Tag: Karnataka Tourism

  • ರಾಜ್ಯದ 1,275 ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ `ಗದಗ’ದ 48 ತಾಣಗಳು ಆಯ್ಕೆ

    ರಾಜ್ಯದ 1,275 ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ `ಗದಗ’ದ 48 ತಾಣಗಳು ಆಯ್ಕೆ

    ಗದಗ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ರಾಜ್ಯಾದ್ಯಂತ ಒಟ್ಟು 1,275 ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿದೆ. ಅದರಲ್ಲಿ ಗದಗ ಜಿಲ್ಲೆಯ 48 ತಾಣಗಳು ಮಹತ್ವದ ಸ್ಥಾನ ಪಡೆಕೊಂಡಿವೆ.

    ಸಂಗೀತ, ಸಾಹಿತ್ಯ, ಕಲೆಗಳ ತವರೂರಾಗಿರುವ ಗದಗ ಜಿಲ್ಲೆಯು ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ತಾಣವಾಗಿಯೂ ಗಮನ ಸೆಳೆಯುತ್ತಿದೆ. ಇದೀಗ ರಾಜ್ಯ ಸರ್ಕಾರ ಗುರುತು ಮಾಡಿರುವ 1,275 ಹೊಸ ಪ್ರವಾಸಿ ತಾಣಗಳ ಪೈಕಿ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ವೀರೇಶ್ವರ ಪುಣ್ಯಾಶ್ರಮ, ವೀರಗಲ್ಲು, ಸಬರಮತಿ ಆಶ್ರಮದ ಪ್ರತಿರೂಪ ಸೇರಿದಂತೆ ಒಟ್ಟು 45 ತಾಣಗಳು ಸೇರಿಕೊಂಡಿವೆ. ಇದನ್ನೂ ಓದಿ: ಜಾತಿಗಣತಿಗೆ ಡಿಕೆಶಿ ಸೇರಿ ಹಲವು ಸಚಿವರ ಆಕ್ಷೇಪ, ನನಗೆ ಮೇಲ್ವರ್ಗದ ವಿರೋಧಿ ಅಂತಾ ಪಟ್ಟ ಕಟ್ಟುತ್ತಾರೆ: ಸಿಎಂ

    ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಅಂಕಿ ಅಂಶಗಳನ್ನು ಆಧರಿಸಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಸ್ವೀಕರಿಸಿದ ಆಧಾರದ ಮೇಲೆ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಅಧಿಕೃತ ಆದೇಶ ಹೊರಡಿಸಿದ್ದಾರೆ.

    ಹೊಸದಾಗಿ ಗುರುತಿಸಲಾದ ತಾಣಗಳ ಅಭಿವೃದ್ಧಿಗೆ ಅಗತ್ಯವಾದ ಕ್ರಿಯಾ ಯೋಜನೆಗಳು ಮತ್ತು ಅಂದಾಜು ವೆಚ್ಚಗಳನ್ನು ಸಿದ್ಧಪಡಿಸಿ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ನಂತರ ಕಾಮಗಾರಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಹೊಸ ಪ್ರವಾಸಿ ತಾಣಗಳ ಗುರುತಿಸುವಿಕೆಯಿಂದಾಗಿ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ. ವಿಶೇಷವಾಗಿ ರಾಜ್ಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅನೇಕ ಧಾರ್ಮಿಕ ತಾಣಗಳು, ಐತಿಹಾಸಿಕ ದೇವಸ್ಥಾನಗಳು ಅಭಿವೃದ್ಧಿ ಕಂಡು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯ ಪ್ರವಾಸಿ ತಾಣಗಳ ವಿವರ:
    ಗದಗ ತಾಲೂಕು:
    * ಭೀಷ್ಮ ಕೆರೆ (116 ಅಡಿ ಎತ್ತರದ ಬಸವೇಶ್ವರ ಮೂರ್ತಿ)
    * ಶ್ರೀ ವೀರನಾರಾಯಣ ದೇವಸ್ಥಾನ
    * ಶ್ರೀ ತ್ರಿಕೂಟೇಶ್ವರ ದೇವಸ್ಥಾನ
    * ಶ್ರೀ ಸೋಮೇಶ್ವರ ದೇವಸ್ಥಾನ
    * ಶ್ರೀ ರಾಮೇಶ್ವರ ದೇವಸ್ಥಾನ
    * ಶ್ರೀ ತೋಂಟದಾರ್ಯ ಮಠ
    * ಶ್ರೀ ವೀರೇಶ್ವರ ಪುಣ್ಯಾಶ್ರಮ
    * ಜಾಮಿಯಾ ಮಸೀದಿ
    * ಬೆಟಗೇರಿ ಚರ್ಚ್
    * ಸಬರಮತಿ ಆಶ್ರಮ
    * ಶ್ರೀರಾಮಕೃಷ್ಣ ಆಶ್ರಮ
    * ಶ್ರೀ ವೆಂಕಟೇಶ್ವರ ದೇವಸ್ಥಾನ, ವೆಂಕಟಾಪುರ
    * ದಾವಲಮಲಿಕ ದರ್ಗಾ, ಮುಳಗುಂದ
    * ಶ್ರೀ ಸಿದ್ದೇಶ್ವರ ದೇವಸ್ಥಾನ, ಮುಳಗುಂದ
    * ಚಂದ್ರನಾಥ ಬಸದಿ, ಮುಳಗುಂದ
    * ಶ್ರೀ ಪಾರ್ವತಿ-ಪರಮೇಶ್ವರ ದೇವಸ್ಥಾನ, ಹರ್ತಿ
    * ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ
    * ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ
    * ಬೆಟಗೇರಿಯ ವೀರಗಲ್ಲುಗಳು
    * ಸರ್ಕಾರಿ ವಸ್ತು ಸಂಗ್ರಹಾಲಯ
    * ಬ್ರಹ್ಮ, ಜೀನಾಲಯ ದೇವಸ್ಥಾನ, ಲಕ್ಕುಂಡಿ
    * ಶ್ರೀ ನನ್ನೇಶ್ವರ ದೇವಸ್ಥಾನ, ಲಕ್ಕುಂಡಿ
    * ಮುಸಕಿನ ಭಾವಿ, ಲಕ್ಕುಂಡಿ
    * ಶ್ರೀ ಕಾಶಿವಿಶ್ವೇಶ್ವರ ದೇವಸ್ಥಾನ, ಲಕ್ಕುಂಡಿ
    * ಶ್ರೀ ಹಾಲಗುಂಡಿ ಬಸವೇಶ್ವರ ದೇವಸ್ಥಾನ, ಲಕ್ಕುಂಡಿ
    * ವಸ್ತು ಸಂಗ್ರಹಾಲಯ, ಲಕ್ಕುಂಡಿ

    ಮುಂಡರಗಿ ತಾಲೂಕು:
    * ಶ್ರೀ ವೀರಭದ್ರೇಶ್ವರ ದೇವಸ್ಥಾನ, ಸಿಂಗಟಾಲೂರು
    * ಹಮ್ಮಿಗಿ ಬ್ಯಾರೇಜ್, ಹಮ್ಮಿಗಿ.
    * ಶ್ರೀ ಅನ್ನದಾನೇಶ್ವರ ಮಠ, ಮುಂಡರಗಿ.
    * ಕಪ್ಪತ್ತಗುಡ್ಡ.
    * ಶ್ರೀ ದೊಡ್ಡಬಸಪ್ಪ ದೇವಸ್ಥಾನ, ಡಂಬಳ.
    * ಶ್ರೀ ಸೋಮೇಶ್ವರ ದೇವಸ್ಥಾನ, ಡಂಬಳ.
    * ವಿಕ್ಟೋರಿಯಾ ರಾಣಿ ಕೆರೆ, ಡಂಬಳ.
    * ಜಪದ ಬಾವಿ, ಡಂಬಳ

    ರೋಣ ಹಾಗೂ ಗಜೇಂದ್ರಗಡ:
    * ಶ್ರೀ ಕಲ್ಲೇಶ್ವರ ದೇವಸ್ಥಾನ, ರೋಣ
    * ಗಜೇಂದ್ರಗಡ ಕೋಟೆ, ಗಜೇಂದ್ರಗಡ
    * ಶ್ರೀ ಕಾಲಕಾಲೇಶ್ವರ ಕ್ಷೇತ್ರ, ಗಜೇಂದ್ರಗಡ
    * ಶ್ರೀ ನಾಗೇಶ್ವರ ದೇವಸ್ಥಾನ (ಜೋಡು ಕಳಸ), ಸೂಡಿ
    * ರಸದ ಬಾವಿ ನಾಗನ ಹೊಂಡ, ಗಜೇಂದ್ರಗಡ
    * ಶ್ರೀ ಭೀಮಾಂಬಿಕ ದೇವಸ್ಥಾನ, ಇಟಗಿ
    * ಶ್ರೀ ಶಂಭುಲಿಂಗ ದೇವಸ್ಥಾನ, ಇಟಗಿ

    ಶಿರಹಟ್ಟಿ ತಾಲೂಕು:
    * ಶ್ರೀ ಫಕೀರೇಶ್ವರ ಮಠ. ಶಿರಹಟ್ಟಿ
    * ಶ್ರೀ ಹೊಳಲಮ್ಮದೇವಿ ದೇವಸ್ಥಾನ, ಶ್ರೀಮಂತಗಡ
    * ಕೋಟೆ, ಶಿರಹಟ್ಟಿ
    * ಶ್ರೀ ವರವಿ ಮೌನೇಶ್ವರ ದೇವಸ್ಥಾನ, ಶಿರಹಟ್ಟಿ
    * ಮಾಗಡಿ ಕೆರೆ (ಪಕ್ಷಿ ಧಾಮ) ಶಿರಹಟ್ಟಿ

    ಲಕ್ಷ್ಮೇಶ್ವರ ತಾಲೂಕು:
    * ಶ್ರೀ ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ.
    * ಶಂಖ ಬಸದಿ, ಲಕ್ಷ್ಮೇಶ್ವರ

    ನರಗುಂದ ತಾಲೂಕು:
    * ಶ್ರೀ ವೆಂಕಟೇಶ್ವರ ದೇವಸ್ಥಾನ.

    ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ವಿಶೇಷ ಪ್ರಯತ್ನದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ಗುರುತಿಸಲಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ 48 ತಾಣಗಳು ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ರೂಪ ಕೊಡುವ ಉದ್ದೇಶದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ರಾಜ್ಯದ 1,275 ತಾಣಗಳನ್ನು ಗುರುತಿಸಲಾಗಿದ್ದು, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದನ್ನೂ ಓದಿ: ಮತಗಳ್ಳತನ ಸಂಬಂಧ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ: ಛಲವಾದಿ ನಾರಾಯಣಸ್ವಾಮಿ

  • ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ ಸ್ಕಂದಗಿರಿ – ಇಲ್ಲಿದೆ ಸಂಪೂರ್ಣ ಮಾಹಿತಿ

    ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ ಸ್ಕಂದಗಿರಿ – ಇಲ್ಲಿದೆ ಸಂಪೂರ್ಣ ಮಾಹಿತಿ

    ಸ್ಕಂದಗಿರಿ (Skandagiri) ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಪ್ರಕೃತಿ ಮಡಿಲಿನಲ್ಲಿರುವ ಒಂದು ಐತಿಹಾಸಿಕ ಸ್ಥಳ, ಈ ಬೆಟ್ಟ ಸಮುದ್ರ ಮಟ್ಟದಿಂದ 4429 ಮೀಟರ್ ಎತ್ತರದಲ್ಲಿದೆ. ಇಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಲು ನಿರ್ಮಿಸಿದ ಕೋಟೆ ಸಹ ಇದ್ದು, ಪ್ರಕೃತಿ ಪ್ರಿಯರು ಹಾಗೂ ಸ್ಮಾರಕಗಳ ಬಗ್ಗೆ ವಿಶೇಷ ಆಸಕ್ತಿ ಇರುವವರಿಗೆ ಈ ಜಾಗ ಖಂಡಿಯವಾಗಿಯೂ ಇಷ್ಟವಾಗುತ್ತದೆ.

    ಈ ಬೆಟ್ಟಕ್ಕೆ ಕಲವರ ದುರ್ಗಾ ಎಂದೂ ಸಹ ಕರೆಯಲಾಗುತ್ತದೆ. ಸುಮಾರು ಎಂಟು ಕಿಮೀ ನಡೆದು ಸಾಗಬೇಕಾದ ದಾರಿಯಲ್ಲಿ ಚಾರಣಿಗನಿಗೆ ಆಯಾಸದ ಅರಿವೇ ಆಗದಂತೆ ಈ ಪರ್ವತ ಕೋಟೆಯ ಮೇಲೆ ಕರೆದೊಯ್ಯುತ್ತದೆ. ಈ ದಾರಿಯನ್ನು ಕ್ರಮಿಸಲು ನಾಲ್ಕು ಗಂಟೆಗಳ ಕಾಲ ಸಾಕಾಗುತ್ತದೆ. ಅಲ್ಲಿನ ಪ್ರಕೃತಿಯನ್ನು ಸವಿಯಲು ನಿಮಗೆ ಎಷ್ಟು ಸಮಯ ಇದ್ದರೂ ಸಾಲುವುದಿಲ್ಲ. ಬೆಟ್ಟದ ತುತ್ತತುದಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಲ್ಲಿನ ದೇವಸ್ಥಾನ ಸಹ ಇದೆ.

    ಮುಂಜಾನೆ 4 ಅಥವಾ 5 ಗಂಟೆ ವೇಳೆಗೆ ಈ ಬೆಟ್ಟ ಏರಲು ಸೂಕ್ತ ಸಮಯ. ಈ ಸಮಯದಲ್ಲಿ ಏರಿದರೆ ಬಿಸಿಲು ಹೆಚ್ಚಾಗುವ ಮುನ್ನವೇ ವಾಪಸ್ ಆಗಲು ಸಾಧ್ಯವಾಗುತ್ತದೆ. ಈ ವೇಳೆ ಮಂಜು ಸಹ ಬೀಳುವುದರಿಂದ ತಂಪಾದ ವಾತವರಣ ಇರುತ್ತದೆ. ಮತ್ತೆ ತಡವಾದರೆ ಬಿಸಿಲಿನ ತಾಪಕ್ಕೆ ಸಿಕ್ಕು ಸಮಸ್ಯೆ ಎದುರಿಸಬೇಕಾಗಬಹುದು. ಅದಕ್ಕಾಗಿ ಮುಂಜಾನೆ ಬೇಗ ಬೆಟ್ಟ ಏರುವುದು ಉತ್ತಮ.

    ಸ್ಕಂದಗಿರಿಯ ತಪ್ಪಲಿನಲ್ಲಿ ಪಾಪಾಗ್ನಿ ಮಠ ಸಹ ಇದ್ದು, ಇಲ್ಲಿ ಚಾರಣಿಗರು ಆಯಾಸ ನಿವಾರಿಸಿಕೊಳ್ಳಬಹುದು. ಇದನ್ನು ಹೊರತು ಪಡಿಸಿದರೆ ಇಲ್ಲಿ ಯಾವುದೇ ಅಂಗಡಿ ಇನ್ನಿತರೆ ಸೌಲಭ್ಯಗಳಿಲ್ಲ. ಅದಕ್ಕಾಗಿ ಪ್ರವಾಸಿಗರು ಸೂಕ್ತ ನೀರಿನ ವ್ಯವಸ್ಥೆ, ಆಹಾರದ ಪೊಟ್ಟಣಗಳನ್ನು ತರುವುದು ಒಳ್ಳೆಯದು.

    ಸ್ಕಂದಗಿರಿ ಬೆಟ್ಟಕ್ಕೆ ಹೋಗುವುದು ಹೇಗೆ?
    ಬೆಂಗಳೂರಿನಿಂದ (Bengaluru) ಚಿಕ್ಕಬಳ್ಳಾಪುರಕ್ಕೆ ಹೋಗುವ ಮಾರ್ಗದಲ್ಲಿ ನಂದಿ ಕ್ರಾಸ್‍ನಿಂದ ಎಡಕ್ಕೆ ತಿರುಗಿದರೆ ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಇತಿಹಾಸ ಪ್ರಸಿದ್ಧ ಭೋಗನಂದಿಶ್ವರ ದೇವಾಲಯದ ಸಿಗುತ್ತದೆ. ಅಲ್ಲಿಂದ ಪುನಃ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಸಾಗಿದರೆ ಕಳವಾರ ಎಂಬ ಗ್ರಾಮ ಸಿಗುತ್ತದೆ ಇಲ್ಲಿಂದ ಸ್ವಲ್ಪ ದೂರದಲ್ಲೇ ಸ್ಕಂದಗಿರಿ ಬೆಟ್ಟ ನಿಮಗೆ ಸಿಗುತ್ತದೆ. ಒಟ್ಟಾರೆ ಬೆಂಗಳೂರಿನಿಂದ ಸುಮಾರು 70 ಕಿಮೀ ದೂರದಲ್ಲಿ ಈ ಸ್ಥಳ ಇದೆ.

    ಇಲ್ಲಿಗೆ ಚಾರಣಕ್ಕೆ ಬರಬೇಕಾದರೆ ಮುಂಚಿತವಾಗಿಯೇ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಬುಕ್ಕಿಂಗ್ ಮಾಡಿಸಿಕೊಂಡಿರಬೇಕು. ಪ್ರತಿಯೊಬ್ಬರಿಗೂ 300 ರೂ. ನಿಗದಿಪಡಿಸಲಾಗಿದೆ.

  • ಸೈಂಟ್ ಮೇರೀಸ್ ಭೂಲೋಕದ ಮೇಲಿನ ಸ್ವರ್ಗ- ಸಮುದ್ರದ ಒಡಲಲ್ಲಿ ದಿನಪೂರ್ತಿ ಖುಷಿ

    ಸೈಂಟ್ ಮೇರೀಸ್ ಭೂಲೋಕದ ಮೇಲಿನ ಸ್ವರ್ಗ- ಸಮುದ್ರದ ಒಡಲಲ್ಲಿ ದಿನಪೂರ್ತಿ ಖುಷಿ

    ದು ಭೂಲೋಕದ ಮೇಲಿನ ಸ್ವರ್ಗ..! ಕಳೆದ ನಾಲ್ಕು ತಿಂಗಳಿಂದ ಆ ಸ್ವರ್ಗಕ್ಕೆ ಬಾಗಿಲು ಹಾಕಲಾಗಿತ್ತು. ಸ್ವರ್ಗಕ್ಕೆ ಹೋಗಲಾಗದೆ, ಜನರೆಲ್ಲಾ ಭೂಮಿ ಮೇಲೆಯೇ ಅಲೆದಾಡುತ್ತಿದ್ದರು. ಇದೀಗ ಸ್ವರ್ಗದ ಬಾಗಿಲು ತೆರೆದಿದ್ದು ಜನ ಹಾಡುತ್ತಾ.. ಕುಣಿಯುತ್ತಾ ಮಸ್ತ್ ಮಜಾ ಮಾಡುತ್ತಾ ಸುಂದರ ಸ್ವರ್ಗಕ್ಕೆ ಟ್ರಿಪ್ ಶುರು ಮಾಡಿದ್ದಾರೆ.

    ಕಣ್ಣು ಹಾಯಿಸಿದಲ್ಲೆಲ್ಲಾ ನೀಲಿ ನೀರು.., ರಭಸವಾಗಿ ಬೀಸೋ ತಂಗಾಳಿ.., ಆಕಾಶದಲ್ಲಿ ಹಾರಾಡೋ ಅನುಭವ..
    ಈ ಖುಷಿ ಒಟ್ಟಿಗೆ ಒಂದೇ ಕಡೆ ಸಿಗಬೇಕಾದ್ರೆ ನೀವು ಉಡುಪಿಗೆ ಬರಬೇಕು. ಮಲ್ಪೆಗೆ ಬಂದು ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವ ಬೋಟ್ ಹತ್ತಬೇಕು. ಬೋಟ್ ಹತ್ತುತ್ತಿದ್ದಂತೆ ಕಿವಿಗೆ ಡೀಜೆ ಮ್ಯೂಸಿಕ್ ಅಪ್ಪಳಿಸುತ್ತದೆ. ಕೆಳಗೆ ಸಮುದ್ರ.. ಮೇಲೆ ಆಗಸ ಕಿವಿಗಪ್ಪಳಿಸೋ ಹಾಡು ಯಾರಿಗುಂಟು ಯಾರಿಗಿಲ್ಲ ಅಷ್ಟು ಎಂಜಾಯ್ ಮಾಡಬಹುದು.

    ಮಳೆಗಾಲದಲ್ಲಿ ಮೂರೂವರೆ ತಿಂಗಳು ಸಂಪೂರ್ಣ ಬಂದ್ ಆಗಿದ್ದ ಉಡುಪಿಯ ಸೈಂಟ್ ಮೇರೀಸ್ ಪ್ರವಾಸ ಇದೀಗ ಮತ್ತೆ ಆರಂಭವಾಗಿದೆ. ಬೆಳಗ್ಗೆ 10 ಗಂಟೆಯಿಂದ ಟ್ರಿಪ್ ಶುರುವಾಗುತ್ತದೆ. ಸಂಜೆಯ ತನಕ ನಾಲ್ಕು ಸುತ್ತ ನೀರು ನಡುವೆ ಇರುವ ಭೂಲೋಕದ ಸ್ವರ್ಗಕ್ಕೆ ಹೋಗಿ ಎಂಜಾಯ್ ಮಾಡಬಹುದು. ಮಲ್ಪೆ ಬೋಟ್ ಪಾಯಿಂಟ್ ನಿಂದ ಆರೂವರೆ ಕಿಲೋಮೀಟರ್ ದೂರವಿರುವ ಸೈಂಟ್ ಮೇರೀಸ್ ದ್ವೀಪದ ಕೂಗಳತೆ ದೂರದಲ್ಲಿ ದೊಡ್ಡ ಬೋಟನ್ನು ನಿಲ್ಲಿಸಲಾಗುತ್ತದೆ. ಸಮುದ್ರದ ಮಧ್ಯೆಯೇ ಮತ್ತೊಂದು ಚಿಕ್ಕ ಬೋಟ್‍ಗೆ ಎಲ್ಲಾ ಪ್ರವಾಸಿಗರನ್ನು ಶಿಫ್ಟ್ ಮಾಡಲಾಗುತ್ತದೆ. ಆ ಬೋಟ್ ದ್ವೀಪ ತಲುಪುತ್ತದೆ. ದೊಡ್ಡ ಬೋಟ್ ಮಲ್ಪೆಗೆ ವಾಪಾಸ್ಸಾಗುತ್ತದೆ

    ಫೋಟೋಗಳಲ್ಲಿ ಸೈಂಟ್ ಮೇರೀಸನ್ನು ಕಣ್ತುಂಬಿಕೊಂಡಿದ್ದ ಮೈಸೂರಿನ ಮಾಲಿನಿ ಮತ್ತು ಅವರ ಕುಟುಂಬ ಉಡುಪಿಗೆ ಬಂದಿತ್ತು. ಸೈಂಟ್ ಮೆರೀಸ್ ಗೂ ಭೇಟಿ ನೀಡಿದೆ. ಜೀವನದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಯಾನ ಮಾಡಿದ ಅನುಭವ ಈ ಕುಟುಂಬಕ್ಕೆ ಸಿಕ್ಕಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಲಿನಿ, ನಾನು ಗಾಳಿಯಲ್ಲಿ ತೇಲಾಡುತ್ತಿರುವ ಅನುಭವವಾಗುತ್ತಿದೆ. ಅದ್ಭುತ ಅನ್ನೋದನ್ನು ನಾನಿಲ್ಲಿ ಕಂಡುಕೊಂಡೆ ಎಂದು ಹೇಳಿದರು. ಸುಮಾರು 15 ಕಿಲೋಮೀಟರ್ ಅರಬ್ಬಿ ಸಮುದ್ರದಲ್ಲಿ ಯಾನ ಮಾಡಿ ಬಹಳ ಖುಷಿಯಾಯ್ತು ಅಂತ ಹೇಳಿದರು.

    ಪ್ರವಾಸಿಗ ನಿರಂಜನ್ ಮಾತನಾಡಿ, ಎರಡನೆ ಬಾರಿಗೆ ಸೈಂಟ್ ಮೆರೀಸ್ ನೋಡ್ತಾಯಿದ್ದೇನೆ. ಮಕ್ಕಳೂ ಬಹಳ ಎಂಜಾಯ್ ಮಾಡಿದ್ದಾರೆ. ಮತ್ತೆ ಮತ್ತೆ ಸೈಂಟ್ ಮೇರೀಸ್‍ಗೆ ಬರಬೇಕೆಂದು ಡಿಸೈಡ್ ಮಾಡಿದ್ದೇವೆ ಎಂದರು.

    ಭಾರತವನ್ನು ಕಂಡು ಹಿಡಿದ ಕಲ್ಲಿಕೋಟೆಗೆ ಹೋಗುವ ಮೊದಲು ಸೈಂಟ್ ಮೇರೀಸ್ ದ್ವೀಪಕ್ಕೆ ಬಂದಿದ್ದ. ಇಲ್ಲಿನ ಸೌಂದರ್ಯವನ್ನು ಆತ ಬಹಳ ವರ್ಣಿಸಿದ್ದ. ಸೈಂಟ್ ಮೇರೀಸ್ ದ್ವೀಪದಲ್ಲಿ ಕಾಣಸಿಗುವ ವಿಭಿನ್ನಾಕಾರದ ಕಲ್ಲುಗಳು ಎಲ್ಲರನ್ನು ಸೆಳೆಯುತ್ತದೆ. ಕಲ್ಲಿನ ಮೇಲೆ ಅಪ್ಪಳಿಸೋ ತೆರೆಗಳನ್ನು ಅನುಭವಿಸೋದೆ ಚಂದ. ಸೂರ್ಯಾಸ್ತದ ಸಂದರ್ಭದಲ್ಲಿ ಇದ್ರಂತೂ ಇಡೀ ಸಮುದ್ರ ಬಂಗಾರದ ಬಣ್ಣದಲ್ಲಿ ಹೊಳೆಯುತ್ತದೆ. ಈ ಬಾರಿ ಸೇಫ್ಟಿ ದೃಷ್ಟಿಯಿಂದ ದೊಡ್ಡ ಬೋಟ್, ಅದರಲ್ಲೊಂದು ವಾಶ್ ರೂಮನ್ನೂ ನಿರ್ಮಾಣ ಮಾಡಲಾಗಿದೆ. ದೇಶ ವಿದೇಶದ ಪ್ರವಾಸಿಗರಿಗೆ ಇದು ಬಹಳ ಇಷ್ಟವಾಗಿದೆ.

    ಬೋಟ್ ಮಾಲೀಕ ಪ್ರಕಾಶ್ ಕೊಡವೂರು, ಮಾತನಾಡಿ ಬೋಟ್‍ನಲ್ಲಿ ಲೈಫ್ ಜಾಕೆಟ್- ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿದೆ. 250 ರುಪಾಯಿ ಟಿಕೆಟ್‍ನಲ್ಲಿ ಸೈಂಟ್ ಮೇರೀಸ್ ಕಣ್ತುಂಬಿಕೊಳ್ಳಬಹುದು. ಮಕ್ಕಳಿಗೆ 150 ರುಪಾಯಿ ಟಿಕೆಟ್ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಮಳೆಗಾಲ ಆರಂಭವಾಗುವವರೆಗೆ ಸೈಂಟ್ ಮೇರೀಸ್ ಎಂಬ ಭೂಲೋಕದ ಮೇಲಿನ ಸ್ವರ್ಗ ಓಪನ್ ಇರುತ್ತದೆ. ಅರ್ಧಗಂಟೆ ದೊಡ್ಡ ಬೋಟ್‍ನಲ್ಲಿ ಪಯಣ, ಅಲ್ಲಿಂದ ಸಣ್ಣ ಬೋಟ್ ಮೂಲಕ ದ್ವೀಪಕ್ಕೆ ಶಿಫ್ಟ್, ಅಲ್ಲಿ ಬೇಕಾದಷ್ಟು ಸುತ್ತಾಟ, ಮತ್ತೆ ಎರಡು ಬೋಟ್‍ಗಳಲ್ಲಿ ಮಲ್ಪೆಗೆ ವಾಪಾಸ್. ಇಷ್ಟಕ್ಕೆ ತಗಲುವ ವೆಚ್ಚ 250 ರೂಪಾಯಿ ಮಾತ್ರ. ತಮಗೆ ಬೇಕಾದ ತಿಂಡಿ- ಊಟ ಕೊಂಡೊಯ್ದು ಫ್ಯಾಮಿಲಿ.. ಫ್ರೆಂಡ್ಸ್ .., ಲವ್ವರ್ಸ್ ಸಿಕ್ಕಾಪಟ್ಟೆ ಎಂಜಾಯ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ

    ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ

    ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಹಲವು ಬೀಚ್‍ಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಕೆಲವೊಂದು ಜಲಪಾತಗಳು ಮೂಲ ಸೌಕರ್ಯದ ಕೊರತೆಯಿಂದಾಗಿ ದೂರ ಉಳಿದುಕೊಂಡಿವೆ. ಈ ಸಾಲಿನಲ್ಲಿ ಅಡ್ಯಾರ್ ಜಲಪಾತವೂ ಸೇರುತ್ತದೆ.

    ಮಂಗಳೂರು ನಗರದಿಂದ 10 ಕಿ.ಮೀ ದೂರದ ಅಡ್ಯಾರ್ ಎಂಬಲ್ಲಿ ಈ ಜಲಪಾತವಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಚ್ಚಿಲ್‍ನಿಂದ ಎಡಕ್ಕೆ ಸಾಗಿದರೆ ಸಿಗೋ ಈ ಫಾಲ್ಸ್ ವಿದ್ಯಾರ್ಥಿಗಳ ನೆಚ್ಚಿನ ವೀಕೆಂಡ್ ಸ್ಪಾಟ್ ಆಗಿದೆ. ಅಡ್ಯಾರ್ ಫಾಲ್ಸ್ ಅಂತಾನೇ ಹೆಸರುವಾಸಿಯಾಗಿರೋ ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಸ್ವರ್ಗವನ್ನೇ ನಾಚಿಸುವ ಸೌಂದರ್ಯ ಪಡೆಯುತ್ತದೆ.

    ಬೆಟ್ಟದ ಮೇಲಿಂದ ಹಾಲ್ನೊರೆಯ ಹಾಗೆ ಹರಿದು ಬರೋ ನೀರು ಲಲನೆಯ ರೀತಿ ಹರಿಯುತ್ತದೆ. ಸುಮಾರು 40 ಅಡಿ ಎತ್ತರದಿಂದ ಧುಮುಕುವ ನೀರಿನ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು. ಹೆಚ್ಚಿನ ಜಲಪಾತಗಳು ರಭಸದಿಂದ ಹರಿದು, ಪ್ರಪಾತ ಸೇರುವ ಕಾರಣ ಕೆಲವೊಮ್ಮೆ ಪ್ರವಾಸಿಗರ ಪಾಲಿಗೆ ಅವು ಅಪಾಯಕಾರಿಯಾಗಿರುತ್ತದೆ. ಆದರೆ ವಳಚ್ಚಿಲ್ ಜಲಪಾತದಲ್ಲಿ ನೀರು ರಭಸವಾಗಿ ಹರಿಯದೆ, ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ ಶಾಂತವಾಗಿ ಹರಿಯುತ್ತದೆ. ಹಾಗಾಗಿಯೇ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಯಾರ್ ಫಾಲ್ಸ್ ಗೆ ಬರುತ್ತಾರೆ.

    ಅಡ್ಯಾರ್ ಜಲಪಾತ ಜೂನ್‍ನಲ್ಲಿ ಮಳೆಯೊಂದಿಗೆ ತೆರೆದುಕೊಳ್ಳುವ ಜಲಪಾತ ನವಂಬರ್‍ವರೆಗೂ ವೈಭವದಿಂದ ಮೇಳೈಸುತ್ತದೆ. ಆದರೆ ಫಾಲ್ಸ್ ಗೆ ಹೋಗೋಕೆ ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿಯೇ ಜನ ಫಾಲ್ಸ್ ವೈಭವ ಕಾಣೋಕೆ ಹಿಂಜರಿಯುತ್ತಾರೆ. ಇನ್ನೊಂದೆಡೆ ಪೋಲಿಗಳು ಈ ಫಾಲ್ಸ್ ನ್ನು ಜಾಲಿ ಮಾಡೋಕೆ ಬಳಸೋದ್ರಿಂದ ಮದ್ಯದ ಬಾಟಲ್ ಗಳು, ಪ್ಲಾಸ್ಟಿಕ್ ಚೀಲಗಳು ಇದರ ಸೌಂದರ್ಯಕ್ಕೆ ಧಕ್ಕೆ ತಂದಿದೆ.

    ಒಟ್ಟಿನಲ್ಲಿ ಫಾಲ್ಸ್ ನೋಡೋಕೆ ಪಶ್ಚಿಮ ಘಟ್ಟಗಳ ತಪ್ಪಲಿಗೆ ಹೋಗೋ ಜನ ಮಂಗಳೂರಿಗೆ ಕೂಗಳತೆ ದೂರದಲ್ಲಿರೋ ಫಾಲ್ಸ್ ನ ಸೌಂದರ್ಯ ನೋಡೋ ಅವಕಾಶ ವಂಚಿತರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತು ಜಲಪಾತ ಸೌಂದರ್ಯ ಉಳಿಸಿದ್ರೆ ಕರಾವಳಿಯ ಪ್ರವಾಸಿ ತಾಣಗಳ ಪಟ್ಟಿಗೆ ಅಡ್ಯಾರ್ ಫಾಲ್ಸ್ ಕೂಡಾ ಸೇರಿ, ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದು.

    https://youtu.be/iYalE_HuW6k

  • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

    ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಒಂದು ತಿಂಗಳಿನಿಂದ ಎಡೆಬಿಡದೆ ಮಳೆ ಸುರೊಯುತ್ತಿದೆ.  ವರುಣ ದೇವನ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ  ಕಡಿಮೆಯಾಗಿದ್ದು, ಕರ್ನಾಟಕದ ಕಾಶ್ಮೀರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಮಲೆನಾಡಿನ ವಾತಾವರಣವನ್ನು ಅನುಭವಿಸಬೇಕು ಎಂದು ಪ್ಲಾನ್ ಮಾಡುವರು ಮಡಿಕೇರಿ ಸುತ್ತಮುತ್ತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಇನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಇಬ್ಬನಿಯ ಸಿಂಚನದಲ್ಲಿ ಮನಸೋಲುತ್ತಿದ್ದಾರೆ. ಟ್ರಾಫಿಕ್, ಧೂಳಿನ ನಡುವೆ ಇದ್ದವರು ಮನತಣಿಸುವ ತಂಪಾದ ಪರಿಸರಕ್ಕೆ ಮೂಕವಿಸ್ಮಿತರಾಗುತ್ತಿದ್ದಾರೆ.

    ವೀಕೆಂಡ್‍ಗಳಲ್ಲಂತೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಂಜಿನ ವೈಭವದಿಂದ ಭೂಲೋಕದಲ್ಲಿ ಸ್ವರ್ಗ ಸೃಷ್ಠಿಯಾದಂತೆ ಭಾಸವಾಗುತ್ತಿದೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ.

    ಮಂಜಿನ ಕಣ್ಣಾಮುಚ್ಚಾಲೆ, ಮಳೆಯ ಅರ್ಭಟ, ಮೈಕೊರೆಯುವ ಚಳಿ, ಜೊತೆಗೆ ಅಬ್ಬರಿಸುವ ಗಾಳಿಗೆ ಕೂರ್ಗ್ ಸ್ಪೆಷಲ್ ಟೇಸ್ಟಿ ಕಾಫಿ ಹಿತ ಅನುಭವ ನೀಡುತ್ತಿದ್ದು ಟೂರಿಸ್ಟ್ ಗಳು ಇವೆಲ್ಲದಕ್ಕೆ ಮನಸೋಲ್ತಿದ್ದಾರೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ. ಗಿರಿಕಂದಕಗಳ ನಡುವೆ ಮಂಜಿನ ಥಕಧಿಮಿತ ನೋಡಲು 2 ಕಣ್ಣುಗಳು ಕೂಡ ಸಾಲುತ್ತಿಲ್ಲ. ಮಂಜಿನ ಸ್ಪರ್ಶ ಸವಿಯುತ್ತ ಎಂಜಾಯ್ ಮಾಡುವ ಪ್ರವಾಸಿಗರಿಗೆ ಕೊಡಗಿನಿಂದ ಹೋಗಲು ಮನಸೇ ಬರ್ತಿಲ್ಲ ಅಂತಾ ಹೇಳುತ್ತಿದ್ದಾರೆ.

    ಒಟ್ಟಾರೆಯಾಗಿ ಮಂಜಿನ ನಗರಿ ಪ್ರವಾಸಿಗರನ್ನು ಒಂದೆಡೆ ಸೆಳೆಯುತ್ತಿದ್ರೆ. ಅಬ್ಬರಿಸಿ ಬೊಬ್ಬರೆಯುತ್ತಿರುವ ಮಳೆಯಿಂದ ಕೊಡಗಿನ ಜನ ಮಾತ್ರ ತತ್ತರಗೊಂಡಿದ್ದಾರೆ. ಮನತಣಿಸುವ ಮಂಜಿಗೆ ಪ್ರವಾಸಿಗರು ಈಗಾಗ್ಲೇ ಮನಸೋತಿದ್ದಾರೆ. ಕೊಡಗನ್ನು ಮತ್ತೇ ಮತ್ತೇ ನೋಡಬೇಕಾನುವ ಮಟ್ಟಿಗೆ ಮಂಜಿನ ಲೋಕ ಹುಚ್ಚು ಹಿಡಿಸಿದೆ. ಮಳೆಗಾಲದಲ್ಲಿ ಕಂಗೊಳಿಸುವ ಶ್ವೇತಸುಂದರಿ ಇಡೀ ಕೊಡಗನ್ನು ಆವರಿಸಿ ಹಿತವಾದ ಅನುಭವ ನೀಡ್ತಿದ್ದು ಪ್ರವಾಸಿಗರು ಟೆನ್ಷನ್ ಮರೆತು ರಿಫ್ರೆಶ್ ಆಗುತ್ತಿದ್ದಾರೆ. ನೀವು ಕೂಡ ಕೊಡಗಿಗೊಮ್ಮೆ ಆಗಮಿಸಿ ಸೂಪರ್ ವೆದರ್ ನ ಫೀಲ್ ಮಾಡಿ.