Tag: Karnataka High Court

  • ಹಿಜಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್‌ ಖಾನ್‌

    ಹಿಜಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್‌ ಖಾನ್‌

    ಇಸ್ಲಾಮಾಬಾದ್: ವಿಶ್ವಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಹಿಜಬ್‌ ವಿವಾದದ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪು ಕುರಿತು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಬುಧವಾರ ಖೈಬರ್‌ ಪಖ್ತುಂಖ್ವಾದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಇಮ್ರಾನ್‌ ಖಾನ್‌ ಮಾತನಾಡುವಾಗ ಹಿಜಬ್‌ ವಿವಾದ ಕುರಿತು ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್

    ಇಸ್ಲಾಮೊಫೋಬಿಯಾ ಎಂದರೇನು? (ಇಸ್ಲಾಂ ಬಗ್ಗೆ ಭೀತಿ). ಹಿಜಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ಇಸ್ಲಾಮೊಫೋನಿಯಾ ಎನ್ನಲಾಗುತ್ತದೆ. ಇದರರ್ಥ ಮಹಿಳೆಯರು ಯಾವ ಉಡುಪನ್ನಾದರೂ ಧರಿಸಬಹುದು, ಆದರೆ ಹಿಜಬ್‌ ಧರಿಸುವಂತಿಲ್ಲ ಎಂದು ತೀರ್ಪಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಫೇಸ್‌ಬುಕ್‌ನಲ್ಲಿ ಹೆಚ್ಚಾಗುತ್ತಿರುವ ‘ಇಸ್ಲಾಮೊಫೋಬಿಯಾ’ (ಇಸ್ಲಾಂ ಬಗ್ಗೆ ಭೀತಿ) ಪೋಸ್ಟ್‌ಗಳಿಗೆ ಕಡಿವಾಣ ಹಾಕಬೇಕು. ಫೇಸ್‌ಬುಕ್‌ನಲ್ಲಿ ಇಸ್ಲಾಮೊಫೋಬಿಯಾ ಹೆಚ್ಚಾಗಲು ಭಾರತ ಮತ್ತು ಫ್ರಾನ್ಸ್‌ ಕಾರಣ ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಝೂಕರ್‌ಬರ್ಗ್‌ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಹಿಂದೆ ಪತ್ರ ಬರೆದಿದ್ದರು. ಇದನ್ನೂ ಓದಿ: ಹಿಜಬ್‌ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ: ಹೈಕೋರ್ಟ್‌ ಶಂಕೆ

    ತರಗತಿಗಳಲ್ಲಿ ಹಿಜಬ್‌ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಹೊರಡಿಸಿದ ತೀರ್ಪು ವಿರುದ್ಧವಾಗಿ ಇಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದ್ದು, ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳು ಹಿಜಬ್‌ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಹಿಜಬ್‌- ಕರ್ನಾಟಕ ಹೈಕೋರ್ಟ್‌ ತೀರ್ಪು ವಿರೋಧಿಸಿ ತಮಿಳುನಾಡು ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಹಿಜಬ್‌- ಕರ್ನಾಟಕ ಹೈಕೋರ್ಟ್‌ ತೀರ್ಪು ವಿರೋಧಿಸಿ ತಮಿಳುನಾಡು ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಚೆನ್ನೈ: ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪಿಗೆ ತಮಿಳುನಾಡು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

    ಕರ್ನಾಟಕ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ತಮಿಳುನಾಡಿನ ಚೆನ್ನೈನಲ್ಲಿ ಕಾಲೇಜು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಇದನ್ನೂ ಓದಿ: ಸಣ್ಣ ಬಟ್ಟೆ ಹಿಡಿದು ಬೇಧ ಭಾವ ಮೂಡಿಸುವವರೇ ನಮ್ದು ಜಾತ್ಯಾತೀತ ರಾಷ್ಟ್ರ ಅಂತಿದ್ದಾರೆ: ಮುಸ್ಲಿಮ್‌ ಮಹಿಳೆಯರು

    ಸಾಂಸ್ಕೃತಿಕ ನರಮೇಧದ ವಿರುದ್ಧ ನಮ್ಮ ಹೋರಾಟ, ಹಿಜಬ್‌ಗೆ ನಮ್ಮ ಬೆಂಬಲ ಎಂಬ ಘೋಷಣೆಗಳಿರುವ ಅನೇಕ ಫಲಕಗಳನ್ನು ಹಿಡಿದು ನೂರಾರು ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

    ತರಗತಿಗಳಲ್ಲಿ ಹಿಜಬ್‌ ನಿಷೇಧವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿತು. ಹಿಜಬ್‌ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆಯಲ್ಲ. ಹೀಗಾಗಿ ಹಿಜಬ್‌ ಧರಿಸಿ ತರಗತಿಗಳಿಗೆ ಬರುವಂತಿಲ್ಲ ಎಂದು ಕೋರ್ಟ್‌ ತೀರ್ಪಿನಲ್ಲಿ ಸ್ಪಷ್ಟಪಡಿಸಿತು. ಇದನ್ನೂ ಓದಿ: ಹಿಜಬ್ ತೀರ್ಪು ವಿರೋಧಿಸಿ ಅವಾಚ್ಯ ಶಬ್ದಗಳಿಂದ ಕಮೆಂಟ್ ಮಾಡಿದ್ದ ಯುವಕ ಪೊಲೀಸ್ ವಶಕ್ಕೆ

    ಕರ್ನಾಟಕ ಹೈಕೋರ್ಟ್‌ ತೀರ್ಪಿನ ಕುರಿತು ಪರ-ವಿರೋಧದ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಕೋರ್ಟ್‌ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

  • ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ನ್ಯಾಯ ಸಿಗದಿದ್ರೆ ಪಾಕಿಸ್ತಾನ, ಆಫ್ಘನ್‌ಗೆ ಹೋಗಲಿ: ಸುವರ್ಣ

    ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ನ್ಯಾಯ ಸಿಗದಿದ್ರೆ ಪಾಕಿಸ್ತಾನ, ಆಫ್ಘನ್‌ಗೆ ಹೋಗಲಿ: ಸುವರ್ಣ

    ಉಡುಪಿ: ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗದಿದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಸರ್ಕಾರಿ ಪಿಯು ಕಾಲೇಜು ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.

    ಅಂಬೇಡ್ಕರ್ ಬಗ್ಗೆ ಮಾತನಾಡುವ ಅರ್ಹತೆ ಇವರಿಗಿಲ್ಲ. ಹೈಕೋರ್ಟ್ ವಿಸ್ತೃತ ಪೀಠದಿಂದ ತೀರ್ಪು ಬಂದರೂ ಕೋರ್ಟ್ ವಿರುದ್ಧ ಮಾತನಾಡುವ ಹಿಜಬ್ ಹೋರಾಟಗಾರ್ತಿಯರು ವಿದ್ಯಾರ್ಥಿನಿಯರೇ ಅಲ್ಲ. ಅವರು ಟೆರರಿಸ್ಟ್ ಸಂಘಟನೆಯ ಸದಸ್ಯರು. ಸುಪ್ರೀಂ ಕೋರ್ಟ್ನಲ್ಲೂ ನಿಮ್ಮ ವಿರುದ್ಧ ತೀರ್ಪು ಬಂದರೆ ಪಾಕಿಸ್ತಾನಕ್ಕೆ, ಅಫ್ಘಾನಿಸ್ತಾನಕ್ಕೆ ಹೋಗಿ ಜೀವನ ಮಾಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್ – ಹೋಳಿ ರಜೆ ಬಳಿಕ ವಿಚಾರಣೆ

    ಅಂಬೇಡ್ಕರ್ ಬಗ್ಗೆ ಮಾತನಾಡುವ ಅರ್ಹತೆ ವಿದ್ಯಾರ್ಥಿನಿಯರಿಗೆ ಇಲ್ಲ. ನೆಲದ ಕಾನೂನು ಗೌರವಿಸದವರು, ಅವರಿಗೆ ಬೆಂಬಲ ನೀಡುತ್ತಿರುವ ಸಂಘಟನೆಗಳು ದೇಶವಿರೋಧಿ ಸಂಘಟನೆ ಎಂದು ಹೇಳಿದ್ದಾರೆ.

    ವಿದ್ಯಾರ್ಥಿಗಳು ದೇಶ ವಿರೋಧಿಗಳು ಎಂಬುದು ಮತ್ತೆ ಸಾಬೀತಾಗಿದೆ. ದೇಶ ವಿರೋಧಿ ಸಂಘಟನೆಗಳ ಕುಮ್ಮಕ್ಕಿನಿಂದ ಹೇಳಿಕೆಯನ್ನು ನೀಡುತ್ತಿದ್ದಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಅರ್ಹತೆ ವಿದ್ಯಾರ್ಥಿನಿಯರಿಗೆ ಇಲ್ಲ. ಅವರಿಗೆ ಭಾರತ ದೇಶದ ಮೇಲೆ ಅಭಿಮಾನ ಇಲ್ಲ. ನ್ಯಾಯಾಧೀಶರ ಬಗ್ಗೆ ಹಗುರವಾಗಿ ಮಾತನಾಡುವವರು ಈ ದೇಶದಲ್ಲಿ ಇರಬೇಕಾ? ಮುಸಲ್ಮಾನ ವಿದ್ಯಾರ್ಥಿನಿಯರನ್ನು ಶಿಕ್ಷಣವಂಚಿತರನ್ನಾಗಿ ಮಾಡಲಾಗುತ್ತಿದೆ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ ಇದೆ. ಮುಸಲ್ಮಾನ ಮಹಿಳೆಯರನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ದೇಶವಿರೋಧಿ ಸಂಘಟನೆಗಳ ಕುಮ್ಮಕ್ಕಿದೆ ಒಳಗಾಗಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ: ಹೈಕೋರ್ಟ್‌ ಶಂಕೆ

    ಆರು ವಿದ್ಯಾರ್ಥಿನಿಯರಿಂದ ಗಂಡಾಂತರ ಇದೆ. ನಮ್ಮ ಕಾಲೇಜಿನ 6 ವಿದ್ಯಾರ್ಥಿನಿಯರಿಂದ ಸಮಾಜಕ್ಕೆ ದೊಡ್ಡ ಗಂಡಾಂತರ ಇದೆ. ಹಿಜಬ್ ತೆಗೆದು ಬಂದರೂ ಅವರನ್ನು ಕ್ಲಾಸಿಗೆ ಸೇರಿಸುವ ಪರಿಸ್ಥಿತಿಯಿಲ್ಲ. ನಾವು ಈ ಬಗ್ಗೆ ಬಹಳ ಚಿಂತನೆ ನಡೆಸಬೇಕಾಗಿದೆ. ಅವರನ್ನು ಕ್ಲಾಸಿಗೆ ಬಿಡಬೇಕಾ ಬೇಡವೇ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಸಮಾನ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಕಲ್ಪನೆ ಇದೆ. ಮುಸಲ್ಮಾನರನ್ನು ನಾವು ಚುನಾವಣೆಯ ಲಾಭಕ್ಕೆ ಬಳಸುತ್ತಿಲ್ಲ. ಅಭಿವೃದ್ಧಿಯ ಚಿಂತನೆ, ರಾಷ್ಟ್ರೀಯ ಚಿಂತನೆ ಇದ್ದ ಮುಸ್ಲಿಮರನ್ನು ಒಪ್ಪುತ್ತೇವೆ ಎಂದು ಹೇಳಿದ್ದಾರೆ.

  • ಹಿಜಬ್‌ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ: ಹಿರಿಯ ವಕೀಲ ಎ.ಎಂ.ಧಾರ್‌

    ಹಿಜಬ್‌ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ: ಹಿರಿಯ ವಕೀಲ ಎ.ಎಂ.ಧಾರ್‌

    ನವದೆಹಲಿ: ಹಿಜಬ್‌ಗೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ ಕೆಟ್ಟದಾಗಿ ತೀರ್ಪು ನೀಡಿದೆ. ಇಸ್ಲಾಂ ಧರ್ಮದಲ್ಲಿ ಹಿಜಬ್‌ ಧರಿಸುವುದು ಅಗತ್ಯವಾಗಿದೆ ಎಂದು ಹಿರಿಯ ವಕೀಲ ಎಎಂ ಧಾರ್‌ ಅಭಿಪ್ರಾಯಪಟ್ಟಿದ್ದಾರೆ.

    ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಅಂತಿಮವಾಗಿ ನ್ಯಾಯವು ಮೇಲುಗೈ ಸಾಧಿಸುವ ಭರವಸೆ ಇದೆ ಎಂದು ವಕೀಲ ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌- ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ

    ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಬ್‌ ಅನ್ನು ನಿಷೇಧಿಸುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿತು.

    ಹಿಜಬ್‌ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆಯಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದ್ದು, ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಇದನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬರು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಾವು ಕುರಾನ್ ಫಾಲೋ ಮಾಡುತ್ತೇವೆ, ನಮ್ಮ ನಿಲುವಿನಲ್ಲಿ ಕಾಂಪ್ರಮೈಸ್ ಇಲ್ಲ: ಆಲಿಯಾ ಅಸ್ಸಾದಿ

  • ಹಿಜಬ್‌- ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ

    ಹಿಜಬ್‌- ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ

    ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್‌ ನಿಷೇಧವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

    ನಿಬಾ ನಾಜ್‌ ಎಂಬ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ, ವಕೀಲ ಅನಸ್‌ ತನ್ವೀರ್‌ ಅವರ ಮೂಲಕ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: 10 ರೂಪಾಯಿ ಕೇಸರಿ ಶಾಲು ಹಾಕಿ ದಂಗೆ ಮಾಡಿಸೋದು ಬಿಜೆಪಿ ಅಜೆಂಡಾ: ಸತೀಶ್ ಜಾರಕಿಹೊಳಿ

    ಹಿಜಬ್‌ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಅಲ್ಲ. ತರಗತಿಗಳಲ್ಲಿ ಹಿಜಬ್‌ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಇಂದು ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ.

    ಹಿಜಬ್‌ ಧರಿಸುವುದು ಇಸ್ಲಾಮಿಕ್‌ ನಂಬಿಕೆಯಲ್ಲಿ ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಲ್ಲ. ಹೀಗಾಗಿ ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ರಕ್ಷಿಸಲ್ಪಟ್ಟಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಪೂರ್ಣ ಪೀಠವು ಇಂದು ಬೆಳಗ್ಗೆ ತೀರ್ಪು ನೀಡಿತ್ತು.

    ಹಿಜಬ್‌ ಧರಿಸಿ ಪ್ರವೇಶ ನಿರಾಕರಿಸಿದ ಸರ್ಕಾರಿ ಪಿಯು ಕಾಲೇಜುಗಳ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಇದನ್ನೂ ಓದಿ: ನಾವು ಕುರಾನ್ ಫಾಲೋ ಮಾಡುತ್ತೇವೆ, ನಮ್ಮ ನಿಲುವಿನಲ್ಲಿ ಕಾಂಪ್ರಮೈಸ್ ಇಲ್ಲ: ಆಲಿಯಾ ಅಸ್ಸಾದಿ

    ವಿಶೇಷ ಮೇಲ್ಮನವಿಯಲ್ಲಿ ಏನಿದೆ?
    ಕರ್ನಾಟಕ ಶಿಕ್ಷಣ ಕಾಯಿದೆಯು ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸುವುದಿಲ್ಲ. ಹಿಜಬ್‌ ಅಗತ್ಯದ ಆಚರಣೆಯಲ್ಲ ಎಂದು ಆದೇಶವನ್ನು ಹೊರಡಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರವನ್ನು ನೀಡುವುದಿಲ್ಲ.

    ಹಿಜಬ್‌ ಧರಿಸುವ ಹಕ್ಕನ್ನು ಸಂವಿಧಾನದ 25ನೇ ವಿಧಿಯಡಿಯಲ್ಲಿ ಆತ್ಮಸಾಕ್ಷಿಯ ಹಕ್ಕಿನ ಭಾಗವಾಗಿ ರಕ್ಷಿಸಲಾಗಿದೆ ಎಂಬುದನ್ನು ಗಮನಿಸಲು ಹೈಕೋರ್ಟ್‌ ವಿಫಲವಾಗಿದೆ. ಆತ್ಮಸಾಕ್ಷಿಯ ಹಕ್ಕು ಮೂಲಭೂತವಾಗಿ ವೈಯಕ್ತಿಕ ಹಕ್ಕಾಗಿದೆ. ಹೀಗಾಗಿ ಗೌರವಾನ್ವಿತ ಹೈಕೋರ್ಟ್‌ನಿಂದ ಅಗತ್ಯ ಧಾರ್ಮಿಕ ಆಚರಣೆಗೆ ಅನ್ವಯಿಸಬೇಕಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

    ಭಾರತೀಯ ಕಾನೂನು ವ್ಯವಸ್ಥೆಯು ಧಾರ್ಮಿಕ ಚಿಹ್ನೆಗಳನ್ನು ಧರಿಸುವುದು, ಕೊಂಡೊಯ್ಯುವುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ ಎಂಬುದನ್ನು ಗಮನಿಸಲು ಹೈಕೋರ್ಟ್ ವಿಫಲವಾಗಿದೆ. ಮೋಟಾರು ವಾಹನ ಕಾಯಿದೆ 1988 ರ ಸೆಕ್ಷನ್ 129ರ ಪ್ರಕಾರ, ಪೇಟ ಧರಿಸಿದ ಸಿಖ್ಖರು ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಿರುವುದು ಗಮನಿಸಬೇಕಾದ ಅಂಶವಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ನಿಯಮಗಳ ಅಡಿಯಲ್ಲಿ ಸಿಖ್ಖರು ಕಿರ್ಪಾನ್‌ಗಳನ್ನು ವಿಮಾನದಲ್ಲಿ ಸಾಗಿಸಲು ಅನುಮತಿಸಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು

    ಹಿಜಬ್ ಧರಿಸುವ ಹಕ್ಕು ‘ಅಭಿವ್ಯಕ್ತಿ’ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಸಂವಿಧಾನದ 19(1)(ಎ) ಪರಿಚ್ಛೇದದ ಅಡಿಯಲ್ಲಿ ರಕ್ಷಿಸಲಾಗಿದೆ ಎಂಬುದನ್ನು ಗಮನಿಸಲು ಹೈಕೋರ್ಟ್ ವಿಫಲವಾಗಿದೆ.

    ಸಮವಸ್ತ್ರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಶಿಕ್ಷಣ ಕಾಯಿದೆ, 1983 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳು, ವಿದ್ಯಾರ್ಥಿಗಳು ಧರಿಸಲು ಯಾವುದೇ ಕಡ್ಡಾಯ ಸಮವಸ್ತ್ರವನ್ನು ಒದಗಿಸುವುದಿಲ್ಲ. ಇದನ್ನೂ ಓದಿ: ಕೋರ್ಟ್‌ನಿಂದ ರಾಜಕೀಯ ಪ್ರೇರಿತ ಅಸಂವಿಧಾನಿಕ ತೀರ್ಪು: SDPI

    ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವ ಗೂಂಡಾಗಳನ್ನು ನಿಯಂತ್ರಿಸಲು ರಾಜ್ಯ ವಿಫಲವಾದ ಸಮಸ್ಯೆಯನ್ನು ಪರಿಹರಿಸಲು ಹೈಕೋರ್ಟ್ ವಿಫಲವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

  • ಕೋರ್ಟ್‌ನಿಂದ ರಾಜಕೀಯ ಪ್ರೇರಿತ ಅಸಂವಿಧಾನಿಕ ತೀರ್ಪು: SDPI

    ಕೋರ್ಟ್‌ನಿಂದ ರಾಜಕೀಯ ಪ್ರೇರಿತ ಅಸಂವಿಧಾನಿಕ ತೀರ್ಪು: SDPI

    ಬೆಂಗಳೂರು: ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ರಾಜಕೀಯ ಪ್ರೇರಿತವಾದ ಅಸಾಂವಿಧಾನಿಕ ತೀರ್ಪನ್ನು ನೀಡಿದೆ ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಅಸಮಾಧಾನ ವ್ಯಕ್ತಪಡಿಸಿದೆ.

    ದೇಶದ ಪ್ರಜೆಗಳಿಗಿರುವ ಆಯ್ಕೆಯ ಹಕ್ಕು, ಸಾಂವಿಧಾನಿಕವಾಗಿರುವ ವೈಯಕ್ತಿಕ ಹಕ್ಕು ಮತ್ತು ಮೂಲಭೂತ ಹಕ್ಕನ್ನು ಕಡೆಗಣಿಸಿ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಲ್ಲಿ ನ್ಯಾಯಾಲಯವು ವಿಫಲವಾಗಿದೆ ಎಂಬುದು ಕರ್ನಾಟಕ ಹೈಕೋರ್ಟ್ ಹಿಜಬ್ ಕುರಿತು ನೀಡಿದ ತೀರ್ಪಿನಲ್ಲಿ ರುಜುವಾತಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ: ಎಚ್‍.ಡಿ ದೇವೇಗೌಡ

    ಬಿಜೆಪಿ ಸರ್ಕಾರ ಮುಸ್ಲಿಂ ಅಸ್ತಿತ್ವವನ್ನು ಅಪರಾಧಿಯಂತೆ ಬಿಂಬಿಸುತ್ತಿದೆ. ಆ ಮೂಲಕ ಸಮಾಜದೊಳಗೆ ಸಮಸ್ಯೆಯನ್ನು ಹುಟ್ಟುಹಾಕಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಸಂತ್ರಸ್ತರು ನ್ಯಾಯದ ನಿರೀಕ್ಷೆಯಲ್ಲಿ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯವೂ ರಾಜಕೀಯ ಪ್ರೇರಿತವಾದ ಅಸಂವಿಧಾನಿಕ ತೀರ್ಪನ್ನು ನೀಡಿದೆ. ಇದು ನ್ಯಾಯ ವ್ಯವಸ್ಥೆಯ ಮೇಲಿರುವ ಅಲ್ಪಸಂಖ್ಯಾತರ ನಂಬಿಕೆಯನ್ನು ನಿರಾಶೆಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದೆ.

    ಹಿಜಬ್ ಒಂದು ಸಾಂವಿಧಾನಿಕವಾಗಿರುವ ವೈಯಕ್ತಿಕ ಮತ್ತು ಮೂಲಭೂತ ಹಕ್ಕುಗಳಿಂದ ಕೂಡಿದ ಆಯ್ಕೆಯ ಹಕ್ಕು. ಈ ಹಕ್ಕನ್ನು ನ್ಯಾಯಾಲಯವೇ ಕಸಿಯುತ್ತಿರುವುದು ವಿಷಾದನೀಯ. ಅಗತ್ಯ ಧಾರ್ಮಿಕ ಆಚರಣೆಯ ವಿಚಾರಗಳಲ್ಲಿ ಅಂದರೆ ಶಬರಿ ಮಲೆಗೆ ಮಹಿಳಾ ಪ್ರವೇಶ, ಮುಸ್ಲಿಂ ಹೆಣ್ಣು ಮಕ್ಕಳ ಮಸೀದಿ ಪ್ರವೇಶ, ಪಾರ್ಸಿ ಹೆಣ್ಮಕ್ಕಳ ಅಂತರ್ಜಾತಿ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್‌ ಎಷ್ಟರವರೆಗೆ ಮಧ್ಯ ಪ್ರವೇಶ ಮಾಡಬೇಕು? ಆಯಾ ಧರ್ಮದ ಧಾರ್ಮಿಕ ನಂಬಿಕೆಗಳನ್ನು ಎತ್ತಿ ಹಿಡಿಯಬೇಕಾ ಎಂಬ ವಿಚಾರದಲ್ಲಿ ಒಂದು ಅಂತಿಮ ತೀರ್ಮಾನ ಕೈಗೊಳ್ಳಲು ಬಾಕಿ ಇರುವಾಗಲೇ, ಕರ್ನಾಟಕ ಹೈಕೋರ್ಟ್ ಹಿಜಬ್ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲಾ ಎಂದಿರುವುದು ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು

    2021-22ರ ಸರ್ಕಾರದ ದಾಖಲಾತಿ ನಿಯಮಗಳ ಪ್ರಕಾರ ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ. ಯಾರಾದರೂ ಅದನ್ನು ಉಲ್ಲಂಘಿಸಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಆದೇಶ ಇದ್ದರೂ, ಏಕಾಏಕಿ ವಿವಾದವೆಬ್ಬಿಸಿ ತಕ್ಷಣದಲ್ಲೇ ಹೊಸ ಆದೇಶ ಹೊರಡಿಸಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದು ರಾಜಕೀಯ ಪ್ರೇರಿತ ಆದೇಶ ಎಂಬ ಸಂಶಯಕ್ಕೆ ಹೆಚ್ಚು ಪುಷ್ಠಿಯನ್ನು ನೀಡಿದಂತಾಗಿದೆ ಎಂದು ತಿಳಿಸಿದೆ.

  • ಹಿಜಬ್‌ ಕುರಿತ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್‌ ಮಾಡಿದ ಓವೈಸಿ

    ಹಿಜಬ್‌ ಕುರಿತ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್‌ ಮಾಡಿದ ಓವೈಸಿ

    ನವದೆಹಲಿ: ಹಿಜಬ್‌ ವಿವಾದ ಕುರಿತು ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

    ಹಿಜಬ್‌ ಸಂಬಂಧ ಹೈಕೋರ್ಟ್‌ ತೀರ್ಪು ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ನಾನು ಒಪ್ಪುವುದಿಲ್ಲ. ಕೋರ್ಟ್‌ ತೀರ್ಪನ್ನು ವಿರೋಧಿಸುವುದು ನನ್ನ ಹಕ್ಕು. ಹಿಜಬ್‌ ಪರ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ಟ್ವೀಟ್‌ನಲ್ಲೇನಿದೆ?
    ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾವ್‌ ಬೋರ್ಡ್‌ ಮಾತ್ರವಲ್ಲ ಇತರೆ ಧಾರ್ಮಿಕ ಗುಂಪುಗಳ ಸಂಘಸಂಸ್ಥೆಗಳು ಸಹ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಿವೆ ಎಂದು ಭಾವಿಸಿದ್ದೇನೆ.

    ಏಕೆಂದರೆ ಅದು (ಕೋರ್ಟ್‌) ಧರ್ಮ, ಸಂಸ್ಕೃತಿ, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಸ್ಥಗಿತಗೊಳಿಸಿದೆ. ಸಂವಿಧಾನದ ಪೀಠಿಕೆಯು ವ್ಯಕ್ತಿಗೆ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಹೊಂದುವ ಹಕ್ಕಿದೆ ಎಂದು ಹೇಳುತ್ತದೆ.

    ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂಬುದು ನನ್ನ ನಂಬಿಕೆ. ನಾನು ಸೂಕ್ತವೆಂದು ಭಾವಿಸಿದಂತೆ ಆ ನಂಬಿಕೆಯನ್ನು ವ್ಯಕ್ತಪಡಿಸಲು ನನಗೆ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಬ್‌ ಕೂಡ ಒಂದು ಆರಾಧನೆಯ ಕ್ರಿಯೆಯಾಗಿದೆ.

    ಅಗತ್ಯವಾದ ಧಾರ್ಮಿಕ ಅಭ್ಯಾಸ ಪರೀಕ್ಷೆಯನ್ನು ಪರಿಶೀಲಿಸುವ ಸಮಯ ಇದು. ದರ್ಮನಿಷ್ಠ ವ್ಯಕ್ತಿಗೆ ಎಲ್ಲವೂ ಅತ್ಯಗತ್ಯ. ನಾಸ್ತಿಕನಿಗೆ ಯಾವುದೂ ಅತ್ಯಗತ್ಯವಲ್ಲ. ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ ಜನಿವಾರ ಅತ್ಯಗತ್ಯ. ಆದರೆ ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು ಅಗತ್ಯವನ್ನು ನಿರ್ಧರಿಸಬಹುದು ಎಂಬುದು ಅಸಂಬದ್ಧವಾಗಿದೆ.

    ಅದೇ ಧರ್ಮದ ಇತರ ಜನರು ಸಹ ಅಗತ್ಯವನ್ನು ನಿರ್ಧರಿಸುವ ಹಕ್ಕನ್ನು ಹೊಂದಿಲ್ಲ. ಇದು ವ್ಯಕ್ತಿ ಮತ್ತು ದೇವರ ನಡುವೆ ಇದೆ. ಇಂತಹ ಪೂಜಾ ಕಾರ್ಯಗಳು ಇತರರಿಗೆ ಹಾನಿಯಾದರೆ ಮಾತ್ರ ಧಾರ್ಮಿಕ ಹಕ್ಕುಗಳಲ್ಲಿ ರಾಜ್ಯವು ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಕು. ಹಿಜಬ್‌ ಯಾರಿಗೂ ಹಾನಿ ಮಾಡುವುದಿಲ್ಲ.

    ಹಿಜಬ್‌ ನಿಷೇಧಿಸುವುದರಿಂದ ಧಾರ್ಮಿಕ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಖಂಡಿತವಾಗಿಯೂ ಹಾನಿಯಾಗುತ್ತದೆ. ಅವರು ಶಿಕ್ಷಣ ಪಡೆಯುವುದಕ್ಕೆ ಅಡ್ಡಿಪಡಿಸಿದಂತಾಗುತ್ತದೆ.

    ಸಮವಸ್ತ್ರವು ಏಕರೂಪತೆಯನ್ನು ಖಚಿತಪಡಿಸುತ್ತದೆ ಎನ್ನಲಾಗುತ್ತದೆ. ಅದು ಹೇಗೆ? ಶ್ರೀಮಂತ/ಬಡ ಕುಟುಂಬದಿಂದ ಬಂದವರು ಯಾರೆಂದು ಮಕ್ಕಳಿಗೆ ತಿಳಿಯುವುದಿಲ್ಲವೇ? ಜಾತಿಯ ಹೆಸರುಗಳು ಹಿನ್ನೆಲೆಯನ್ನು ಸೂಚಿಸುವುದಿಲ್ಲವೇ? ಶಿಕ್ಷಕರು ತಾರತಮ್ಯ ಮಾಡುವುದನ್ನು ತಡೆಯಲು ಸಮವಸ್ತ್ರ ಸಹಕಾರಿಯಾಗಿದೆಯೇ?

    ಐರ್ಲೆಂಡ್‌ ಸರ್ಕಾರವು ಹಿಜಬ್‌ ಮತ್ತು ಸಿಖ್‌ ಪೇಟವನ್ನು ಅನುಮತಿಸಲು ಪೊಲೀಸ್‌ ಸಮವಸ್ತ್ರದ ನಿಯಮಗಳನ್ನು ಬದಲಾಯಿಸಿದಾಗ ಮೋದಿ ಸರ್ಕಾರ ಅದನ್ನು ಸ್ವಾಗತಿಸಿತು. ಹಾಗಾದರೆ ಸ್ವದೇಶ ಮತ್ತು ವಿದೇಶ ವಿಚಾರವಾಗಿ ಏಕೆ ಎರಡು ಮಾನದಂಡಗಳು? ಸಮವಸ್ತ್ರದ ಬಣ್ಣಗಳಿಗೆ ಹೋಲುವ ಹಿಜಬ್‌ ಮತ್ತು ಪೇಟಗಳನ್ನು ಧರಿಸಲು ಅನುಮತಿಸಬಹುದು.

    ಇದೆಲ್ಲದರ ಪರಿಣಾಮವೇನು? ಮೊದಲನೆಯದಾಗಿ, ಸರ್ಕಾರವು ಅಸ್ತಿತ್ವದಲ್ಲಿಲ್ಲದ ಸಮಸ್ಯೆಯನ್ನು ಸೃಷ್ಟಿಸಿತು. ಮಕ್ಕಳು ಹಿಜಬ್‌, ಬಳೆ ಇತ್ಯಾದಿ ಧರಿಸಿ ಶಾಲೆಗೆ ಹೋಗುತ್ತಿದ್ದರು. ಎರಡನೆಯದಾಗಿ, ಹಿಂಸಾಚಾರವನ್ನು ಪ್ರಚೋದಿಸಲಾಯಿತು. ಕೇಸರಿ ಪೇಟಗಳೊಂದಿಗೆ ಪ್ರತಿಯಾಗಿ ಪ್ರತಿಭಟನೆಗಳನ್ನು ನಡೆಸಲಾಯಿತು.

    ಕೇಸರಿ ಪೇಟಗಳು ಅಗತ್ಯವೆ? ಅಥವಾ ಹಿಜಬ್‌ಗೆ ಪ್ರತಿಕ್ರಿಯೆ ಮಾತ್ರವೇ? ಸರ್ಕಾರ ಮತ್ತು ಹೈಕೋರ್ಟ್‌ ಆದೇಶವು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದೆ. ಹಿಜಬ್‌ ಧರಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಾಧ್ಯಮಗಳು, ಪೊಲೀಸರು ಮತ್ತು ನಿರ್ವಾಹಕರು ಕಿರುಕುಳ ನೀಡುವುದನ್ನು ನಾವು ನೋಡಿದ್ದೇವೆ. ಮಕ್ಕಳು ಪರೀಕ್ಷೆ ಬರೆಯುವುದನ್ನು ಸಹ ನಿಷೇಧಿಸಲಾಗಿದೆ. ಇದು ನಾಗರಿಕ ಹಕ್ಕುಗಳ ಸಾಮೂಹಿಕ ಉಲ್ಲಂಘನೆಯಾಗಿದೆ.

    ಕೊನೆಯದಾಗಿ, ಇದರರ್ಥ ಒಂದು ಧರ್ಮವನ್ನು ಗುರಿಯಾಗಿಸಲಾಗಿದೆ. ಅದರ ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಆರ್ಟಿಕಲ್‌ 15, ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಇದು ಅದೇ ಉಲ್ಲಂಘನೆಯಲ್ಲವೇ? ಸಂಕ್ಷಿಪ್ತವಾಗಿ ಹೈಕೋರ್ಟ್‌ ಆದೇಶವು ಮಕ್ಕಳನ್ನು ಶಿಕ್ಷಣ ಮತ್ತು ಅಲ್ಲಾನ ಆಜ್ಞೆಗಳ ನಡುವೆ ಆಯ್ಕೆ ಮಾಡಲು ಒತ್ತಾಯಿಸಿದೆ.

    ಮುಸ್ಲಿಮರಿಗೆ ಶಿಕ್ಷಣ ಪಡೆಯುವುದು ಅಲ್ಲಾಹನ ಆಜ್ಞೆಯಾಗಿದೆ. ಅವನ ಕಟ್ಟುಪಾಡುಗಳನ್ನು (ಸಲಾಹ್‌, ಹಿಜಬ್‌, ರೋಜಾ ಇತ್ಯಾದಿ) ಅನುಸರಿಸುತ್ತದೆ. ಈಗ ಯಾವುದು ಬೇಕು ಅದನ್ನು ಆಯ್ಕೆ ಮಾಡಿ ಎಂದು ಸರ್ಕಾರ ಹುಡುಗಿಯರನ್ನು ಒತ್ತಾಯಿಸುತ್ತಿದೆ. ಇಲ್ಲಯವರೆಗೆ ನ್ಯಾಯಾಂಗವು ಗಡ್ಡವನ್ನು ಹೊಂದುವುದು ಮತ್ತು ಹಿಜಬ್‌ ಅನಿವಾರ್ಯವಲ್ಲ ಎಂದು ಘೋಷಿಸಿದೆ. ನಂಬಿಕೆಗಳ ಮುಕ್ತ ಅಭಿವ್ಯಕ್ತಿಯಿಂದ ಈಗ ಏನು ಉಳಿದಿದೆ?

    ಹಿಜಬ್‌ ಧರಿಸುವುದು ಮಹಿಳೆಯರಿಗೆ ಕಿರುಕುಳವನ್ನು ಕಾನೂನುಬದ್ಧಗೊಳಿಸಲು ಈ ತೀರ್ಪು ಬಳಸಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಬ್ಯಾಂಕ್‌ಗಳು, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ಇತ್ಯಾದಿಗಳಲ್ಲಿ ಹಿಜಬ್‌ ಧರಿಸಿದ ಮಹಿಳೆಯರಿಗೆ ಇದು ಸಂಭವಿಸಿದಾಗ ನಿರಾಶೆಯಾಗಬಹುದು.

    ಪೂರ್ಣ ತೀರ್ಪು ಲಭ್ಯವಾದಾಗ ಒಬ್ಬರು ಹೆಚ್ಚು ವಿವರವಾಗಿ ಪ್ರತಿಕ್ರಿಯೆಯನ್ನು ನೀಡಬಹುದು ಎಂದು ಅಸಾದುದ್ದೀನ್‌ ಓವೈಸಿ ಸರಣಿ ಟ್ವೀಟ್‌ ಮಾಡಿದ್ದಾರೆ.

  • ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ

    ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ

    – ಮಕ್ಕಳ ಭವಿಷ್ಯದಲ್ಲಿ ರಾಜಕೀಯ ಬೆರೆಸಿದ ಕಾಂಗ್ರೆಸ್ ಧೋರಣೆಗೆ ಈಗ ಉತ್ತರ ಸಿಕ್ಕಿದೆ

    ಬೆಂಗಳೂರು: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ವಿಚಾರವಾಗಿ  ವಿರೋಧ ಪಕ್ಷವಾದ ಕಾಂಗ್ರೆಸ್ ವಿರುದ್ಧವಾಗಿ ಬಿಜೆಪಿ ಸರಣಿ ಟ್ವೀಟ್ ಮಾಡಿ ವಾಗ್ದಾಳಿ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಶಾಲಾ ಹಂತದಲ್ಲೇ ಬಗೆಹರಿಯಬಹುದಾದ ಹಿಜಬ್ ವಿಚಾರವನ್ನು ನ್ಯಾಯಾಲಯದವರೆಗೆ ಎಳೆದು ತರುವ ಅಗತ್ಯವಿರಲಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸರ್ಕಾರ ಜಾರಿಗೊಳಿಸಿದ ಸಮವಸ್ತ್ರ ನೀತಿಯಲ್ಲಿ ತಪ್ಪಿಲ್ಲ. ಸಮವಸ್ತ್ರ ಮೂಲಭೂತ ಹಕ್ಕುಗಳ ಮೇಲಿನ ಸಮಂಜಸ ನಿರ್ಬಂಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿರುವುದು ಸ್ವಾಗತಾರ್ಹವಾಗಿದೆ.

    ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕೆಲ ಮತೀಯ ಶಕ್ತಿಗಳು ಅನಗತ್ಯವಾಗಿ ಪ್ರಚೋದನೆ ನೀಡಿದವು. ಇದರಿಂದ ವಿದ್ಯಾರ್ಥಿನಿಯರ ಶಿಕ್ಷಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಯ್ತು. ಮಕ್ಕಳ ಭವಿಷ್ಯದ ವಿಚಾರದಲ್ಲೂ ರಾಜಕೀಯ ಬೆರೆಸಿದ ಕಾಂಗ್ರೆಸ್ ಧೋರಣೆಗೆ ಈಗ ಉತ್ತರ ಸಿಕ್ಕಿದೆ. ಹಿಜಬ್ ವಿಚಾರದಲ್ಲಿ ಕಾಂಗ್ರೆಸ್, ಎಸ್‍ಡಿಪಿಐ, ಸಿಎಫ್‍ಐ ಮೂಗು ತೂರಿಸಿದ್ದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಯ್ತು ಎಂದು ವಿರೋಧ ಪಕ್ಷದ ವಿರುದ್ಧವಾಗಿ ವಾಗ್ಧಾಳಿ ಮಾಡಿ ಟ್ವೀಟ್ ಮಾಡಲಾಗಿದೆ.  ಇದನ್ನೂ ಓದಿ: ಹಿಜಬ್ ಇಸ್ಲಾಂ ಆಚರಣೆಯಲ್ಲ ಅನ್ನೋ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಲ್ಲ: ಯು.ಟಿ.ಖಾದರ್

    ಕಾಂಗ್ರೆಸ್ ಪಕ್ಷದ ಇಬ್ಬಗೆ ನೀತಿ, ಮತ ರಾಜಕಾರಣಕ್ಕಾಗಿ ಒಡೆದಾಳು ನೀತಿಯ ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿನಿಯರು ಪರೀಕ್ಷೆಯಿಂದ ಹಿಂದೆ ಸರಿದರು. ಇದಕ್ಕೆಲ್ಲಾ ಕಾಂಗ್ರೆಸ್ ನೇರ ಹೊಣೆ. ಈ ಪ್ರಕರಣದಲ್ಲಿ ಹಿಜಬ್ ಒಳಗಿರುವ ಮತ ಗಟ್ಟಿಗೊಳಿಸಲು ಯತ್ನಿಸಿದ ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ಅವರು ಹಿಜಬ್ ಧರಿಸುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.

    ಈಗ ನ್ಯಾಯಾಲಯವೇ, ಹಿಜಬ್ ಇಸ್ಲಾಂ ಮತದ ಅವಿಭಾಜ್ಯ ಅಂಗವಲ್ಲ ಎಂಬ ತೀರ್ಪು ನೀಡಿದೆ. ಕಾಂಗ್ರೆಸ್ ತನ್ನ ವೈಯುಕ್ತಿಕ ರಾಜಕೀಯ ಲಾಭಕ್ಕಾಗಿ, ಹಿಜಬ್ ವಿವಾದಕ್ಕೆ ಪುಷ್ಟಿ ನೀಡಿತು. ವಿದ್ಯಾರ್ಥಿನಿಯರು ತರಗತಿ ಮತ್ತು ಪರೀಕ್ಷೆ ಹಾಜರಾಗದಂತಹ ವಾತಾವರಣ ನಿರ್ಮಿಸಿತ್ತು. ಈಗ ನ್ಯಾಯಾಲಯದ ತೀರ್ಪು ಬಂದಿದೆ. ಇನ್ನಾದರೂ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳ ಭವಿಷ್ಯ ಜೊತೆ ಚೆಲ್ಲಾಟವಾಡದಿರಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್

    ಹಿಜಬ್ ವಿಚಾರದಲ್ಲಿ ವಿದ್ಯಾರ್ಥಿನಿಯರ ಪರ ವಾದ ಮಾಡುವುದಕ್ಕೆ ಕಾಂಗ್ರೆಸ್ ತನ್ನದೇ ಪಕ್ಷದ ನ್ಯಾಯವಾದಿಗಳನ್ನು ನಿಯೋಜನೆ ಮಾಡಿತ್ತು. ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶ ಪ್ರಯತ್ನ ಇದಾಗಿತ್ತು. ಉದಯೋನ್ಮುಖ ವಿಫಲ ನಾಯಕಿ ಪ್ರಿಯಾಂಕಾ ವಾದ್ರಾ ಕೂಡಾ ಚಿತಾವಣೆ ನೀಡಿದ್ದನ್ನು ಮರೆಯಲು ಸಾಧ್ಯವೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಲಾಗಿದೆ.

    ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.

  • ಕೋರ್ಟ್ ತೀರ್ಪು ಬೆನ್ನಲ್ಲೇ ಪರೀಕ್ಷೆ ಬಿಟ್ಟು ಹೊರ ನಡೆದ ವಿದ್ಯಾರ್ಥಿನಿಯರು

    ಕೋರ್ಟ್ ತೀರ್ಪು ಬೆನ್ನಲ್ಲೇ ಪರೀಕ್ಷೆ ಬಿಟ್ಟು ಹೊರ ನಡೆದ ವಿದ್ಯಾರ್ಥಿನಿಯರು

    ಯಾದಗಿರಿ: ಹಿಜಬ್ ಸಂಬಂಧ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೆ ಯಾದಗಿರಿಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆ ಬಿಟ್ಟು ಮನೆಗೆ ತೆರಳಿದ್ದಾರೆ.

    ಹಿಜಬ್ ತೆಗೆಯದೆ ಬೆಳಗ್ಗೆಯಿಂದ ಕೋರ್ಟ್ ಆದೇಶಕ್ಕೆ ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ತೀರ್ಪು ಪ್ರಕಟವಾಗುತ್ತಿದ್ದಂತೆಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪೂರ್ವಭಾವಿ ಪರಿಕ್ಷೆ ಬಿಟ್ಟು ಹೊರಕ್ಕೆ ನಡೆದಿದ್ದಾರೆ. ಹಿಜಬ್ ಬಿಟ್ಟು ಕ್ಲಾಸ್‍ಗೆ ಬರಲ್ಲ ಎಂದು ಪರೀಕ್ಷೆ ಬಿಟ್ಟು 08 ವಿದ್ಯಾರ್ಥಿಗಳು ಮನೆಗೆ ಹೋಗಿದ್ದಾರೆ.

    ಬಳಿಕ ನಗರದ ಜ್ಯೂನಿಯರ್ ಪಿಯು ಕಾಲೇಜು ವಿದ್ಯಾರ್ಥಿನಿ ಅಸ್ರಾ ಮಾಧ್ಯಮದವರೊಂದಿಗೆ ಮಾತನಾಡಿ, ಹೈಕೋರ್ಟ್ ಆದೇಶ ಬಂದರೂ ನಾವು ಹಿಜಬ್ ಧರಿಸುತ್ತೆವೆ, ನಮಗೆ ಶಿಕ್ಷಣ ಹಾಗೂ ಹಿಜಬ್ ಕೂಡ ಮುಖ್ಯವಾಗಿದೆ. ನಾವು ಹಿಜಬ್ ತೆಗೆಯಲ್ಲ. ಹಿಜಬ್ ಧರಿಸಿ ಪೂರಕ ಪರೀಕ್ಷೆ ಬರೆಯುತ್ತೆವೆ. ಹಿಜಬ್ ತೆಗೆದು ಪರೀಕ್ಷೆ ಬರೆಬೇಕೆಂದರೆ ನಾವು ಪರೀಕ್ಷೆ ಬರೆಯಲ್ಲ, ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್

    ಕೆಂಬಾವಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಕುಂತಲಾ ಮಾತನಾಡಿ, ನಾವು ಕೋರ್ಟ್ ಆದೇಶ ಪಾಲಿಸಿ ಅಂತ ಹೇಳಿದ್ದೇವೆ. ನಾವು ಬಹಳಷ್ಟು ಮನವೋಲಿಸಿದರೂ ವಿದ್ಯಾರ್ಥಿನಿಯರು ನಮ್ಮ ಮಾತು ಕೇಳಲಿಲ್ಲ. ಹಿಜಬ್ ಹಾಕೊಂಡೇ ಬರುವುದಾಗಿ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಅವರು ಕ್ಲಾಸ್ ಬಿಟ್ಟು ಹೋಗಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಇಸ್ಲಾಂ ಆಚರಣೆಯಲ್ಲ ಅನ್ನೋ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಲ್ಲ: ಯು.ಟಿ.ಖಾದರ್

    ಅಲ್ಲದೆ ಪರೀಕ್ಷೆಗೆ ಬಂದಾಗ ಹಿಜಬ್ ತೆಗೆದು ಕುಳಿತುಕೊಳ್ಳಿ ಎಂದಾಗ ವಿದ್ಯಾರ್ಥಿನಿಯರು ತೆಗೆಯಲ್ಲ ಅಂದಿದ್ದಾರೆ. ಕೋರ್ಟ್ ಆದೇಶ ಬರುವವರೆಗೂ ಕಾಯ್ತೀವಿ ಅಂತ ಅಂದಿದ್ದರು. ಕೋರ್ಟ್ ಆದೇಶ ಬಂದಾಗ ಕ್ಲಾಸ್ ಬಿಟ್ಟು ಹೋಗುತ್ತೇವೆ ಅಂತ ಬಿಟ್ಟು ಹೋಗಿದ್ದಾರೆ. ನಾವು ಬುರ್ಖಾ, ಹಿಜಬ್ ಬಿಟ್ಟು ತರತಿಗೆ ಬರಲ್ಲ ಅಂತ ಹೇಳಿದ್ದಾರೆ. ಒಟ್ಟು 35 ಜನ ವಿದ್ಯಾರ್ಥಿನಿಯರು ಕ್ಲಾಸ್ ಬಹಿಷ್ಕರಿಸಿದ್ದಾರೆ. ಕೆಲವು ಜನ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ನಾವು ಮತ್ತು ಪೋಲಿಸ್ ಇಲಾಖೆಯವರು ಮನವೋಲಿಸಿದ್ದೇವೆ. ಆದರೆ ಅವರು ದಿಕ್ಕರಿಸಿ ಹೊರ ನಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.

  • ಹಿಜಬ್‌ ನಿಷೇಧದ ಹೈಕೋರ್ಟ್‌ ತೀರ್ಪು ತೀವ್ರ ನಿರಾಶಾದಾಯಕ: ಕಾಶ್ಮೀರ ಮಾಜಿ ಸಿಎಂ

    ಹಿಜಬ್‌ ನಿಷೇಧದ ಹೈಕೋರ್ಟ್‌ ತೀರ್ಪು ತೀವ್ರ ನಿರಾಶಾದಾಯಕ: ಕಾಶ್ಮೀರ ಮಾಜಿ ಸಿಎಂ

    ಶ್ರೀನಗರ: ಹಿಜಬ್ ನಿಷೇಧವನ್ನು ಎತ್ತಿಹಿಡಿಯುವ ಕರ್ನಾಟಕ ಹೈಕೋರ್ಟ್‌ನ ನಿರ್ಧಾರವು ತೀವ್ರ ನಿರಾಶಾದಾಯಕವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ್‌ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಅವರು, ಒಂದು ಕಡೆ ನಾವು ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತೇವೆ. ಆದರೆ ನಾವು ಅವರಿಗೆ ಸರಳ ಆಯ್ಕೆಯ ಹಕ್ಕನ್ನು ನಿರಾಕರಿಸುತ್ತಿದ್ದೇವೆ. ಇದು ಕೇವಲ ಧರ್ಮದ ಬಗ್ಗೆ ಅಷ್ಟೇ ಅಲ್ಲ, ಆಯ್ಕೆ ಮಾಡುವ ಸ್ವಾತಂತ್ರ್ಯದ ವಿಚಾರದಲ್ಲೂ ಕೂಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಕುರಿತ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ವಕ್ಫ್‌ ಬೋರ್ಡ್‌ ಅಧ್ಯಕ್ಷ

    ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವುದು ಭ್ರಮಾತ್ಮಕ ಘೋಷಣೆಯಾಗಿ ಉಳಿದಿದೆ. ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗುತ್ತಿದೆ ಎಂದು ಮುಫ್ತಿ ಅವರು ಈ ಹಿಂದೆಯೂ ಟ್ವೀಟ್‌ ಮಾಡಿ ಕರಾವಳಿಯಲ್ಲಿ ಎದ್ದಿದ್ದ ಹಿಜಬ್‌ ವಿವಾದ ಕುರಿತು ಕಿಡಿಕಾರಿದ್ದರು.

    ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ. ಕೃಷ್ಣ ಎಸ್‌ ದೀಕ್ಷಿತ್‌ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದಲ್ಲಿ ಹಿಜಬ್‌ ವಿವಾದ ಕುರಿತು ಇಂದು ತೀರ್ಪು ಪ್ರಕಟಿಸಲಾಯಿತು. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಹಿಜಬ್‌ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ. ಎಲ್ಲರೂ ಕೋರ್ಟ್‌ ಆದೇಶವನ್ನು ಪಾಲಿಸಬೇಕು ಎಂದು ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್‌ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.