಡ ಬಸ್ಸುಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಮುಂತಾದ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ.

  • ಸಾರಿಗೆ ಇಲಾಖೆ ನಿರ್ಲಕ್ಷ್ಯ – ಪ್ರತಿದಿನ ಲಕ್ಷಗಟ್ಟಲೇ ಆದಾಯ ನಷ್ಟ

    ಸಾರಿಗೆ ಇಲಾಖೆ ನಿರ್ಲಕ್ಷ್ಯ – ಪ್ರತಿದಿನ ಲಕ್ಷಗಟ್ಟಲೇ ಆದಾಯ ನಷ್ಟ

    ಕಾರವಾರ: ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳು ತೆರಳಬೇಕಿದ್ದರೆ ಆಯಾ ರಾಜ್ಯದ ರಸ್ತೆ ತೆರಿಗೆಯನ್ನು ಗಡಿ ಭಾಗದಲ್ಲಿ ಕಡ್ಡಾಯವಾಗಿ ಕಟ್ಟಲೇಬೇಕು. ಆದರೆ ಕಾರವಾರ ಗಡಿಭಾಗದಲ್ಲಿ ಇದು ಫಾಲೋ ಆಗುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ಲಕ್ಷಗಟ್ಟಲೇ ರಸ್ತೆ ತೆರಿಗೆ ವಂಚನೆಯಾಗುತ್ತಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ಕರ್ನಾಟಕ ಸರ್ಕಾರವು ತೆರಿಗೆ ವಸೂಲಿ, ಅನಧಿಕೃತ ಸಾಗಾಟಗಳ ತಡೆಗಾಗಿ ಅರಣ್ಯ ಇಲಾಖೆ, ಭೂ ಮತ್ತು ಗಣಿವಿಜ್ಞಾನ ಇಲಾಖೆ, ಪೊಲೀಸ್ ಹೀಗೆ ಹಲವು ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಿದೆ. ಆದರೆ ರಸ್ತೆ ತೆರಿಗೆ ವಸೂಲಿಗಾಗಿ ಆರ್.ಟಿ.ಓ ಕಚೇರಿ ಮಾತ್ರ ಯಾವುದೇ ಕೇಂದ್ರವನ್ನು ತೆರೆದಿಲ್ಲ. ಇದರಿಂದ ಗೋವಾ ರಾಜ್ಯದಿಂದ ಬರುವ ವಾಣಿಜ್ಯ ಪ್ರವಾಸಿ ವಾಹನಗಳು ಪರ್ಮಿಟ್ ತೆಗೆದುಕೊಳ್ಳದೇ ತೆರಿಗೆ ವಂಚಿಸಿ ಕರ್ನಾಟಕ್ಕೆ ಪ್ರವೇಶ ಪಡೆಯುತ್ತಿದೆ. ಇಲ್ಲಿನ ಇಲಾಖೆ ಅಧಿಕಾರಿಗಳ ವರ್ತನೆಯಿಂದ ಕರ್ನಾಟಕ ಸರ್ಕಾರಕ್ಕೆ ಬರಬೇಕಾದ ಆದಾಯ ಕೈತಪ್ಪಿ ಹೋಗುತ್ತಿದೆ.

    ಕರ್ನಾಟಕದಿಂದ ಗೋವಾ ಗಡಿಗೆ ಯಾವುದೇ ವಾಣಿಜ್ಯ ವಾಹನಗಳು ತೆರಳಿದರೆ ತಪ್ಪದೇ ಪರ್ಮಿಟ್ ತೆಗೆದುಕೊಂಡು ಹಣ ಕಟ್ಟಬೇಕು. ಇಲ್ಲದಿದ್ದರೆ ಅಲ್ಲಿನ ಸರ್ಕಾರ ಪರ್ಮಿಟ್ ಇಲ್ಲದ ವಾಹನಗಳಿಗೆ ಐದರಿಂದ ನಲವತ್ತು ಸಾವಿರದವರೆಗೆ ದಂಡ ವಿಧಿಸುತ್ತದೆ. ಕರ್ನಾಟಕದಲ್ಲಿಯೂ ಇದೇ ನಿಯಮಗಳು ಜಾರಿಯಲ್ಲಿದೆ. ಹೊರ ರಾಜ್ಯದಿಂದ ಆಗಮಿಸುವ ಬಸ್‍ಗಳಿಗೆ ಸೀಟಿನ ಲೆಕ್ಕದಲ್ಲಿ ಪರ್ಮಿಟ್ ಪಡೆದು ಹಣ ಕಟ್ಟಬೇಕು, ಗೋವಾದ ಗಡಿಯಲ್ಲಿಯೇ ಆರ್.ಟಿ.ಓ ಕಚೇರಿ ಇದ್ದು, ದಿನದ 24 ಗಂಟೆ ತೆರೆದಿರುತ್ತದೆ. ಹೀಗಾಗಿ ಯಾರೂ ಕೂಡ ವಂಚಿಸಿ ಹೋಗಲು ಸಾಧ್ಯವಿಲ್ಲ. ಕರ್ನಾಟಕದ ಗಡಿಯಲ್ಲಿ ಆರ್.ಟಿ.ಓ ಕಚೇರಿಯಾಗಲಿ, ಸಿಬ್ಬಂದಿಯಾಗಲಿ ಇರದೇ ಇರುವುದರಿಂದ ತೆರಿಗೆ ಹಣ ವಂಚಿಸಿ ಹಲವರು ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ.

    ಉತ್ತರ ಕನ್ನಡ ಪ್ರವಾಸಿ ತಾಣವಾಗಿರುವುದರಿಂದ ಪ್ರತಿ ದಿನ ಗೋವಾ, ಮಹಾರಾಷ್ಟ ಸೇರಿ ಹಲವು ರಾಜ್ಯಗಳಿಂದ ನೂರಾರು ಬಾಡಿಗೆ ವಾಹನಗಳು ಆಗಮಿಸುತ್ತವೆ. ಬಹುತೇಕ ವಾಹನಗಳು ಪರ್ಮಿಟ್ ಪಡೆಯದೇ ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿವೆ. ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಎಚ್ಚೆತ್ತು ಹೊರರಾಜ್ಯದ ವಾಹನ ಸವಾರರಿಂದ ಆಗುತ್ತಿರುವ ತೆರಿಗೆ ವಂಚನೆಯನ್ನು ತಪ್ಪಿಸಿಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv