Tag: Karnataka High Court

  • ಧರ್ಮಸ್ಥಳ ಕೇಸ್‌ಗೆ ಟ್ವಿಸ್ಟ್; ಮೂಲ ಪ್ರಕರಣ ರದ್ದುಕೋರಿ ಹೈಕೋರ್ಟ್‌ಗೆ ಬುರುಡೆ ಗ್ಯಾಂಗ್ ಅರ್ಜಿ

    ಧರ್ಮಸ್ಥಳ ಕೇಸ್‌ಗೆ ಟ್ವಿಸ್ಟ್; ಮೂಲ ಪ್ರಕರಣ ರದ್ದುಕೋರಿ ಹೈಕೋರ್ಟ್‌ಗೆ ಬುರುಡೆ ಗ್ಯಾಂಗ್ ಅರ್ಜಿ

    – ತಾವೇ ಹೋರಾಟ ಮಾಡಿ ಹಾಕಿಸಿದ್ದ ಕೇಸ್ ರದ್ದಿಗೆ ಕೋರ್ಟ್ ಮೆಟ್ಟಿಲೇರಿದ ಗ್ಯಾಂಗ್

    ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ (Dharmasthala Case) ರದ್ದು ಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಹೆಸರು ಕೆಡಿಸುವ ನೂರಾರು ಶವ ಹೂತಿಟ್ಟ ಹುನ್ನಾರ ತಮ್ಮ ಪಾಲಿಗೆ ಉರುಳಾಗುತ್ತಿದ್ದಂತೆ ಬುರುಡೆ ಗ್ಯಾಂಗ್ ಯೂಟರ್ನ್ ಹೊಡೆದಿದೆ.

    ತಾವೇ ಹೋರಾಟ ಮಾಡಿ ಹಾಕಿಸಿದ್ದ ಕೇಸಿನ ರದ್ದು ಕೋರಿ ತಿಮರೋಡಿ, ಜಯಂತ್, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ ಹೈಕೋರ್ಟ್ಗೆ ಪ್ರಕರಣ ರದ್ದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 100 ಗಂಟೆಗೂ ಹೆಚ್ಚಿನ ಕಾಲ ನಮ್ಮನ್ನು ವಿಚಾರಣೆ ಮಾಡಿದ್ದಾರೆ. ದೂರಿಗೆ ಸಂಬಂಧಿಸಿದಂತೆ 164 ಹೇಳಿಕೆಗಳಲ್ಲಿ ತಮ್ಮ ವಿರುದ್ಧ ಆರೋಪಗಳಿಲ್ಲ. ಆದರೂ ನೋಟಿಸ್ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಚಿನ್ನಯ್ಯ ದೂರಿನ ನಂತರ ಎಸ್‌ಐಟಿ ಎಫ್‌ಐಆರ್‌ನಲ್ಲಿ ಹೆಚ್ಚುವರಿ ಸೆಕ್ಷನ್ಸ್ ಸೇರಿಸಿತ್ತು. ಬಿಎನ್‌ಎಸ್ ಸೆಕ್ಷನ್ 336 (ನಕಲಿ ದಾಖಲೆ), ಎಲೆಕ್ಟ್ರಾನಿಕ್ಸ್‌ ದಾಖಲೆ ವಂಚನೆ ಉದ್ದೇಶಕ್ಕೆ ಬಳಕೆ, 211(ಎ) (ಉದ್ದೇಶ ಪೂರ್ವಕ ಮಾಹಿತಿ ನೀಡಲು ವಿಫಲ, 230 (ಸುಳ್ಳು ಸಾಕ್ಷ್ಯ ಸೃಷ್ಟಿ)229 (ಉದ್ದೇಶ ಪೂರ್ವಕ ಸುಳ್ಳು ಸಾಕ್ಷ್ಯ ಸೃಷ್ಟಿ, 227 (ಉದ್ದೇ ಪೂರ್ವಕ ಸುಳ್ಳು ಹೇಳಿಕೆ), 248 (ಸುಳ್ಳು ಕ್ರಿಮಿನಲ್ ಮೊಕದ್ದಮೆ) ಸೆಕ್ಷನ್‌ಗಳನ್ನು ಸೇರಿಸಲಾಗಿತ್ತು. ಆ ಬಳಿಕ ದೂರುದಾರ ಚಿನ್ನಯ್ಯನ ಬಂಧನವಾಗಿತ್ತು.

    ಅಕ್ಟೋಬರ್ 24 ರಂದು ವಿಚಾರಣೆಗೆ ಬರುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಈ ವಿಚಾರಣೆಗೆ ಹಾಜರಾದಲ್ಲಿ ಬಂಧನ ಸಾಧ್ಯತೆ ಭಯದಿಂದ ಇದೀಗ ಬುರುಡೆ ಗ್ಯಾಂಗ್ ಪ್ರಕರಣವನ್ನೇ ರದ್ದು ಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದೆ.

  • ಕೆಟ್ಟ ಅಭಿರುಚಿಯ ಚಾಟಿಂಗ್, ವಿಡಿಯೋ ಮಾಡಿದ್ದ ಜೋಡಿ – ಹೈಕೋರ್ಟ್‌ನಲ್ಲಿ ಮಹಿಳೆಯ ರೇಪ್‌ ಕೇಸ್ ವಜಾ

    ಕೆಟ್ಟ ಅಭಿರುಚಿಯ ಚಾಟಿಂಗ್, ವಿಡಿಯೋ ಮಾಡಿದ್ದ ಜೋಡಿ – ಹೈಕೋರ್ಟ್‌ನಲ್ಲಿ ಮಹಿಳೆಯ ರೇಪ್‌ ಕೇಸ್ ವಜಾ

    -ನಿರಾಸೆಯಲ್ಲಿ ಸಂಬಂಧ ಅಂತ್ಯಗೊಂಡರೆ ರೇಪ್ ಅಲ್ಲ

    ಬೆಂಗಳೂರು: ಆರಂಭದಲ್ಲಿ ಪರಸ್ಪರ ಸಮ್ಮತಿ ಮೇರೆಗೆ ಇಬ್ಬರ ನಡುವೆ ಸಂಬಂಧ (Relationship) ಚೆನ್ನಾಗಿದ್ದು, ಕೊನೆಗೆ ಯಾವುದೇ ಕಾರಣಕ್ಕೆ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅದು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಮಹತ್ವದ ತೀರ್ಪು ನೀಡಿದೆ.

    ಮಹಿಳೆಯೊಬ್ಬರು ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿದ್ದ ಸಾಂಪ್ರಸ್ ಆಂಥೋಣಿ ಎಂಬಾತನ ಒಂದು ವರ್ಷಗಳ ಕಾಲ ಆತ್ಮಿಯವಾಗಿದ್ದರು. ಬಳಿಕ ಮಹಿಳೆ, ಸಾಂಪ್ರಸ್ ಆಂಥೋಣಿ ವಿರುದ್ಧ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಕೇಸಿನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ವಾಟ್ಸಪ್‌ನಲ್ಲಿ ಇಬ್ಬರು ಪರಸ್ಪರ ಚಾಟಿಂಗ್ ಮಾಡಿದ್ದು, ಹಾಗೇ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಬಳಿಕ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಮಹಿಳೆ ಸಾಂಪ್ರಸ್ ಆಂಥೋಣಿ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ. ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಮಾತು ಮೊದಲ ಬಾರಿಗೆ ಬದಲಾಯ್ತು!

    ಇನ್‌ಸ್ಟಾಗ್ರಾಂನಲ್ಲಿ ಇಬ್ಬರು ಕೆಟ್ಟ ಅಭಿರುಚಿಯ ಚಾಟಿಂಗ್ ಮಾಡಿದ್ದರು. ಪರಸ್ಪರ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿದ್ದರು. ಆದ್ರೆ, ಆರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು ಇನ್‌ಸ್ಟಾಗ್ರಾಂ ಚಾಟಿಂಗ್ ಪರಿಗಣಿಸಿರಲಿಲ್ಲ. ಇವುಗಳನ್ನು ಪರಿಶೀಲಿಸಿದರೆ ಮಹಿಳೆಯ ದೂರು ಸುಳ್ಳೆಂದು ಸಾಬೀತಾಗಿದೆ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ:  ಕರೂರಿನಲ್ಲಿ ಭೇಟಿಯಾಗದ್ದಕ್ಕೆ ಕ್ಷಮಿಸಿ – ಮೃತರ ಕುಟುಂಬಸ್ಥರನ್ನ ಭೇಟಿಯಾಗಿ 7.8 ಕೋಟಿ ಪರಿಹಾರ ವಿತರಿಸಿದ ವಿಜಯ್

  • ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು: ಹೈಕೋರ್ಟ್ ಸೂಚನೆ

    ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು: ಹೈಕೋರ್ಟ್ ಸೂಚನೆ

    – ಒಂದೊಮ್ಮೆ ಸರ್ಕಾರದ ಆದೇಶ ಎತ್ತಿಹಿಡಿದರೆ ಬಾಕಿ ಹಣ ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು: ಆದೇಶ

    ಬೆಂಗಳೂರು: ಎಲ್ಲಾ ಮಲ್ಟಿಪ್ಲೆಕ್ಸ್‌ಗಳು (Multiplex) ಟಿಕೆಟ್ ಮಾರಾಟದ ಲೆಕ್ಕ ಇಡಬೇಕು. ಒಂದೊಮ್ಮೆ ಸರ್ಕಾರದ ಆದೇಶ ಎತ್ತಿಹಿಡಿದರೆ ಆ ಹಣವನ್ನು ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

    ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳ ಟಿಕೆಟ್ ದರಕ್ಕೆ ಗರಿಷ್ಠ 200 ರೂ. ಮಿತಿ ಹೇರಿ ರಾಜ್ಯ ಗೃಹ ಇಲಾಖೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಆದೇಶಕ್ಕೆ ಏಕಸದಸ್ಯ ಪೀಠ ತಡೆ ನೀಡಿತ್ತು. ಈ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಹೊಂಬಾಳೆ ಸಿನಿಮಾಸ್ ಪರ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ಅರ್ಜಿದಾರರ ಪರ ವಕೀಲ ಲಕ್ಷ್ಮಿ ನಾರಾಯಣ್ ವಾದಿಸಿದರು.

    ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟ ಮಾಡಿ ಸಂಗ್ರಹಿಸುವ ಹಣದ ಲೆಕ್ಕವನ್ನು ನಿರ್ವಹಿಸಬೇಕು (ಡಿಬೆಟ್, ಕ್ರೆಡಿಟ್ ಕಾರ್ಡ್, ಫೋನ್ ಪೇ ಇತ್ಯಾದಿ). ಒಂದೊಮ್ಮೆ ನಿಯಮವನ್ನು ಪೀಠ ಎತ್ತಿಹಿಡಿದರೆ ಆ ಹಣವನ್ನು ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು ಎಂದು ಆದೇಶಿಸಿದೆ. ಇದನ್ನೂ ಓದಿ: ಮಲ್ಟಿಪ್ಲೆಕ್ಸ್‌ ಸೇರಿ ಎಲ್ಲಾ ಥಿಯೇಟರ್‌ಗಳಲ್ಲೂ ಏಕರೂಪ ದರ; 200 ರೂ. ಫಿಕ್ಸ್‌ – ಕರಡು ಅಧಿಸೂಚನೆ ಪ್ರಕಟ

    ನಗದಿನಲ್ಲಿ ಖರೀದಿಸಿದ ಟಿಕೆಟ್ ಹಣವನ್ನು ನಿರ್ದಿಷ್ಟ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡಬಹುದು. ಇದನ್ನು ಸರ್ಕಾರವು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಮಲ್ಟಿಪ್ಲೆಕ್ಸ್‌ಗಳು ಸಿನಿಮಾ ಆರಂಭವಾಗುವುದಕ್ಕೂ ಮುನ್ನ ಜನರಿಗೆ ತಿಳಿಸಬೇಕು ಎಂದು ಕೋರ್ಟ್ ಸೂಚಿಸಿದೆ.

    ನಿಯಮಿತವಾಗಿ ಟಿಕೆಟ್ ಮಾರಾಟ ಮಾಡಿದ ಹಣದ ದಾಖಲೆಯನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾವು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದನ್ನು ಮಾಡದ ಮಲ್ಟಿಪ್ಲೆಕ್ಸ್‌ಗಳಿಗೆ ನ್ಯಾಯಾಲಯದ ಮಧ್ಯಂತರ ಆದೇಶವು ಅನ್ವಯಿಸುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ವಿಚಾರಣೆಯನ್ನು ಮುಂದೂಡಿದೆ.

  • ಜಾತಿಗಣತಿ ಸಮೀಕ್ಷೆ ತಡೆ ಕೋರಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

    ಜಾತಿಗಣತಿ ಸಮೀಕ್ಷೆ ತಡೆ ಕೋರಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

    – ಈ ರೀತಿ ಸಮೀಕ್ಷೆ ಮಾಡೋದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ: ಅರ್ಜಿದಾರರ ಪರ ವಕೀಲರ ವಾದ
    – ಅಂಕಿಅಂಶಗಳಿಲ್ಲದೇ ಕಲ್ಯಾಣಕಾರಿ ಯೋಜನೆ ರೂಪಿಸಲು ಆಗಲ್ಲ: ಸರ್ಕಾರ ಪರ ವಕೀಲರು

    ಬೆಂಗಳೂರು: ಜಾತಿಗಣತಿ ಸಮೀಕ್ಷೆ (Caste Census) ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ (High COurt) ಬುಧವಾರಕ್ಕೆ ಮುಂದೂಡಿದೆ.

    ಇಂದು ಹೈಕೋರ್ಟ್ನ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಪರ ವಕೀಲರಾದ ಶಶಿಕಿರಣ್ ಶೆಟ್ಟಿ ಮತ್ತು ಅಭಿಷೇಕ್ ಮನುಸಿಂಘ್ವಿ ಹಾಗೂ ಅರ್ಜಿದಾರರ ಪರ ಪ್ರಭುಲಿಂಗ ನಾವದಗಿ, ಅಶೋಕ್ ಹಾರನಹಳ್ಳಿ, ಶ್ರೀರಂಗ, ವಿವೇಕ್ ರೆಡ್ಡಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

    ಪ್ರಭುಲಿಂಗ ನಾವದಗಿ ಅವರು ಸರ್ಕಾರದ ಆದೇಶದ ಪ್ರತಿ ಉಲ್ಲೇಖಿಸಿ ವಾದ ಮಂಡನೆ ಮಾಡಿದರು. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷೆ ಮಾಡಲು ಸೂಚಿಸಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಂಶಗಳ ಮೇಲೆ ಸಮೀಕ್ಷೆ ಮಾಡಲು ಹೇಳಿದೆ. ರಾಜ್ಯದ ಎಲ್ಲಾ ಜನತೆಯನ್ನು ಸಮೀಕ್ಷೆಯಲ್ಲಿ ಒಳಪಡಿಸಬೇಕು ಅಂತ ಇದೆ. ರಾಜ್ಯದ ಎಲ್ಲಾ ಜನರು ಕೂಡ ಸಮೀಕ್ಷೆಯಲ್ಲಿ ಒಳಡಿಸಬೇಕು ಅಂತ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ. ಡಿಜಿಟಲ್ ಆಗಿ ದತ್ತಾಂಶ ಸಂಗ್ರಹ ಮಾಡಬೇಕು ಅಂತಿದೆ. ಆಧಾರ ಕಾರ್ಡ್ ಅನ್ನು ಕಡ್ಡಾಯ ಮಾಡಿದ್ದಾರೆ. ಈ ಸಮೀಕ್ಷೆ ಶಿಕ್ಷಕರು, ಆಶಾ ಕಾರ್ಯಕರ್ತೆಯರ ಬಳಕೆ ಮಾಡಬೇಕು ಅಂತ ಹೇಳಿಕೊಂಡಿದೆ. ಮತ್ತೊಂದು ಆದೇಶ ಪ್ರತಿ, 2025 ಆಗಸ್ಟ್ 22ರಲ್ಲಿ ಇನ್ನೊಂದು ಆದೇಶದಲ್ಲಿ ಉಲ್ಲೇಖ ಮಾಡಿದ್ದಾರೆ. ವಿದ್ಯುತ್ ಸಂಪರ್ಕದ ಮಾಹಿತಿಯನ್ನು ಕೇಳಿದೆ ಎಂದು ಸಮೀಕ್ಷೆ ಮಾಡುತ್ತಾ ಇರುವವರ ಬಳಿ ಇರುವ ಹ್ಯಾಂಡ್ ಬುಕ್‌ನ್ನು ಕೋರ್ಟ್ಗೆ ಪ್ರಭುಲಿಂಗ ಅವರು ನೀಡಿದರು.

    ಇದರಲ್ಲಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನಮೂದಿಸಬೇಕು ಅಂತಿದೆ. ಕಡ್ಡಾಯ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ರೀತಿ ಸಮೀಕ್ಷೆ ಮಾಡೋದಕ್ಕೆ ಅಧಿಕಾರವೇ ಇಲ್ಲ. ಸಂವಿಧಾನದ ಪ್ರಕಾರ ಇದಕ್ಕೆ ಅಧಿಕಾರ ಇಲ್ಲ. ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಿಂದುಳಿದ ಬಗ್ಗೆ ರಾಜ್ಯ ಸರ್ಕಾರ ಪತ್ತೆ ಮಾಡೋದಕ್ಕೆ ಅಧಿಕಾರ ಇರೋದಿಲ್ಲ. ಸಂವಿಧಾನಕ್ಕೆ 105ನೇ ತಿದ್ದುಪಡಿ ಮಾಡುವುದಕ್ಕೂ ಮುನ್ನ 342(ಎ)ನಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಬೇಕು. ಈ ಪ್ರಕಾರ ಮಾಡೋ ಹಾಗೇ ಇಲ್ಲ. ಹಾಗೇನಾದರೂ ಮಾಡೋ ಹಾಗಿದ್ರೆ ಕೇಂದ್ರ ಸರ್ಕಾರ ಮಾಡಬಹುದು. ಮನೆಯ ಮುಖ್ಯಸ್ಥನ ಸಂಪೂರ್ಣ ವಿವರ ಕೇಳಲಾಗಿದೆ. ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಸರ್ವೆ ಅಧಿಕಾರವಿಲ್ಲ. ರಾಷ್ಟ್ರಪತಿಗಳು ಮಾತ್ರ ಹಿಂದುಳಿದ ವರ್ಗಗಳ ಅಧಿಸೂಚನೆ ಹೊರಡಿಸಬಹುದು ಎಂದು ವಾದಿಸಿದರು.

    ಒಕ್ಕಲಿಗರ ಪರ ವಕೀಲ ಅಶೋಕ್ ಹಾರ್ನಹಳ್ಳಿ ವಾದ ಮಂಡಿಸಿ, ಜನರಲ್ಲಿ ಗೊಂದಲ ಸೃಷ್ಟಿಸುವುದೇ ಈ ರಾಜ್ಯ ಸರ್ಕಾರದ ಉದ್ದೇಶ ಆಗಿದೆ. ಜಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಾ ಇದೆ. ಕೇಂದ್ರ ಸರ್ಕಾರ ಈಗಾಗಲೇ 2027ರ ಮಾ.1ರಿಂದ ಜನಗಣತಿ ನಡೆಸಲಿದೆ. ಜನಗಣತಿಯ ಸಂದರ್ಭದಲ್ಲೇ ಜಾತಿಗಣತಿ ನಡೆಸಲು ನಿರ್ಧರಿಸಿದೆ. ರಾಜ್ಯ ಸರ್ಕಾರಗಳ ಗಣತಿ ಉದ್ದೇಶದ ಬಗ್ಗೆ ಹಲವು ಅನುಮಾನಗಳಿವೆ. ಹೀಗಾಗಿಯೇ ಕೇಂದ್ರ ಸರ್ಕಾರ ದೇಶಾದ್ಯಂತ ಗಣತಿಗೆ ನಿರ್ಧರಿಸಿದೆ. ಈ ಹಿಂದೆ ಮಾಡಿರೋ ಸಮೀಕ್ಷೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಹಿಂದಿನ ಸಮೀಕ್ಷೆ ಏನಾಯ್ತು ಗೊತ್ತಿಲ್ಲ. 2015 ರಲ್ಲಿ ರಾಜ್ಯ ಸರ್ಕಾರ ಮಾಡಿದ ಸರ್ವೆ ಪ್ರಶ್ನಿಸಲಾಗಿತ್ತು. 2024 ರಲ್ಲಿ ಸಲ್ಲಿಸಿದ ಸರ್ವೆ ವರದಿಯ ಸ್ಥಿತಿ ಏನಾಗಿದೆ ತಿಳಿದಿಲ್ಲ. ಹಿಂದೆ 150 ಕೋಟಿ ರೂ. ಗಳಲ್ಲಿ ಸರ್ವೆ, ಈಗ ಮತ್ತೆ 420 ಕೋಟಿ ವೆಚ್ಚದಲ್ಲಿ ಸರ್ವೆ. 1,561 ಜಾತಿಗಳನ್ನು ಸರ್ವೆ ಮಾಡಲು ಸರ್ಕಾರ ಮುಂದಾಗಿದೆ. ಹೊಸ ಹೊಸ ಜಾತಿಗಳನ್ನು ಸರ್ಕಾರ ಸೃಷ್ಟಿಸಿದೆ. ಜಾತಿಗಳ ಬಗ್ಗೆ ವಿಶ್ಲೇಷಣೆ ಇಲ್ಲದೇ ಸರ್ಕಾರ ಸರ್ವೆಗೆ ಮುಂದಾಗಿದೆ. ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡುವ ದತ್ತಾಂಶ ಸೋರಿಕೆ ಆಗುವ ಸಾಧ್ಯತೆ ಹೆಚ್ಚಿದೆ. ಸಮೀಕ್ಷೆ ಆದ ಬಳಿಕ ಯಾರ ಬಳಿ ಇರಲಿದೆ ಅನ್ನೋದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಕೆಲವೊಂದು ವೈಯಕ್ತಿಕ ವಿಚಾರವನ್ನು ಸಮೀಕ್ಷೆಯಲ್ಲಿ ಕೇಳಲಾಗ್ತಾ ಇದೆ. ಸಂವಿಧಾನದ ಕೇಂದ್ರ ಪಟ್ಟಿಯಲ್ಲಿ ಜನಗಣತಿ ಬರುತ್ತದೆ. ಕೇಂದ್ರ ಸಂಗ್ರಹಿಸಿದ ಅಂಕಿಅಂಶಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಇಂತಹ ಯಾವುದೇ ರಕ್ಷಣೆ ಒದಗಿಸಿಲ್ಲ. ಮಾಹಿತಿಯ ಖಾಸಗಿತನದ ಹಕ್ಕನ್ನು ಸುಪ್ರೀಂ ಕೋರ್ಟ್ ಗುರುತಿಸಿದೆ. ಡಿಜಿಟಲ್ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದ ತೀರ್ಪು ಉಲ್ಲೇಖಿಸಿ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.

    ಸರ್ಕಾರದ ಪರವಾಗಿ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮಾಡಿದರು. ಇದು ಗಣತಿ ಅಲ್ಲ, ಇದೊಂದು ಸಮೀಕ್ಷೆ ಅಷ್ಟೇ. ಎಂದು ವಾದಿಸಿದರು. ಎರಡಕ್ಕೂ ಏನ್ ವ್ಯತ್ಯಾಸವಿದೆ? ಎರಡು ಒಂದೇ ಅಲಾ ಎಂದು ಸಿಜೆ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮನುಸಿಂಘ್ವಿ, ಅರ್ಜಿದಾರರು ಜಾತಿ ಸಮೀಕ್ಷೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದು ಸಾಮಾಜಿಕ-ಆರ್ಥಿಕ ಸಮೀಕ್ಷೆ ಮಾತ್ರ. ರಾಜ್ಯ ಸರ್ಕಾರಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡುವ ಅಧಿಕಾರ ಸಂವಿಧಾನವೇ ಕಲ್ಪಿಸಿದೆ. ಇದು ಕೇವಲ ದತ್ತಾಂಶ ಸಂಗ್ರಹದ ವಿಚಾರ ಆಗಿದೆ. ಕರ್ನಾಟಕ ಸರ್ಕಾರ ಈಗಾಗಲೇ ನಾಲ್ಕು ಬಾರಿ ಈ ರೀತಿಯ ಸಮೀಕ್ಷೆಗಳನ್ನು ಮಾಡಿಸಿದೆ. ತಡೆಯಾಜ್ಞೆ ನೀಡಿದರೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಇದಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಕೋರ್ಟ್ನಲ್ಲಿ ಮನವಿ ಮಾಡಿದರು.

    ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆ ಮಾಡಲಾಗುತ್ತಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪೂರಕವಾಗಿ ಸರ್ವೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದಾಗ ಹೇಗೆ ಮಾಡಬೇಕೆಂಬುದು ಮುಖ್ಯವಲ್ಲ. ಅಂಕಿ ಅಂಶ ಸಂಗ್ರಹಿಸಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ. ಅಂಕಿ ಅಂಶಗಳಿಲ್ಲದೇ ಕಲ್ಯಾಣಕಾರಿ ಯೋಜನೆಗಳನ್ನೂ ರೂಪಿಸಲಾಗುವುದಿಲ್ಲ. ತಡೆ ನೀಡಿದರೆ ಸರ್ಕಾರದ ಅಧಿಕಾರವನ್ನೂ ತಡೆದಂತಾಗುತ್ತದೆ. ಈ ಹಿಂದೆಯೂ 2 ಆಯೋಗಗಳನ್ನು ರಚಿಸಲಾಗಿತ್ತು. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ ರಚಿಸಲಾಗಿತ್ತು. ಸರ್ವೆ ಎಂದರೆ ಸಂಪೂರ್ಣ ಜನರನ್ನು ಒಳಗೊಳ್ಳುತ್ತದೆ. ಸರ್ಕಾರ ಆಯ್ದು ಆಯ್ದು ಸರ್ವೆ ನಡೆಸಲಾಗುವುದಿಲ್ಲ. ಹಿಂದುಳಿದ ವರ್ಗಗಗಳನ್ನು ಪತ್ತೆ ಹಚ್ಚಲು ಸಂಪೂರ್ಣ ಸರ್ವೆ ಅಗತ್ಯ. ಇಂದಿರಾ ಸಹಾನಿ ಪ್ರಕರಣ ಉಲ್ಲೇಖಿಸಿ ಸಿಂಘ್ವಿ ವಾದ
    ಅಂಕಿ ಅಂಶ ಸಂಗ್ರಹಿಸಿದೇ ಹಿಂದುಳಿದ ವರ್ಗ ಪತ್ತೆ ಹಚ್ಚುವುದು ಹೇಗೆ ಎಂದು ಪ್ರಶ್ನಿಸಿದರು.

    ಸಂವಿಧಾನಕ್ಕೆ 105 ನೇ ತಿದ್ದುಪಡಿ ಬಳಿಕ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸಂಪೂರ್ಣ ಜನರ ಜಾತಿ ಸರ್ವೆ ನೀತಿ ನಿರೂಪಣೆಯ ಭಾಗವಾಗಿದೆ. ದಂತ ಗೋಪುರದಲ್ಲಿ ಕುಳಿತು ಜಾತಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪಟ್ಟಿ ತಯಾರಿಸಲು ಅವಕಾಶವಿದೆ. ಅಂಕಿ ಅಂಶ ಸಂಗ್ರಹಿಸದೇ ಪಟ್ಟಿ ತಯಾರಿಸುವುದು ಹೇಗೆ? ಕೇಂದ್ರ ಸರ್ಕಾರ ಮಾಡುತ್ತದೆ, ರಾಜ್ಯ ಮಾಡುವಂತಿಲ್ಲ ಎನ್ನುವಂತಿಲ್ಲ. ಕೇಂದ್ರದ ಜಾತಿ ಪಟ್ಟಿಯಲ್ಲಿರುವುದಕ್ಕಿಂತ ಪ್ರತ್ಯೇಕ ಪಟ್ಟಿ ಹೊಂದಬಹುದು. ಕೇಂದ್ರ ಸರ್ಕಾರವೇ ಸಂವಿಧಾನಕ್ಕೆ 105 ನೇ ತಿದ್ದುಪಡಿ ತಂದಿದೆ. ಆದರೆ, ಇಲ್ಲಿ ಅರ್ಜಿದಾರರಿಗೆ ಕೇಂದ್ರ ಸರ್ಕಾರ ಬೆಂಬಲಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದರಿಂದ ತಡೆ ನೀಡಬಾರದು. ಯಾವಾಗ ಮಾಡಬೇಕೆಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಬಿಹಾರದಲ್ಲಿ ಕೂಡಾ ಜಾತಿಗಣತಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿಗೆ ಕಾಯಬೇಕೆಂದಿಲ್ಲ. ಹಾಗಾದರೆ, ರಾಜ್ಯದ ಆಡಳಿತ ದುರ್ಬಲವಾಗುತ್ತದೆ. ಅಂಕಿ ಅಂಶ ಸಂಗ್ರಹಿಸಿ ಅರ್ಹ ಜಾತಿಗಳಿಗೆ ಸವಲತ್ತು ನೀಡಬಹುದು. ಹಳೆಯ ಸಮೀಕ್ಷೆಗೆ ಈಗ ಅಪ್‌ಡೇಟ್ ಮಾಡುತ್ತಿದ್ದೀವಿ ಅಷ್ಟೇ ಎಂದು ಸಿಂಘ್ವಿ ವಾದಿಸಿದರು.

    ಹಿಂದುಳಿದ ಆಯೋಗದ ಪರ ರವಿವರ್ಮಕುಮಾರ್ ವಾದ ಮಂಡಿಸಿ, ನಾವು ಆಧಾರ್ ಕಾರ್ಡ್ ಪಡೆಯುತ್ತಿರೋದು ಕೆವೈಸಿ ವಿಚಾರಕ್ಕಾಗಿ. ವ್ಯಕ್ತಿ ಸ್ಪಷ್ಟೀಕರಣಕ್ಕಾಗಿ ಅಷ್ಟೇ. ನಾಳೆಗೆ ವಿಚಾರಣೆ ಮುಂದೂಡಲು ಮನವಿ ಮಾಡಿದರು. ಕೊನೆಗೆ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

  • ಗಣೇಶ ಹಬ್ಬ, ಈದ್ ಮಿಲಾದ್‌ಗೆ ಡಿಜೆ ನಿಷೇಧ; ಪೊಲೀಸರ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು

    ಗಣೇಶ ಹಬ್ಬ, ಈದ್ ಮಿಲಾದ್‌ಗೆ ಡಿಜೆ ನಿಷೇಧ; ಪೊಲೀಸರ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು

    ಬೆಂಗಳೂರು: ಗೌರಿ-ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬಕ್ಕೆ ಡಿಜೆ ನಿಷೇಧ ವಿಚಾರದಲ್ಲಿ ಪೊಲೀಸರ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು ಅಂದಿದೆ.

    ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ಅರ್ಜಿದಾರ ಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

    ಡಿಜೆ ನಿಷೇಧ ಪ್ರಶ್ನಿಸಿ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮೆರವಣಿಗೆ ಮತ್ತು ಸಾರ್ವಜನಿಕ ಮಂಟಪಗಳಲ್ಲಿ ಡಿಜೆ ನಿಷೇಧದ ಪೊಲೀಸರ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದೆ.

    ಪೊಲೀಸರ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಅಧಿಕಾರಿಯೊಬ್ಬರು ಅರ್ಜಿ ಸಲ್ಲಿಸಿದ್ದರು.

  • ವಿಷ್ಣು ಸಮಾಧಿ ತೆರವು; ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಕೆ

    ವಿಷ್ಣು ಸಮಾಧಿ ತೆರವು; ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಕೆ

    ಒಂದ್ಕಡೆ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಸೇರಿ ಪರ್ಯಾಯ ವಿಷ್ಣು ಸ್ಮಾರಕ (Vishnuvardhan Memorial) ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನೊಂದ್ಕಡೆ ವಿಷ್ಣು ಅಭಿಮಾನಿಗಳ ಸಂಘಟನೆಗಳು ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿ ನೆಲಸಮವಾದ ಜಾಗದಲ್ಲೇ ಮರು ನಿರ್ಮಾಣ ಮಾಡಲು ಮುಂದಾಗಿದೆ.

    ಸೋಮವಾರವಷ್ಟೇ ಹೈಕೋರ್ಟ್‌ಗೆ ವಿಷ್ಣುಸೇನೆಯು ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅಭಿಮಾನ್ ಸ್ಟುಡಿಯೋದಲ್ಲಿ ಬೇರೆ ಕೆಲಸಗಳಿಗೂ ತಡೆಯಾಜ್ಞೆ ಹೇರಲಾಗಿದೆ. ಯಾವ ಉದ್ದೇಶಕ್ಕೆ ಸರ್ಕಾರ ಜಾಗ ನೀಡಿತ್ತೋ ಆ ಕೆಲಸಕ್ಕೆ ಉಪಯೋಗವಾಗದೆ ವ್ಯವಹಾರಿಕವಾಗಿ ಲಾಭದಾಸೆಗೆ ಬಾಲಣ್ಣ ಕುಟುಂಬ ಪ್ಲ್ಯಾನ್ ಮಾಡಿರೋದ್ರ ಕುರಿತಾಗಿಯೂ ಬೇಸರ ವ್ಯಕ್ತಪಡಿಸಲಾಗಿದೆ. ಜೊತೆಗೆ 10 ಗುಂಟೆ ಜಾಗವನ್ನ ವಾಪಸ್ ಪಡೆಯುವುದು, ಜೊತೆಗೆ ಸಮಾಧಿ ಮರುಸ್ಥಾಪನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ.‌ ಇದನ್ನೂ ಓದಿ: ದಾದಾ ಫ್ಯಾನ್ಸ್‌ಗೆ ಶುಭ ಸುದ್ದಿ – ಬರುತ್ತಿದೆ ಹೊಸ ಸ್ಮಾರಕ

    ಇದೀಗ ಸ್ಮಾರಕ ತೆರವುಗೊಳಿಸಿ ಹತ್ತು ದಿನಗಳೇ ಉರುಳಿದೆ. ಹೀಗಾಗಿ, ಸೆಪ್ಟೆಂಬರ್ 18ರಂದು ನಡೆಯಬೇಕಿದ್ದ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ನಿರಾಸೆಯೇ ಗತಿ. ಆದರೆ ಅಭಿಮಾನಿಗಳಿಗೆ ಕೊಂಚ ನಿರಾಳ ಅನ್ನೋ ಥರ ಕೆಂಗೇರಿ ಬಳಿಯೇ ನಯಾ ಸ್ಮಾರಕಕ್ಕೆ ವಿಷ್ಣುಸೇನೆ ತಯಾರಿ ನಡೆಸಿದೆ. ಅಭಿಮಾನಿಗಳ ಎಲ್ಲಾ ನಿರ್ಧಾರಕ್ಕೂ ಕುಟುಂಬ ಜೊತೆಯಾಗಿರೋದಾಗಿ ಹಿಂದೆಯೇ ಹೇಳಿತ್ತು. ಇದೀಗ ನಿರ್ಮಾಪಕ ಕೆ.ಮಂಜು ಮುಂದಾಳತ್ವದ ಇನ್ನೊಂದು ಬಣವೂ ಸಂಪೂರ್ಣ ಬೆಂಬಲ ಕೊಡೋದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. ಒಟ್ಟಿನಲ್ಲಿ ಸಮಾಧಿ ತೆರವು ಮಾಡಿರುವ ಜಾಗದಲ್ಲಿ ಸಮಾಧಿ ಮರುಸ್ಥಾಪನೆ ಹಾಗೂ ಪರ್ಯಾಯ ಸ್ಮಾರಕ ಸ್ಥಾಪನೆಯೂ ಜಂಟಿಯಾಗಿ ನಡೆಯುತ್ತಿದೆ.

  • ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ಪ್ರಮಾಣ ವಚನ ಸ್ವೀಕಾರ

    ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ಪ್ರಮಾಣ ವಚನ ಸ್ವೀಕಾರ

    ಬೆಂಗಳೂರು: ಕರ್ನಾಟಕ ಹೈಕೋರ್ಟ್ (Karnataka High Court) ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ವಿಭು ಭಕ್ರು (Vibhu Bakhru) ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ನೇಮಕ

     

    ನ್ಯಾ. ಭಕ್ರು ಅವರು 1966ರಲ್ಲಿ ನಾಗಪುರದಲ್ಲಿ ಜನಿಸಿದರು. ದೆಹಲಿಯ ಮಥುರಾ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1989ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿಯೂ ಅರ್ಹತೆ ಪಡೆದಿದ್ದರು.

    1990ರಲ್ಲಿ ಎಲ್‍ಎಲ್‍ಬಿ ಪದವಿ ಪಡೆದು, ಅದೇ ವರ್ಷ ದೆಹಲಿ ವಕೀಲರ ಪರಿಷತ್‍ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದರು. ಅವರು ವಕೀಲರಾಗಿದ್ದ ಅವಧಿಯಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್, ಕಂಪನಿ ಕಾನೂನು ಮಂಡಳಿ ಮತ್ತು ಇತರೆ ನ್ಯಾಯ ಮಂಡಳಿಗಳಲ್ಲಿ ವಕೀಲಿಕೆ ಮಾಡಿದ್ದಾರೆ. 2011ರಲ್ಲಿ ಹಿರಿಯ ವಕೀಲರಾಗಿ ಅವರು ಪದೋನ್ನತಿ ಪಡೆದಿದ್ದರು. 2013ರ ಏಪ್ರಿಲ್ 17ರಂದು ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2015ರ ಮಾರ್ಚ್ 18ರಂದು ಖಾಯಂಗೊಂಡಿದ್ದರು. ಇದನ್ನೂ ಓದಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ| ಸಂಸತ್‌ನಲ್ಲಿ ಮಹಾಭಿಯೋಗಕ್ಕೆ ತಯಾರಿ – ಸುಪ್ರೀಂ ಮೆಟ್ಟಿಲೇರಿದ ನ್ಯಾ.ಯಶವಂತ್ ವರ್ಮಾ

  • ಬೆಳಗಾವಿ | 30 ವರ್ಷದ ಹಿಂದೆ ಗುತ್ತಿಗೆದಾರನಿಗೆ ಸಿಗಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಡಿಸಿ ಕಾರು ಜಪ್ತಿ

    ಬೆಳಗಾವಿ | 30 ವರ್ಷದ ಹಿಂದೆ ಗುತ್ತಿಗೆದಾರನಿಗೆ ಸಿಗಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಡಿಸಿ ಕಾರು ಜಪ್ತಿ

    ಬೆಳಗಾವಿ: 30 ವರ್ಷಗಳ ಹಿಂದೆ ಗುತ್ತಿಗೆದಾರನಿಗೆ ನೀಡಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಬೆಳಗಾವಿಯ ಜಿಲ್ಲಾಧಿಕಾರಿ (Belagavi DC) ಮೊಹಮ್ಮದ್ ರೋಷನ್ ಅವರು ಓಡಾಡ್ತಿದ್ದ ಕಾರು ಜಪ್ತಿ ಮಾಡಲಾಗಿದೆ.

    ದೂದಗಂಗಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಕಾಮಗಾರಿಯೊಂದನ್ನ ದಿ.ನಾರಾಯಣ್ ಕಾಮತ್ ಎಂಬವರಿಗೆ ಗುತ್ತಿಗೆ ನೀಡಲಾಗಿತ್ತು. 1992-93ರಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಕಾಮಗಾರಿ ಮಾಡಲಾಗಿತ್ತು. ಕಾಮಗಾರಿ ಮುಗಿದು 2 ವರ್ಷ ಕಳೆದಿದ್ದರೂ ಬಿಲ್‌ ಪಾವತಿ ಆಗಿರಲಿಲ್ಲ. ಹೀಗಾಗಿ ಬಿಲ್‌ಗಾಗಿ 1995ರಲ್ಲಿ ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

    ಈ ವೇಳೆ ಬೆಳಗಾವಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ 34 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿತ್ತು. ಸ್ಥಳೀಯ ಕೋರ್ಟ್‌ ಆದೇಶ ಪ್ರಶ್ನಿಸಿ ಸಣ್ಣ ನೀರಾವರಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ 2024ರ ಜೂನ್ ಒಳಗಾಗಿ ಗುತ್ತಿಗೆದಾರನಿಗೆ ಬಡ್ಡಿ ಸಮೇತ ಅರ್ಧ ಬಿಲ್ ಪಾವತಿ ಮಾಡುವಂತೆ ಹೈಕೋರ್ಟ್ ಕೂಡ ಸೂಚನೆ ನೀಡಿತ್ತು.

    ಹೈಕೋರ್ಟ್ ಆದೇಶ ಬಳಿಕವೂ ಬಾಕಿ ಬಿಲ್ ನೀಡಲು ವಿಫಲವಾದ ಹಿನ್ನೆಲೆ ಇಂದು (ಜು.18) ಡಿಸಿ ಕಾರು ಜಪ್ತಿ ಮಾಡಲಾಗಿದೆ. ಗುತ್ತಿಗೆದಾರನ ಪರ ಹಿರಿಯ ವಕೀಲ ಓ.ಬಿ ಜೋಶಿ ವಾದಿಸಿದ್ದರು. ಇದನ್ನೂ ಓದಿ: ಕೆಡಿಪಿ ಮೀಟಿಂಗ್‌ನಲ್ಲಿ ರಮ್ಮಿ ಆಡ್ತಿದ್ದ ಅರಣ್ಯಾಧಿಕಾರಿ – ಸಭೆಯಲ್ಲೇ ಗುಮ್ಮಿದ ಸಚಿವರು

  • ಬೇಲ್‌ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ

    ಬೇಲ್‌ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ

    – ಜು.22ಕ್ಕೆ ದರ್ಶನ್‌ ಜಾಮೀನು ಭವಿಷ್ಯ ನಿರ್ಧಾರ

    ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜಾಮೀನು ಪಡೆದು ಶೂಟಿಂಗ್, ವಿದೇಶ ಪ್ರವಾಸ ಅಂತಾ ಜಾಲಿ ಮೂಡ್‌ನಲ್ಲಿದ್ದ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ಪರಿಶೀಲಿಸಿರುವ ಸುಪ್ರೀಂ ಕೋರ್ಟ್ (Supreme Court) ಬದಲಾವಣೆಯ ಬಗ್ಗೆ ಪರೋಕ್ಷವಾಗಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಮಂಗಳವಾರ (ಜು.22) ಅಂತಿಮ ವಿಚಾರಣೆ ನಡೆಸಿ ಅಂದೇ ಆದೇಶ ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದ್ದು ಅಂದು ದರ್ಶನ ಪವಿತ್ರಾಗೌಡ (Pavithra Gowda) ಸೇರಿ ಏಳು ಮಂದಿಯ ಭವಿಷ್ಯ ನಿರ್ಧಾರವಾಗಲಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ, ಜಾಮೀನು ಪಡೆದು ಸದ್ಯ ಶೂಟಿಂಗ್‌ಗಾಗಿ ವಿದೇಶಿ ಪ್ರವಾಸ ಅಂತಾ ಬ್ಯುಸಿಯಾಗಿರುವ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್ ಕೊಡುವ ಸಾಧ್ಯತೆ ಇದೆ. ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು (Bengaluru Police) ಸಲ್ಲಿಕೆ ಮಾಡಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ.ಪರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠ ಹೈಕೋರ್ಟ್ ಆದೇಶದ ಬಗ್ಗೆ ಭಿನ್ನಾಭಿಪ್ರಾಯಗಳನ್ನ ವ್ಯಕ್ತಪಡಿಸಿದೆ.

    ಜಾಮೀನು ನೀಡುವಾಗ ಹೈಕೋರ್ಟ್ ತನ್ನ ವಿವೇಚನೆಯನ್ನ ಸೂಕ್ತವಾಗಿ ಬಳಸಿಲ್ಲ ಎಂದ ನ್ಯಾ. ಪರ್ದಿವಾಲಾ. ಈ ಬಗ್ಗೆ ಏನು ಹೇಳಬಯಸುತ್ತೀರಿ ಎಂದು ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ಪ್ರಶ್ನಿಸಿದರು. ಹೈಕೋರ್ಟ್ ಆದೇಶವನ್ನ ಹೇಗೆ ನೀಡಿದೆ ಅನ್ನೋದನ್ನ ನೀವು ಗಮನಿಸಿರಬಹುದು ಎಂದು ಸಿಬಲ್ ಅವರಿಗೆ ಹೇಳಿದ ನ್ಯಾಯಾಲಯ ಕೇಳಿತು. ಇದನ್ನೂ ಓದಿ: ಮಂಗಳೂರು| ಕಿರಿಯ ವಯಸ್ಸಿನಲ್ಲೇ ರೋಲ್ಸ್‌ ರಾಯ್ಸ್‌ನಲ್ಲಿ ಉದ್ಯೋಗ; ವರ್ಷಕ್ಕೆ 72 ಲಕ್ಷ ಸಂಬಳ- ಯುವತಿಗೆ ಸನ್ಮಾನ

    22ಕ್ಕೆ ಜಾಮೀನು ಭವಿಷ್ಯ ನಿರ್ಧಾರ
    ಇದಕ್ಕೆ ಪ್ರತಿಯಾಗಿ ದರ್ಶನ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲು ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾ. ಪರ್ದಿವಾಲಾ ಮಂಗಳವಾರ ಅಂತಿಮವಾದ ಮಂಡಿಸಿ, ಅಂದೇ ಈ ಬಗ್ಗೆ ತೀರ್ಪು ನೀಡಲಾಗುವುದು ಎಂದು ಹೇಳಿದರು. ಹೀಗಾಗೀ ಅಂದು ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ: ಮಣ್ಣಗುಂಡಿ ಬಳಿ ಗುಡ್ಡಕುಸಿತ, ಬೆಂ-ಮಂ ರಾ.ಹೆದ್ದಾರಿ ಬಂದ್

    ಮಂಗಳವಾರವೇ ಪವಿತ್ರಾ ಗೌಡ ಸೇರಿ ಇತರ ಐವರ ಭವಿಷ್ಯ 
    ಇನ್ನೂ ಮಂಗಳವಾರ ನಟ ದರ್ಶನ ಮಾತ್ರವಲ್ಲ, ಆಪ್ತೆ ಪವಿತ್ರಾ ಗೌಡ ಸೇರಿ ಇತರೆ ಐವರು ಆರೋಪಿಗಳ ಭವಿಷ್ಯವೂ ನಿರ್ಧಾರವಾಗಲಿದೆ. ದರ್ಶನ ಪರ ವಾದ ಆಲಿಸಿದ ಬಳಿಕ ಉಳಿದ ಆರೋಪಿಗಳ ಪರ ವಾದವನ್ನೂ ಕೋರ್ಟ್ ಆಲಿಸಲಿದೆ. ಇದಾದ ಬಳಿಕ ಕೋರ್ಟ್ ತನ್ನ ಅಂತಿಮ ಆದೇಶ ನೀಡಲಿದೆ. ಇದನ್ನೂ ಓದಿ: 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ತನಿಖೆ ಮಾಡಿ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಹೀಗಾಗಿ ಜಾಮೀನು ಸಿಗಬಹುದು ಮುಂದುವರಿಸಬಹುದು ಎನ್ನುವುದು ದರ್ಶನ ಮತ್ತು ಇತರೆ ಆರೋಪಿಗಳ ಪರ ವಕೀಲರ ಲೆಕ್ಕಾಚಾರ. ಆದ್ರೆ ಹೈಕೋರ್ಟ್ ಆದೇಶದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವ ಸುಪ್ರೀಂ ಕೋರ್ಟ್ ದರ್ಶನ್ ಗೆ ಜಾಮೀನು ನೀಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ. ಹೀಗಾಗೀ ಜಾಮೀನು ರದ್ದಾಗುವ ಸಾಧ್ಯತೆ ಇದೆ ಅಂತಾರೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಚಂದ್ರಕಾಂತ್ ಅಂಗಡಿ.

  • ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

    ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

    ಬೆಂಗಳೂರು: ಗಾಳಿ ಆಂಜನೇಯ (Gali Anjaneya) ದೇವಸ್ಥಾನವನ್ನು ಮುಜರಾಯಿ ಇಲಾಖೆ (Muzrai Department) ಸುಪರ್ದಿಗೆ ವಹಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ (High Court) ನಿರಾಕರಿಸಿದೆ.

    ಕರ್ನಾಟಕ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಹೈಕೋರ್ಟ್ ವಜಾ ಮಾಡಿದೆ. 2 ವಾರದ ಬಳಿಕ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಗಾಳಿ ಆಂಜನೇಯ ದೇವಸ್ಥಾನ | ಅವ್ಯವಹಾರ ನಡೆದ್ರೆ 5 ವರ್ಷ ವಶಕ್ಕೆ ಪಡೆಯಲು ಅವಕಾಶವಿದೆ:ರಾಮಲಿಂಗಾ ರೆಡ್ಡಿ ಸಮರ್ಥನೆ

    ದೇವಾಲಯದ ಟ್ರಸ್ಟಿಗಳು ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠದ ಅರ್ಜಿ ವಿಚಾರಣೆ ನಡೆಸಿತು.

    ದೇವಾಲಯದ ಟ್ರಸ್ಟ್ ಪರ ವಕೀಲ ಪಿ.ಪ್ರಸನ್ನ ಕುಮಾರ್, ಸರ್ಕಾರವು ದೇವಾಲಯದ ಕಾರ್ಯವೈಖರಿಯ ಬಗ್ಗೆ ಸಮಗ್ರ ತನಿಖೆ ನಡೆಸದೆ ತರಾತುರಿಯಲ್ಲಿ ವರ್ತಿಸಿದೆ. ಟ್ರಸ್ಟ್ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವು ಅಪೂರ್ಣ ಮಾಹಿತಿಯನ್ನು ಆಧರಿಸಿದೆ ಎಂದು ವಾದಿಸಿದರು. ಇದನ್ನೂ ಓದಿ: ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಕೋರ್ಟ್ ಮೊರೆಹೋದ ಆಡಳಿತ ಮಂಡಳಿ

    ಸರ್ಕಾರ ಪರ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಟ್ರಸ್ಟ್ ತನ್ನ ಹಣಕಾಸು ಮತ್ತು ಒಟ್ಟಾರೆ ಆಡಳಿತದ ಬಗ್ಗೆ ವಿವರಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪಗಳು ಟ್ರಸ್ಟ್‌ನ ಪದಾಧಿಕಾರಿಗಳ ವಿರುದ್ಧವೂ ಇದೆ. ಟ್ರಸ್ಟ್‌ನಿಂದ ಹಲವು ಬಾರಿ ಮಾಹಿತಿ ಕೇಳಲಾಗಿದೆ. ಆದರೆ ಯಾವುದೇ ಮಾಹಿತಿಯನ್ನು ಒದಗಿಸಲಾಗಿಲ್ಲ. ಕಳೆದ 19 ವರ್ಷಗಳಲ್ಲಿ ಬಂದ ಆದಾಯವನ್ನು ಖರ್ಚು ಎಂದು ತೋರಿಸಿದ್ದಾರೆ ಎಂದು ವಾದಿಸಿದರು.

    ಟ್ರಸ್ಟ್ 19 ವರ್ಷಗಳಿಂದ ದೇಣಿಗೆಗಳನ್ನು ಲೂಟಿ ಮಾಡಿದೆ. ಖರ್ಚಿನ ಬಗ್ಗೆ ಒಂದೇ ಒಂದು ದಾಖಲೆಯನ್ನು ಒದಗಿಸಿಲ್ಲ. ಮುಜರಾಯಿ ಇಲಾಖೆ ಅದನ್ನು ಸುಪರ್ಧಿಗೆ ತೆಗೆದುಕೊಂಡಿರುವುದಕ್ಕೆ ದೇವಾಲಯದ ಎಲ್ಲಾ ಭಕ್ತರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರ ಪರ ವಕೀಲರು ತಿಳಿಸಿದರು.