Tag: Karnataka news

  • 3 ಗಂಟೆಯ ಅವಧಿಯಲ್ಲಿ 12 ಕಾಲ್‌ – ಲಾಕ್‌ಡೌನ್‌ ನಿರ್ಧಾರದ ಇನ್‌ಸೈಡ್‌ ಸ್ಟೋರಿ

    3 ಗಂಟೆಯ ಅವಧಿಯಲ್ಲಿ 12 ಕಾಲ್‌ – ಲಾಕ್‌ಡೌನ್‌ ನಿರ್ಧಾರದ ಇನ್‌ಸೈಡ್‌ ಸ್ಟೋರಿ

    ಬೆಂಗಳೂರು: ಮೂರು ಗಂಟೆಯ ಅವಧಿಯ ಒಳಗಡೆ ಮುಖ್ಯಮಂತ್ರಿ ಯಡಿಯೂರಪ್ಪ 12 ಬಾರಿ ಕರೆ ಮಾಡಿ ಅಂತಿಮವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

    ಹೌದು. ಶನಿವಾರ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಿಎಂ 12 ಬಾರಿ ದೂರವಾಣಿ ಕರೆ ಮಾಡಿ ಅಂತಿಮವಾಗಿ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ. ಲಾಕ್‌ಡೌನ್‌ ಮಾಡಲು ಕಾರಣ ಏನು? ಯಾರಿಗೆಲ್ಲ ಕರೆ ಮಾಡಿದ್ದಾರೆ ಈ ಎಲ್ಲ ವಿಚಾರಗಳು ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಮತ್ತೆ ಲಾಕ್‌ ಯಾಕೆ?
    ಎರಡು ತಿಂಗಳ ಹಿಂದೆ ದೇಶಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಈಗ ಒಂದೇ ಬಾರಿಗೆ ಕೊರೊನಾ ಸ್ಫೋಟಗೊಳ್ಳುತ್ತಿರುವುದು ಸಿಎಂ ಯಡಿಯೂರಪ್ಪನವರ ಆತಂಕಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಈ ಹಿಂದೆ ತಜ್ಞರು ಬೆಂಗಳೂರಿನಲ್ಲಿ ಒಂದು ಸಾವಿರ ಪ್ರಕರಣಗಳು ದಿನ ನಿತ್ಯ ದಾಖಲಾದರೆ ಲಾಕ್‌ಡೌನ್ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದರು.

    ತಜ್ಞರು ಈ ಸಲಹೆ ನೀಡಿದ್ದರೂ ಲಾಕ್‌ಡೌನ್ ಮಾಡಿದರೆ ಆರ್ಥಿಕತೆಗೆ ಭಾರೀ ಸಮಸ್ಯೆಯಾಗಲಿದೆ. ಹೀಗಾಗಿ ಲಾಕ್‌ಡೌನ್‌ ಮಾಡದೇ ಇರಲು ಸಿಎಂ ನಿರ್ಧರಿಸಿದ್ದರು. ಕಳೆದ ವಾರ ಬೆಂಗಳೂರಿನ ಶಾಸಕರ ಜೊತೆಗಿನ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪ ಮಾಡಿ ಲಾಕ್‌ಡೌನ್ ‌ಬಿಟ್ಟು ಬೇರೆ ಯಾವುದಾದರೂ ಸಲಹೆ ಇದ್ದರೆ ತಿಳಿಸಿ ಎಂದು ಕೇಳಿದ್ದರು.

    ಈ ನಡುವೆ ಒಂದು ವಾರದಲ್ಲಿ ಕೊರೊನಾ ರಾಕೆಟ್‌ ವೇಗದಲ್ಲಿ ಬೆಂಗಳೂರಿನಲ್ಲಿ ಹರಡುತ್ತಿರುವುದು ಸಿಎಂ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಅವರು ಕರೆ ಮಾಡಿ ಕೊರೊನಾ ವರದಿ ತರಿಸಿಕೊಂಡಿದ್ದಾರೆ. ಇದರ ಜೊತೆ ಬೆಂಗಳೂರಿನ ಉಸ್ತುವಾರಿ ಹೊತ್ತುಕೊಂಡಿರುವ 8 ಮಂದಿ ನಾಯಕರಿಂದ ಮೌಖಿಕ ವರದಿ ಪಡೆದಿದ್ದಾರೆ.

    ಎಲ್ಲ ವರದಿ ನೋಡಿ “ಆರ್ಥಿಕತೆ ಲೆಕ್ಕ ಹಾಕಿದ್ರೆ ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ. ಹೀಗಾಗಿ ಲಾಕ್‍ಡೌನ್ ಮಾಡೋಣ. ಕೊರೊನಾ ಹರಡುವ ವೇಗ ಕಡಿಮೆಯಾಗುತ್ತದೆ” ಎಂದು ಸಿಎಂ ಮುಖ್ಯ ಕಾರ್ಯದರ್ಶಿ‌ ಅವರಲ್ಲಿ ಹೇಳಿದ್ದಾರೆ. ಬಳಿಕ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರ ಬಳಿ ಲಾಕ್‌‌‌‌ಡೌನ್‌ ನಿರ್ಧಾರದ ಬಗ್ಗೆ ಚರ್ಚೆ‌ ನಡೆಸಿದ್ದಾರೆ. ಕೊನೆಗೆ ಕೇಂದ್ರದ ಪ್ರತಿನಿಧಿಯ ಜೊತೆ ಈ ಬಗ್ಗೆ ಮಾತನಾಡಿ ಅಂತಿಮವಾಗಿ ಲಾಕ್‌ಡೌನ್‌ ನಿರ್ಧಾರ ಪ್ರಕಟಿಸಿದರು.

    ರಾತ್ರಿ 8.11ಕ್ಕೆ ಟ್ವೀಟ್‌ ಮಾಡಿದ ಸಿಎಂ, ಇತ್ತೀಚಿಗೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಸೋಂಕು ನಿಯಂತ್ರಣದ ದೃಷ್ಟಿಯಿಂದ, ತಜ್ಞರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ಬರುವ ಮಂಗಳವಾರ, ಜುಲೈ 14ರ ರಾತ್ರಿ 8:00 ರಿಂದ 7 ದಿನಗಳ ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗುವುದು ಎಂದು ಅಧಿಕೃತವಾಗಿ ರಾಜ್ಯದ ಜನತೆಗೆ ತಿಳಿಸಿದರು.

    ಈ ಅವಧಿಯಲ್ಲಿ ಅಗತ್ಯ ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದ್ದು, ವಿವರವಾದ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ಈಗಾಗಲೇ ನಿಗದಿಯಾಗಿರುವಂತೆ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ನಡೆಸಲಾಗುವುದು. ಲಾಕ್ ಡೌನ್ ಸಂದರ್ಭದಲ್ಲಿ ಜನರು ಯಾವುದೇ ಆತಂಕಕ್ಕೆ ಒಳಗಾಗದೇ ಸಹಕರಿಸಲು ಕೋರಿದೆ ಎಂದು ಎರಡನೇ ಟ್ವೀಟ್‌ ನಲ್ಲಿ ಹೇಳಿದರು.

    ತಜ್ಞರು ನೀಡಿದ್ದ ಸಲಹೆ ಏನು?
    ಎರಡು ವಾರಗಳ ಹಿಂದೆ ಸಿಎಂ ತಜ್ಞ ವೈದ್ಯರುಗಳಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ಡಾ.ಗಿರೀಶ್, ಡಾ.ಸುದರ್ಶನ್ ಅವರ ಜೊತೆ ಸಭೆ ನಡೆಸಿದ್ದರು. ಈ ವೇಳೆ ವೈದ್ಯರು ಹಲವು ಸಲಹೆಗಳನ್ನು ನೀಡಿದ್ದರು.
    1. ಬೆಂಗಳೂರಿಗೆ ಅಂತರ್ ಜಿಲ್ಲಾ ವಾಹನ ಓಡಾಟವನ್ನು 3 ವಾರ ಸಂಪೂರ್ಣ ಬಂದ್ ಮಾಡಿ. ಹೀಗೆ ಮಾಡಿದ್ದಲ್ಲಿ ಬೆಂಗಳೂರಿನಿಂದ ಹಳ್ಳಿಗೆ ಕೊರೊನಾ ವ್ಯಾಪಿಸುವುದನ್ನು ತಡೆಯಬಹುದು.
    2. ಬೆಂಗಳೂರಿನಲ್ಲಿ 2 ವಾರ ಪರಿಸ್ಥಿತಿ ಮಾನಿಟರ್ ಮಾಡಿ


    3. ದಿನಕ್ಕೆ ಸಾವಿರ ಪ್ರಕರಣ ಬಂದಾಗ ಬಹುತೇಕ ಲಾಕ್‍ಡೌನ್ ನಿರ್ಧಾರ ಮಾಡೋಣ
    4. ಬೆಂಗಳೂರಿನಲ್ಲಿ ಸಮುದಾಯಕ್ಕೆ ಹಬ್ಬುತ್ತಿರುವ ಆತಂಕ ಎದುರಾಗಿದೆ. ಇದನ್ನು ಈಗಲೇ ತಡೆಯಬೇಕು.
    5. ಮನೆಗಳು ದೊಡ್ಡದಾಗಿದ್ದರೆ, ಅಲ್ಲಿಯೇ ಚಿಕಿತ್ಸೆ ನೀಡಲು ಮುಂದಾಗಿ
    6. ಕೊರೋನಾ ಪರೀಕ್ಷೆಯನ್ನು ಹೆಚ್ಚಳ ಮಾಡಿ ನಿರ್ಲಕ್ಷ್ಯ ಮಾಡಬೇಡಿ
    7. ಕಂಟೈನ್ಮೆಂಟ್ ಝೋನ್ ಕಟ್ಟುನಿಟ್ಟಾಗಿ ಪಾಲನೆ ಆಗ್ತಿಲ್ಲ, ಇದನ್ನು ಬಿಗಿಗೊಳಿಸಿ