Tag: Karnataka Legislative Council

  • ಪರಿಷತ್‌ ಚುನಾವಣೆಯಲ್ಲೂ ಮೈತ್ರಿ – ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌; ಕಮಲಕ್ಕೆ 5, ಜೆಡಿಎಸ್‌ಗೆ 1 ಸ್ಥಾನ

    ಪರಿಷತ್‌ ಚುನಾವಣೆಯಲ್ಲೂ ಮೈತ್ರಿ – ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌; ಕಮಲಕ್ಕೆ 5, ಜೆಡಿಎಸ್‌ಗೆ 1 ಸ್ಥಾನ

    ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲೂ (Karnataka Legislative Council) ಬಿಜೆಪಿ-ಜೆಡಿಎಸ್‌ (BJP-JDS) ಮೈತ್ರಿ ಮುಂದುವರಿದಿದೆ. ಬಿಜೆಪಿ 5 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.

    ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯಿಂದ ಶನಿವಾರ ಟಿಕೆಟ್‌ ಘೋಷಣೆ ಮಾಡಲಾಗಿದೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ.ದೇವೇಗೌಡಗೆ ಟಿಕೆಟ್‌ ನೀಡಲಾಗಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವೈ.ಎ.ನಾರಾಯಣಸ್ವಾಮಿ ಟಿಕೆಟ್‌ ಗಿಟ್ಟಿಸಿದ್ದಾರೆ. ಇದನ್ನೂ ಓದಿ: ನಿಮ್ಮ ನಾಚಿಕೆಗೇಡಿನ ನಡವಳಿಕೆ ತೋರಿಸುವ ವೀಡಿಯೋ ನನ್ನ ಬಳಿ ಇದೆ – ರಾಜ್ಯಪಾಲರ ವಿರುದ್ಧ ದೀದಿ ಗುಡುಗು

    ಈಶಾನ್ಯ ಪದವೀಧರ ಕ್ಷೇತ್ರದಿಂದ ಅಮರನಾಥ ಪಾಟೀಲ್‌, ನೈರುತ್ಯ ಪದವೀಧರ ಕ್ಷೇತ್ರದಿಂದ ಡಾ. ಧನಂಜಯ್‌ ಸರ್ಜಿ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇ.ಸಿ.ನಿಂಗರಾಜುಗೆ ಟಿಕೆಟ್‌ ನೀಡಲಾಗಿದೆ.

    ಬಿಜೆಪಿ ಉಳಿದ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಕ್ಷೇತ್ರದಿಂದ ಮೇಲ್ಮನೆ ಹಾಲಿ ಸದಸ್ಯ ಎಸ್‌.ಎಲ್.ಭೋಜೇಗೌಡ ಅವರಿಗೆ ಟಿಕೆಟ್‌ ನೀಡುವುದು ಖಚಿತವಾಗಿದೆ. ಆದರೆ ಈವರೆಗೆ ಅಧಿಕೃತ ಘೋಷಣೆಯಾಗಿಲ್ಲ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ 50 ಸ್ಥಾನ ಕೂಡ ಗಳಿಸಲ್ಲ: ಮೋದಿ ಭವಿಷ್ಯ

    ಜೂ.3 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮೇ 16 ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆ ದಿನವಾಗಿದೆ. ಮೇ 17 ನಾಮಪತ್ರ ಪರಿಶೀಲನೆ, ಮೇ 20 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಜೂ.6 ರಂದು ಮತ ಎಣಿಕೆ ನಡೆಯಲಿದೆ.

  • 6 ಪದವೀಧರ, ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಚುನಾವಣೆ – ಜೂ.3 ಕ್ಕೆ ಮತದಾನ

    6 ಪದವೀಧರ, ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಚುನಾವಣೆ – ಜೂ.3 ಕ್ಕೆ ಮತದಾನ

    ಬೆಂಗಳೂರು: 6 ಪದವೀಧರ, ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ (Karnataka Legislative Council ) ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಜೂ.3 ಕ್ಕೆ ಮತದಾನ ನಡೆಯಲಿದ್ದು, 6 ರಂದು ಮತ ಎಣಿಕೆ ನಡೆಯಲಿದೆ.

    ಯಾವ್ಯಾವ ಕ್ಷೇತ್ರಗಳಿಗೆ ಚುನಾವಣೆ?
    ಬೆಂಗಳೂರು ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮಾಸ್ ರೇಪಿಸ್ಟ್ ಪರ ಪ್ರಧಾನಿ ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ: ರಾಹುಲ್ ಗಾಂಧಿ

    ಚಂದ್ರಶೇಖರ್‌ ಬಿ.ಪಾಟೀಲ್‌, ಆಯನೂರು ಮಂಜುನಾಥ್‌, ಎ.ದೇವೇಗೌಡ, ವೈ.ಎ.ನಾರಾಯಣಸ್ವಾಮಿ, ಎಸ್‌.ಎಲ್‌.ಭೋಜೇಗೌಡ, ಮರಿತಿಬ್ಬೇಗೌಡ ಅವರ ಅವಧಿ ಜೂ.21 ರಂದು ಮುಗಿಯಲಿದೆ.

  • ಕೆಲಸ ಮಾಡದೇ ಬಿಲ್ ಮಾಡಿಕೊಂಡಿರುವ 100% ಅಕ್ರಮ ಪಕ್ಷ ಕಾಂಗ್ರೆಸ್: ಲಕ್ಷ್ಮಣ ಸವದಿ

    ಕೆಲಸ ಮಾಡದೇ ಬಿಲ್ ಮಾಡಿಕೊಂಡಿರುವ 100% ಅಕ್ರಮ ಪಕ್ಷ ಕಾಂಗ್ರೆಸ್: ಲಕ್ಷ್ಮಣ ಸವದಿ

    ಬೆಂಗಳೂರು: ಕಾಂಗ್ರೆಸ್ (Congress) ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ನಮ್ಮಲ್ಲಿ ನೊಣ ಹುಡುಕುತ್ತಿದ್ದಾರೆ. ಹೀಗೆ ತಪ್ಪು ಸುದ್ದಿ ಹೇಳಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಚಾಳಿ. ಕಾಂಗ್ರೆಸ್ ಸರ್ಕಾರ 100% ಅಕ್ರಮದ ಸರ್ಕಾರ. ಕೆಲಸವೇ ಮಾಡದೇ ಬಿಲ್ ಮಾಡಿಕೊಂಡಿರೋದು ಕಾಂಗ್ರೆಸ್ ಅವರು. ಕಾಂಗ್ರೆಸ್ ಸರ್ಕಾರ 100% ಅಕ್ರಮ ಸರ್ಕಾರ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ (Laxman Savadi) ಕಿಡಿಕಾರಿದರು.

    ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ ಶಿವಕುಮಾರ್ (D.K Shivakumar) ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ (BJP) ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಸದಸ್ಯರು, ಸಿದ್ದರಾಮಯ್ಯ ಕಾಲದ ಹಗರಣಗಳ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅಕ್ರಮಗಳ ಸರದಾರರು ಅಂತ ಕಿಡಿಕಾರಿದರು. ಕಾಂಗ್ರೆಸ್ ತಲೆ ಮಾರಿನಿಂದ ಭ್ರಷ್ಟಾಚಾರ ಮಾಡ್ತಿದೆ ಅಂತ ಘೋಷಣೆ ಕೂಗಿದರು. ರಿಡೂ, ಕೆಪಿಎಸ್‍ಸಿ (KPSC) ಹಗರಣ, ಇಂಧನ ಹಗರಣದ ಪಿತಾಮಹ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: PFI ನಾಯಕನ ಮನೆಯಲ್ಲಿ ಸಾವರ್ಕರ್‌ ಪುಸ್ತಕ – ಶಿವಮೊಗ್ಗದಲ್ಲಿ 19 ಲಕ್ಷ ಪತ್ತೆ

    ಬಳಿಕ ಈ ಬಗ್ಗೆ ಮಾತನಾಡಿ ಲಕ್ಷ್ಮಣ ಸವದಿ, ಪೇ ಸಿಎಂ ಅಂತ ಕಾಂಗ್ರೆಸ್ ಮಾಡುತ್ತಿದೆ. ಸಿಎಂ ಬೊಮ್ಮಾಯಿ 13 ತಿಂಗಳಿಂದ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಅವರು ಸಿಎಂ, ಬಿಜೆಪಿ ಹೆಸರು ಕೆಡಿಸೋಕೆ ಅಪಪ್ರಚಾರ ಮಾಡ್ತಿದ್ದಾರೆ. ದಿಂಬು ಹಾಸಿಗೆಯಲ್ಲೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ. ಕೆಲಸಕ್ಕೆ ಬಾರದವನು 40% ಅಂತ ಪತ್ರ ಬರೆಯುತ್ತಾನೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಭೇಟಿ ಆಗಿ ಅವರು ಹೇಳಿದಂತೆ 40% ಆರೋಪ ಕೆಂಪಣ್ಣ ಮಾಡ್ತಾರೆ. ಅವರ ಹತ್ತಿರ ದಾಖಲಾತಿ ಇದ್ದರೆ ಲೋಕಾಯುಕ್ತಕ್ಕೆ ಕೊಡಲಿ. ನ್ಯಾಯಾಲಯಕ್ಕೆ ಹೋಗಲಿ. ಅನವಶ್ಯಕವಾಗಿ ಉತ್ತಮ ಸಿಎಂ ಹೆಸರು ಕೆಡಿಸೋಕೆ ಕಾಂಗ್ರೆಸ್ ಈ ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಷ್ಟ್ರೀಯ ಮೇಯರ್ ಸಮ್ಮೇಳನ – ಉಡುಪಿ ನಗರಸಭೆಯನ್ನು ಹಾಡಿಹೊಗಳಿದ ಮೋದಿ

    ಸಿಎಂ ಅವರಿಗೆ ಕಪ್ಪು ಮಸಿ ಬಳೆಯಲು ಹೋಗಿದ್ದಾರೆ. ಅದಕ್ಕೆ ಜನ ಉತ್ತರ ಕೊಡ್ತಾರೆ. ರಮೇಶ್ ಕುಮಾರ್ 3 ತಲೆಮಾರಿಗೆ ಆಗುವಷ್ಟು ಮಾಡಿದ್ದೇವೆ ಅಂತ ಹೇಳಿದ್ದರು. ಕಾಂಗ್ರೆಸ್ ಅಕ್ರಮ ಹೇಳಿದ್ದು ಅವರ ಪಕ್ಷದವರೇ, ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಅವ್ರ ಆಸ್ತಿ ನೋಡಿದ್ರೆ ಶಾಕ್ ಆಗುತ್ತೆ. ಕಬ್ಬು ಅರಿಲಿಲ್ಲ, ಒಕ್ಕಲು ತನ ಮಾಡಿಲ್ಲ. ಅಕ್ರಮ ಮಾಡಿ ಹಣ ಸಂಪಾದನೆ ಮಾಡಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಬುಕ್‍ಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡ್ತೀವಿ ಅಂತ ತಿಳಿಸಿದರು.

    ಬಳಿಕ ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ನಮ್ಮ ಸಿಎಂ ವಿರುದ್ದ ಪೇ ಸಿಎಂ ಅಂತ ಅಭಿಯಾನ ಕಾಂಗ್ರೆಸ್ ಮಾಡ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಇದೊಂದು ಭ್ರಷ್ಟ ನಡೆ. ನಮ್ಮ ಸರ್ಕಾರ ಮತ್ತು ಸಿಎಂಗೆ ಕೆಟ್ಟ ಹೆಸರು ತರಲು ಹೀಗೆ ಕಾಂಗ್ರೆಸ್‍ನವರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ, ಕತ್ತೆ ಬಿದ್ದಿದೆ. ಕ್ಲೀನ್ ಆಗಿರೋ ಬಿಜೆಪಿ ಬಗ್ಗೆ ಅವ್ರು ಮಾತಾಡ್ತಿದ್ದಾರೆ. ಇದಕ್ಕೆ ನಮ್ಮ ಪ್ರತಿಭಟನೆ ಅಂತ ನುಡಿದರು.

    Live Tv
    [brid partner=56869869 player=32851 video=960834 autoplay=true]

  • ಇನ್ಸ್‌ಪೆಕ್ಟರ್‌ ಅಮಾನತು ಪ್ರಕರಣ – ಸಭಾಪತಿ ಹೊರಟ್ಟಿ ವಿರುದ್ಧ ಪ್ರತಿಭಟನೆ

    ಇನ್ಸ್‌ಪೆಕ್ಟರ್‌ ಅಮಾನತು ಪ್ರಕರಣ – ಸಭಾಪತಿ ಹೊರಟ್ಟಿ ವಿರುದ್ಧ ಪ್ರತಿಭಟನೆ

    ಧಾರವಾಡ: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಎಫ್‍ಐಆರ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್‌ ಅಮಾನತು ಖಂಡಿಸಿ ಹೊರಟ್ಟಿ ವಿರುದ್ಧ ಪ್ರತಿಭಟನೆ ನಡೆದಿದೆ.

    ಧಾರವಾಡದ ಮುಗದ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಯ ವಿವಾದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಕೂಡಾ ವಾಲ್ಮೀಕಿ ಸಂಘದವರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್‌ಪೆಕ್ಟರ್‌ ಶ್ರೀಧರ ಸತಾರೆಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಸಭಾಪತಿ ಹೊರಟ್ಟಿ ವಿರುದ್ಧ FIR ದಾಖಲಿಸಿದ್ದ ಇನ್ಸ್‌ಪೆಕ್ಟರ್‌ ಅಮಾನತು

    ಸತಾರೆ ಅಮನತು ಖಂಡಿಸಿ ಧಾರವಾಡ ಗ್ರಾಮೀಣ ಠಾಣೆ ಎದುರು ವಾಲ್ಮೀಕಿ ಸಮಾಜದವರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ 8 ದಿನಗಳಲ್ಲಿ ಅಮಾನತು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಸವರಾಜ ಹೊರಟ್ಟಿ, ಜ. 25ಕ್ಕೆ ನನ್ನ ಮೇಲೆ ದೂರು ದಾಖಲಾಗಿತ್ತು, ಈ ವಿಷಯದ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ ನಾನು ಸುಮ್ಮನಿದ್ದೆ. ಎಸ್‍ಪಿ ಆಗಮಿಸಿ ನನ್ನೊಂದಿಗೆ ಕ್ಷಮೆ ಕೇಳಿದ್ದರು, ನಾನು ಘಟನೆ ನಡೆದ ದಿನ ಧಾರವಾಡದಲ್ಲಿ ಇರಲಿಲ್ಲ. ನಾನು ಬೆಂಗಳೂರಿನಲ್ಲಿ ಇದ್ದರು ನನ್ನ ಮೇಲೆ ಅಟ್ರಾಸಿಟಿ ದೂರು ಹಾಕಲಾಗಿದೆ. ತಪ್ಪು ಮಾಡದವರ ಮೇಲೆ ಕ್ರಮ ಕೈಗೊಂಡು ಬಲಿಪಶು ಮಾಡುವುದು ಬೇಡ. ಹಿರಿಯ ಅಧಿಕಾರಿ ಹೇಳಿದಂತೆ ಕಿರಿಯ ಅಧಿಕಾರಿಗಳ ಮೇಲೆ ಕ್ರಮ ಸರಿಯಲ್ಲ. ಪೊಲೀಸ್ ಮಹಾ ನಿರ್ದೇಶಕರ ಜೊತೆ ಈ ಬಗ್ಗೆ ಮಾತನಾಡುತ್ತೇನೆ, ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

  • ಸಭಾಪತಿ ಹೊರಟ್ಟಿ ವಿರುದ್ಧ FIR ದಾಖಲಿಸಿದ್ದ ಇನ್ಸ್‌ಪೆಕ್ಟರ್‌ ಅಮಾನತು

    ಸಭಾಪತಿ ಹೊರಟ್ಟಿ ವಿರುದ್ಧ FIR ದಾಖಲಿಸಿದ್ದ ಇನ್ಸ್‌ಪೆಕ್ಟರ್‌ ಅಮಾನತು

    ಧಾರವಾಡ: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಎಫ್‍ಐಆರ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್‌ ಶ್ರೀಧರ ಸತಾರೆಯನ್ನು ಅಮಾನತು ಮಾಡಲಾಗಿದೆ.

    ಏನಿದು ಪ್ರಕರಣ:
    ಸರ್ವೋದಯ ಶಿಕ್ಷಣ ಸಂಸ್ಥೆ ಹಾಗೂ ವಾಲ್ಮೀಕಿ ಮಹಾಸಭಾ ನಡುವೆ ಇರುವ ವಿವಾದಕ್ಕೆ ಸಂಬಂಧಿಸಿದಂತೆ ಮುಗದ ಗ್ರಾಮದಲ್ಲಿ ಗಲಾಟೆಯೊಂದು ನಡೆದಿತ್ತು. ಈ ಸಂಬಂಧ ಮೋಹನ್ ಗುಡಸಲಮನಿ ಎನ್ನುವವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸರ್ವೋದಯ ಶಿಕ್ಷಣ ಸಂಸ್ಥೆಯ ಶಿಕ್ಷಕರ ಜೊತೆ ಹೊರಟ್ಟಿಯವರನ್ನು 5ನೇ ಆರೋಪಿಯನ್ನಾಗಿ ಮಾಡಿ ಜನವರಿ 25 ರಂದು ಸತಾರೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ

    ಹೊರಟ್ಟಿ ಗಲಾಟೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು. ಆ ಬಳಿಕ ಕಳೆದ ಎರಡು ದಿನಗಳ ಹಿಂದೆ ಮೇಲ್ಮನೆಯಲ್ಲಿ ಈ ಬಗ್ಗೆ ಚರ್ಚೆ ಕೂಡಾ ನಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾಪತಿ ವಿರುದ್ಧ ಕೇಸ್ ದಾಖಲಿಸಿದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಇದೀಗ ಹೊರಟ್ಟಿ ವಿರುದ್ಧ ಪ್ರಕರಣ ದಾಖಲು ಮಾಡಿದ ಇನ್ಸ್‌ಪೆಕ್ಟರ್‌ ಶ್ರೀಧರ ಸತಾರೆಯನ್ನು ಅಮಾನತುಗೊಳಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ- ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

    ಸಭಾಪತಿ ವಿರುದ್ಧ ಕೇಸ್ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಟೀಕೆ ಕೇಳಿಬಂದಿತ್ತು. ಈ ವೇಳೆ ಎಸ್‍ಪಿ ಹಾಗೂ ಇನ್ಸ್‌ಪೆಕ್ಟರ್‌ ಮೇಲೆ ಕ್ರಮಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆಗ್ರಹಿಸಿದ್ದರು. ಅಲ್ಲದೆ ಗೃಹ ಸಚಿವ ಆರಗ ಜ್ಞಾನೇಂದ್ರ ಎರಡು ಮೂರು ದಿನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನೆಲೆ ಇಂದು ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್‌ ಶ್ರೀಧರ ಸತಾರೆಯನ್ನು ಅಮಾನತು ಮಾಡಲಾಗಿದೆ.

  • ಧರ್ಮೇಗೌಡ ಆತ್ಮಹತ್ಯೆ – ಪರಿಷತ್‌ನಲ್ಲಿ ಹೈಡ್ರಾಮಾ ನಡೆದಿದ್ದು ಯಾಕೆ? ಅಂದು ಏನಾಯ್ತು?

    ಧರ್ಮೇಗೌಡ ಆತ್ಮಹತ್ಯೆ – ಪರಿಷತ್‌ನಲ್ಲಿ ಹೈಡ್ರಾಮಾ ನಡೆದಿದ್ದು ಯಾಕೆ? ಅಂದು ಏನಾಯ್ತು?

    ಬೆಂಗಳೂರು: ಪರಿಷತ್‌ ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆಗೆ ಡಿ.15ರಂದು ನಡೆದ ಕಲಾಪವೇ ಕಾರಣ ಎನ್ನಲಾಗುತ್ತಿದೆ. ಸ್ಪೀಕರ್‌ ಪದಚ್ಯುತಿಗೊಳಿಸುವ ಸಂದರ್ಭದಲ್ಲಿ ತಳ್ಳಾಟ, ನೂಕಾಟದ ಹೈಡ್ರಾಮಾ ನಡೆದಿತ್ತು.

    ಬುದ್ಧಿವಂತರ ಮನೆ ಎಂದು ಕರೆಯಲಾಗುತ್ತಿದ್ದ ಪರಿಷತ್‌ನಲ್ಲಿ ನಡೆದ ಹೈಡ್ರಾಮಾಕ್ಕೆ ಸಾರ್ವಜನಿಕಾ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಘಟನೆಯ ನಂತರ ಧರ್ಮೇಗೌಡರು ಬಹಳ ನೊಂದಿದ್ದರು.

    ಅಂದು ಏನಾಗಿತ್ತು?
    ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಂತರ ಮೊದಲ ಬಾರಿಗೆ ಕಲಾಪವನ್ನು ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಟಿಸಿ ಕಪ್ಪು ಚುಕ್ಕೆಯನ್ನು ಅಂಟಿಸಿಕೊಂಡಿತ್ತು. ಒಂದೇ ಕುರ್ಚಿಗಾಗಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸದಸ್ಯರು ಬಡಿದಾಡಿದ ಬಳಿಕ ಮತ್ತೊಮ್ಮೆ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿಕೆ ಮಾಡಲಾಗಿದೆ.

    ಹೈಡ್ರಾಮಾಕ್ಕೆ ಕಾರಣ ಏನು?
    ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆದರೆ ಸಭಾಪತಿಗಳು ಅವಿಶ್ವಾಸ ನಿರ್ಣಯ ಕ್ರಮಬದ್ಧವಾಗಿಲ್ಲ ಎಂದು ಹೇಳಿ ತಿರಸ್ಕೃತಗೊಳಿಸಿದ್ದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತ್ತು. ಡಿ.14ರವರೆಗೆ ತನ್ನ ನಿರ್ಧಾರ ಪ್ರಕಟಿಸದ ಜೆಡಿಎಸ್‌ ಪರಿಷತ್‌ನಲ್ಲಿ ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ಜೆಡಿಎಸ್‌ನಿಂದ ಬೆಂಬಲ ಸಿಕ್ಕಿದ ಪರಿಣಾಮ ಪ್ರತಾಪ್‌ ಚಂದ್ರ ಶೆಟ್ಟಿ ರಾಜೀನಾಮೆ ನೀಡದೇ ಇದ್ದರೂ ಬಿಜೆಪಿ ಸಭಾಪತಿ ಸ್ಥಾನಕ್ಕೆ ಧರ್ಮೇಗೌಡರನ್ನು ಕೂರಿಸಿತ್ತು. ನಂತರದ 20 ನಿಮಿಷದಲ್ಲಿ ಭಾರೀ ಹೈಡ್ರಾಮಾ ನಡೆದು ನಡೆಯಬಾರದ ಘಟನೆಗಳಿಗೆ ಪರಿಷತ್‌ ಸಾಕ್ಷಿ ಆಯ್ತು.

    ಟೀಕೆ ಏನಿತ್ತು?
    ಸಭಾಪತಿ ಸೂಚನೆ ಮೇರೆಗೆ ಬೆಳಗ್ಗೆ ಕಲಾಪ ಆರಂಭಕ್ಕೆ ಮೊದಲು ಬೆಲ್ ಹಾಕಲಾಗುತ್ತದೆ. ಬೆಲ್ ಮುಗಿದ ಮೇಲೆ ಸಭಾಪತಿಗಳು ಪೀಠದ ಮೇಲೆ ಕುಳಿತು ಕಲಾಪ ಪ್ರಾರಂಭ ಮಾಡುವುದು ಸಂಪ್ರದಾಯ. ಆದರೆ ಬೆಲ್ ಹೊಡೆಯುವ ಸಮಯದಲ್ಲಿ ಉಪ ಸಭಾಪತಿ ಧರ್ಮೇಗೌಡರು ಪೀಠಕ್ಕೆ ಬಂದು ಕುಳಿತಿದ್ದರು. ಬೆಲ್‌ ಹೊಡೆಯುವ ಮೊದಲೇ ಪೀಠದಲ್ಲಿ ಧರ್ಮೇಗೌಡರು ಕುಳಿತಿದ್ದು ಸರಿಯಲ್ಲ ಎಂಬ ಟೀಕೆಯನ್ನು ಕಾಂಗ್ರೆಸ್‌ ನಾಯಕರು ವ್ಯಕ್ತಪಡಿಸಿದ್ದರು.

    ಸಭಾಪತಿ ಇಲ್ಲದೆ ವೇಳೆ ಅಥವಾ ಸಭಾಪತಿ ಸೂಚನೆ ಮೇಲೆ ಉಪ ಸಭಾಪತಿಗಳು ಕಲಾಪ ನಡೆಸಲು ಅಧಿಕಾರವಿದೆ. ಅದನ್ನು ಹೊರತು ಪಡಿಸಿ ಬೆಲ್ ಹೊಡೆಯುವಾಗ ಕುಳಿತುಕೊಳ್ಳುವಂತೆ ಇಲ್ಲ.

    ಉಪ ಸಭಾಪತಿ ಕುಳಿತ ಬಳಿಕ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಆಗಮಿಸುವ ಬಾಗಿಲನ್ನು ಬಿಜೆಪಿ ಸದಸ್ಯರು ಮುಚ್ಚಿದ್ದರು. ಇದು ನಿಯಮಬಾಹಿರವಾಗಿದ್ದು ಮಾರ್ಷಲ್‌ಗಳೇ ಬಾಗಿಲು ಮತ್ತು ಮುಚ್ಚುವ ಕೆಲಸ ಮಾಡಬೇಕು. ಆದರೆ ಬಾಗಿಲನ್ನು ಮುಚ್ಚಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್ ಸೇರಿ ಇತರರು ಡೋರ್ ಕಾಲಿನಲ್ಲಿ ಒದ್ದಿದ್ದು ಸರಿಯಲ್ಲ.

    ಪೀಠದ ಮೇಲೆ ಕುಳಿತ ಉಪಸಭಾಪತಿಯನ್ನ ಎಬ್ಬಿಸಲು ಅಧಿಕಾರ ಇರುವುದು ಸಭಾಪತಿ ಸೂಚನೆ ಮೇರೆಗೆ ಮಾರ್ಷಲ್‌ಗಳಿಗೆ ಮಾತ್ರ. ಕಾಂಗ್ರೆಸ್‌ನ ನಾರಾಯಣಸ್ವಾಮಿ ಪೀಠದ ಮೇಲೆ ಕುಳಿತ ಉಪ ಸಭಾಪತಿ ಕತ್ತು ಪಟ್ಟಿ ಇಳಿದು ಎಳೆದಾಡಿದ್ದರು. ಇದು ನಿಯಮ ಬಾಹಿರ.

    ಧರ್ಮೇಗೌಡರನ್ನು ಎಬ್ಬಿಸಿ ಕಾಂಗ್ರೆಸ್‌ ಸದಸ್ಯರು ಚಂದ್ರಶೇಖರ ಪಾಟೀಲರನ್ನು ಕೂರಿಸಿದ್ದು ಇನ್ನೊಂದು ತಪ್ಪು. ಸಭಾಪತಿ, ಉಪ ಸಭಾಪತಿ ಇಲ್ಲದ ವೇಳೆ ಸಭಾಪತಿ ಮೊದಲೇ ಸೂಚಿಸಿದ ಸದಸ್ಯರು ಮಾತ್ರ ಪೀಠದ ಮೇಲೆ ಕುಳಿತುಕೊಳ್ಳಬೇಕು. ಆದರೆ ಅ ನಿಯಮ ಗಾಳಿಗೆ ತೂರಿ ಚಂದ್ರಶೇಖರ ಪಾಟೀಲರು ಪೀಠದ ಮೇಲೆ ಕುಳಿತಿದ್ದು ತಪ್ಪು.

    vidhan parishad

    ಸಭಾಪತಿಗಳ ಪೀಠಕ್ಕೆ ಇತಿಹಾಸದ ಜೊತೆ ಅಪಾರ ಗೌರವ ಇದೆ. ಅ ಪೀಠದ ಮೇಲೆ ಸದಸ್ಯರು ಕುಳಿತಿದ್ದು ತಪ್ಪು. ಪೀಠದ ಮುಂದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರ ವರ್ತನೆ ಪೀಠಕ್ಕೆ ಮಾಡಿದ ಅಪಮಾನ.

    ಕಾಂಗ್ರೆಸ್ ಸದಸ್ಯ ಪೀಠದ ಮೇಲೆ ಕುಳಿತ ಅಂತ ಬಿಜೆಪಿ ಸದಸ್ಯರು ಪೀಠದ ಮೇಲೆ ಕುಳಿತುಕೊಳ್ಳಲು ಮುಂದಾಗಿದ್ದು ಮತ್ತೊಂದು ತಪ್ಪು. ಪೀಠದ ಮುಂದಿನ ಗ್ಲಾಸ್ ಮುರಿದದ್ದು, ಅಜೆಂಡಾ ಕಾಪಿ ಹರಿದು ಹಾಕಿದ್ದು ಪೀಠಕ್ಕೆ ತೋರಿಸಿದ ಅಗೌರವ.

    ಯಾವ ಸಮಯದಲ್ಲಿ ಏನಾಯ್ತು?
    11:18 – ಪರಿಷತ್ ಬೆಲ್.
    11:19 – ಬೆಲ್ ಹೊಡೆಯುವ ವೇಳೆಯೇ ಉಪಸಭಾಪತಿ ಎಲ್.ಧರ್ಮೇಗೌಡ ಪೀಠಾಸೀನ. ಸಭಾಪತಿ ಪ್ರವೇಶ ಬಾಗಿಲು ಬಂದ್ ಮಾಡಿದ ಬಿಜೆಪಿ ಸದಸ್ಯರು.
    11:20 – ಕಾಂಗ್ರೆಸ್ ಸದಸ್ಯರ ಆಕ್ಷೇಪ. ಬಾಗಿಲು ಒದ್ದ ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್
    11:22 – ಸಭಾಪತಿ ಪೀಠಕ್ಕೆ ಕಾಂಗ್ರೆಸ್, ಬಿಜೆಪಿ ಮುತ್ತಿಗೆ .
    11:25 – ಉಪಸಭಾಪತಿಯನ್ನ ಎಳೆದ ನಾರಾಯಣಸ್ವಾಮಿ.
    11:30 – ಸಭಾಪತಿ ಬಾಗಿಲು ತೆರೆದ ಮಾರ್ಷಲ್‌ಗಳು.

    vidhan parishad

    11:32 – ಖಾಲಿಯಿದ್ದ ಪೀಠದ ಮೇಲೆ ಕುಳಿತ ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಪಾಟೀಲ್.
    11:33 – ಬಿಜೆಪಿ-ಕಾಂಗ್ರೆಸ್ ಸದಸ್ಯರ ತಳ್ಳಾಟ ನೂಕಾಟ.
    11:35 – ಸಭಾಪತಿ ಮುಂದಿನ ಗ್ಲಾಸ್ ಮುರಿದು ಹಾಕಿದ ಕಾಂಗ್ರೆಸ್ ಬಿಜೆಪಿ ಸದಸ್ಯರು.
    11:38 – ಮಾರ್ಷಲ್ ಗಳ ಭದ್ರತೆ ಯಲ್ಲಿ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ  ಆಗಮನ.
    11:38 -ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ ಸಭಾಪತಿ.
    11:39 – ಸದನದಿಂದ ಹೊರನಡೆದ ಪ್ರತಾಪಚಂದ್ರ ಶೆಟ್ಟಿ.
    11:40 – ಸದನದಲ್ಲಿ ಗದ್ದಲ ಗಲಾಟೆ. ಪರಸ್ಪರ ನೂಕಾಟ ತಳ್ಳಾಟ.

  • ಮೈತ್ರಿಗೆ ತಲೆನೋವಾದ ವಿಧಾನ ಪರಿಷತ್ ಸಭಾಪತಿ ಸ್ಥಾನ

    ಮೈತ್ರಿಗೆ ತಲೆನೋವಾದ ವಿಧಾನ ಪರಿಷತ್ ಸಭಾಪತಿ ಸ್ಥಾನ

    -ಬಸವರಾಜ್ ಹೊರಟ್ಟಿ ಮೇಲೆ ಸಿಎಂ ಕೃಪಾಕಟಾಕ್ಷ

    ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನದ ವಿಚಾರವು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ತಲೆನೋವಾಗಿದೆ. ಆದರೆ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಂಬಲವಿದ್ದು ಅವರೇ ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಡಿಸೆಂಬರ್ 12ರಂದು ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಬಸವರಾಜ ಹೊರಟ್ಟಿ ಅವರಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಸವರಾಜ ಹೊರಟ್ಟಿ ಅವರು ಹಂಗಾಮಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಡಿಸೆಂಬರ್ 11ರಂದು ಬೆಳಗ್ಗೆ ಪರಿಷತ್ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

    ಕಾಂಗ್ರೆಸ್‍ನ ಎಸ್.ಆರ್.ಪಾಟೀಲ್ ಅವರು ಕೂಡ ಸಭಾಪತಿ ಸ್ಥಾನಕ್ಕೆ ಪ್ರಬಲ ಆಕಾಕ್ಷಿಯಾಗಿದ್ದಾರೆ. ಇದು ದೋಸ್ತಿ ಪಕ್ಷಗಳಲ್ಲಿ ಸ್ವಲ್ಪ ತಲೆನೋವು ತಂದಿದೆಯಂತೆ. ಗೊಂದಲ ಬಗೆಹರಿಸಲು ಮೈತ್ರಿ ಪಕ್ಷಗಳ ನಡುವೆ ಸೋಮವಾರ ಮಾತುಕತೆ ನಡೆಯಲಿದೆ ಎನ್ನಲಾಗಿದ್ದು, ಸಭಾಪತಿ ಸ್ಥಾನ ಯಾರಿಗೆ ಕೊಡಬೇಕೆಂದು ಅಂತಿಮಗೊಳಿಸುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv