Tag: Karnataka Politics

  • ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ

    ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ

    ಬೆಂಗಳೂರು: ಯಡಿಯೂರಪ್ಪ (Yediyurappa) ವಿರುದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ (H. R. Bhardwaj) ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಾಗ ಯಡಿಯೂರಪ್ಪ (Yediyurappa) ರಾಜೀನಾಮೆ ಕೊಟ್ಟಿದ್ದರು. ಅದರಂತೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಅಂತ ಆಗ್ರಹ ಮಾಡಿದ್ದ ವಿಪಕ್ಷ ನಾಯಕ ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಅಶೋಕ್ (AShok) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲವೇ? ಈಗ ಸಿದ್ದರಾಮಯ್ಯನವರು ಯಾಕೆ ರಾಜೀನಾಮೆ ನೀಡುತ್ತಿಲ್ಲ?ಎಂದು ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ ಅವರು ಮತ್ತೊಮ್ಮೆ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ಅಶೋಕ್ ಅವರೇ, ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವ ಮೊದಲು ವಾಸ್ತವಾಂಶವನ್ನು ಪರಿಶೀಲಿಸಿಕೊಂಡು ಮಾತನಾಡಿ. ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಅವರು ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು 2011ರ ಜನವರಿ 21ರಂದು.ಅವರ ವಿರುದ್ಧ ಅರ್ಜಿದಾರರು ನೀಡಿದ್ದ 1600 ಪುಟಗಳ ಪ್ರಬಲ ದಾಖಲೆಗಳ ಸಾಕ್ಷ ಕೂಡಾ ಇತ್ತು. ಹಾಗಿದ್ದರೂ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಇದನ್ನೂ ಓದಿ: ಬಾಂಗ್ಲಾ ಪ್ರಧಾನಿಗೆ ಬಂದ ಸ್ಥಿತಿ ಕರ್ನಾಟಕದ ರಾಜ್ಯಪಾಲರಿಗೂ ಬರಬಹುದು: ಐವನ್‌ ಡಿಸೋಜ

     

    ಆ ಕಾಲದಲ್ಲಿ ನೀವೇ ಅಲ್ಲವೇ ಯಡಿಯೂರಪ್ಪನವರು ರಾಜೀನಾಮೆ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದವರು. ಈಗ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ? ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು 2011ರ ಆಗಸ್ಟ್ ನಾಲ್ಕರಂದು. ಅಂದು ನ್ಯಾ.ಸಂತೋಷ್ ಹೆಗ್ಡೆ (Santosh Hegde) ಅವರ ನೇತೃತ್ವದ ಲೋಕಾಯುಕ್ತವು ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ಸಲ್ಲಿಸಿದ ನಂತರ. ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ 16,500 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಹೇಳಿತ್ತು. ಇದನ್ನೂ ಓದಿ: ದಲಿತ ರಾಜ್ಯಪಾಲರನ್ನು ನಿಂದಿಸಿದ್ದಕ್ಕೆ ಕಾಂಗ್ರೆಸ್ ಮೇಲೆ ಅಟ್ರಾಸಿಟಿ ಕೇಸ್ ಹಾಕಬೇಕು: ಸಿಟಿ ರವಿ ಆಗ್ರಹ

    ಆಗ ನೀವೆಲ್ಲರೂ ಸೇರಿ ಯಡಿಯೂರಪ್ಪ ವಿರುದ್ಧವೇ ಏನೆಲ್ಲ ಕುತಂತ್ರ ಮಾಡಿದ್ದೀರಿ ಎನ್ನುವುದೂ ನೆನಪಾಗಬಹುದು. ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣದ ತನಿಖೆ ನಡೆಸಿದ್ದ ನ್ಯಾ.ಸಂತೋಷ್ ಹೆಗ್ಡೆ ನೇತೃತ್ವದ ಲೋಕಾಯುಕ್ತವೇ ಆರೋಪಗಳೆಲ್ಲವನ್ನು ಸಾಬೀತುಪಡಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಮೂಲಕ ರಾಜ್ಯಪಾಲರ ಪ್ರಾಸಿಕ್ಯೂಷನ್ ನಿರ್ಧಾರ ನ್ಯಾಯಯುತವಾಗಿತ್ತು ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರೇ ದೃಢೀಕರಿಸಿದ್ದರಲ್ಲವೇ?

     

     ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಒಂದಲ್ಲ ಎರಡಲ್ಲ ಹದಿನೈದು ಡಿನೋಟಿಫಿಕೇಷನ್ ಹಗರಣಗಳ ತನಿಖೆಗೆ ಅನುಮತಿ ನೀಡಿದ್ದರು. ಹೆಚ್ಚಿನ ಮಾಹಿತಿಗೆ ನ್ಯಾ.ಸಂತೋಷ್ ಹೆಗ್ಡೆ ಅವರು ನೀಡಿದ್ದ ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ತೆಗೆದು ಓದಿಕೊಳ್ಳಿ. ಇಂದು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಪರವಾಗಿ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರಿಗೆ 2011ರಲ್ಲಿ ಆಗಿನ ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರ ಬಗ್ಗೆ ಅವಹೇಳನ ಮಾಡಿದ್ದೆಲ್ಲ ಮರೆತುಹೋದಂತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ನಡೆಸಿರುವ ಪ್ರತಿಭಟನೆಯನ್ನು ಪ್ರಶ್ನಿಸುತ್ತಿರುವ ಬಿಜೆಪಿ ನಾಯಕರಿಗೆ 2011ರಲ್ಲಿ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ದೂ ಕೂಡಾ ಮರೆತುಹೋಗಿದೆ ಅಂತ ವಿಪಕ್ಷ ನಾಯಕ ಅಶೋಕ್ ವಿರುದ್ದ ಸಿಎಂ ಕಿಡಿಕಾರಿದ್ದಾರೆ.

  • ಗೌರವಯುತ ರಾಜಕಾರಣ ಮಾಡ್ತೀನಿ, ಇಲ್ಲ ನಿವೃತ್ತಿ ಪಡೆಯುತ್ತೇನೆ: ರೇಣುಕಾಚಾರ್ಯ

    ಗೌರವಯುತ ರಾಜಕಾರಣ ಮಾಡ್ತೀನಿ, ಇಲ್ಲ ನಿವೃತ್ತಿ ಪಡೆಯುತ್ತೇನೆ: ರೇಣುಕಾಚಾರ್ಯ

    ನವದೆಹಲಿ: ಗೌರವಯುತವಾಗಿ ರಾಜಕಾರಣ ಮಾಡುತ್ತೇನೆ. ಇಲ್ಲಂದಲ್ಲಿ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಂಡಾಯ ಏಳಲ್ಲ, ಅಸಮಾಧಾನ ವ್ಯಕ್ತಪಡಿಸಲ್ಲ ಎಂದು ಸ್ಪಷ್ಟಪಡಿಸಿದರು.

    ಸಚಿವ ಸಂಪುಟ ರಚನೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಬಂದಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಅವಕಾಶ ಸಿಕ್ಕರೆ ವರಿಷ್ಠರನ್ನು ಭೇಟಿ ಮಾಡುತ್ತೇನೆ. ಯಡಿಯೂರಪ್ಪ ಬಣದಲ್ಲಿ ಇದ್ದಿದ್ದಕ್ಕೆ ಮಂತ್ರಿಗಿರಿ ತಪ್ಪಿಲ್ಲ ಎಂದರು.

    ಯಡಿಯೂರಪ್ಪ ಬಿಜೆಪಿಯ ಪ್ರಮುಖ ನಾಯಕರು. ಸಚಿವ ಸ್ಥಾನ ನೀಡಬೇಕು ಎಂಬುದು ಕ್ಷೇತ್ರದ ಜನರ ಆಸೆಯಾಗಿತ್ತು. ಮಂತ್ರಿಯಾಗಿದಿದ್ದರೇನು ಶಾಸಕನಾಗಿದ್ದೇನೆ, ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಎಸ್‍ವೈ ರಾಜೀನಾಮೆ ನೀಡುವ ಮೊದಲೇ ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್

    ಇದೇ ವೇಳೆ ಸಚಿವ ಆನಂದ್ ಸಿಂಗ್ ರಾಜೀನಾಮೆ ಕುರಿತು ಮಾತನಾಡಿದ ಅವರು, ಸಚಿವರ ಜೊತೆಗೆ ಮಾತನಾಡುತ್ತೇನೆ. ಅವರು ನಮ್ಮ ಸ್ನೇಹಿತರು ನಾನು ನಮ್ಮ ಸ್ನೇಹಿತರು. ಸಿಎಂ, ಬಿಎಸ್‍ವೈ ಎಲ್ಲ ಮಾತನಾಡಿದ್ದಾರೆ, ನಾವೂ ಮಾತಾಡುವುದಾಗಿ ಹೇಳಿದರು.

  • ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸಿದಂತೆ: ಖಂಡ್ರೆ ವ್ಯಂಗ್ಯ

    ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸಿದಂತೆ: ಖಂಡ್ರೆ ವ್ಯಂಗ್ಯ

    ಬೆಂಗಳೂರು: ಜನ ಕೊರೊನಾ ಸಂಕಷ್ಟದಲ್ಲಿರುವಾಗ ಬಿಜೆಪಿಗೆ ನಾಯಕತ್ವದ ಚಿಂತೆ. ರೋಮ್ ಪಟ್ಟಣ ಹೊತ್ತಿ ಉರಿಯುತ್ತಿದ್ದಾಗ, ದೊರೆ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಅದೇ ರೀತಿ ರಾಜ್ಯ ಸಾಂಕ್ರಾಮಿಕ ಮತ್ತು ಲಾಕ್‍ಡೌನ್ ನಿಂದ ನಲುಗುತ್ತಿರುವಾಗ, ಸರ್ಕಾರ ಜನರ ಸಂಕಷ್ಟ ಪರಿಹರಿಸುವುದನ್ನು ಬಿಟ್ಟು ನಾಯಕತ್ವ ಬದಲಾವಣೆಯ ಕಸರತ್ತಿನಲ್ಲಿ ನಿರತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದ್ದಾರೆ.

    ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಅವರು, ರಾಜ್ಯದಲ್ಲಿ ಮುಂಗಾರು ಉತ್ತಮವಾಗಿದೆ. ಆದರೆ ರೈತರಿಗೆ ಸೂಕ್ತ ಪ್ರಮಾಣದಲ್ಲಿ ಬಿತ್ತನೆ ಬೀಜ ದೊರಕುತ್ತಿಲ್ಲ. ಕೊರೊನಾ ಸಂಕಷ್ಟದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲ. ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾಗಿರುವವರಿಗೆ ಇನ್ನೂ ಔಷಧ ಸಿಗುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ನಿಲ್ಲಬೇಕಾದ ಸರ್ಕಾರದ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದರೆ, ಶಾಸಕರು, ಮಂತ್ರಿಗಳು ನಾಯಕತ್ವ ಬದಲಾವಣೆಗೆ ಹರ ಸಾಹಸ ಮಾಡುತ್ತಿದ್ದಾರೆ ಇದರಲ್ಲಿ ಏನಾದರೂ ಅರ್ಥ ಇದೆಯೇ ಎಂದು ಪ್ರಶ್ನಿಸಿದರು.

    ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗಿ ಜನ ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದಾಗ, ಹಾಸಿಗೆ ದೊರಕದೆ ಹಾದಿ ಬೀದಿಯಲ್ಲಿ ಸಾಯುತ್ತಿದ್ದಾಗ ಸರ್ಕಾರ ಹೇಗೆ ಕೆಲಸ ಮಾಡಬೇಕು ಎಂದು ಹೇಳಲು ದೆಹಲಿಯಿಂದ ಯಾರೂ ಬರಲಿಲ್ಲ. ಈಗ ನಿತ್ಯ ಹತ್ತಾರು ಸಾವಿರ ಹೊಸ ಪ್ರಕರಣ ಬರುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ವಹಿಸುವ ಬದಲು, ಬಡವರ, ಕಡುಬಡವರ ಸಂಕಷ್ಟ ಆಲಿಸುವ ಬದಲು, ನಾಯಕತ್ವ ಬದಲು ಮಾಡಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿರುವುದು ಅಸಹ್ಯದ ಪರಮಾವಧಿ. ಸರ್ಕಾರ ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಈ ಕಪಟ ನಾಟಕ ಆಡುತ್ತಿದೆ. ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತರಿಗೆ ಮರಣ ಶಾಸನವಾದ ಬೆಳೆ ವಿಮೆ ಯೋಜನೆ:
    ಕೇಂದ್ರ ಸರ್ಕಾರ ತಾನು ರೂಪಿಸಿರುವ ಫಸಲು ವಿಮಾ ಯೋಜನೆ ಒಂದು ಕ್ರಾಂತಿಕಾರಿ ಎಂದು ಕೊಚ್ಚಿಕೊಳ್ಳುತ್ತದೆ. ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ 10 ಸಾವಿರ ಕೋಟಿ ರೂಪಾಯಿ ಬೆಳೆ ನಷ್ಟ ಸಂಭವಿಸಿದೆ. ರೈತರಿಗೆ ಇನ್ನೂ ಪರಿಹಾರವೇ ಸಿಕ್ಕಿಲ್ಲ. ಪ್ರವಾಹದಿಂದ ರೈತರಿಗೆ ನಷ್ಟವಾದಾಗ, ಮಿಡ್ ಸೀಸನ್ ಅಡ್ವರ್ಸಿಟಿ ಅನುಬಂಧವನ್ನು ಜಾರಿ ಮಾಡಿದ್ದರೆ (ಇನ್ವೋಕ್), ಎಲ್ಲ ರೈತರಿಗೂ ಶೇ.25ರಷ್ಟು ಪರಿಹಾರ ಸಿಗುತ್ತಿತ್ತು. ಸರ್ಕಾರ ರೈತರಿಗೆ ನೆರವಾಗುವ ಬದಲು, ವಿಮಾ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಈ ಅವಕಾಶವನ್ನು ಕೈಚೆಲ್ಲಿದೆ ಎಂದು ದೂರಿದರು. ಈ ವಿಮೆ ಯೋಜನೆ ರೈತರಿಗೆ ಮರಣ ಶಾಸನ ಬರೆಯುತ್ತಿದೆ ಎಂದು ಕಿಡಿ ಕಾರಿದರು.

    ರಾಜ್ಯದಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 13, 44,771 ರೈತರು ಬೆಳೆ ವಿಮಾ ಯೋಜನೆಯಡಿ ನೋಂದಾಯಿಸಿಕೊಂಡು 13196.0386 ಲಕ್ಷ ರೂ. ವಿಮಾ ಕಂತು ಪಾವತಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಸಹಾಯಧನ 62211.7669 ಲಕ್ಷ ರೂ. ಮತ್ತು ಕೇಂದ್ರ ಸರ್ಕಾರ 58487.7250 ಸಹಾಯಧನ ನೀಡಿದೆ. ಅದೇ ರೀತಿ ಹಿಂಗಾರು ಬೆಳೆಗೆ 1 ಲಕ್ಷ 62 ಸಾವಿರದ 102 ರೈತರು ನೋಂದಾಯಿಸಿಕೊಂಡಿದ್ದು, 1025.6209 ಲಕ್ಷ ರೂ. ಪಾವತಿಸಿದ್ದಾರೆ.

    ರಾಜ್ಯ ಸರ್ಕಾರ 7544.4426 ಲಕ್ಷ ರೂ. ಕೇಂದ್ರ ಸರ್ಕಾರ 7424.1660 ಲಕ್ಷ ರೂ ಪಾವತಿಸಿದೆ. ಬೇಸಿಗೆ ಬೆಳೆಗೆ 9,141 ರೈತರು ನೋಂದಾಯಿಸಿಕೊಂಡು 109.6200 ಲಕ್ಷ ರೂ. ಪಾವತಿಸಿದ್ದರೆ, ರಾಜ್ಯ ಸರ್ಕಾರ 563.8100 ಲಕ್ಷ ರೂ. ಮತ್ತು ಕೇಂದ್ರ ಸರ್ಕಾರ 561.5000 ಲಕ್ಷ ರೂ. ಸಹಾಯ ದರ ಪಾವತಿಸಿದೆ. ಅಂದರೆ ರಾಜ್ಯದಿಂದ ವಿಮಾ ಕಂಪನಿಗಳಿಗೆ ಒಟ್ಟು 151124.6899 ಲಕ್ಷ ರೂ. ಪಾವತಿಯಾಗಿದೆ. ವಿಮಾ ಕಂಪನಿಗಳು ರೈತರಿಗೆ ನೀಡಿರುವ ಪರಿಹಾರ ಎಷ್ಟು ಎಂದು ಪ್ರಶ್ನಿಸಿದರು. ನಿಯಮಾನುಸಾರ 2021ರ ಮಾರ್ಚ್ ಒಳಗಾಗಿ ರೈತರಿಗೆ ಕ್ಲೇಮ್ ನೀಡಲಬೇಕಾಗಿತ್ತು. ಇನ್ನೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರ ಏನು ಮಾಡುತ್ತಿದೆ. ಸರ್ಕಾರ ವಿಮಾ ಸಂಸ್ಥೆ ಜೊತಗೆ ಕೈಜೋಡಿಸಿದೆಯೇ ಎಂದು ಪ್ರಶ್ನಿಸಿದ ಈಶ್ವರ ಖಂಡ್ರೆ, ಕೂಡಲೇ ರೈತರಿಗೆ ಕ್ಲೇಮ್ ಹಣ ಪಾವತಿಸಲು ಒತ್ತಾಯಿಸಿದ್ದಾರೆ.

    ಶ್ವೇತ ಪತ್ರಕ್ಕೆ ಒತ್ತಾಯ:
    ಕೂಡಲೇ ರಾಜ್ಯ ಸರ್ಕಾರ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ ಆರಂಭವಾದ ದಿನದಿಂದ ಇಲ್ಲಿಯವರೆಗೆ ರೈತರು ಪಾವತಿಸಿದ ಕಂತು, ಸರ್ಕಾರದ ಸಬ್ಸಿಡಿ ಸೇರಿ ಒಟ್ಟು ಎಷ್ಟು ಹಣವನ್ನು ಯಾವ ಯಾವ ವರ್ಷ ಎಷ್ಟೆಷ್ಟು ಪಾವತಿ ಮಾಡಿದೆ. ಅದಕ್ಕೆ ಪ್ರತಿಯಾಗಿ ವಿಮಾ ಕಂಪನಿಗಳು ನೀಡಿರುವ ಪರಿಹಾರದ ಮೊತ್ತ ಎಷ್ಟು ಎಂದು ಶ್ವೇತ ಪತ್ರ ಹೊರಡಿಸಿದರೆ. ಆಗ ಇದರಿಂದ ರೈತರಿಗೆ ಪ್ರಯೋಜನ ಆಗಿದಿಯೋ ಇಲ್ಲ ವಿಮಾ ಕಂಪನಿಗಳು ಶ್ರೀಮಂತವಾಗಿದೆಯೋ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

    ಬಿತ್ತನೆ ಬೀಜ ಪೂರೈಕೆಗೆ ಆಗ್ರಹ:
    ರಾಜ್ಯದಲ್ಲಿ ಬಿತ್ತನೆ ಬೀಜ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸೋಯಾಬೀನ್ ಬೆಳೆಗಾರರಿಗೆ ಬಿತ್ತನೆ ಬೀಜವೇ ಸಿಗುತ್ತಿಲ್ಲ. ಬೀದರ್ ಜಿಲ್ಲೆಯೊಂದರಲ್ಲಿ ಈ ಬಾರಿ ಸುಮಾರು 1.80 ಹೆಕ್ಟೆರ್ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದರೂ, ಸರ್ಕಾರ ಸಮರ್ಪಕವಾಗಿ ಬೀಜ ಪೂರೈಕೆ ಮಾಡುತ್ತಿಲ್ಲ. ಬಿತ್ತನೆ ಬೀಜಕ್ಕೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ದುಬಾರಿ ದರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರ್ಕಾರಕ್ಕೆ ಇದನ್ನು ತಡೆಯುವ ಶಕ್ತಿಯೂ ಇಲ್ಲದಂತಾಗಿದೆ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.

    ವಿದ್ಯುತ ದರ ಏರಿಕೆ ಅವೈಜ್ಞಾನಿಕ:
    ಸರ್ಕಾರ ಕೊರೊನಾ ಸಂಕಷ್ಟದ ಸಮಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಅನ್ಯಾಯದ ಪರಮಾವಧಿ. ಈ ದರ ಏರಿಕೆ ಅತ್ಯಂತ ಅವೈಜ್ಞಾನಿಕವಾಗಿದೆ. ದೆಹಲಿಯಲ್ಲಿ ಆಪ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತದೆ. ಇಲ್ಲಿ ವಿದ್ಯುತ್ ಶಾಕ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.

    ರಾಜ್ಯದಲ್ಲಿ ಅಸಾಂಪ್ರದಾಯಿಕ ಇಂಧನ ಮೂಲಗಳಾದ ಸೌರವಿದ್ಯುತ್, ಪವನ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದ್ದು, ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವ ಅಗತ್ಯವೇ ಇಲ್ಲ. ಆದರೂ ಹಳೆಯ ಒಪ್ಪಂದಗಳು ಇನ್ನೂ ಚಾಲ್ತಿಯಲ್ಲಿದ್ದು, ಅವುಗಳನ್ನು ರದ್ದು ಮಾಡದ ಕಾರಣ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಆಗುತ್ತಿದೆ. ಆ ನಷ್ಟ ಭರ್ತಿಗೆ ಜನರ ಮೇಲೆ ದರ ಏರಿಕೆಯ ಬರೆ ಹಾಕಲಾಗುತ್ತಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.

  • ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

    ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

    – ರಾಜ್ಯ ರಾಜಕಾರಣದಲ್ಲಿ ರಸ ಮಂಜರಿ ಕಾರ್ಯಕ್ರಮ
    – ಒಬ್ಬ ಸಚಿವ ವೈಚಾರಿಕವಾಗಿ ಶುದ್ಧವಾಗಿರಬೇಕು

    ಬೆಂಗಳೂರು: ಮಾಜಿ ಮಂತ್ರಿ ಅವರದ್ದು ಎನ್ನಲಾದ ವೀಡಿಯೋ ಬಯಲಾಗ್ತಿದ್ದಂತೆ ಸಂಪುಟದ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿರೋದು ವಿಪಕ್ಷಗಳಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಕೆಪಿಸಿಸಿ ವಕ್ತಾರ ಸಂಕೇತ್ ಏಣಗಿ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ರಸ ಮಂಜರಿ ಕಾರ್ಯಕ್ರಮ ಆರಂಭವಾಗಿದೆ. ಪದೇ ಪದೇ ರಂಜಿಸತೊಡಗಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ.. ಇವರ ಸಿಡಿನೂ ಇದ್ಯಾ ಎಂಬ ಅನುಮಾನ ಮೂಡುತ್ತಿದೆ. ನಿಮಗೆ ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರಗೋಗಿ ಅಂತಾ ಆಗ್ರಹಿಸಿದರು.

    8 ತಿಂಗಳ ಹಿಂದೆ ಯತ್ನಾಳ್ ಈ ಬಗ್ಗೆ ಮಾತನಾಡುತ್ತಿದ್ದರು. ಆನಂತರ ಸಂತೋಷ್ ಆತ್ಮಹತ್ಯೆ ಪ್ರಯತ್ನ ಮಾಡಿದರು. ಆನಂತರ ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಎಲ್ಲರು ಸಿಡಿ ಸಿಡಿ ಅನ್ನತೊಡಗಿದರು. ಯತ್ನಾಳ್ ಸ್ಪಷ್ಟವಾಗಿ ಯಡಿಯೂರಪ್ಪ, ವಿಜಯೇಂದ್ರ, ಬಿಜೆಪಿ ಸಿಡಿಯಿಂದ ಮುಜುಗರಕ್ಕೆ ಒಳಗಾಗ್ತಾರೆ ಅಂತ. ನಾಳೆ ಒಂದು ಸುದ್ದಿ ರಾಜ್ಯ ಸರ್ಕಾರವನ್ನ ತಲ್ಲಣಗೊಳಿಸುತ್ತೆ ಅಂತ ಯತ್ನಾಳ್ ಹೇಳಿದರು. ಮರು ದಿನ ಸಿಡಿ ಬಂತು. ಸಚಿವರು ಹಾಗೂ ಶಾಸಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಲ್ಲಿ ಸಿಡಿ ಬಹಿರಂಗವಾಗುತ್ತೋ ಎಂಬ ಭಯ ಕಾಡ್ತಿದೆ ಅನ್ನಿಸುತ್ತೆ. ಏನು ತಪ್ಪು ಮಾಡದಿದ್ದರೆ ಕೋರ್ಟ್ ಗೆ ಹೋಗುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದರು.

    ಆರು ಸಚಿವರು ರಕ್ಷಣೆ ಕೊಡಿ ಅಂತ ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮನ್ನೇ ರಕ್ಷಣೆ ಮಾಡಿಕೊಳ್ಳೋಕೆ ಆಗದವರು ಇವರು ಜನರಿಗೆ ಇನ್ನೇನು ರಕ್ಷಣೆ ಕೊಡ್ತಾರೆ? ಇವರಿಗೆ ತಪ್ಪು ಮಾಡಿರುವ ಗಿಲ್ಟ್ ಕಾಡುತ್ತಿರಬಹುದು. ಏನೂ ತಪ್ಪು ಮಾಡದಿದ್ದರೆ ಯಾಕೆ ಹೋಗಬೇಕಿತ್ತು. ಒಬ್ಬ ಸಚಿವ ವೈಚಾರಿಕವಾಗಿ ಶುದ್ಧವಾಗಿರಬೇಕು. ಬ್ಲಾಕ್ ಮೇಲ್ ಮಾಡ್ತಿದ್ರೆ ಗಮನಕ್ಕೆ ತರಬೇಕು. ಸುಮ್ಮನೆ ಭಯವಿತ್ತು ಅಂತ ಯಾಕೆ ಹೋಗಬೇಕು. ಹರಿಶ್ಚಂದ್ರರಾಗಿದ್ದರೆ ಮಿಡಿಯಾ ಯಾಕೆ ಬಿತ್ತರಿಸುತ್ತೆ. ಅಸತ್ಯ ಇದ್ದರೆ ಕೋರ್ಟ್ ಕಟಕಟೆ ಹತ್ತಬಹುದು. ಸುಮ್ಮನೆ ಮಿಡಿಯಾ ಮೇಲೆ ಯಾಕೆ ಆರೋಪ ಮಾಡ್ತೀರಿ ಎಂದು ವಾಗ್ದಾಳಿ ನಡೆಸಿದರು.

    ಸಂತ್ರಸ್ಥರೇ ದೂರು ಕೊಡಬೇಕೆಂದಿಲ್ಲ. ಅವರ ಪರವಾಗಿ ಯಾರು ಬೇಕಾದರೂ ದೂರು ಕೊಡಬಹುದು. ಅವರು ಠಾಣೆ ಮೆಟ್ಟಿಲೇರಿದಾಗ ದೂರು ದಾಖಲಿಸಬೇಕು. ಪುರಾವೆಗಳು ಇದ್ದರೆ ತಕ್ಷಣವೇ ಎಫ್ ಐಆರ್ ಮಾಡಬೇಕು. ಆದ್ರೆ ಇಲ್ಲಿ ಆಡಿಯೋ, ವೀಡಿಯೋ ಇರುವ ಸಿಡಿ ಇದೆ. ಇದೆಲ್ಲವೂ ಎಫ್ ಐಆರ್ ಹಾಕಲು ಮುಖ್ಯವಾಗಿರುತ್ತದೆ. ಇಲ್ಲಿಯವರೆಗೆ ಎಫ್ ಐಆರ್ ದಾಖಲಿಸಿಲ್ಲ. ಇವತ್ತು ಕಮೀಷನರ್ ಗೂ ಎಫ್ ಐಆರ್ ಹಾಕಲು ಸಾಧ್ಯವಾಗ್ತಿಲ್ಲ. ಇದು ಕಂಟೆಂಫ್ಟ್ ಆಫ್ ಕೋರ್ಟ್ ಆಗಲಿದೆ, ಪೊಲೀಸ್ ಆಯುಕ್ತರಿಗೂ ಇದು ಅನ್ವಯವಾಗಲಿದೆ. ಎಫ್ ಐಆರ್ ದಾಖಲಿಸದೆ ತನಿಖೆ ಮಾಡುತ್ತಿದ್ದಾರೆ. ಇನ್ನೂ ವಿಚಾರಣಾ ಹಂತದಲ್ಲೇ ಪೊಲೀಸರಿದ್ದಾರೆ. ಇಲ್ಲಿಯವರೆಗೆ ಯಾಕೆ ಎಫ್ ಐಆರ್ ದಾಖಲಿಸಿಲ್ಲ ಎಂದರು.

    ಒಂದು ಹೆಜ್ಜೆ ಮುಂದೆ ಹೋದ ಮಾಜಿ ಸಚಿವ ಸಾರಾ ಮಹೇಶ್, ಅಂಗೈ ಹುಣ್ಣಿಗೆ ಕನ್ನಡಿ ಬೇಕೇನ್ರಿ ಅರ್ಜಿ ಹಾಕಿರೋದೇ ನಾವೆಲ್ಲಾ ತಲೆ ತಗ್ಗಿಸೋ ವಿಚಾರ. ಯಾರು ಕೋರ್ಟಿಗೆ ಹೋಗಿದ್ದಾರೋ.. ಅವರನ್ನೆಲ್ಲಾ ಸಂಪುಟದಿಂದ ವಜಾ ಮಾಡಿ ಅಂತಾ ಆಗ್ರಹಿಸಿದ್ದಾರೆ. ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ವಿ ಅಂದ್ರು. ಬಾಂಬೆನಲ್ಲಿ ಏನ್ ಮಾಡ್ತಿದ್ರು ಅಂತ ಈಗ ಹೇಳಲಿ. ಅದರ ಬಗ್ಗೆ ಮಾತನಾಡೋಕು ಅಸಹ್ಯ ಆಗುತ್ತೆ ಅಂತಾ ಹೇಳಿದ್ರು. ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೀತಿನಿ ಅಂದವ್ರು ಎಲ್ಲಿ ಹೋದ್ರು ಎಂದು ವಿಶ್ವನಾಥ್‍ರನ್ನು ಕೆಣಕಿದರು.

  • ಬಿಜೆಪಿ ಹೈಕಮಾಂಡಿಗೆ ತಲೆನೋವು ತಂದ ಮೀಸಲಾತಿ ಹೋರಾಟ

    ಬಿಜೆಪಿ ಹೈಕಮಾಂಡಿಗೆ ತಲೆನೋವು ತಂದ ಮೀಸಲಾತಿ ಹೋರಾಟ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಈಗ ಮೀಸಲಾತಿ ಹೋರಾಟ ತಲೆನೋವು ತಂದಿದೆ. ಏಕಕಾಲಕ್ಕೆ ಮೂರು ಪ್ರಬಲ ಸಮುದಾಯಗಳಿಂದ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿರುವ ಕಾರಣ ಬಿಜೆಪಿ ಸಚಿವರು, ಶಾಸಕರು, ಮುಖಂಡರಿಗೆ ಸಂದೇಶ ರವಾನೆ ಮಾಡಿ ಸುಮ್ಮನಿರಿಸಲು ಹೈಕಮಾಂಡ್‌ ಮುಂದಾಗಿದೆ.

    ಹೌದು. ಪಂಚಮಸಾಲಿ, ಕುರುಬ, ವಾಲ್ಮೀಕಿ ಸಮುದಾಯದಿಂದ ಮೀಸಲಾತಿ ಹೋರಾಟ ಈಗ ಜಾಸ್ತಿಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಈ ಹೋರಾಟದಲ್ಲಿ ಬಿಜೆಪಿ ಸಚಿವರು, ಶಾಸಕರು ಮುಂದಾಳತ್ವ ವಹಿಸಿರುವುದು ರಾಷ್ಟ್ರೀಯ ನಾಯಕರಿಗೆ ದೊಡ್ಡ ತಲೆನೋವಾಗಿದೆ.

    ಕುರುಬ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಸಚಿವ ಈಶ್ವರಪ್ಪ ಜೊತೆ ಸರ್ಕಾರದ ಮೂವರು ಸಚಿವರು ಭಾಗಿಯಾಗಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಶಾಸಕ ಯತ್ನಾಳ್ ಸಕ್ರಿಯವಾಗಿದ್ದರೆ ವೀರಶೈವ-ಲಿಂಗಾಯತ ಒಬಿಸಿ ಮೀಸಲಾತಿ ಪರ ಬಿಎಸ್‍ವೈ ಸರ್ಕಾರದ ಸಚಿವರಿದ್ದಾರೆ.

    ಒಂದು ವೇಳೆ ಮೀಸಲಾತಿ ನೀಡಿದರೆ ಇತರ ಸಮಾಜಗಳಿಗೆ ಪೆಟ್ಟು ಬೀಳಬಹುದು ಎಂಬ ಮಾಹಿತಿ ಹೈಕಮಾಂಡ್‌ ಅಂಗಳಕ್ಕೆ ತಲುಪಿದೆ. ಈ ಕಾರಣಕ್ಕೆ ಮೀಸಲಾತಿ ಹೋರಾಟ ತೀವ್ರ ಹೊತ್ತಲ್ಲೇ ಗುರುವಾರ ಬಿಜೆಪಿ ಹೈಕಮಾಂಡ್‍ನಿಂದ ಸಂದೇಶ ಹೊತ್ತುಕೊಂಡು ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಬೆಂಗಳೂರಿಗೆ ಬರುತ್ತಿದ್ದಾರೆ.

    ಹಾಸನದಲ್ಲಿ ರಾಜ್ಯ ಬಿಜೆಪಿಯ ವಿವಿಧ ಘಟಕಗಳು, ಸಹ ಸಂಚಾಲಕರ ಸಭೆ ನಡೆಯಲಿದ್ದು ಅಂದು ಸಂಜೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಸಿಎಂ ಬಿಎಸ್‍ವೈ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಜೊತೆ ಮೀಸಲಾತಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

    ಹೈಕಮಾಂಡ್‌ ಆತಂಕ ಏನು?
    ಮೀಸಲಾತಿ ಹೋರಾಟದ ಗೊಂದಲದಿಂದ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕಾಂಗ್ರೆಸ್ ಬಹುದೊಡ್ಡ ನಷ್ಟ ಅನುಭವಿಸಿದೆ. ಕಾಂಗ್ರೆಸ್‍ಗೆ ಬಂದ ಪರಿಸ್ಥಿತಿ ನಮ್ಮ ಪಕ್ಷಕ್ಕೂ ಬಾರದಂತೆ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು. ಈ ಕಾರಣಕ್ಕೆ ಬಿಜೆಪಿ ಸಚಿವರು, ಶಾಸಕರು, ಮುಖಂಡರು ಸುಮ್ಮನಿರಬೇಕು.

  • ಅಮಿತ್ ಶಾ ಒಂದೇ ಒಂದು ಮಾತು ಯಡಿಯೂರಪ್ಪ ಭವಿಷ್ಯ ಹೇಳುತ್ತಾ?

    ಅಮಿತ್ ಶಾ ಒಂದೇ ಒಂದು ಮಾತು ಯಡಿಯೂರಪ್ಪ ಭವಿಷ್ಯ ಹೇಳುತ್ತಾ?

    – ಇಂದು ಸಿಎಂಗೆ ಸಿಗೋದು ಸಿಹಿಯೋ? ಕಹಿಯೋ?

    ಬೆಂಗಳೂರು: ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಎರಡನೇ ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಿಹಿ ಸುದ್ದಿ ಸಿಗುತ್ತಾ ಅಥವಾ ಕಹಿ ಸುದ್ದಿ ಸಿಗುತ್ತಾ ಅನ್ನೋ ಟೆನ್ಷನ್ ಕಮಲ ಪಡಸಾಲೆಯಲ್ಲಿ ಹೆಚ್ಚಾಗಿದೆ.

    ಶನಿವಾರ ಮಾತನಾಡಿದ್ದ ಅಮಿತ್ ಶಾ, ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಹೊಗಳಿ ಬಹುಪರಾಕ್ ಹೇಳಿದ್ದರು. ಮುಂದಿನ ಎರಡೂವರೆ ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದೆ ಎಂದು ಮಾತ್ರ ಹೇಳಿದ್ದರು. ಆದ್ರೆ ಮುಂದಿನ ಎರಡೂವರೆ ವರ್ಷ ಯುಡಿಯೂರಪ್ಪ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂಬುದರ ಬಗ್ಗೆ ಶಾ ಎಲ್ಲಿಯೂ ಹೇಳಿರಲಿಲ್ಲ. ಹಾಗಾಗಿ ಬೆಳಗಾವಿ ಪಕ್ಷದ ಸಮಾವೇಶದಲ್ಲಿ ಯಡಿಯೂರಪ್ಪ ಕುರ್ಚಿಗೆ ಇರುವ ಪೂರ್ಣಾವಧಿ ಅನಿಶ್ಚಿತತೆಗೆ ಉತ್ತರ ಸಿಗುತ್ತಾ ಅಂತ ಕಮಲ ನಾಯಕರು ಕಾಯುತ್ತಿದ್ದಾರೆ.

    ಸಂಪುಟ ವಿಸ್ತರಣೆ ವೇಳೆಯಲ್ಲಿ ಮಾರ್ಚ್ ನಂತರ ಸಿಎಂ ಕುರ್ಚಿಗೆ ಕ್ರಾಂತಿ ಆಗಲಿದೆ ಎಂಬ ಮಾತುಗಳಿಗೆ ಮತ್ತೆ ಜೀವ ಬಂದಿದೆ. ಬಜೆಟ್ ಮಂಡನೆ ನಂತತ ಅಂದ್ರೆ ಮಾರ್ಚ್ ಅಂತ್ಯದಲ್ಲಿ ಸಿಎಂ ಸ್ಥಾನಕ್ಕೆ ಬೇರೊಬ್ಬರು ಬರಲಿದ್ದಾರೆ ಅನ್ನೋ ಚರ್ಚೆಗಳು ಆರಂಭಗೊಂಡಿವೆ. ಆದ್ರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತ್ರ ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿರಲಿದ್ದಾರೆ ಎಂದು ಹೇಳಿದ್ದರು. ಆದ್ರೆ ಅಮಿತ್ ಶಾ ಮಾತ್ರ ಬಹಿರಂಗವಾಗಿ ಈ ಮಾತುಗಳನ್ನ ಹೇಳದ ಕಾರಣ ಹರಿದಾಡುತ್ತಿರುವ ಅಂತೆ ಕಂತೆಗಳು ಸತ್ಯಕ್ಕೆ ಹತ್ತಿರವಾದವು ಅನ್ನೋ ಸಣ್ಣ ಅನುಮಾನ ಕೇಸರಿ ನಾಯಕರ ಮನದಲ್ಲಿ ಮನೆ ಮಾಡಿದೆ.

  • ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ

    ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದರು. ಆದ್ರೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಕಾಂಗ್ರೆಸ್ ಟ್ರಬಲ್ ಶೂಟರ್ ಗೆ ಶಾಕ್ ನೀಡಿದ್ದಾರೆ. ಉಪ ಚುನಾವಣೆ ಹೊಸ್ತಿಲದಲ್ಲಿರುವ ಸಮಯದಲ್ಲಿ ಸಿಬಿಐ ದಾಳಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೈ ಮುಖಂಡರು ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

    ಶಿರಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದ ಡಿ.ಕೆ.ಶಿವಕುಮಾರ್ ಇಂದು ಆರ್.ಆರ್.ನಗರದಲ್ಲಿ ಸ್ಪರ್ಧಿಸುವ ಸ್ಪರ್ಧಿಯ ಹೆಸರು ಘೋಷಣೆ ಮಾಡುವದಲ್ಲಿದ್ದರು. ಇಂದು ಅಥವಾ ನಾಳೆ ಅಭ್ಯರ್ಥಿಉ ಹೆಸರು ಘೋಷಣೆ ಮಾಡಿ, ಉಪ ಚುನಾವಣೆ ಅಖಾಡಕ್ಕೆ ಇಳಿಯಲಿದ್ದರು. ಚುನಾವಣೆ ಜೋಶ್ ನಲ್ಲಿದ್ದ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಉರುಳಿನಿಂದ ಬಚಾವ್ ಆಗಬೇಕಿದೆ.

    https://www.facebook.com/339166656101093/videos/341909803693600

    ತನ್ನದೇ ಕ್ಷೇತ್ರವಾಗಿರುವ ಆರ್.ಆರ್.ನಗರ ಉಳಿಸಿಕೊಳ್ಳಲು ಡಿಕೆ ಬ್ರದರ್ಸ್ ಚುನಾವಣೆ ರಣತಂತ್ರ ರೂಪಿಸಿದ್ದರು. ಇತ್ತ ಜೆಡಿಎಸ್ ತೆಕ್ಕೆಯಲ್ಲಿರುವ ಶಿರಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಾಂಪ್ರದಾಯಿಕ ಎದುರಾಳಿಗೆ ಸೋಲಿನ ರುಚಿ ತೋರಿಸಲು ಕೆಪಿಸಿಸಿ ಸಾರಥಿಯಾಗಿರುವ ಡಿ.ಕೆ. ಶಿವಕುಮಾರ್ ಪ್ಲಾನ್ ಮಾಡಿಕೊಂಡಿದ್ದರು.

    https://www.facebook.com/339166656101093/videos/324768682143161

  • ಕಟೀಲ್ ರಾಜ್ಯ ಬಿಜೆಪಿಯ ಕಾಮಿಡಿ ಆ್ಯಕ್ಟರ್: ಕಾಂಗ್ರೆಸ್ ಟ್ವೀಟ್

    ಕಟೀಲ್ ರಾಜ್ಯ ಬಿಜೆಪಿಯ ಕಾಮಿಡಿ ಆ್ಯಕ್ಟರ್: ಕಾಂಗ್ರೆಸ್ ಟ್ವೀಟ್

    -ಕಾಂಗ್ರೆಸ್ ಟ್ವೀಟ್‍ಗೆ ನಳಿನ್ ತಿರುಗೇಟು

    ಬೆಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಬಿಜೆಪಿಯ ಕಾಮಿಡಿ ಆ್ಯಕ್ಟರ್ ಎಂದು ವ್ಯಂಗ್ಯವಾಡಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಕಾಂಗ್ರೆಸ್ ಟ್ವೀಟ್‍ಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಮಿಡಿ ಮಾಡುವ ವ್ಯಕ್ತಿ ಯಾರು ಮತ್ತು ಕಾಮಿಡಿಯಾದ ಪಕ್ಷ ಯಾವುದು ಎಂದು ದೇಶದ ಜನತೆಗೆ ಗೊತ್ತು ಎಂದು ಟ್ವೀಟ್ ಮಾಡಿದ್ದಾರೆ.

    ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಬಗ್ಗೆ ಕಾಂಗ್ರೆಸ್ ರಾಜ್ಯದ ರೈತರನ್ನು ದಿಕ್ಕು ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದರು. ಈ ಟ್ವೀಟ್ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಕಟೀಲ್ ಅವರಿಗೆ ತಿರುಗೇಟು ನೀಡಿತ್ತು.

    ನಳಿನ್ ಟ್ವೀಟ್: ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ರೈತನ ಮಗನಾಗಿ, ರೈತಪರ ಹೋರಾಟಗಳಿಂದ ಜನಮನ ಗೆದ್ದವರು. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು, ರೈತರ ಭೂಮಿಯನ್ನು ಕಬಳಿಸಿ ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅಮಾಯಕ ರೈತರನ್ನು ದಾರಿ ತಪ್ಪಿಸಿ ಮೋಸಗೊಳಿಸುತ್ತಿದ್ದಾರೆ. ಅವರ ಕಪಟ ಹೋರಾಟವನ್ನು ನೈಜ ರೈತ ನಂಬುವುದಿಲ್ಲ.

    ಕಾಂಗ್ರೆಸ್ ಟ್ವೀಟ್: ರಾಜ್ಯ ಬಿಜೆಪಿಯ ಕಾಮಿಡಿ ಆಕ್ಟರ್ ನಳಿನ್ ಕುಮಾರ್ ಕಟೀಲ್‍ಅವರೇ ಅಕ್ರಮ ‘ಡಿನೋಟಿಫಿಕೇಷನ್’ ನಂತಹ ಭೂ ಹಗರಣದವರು, ಅಕ್ರಮ ಗಣಿ ಹಗರಣದವರು, ಜೈಲಿಗೆ ಹೋಗಿ ಬಂದವರು ನಿಮ್ಮಲ್ಲೇ ಇದ್ದಾರೆ. ‘ಒಂದು ಡಾಲರ್’ಗೆ 15 ರೂಪಾಯಿ ಮಾಡುತ್ತೇವೆಂದು ಅಮಾಯಕರ ದಾರಿ ತಪ್ಪಿಸುವ ಕಲೆ ನಿಮಗಿಂತ ಚೆನ್ನಾಗಿ ಇನ್ಯಾರಿಗೆ ತಿಳಿದಿರಲು ಸಾಧ್ಯ ಹೇಳಿ?

    ನಳಿನ್ ಟ್ವೀಟ್: ಕಾಮಿಡಿ ಮಾಡುವ ವ್ಯಕ್ತಿ ಯಾರು ಮತ್ತು ಕಾಮಿಡಿಯಾದ ಪಕ್ಷ ಯಾವುದು ಎಂದು ದೇಶದ ಜನತೆಗೆ ಸರಿಯಾಗಿ ತಿಳಿದಿದೆ. ಜೈಲಿಗೆ ಹೋಗಿ ಬಂದವರೆಲ್ಲಾ ಬಿಜೆಪಿಯಲ್ಲೇ ಇರುವುದು ಎಂದಾದರೇ ತಿಹಾರ್ ಜೈಲು ಕಾಂಗ್ರೆಸ್ ನವರಿಗೆ ಜೈಲಿನ ಹಾಗೆ ಕಾಣಲಿಲ್ಲವೇ? ಜಾಮೀನಿನ ಮೇಲೆ ಹೊರಗೆ ಇರುವುದೇ ಪಕ್ಷದ ಅಧ್ಯಕ್ಷರಾಗಲು ಇರುವ ಮಾನದಂಡವೇ ಎಂದು ಪ್ರಶ್ನೆ ಮಾಡಿದ್ದಾರೆ.

  • ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ

    ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ

    -ಅಣ್ಣ ಉಮೇಶ್ ಕತ್ತಿಗೆ ಸಚಿವ ಸ್ಥಾನ ಸಿಗಬೇಕು
    -ರಾಜಕಾರಣ ಹರಿಯುತ್ತಿರೋ ನೀರು, ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ
    -ಕೊರೊನಾ ಬಂದ್ರೆ ಊಟ ಬಿಡ್ತೀರಾ? ಹಾಗೆ ರಾಜಕಾರಣ

    ಬೆಂಗಳೂರು: ಇದೇನು ಬಂಡಾಯ ಅಲ್ಲ. ಈ ಹಿಂದೆ ಯಡಿಯೂರಪ್ಪನವರು ಕೊಟ್ಟ ಮಾತನ್ನು ನೆನಪಿಸಿದ್ದೇವೆ ಎಂದು ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಲೋಕಸಭಾ ಚುನಾವಣೆ ವೇಳೆ ಟಿಕೆಟ್ ತಪ್ಪಿದಾಗ ನಮ್ಮನ್ನು ಭೇಟಿಯಾಗಿದ್ದ ಯಡಿಯೂರಪ್ಪನವರು ರಾಜ್ಯಸಭೆಯ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಅದಕ್ಕಿಂತ 2014ರ ಚುನಾವಣೆಯಲ್ಲಿ ಮೂರು ಸಾವಿರ ಮತಗಳ ಅಂತರದಿಂದ ಸೋತಿದ್ದೆ. ಆದ್ರೂ 2019ರ ಚುನಾವಣೆಯಲ್ಲಿ ನನಗೆ ಯಾಕೆ ಟಿಕೆಟ್ ನೀಡಲಿಲ್ಲ ಕಾರಣ ಇದುವರೆಗೂ ಗೊತ್ತಿಲ್ಲ. ನಾವೆಲ್ಲ 15 ಶಾಸಕರು ಒಂದೆಡೆ ಸೇರಿದ ವಿಷಯ ಸಿಎಂ ಯಡಿಯೂರಪ್ಪರಿಗೆ ಗೊತ್ತು ಎಂದು ಹೇಳುವ ಮೂಲಕ ಸಭೆ ನಡೆದಿರೋದು ಸತ್ಯ ಎಂದು ಒಪ್ಪಿಕೊಂಡರು. ಇದನ್ನೂ ಓದಿ: ಅಸಮಾಧಾನಿತರಿಗೆ ಜುಲೈನಲ್ಲಿ ಬಂಫರ್ ಗಿಫ್ಟ್ – ಭರವಸೆಗೆ ಓಕೆ ಅಂದ್ರಾ ತ್ರಿಮೂರ್ತಿಗಳು?

    ಸೋದರ ಉಮೇಶ್ ಕತ್ತಿ ಬಿಜೆಪಿಯಲ್ಲಿರುವ ಹಿರಿಯ ನಾಯಕರಲ್ಲಿ ಒಬ್ಬರು. ಹಾಗಾಗಿ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು. ನನಗೆ ರಾಜ್ಯಸಭೆಯ ಟಿಕೆಟ್ ಸಿಗಲೇಬೇಕು. ಯಡಿಯೂರಪ್ಪನವರು ನಮ್ಮ ನಾಯಕರು. ನಾವು ಚಿಕ್ಕವರಿದಾಗಿನಿಂದಲೂ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬಂದಿದ್ದೇವೆ. ಉಮೇಶ್ ಕತ್ತಿ ಸಚಿವ ಸ್ಥಾನ ಮತ್ತು ನಾನು ರಾಜ್ಯಸಭಾ ಟಿಕೆಟ್ ಕೇಳುವುದು ನಮ್ಮ ಹಕ್ಕು. ಆದ್ರೆ ನಾವು ಮುಖ್ಯಮಂತ್ರಿಗಳನ್ನ ಬ್ಲ್ಯಾಕ್ ಮೇಲ್ ಮಾಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಹೇಳಿದ್ದೇವೆ ಎಂದ್ರು. ಇದನ್ನೂ ಓದಿ: ನಾನೇನು ಸನ್ಯಾಸಿ ಅಲ್ಲ, ಸಚಿವ ಸ್ಥಾನದ ಆಸೆ ಇದೆ: ನಿರಾಣಿ

    ಬುಧವಾರ ಮತ್ತು ಒಂದು ವಾರದ ಹಿಂದೆಯೂ ಸಭೆ ನಡೆದಿದೆ. ಸಭೆಯಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಭಾಗದ ಶಾಸಕರು ಭಾಗಿಯಾಗಿದ್ದರು ಎಂಬ ಮಾಹಿತಿ ನನಗಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದೇವೆ. ರಾಜಕಾರಣ ಅನ್ನೋದು ನಿಂತ ನೀರಲ್ಲ ಎಂಬ ವಿಷಯ ಎಲ್ಲರಿಗೂ ಗೊತ್ತು. ಕೊರೊನಾ ಬಂದ್ರೆ ರಾಜಕಾರಣ ಮಾಡಬಾರದೆಂದು ಅಂತ ಇದೆನಾ? ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

  • ಅಸಮಾಧಾನಿತರಿಗೆ ಜುಲೈನಲ್ಲಿ ಬಂಫರ್ ಗಿಫ್ಟ್ – ಭರವಸೆಗೆ ಓಕೆ ಅಂದ್ರಾ ತ್ರಿಮೂರ್ತಿಗಳು?

    ಅಸಮಾಧಾನಿತರಿಗೆ ಜುಲೈನಲ್ಲಿ ಬಂಫರ್ ಗಿಫ್ಟ್ – ಭರವಸೆಗೆ ಓಕೆ ಅಂದ್ರಾ ತ್ರಿಮೂರ್ತಿಗಳು?

    ಬೆಂಗಳೂರು: ಅಸಮಾಧಾನಿತ ಶಾಸಕರು ರಹಸ್ಯ ಸಭೆಗಳ ನಡೆಸುವ ವಿಚಾರ ತಿಳಿದ ಸಿಎಂ ಯಡಿಯೂರಪ್ಪ, ಜುಲೈನಲ್ಲಿ ಬಂಫರ್ ಗಿಫ್ಟ್ ನೀಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

    ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೈಯಲ್ಲಿ ಬಂಡಾಯದ ಬಾವುಟ ಹಿಡಿಯಲು ಸಿದ್ಧರಾಗಿರುವ ತ್ರಿಮೂರ್ತಿ(ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ)ಗಳ ಪೈಕಿ ಒಬ್ಬರನ್ನು ಕರೆಸಿ ಮುಖ್ಯಮಂತ್ರಿಗಳು ಮಾತನಾಡಿದ್ದಾರಂತೆ. ಜುಲೈನಲ್ಲಿ ನಿಮಗೆ ಬಂಫರ್ ಗಿಫ್ಟ್ ಸಿಗಲಿದ್ದು, ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದು ಹೇಳಿದರಂತೆ. ಸಿಎಂ ಭರವಸೆಗೆ ಓಕೆ ಅಂದು, ಈಗ ಸಮಾಧಾನ ಏಕೆ ಮಾಡುತ್ತಿದ್ದೀರಿ ಎಂದು ಹೇಳಿ ಹೊರ ಬಂದಿದ್ದರಿಂದ ಸಿಎಂ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.

    ದೆಹಲಿಗೆ ಹೋಗಲು ಪ್ಲಾನ್: ಯಶವಂತಪುರದ ಅಪಾರ್ಟ್ ಮೆಂಟ್ ನಲ್ಲಿ ಸಭೆ ಸೇರಿದ್ದ ಅಸಮಾಧಾನಿತ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ಯಡಿಯೂರಪ್ಪನವರ ವಿರುದ್ಧವೇ ದೂರು ಸಲ್ಲಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಈ ಸಭೆಯಲ್ಲಿ ಭಾಗಿಯಾಗಿದ್ದ 15ಕ್ಕೂ ಅಧಿಕ ಶಾಸಕರದ್ದು, ಯಡಿಯೂರಪ್ಪರನ್ನ ಕೆಳಗೆ ಇಳಿಸಬೇಕು, ಬಿಸಿಮುಟ್ಟಿಸಬೇಕು ಎಂಬುದು ಒಂದೇ ಅಜೆಂಡಾ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.