Tag: Karnataka Rains

  • ಉಡುಪಿಯಲ್ಲಿ ಆಶ್ಲೇಷ ವರ್ಷಧಾರೆ- ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ವಿಸ್ತರಣೆ

    ಉಡುಪಿಯಲ್ಲಿ ಆಶ್ಲೇಷ ವರ್ಷಧಾರೆ- ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ವಿಸ್ತರಣೆ

    ಉಡುಪಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟುಬಿಟ್ಟು ಮಳೆ ಸುರಿಯುತ್ತಿದೆ. ಕಾರ್ಮೋಡ ಮುಸುಕಿದ ವಾತಾವರಣ ಇದ್ದು, ಇನ್ನೊಂದು ವಾರ ಮಳೆ ಮುಂದುವರಿಯಬಹುದು. ಆಗಸ್ಟ್ 2 ರಿಂದ ಆಶ್ಲೇಷಾ ನಕ್ಷತ್ರ ಆರಂಭವಾಗಿದೆ. ಆಗಸ್ಟ್ ತಿಂಗಳ ಆರಂಭದಿಂದಲೇ ಅಲ್ಲಲ್ಲಿ ಗಾಳಿ ಜೊತೆ ಮುಂಗಾರು ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಜಿಲ್ಲೆಯಾದ್ಯಂತ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿ 30 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಮೇ ಅಂತ್ಯದಲ್ಲಿ, ಜೂನ್ ತಿಂಗಳಲ್ಲಿ ಬಿತ್ತನೆ ಮತ್ತು ನಾಟಿ ಮಾಡಿದ್ದ ರೈತರಿಗೆ ಜುಲೈ ಅಂತ್ಯದ ಸಂದರ್ಭ ಆತಂಕ ಎದುರಾಗಿತ್ತು. ಮುಂಗಾರು ಮಳೆ ಮಾರುತಗಳು ಕ್ಷೀಣಿಸಿದ್ದು ಗದ್ದೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಸಮಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಬೇಸಾಯಗಾರರ ಮೊಗದಲ್ಲಿ ಸಂತಸ ಮೂಡಿದೆ.

    ಪಶ್ಚಿಮಘಟ್ಟದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು ಜಿಲ್ಲೆಯ ಎಲ್ಲಾ ನದಿಗಳ ಮಟ್ಟ ಹೆಚ್ಚಿದೆ. ನದಿ ಪಾತ್ರದ ಜನ ಎಚ್ಚರಿಕೆವಹಿಸಿ. ನಾಡದೋಣಿ ಮೀನುಗಾರಿಕೆ ಮಾಡುವವರು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

  • ಇಂದಿನಿಂದ ಆಗಸ್ಟ್ 1ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಇಂದಿನಿಂದ ಆಗಸ್ಟ್ 1ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಇಂದಿನಿಂದ ಆಗಸ್ಟ್ 1 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

    ಇಂದು ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ರಾಜ್ಯಾದ್ಯಂತ ಮಾನ್ಸೂನ್ ದುರ್ಬಲವಾಗಿದ್ರೂ ಉತ್ತರ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ 4 ಸೆಂ.ಮೀ ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆಯಲ್ಲಿ 3 ಸೆಂ.ಮೀ ಮಳೆಯಾಗಿದೆ.

    ಕರಾವಳಿ ಪ್ರದೇಶದಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಜುಲೈ 28 ರಿಂದ ಆಗಸ್ಟ್ 1ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗುವ ಸಂಭವವಿದೆ ಎಂದು ಸಿ.ಎಸ್.ಪಾಟೀಲ್ ಹೇಳಿದ್ದಾರೆ.

    ಬೆಂಗಳೂರು ನಗರದ ಹವಾಮಾನ ಮುನ್ಸೂಚನೆ:
    ರಾಜಧಾನಿಯಲ್ಲಿ ಮುಂದಿನ ಎರಡು ದಿನದವರೆಗೆ ಕೆಲವು ಕಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆ. ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಂ. ದಾಖಲಾಗಿದೆ ಎಂದು ತಿಳಿಸಿದ್ದಾರೆ.

  • ಒಂದೇ ಗಂಟೆಗೆ ಒಂದುಕಾಲು ಇಂಚು ಮಳೆ – ಮಲೆನಾಡಿಗರಿಗೆ ಸಂತೋಷದ ಜೊತೆ ಆತಂಕ

    ಒಂದೇ ಗಂಟೆಗೆ ಒಂದುಕಾಲು ಇಂಚು ಮಳೆ – ಮಲೆನಾಡಿಗರಿಗೆ ಸಂತೋಷದ ಜೊತೆ ಆತಂಕ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೆಲ ಭಾಗದಲ್ಲಿ ಮಳೆರಾಯ ಅಪ್ಪರಿಸಿ ಬೊಬ್ಬಿರಿದಿದ್ದಾನೆ. ಮಳೆ ಕಂಡು ಮಲೆನಾಡಿಗರಿಗೆ ಒಂದೆಡೆ ಖುಷಿ, ಮತ್ತೊಂದೆಡೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

    ಕೊಪ್ಪ ತಾಲೂಕಿನ ಜಯಪುರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಮಳೆಯ ಅಬ್ಬರ ಎಷ್ಟು ಜೋರಾಗಿತ್ತು ಎಂದರೆ, ಸುಮಾರು ಒಂದು ಗಂಟೆಗೆ ಒಂದೂಕಾಲು ಇಂಚಿನಷ್ಟು ಮಳೆ ಸುರಿದಿದೆ. ಮಳೆಯ ಅಬ್ಬರ ಕಂಡು ಜಯಪುರ ಸುತ್ತಮುತ್ತಲ್ಲಿನ ಜನ ಆತಂಕಕ್ಕೀಡಾಗಿದ್ದರು. ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಸಂಜೆ 5.30ರ ತನಕವೂ ಒಂದೇ ಸಮನೆ ಸುರಿದಿದೆ. ಭಾರೀ ಮಳೆಗಾಳಿಗೆ ರಸ್ತೆ ಬದಿಯ ಮರದ ಟೊಂಗೆಗಳು ಮುರಿದು ಬಿದ್ದಿವೆ. ಜಯಪುರ ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.

    ಇನ್ನೂ ಮಲೆನಾಡು ಭಾಗಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರದಲ್ಲೂ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲೆ ಸಾಧಾರಣ ಮಳೆ ಸುರಿದಿದೆ. ಬಿಸಿಲಿನ ಝಳಕ್ಕೆ ಬೇಸತ್ತಿದ್ದ ಮಲೆನಾಡಿಗರಿಗೆ ವರುಣದೇವ ತಂಪೆರೆದಿದ್ದಾನೆ. ಕಳೆದೊಂದು ವಾರದಿಂದಲೂ ಮಲೆನಾಡಲ್ಲಿ ಮೋಡಕವಿಯುತ್ತಿದ್ದು ಅಷ್ಟಾಗಿ ಮಳೆಯಾಗಿರಲಿಲ್ಲ. ಇಂದು ಜಯಪುರದಲ್ಲಿ ಸುರಿದ ಮಳೆ ಕಂಡು ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಇನ್ನೇನು ಮಲೆನಾಡಲ್ಲಿ ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಳೆಗಾಲದ ಆರಂಭವಾಗಲಿದೆ.

    ಮಳೆಗಾಲದ ಆರಂಭದ ಮೊದಲ ಮಳೆಯೇ ಈ ಪ್ರಮಾಣದಲ್ಲಿ ಸುರಿದಿದೆ ಅಂದರೆ, ಈ ಬಾರಿಯ ಮಳೆಗಾಲ ಹೇಗಿರಬಹುದು ಎಂದು ಜನ ಈಗಲೇ ಚಿಂತಾಕ್ರಾಂತರಾಗಿದ್ದಾರೆ. ಯಾಕಂದರೆ ಕಾಫಿನಾಡಲ್ಲಿ ಕಳೆದ ಎರಡ್ಮೂರು ವರ್ಷಗಳ ಮಳೆ ಮಲೆನಾಡಿಗರಿಗೆ ಮಳೆ ಎಂದರೆ ಭಯಪಡುವಂತಹಾ ಸ್ಥಿತಿ ನಿರ್ಮಿಸಿತ್ತು.

  • ರಾಜ್ಯದಲ್ಲಿ ವರುಣನ ಅಬ್ಬರ – ಮುಂದಿನ 2 ದಿನ ಮಳೆ ಸಾಧ್ಯತೆ

    ರಾಜ್ಯದಲ್ಲಿ ವರುಣನ ಅಬ್ಬರ – ಮುಂದಿನ 2 ದಿನ ಮಳೆ ಸಾಧ್ಯತೆ

    ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಮುಂದುವರಿದಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ್ಲೂ ಮೊಡ ಕವಿದ ವಾತಾವರಣ ಇತ್ತು. ಸಂಜೆ ಮಳೆ ಸುರಿದು, ಕೆಲ ಕಾಲ ಜೀವನ ಅಸ್ತವ್ಯಸ್ತ ಆಗಿತ್ತು.

    ದೀಪಾವಳಿ ಸಂಭ್ರಮದಲ್ಲಿದ್ದ ಸಿಲಿಕಾನ್ ಸಿಟಿ ಮಂದಿಯ ಪಟಾಕಿ ಹೊಡೆಯೋದಕ್ಕೂ ತಣ್ಣೀರು ಎರಚಿತು. ಇನ್ನು ಸಂಜೆ ದೇವಸ್ಥಾನ, ಪಾರ್ಕ್, ಮಾಲ್ ಎಂದು ಸುತ್ತಲೂ ಹೋಗಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಮಧ್ಯಾಹ್ನದಿಂದು ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರೋ ಮಳೆಗೆ ರಸ್ತೆ ಬದಿ ವ್ಯಾಪಾರಿಗಳು, ಹೂ-ಹಣ್ಣು ಮಾರಾಟಗಾರರು ಸುಸ್ತಾದರು.

    ರಾಜ್ಯದಲ್ಲಿ ಇನ್ನೂ ಮುಂದಿನ 2 ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಆರ್ಭಟವಿರಲಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇದ್ದು, ಮಳೆಯಾಗೋ ಸಂಭವ ಇದೆ ಅಂತ ಪಬ್ಲಿಕ್ ಟಿವಿಗೆ ನೈಸರ್ಗಿಕ ವಿಕೋಪ ನಿರ್ದೇಶನಾಲಯ ಮಾಹಿತಿ ನೀಡಿದೆ.

  • ಮಸ್ಕಿ ಹಳ್ಳದಲ್ಲಿ ಕೊಚ್ಚಿಹೋದ ಯುವಕನ ಕುಟುಂಬಸ್ಥರ ಪ್ರತಿಭಟನೆ

    ಮಸ್ಕಿ ಹಳ್ಳದಲ್ಲಿ ಕೊಚ್ಚಿಹೋದ ಯುವಕನ ಕುಟುಂಬಸ್ಥರ ಪ್ರತಿಭಟನೆ

    -ಅಧಿಕಾರಿಗಳ ವಿರುದ್ಧ ಆಕ್ರೋಶ

    ರಾಯಚೂರು: ಜಿಲ್ಲೆಯ ಮಸ್ಕಿ ಹಳ್ಳದಲ್ಲಿ ಯುವಕ ಕೊಚ್ಚಿ ಹೋದ ಪ್ರಕರಣ ಹಿನ್ನೆಲೆ ಯುವಕನ ಕುಟುಂಬಸ್ಥರು ಹಾಗೂ ಸ್ಥಳೀಯರು ಮಸ್ಕಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಯುವಕನ ರಕ್ಷಣಾ ಕಾರ್ಯ ವಿಫಲವಾದ ಹಿನ್ನೆಲೆ ಆಕ್ರೋಶಗೊಂಡಿರುವ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

    ಹಳ್ಳದಲ್ಲಿ ನಾಪತ್ತೆಯಾದ ಚನ್ನಬಸಪ್ಪನ ಕುಟುಂಬ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಅಂತ ಕಿಡಿಕಾರಿದ್ದಾರೆ. ಮಸ್ಕಿ ಹಳ್ಳದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೊಚ್ಚಿಹೋದ ಬಳಿಕವೂ ಅಧಿಕಾರಿಗಳು ಪತ್ತೆ ಕಾರ್ಯ ನಡೆಸಿಲ್ಲ ಅಂತ ಆರೋಪ ಮಾಡಿದ್ದಾರೆ. ಮೂರು ವರ್ಷದ ಹಿಂದೆ ಮದುವೆಯಾಗಿದ್ದ 34 ವರ್ಷದ ಚನ್ನಬಸಪ್ಪನಿಗೆ ಎರಡು ವರ್ಷದ ಮಗುವಿದೆ. ಮನೆಗೆ ಆಧಾರವಾಗಿದ್ದ ಪತಿಯನ್ನ ಹುಡುಕಿಕೊಡಿ ಅಂತ ಚನ್ನಬಸಪ್ಪನ ಪತ್ನಿ ನೇತ್ರಾವತಿ ಅಂಗಲಾಚಿದ್ದಾರೆ.

    ಮಸ್ಕಿ ನಾಲೆಯಿಂದ ಹೆಚ್ಚಿನ ಪ್ರಮಾಣದ ನೀರು ಏಕಾಏಕಿ ಹಳ್ಳಕ್ಕೆ ಹರಿಸಿದ್ದರಿಂದ ಹೊರಬರಲಾಗದೆ ಚನ್ನಬಸಪ್ಪ ಹಾಗೂ ಜಲೀಲ ಅನ್ನೋ ಇನ್ನೋರ್ವ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದ್ರೆ ಮುನ್ನೆಚ್ಚರಿಕೆ ಹಾಗೂ ಸುರಕ್ಷಿತ ಕ್ರಮ ಕೈಗೊಳ್ಳದೆ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಇಳಿದಿದ್ದರಿಂದ ಹಳ್ಳದಲ್ಲಿ ಹಗ್ಗ ತುಂಡಾಗಿ ಚನ್ನಬಸಪ್ಪ ಕೊಚ್ವಿಕೊಂಡು ಹೋಗಿದ್ದಾನೆ. ಇದುವರೆಗೂ ಚನ್ನಬಸಪ್ಪನ ಸುಳಿವು ಸಿಕ್ಕಿಲ್ಲ. ಜಲೀಲನನ್ನ ಕ್ರೇನ್ ಮುಖಾಂತರ ರಕ್ಷಣೆ ಮಾಡಲಾಗಿದೆ. ಆದ್ರೆ ಚನ್ನಬಸಪ್ಪನ ರಕ್ಷಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಅಂತ ಆರೋಪಿಸಲಾಗಿದೆ.

  • ಭಾರೀ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

    ಭಾರೀ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಬಿಟ್ಟು ಬಿಟ್ಟು ಭಾರೀ ಮಳೆ ಆಗ್ತಿದೆ. ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು.

    ಶಿವನಾಂದ ವೃತ್ತದ ರೈಲ್ವೇ ಅಂಡರ್ ಪಾಸ್‍ನಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು. ಬೈಕ್ ಸವಾರರೊಬ್ರು ದಾರಿ ಗೊತ್ತಾಗದೇ ಕೆಳಗೆ ಬಿದ್ದರು. ಆಟೋವೊಂದು ಕೆಟ್ಟು, ಚಾಲಕ ತಳ್ಳಿಕೊಂಡು ಹೋದರು. ಮಧ್ಯಾಹ್ನದ ಮೂರು ಗಂಟೆಯ ಬಳಿಕ ಬಿಡುವು ನೀಡಿದ ವರುಣರಾಯ ರಾತ್ರಿ ಮತ್ತೆ ಸುರಿಯಲಾರಂಭಿಸಿದನು. ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು.

    ಮಲ್ಲೇಶ್ವರಂ, ಯಶವಂತಪುರ ಶೇಷಾದ್ರಿಪುರಂ, ಗೋರಗುಂಟೆಪಾಳ್ಯ, ರಾಜಾಜಿನಗರ ಮತ್ತಿಕೆರೆ, ಬಿಇಎಲ್ ಸರ್ಕಲ್, ಸದಶಿವನಗರ, ಸಂಜಯ್ ನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಮಳೆ ಆಗುತ್ತಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕೋಡಿಯ ಮಾಂಜರಿ ಗ್ರಾಮದ ನೆರೆ ಸಂತ್ರಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ರು. 527 ಫಲಾನುಭವಿಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದ್ರು. ತಹಶೀಲ್ದಾರ್ ಸುಭಾಷ್ ಮನವೊಲಿಕೆಗೂ ಬಗ್ಗದೇ ಪ್ರತಿಭಟನೆ ಮುಂದುವರಿಸಿದ್ದಾರೆ.

  • ಉತ್ತರ ಕರ್ನಾಟಕದಲ್ಲಿ ರಣ ಮಳೆಯಿಂದ ಪ್ರವಾಹ ಪರಿಸ್ಥಿತಿ

    ಉತ್ತರ ಕರ್ನಾಟಕದಲ್ಲಿ ರಣ ಮಳೆಯಿಂದ ಪ್ರವಾಹ ಪರಿಸ್ಥಿತಿ

    – ಬೈಕಲ್ಲಿ ಹಳ್ಳ ದಾಟುವ ಹುಚ್ಚು ಸಾಹಸದಿಂದ ಎಡವಟ್

    ಬೆಂಗಳೂರು: ಕೊಂಚ ಬಿಡುವು ಕೊಟ್ಟಿದ್ದ ವರುಣ ಮತ್ತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಬೀದರ್, ರಾಯಚೂರು, ಕಲಬುರಗಿ, ಗದಗ, ಬಾಗಲಕೋಟೆ, ಯಾದಗಿರಿ, ವಿಜಯಪುರ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ.

    ವರುಣನ ಅಬ್ಬರಕ್ಕೆ ಬಹುತೇಕ ಕಡೆ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು, ಒಬ್ಬರು ಬಲಿ ಆಗಿದ್ದಾರೆ. ಹತ್ತಾರು ಮನೆಗಳು ಕುಸಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಾವಿರಾರು ಎಕರೆ ಬೆಳೆ ನೀರು ಪಾಲಾಗಿದೆ. ಬಾಗಲಕೋಟೆಯ ಮುಧೋಳದಲ್ಲಿ ಹಳ್ಳದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಯಾದಗಿರಿಯ ಎಲೇರಿ ಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲೂ ಸೇತುವೆ ದಾಟಲು ಹೋಗಿ ಬೈಕ್ ಸವಾರರು ಎಡವಟ್ ಮಾಡಿಕೊಂಡರು. ನೀರಿನ ಸೆಳೆತಕ್ಕೆ ಸಿಕ್ಕಿ ಬೈಕ್ ಪಲ್ಟಿ ಹೊಡಿತು. ಒಬ್ಬ ಬಚಾವ್ ಆದ್ರೆ, ಮತ್ತೊಬ್ಬ ನೀರಲ್ಲಿ ಕೊಚ್ಚಿ ಹೋಗಿದ್ದನು. ಕೂಡಲೇ ಸ್ಥಳೀಯರು ಹರಸಾಹಸ ಮಾಡಿ ರಕ್ಷಣೆ ಮಾಡಿದ್ದಾರೆ.

    ಕಲಬುರಗಿಯ ಸೇಡಂನಲ್ಲಿ ಮೀನುಗಾರನೊಬ್ಬ ಕಾಗಿಣಾ ನದಿಯಲ್ಲಿ ಕೊಚ್ಚಿಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಕಲಬುರಗಿಯ ಜೇವರ್ಗಿಯಲ್ಲಿ ಪಿಡಬ್ಲ್ಯೂಡಿ ಕ್ವಾಟ್ರರ್ಸ್ ರಸ್ತೆ ಕೊಚ್ಚಿಹೋಗಿದೆ. ಉದನೂರು ಬಳಿ ರಸ್ತೆ ಕೊಚ್ಚಿಹೋಗಿದೆ. ಮನೆಗಳಿಗೆ ನೀರು ನುಗ್ಗಿದೆ. ವಿಜಯಪುರದಲ್ಲಿ ಡೋಣಿ ನದಿ ಪಾಲಾಗ್ತಿದ್ದ ಬೈಕ್ ಸವಾರನನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದು, ಕೆರೆಯಂತೆ ಭಾಸವಾಗ್ತಿದೆ.

    ರಾಯಚೂರಿನಲ್ಲಂತೂ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ಹರೀತಿದೆ. ತಗ್ಗು ಪ್ರದೇಶದ ಮನೆಗಳೆಲ್ಲಾ ಜಲಾವೃತವಾಗಿ ಜನ ಪರದಾಡಿದ್ದಾರೆ. ಯಾದಗಿರಿಯ ಶಹಾಪುರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಪಾಚಿಕಟ್ಟಿದ ನೀರಲ್ಲಿ ಅಂಗವಿಕಲನೊಬ್ಬ ಪರದಾಡಿದ್ದಾನೆ. ನಾರಾಯಣಪುರ ಡ್ಯಾಂನಿಂದ 1.5 ಲಕ್ಷ ಕ್ಯೂಸೆಕ್ ನೀರನ್ನು 25 ಕ್ರೆಸ್ಟ್ ಗೇಟ್ ತೆಗೆದು ಕೃಷ್ಣಾ ನದಿಗೆ ಹೊರಬಿಡಲಾಗುತ್ತಿದೆ. ಹಲವು ಸೇತುವೆಗಳು ಮುಳುಗಡೆ ಆಗಿದ್ದು, ರೈತರು ಪರದಾಡ್ತಿದ್ದ ದೃಶ್ಯಗಳು ಕಂಡು ಬಂದಿವೆ.

    ಬೀದರ್ ನಲ್ಲಿ ಮಾಂಜ್ರಾ ನದಿ ಉಕ್ಕಿ ಹರಿಯುತಿದೆ. ಉಡುಪಿಯಲ್ಲೂ ಭಾರೀ ಮಳೆಯಾಗ್ತಿದ್ದು, ಈ ನೀರೆಲ್ಲಾ ಸಮುದ್ರ ಸೇರ್ತಿರುವ ಕಾರಣ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ನಾಳೆ ನಾಡಿದ್ದು, ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು, ಚಿತ್ರದುರ್ಗ, ಮೈಸೂರು, ದಾವಣಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಂಭವ ಇದೆ.

  • ಉಡುಪಿಯಲ್ಲಿ ಮಳೆ ಇಳಿದರೂ ನದಿ ಮಟ್ಟ ಇಳಿದಿಲ್ಲ- ಉಕ್ಕಿ ಹರಿಯುತ್ತಿದೆ ಸ್ವರ್ಣಾ, ಪಾಪನಾಶಿನಿ

    ಉಡುಪಿಯಲ್ಲಿ ಮಳೆ ಇಳಿದರೂ ನದಿ ಮಟ್ಟ ಇಳಿದಿಲ್ಲ- ಉಕ್ಕಿ ಹರಿಯುತ್ತಿದೆ ಸ್ವರ್ಣಾ, ಪಾಪನಾಶಿನಿ

    -ಭಾಗಮಂಡಲದಲ್ಲಿ ಮತ್ತೆ ಭೂ ಕುಸಿತದ ಆತಂಕ

    ಉಡುಪಿ/ಕೊಡಗು: ಉಡುಪಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇತ್ತ ಕೊಡಗು ಜಿಲ್ಲೆಯ ಭಾಗಮಂಡಲದ ಕೋಳಿಕಾಡು ಪೈಸಾರಿಯ ಜನಗಳಿಗೆ ಮತ್ತೆ ಭೂಕುಸಿತದ ಆತಂಕ ಎದುರಾಗಿದೆ. 40 ವರ್ಷಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಸುವರ್ಣಾ ನದಿ ಮತ್ತು ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತನ್ಮ ಮಟ್ಟವನ್ನು ಕಡಿಮೆ ಮಾಡುತ್ತಿಲ್ಲ. ಉಡುಪಿ ನಗರದ ಮಧ್ಯಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ಆರ್ಭಟ ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಉಡುಪಿ ನಗರ 24 ಗಂಟೆ ಮುಳುಗಿಹೋಗಿತ್ತು, ಇಂದು ರಸ್ತೆಗಳಿಂದ ನೀರು ಇಳಿದಿದೆ.

    ಕಾಪು ತಾಲೂಕಿನ ಪಾಪನಾಶಿನಿ ನದಿಯ ಮಟ್ಟ ಕಡಿಮೆಯಾಗಿಲ್ಲ. ಸುತ್ತಮುತ್ತಲ ನೂರಾರು ಮನೆಗಳಿಗೆ ನುಗ್ಗಿದ ನೀರು ಇಳಿದಿಲ್ಲ. ಸುಮಾರು 25ರಿಂದ 30 ಮನೆಗಳ ಜನರು ದೋಣಿಗಳಲ್ಲಿ ಓಡಾಟವನ್ನು ಮಾಡುತ್ತಿದ್ದಾರೆ. ತಮ್ಮ ಸಾಕುಪ್ರಾಣಿಗಳು ಅಗತ್ಯ ವಸ್ತುಗಳನ್ನು ಎತ್ತಿಕೊಂಡು ಎತ್ತರ ಪ್ರದೇಶಗಳಿಗೆ ಸ್ಥಳಾಂತರಗೊಂಡವರು ನಿಧಾನಕ್ಕೆ ಮನೆಗಳತ ಮುಖ ಮಾಡುತ್ತಿದ್ದಾರೆ.

    ಮಟ್ಟು ಹಳೆ ಬ್ರಿಜ್ ಸಂಪೂರ್ಣ ಮುಳುಗಡೆಯಾಗಿತ್ತು. ಇಂದು ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಮಟ್ಟು ಹೊಳೆ ತುಂಬಿ ಹರಿಯುತ್ತಿರುವುದರಿಂದ ಸುತ್ತಮುತ್ತಲ ಜನವಸತಿ ಪ್ರದೇಶಗಳು ಜಲಾವೃತವಾಗಿದೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ವಾಹನ ಸವಾರರು ಅಂದಾಜಿಗೆ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಬರುತ್ತಿದ್ದಾರೆ. ಮಟ್ಟು, ಉದ್ಯಾವರ ವ್ಯಾಪ್ತಿಯಲ್ಲಿ ಮೀನುಗಾರರ ಮನೆಗಳು ಮುಳುಗಡೆಯಾಗಿದ್ದು ಇನ್ನೆರಡು ದಿನ ಬಿಟ್ಟು ನೀರು ಇಳಿಮುಖವಾಗಬಹುದು. ಕುದ್ರು ಪ್ರದೇಶ ಮುಳುಗಡೆಯಾಗಿದ್ದು, ಸ್ಥಳೀಯ ಯುವಕರು ನಾಡ ದೋಣಿಗಳನ್ನು ಬಳಸಿ ಜನರನ್ನು ಇತರ ಎತ್ತರ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ.

    ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ಕೋಳಿಕಾಡಿನಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಕೋಳಿಕಾಡು ಪ್ರದೇಶದಲ್ಲಿ ಹೊಸದಾಗಿ ಹೊಳೆ ಸೃಷ್ಟಿಯಾಗಿದನ್ನು ಕಂಡು ಜನರು ಭಯಭೀತರಾಗಿದ್ದಾರೆ.

    ಸತೀಶ್ ಎಂಬವರು ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ರೆಸಾರ್ಟ್ ಮಾಡಲು ಬೆಟ್ಟ ಕೊರೆದಿದ್ದರಿಂದ ಆ ಸ್ಥಳದಲ್ಲಿ ಆಗಸ್ಟ್ ತಿಂಗಳಲ್ಲಿ ಭೂಕುಸಿತವಾಗಿತ್ತು. ಅದು ಕೋಳಿಕಾಡು ಗ್ರಾಮದ ಮೂಲಕ ಗುಡ್ಡದ ಮಣ್ಣು ಕುಸಿದು ಹೋಗಿತ್ತು. ಈಗ ಅದೇ ಸ್ಥಳದಲ್ಲಿ ಮತ್ತೆ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಭೂಕುಸಿತ ಆಗುವುದೆಂಬ ಆತಂಕ ಮನೆ ಮಾಡಿದೆ. ಹೊಳೆಯಂತೆ ಹರಿಯುತ್ತಿರುವ ನೀರು ಕಂಡು ಜನರು ಮನೆ ಖಾಲಿ ಮಾಡಿ ಬೇರೆಡೆ ಹೋಗಿದ್ದಾರೆ.

    ಆಗಸ್ಟ್ ತಿಂಗಳಲ್ಲಿ ಭೂಕುಸಿತವಾದ ಮಣ್ಣನ್ನು ತೆರವು ಮಾಡಿ ತೋಡಿನಲ್ಲಿ ಸರಿಯಾಗಿ ನೀರು ಹರಿಯುವಂತೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆವು. ಆದರೆ ಒಂದು ತಿಂಗಳಾದರೂ ಮಣ್ಣು ತೆರವು ಮಾಡದೆ ಮತ್ತೆ ಸಮಸ್ಯೆ ಎದುರಿಸುವಂತೆ ಆಗಿದೆ ಎಂದು ಜನರು ಅಳಲು ತೋಡಿಕೊಳ್ಳುತಿದ್ದಾರೆ.

  • ಕೊಡಗು ಜಿಲ್ಲೆಯಲ್ಲಿ ಮಳೆ ಅರ್ಭಟ- ಜನರಲ್ಲಿ ಭೂಕುಸಿತದ ಆತಂಕ

    ಕೊಡಗು ಜಿಲ್ಲೆಯಲ್ಲಿ ಮಳೆ ಅರ್ಭಟ- ಜನರಲ್ಲಿ ಭೂಕುಸಿತದ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಆಶ್ಲೇಷ ಮಳೆ ಆರ್ಭಟಿಸುತ್ತಿದೆ. ಮಡಿಕೇರಿ ತಾಲೂಕಿನ ಅಬ್ಬಿಯಾಲ ಬಳಿ ಭಾರಿ ಭೂಕುಸಿತವಾಗಿದೆ. ಪರಿಣಾಮ ಮಡಿಕೇರಿ ಸಿದ್ದಾಪುರ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.

    ಅಬ್ಬಿಯಾಲ ಚೆಟ್ಟಳ್ಳಿಯ ನಡುವಿನ ಈ ಮಾರ್ಗದಲ್ಲಿ ರಸ್ತೆಯ ಒಂದು ಬದಿ ಸಂಪೂರ್ಣ ಕುಸಿದು ಸುಮಾರು 50 ಅಡಿ ಆಳಕ್ಕೆ ಬಿದ್ದಿದೆ. ವಾಹನಗಳ ಓಡಾಟ ಮುಂದುವರಿದಲ್ಲಿ ಮತ್ತೆ ಇಡೀ ರಸ್ತೆಯೇ ಕುಸಿದು ಹೋಗುವ ಸಾಧ್ಯತೆ ಇದೆ. ಹೀಗಾಗಿ ವಾಹನಗಳ ಸಂಚಾರ ಬಂದ್ ಮಾಡಿರುವುದರಿಂದ ಮಡಿಕೇರಿ ಸಿದ್ದಾಪುರ ಸಂಪರ್ಕ ಕಡಿತವಾಗಿದೆ.

    ಮತ್ತೊಂದಡೆ ಸೋಮವಾರಪೇಟೆ ತಾಲೂಕಿನ ಮಾದಾಪುರ ಗರ್ವಾಲೆ ಮಾರ್ಗದಲ್ಲಿ ಕಿರುದಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರವಾಹದ ನೀರಿಗೆ ಕೊಚ್ಚಿಹೋಗಿದೆ. ಹಟ್ಟಿ ಹೊಳೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು ನೀರಿನ ಸೆಳೆತಕ್ಕೆ ಕಿರುದಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಹೋಗಿದ್ದು, ಅವಾಂತರ ಸೃಷ್ಟಿಯಾಗಿದೆ.

    ಕಳೆದ ಎರಡು ವರ್ಷಗಳಲ್ಲೂ ಈ ರಸ್ತೆ ಮಳೆಗಾಲದಲ್ಲಿ ಕೊಚ್ಚಿಹೋಗುತ್ತಿದ್ದು, ಈ ಭಾರಿಯೂ ರಸ್ತೆ ಕೊಚ್ಚಿಹೋಗಿರುವುದು ಜನರಿಗೆ ಆತಂಕ ಮೂಡಿಸಿದೆ.

  • KRS ಡ್ಯಾಂಗೆ ಒಂದೇ ದಿನ 20,488 ಕ್ಯೂಸೆಕ್ ಒಳಹರಿವು

    KRS ಡ್ಯಾಂಗೆ ಒಂದೇ ದಿನ 20,488 ಕ್ಯೂಸೆಕ್ ಒಳಹರಿವು

    ಮಂಡ್ಯ: ಕೊಡಗು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಿನ್ನೆ ಕೆಆರ್‍ಎಸ್‍ಗೆ 5,056 ಕ್ಯೂಸೆಕ್ ಒಳ ಹರಿವು ಇದ್ದರೆ ಇಂದು 20,488 ಕ್ಯೂಸೆಕ್ ನೀರು ಕೆಆರ್‍ಎಸ್‍ಗೆ ಸೇರುತ್ತಿದೆ.

    ಈ ಮೂಲಕ ಒಂದೇ ದಿನದ ಅಂತರದಲ್ಲಿ ದುಪ್ಪಟ್ಟಕ್ಕೂ ಹೆಚ್ಚು ನೀರು ಕೆಆರ್‍ಎಸ್ ಜಲಾಶಯದಲ್ಲಿ ಸಂಗ್ರಹವಾಗುತ್ತಿದೆ. ಸದ್ಯ ಕೆಆರ್‍ಎಸ್ ಡ್ಯಾಂನಲ್ಲಿ ನೀರಿನಮಟ್ಟ 107.17 ಅಡಿ, ಒಳಹರಿವು 20488 ಕ್ಯೂಸೆಕ್, ಹೊರ ಹರಿವು 4659 ಕ್ಯೂಸೆಕ್, ನೀರಿನ ಸಂಗ್ರಹ 28.971 ಟಿಎಂಸಿ ಇದ್ದರೇ, ಡ್ಯಾಂನ ಗರಿಷ್ಠ ಸಾಮರ್ಥ್ಯ 49.50 ಟಿಎಂಸಿ ಇದೆ.

    ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ. ಕೊಡಗಿನ 15 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 100 ಮಿಲಿ ಮೀಟರ್ ಗೂ ಅಧಿಕ ಮಳೆಯಾಗಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ.