Tag: Karnataka State Commission for Women

  • PUBLiC TV Impact | ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಮಹಿಳಾ ಆಯೋಗ ಪತ್ರ

    PUBLiC TV Impact | ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಮಹಿಳಾ ಆಯೋಗ ಪತ್ರ

    ಬೆಂಗಳೂರು: ಎರಡು ದಿನದ ಹಿಂದಷ್ಟೇ ಮೆಟ್ರೋ ನಿಲ್ದಾಣದಲ್ಲಿ ತಾಯಿಯೊಬ್ಬಳು ಮಗುವಿಗೆ ಹಾಲುಣಿಸಲು ಪರದಾಡಿದ್ದ ಘಟನೆಯನ್ನು ಪಬ್ಲಿಕ್ ಟಿವಿ (PUBLiC TV) ವರದಿ ಮಾಡಿತ್ತು. ಈ ಬೆನ್ನಲ್ಲೇ ಘಟನೆ ಬಗ್ಗೆ ಅಲರ್ಟ್ ಆದ ರಾಜ್ಯ ಮಹಿಳಾ ಆಯೋಗ (Karnataka State Commission for Women) ಬಿಎಂಆರ್‌ಎಲ್‌ಗೆ (BMRCL) ಪತ್ರ ಬರೆದು ಆರೈಕೆ ಕೇಂದ್ರ ಸ್ಥಾಪಿಸುವಂತೆ ಸೂಚಿಸಿದೆ.

    ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಸಲು ಬಂದ ತಾಯಿಯೊಬ್ಬಳು ತನ್ನ ಮಗುವಿಗೆ ಹಾಲುಣಿಸಲು ಪರದಾಡಿದ್ದ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ಸುದ್ದಿ ಬಿತ್ತರಿಸುವ ಮೂಲಕ ಮೆಟ್ರೋ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಈ ಬೆನ್ನಲ್ಲೇ ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ ಬಿಎಂಆರ್‌ಎಲ್‌ಗೆ ಪತ್ರ ಬರೆದಿದೆ.ಇದನ್ನೂ ಓದಿ: ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ – ಪರಿಸ್ಥಿತಿ ಉದ್ವಿಗ್ನ

    ಸೋಮವಾರ ಟ್ರಿನಿಟಿ ಮೆಟ್ರೋ ನಿಲ್ದಾಣಕ್ಕೆ (Trinity Metro Station) ಬಂದಿದ್ದ ತಾಯಿ ತನ್ನ ಮಗುವಿಗೆ ಹಾಲುಣಿಸಲು ಮೆಟ್ರೋ ನಿಲ್ದಾಣದ ಒಳಭಾಗದಲ್ಲಿ ಪರದಾಡಿದ್ದರು. ಅಕ್ಕಪಕ್ಕದ ಗೋಡೆ ಮರೆಯಲ್ಲಿ ನಿಂತು, ನೆಲದ ಮೇಲೆ ಕೂತು ಪರದಾಡಿದ್ದ ಮಹಿಳೆ ವಿಡಿಯೋ ವೈರಲ್ ಆಗಿತ್ತು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರವಿದೆ. ಮೆಟ್ರೋ ನಿಲ್ದಾಣಗಳಲ್ಲಿ ಯಾಕೆ ಇಲ್ಲ ಎನ್ನುವ ಪ್ರಶ್ನೆ ಉದ್ಬವ ಆಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ಅಧಿಕಾರಿಗಳಿಗೆ ಪ್ರಶ್ನೆಗಳಿಟ್ಟಿತ್ತು. ಈ ಬೆನ್ನಲ್ಲೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Chowdhary) ಬಿಎಂಆರ್‌ಸಿಎಲ್ ಎಂಡಿಗೆ ಪತ್ರ ಬರೆದು ಕೂಡಲೇ ಆರೈಕೆ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.

    ಪತ್ರದಲ್ಲೇನಿದೆ….?
    * ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಆರೈಕೆ ಕೇಂದ್ರಗಳು ಈಗಾಗಲೇ ಇವೆ.
    * ಆದರಂತೆ ನಮ್ಮ ಮೆಟ್ರೋದಲ್ಲಿ ಮಹಿಳೆಯ ಆರೈಕೆ ಕೇಂದ್ರ ಸ್ಥಾಪನೆ ಆಗಬೇಕು.
    * ಸೆ.16 ರಂದು ತಾಯಿಯೊಬ್ಬಳು ಮಗುವಿಗೆ ಹಾಲುಣಿಸಲು ಮೆಟ್ರೋ ಸ್ಟೇಷನ್‌ನಲ್ಲಿ ಪರದಾಡುತ್ತಿರುವ ಸುದ್ದಿ ಪ್ರಸಾರವಾಗಿದೆ.
    * ಪ್ರತಿ ಮೆಟ್ರೋ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ನಿರ್ಮಿಸಲು ಕ್ರಮವಹಿಸುವಂತೆ ಪತ್ರ.ಇದನ್ನೂ ಓದಿ: ಮೋದಿ ಅದ್ಭುತ ವ್ಯಕ್ತಿ, ಮುಂದಿನ ವಾರ ಅವರನ್ನ ಭೇಟಿಯಾಗ್ತೀನಿ: ಟ್ರಂಪ್‌

    ಈ ಬಗ್ಗೆ ಮಹಿಳಾ ಆಯೋಗ ಕ್ರಮಕ್ಕೆ ಆಗ್ರಹಿಸಿದೆ. ಕೂಡಲೇ ಮೆಟ್ರೋ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಕ್ರಮ ಕೈಗೊಂಡರೆ ತಾಯಿ ಮತ್ತು ಮಕ್ಕಳ ಪರದಾಟ ತಪ್ಪಲಿದೆ.

  • ಪ್ರಜ್ವಲ್ ಜರ್ಮನಿಯಲ್ಲಿರಲಿ, ಎಲ್ಲೇ ಇರಲಿ ಕ್ರಮಕ್ಕೆ ಸಿಎಂ ಆದೇಶಿಸಲಿ: ಅಲ್ಕಾ ಲಂಬಾ

    ಪ್ರಜ್ವಲ್ ಜರ್ಮನಿಯಲ್ಲಿರಲಿ, ಎಲ್ಲೇ ಇರಲಿ ಕ್ರಮಕ್ಕೆ ಸಿಎಂ ಆದೇಶಿಸಲಿ: ಅಲ್ಕಾ ಲಂಬಾ

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ರಾಜ್ಯ ಮಹಿಳಾ ಆಯೋಗ (Karnataka State Commission for Women) ಉತ್ತಮ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಸಹ ಎಸ್‍ಐಟಿ ರಚಿಸಿದೆ. ಈ ಪ್ರಕರಣದ ತನಿಖೆಯನ್ನು ಆದಷ್ಟು ಬೇಗ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ (Congress) ಅಧ್ಯಕ್ಷೆ ಅಲ್ಕಾ ಲಂಬಾ (Alka Lamba) ಹೇಳಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಸದಸ್ಯ ದೇವರಾಜ್ ಗೌಡ ಈ ಹಿಂದೆ ಬಿಜೆಪಿ ನಾಯಕರಿಗೆ ಪ್ರಜ್ವಲ್ ಬಗ್ಗೆ ಪತ್ರ ಬರೆದಿದ್ದರು. ಆದರೆ ಅಮಿತ್ ಶಾ, ಮೋದಿ ಹಾಗೂ ನಡ್ಡಾ ಇಲ್ಲಿಗೆ ಬಂದರು ಸಹ ಈ ವಿಚಾರದ ಬಗ್ಗೆ ಮಾತಾಡಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ, ದೇವೇಗೌಡ ಹಾಗೂ ಸ್ಮೃತಿ ಇರಾನಿ ಇದರ ಬಗ್ಗೆ ಮಾತಾಡಿಲ್ಲ. ಇವರು ಬೇಟಿ ಬಚಾವ್ ಬೇಟಿ ಪಡಾವ್ ಎನ್ನುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.

    ದೇವರಾಜ್ ಗೌಡ ಆರೋಪ ಮಾಡಿದ್ದರು ಲೋಕಸಭಾ ಚುನಾವಣೆಗೆ ಪ್ರಜ್ವಲ್ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ದೇವರಾಜ್ ಗೌಡ ಅವರು ಸುದ್ದಿಗೋಷ್ಠಿ ಮಾಡಿ ವೀಡಿಯೋ ಬಗ್ಗೆ ಪ್ರಸ್ತಾಪಿಸಿದ್ದರು. 3 ಸಾವಿರ ವೀಡಿಯೋ 1 ಸಾವಿರ ಜನ ಸಂತ್ರಸ್ತರು ಇದ್ದಾರೆ. ತಾಯಿ ವಯಸ್ಸಿನವರು, ಮಹಿಳಾ ಅಧಿಕಾರಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರದ ಮದದಲ್ಲಿ ಹೀಗೆ ಮಾಡಿದ್ದಾರೆ. ಮೋದಿಯವರು (Narendra Modi) ಇಂತವರನ್ನು ಸಮರ್ಥನೆ ಮಾಡಿಕೊಳ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ.

    ಕೇವಲ ಒಬ್ಬರು ಇವತ್ತು ದೂರು ಕೊಟ್ಟಿದ್ದಾರೆ. ನಾನು ಸಂತ್ರಸ್ತರಿಗೆ ಮನವಿ ಮಾಡುತ್ತೇನೆ, ಹೊರಗೆ ಬಂದು ದೂರು ಕೊಡಬೇಕು. ಅವರಿಗೆ ರಕ್ಷಣೆ ಕೊಡುತ್ತೇವೆ. ಯಾರೇ ದೂರು ಕೊಟ್ಟರು ಅವರಿಗೆ ರಕ್ಷಣೆ ಕೊಡುವ ಕೆಲಸ ಮಾಡ್ತೀವಿ. ಎಸ್‍ಐಟಿ ಅವರು ತನಿಖೆ ನಡೆಸಿ ಕಠಿಣ ಶಿಕ್ಷೆ ಕೊಡಿಸಬೇಕು. ಜರ್ಮನಿ ಇರಲಿ, ಎಲ್ಲೇ ಇರಲಿ ಅವರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಇದೇ ವೇಳೆ ಮೋದಿ ಪರಿವಾರ್ ಎಂದು ದೇವೇಗೌಡರ ಕುಟುಂಬದ ಜೊತೆ ಮೋದಿ ಫೋಟೋ ಹಾಗೂ ವಿವಿಧ ರಾಜ್ಯಗಳಲ್ಲಿ ಆರೋಪ ಹೊತ್ತ ನಾಯಕರ ಜೊತೆಗಿನ ಮೋದಿ ಫೋಟೋ ಬಿಡುಗಡೆ ಮಾಡಿ ಅವರು ಆಕ್ರೋಶ ಹೊರ ಹಾಕಿದ್ದಾರೆ.

  • ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ?- 5 ವರ್ಷಗಳ ಬಳಿಕ ಮಗಳನ್ನು ಹುಡುಕಿ ಬಂದ ಅಪ್ಪ-ಅಮ್ಮ

    ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ?- 5 ವರ್ಷಗಳ ಬಳಿಕ ಮಗಳನ್ನು ಹುಡುಕಿ ಬಂದ ಅಪ್ಪ-ಅಮ್ಮ

    – ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಯುವತಿ
    – ಜೆರಾಕ್ಸ್ ಪ್ರತಿಯಿಂದ ಸಾವಿನ ಸತ್ಯ ಬೆಳಕಿಗೆ

    ಮಂಡ್ಯ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಮಗಳು ವರ್ಷ ಕಳೆಯುತ್ತಿದ್ದಂತೆ ಪೋಷಕರ ಸಂಪರ್ಕ ಕಡಿದುಕೊಂಡಿದ್ದಳು. ಪ್ರೀತಿಸಿದವನ ಜೊತೆ ಚೆನ್ನಾಗಿದ್ದಾಳೆ ಎಂದುಕೊಂಡಿದ್ದ ತಂದೆ-ತಾಯಿಗೆ ದೊಡ್ಡ ಅಘಾತ ಎದುರಾಗಿದ್ದು, ಐದು ವರ್ಷಗಳ ಹಿಂದೆಯೇ ಮಗಳು ಸಾವನ್ನಪ್ಪಿದ್ದಾಳೆ ಎಂಬ ಸತ್ಯ ಪೋಷಕರಿಗೆ ಅಘಾತವನ್ನು ಉಂಟು ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಐದು ವರ್ಷಗಳ ಬಳಿಕ ಮನೆಯಲ್ಲಿ ಸಿಕ್ಕ ಜೆರಾಕ್ಸ್ ಪ್ರತಿ ಮಗಳ ನಿಗೂಢ ಸಾವಿನ ಸತ್ಯವನ್ನು ಪೋಷಕರಿಗೆ ತಿಳಿಸಿದೆ. ಪ್ರರಕರಣ ಈಗ ಮಹಿಳಾ ಆಯೋಗ ಹಾಗೂ ಪೊಲೀಸ್ ಇಲಾಖೆ ಮೆಟ್ಟಿಲೇರಿದ್ದು, ಮಗಳ ಕಳೆದುಕೊಂಡ ಪೋಷಕರು ಮರ್ಯಾದೆಗಾಗಿ ಹತ್ಯೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ.

    ಏನಿದು ಪ್ರಕರಣ: ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹದೇವಮ್ಮ ಮಗಳ ಕಳೆದುಕೊಂಡು ಕಣ್ಣೀರುತ್ತಿದ್ದಾರೆ. ಹೊಟ್ಟೆ, ಬಟ್ಟೆಗಾಗಿ ಊರು ಬಿಟ್ಟು ಬೆಂಗಳೂರಲ್ಲೇ ಜೀವನ ಸಾಗುತ್ತಿದ್ದ ಇವರು, ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಕಷ್ಟ ಪಟ್ಟು ದುಡಿದ ದುಡ್ಡಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಆಸೆ ಹೊಂದಿದ್ದರು. ಅದಕ್ಕಾಗಿಯೇ ತನ್ನ 2ನೇ ಮಗಳು ಮೇಘಶ್ರೀಯನ್ನು ಬೊಮ್ಮನಹಳ್ಳಿಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಗೂ ಸೇರಿಸಿದ್ದರು.

    ಆದರೆ 2014-15ರಲ್ಲಿ ಮೇಘಶ್ರೀಗೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಸ್ವಾಮಿಗೌಡ ಎಂಬಾತನ ಪರಿಚಯವಾಗಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಕೂಡ ಮನೆ ಬಿಟ್ಟು ಮದುವೆಯಾಗಿದ್ದರು. ಮದುವೆ ಬಳಿಕ ಸ್ವಾಮಿಗೌಡ ಮತ್ತು ಮೇಘಶ್ರೀ ಇಬ್ಬರೂ ಬೆಂಗಳೂರಿನಲ್ಲೇ ವಾಸವಿದ್ದರು. ಮದುವೆ ಆದ ಒಂದು ವರ್ಷ ಮೇಘಶ್ರೀ ತನ್ನ ತಾಯಿ ಜೊತೆ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದಳು . ಆನಂತರ ದಿಢೀರ್ ಅಂತಾ ಮೇಘಶ್ರೀ ಫೋನ್ ಮಾಡುವುದನ್ನು ನಿಲ್ಲಿಸಿದ್ದಳು.

    ಅಲ್ಲಿಂದ ಇಲ್ಲಿಯವರೆಗೂ ಮಹದೇವಮ್ಮ ಮಗಳ ಫೋಟೋ ಹಿಡಿದು ಇಡೀ ಬೆಂಗಳೂರು ಅಲೆದಾಡಿದ್ದರು. ಆದರೆ ಕೆಲದಿನಗಳ ಹಿಂದೆ ಮನೆ ಕ್ಲೀನ್ ಮಾಡುವ ವೇಳೆ, ಮೇಘಶ್ರೀ ಇಟ್ಟಿದ್ದ ತಾನು ಮದುವೆಯಾಗಿರುವ ಯುವಕನ ವೋಡರ್ ಐಡಿ ಜೆರಾಕ್ಸ್ ಪತ್ತೆಯಾಗಿತ್ತು. ಜೆರಾಕ್ಸ್ ಪ್ರತಿಯಲ್ಲಿದ್ದ ಆತನ ವಿಳಾಸ ಹಿಡಿದುಕೊಂಡು ಮಹದೇವಮ್ಮ ಮಗಳನ್ನು ಹುಡುಕಲು ಪಾಂಡವಪುರಕ್ಕೆ ತೆರಳಿದ್ದರು. ಆದರೆ ಗ್ರಾಮಕ್ಕೆ ತೆರಳಿದ್ದ ಅವರಿಗೆ ಬಿಗ್ ಶಾಕ್ ಎದುರಾಗಿತ್ತು.

    ಹುಡುಗನ ಮನೆಗೆ ಹೋಗಿ ನನ್ನ ಮಗಳೆಲ್ಲಿ ಎಂದ ತಾಯಿಗೆ ನಿನ್ನ ಮಗಳು 5 ವರ್ಷಗಳ ಹಿಂದೆಯೇ ನಾಪತ್ತೆಯಾಗಿದ್ದಾಳೆ ಎಂಬ ಉತ್ತರ ಸಿಕ್ಕಿತ್ತು. ಆದರೆ ಸ್ಥಳೀಯರು ಮೇಘಶ್ರೀ ತಾಯಿ ಮಹದೇವಮ್ಮಗೆ ಬೇರೆಯದ್ದೇ ಸತ್ಯ ಹೇಳಿದರಂತೆ. ಮದುವೆ ಬಳಿಕ ಮನೆಗೆ ಬಂದ ಮೇಘಶ್ರೀ ಜೊತೆಗೆ ಜಾತಿ ವಿಚಾರವಾಗಿ ಸ್ವಾಮಿ ಗೌಡನ ತಂದೆ ಜಗಳ ತೆಗೆದಿದ್ದರಂತೆ. ಅಂದು ನಡೆದ ಜಗಳ ವಿಕೋಪಕ್ಕೆ ತಿರುಗಿ ಮೇಘಶ್ರೀ ಹತ್ಯೆಯಾಯಿತು ಎಂಬ ವಿಚಾರವನ್ನು ಸ್ಥಳೀಯರು ತಿಳಿಸಿದ್ದರು.

    ಈ ಮಾಹಿತಿ ಪಡೆದಿರುವ ಮೇಘಶ್ರೀ ಪೋಷಕರು, ಮಾನವ ಹಕ್ಕುಗಳ ಆಯೋಗದ ಸಹಾಯದ ಪಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಪ್ರಕರಣದ ಮಾಹಿತಿ ಪಡೆದ ಪೊಲೀಸರು 2015 ರಲ್ಲಿ ತಮ್ಮ ಠಾಣೆಯ ವ್ಯಾಪ್ತಿಯ ನಾಲೆಯಲ್ಲಿ ಸಿಕ್ಕ ಅಪರಿಚಿತ ಮಹಿಳೆಯ ಮೃತದೇಹದ ಫೋಟೋ ತೋರಿಸಿದ್ದರು. ಆ ಚಿತ್ರ ನೋಡಿದ ತಾಯಿ ಇದು ನನ್ನ ಮಗಳ ಮೃತದೇಹವೇ ಎಂದು ಗುರುತಿಸಿದ್ದರು. ಸ್ವಾಮಿಗೌಡನ ಮನೆಯವರು ಮರ್ಯಾದೆಗಾಗಿ ತನ್ನ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರು, ಮಹಿಳಾ ಆಯೋಗದ ಅಧ್ಯಕ್ಷರು, ಮಾನವ ಹಕ್ಕುಗಳ ರಕ್ಷಣಾ ಫೋರಂ ಮೊರೆ ಹೋಗಿದ್ದಾರೆ.

    ಐದು ವರ್ಷಗಳ ಹಿಂದಿನ ಪ್ರಕರಣಕ್ಕೆ ಈಗ ಮತ್ತೆ ಜೀವ ಬಂದಿದ್ದು, ಪೊಲೀಸರ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ.