Tag: Karnataka High Court

  • ಹಿಜಬ್‌ ಕುರಿತ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ವಕ್ಫ್‌ ಬೋರ್ಡ್‌ ಅಧ್ಯಕ್ಷ

    ಹಿಜಬ್‌ ಕುರಿತ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ವಕ್ಫ್‌ ಬೋರ್ಡ್‌ ಅಧ್ಯಕ್ಷ

    ಬೆಂಗಳೂರು: ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಯಾವ ಆಧಾರದಲ್ಲಿ ತೀರ್ಪು ಕೊಟ್ಟಿದೆ ಎಂಬುದು ಗೊತ್ತಿಲ್ಲ. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕ್ಫ್‌ ಬೋರ್ಡ್‌ ಅಧ್ಯಕ್ಷ ಮೌಲಾನ ಶಫಿ ಸಅದಿ ತಿಳಿಸಿದ್ದಾರೆ.

    ಸಂವಿಧಾನಬದ್ಧವಾಗಿ ಕಾನೂನು ಹೋರಾಟ ಮಾಡಲಾಗುವುದು. ಹೆಣ್ಣು ಹಿಜಬ್‌ ಧರಿಸುವ ಬಗ್ಗೆ ಕುರಾನ್‌ನಲ್ಲಿ ಸ್ಪಷ್ಟ ಉಲ್ಲೇಖವಿದೆ. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಉಲೆಮಾ ಒಕ್ಕೂಟದಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದೆ. ಷರಿಯತ್‌ ಬದ್ಧವಾಗಿ ಅವರಿಗೆ ಶಿಕ್ಷಣ ಸಿಗಬೇಕಿದೆ. ಹೀಗಾಗಿ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಹಿಜಬ್‌ ವಿವಾದ ಬಗ್ಗೆ ಹೈಕೋರ್ಟ್‌ ಇಂದು ತೀರ್ಪು ಪ್ರಕಟಿಸಿದೆ. ಹಿಜಬ್‌ ಇಸ್ಲಾಂ ಧರ್ಮದ ಅಗತ್ಯ ಆಚರಣೆ ಅಲ್ಲ. ಸರ್ಕಾರದ ಸಮವಸ್ತ್ರ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ತರಗತಿಗಳಿಗೆ ಹಿಜಬ್‌ ಧರಿಸಿ ಹೋಗುವಂತಿಲ್ಲ ಎಂದು ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ. ಇದನ್ನೂ ಓದಿ: ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದಿಲ್ಲ, ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಪಾಲಿಸಬೇಕು: ಬೊಮ್ಮಾಯಿ

  • ರೇಣುಕಾಚಾರ್ಯ, ಪ್ರತಾಪ್ ಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ರೇಣುಕಾಚಾರ್ಯ, ಪ್ರತಾಪ್ ಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ಬೆಂಗಳೂರು: ಬಿಜೆಪಿಯ ಇಬ್ಬರು ಜನಪ್ರತಿನಿಧಿಗಳ ವಿರುದ್ಧದ ನಾಲ್ಕು ಪ್ರಕರಣಗಳನ್ನು ಹಿಂಪಡೆದಿರುವುದಾಗಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

    2020ರ ಸೆಪ್ಟೆಂಬರ್ 16ರ ನಂತರ ಬಿಜೆಪಿಯ ಇಬ್ಬರು ಜನಪ್ರತಿನಿಧಿಗಳ ನಾಲ್ಕು ಕೇಸ್‌ಗಳನ್ನು ಹಿಂಪಡೆದಿರುವುದಾಗಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಸಂಸದ ಪ್ರತಾಪಸಿಂಹ ವಿರುದ್ಧದ ಒಂದು ಕೇಸ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿರುದ್ಧದ ಮೂರು ಪ್ರಕರಣಗಳನ್ನು ವಾಪಸ್ ಪಡೆದಿರುವುದಾಗಿ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ನೀರು ಕುಡಿಯೋಕೆ ಹೊರಟ ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಯಡಿಯೂರಪ್ಪ..!

    ಇದಕ್ಕೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ಕೃಷ್ಣಕುಮಾರ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಹೈಕೋರ್ಟ್ ಸಮ್ಮತಿಯಿಲ್ಲದೇ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹೀಗಿದ್ದೂ ಹೇಗೆ ವಾಪಸ್ ಪಡೆದಿರಿ ಎಂದು ಪ್ರಶ್ನಿಸಿದೆ.

    ವಾಪಸ್ ಪಡೆದ ಪ್ರಕರಣಗಳ ಸಂಬಂಧ ವರದಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.‌ ಈ ಮಧ್ಯೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅಂಕೋಲಾ ಕೋರ್ಟ್‌ಗೆ ಹಾಜರಾದ ಸಚಿವ ಆನಂದ ಸಿಂಗ್, ಮಾಜಿ ಸಚಿವ ಜನಾರ್ಧನ ರೆಡ್ಡಿ, ಶಾಸಕ ನಾಗೇಂದ್ರ ಸೇರಿ ಏಳು ಜನ ಜಾಮೀನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸಿಎಂ ಆಗಿದ್ದಕ್ಕೆ ಬಿಜೆಪಿ ನಾಯಕರ ಕಾಲೆಳೆದ ಸಿದ್ದರಾಮಯ್ಯ

  • ಆನ್‍ಲೈನ್ ಗೇಮಿಂಗ್ ನಿಷೇಧ – ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್

    ಆನ್‍ಲೈನ್ ಗೇಮಿಂಗ್ ನಿಷೇಧ – ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್

    ಬೆಂಗಳೂರು: ಆನ್‍ಲೈನ್ ಗೇಮಿಂಗ್ ನಿಷೇಧಿಸಿದ ಸರ್ಕಾರ ಹೊರಡಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

    ಆನ್‍ಲೈನ್ ಗೇಮಿಂಗ್ ನಿಷೇಧದ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಿತುರಾಜ್ ಅವಸ್ಥಿ ಮತ್ತು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಮಹತ್ವದ ತೀರ್ಪು ನೀಡಿದೆ. ಇದನ್ನೂ ಓದಿ: ಚೀನಾದ 54 ಆ್ಯಪ್‌ಗಳು ಬ್ಯಾನ್: ಕೇಂದ್ರ

    ಸರ್ಕಾರದ ಕ್ರಮ ಸಂವಿಧಾನಬದ್ಧವಾಗಿಲ್ಲ. ಆನ್‍ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಸಂವಿಧಾನಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.

    ಈ ಹಿಂದೆ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ಮಾಡಿ ಆನ್‍ಲೈನ್ ಗೇಮಿಂಗ್‍ಗೆ ಸರ್ಕಾರ ನಿಷೇಧ ಹೇರಿತ್ತು. ವಿಧಾನಸಭೆಯಲ್ಲಿ ಆನ್‍ಲೈನ್ ಬೆಟ್ಟಿಂಗ್ ಪ್ರತಿಬಂಧಕ ಕಾಯ್ದೆಯ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಆನ್‍ಲೈನ್ ಬೆಟ್ಟಿಂಗ್ ನಿಷೇಧ: ಅರಗ ಜ್ಞಾನೇಂದ್ರ

    ಈ ತಿದ್ದುಪಡಿ ವಿಧೇಯಕ ಲಾಟರಿ, ಕುದುರೆ ರೇಸ್‍ಗೆ ಅನ್ವಯವಾಗಿರಲಿಲ್ಲ. ಉಳಿದಂತೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತರ ಆನ್‍ಲೈನ್ ಜೂಜಾಟ, ಬೆಟ್ಟಿಂಗ್‍ಗಳಿಗೆ ಅನ್ವಯವಾಗಿತ್ತು. ಅಲ್ಲದೆ ಆನ್‍ಲೈನ್ ಗ್ಯಾಂಬ್ಲಿಂಗ್ ತೊಡಗುವವರಿಗೆ ಸಹಾಯ ಮಾಡುವವರಿಗೆ ಹಾಗೂ ಆಶ್ರಯ ನೀಡುವವರಿಗೂ 6 ತಿಂಗಳು ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿತ್ತು. ಇದೀಗ ಹೈಕೋರ್ಟ್ ಆದೇಶವನ್ನು ರದ್ದು ಪಡಿಸಿದೆ.

  • ಕಾಲೇಜುಗಳಿಗೆ ಯಾರೂ ಧಾರ್ಮಿಕ ಬಟ್ಟೆಗಳನ್ನು ಧರಿಸಿ ಹೋಗುವಂತಿಲ್ಲ: ಹೈಕೋರ್ಟ್‌

    ಕಾಲೇಜುಗಳಿಗೆ ಯಾರೂ ಧಾರ್ಮಿಕ ಬಟ್ಟೆಗಳನ್ನು ಧರಿಸಿ ಹೋಗುವಂತಿಲ್ಲ: ಹೈಕೋರ್ಟ್‌

    ಬೆಂಗಳೂರು: ಕಾಲೇಜುಗಳಿಗೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರಗಳನ್ನು ಧರಿಸಿ ಹೋಗುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕ ಆದೇಶ ಪ್ರಕಟಿಸಿದೆ.

    ಕಾಲೇಜುಗಳಲ್ಲಿ ಹಿಜಬ್‌ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಒಳಗೊಂಡ ತ್ರಿಸದ್ಯ ಪೀಠದಲ್ಲಿ ನಡೆಯಿತು. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

    ಮುಂದಿನ ಆದೇಶ ಬರುವವರೆಗೂ ಕಾಲೇಜಿಗೆ ಯಾರೂ ಸಹ ಹಿಜಬ್‌ ಮತ್ತು ಕೇಸರಿ ಶಾಲನ್ನು ಧರಿಸಿ ಹೋಗುವಂತಿಲ್ಲ. ಕಾಲೇಜು ನಡೆಯಲೇಬೇಕು. ಹೀಗಾಗಿ ಮಧ್ಯಂತರ ಆದೇಶ ನೀಡಿದ್ದೇವೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

    ಸಾಂವಿಧಾನತ್ಮಕ ಪ್ರಶ್ನೆಗಳು ಎದ್ದಿರುವ ಕಾರಣ ವಿಚಾರಣೆಯನ್ನು ಗಂಭೀರವಾಗಿ ನಡೆಸಲಾಗುವುದು ಎಂದು ಹೇಳಿರುವ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಇದನ್ನೂ ಓದಿ: ಹಿಜಬ್ ನಮ್ಮ ಕುಟುಂಬದ ವಿವಾದ ಪಾಕಿಸ್ತಾನ ತಲೆಹಾಕಬಾರದು: ಫಾತಿಮಾ ಹುಸೇನ್ ಆಕ್ರೋಶ

    ಮುಂದಿನ ಆದೇಶ ಬರುವವರೆಗೂ ವಿದ್ಯಾರ್ಥಿಗಳು ಯಾರೂ ಸಹ ಧಾರ್ಮಿಕ ಬಟ್ಟೆ ಧರಿಸಿ ಕಾಲೇಜಿಗೆ ಹೋಗುವಂತಿಲ್ಲ. ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿದೆ.

    ಸಾಂವಿಧಾನಾತ್ಮಕ ಪ್ರಶ್ನೆಗಳು ಎದ್ದಿರುವ ಕಾರಣ ವಿಚಾರಣೆಯನ್ನು ಗಂಭೀರವಾಗಿ ನಡೆಸಲಾಗುವುದು ಎಂದು ಹೇಳಿರುವ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಅಷ್ಟೇ ಅಲ್ಲದೇ ಪ್ರತಿನಿತ್ಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

  • ಸುಪ್ರೀಂ ಅಂಗಳಕ್ಕೆ ಹಿಜಬ್‌ ವಿವಾದ –  ತುರ್ತು ವಿಚಾರಣೆ ಇಲ್ಲ

    ಸುಪ್ರೀಂ ಅಂಗಳಕ್ಕೆ ಹಿಜಬ್‌ ವಿವಾದ – ತುರ್ತು ವಿಚಾರಣೆ ಇಲ್ಲ

    ನವದೆಹಲಿ: ಕರ್ನಾಟಕದಲ್ಲಿ ತಲೆದೋರಿರುವ ಹಿಜಬ್‌-ಕೇಸರಿ ಶಾಲು ವಿವಾದ ಈಗ ಸುಪ್ರೀಂ ಕೋರ್ಟ್‌ ಕದ ತಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಿಜಬ್‌ ವಿವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಮನವಿ ಮಾಡಿದ್ದಾರೆ.

    ಈ ಕುರಿತು ಮನವಿ ಸಲ್ಲಿಸಿರುವ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಇದೆ. ಆದರೆ ವಿವಾದ ಕಾಡ್ಗಿಚ್ಚಿನಂತೆ ಎಲ್ಲ ಜಿಲ್ಲೆಗಳಿಗೆ ಹಬ್ಬುತ್ತಿದೆ. ಇದು ಒಂಭತ್ತು ನ್ಯಾಯದೀಶರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಯಾಗಬೇಕು ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದ ಶಾಂತಿಗೆ ಭಂಗ ತರುವ ಕೆಲಸವಾಗದಿರಲಿ: ಬೊಮ್ಮಾಯಿ

    ಕೋರ್ಟ್ ಈ ವಿಚಾರವನ್ನು ಮೊದಲು ವಿಚಾರಣೆ ಅರ್ಜಿಗಳ ಪಟ್ಟಿಯಲ್ಲಿ ಸೇರಿಸಿ. ಯಾವುದೇ ಮಧ್ಯಂತರ ಆದೇಶ ನೀಡುವುದು ನಿಮಗೆ ಬಿಟ್ಟಿದ್ದು. ಶಾಲೆ ಕಾಲೇಜು ಬಂದ್ ಆಗಿವೆ, ವಿದ್ಯಾರ್ಥಿನಿಯರ ಮೇಲೆ‌ ಕಲ್ಲು ಎಸೆಯಲಾಗುತ್ತಿದೆ. ಇದು ಇಡೀ ದೇಶಕ್ಕೆ ವ್ಯಾಪಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಸಿಬಲ್‌ ಅವರ ಮನವಿ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌, ಹೈಕೋರ್ಟ್ ಈ ಅರ್ಜಿ ವಿಚಾರಣೆ ನಡೆಸುತ್ತಿದೆ. ನಾವು ಪಟ್ಟಿ ಮಾಡಿದರೆ ಹೈಕೋರ್ಟ್ ವಿಚಾರಣೆ ನಡೆಸುವುದಿಲ್ಲ. ನಾವು ಇದನ್ನು ಮುಂದೆ ನೋಡುತ್ತೇವೆ. ಮೊದಲು ಹೈಕೋರ್ಟ್ ವಿಚಾರಣೆ ಮುಗಿಸಲಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

  • ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

    ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

    ಬೆಂಗಳೂರು: ಅಕ್ರಮ ಆಸ್ತಿ ಸಂಬಂಧ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಆಪ್ತೆ ಶಶಿಕಲಾರಿಂದ ಇದೀಗ ಜೈಲು ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.

    4 ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ ವೇಳೆ ಶಶಿಕಲಾಗೆ ಜೈಲಿನಲ್ಲಿದ್ದ ಜೈಲು ಅಧಿಕಾರಿಗಳು ರಾಜಾತಿಥ್ಯ ನೀಡಲು ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಎಸಿಬಿ ಹೈಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದೆ. ಶಶಿಕಲಾ ಜೈಲಿನಲ್ಲಿದ್ದಾಗ ಜೈಲು ಅಧಿಕಾರಿಗಳಾಗಿದ್ದ, ಕೃಷ್ಣ ಕುಮಾರ್, ಡಾ. ಅನಿತಾ ಆರ್, ಬಿ.ಎಸ್.ಸುರೇಶ್, ಗಜರಾಜ ಮಕನೂರು, ಇಳವರಸಿ, ಶಶಿಕಲಾಗೆ ರಾಜಾತಿಥ್ಯ ನೀಡಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣ – ಜೈಲಿನಿಂದ ಶಶಿಕಲಾ ಬಿಡುಗಡೆ

    ಪೊಲೀಸರು ಲಂಚ ಪಡೆದಿದ್ದಾರೆ ಎಂಬ ಬಗ್ಗೆ ದೂರು ದಾಖಲಿಸಿದ ಬಳಿಕ ಎಸಿಬಿ ಅಧಿಕಾರಿಗಳು ತನಿಖೆ ವಿಳಂಬ ಮಾಡುತ್ತಿದ್ದಾರೆ ಎಂದು ಕೆ.ಎಸ್.ಗೀತಾ ಪಿಐಎಲ್ ಸಲ್ಲಿಸಿದ್ದರು. ಇದೀಗ ಎಸಿಬಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ಶಶಿಕಲಾ, ಜೈಲು ಅಧಿಕಾರಿಗಳ ವಿರುದ್ಧ ಸರ್ಕಾರದ ಪೂರ್ವಾನುಮತಿ ಪಡೆದು, ಭ್ರಷ್ಟಾಚಾರ ತಡೆ ಕಾಯ್ದೆ ಸೆ.19ರಡಿ ಎಸಿಬಿ ಚಾರ್ಜ್‍ಶೀಟ್ ಹಾಕಿದೆ ಎಂದು ಹೈಕೋರ್ಟ್‍ಗೆ ಎಸಿಬಿ ಪರ ವಕೀಲ ಪಿ.ಎನ್.ಮನಮೋಹನ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ: ಮೋದಿ

    ಜೈಲು ಅಧಿಕಾರಿ ಕೃಷ್ಣಕುಮಾರ್, ಶಶಿಕಲಾ ಜೈಲಲ್ಲಿ ಇದ್ದಾಗ ಜೈಲಿನ ಸುಪರಿಡೆಂಟ್ ಆಗಿದ್ರು. ಕೃಷ್ಣಕುಮಾರ್ ವರ್ಗಾವಣೆ ಬಳಿಕ ಅನಿತಾ ಅಧಿಕಾರಿ ಆಗಿದ್ದರು. ಜೈಲಿನಲ್ಲಿ ಶಶಿಕಲಾಗೆ ಸೌಕರ್ಯ ಕಲ್ಪಿಸಿಕೊಡಲು ಕೋಟಿ, ಕೋಟಿ ಹಣ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆಯಿಂದಲೇ ಜೀಪ್ ಕದ್ದ ಕಳ್ಳ

    ಅಕ್ರಮ ಆಸ್ತಿಗಳಿಕೆ ಸಂಬಂಧ ಶಶಿಕಲಾ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಪರಪ್ಪನಗ್ರಹಾರದಲ್ಲಿ ಸೆರೆ ವಾಸದಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಶಶಿಕಲಾ ಕಳೆದ ವರ್ಷ ಬಿಡುಗಡೆಗೊಂಡಿದ್ದರು. ಬಳಿಕ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದಾರೆ.

  • ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲ – ಕೈ ಮುಗಿದು ಮುಖದ ಮೇಲೆ ಕೈಯಿಟ್ಟ ಡಿಕೆಶಿ

    ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲ – ಕೈ ಮುಗಿದು ಮುಖದ ಮೇಲೆ ಕೈಯಿಟ್ಟ ಡಿಕೆಶಿ

    ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲಗೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವುದೇ ಉತ್ತರ ನೀಡದೇ ಮೌನಕ್ಕೆ ಜಾರಿದ್ದಾರೆ.

    ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ. ಯಾರ ಅನುಮತಿ ಪಡೆದು ಪಾದಯಾತ್ರೆ ನಡೆಸುತ್ತಿದ್ದೀರಿ ಎಂದು ಕೋರ್ಟ್ ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ಹೈಕೋರ್ಟ್ ಪ್ರಶ್ನೆ ಕುರಿತು ಪಬ್ಲಿಕ್ ಟಿವಿಯ ವರದಿಗಾರರಿಗೆ, ಡಿ.ಕೆ.ಶಿವಕುಮಾರ್ ಮೌನದಲ್ಲೇ ಪ್ರತಿಕ್ರಿಯಿಸಿದ್ದಾರೆ. ಕೇವಲ ಕೈ ಸನ್ನೆಯನ್ನಷ್ಟೇ ಮಾಡಿದ್ದಾರೆ. ಕೈ ಮುಗಿದು ಮುಖದ ಮೇಲೆ ಕೈಯನ್ನು ಇಟ್ಟಿದ್ದಾರೆ.

    ನಿಮಗೆ ಜ್ವರ ಬಂದಿದೆ, ಅದಕ್ಕೆ ಮೌನ ವಹಿಸಿದ್ದೀರಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ, ಏನು ಬೇಕಾದರೂ ಹೇಳಿಕೊಳ್ಳಲಿ ಎಂಬಂತೆ ಕೈ ಸನ್ನೆ ಮೂಲಕವೇ ಪ್ರತಿಕ್ರಿಯಿಸಿ ಮುಂದಕ್ಕೆ ಹೋಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ಜೊತೆಗೆ ಮೌನಾಚರಣೆಯನ್ನೂ ಮಾಡುತ್ತಿದ್ದಾರೆ. ಇದನ್ನೂ ಓದಿ: ಪಾದಯಾತ್ರೆಗೆ ಹೊರಟಿಲ್ಲ, ಅರೆಸ್ಟ್ ಮಾಡ್ಲಿ ಅಂತ ಕಾಯುತ್ತಿದ್ದಾರೆ: ನಾರಾಯಣ ಗೌಡ

    ಮೇಕೆದಾಟು ಪಾದಯಾತ್ರೆಗೆ ಜ.9ರಂದು ಚಾಲನೆ ಸಿಕ್ಕಿದೆ. ಪಾದಯಾತ್ರೆ ಮೂರು ದಿನ ಪೂರೈಸಿ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ ವಿಚಾರವಾಗಿ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

  • ಹೈಕೋರ್ಟ್: ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ

    ಹೈಕೋರ್ಟ್: ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ

    ಬೆಂಗಳೂರು: ಕರ್ನಾಟಕ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಅನಂತ ರಾಮನಾಥ ಹೆಗಡೆ, ಸಿದ್ದಯ್ಯ ರಾಚಯ್ಯ ಹಾಗೂ ಕನ್ನನ್ ಕುಯಿಲ್ ಶ್ರೀಧರನ್ ಹೇಮಲೇಖಾ ಇಂದು ಪ್ರಮಾಣ ವಚನ ಸ್ವೀಕರಿಸಿದರು.

    ಇಂದು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು. ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62. ಹಾಲಿ 43 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ನೂತನವಾಗಿ ಮೂರು ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳ ಸೇರ್ಪಡೆಯಿಂದ ಈ ಸಂಖ್ಯೆ 46ಕ್ಕೆ ಏರಿಕೆ ಕಂಡಿದೆ. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ಕರ್ನಾಟಕದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್  ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಹೆಚ್.ಡಿ ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡ್ತಿದ್ದಾರೆ – ಹಾಸನಾಂಬೆಗೆ ಪತ್ರ

  • ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ ಪ್ರಮಾಣ ವಚನ ಸ್ವೀಕಾರ

    ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ ಪ್ರಮಾಣ ವಚನ ಸ್ವೀಕಾರ

    ಬೆಂಗಳೂರು: ಕರ್ನಾಟಕ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಅಲಹಾಬಾದ್ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ರಿತು ರಾಜ್ ಅವಸ್ಥಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಿದರು. 1960ರ ಜುಲೈ 3ರಂದು ಜನಿಸಿದ ರಿತು ರಾಜ್ ಅವಸ್ಥಿ ಕಾನೂನು ಪದವಿಯನ್ನು 1986ರಲ್ಲಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಇದನ್ನೂ ಓದಿ: 5 ಮುಖ್ಯ ನ್ಯಾಯಮೂರ್ತಿಗಳ ವರ್ಗಾವಣೆ, 8 ನ್ಯಾಯಮೂರ್ತಿಗಳ ಪದೋನ್ನತಿಗೆ ಕೊಲಿಜಿಯಂ ಶಿಫಾರಸು

    1987ರಲ್ಲಿ ಅಡ್ವೊಕೇಟ್ ಆಗಿ ದಾಖಲಾತಿ ಮಾಡಿಕೊಂಡ ನಂತರ ಸಿವಿಲ್, ಸರ್ವಿಸ್ ಮತ್ತು ಶಿಕ್ಷಣ ವಿಷಯಗಳಲ್ಲಿ ಅಲಹಾಬಾದ್ ಹೈಕೋರ್ಟ್‍ನ ಲಕ್ನೋ ಪೀಠದ ಮೂಲಕ ವ್ಯಾಜ್ಯಗಳ ಅಭ್ಯಾಸ ನಡೆಸುತ್ತಿದ್ದರು. ಬಳಿಕ 2009ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬಡ್ತಿ ಹೊಂದುವ ಮೊದಲು ಲಕ್ನೋದಲ್ಲಿ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆ, ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ: ಅಮಿತ್‌ ಶಾ

    ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ್, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ರಾಜ್ಯದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಹಲವು ಗಣ್ಯರು, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಪ್ರಕಟಿಸಿದ ಹೈಕೋರ್ಟ್

    ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಪ್ರಕಟಿಸಿದ ಹೈಕೋರ್ಟ್

    ಬೆಂಗಳೂರು: 1998ರಲ್ಲಿ ಬೆಂಗಳೂರಿನ ಜಯಶ್ರೀ ಎಂಬಾಕೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ವಿಕೃತಿಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆ ತೀರ್ಪನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಗೆ ಉಮೇಶ್ ರೆಡ್ಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದನು. ಇದೀಗ ಕರ್ನಾಟಕ ಹೈಕೋರ್ಟ್ ಉಮೇಶ್ ರೆಡ್ಡಿ ಅರ್ಜಿಯನ್ನು ವಜಾಗೊಳಿಸಿ ಗಲ್ಲು ಶಿಕ್ಷೆ ತೀರ್ಪು ನೀಡಿದೆ.


    ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ಉಮೇಶ್ ರೆಡ್ಡಿ ಸುಪ್ರೀಂಕೋರ್ಟ್‍ಗೂ ಮನವಿ ಸಲ್ಲಿಸಿದ್ದ. ಸುಪ್ರೀಂಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಆದೇಶ ಎತ್ತಿ ಹಿಡಿದಿತ್ತು. ಆ ಬಳಿಕ 2013ರಲ್ಲಿ ರಾಷ್ಟ್ರಪತಿ ಅವರಿಗೂ ಕ್ಷಮಾಧಾನ ಕೋರಿ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಪರೀಕ್ಷಿಸಿದ ರಾಷ್ಟ್ರಪತಿ ಕೂಡ ಉಮೇಶ್ ರೆಡ್ಡಿ ಅರ್ಜಿ ವಜಾಗೊಳಿಸಿದ್ದರು. ನಂತರ ಸುಪ್ರೀಂಕೋರ್ಟ್ ಅರ್ಜಿಯನ್ನು ಹೈಕೋರ್ಟ್‍ಗೆ ವರ್ಗಾಯಿಸಿತ್ತು. ಇದನ್ನೂ ಓದಿ: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ

    ಕ್ಷಮಾಧಾನ ವಿಲೇವಾರಿಯಲ್ಲಿ ತಡವಾಗಿದ್ದ ಹಿನ್ನೆಲೆ ಹೈಕೋರ್ಟ್ ಮೊರೆ ಹೋಗಿದ್ದ ಉಮೇಶ್ ರೆಡ್ಡಿ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾ.ಅರವಿಂದ್ ಕುಮಾರ್, ನ್ಯಾ. ಪ್ರದೀಪ್ ಸಿಂಗ್ ಯೆರೂರ್‍ ರವರ ದ್ವಿಸದಸ್ಯ ಪೀಠ ಗಲ್ಲು ಶಿಕ್ಷೆಯಿಂದ ವಿನಾಯಿತಿ ಕೋರಿದ್ದ ಉಮೇಶ್ ರೆಡ್ಡಿ ಅರ್ಜಿ ವಜಾಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಸದ್ಯ ಈತ ಬೆಳಗಾವಿಯ ಹಿಂಡಲಗ ಜೈಲಿನಲ್ಲಿದ್ದು, ಈತನ ಮೇಲೆ 21 ಮಹಿಳೆಯರ ಮೇಲೆ ಅತ್ಯಾಚಾರ ಕೊಲೆ ಕೇಸ್ ಇದೆ. 21ರಲ್ಲಿ 9 ಕೇಸ್‍ನಲ್ಲಿ ಈತ ದೋಷಿ ಎಂದು ಸಾಬೀತಾಗಿದೆ. ಇದನ್ನೂ ಓದಿ: ಸುಳ್ಯದಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು